ಭಾರತದ ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಅರಬ್ ರಾಷ್ಟ್ರೀಯರೇ ಮುಖ್ಯ ಗಿರಾಕಿಗಳು

Update: 2018-10-09 18:32 GMT

ಆ್ಯಸ್ಟರ್ ಡಿಎಮ್ ತಿಂಗಳೊಂದರ 600-700 ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತದೆ. ಈ ರೋಗಿಗಳಲ್ಲಿ ಶೇ.70ರಷ್ಟು ಮಂದಿ ಒಮನ್‌ನಿಂದ ಬರುವವರು ಮತ್ತು ತಲಾ ಶೇ.10ರಷ್ಟು ಯುಎಇ ಮತ್ತು ಸೌದಿ ಅರೇಬಿಯದವರು. ಉಳಿದ ಶೇ.10ರಷ್ಟು ಮಂದಿ ಕುವೈಟ್, ಯಮನ್, ಇರಾಕ್, ಖತರ್, ಬಹರೈನ್‌ನಂತಹ ಇತರ ಅರಬ್ ದೇಶಗಳಿಗೆ ಸೇರಿದವರು.

ಕಳೆದ ಕೆಲವು ವರ್ಷಗಳಲ್ಲಿ ವೈದ್ಯಕೀಯ ಪ್ರವಾಸೋದ್ಯಮಕ್ಕೆ ದೊರೆತ ಅದ್ಭುತ ಪ್ರತಿಕ್ರಿಯೆಯಿಂದ ಸ್ಫೂರ್ತಿ ಪಡೆದಿರುವ ಭಾರತ ಸರಕಾರ, ಭಾರತೀಯ ಉದ್ಯಮಗಳ ಮಹಾ ಸಂಘ (ಸಿಐಐ), ಆಸ್ಪತ್ರೆಗಳು ಮತ್ತು ಇತರ ಆಸಕ್ತರು ಇನ್ನಷ್ಟು ವಿದೇಶಿ ರೋಗಿಗಳು ಭಾರತಕ್ಕೆ ಬರುವಂತೆ ಮಾಡಲು ಅಗತ್ಯವಾದ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಭಾರತದ ನೀತಿ ಆಯೋಗವು ವೈದ್ಯಕೀಯ ವೌಲ್ಯ ಪ್ರವಾಸ (ಮೆಡಿಕಲ್ ವಾಲ್ಯೂ ಟ್ರಾವಲ್-ಎಂವಿಟಿ)ಯನ್ನು ವಿದೇಶಿ ವಿನಿಮಯ ಗಳಿಕೆಯ ಒಂದು ಮುಖ್ಯ ಮೂಲವಾಗಿ ಗುರುತಿಸಿದೆ. ಈ ನಿಟ್ಟಿನಲ್ಲಿ ಅದು 2020ರ ವೇಳೆಗೆ ಮಹತ್ವಪೂರ್ಣ ಅಭಿವೃದ್ಧಿಯನ್ನು ಸಾಧಿಸುವ ಒಂದು ಯೋಜನೆಯನ್ನು ರೂಪಿಸುತ್ತಿದೆ.

