ಕಳಸ: ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಅಭಿವೃದ್ಧಿ ಮರೀಚಿಕೆ; ಆರೋಪ

Update: 2018-10-12 18:49 GMT

ಕಳಸ, ಅ.12: ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ಕಳೆದ ಹತ್ತಾರು ವರ್ಷಗಳಿಂದ ಕಾಡು ಮನುಷ್ಯರಂತೆ ಬದುಕುತ್ತಿರುವ ನಮಗೆ ಈ ಬಾರಿ ಸರಿಯಾದ ಮೂಲಭೂತ ವ್ಯವಸ್ಥೆಗಳನ್ನು ಒದಗಿಸದಿದ್ದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಇಡಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮೂಡಿಗೆರೆ ತಾಲೂಕಿನ ಇಡಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವಹೆಮ್ಮಕ್ಕಿ, ಕೋಟೆಮಕ್ಕಿ,ಸೀಡ್ಲಾರ್‍ಮಕ್ಕಿ, ಹಡ್ಲುಗದ್ದೆ, ಹಿಡಕಿಣಿ, ಬಿಳುಗೂರು, ನಾಗಸಂಪಿಗೆಮಕ್ಕಿ, ಬದ್ರಾಕಾಳಿ, ಮಳಲ್‍ಕೇರಿ, ಕೆರೆಕುಡಿಗೆ, ಹೆಮ್ಮಕ್ಕಿ, ಭದ್ರಕಾಳಿ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 2000 ಜನ ಸಂಖ್ಯೆ ಇದೆ. ನಕ್ಸಲ್ ಪೀಡಿತ ಪ್ರದೇಶವೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಈ ಗ್ರಾಮಗಳಲ್ಲಿ ಯಾವ ಸೌಲಭ್ಯ ಇದೆ ಎನ್ನುವುದಕ್ಕಿಂತ ಇಲ್ಲ ಎನ್ನುವುದರ ಪಟ್ಟಿಯೇ ಬಹಳ ದೊಡ್ಡದಿದೆ.

