ಸ್ವಾಮಿ ವಿವೇಕಾನಂದ-ಇನ್ನಷ್ಟು ಶೋಧಗಳು...
ವಿವೇಕಾನಂದರು ನಿಜವಾಗಿ ಯಾರು? ಒಬ್ಬ ಧರ್ಮಗುರುವೇ, ಒಬ್ಬ ಧಾರ್ಮಿಕ ಪುರುಷನೇ, ಒಬ್ಬ ಪ್ರವಚನಕಾರನೇ, ಪರಿವಾರದ ಚೌಕಟ್ಟಿನಲ್ಲಿರುವ ಒಬ್ಬ ದಕ್ಷ ಹಿಂದುವೇ? ಅಥವಾ ಪರಿವರ್ತನೆಯ ಚಳವಳಿಯ ಅಗ್ರದೂತರಾಗಿದ್ದರೆ? ಇಲ್ಲವೇ ದೇಶದ ಮೊದಲ ಸಾಮ್ಯವಾದಿಯೇ? ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುವ ಕೃತಿಯೇ ಡಾ. ದತ್ತ ಪ್ರಸಾದ ದಾಭೋಲ್ಕರ್ ಅವರು ಬರೆದಿರುವ ‘ಸ್ವಾಮಿ ವಿವೇಕಾನಂದ-ಹೊಸ ಶೋಧ’. ವಿವೇಕಾನಂದ ಕುರಿತಂತೆ ನಮಗೆ ಹೆಚ್ಚಾಗಿ ಕಾಣಿಸದ ಅವರ ಪಾರ್ಶ್ವ ವ್ಯಕ್ತಿತ್ವವೊಂದು ಈ ಕೃತಿಯಲ್ಲಿ ಅನಾವರಣಗೊಂಡಿದೆ. ಚಂದ್ರಕಾಂತ ಪೋಕಳೆ ಅವರು ಕೃತಿಯನ್ನು ಮರಾಠಿಯಿಂದ ಕನ್ನಡಕ್ಕಿಳಿಸಿದ್ದಾರೆ. ವಿವೇಕಾನಂದರ ಅಸಂಖ್ಯಾತ ಪತ್ರ, ಟಿಪ್ಪಣಿ, ಗ್ರಂಥ, ಸ್ವತಃ ವಿವೇಕಾನಂದರೇ ಬರೆದ ಲೇಖನ, ಮಾಡಿದ ಭಾಷಣ ಪ್ರತಿಕ್ರಿಯೆ ಹೀಗೆ ಎಲ್ಲ ದಾಖಲೆಗಳನ್ನು ಎದುರಿಸಿ ನಡೆಸಿದ ಚರ್ಚೆ ಈ ಕೃತಿಯಾಗಿದೆ. ವಿವೇಕಾನಂದರನ್ನು ಅರ್ಥ ಮಾಡಿಕೊಳ್ಳುವ ಮೂಲಕ ಹುಸಿ ಹಿಂದುತ್ವವನ್ನು ಹೇಗೆ ಎದುರಿಸಬಹುದು ಎನ್ನುವುದಕ್ಕೆ ಕೃತಿ ನಮಗೆ ಮಾರ್ಗದರ್ಶಿಯಾಗಿದೆ.