2020ರ ವೇಳೆಗೆ ಭಾರತದ ವೈದ್ಯಕೀಯ ಪ್ರವಾಸೋದ್ಯಮದ ವೌಲ್ಯ 8 ಬಿಲಿಯ ಡಾಲರ್ ಎಂದು ಅಂದಾಜಿಸಲಾಗಿದೆ. ಈಗ ಅದು ಸುಮಾರು 4 ಬಿಲಿಯ ಡಾಲರ್‌ನಷ್ಟಿದೆ. ಇದು ಜಾಗತಿಕ ವೈದ್ಯಕೀಯ ಪ್ರವಾಸೋದ್ಯಮ ಮಾರುಕಟ್ಟೆಯ ಸುಮಾರು ಶೇ.18ರಷ್ಟು ಆಗಿದೆ ಮತ್ತು ವಾರ್ಷಿಕ ಶೇ.15ರಷ್ಟು ಬೆಳೆಯುತ್ತಿದೆ. ವೈದ್ಯಕೀಯ ಉದ್ದೇಶಕ್ಕಾಗಿ ಭಾರತಕ್ಕೆ ಆಗಮಿಸಿದ ವಿದೇಶಿಯರ ಸಂಖ್ಯೆ 2015, 2016 ಮತ್ತು 2017ರಲ್ಲಿ ಅನುಕ್ರಮವಾಗಿ 2,33,918, 4,27,014 ಮತ್ತು 4,95,056.
ಒಮನ್ ಅತಿ ದೊಡ್ಡ ಮಾರುಕಟ್ಟೆ
ವೈದ್ಯಕೀಯ ಉದ್ದೇಶಕ್ಕಾಗಿ ಭಾರತಕ್ಕೆ ಆಗಮಿಸಿರುವ ವಿದೇಶಿಯರಲ್ಲಿ ಗರಿಷ್ಠ ಸಂಖ್ಯೆಯ ಮಂದಿ ನಮ್ಮ ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬರುವವರಾದರೂ, ಅಂತಹ ರೋಗಿಗಳು ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರಾಕ್, ಒಮನ್, ಯಮನ್, ಸಂಯುಕ್ತ ಅರಬ್ ರಾಷ್ಟ್ರಗಳು, ಸೌದಿ ಅರೇಬಿಯಾ ಮತ್ತು ಸುಡಾನ್‌ನಿಂದ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಅಲೊಪತಿಯಲ್ಲದೆ ಇತರ ಬದಲಿ ಚಿಕಿತ್ಸಾ ಪದ್ಧತಿಗಳಿಗೂ ಭಾರತ ಪ್ರಸಿದ್ಧವಾಗಿದೆ. ಉದಾಹರಣೆ ಆಯುರ್ವೇದ, ಸಿದ್ಧ, ಯುನಾನಿ, ಯೋಗ, ಅಕ್ಯುಪಂಕ್ಚರ್ ಮತ್ತು ಹೋಮಿಯೋಪತಿ ಕೂಡ ಈಗ ವಿದೇಶಿಯರನ್ನು ಆಕರ್ಷಿಸುತ್ತಿವೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಯುಎಇ ಮತ್ತು ಸೌದಿ ಅರೇಬಿಯಾದ ಬಳಿಕ, ಭಾರತಕ್ಕೆ ಅತಿದೊಡ್ಡ ಮಾರುಕಟ್ಟೆ ಎಂದರೆ ಒಮಾನ್. ಹಾಗಾಗಿ, ಇತ್ತೀಚೆಗೆ ವೈದ್ಯರ, ಮಾರುಕಟ್ಟೆ ಅಧಿಕಾರಿಗಳ ಮತ್ತು 13 ಮಂದಿ ಆಸ್ಪತ್ರೆಗಳ ಪದಾಧಿಕಾರಿಗಳ ಒಂದು ಭಾರತೀಯ ನಿಯೋಗವು ಮಸ್ಕತ್‌ನಲ್ಲಿ ಒಂದು ರೋಡ್‌ಶೋ ಹಾಗೂ ವಸ್ತು ಪ್ರದರ್ಶನದ ಭಾಗವಾಗಿ ಹೊರರೋಗಿ ಸೇವಾ ಕಾರ್ಯಕ್ರಮವೊಂದನ್ನು ನಡೆಸಿತು.