ಇಲ್ಲಿ ಹೆಚ್ಚಿನ ಕುಟುಂಬಗಳು ಹರಿಜನ ಪಂಗಡಕ್ಕೆ ಸೇರಿದವರೇ ಆಗಿದ್ದಾರೆ. ಕೂಲಿ ಮಾಡಿ ತಮ್ಮ ಜೀವನ ಸಾಗಿಸುವವರೇ ಇಲ್ಲಿ ಹೆಚ್ಚಿದ್ದಾರೆ. ಇಡಕಣಿಯಿಂದ ಈ ಗ್ರಾಮಗಳನ್ನು ಸಂಪರ್ಕಿಸುವ 16 ಕಿ.ಮೀ ದೂರದ ರಸ್ತೆಯಲ್ಲಿ ವಾಹನ ಬಿಡಿ ಕಾಲ್ನಡಿಗೆಯಲ್ಲಿ ಹೋಗುವುದೇ ದುಸ್ತರವಾಗಿದೆ. ರಸ್ತೆ ದುರಸ್ತಿ ಕಾಣದೇ ಅಸ್ಥಿಪಂಜರದಂತಾಗಿದೆ. ಸುಮಾರು 15 ವರ್ಷಗಳ ಹಿಂದೆ ಈ ರಸ್ತೆಯನ್ನು ದುರಸ್ತಿ ಪಡಿಸಲಾಗಿತ್ತು. ನಂತರ ಈ ರಸ್ತೆಯ ಕಡೆ ಯಾವೊಬ್ಬ ಜನಪ್ರತಿನಿಧಿಗಳು ತಲೆ ಹಾಕಿ ನೋಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಡಾಂಬಾರು ರಸ್ತೆಯಲ್ಲಿ ಸದ್ಯ ಕೊಂಚವೂ ಡಾಂಬಾರು, ಜಲ್ಲಿ ಉಳಿದಿಲ್ಲದಂತಾಗಿದ್ದು, ನಿರ್ವಹಣೆ, ದುರಸ್ತಿ ಇಲದೇ ರಸ್ತೆಯಲ್ಲಿ ಯಾವುದೇ ವಾಹನಗಳು ಓಡಾಡಲು ಸಾಧ್ಯವಿಲ್ಲದಂತಾಗಿದೆ. ಇನ್ನು ಆಟೊಗಳು ದುಪ್ಪಟ್ಟು ಬಾಡಿಗೆ ನೀಡಿದರೂ ಈ ರಸ್ತೆಯಲ್ಲಿ ಬರುತ್ತಿಲ್ಲ. ಇದರಿಂದಾಗಿ ನೂರಾರು ಶಾಲಾ ವಿದ್ಯಾರ್ಥಿಗಳು 10 ಕಿಮೀ ದೂದದ ಹಿರೇಬೈಲು ಶಾಲೆಗೆ ಕಾಲ್ನಡಿಗೆಯಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ. ರೇಷನ್ ತರಲು ಕೆಲ ಗ್ರಾಮಗಳಿಂದ 14 ಕಿ.ಮೀ ದೂರದ ಹಿರೇಬೈಲಿಗೆ ಕಾಲ್ನಡಿಗೆಯಲ್ಲಿ ಬರಬೇಕಾಗಿದೆ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ದಟ್ಟ ಕಾಡಿನ ಮಧ್ಯೆ ರಸ್ತೆ ಇರುವುದರಿಂದ ರಾತ್ರಿಯಾಗುತ್ತಲೇ ರಸ್ತೆಯಲ್ಲಿ ಕಾಡುಕೋಣಗಳ ಹಾವಳಿ ಆರಂಭವಾಗುತ್ತದೆ. ಇದರಿಂದಾಗಿ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಇದೆ. ಆರೋಗ್ಯ ಕೆಟ್ಟರೇ ದೇವರೇ ಕಾಪಾಡಬೇಕು. ಮೊಬೈಲ್ ಟವರ್ ಇಲ್ಲದಿರುವುದರಿಂದ ನೆಟ್‍ವರ್ಕ್ ಸಮಸ್ಯೆ ಇದೆ. ಗ್ರಾಮಗಳು ವಿದ್ಯುತ್, ನೀರು ಮತ್ತಿತರ ಸಮಸ್ಯೆಗಳಿಂದ ನಲುಗಿ ಹೋಗಿವೆ. ಯಾವುದೇ ತುರ್ತು ಕೆಲಸಕ್ಕೂ ಹಿರೇಬೈಲು, ಕಳಸವನ್ನೆ ಅವಲಂಬಿತರಾಗಬೇಕು. ಈ ರಸ್ತೆ ಅಭಿವೃದ್ಧಿಯಾದರೆ ಕಳಸ-ಮೂಡಿಗೆರೆ-ಬಾಳೆಹೊನ್ನೂರು-ಶೃಂಗೇರಿ-ಕೊಟ್ಟಿಗೆಹಾರ ಮುಂತಾದ ಊರುಗಳಿಗೆ ಅತೀ ಹತ್ತಿರವಾದ ರಸ್ತೆ ಸಂಪರ್ಕ ಸಿಕ್ಕಿದಂತಾಗುತ್ತದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಇಲ್ಲಿಯ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳ ಬಳಿ,ಅಧಿಕಾರಿಗಳ ಬಳಿ ಹೇಳಿಕೊಂಡಿದ್ದೇವೆ. ಕಡೇ ಪಕ್ಷ ನಮ್ಮ ರಸ್ತೆಯನ್ನು ಸರಿಪಡಿಸಿಕೊಂಡಿ ನಂತರ ಎಲ್ಲವೂ ಅಭಿವೃದ್ಧಿಗೊಳ್ಳುತ್ತದೆ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದೇವೆ. ಮನವಿ ಮಾಡಿದ್ದೇವೆ. ಚುನಾವಣೆಯ ಸಂದರ್ಭದಲ್ಲಿ ಕೊಡುವ ಭರವಸೆಗಳು ಭರವಸೆಯಾಗಿಯೇ ಉಳಿದು ಹೋಗುತ್ತಿವೆ ಬಿಟ್ಟರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ಅದೆಷ್ಟೋ ಕೋಟಿ ಅನುದಾನಗಳು ಹರಿದು ಬರುತ್ತಿವೆಯಾದರೂ ನಮ್ಮ ಗ್ರಾಮಗಳಿಗೆ ಈ ಅನುದಾನಗಳು ಮುಖ ಮಾಡುತ್ತಿಲ್ಲ. ಇಲ್ಲಿ ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತದೆ. ಇಂತಹ ವ್ಯವಸ್ಥೆಯಿಂದ ಬೇಸತ್ತು ಹೋಗಿದ್ದೇವೆ.ಆದ್ದರಿಂದ ಕೂಡಲೇ ನಮ್ಮ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಕೊಡಿ, ಇಲ್ಲವಾದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಗ್ರಾಮಸ್ಥರು ತಳೆಯಲಿದ್ದೇವೆಂದು ಎಚ್ಚರಿಕೆ ನೀಡಿದ್ದಾರೆ.

