3 ಕೋಟಿ ಫೇಸ್ ಬುಕ್ ಬಳಕೆದಾರರ ಖಾತೆಗಳು ಹ್ಯಾಕ್
ನ್ಯೂಯಾರ್ಕ್, ಅ.13: ಫೇಸ್ ಬುಕ್ ಬಳಕೆದಾರರ ಸುಮಾರು 3 ಕೋಟಿ ಖಾತೆಗಳನ್ನು ಹ್ಯಾಕರ್ ಗಳನ್ನು ಹ್ಯಾಕ್ ಮಾಡಿದ್ದು, 2.9 ಕೋಟಿ ಖಾತೆಗಳಿಗೆ ಸಂಬಂಧಿಸಿದಂತೆ ಹೆಸರುಗಳು ಹಾಗೂ ಸಂಪರ್ಕ ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಫೇಸ್ ಬುಕ್ ದೃಢ ಪಡಿಸಿದೆ. ಹಲವು ಫೇಸ್ ಬುಕ್ ಬಳಕೆದಾರರ ಖಾತೆಗಳು ಹ್ಯಾಕ್ ಆಗಿವೆ ಎಂದು ಕಳೆದ ತಿಂಗಳು ಸಂಸ್ಥೆ ಹೇಳಿದ್ದು ಇದೀಗ ಅದನ್ನು ದೃಢಪಡಿಸಿದೆ.
ಸೆಪ್ಟೆಂಬರ್ ತಿಂಗಳ ಕೊನೆಯ ಭಾಗದಲ್ಲಿ ಹ್ಯಾಕರುಗಳು ಡಿಜಿಟಲ್ ಲಾಗಿನ್ ಕೋಡ್ ಗಳನ್ನು ಹ್ಯಾಕ್ ಮಾಡಿದ್ದು, ಇದರಿಂದ ಸುಮಾರು 5 ಕೋಟಿ ಖಾತೆದಾರರು ಬಾಧಿತರಾಗಿದ್ದಾರೆಂದು ಫೇಸ್ ಬುಕ್ ಹೇಳಿತ್ತು. ಆದರೆ ಮಾಹಿತಿ ಸೋರಿಕೆಯಾಗಿತ್ತೇ ಎಂಬುದನ್ನು ಆಗ ಸಂಸ್ಥೆ ದೃಢಪಡಿಸಿರಲಿಲ್ಲ.
ಫೇಸ್ ಬುಕ್‍ನ ಒಟ್ಟು 1.5 ಕೋಟಿ ಬಳಕೆದಾರರ ಹೆಸರು, ಸಂಪರ್ಕ ಮಾಹಿತಿ, ಫೋನ್ ಸಂಖ್ಯೆ ಹಾಗೂ ಇಮೇಲ್ ಹ್ಯಾಕ್ ಮಾಡಲಾಗಿದೆ ಎಂದು ಈಗ ಸಂಸ್ಥೆ ತಿಳಿಸಿದೆ. ಉಳಿದ 1.4 ಖಾತೆದಾರರ ಯೂಸರ್ ನೇಮ್, ಲಿಂಗ, ಭಾಷೆ, ಅವರ ರಿಲೇಷನ್ ಶಿಪ್ ಸ್ಟೇಟಸ್, ಧರ್ಮ, ಊರು, ಈಗಿನ ನಗರ, ಹುಟ್ಟಿದ ದಿನಾಂಕ, ಫೇಸ್‍ಬುಕ್ ಖಾತೆ ಲಾಗಿನ್ ಗೆ ಅವರು ಬಳಸುವ ಸಾಧನ, ಅವರು ಭೇಟಿ ನೀಡಿದ ಕೊನೆಯ ಹತ್ತು ಸ್ಥಳಗಳು ಹಾಗೂ ಅವರು ಟ್ಯಾಗ್ ಮಾಡಲ್ಪಟ್ಟ ಪೋಸ್ಟ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿಯಿದೆ.
``ನಾವು ಎಫ್‍ಬಿಐ ತನಿಖೆಗೆ ಸಹಕರಿಸುತ್ತಿದ್ದೇವೆ, ಈ ಸೈಬರ್ ದಾಳಿಯ ಹಿಂದೆ ಯಾರಿದ್ದಾರೆಂದು ಚರ್ಚಿಸದಂತೆ ನಮಗೆ ಹೇಳಲಾಗಿದೆ'' ಎಂದು ಫೇಸ್‍ಬುಕ್ ಬ್ಲಾಗ್ ಪೋಸ್ಟ್ ಒಂದರಲ್ಲಿ ತಿಳಿಸಿದೆ.