ಇತ್ತೀಚೆಗೆ ದುಬೈಯಲ್ಲಿ ನಡೆದ ಎಟಿಎಮ್-2018 ಸಮಾವೇಶದಲ್ಲಿ ಭಾರತದ 20 ಮಂದಿ ಭಾಗಾಳುಗಳು ಭಾಗವಹಿಸಿದ್ದರು. ವೈದ್ಯಕೀಯ ಪ್ರವಾಸೋದ್ಯಮಕ್ಕೆ ತಮಗೆ ತುಂಬಾ ಪ್ರಿಯವಾದ ದೇಶ ಭಾರತವೆಂದು ತಿಳಿಯುವ ಸ್ಥಳೀಯ ಅರಬರಿಂದ ಆ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವೈದ್ಯಕೀಯ ಪ್ರವಾಸೋದ್ಯಮ ಸಂಸ್ಥೆಯೊಂದರ ಮ್ಯಾನೇಜರ್, ಅನ್ವರ್ ಹುಸೇನ್ ಹೇಳುತ್ತಾರೆ, ‘‘ನಮ್ಮ ಪ್ಯಾಕೇಜ್‌ನಲ್ಲಿ ರೋಗಿಯ ದೇಶದಲ್ಲೇ, ಆಸ್ಪತ್ರೆಗೆ ಸೇರಿಸುವ ಮೊದಲು ಮಾಡುವ ಪರೀಕ್ಷೆ, ಸ್ಕ್ರೀನಿಂಗ್ ಕೂಡ ಸೇರಿದೆ. ಒಂಬತ್ತು ದೇಶಗಳಲ್ಲಿ ಕಾರ್ಯನಿರ್ವಹಿಸುವ ಆ್ಯಸ್ಟರ್ ಡಿಎಮ್ ಹೆಲ್ತ್ ಕೇರ್ ಎಂಬ ಸಂಸ್ಥೆ ವೀಸಾ, ವಿಮಾನ ಪ್ರಯಾಣದ ಟಿಕೆಟ್, ಹೊಟೇಲ್ ವಾಸ್ತವ್ಯ ಇತ್ಯಾದಿ ಎಲ್ಲ ಸೇವೆಗಳನ್ನು ಒದಗಿಸುತ್ತದೆ.
ಆ್ಯಸ್ಟರ್ ಡಿಎಮ್ ತಿಂಗಳೊಂದರ 600-700 ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತದೆ. ಈ ರೋಗಿಗಳಲ್ಲಿ ಶೇ.70ರಷ್ಟು ಮಂದಿ ಒಮಾನ್‌ನಿಂದ ಬರುವವರು ಮತ್ತು ತಲಾ ಶೇ.10ರಷ್ಟು ಯುಎಇ ಮತ್ತು ಸೌದಿ ಅರೇಬಿಯಾದವರು. ಉಳಿದ ಶೇ.10ರಷ್ಟು ಮಂದಿ ಕುವೈಟ್, ಯಮನ್, ಇರಾಕ್, ಖತರ್, ಬಹರೈನ್‌ನಂತಹ ಇತರ ಅರಬ್ ದೇಶಗಳಿಗೆ ಸೇರಿದವರು. ಕೇರಳಕ್ಕೆ ಬರುವ ವಿದೇಶಿ ರೋಗಿಗಳು ಚಿಕಿತ್ಸೆಯ ಬಳಿಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬಯಸುತ್ತಾರೆ. ಅಂಥವರಿಗಾಗಿ ವಯನಾಡು, ಮುನ್ನಾರ್‌ನಂತಹ ಪ್ರವಾಸಿ ತಾಣಗಳಿಗೆ ಪ್ರವಾಸಗಳನ್ನೂ ಏರ್ಪಡಿಸಲಾಗುತ್ತದೆ.
ವರ್ತಮಾನ ಪತ್ರಿಕೆಯೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅಪೊಲೊ ಹಾಸ್ಪಿಟಲ್ಸ್ ಗ್ರೂಪ್‌ನ ಅಧ್ಯಕ್ಷ ಪ್ರತಾಪ್.ಸಿ.ರೆಡ್ಡಿ ಹೇಳಿದರು, ‘‘ಭಾರತಕ್ಕೆ ಮೊತ್ತ ಮೊದಲ ವೈದ್ಯಕೀಯ ವೌಲ್ಯದ ಪ್ರವಾಸಿಗರನ್ನು ಕರೆತಂದದ್ದು ಅಪೊಲೊ. ಇವತ್ತು 150ಕ್ಕೂ ಹೆಚ್ಚು ದೇಶಗಳಿಂದ 3,50,000ಕ್ಕೂ ಹೆಚ್ಚು ಮಂದಿ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಾರೆ (ಪ್ರವಾಸೋದ್ಯಮ ಸಚಿವಾಲಯ ನೀಡಿರುವ ಅಂಕಿ ಅಂಶಗಳ ಪ್ರಕಾರ 2017ರಲ್ಲಿ ಭಾರತಕ್ಕೆ ವೈದ್ಯಕೀಯ ಕಾರಣಕ್ಕಾಗಿ ಬಂದ ವಿದೇಶಿಯರ ಸಂಖ್ಯೆ ಅಂದಾಜು 4,27,000).
ವಿದೇಶಗಳಲ್ಲಿ ನೀಡಬೇಕಾಗುವ ಮೊತ್ತದ ಒಂದು ಚಿಕ್ಕ ಅಂಶ ನೀಡಿದಲ್ಲಿ ತಮಗೆ ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ದೊರಕುತ್ತದೆ ಎಂದು ಈಗ ಜನರಿಗೆ ಗೊತ್ತಾಗಿದೆ’’.
ಕೃಪೆ: english.alarabiya.net

Writer - ಅಫ್ತಾಬ್ ಹುಸೈನ್ ಕೋಲಾ

contributor

Editor - ಅಫ್ತಾಬ್ ಹುಸೈನ್ ಕೋಲಾ

contributor

Similar News

ಜಗದಗಲ
ಜಗ ದಗಲ