ಈ ರಸ್ತೆಯ ಪರಿಸ್ಥಿತಿಯಿಂದಾಗಿ ನಾಗಸಂಪಿಗೆ ಮಕ್ಕಿ ಗ್ರಾಮದ ಗ್ರಾಮಸ್ಥರು 15 ಕಿ.ಮೀ ದೂರ ಕಾಲ್ನಡಿಗೆಯಲ್ಲೆ ಪಡಿತರವನ್ನು ತರಬೇಕಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲ. ಅದೆಷ್ಟು ಬಾರಿ ಬೇಡಿಕೊಂಡರೂ ಕೂಡ ರಸ್ತೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ನಕ್ಸಲ್ ಪೀಡಿತ ಪ್ರದೇಶವೆಂದು ಹಣೆ ಪಟ್ಟಿಕಟ್ಟಿಕೊಂಡಿದ್ದೇವೆ ಹೊರತು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.
- ಕೃಷ್ಣಯ್ಯ, ನಿವಾಸಿ, ಭದ್ರಕಾಳಿ ಗ್ರಾಮ

ಸಾರಿಗೆ ಸಂಪರ್ಕವಿಲ್ಲ, ಮೊಬೈಲ್ ಟವರಿಲ್ಲ, ಸೂಕ್ತ ರಸ್ತೆ ಸಂಪರ್ಕವಿಲ್ಲ, ಆಹಾರ ಪಡಿತರ ವಿತರಣೆಗೆ ವ್ಯವಸ್ಥೆ ಇಲ್ಲ, ಆರೋಗ್ಯ ಕೇಂದ್ರಗಳಿಲ್ಲ, ಸರಿಯಾದ ವಿದ್ಯುತ್ ಸಂಪರ್ಕವಿಲ್ಲ,. ಈ ಬಾಗದಲ್ಲಿ ವಾಸಿಸುವ ಜನರ ಪಾಡು ಹೇಳತೀರದು. ಇಂತಹ ವ್ಯವಸ್ಥೆಯಿಂದ ಬೇಸತ್ತು ಹೋಗಿದ್ದೇವೆ. ಈ ಬಾರಿ ನಮಗೆ ಮೂಲಭೂತ ಸೌಲಭ್ಯವನ್ನು ನೀಡದೇ ಇದ್ದಲ್ಲಿ ಲೋಕಸಭಾ ಚಯನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ.
-ಪ್ರವೀಣ್ ಗೌಡ, ಹೆಮ್ಮಕ್ಕಿ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News