ಶೂದ್ರ ಶ್ರೀನಿವಾಸರ ‘ಯಾತ್ರೆ’ ಕಾದಂಬರಿ ಆಶಯಗಳದ್ದೇ ಮೇಲುಗೈ

Update: 2018-10-13 13:14 GMT

ಕನ್ನಡದ ಸಾಂಸ್ಕೃತಿಕ ಸಮುದ್ರಕ್ಕೆ ಹರಿದು ಬಂದು ಸೇರುತ್ತಿರುವ ಅಸಂಖ್ಯ ಜಲಧಾರೆಗಳಲ್ಲಿ ಶೂದ್ರ ಶ್ರೀನಿವಾಸರೆಂಬ ತಣ್ಣನೆಯ ಸಿಹಿನೀರಿನ ಹರಿವೂ ಒಂದು.

‘ಯಾತ್ರೆ’ ಶೂದ್ರ ಶ್ರೀನಿವಾಸರ ಹೊಸ ಕಾದಂಬರಿಯಾಗಿದೆ. ಲೇಖಕರೇ ಹೇಳಿಕೊಂಡಿರುವಂತೆ ಕಳೆದ ನಲವತ್ತು ವರ್ಷಗಳಿಂದ ಅವರ ಮನಸ್ಸಿನಲ್ಲಿದ್ದ ವಸ್ತುವೊಂದು ಈಗ ಕಾದಂಬರಿಯಾಗಿ ಅಭಿವ್ಯಕ್ತಗೊಂಡಿದೆ. ಕಳೆದ ವರ್ಷ ‘ಆ ದಿನ’ ಹೆಸರಿನ ಶೂದ್ರರ ಇನ್ನೊಂದು ಕಾದಂಬರಿಯೂ ಪ್ರಕಟಗೊಂಡಿರುವುದು ಆಸಕ್ತಿದಾಯಕ ಸಂಗತಿಯಾಗಿದೆ.

ಆಸಕ್ತಿದಾಯಕ ಅನ್ನಬೇಕಿರುವುದು ಏಕೆಂದರೆ ಶೂದ್ರ ಕನ್‌ಸಿಸ್ಟೆಂಟಾಗಿ ಬರೆಯುತ್ತಲೇ ಇದ್ದಾರಾದರೂ ಅವರು ದೊಡ್ಡ ಬರವಣಿಗೆಯ ಸಾಹಸಗಳತ್ತ ಮನಸ್ಸು ಮಾಡಿದ್ದು ಕಡಿಮೆ. ತಮ್ಮ ‘ಕನಸಿಗೊಂದು ಕಣ್ಣು ’ ಅಂಕಣ, ಇನ್ನಿತರ ಬರಹಗಳು, ಭಾಷಣ, ಚರ್ಚೆ, ಸುತ್ತಾಟಗಳಲ್ಲಿ ಅವರ ಬಹುತೇಕ ಸಮಯ ಶಕ್ತಿ ಚದುರುತ್ತಿದ್ದವು.

ಈಗಿನ ‘ಯಾತ್ರೆ’ಯು ಲೇಖಕರ ಭಾವುಕ ವ್ಯಕ್ತಿತ್ವ ಮತ್ತು ಸದಾಶಯಗಳನ್ನೆಲ್ಲಾ ಢಾಳಾಗಿ ಪ್ರತಿಫಲಿಸುತ್ತವೆ. ಕಾದಂಬರಿಯಲ್ಲಿ ಒಂದು ಪಾತ್ರದಂತೆ ಬರುವ ವಟವೃಕ್ಷದ ಬಳಿಯ ತಿಳಿ ನೀರಿನ ಕೊಳದಂತೆಯೇ.

ಸ್ವಾಮಿ ಈ ಕತೆಯ ನಾಯಕ ಭಾವನಾ ಎಂಬಾಕೆಯ ವ್ಯಕ್ತಿತ್ವ ಇಲ್ಲಿನ ಕಥಾನಾಯಕಿ.