ವಿವೇಕಾನಂದರು ಸೌಮ್ಯವಾದಿಯಾಗಿದ್ದರು ಎನ್ನುವ ಈ ಕೃತಿ, ಆದರೆ ಅವರು ಕಾಲಕ್ಕಿಂತ ಸಾಕಷ್ಟು ಮುಂದಿದ್ದರು ಎನ್ನುವುದನ್ನು ಹೇಳುತ್ತದೆ. ವಿವೇಕಾನಂದರನ್ನು ಧಾರ್ಮಿಕ ವ್ಯಕ್ತಿಯೆಂದು ಭಾವಿಸಿ, ತಮ್ಮ ಚೌಕಟ್ಟಿನಲ್ಲಿ ಕೂರಿಸುವ ಹಿಂದುತ್ವವಾದಿ ಜನರು, ಅವರು ಹೇಳಿದ ಮಾತನ್ನು ಕುರಿತು ಚಿಂತನೆ ಮಾಡಬೇಕಾಗಿದೆ. ಈ ದೇಶದ ಪುನರ್ ನಿರ್ಮಾಣ ಮಾಡುವುದಾದರೆ ಹಿಂದೂ ಮುಸ್ಲಿಮ್ ಸಮನ್ವಯ ಸಾಧಿಸಬೇಕಾಗುವುದು ಎಂದು ವಿವೇಕಾನಂದರು ನಿರ್ಭಿಡೆಯಿಂದ ಹೇಳಿದರು. ಈ ಸಮನ್ವಯವನ್ನು ಸಾಧಿಸಬೇಕೆಂದಿದ್ದರೆ ಮತಾಂತರ ಮಾಡಿದ ದಲಿತರ ಬಗ್ಗೆ ದ್ವೇಷ ಕಹಿತನ ಬೇಡ. ಈ ಮತಾಂತರವು ಮುಸ್ಲಿಮ್ ಅಥವಾ ಕ್ರಿಶ್ಚಿಯನ್ನರ ಅತ್ಯಾಚಾರದಿಂದಲ್ಲ, ಉಚ್ಚವರ್ಣದವರು ನೀಡಿದ ಅಮಾನುಷ ವರ್ತನೆಯಿಂದ ಜರುಗಿದೆ ಎಂಬುದನ್ನು ಅರಿಯಿರಿ ಎಂದು ವಿವೇಕಾನಂದರು ಸೂಚಿಸಿದರು. ಮತಾಂತರವನ್ನು ಅವರು ವಿರೋಧಿಸಲಿಲ್ಲ. ಆದರೆ ಜಾತಿ ವ್ಯವಸ್ಥೆಗೆ ಕೇವಲ ಮತಾಂತರ ಉತ್ತರವಲ್ಲ ಎನ್ನುವುದನ್ನು ಅರಿತಿದ್ದರು. ಸಂಘಪರಿವಾರ ಹೇಗೆ ಮಹಾತ್ಮ ಫುಲೆ, ಶಿವಾಜಿ ಮತ್ತು ವಿವೇಕಾನಂದರನ್ನು ತನಗೆ ಬೇಕಾದಂತೆ ತಿರುಚಿತು ಎನ್ನುವುದನ್ನು ಕೃತಿ ಉಲ್ಲೇಖಿಸುತ್ತದೆ. ವಿಚಾರವಂತರು ಫುಲೆ, ಅಂಬೇಡ್ಕರರ್‌ನ್ನು ಸ್ವೀಕರಿಸಿದಷ್ಟು ತೀವ್ರವಾಗಿ ವಿವೇಕಾನಂದರನ್ನು ಸ್ವೀಕರಿಸದ ಕಾರಣದಿಂದಾದ ಋಣಾತ್ಮಕ ಪರಿಣಾಮಗಳನ್ನು ಕೃತಿ ಹೇಳುತ್ತದೆ. ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮದ ಕುರಿತಂತೆ ಅವರ ನಿಲುವುಗಳು, ಸನಾತನ ಸಭ್ಯತೆ ಮತ್ತು ಸಂಸ್ಕೃತಿ ಏಳು ಬೀಳುಗಳ ಕುರಿತಂತೆ ವಿವೇಕಾನಂದರ ಅಭಿಮತಗಳನ್ನು ಅವರ ಭಾಷಣ, ಲೇಖನಗಳ ಆಧಾರದಲ್ಲಿ ಚರ್ಚಿಸಲಾಗಿದೆ. ವಿವೇಕಾನಂದರ ಕುರಿತಂತೆ ಹಲವು ಕೃತಿಗಳು ಬಂದಿವೆ. ಒಂದು, ವಿವೇಕಾನಂದರ ಅತಿ ವೈಭವೀಕರಣ. ಹಾಗೆಯೇ ಕೇಸರೀಕರಣ. ಇನ್ನೊಂದು ವಿವೇಕಾನಂದರ ಸಾಮಾನ್ಯೀಕರಣ. ಅವರು ಹೇಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದರು ಎನ್ನುವುದನ್ನು ಹೇಳುವ ಬರಹಗಳು. ಆದರೆ ಈ ಕೃತಿ ಇವೆರಡರ ಮಧ್ಯದಲ್ಲಿ ನಿಂತು ವಿವೇಕಾನಂದರನ್ನು ಪರಿಚಯಿಸುವ ಪ್ರಯತ್ನ ಮಾಡುತ್ತದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 125. ಮುಖಬೆಲೆ 125 ರೂಪಾಯಿ.