 ಕುಟುಂಬದಲ್ಲಿನ ಲೈಂಗಿಕ ಸಂಬಂಧಿತ ಘಟನೆಯಿಂದ ಕ್ಷೋಭೆಗೆ ಕಾರಣಕರ್ತನಾದ ಕಥಾನಾಯಕ ಸ್ವಾಮಿ ಊರು ತೊರೆದು ರೈಲಿನಲ್ಲಿ ಹೋಗುವಾಗ ಶ್ರೀಮಂತ ಎಸ್ಟೇಟ್ ಮಾಲಕ ದಂಪತಿಯ ಸ್ನೇಹ ನಂಬಿಕೆ ಗಳಿಸುತ್ತಾನೆ. ಮನೆ ಬಿಟ್ಟು ಇಪ್ಪತ್ನಾಲ್ಕು ಗಂಟೆಯೊಳಗಾಗಿ ಈತ ಮದ್ರಾಸು ತಲುಪಿ ಎಸ್ಟೇಟ್ ಮಾಲಕನ ಪತ್ನಿ ಭಾವನಾಳ ಬೆಡ್‌ರೂಮನ್ನೂ ವಶಪಡಿಸಿಕೊಳ್ಳುವುದು ಸೋಜಿಗವೆನಿಸುತ್ತದೆ. ಕೆಲ ವರ್ಷಗಳಲ್ಲಿ ಸ್ಥಗಿತ ದೇಹಸ್ಥಿತಿಯ ಮಾಲಕ ಭರತ್ ನಾಡಾರ್ ಮೃತಪಟ್ಟು, ಮತಾಂತರಗೊಂಡಿದ್ದ ಮಗ ದಂಪತಿ ಸಹಿತ ಹಿಂದಿರುಗಿ, ನಾಯಕ ಸ್ವಾಮಿ ಆ ಕುಟುಂಬದ ಮಹೋನ್ನತ ಪರಂಪರೆ ಬಗ್ಗೆ ಹಾಗೂ ಎಸ್ಟೇಟಿನ ವೈವಿಧ್ಯತೆ ಕುರಿತು ‘ಮಹಾಮನೆ’ ಎಂಬ ಪುಸ್ತಕ ಬರೆದು ಕೀರ್ತಿಪಡೆದು, ಕೊನೆಗೆ ತಾನು ತ್ಯಜಿಸಿ ಬಂದಿದ್ದ ಸ್ಥಳಕ್ಕೆ ಹಿಂದಿರುಗಿ ಒಂಟಿಯಾಗಿ ಸಾಯುವುದರೊಂದಿಗೆ ‘ಯಾತ್ರೆ’ ಮುಗಿಯುತ್ತದೆ.

ಬರಹಗಾರ ಋಷಿ ಲಿಯೋ ಟಾಲ್‌ಸ್ಟಾಯ್ ಹೀಗೇ ತನ್ನ ಮನೆ ಎಸ್ಟೇಟ್ ತ್ಯಜಿಸಿ ಯಾವುದೋ ರೈಲ್ವೆ ಪ್ಲಾಟ್‌ಫಾರಂ ಮೇಲೆ ಪ್ರಾಣ ತ್ಯಜಿಸಿದ ಘಟನೆಯನ್ನು ಅಕಸ್ಮಾತಾಗಿ ನೆನೆದುಕೊಳ್ಳುತ್ತಾ ಪುನಃ ‘ಯಾತ್ರೆ’ ಕಾದಂಬರಿಯ ಸಂಗತಿಗೆ ಹಿಂದಿರುಗುವುದಾದರೆ....!

  ಯಾತ್ರೆಯಲ್ಲಿ ಹಲವು ಹರಾಕಿರಿಗಳಿವೆ. -ನಾಯಕ ನೆಲೆಸುವ ‘ಮಹಾಮನೆ’ಯ ವೈಶಿಷ್ಟ್ಯವೇನು, ಪರಂಪರೆ ಎಂಥದು, ಗತಿಸಿ ಹೋದವರ ವ್ಯಕ್ತಿತ್ವ ಇವೇ ಮುಂತಾಗಿ ಯಾವುದೇ ಘಟನೆಗಳನ್ನು ವಿವರಗಳನ್ನು ಹೇಳದೆ ಕೇವಲ ‘ಮಹಾಮನೆ ಒಂದು ಗ್ರೇಟ್ ಮನೆ’ ಎಂದು ಹೇಳುತ್ತಲೇ ಹೋಗುವುದು.

ಹಾಗಾಗಿ ಓದುಗನಿಗೆ ಮಹಾಮನೆಯೊಳಗೆ ಪ್ರವೇಶ ಸಿಗುವುದಿಲ್ಲ

  -ಮನೆಗೆಲಸದವರೂ ಸಹ ಗ್ರಾಂಥಿಕ ಶಿಷ್ಟ ಕನ್ನಡ ಆಡುವುದು!

‘‘ದಯವಿಟ್ಟು ಕ್ಷಮಿಸಿ, ಉಪಾಹಾರ ಸಿದ್ಧವಾಗಿದೆ. ನೀವು ಆಗಮಿಸಬೇಕಾಗಿ ಕೋರಿಕೆ’’ ಎಂದು ಓದುಗರ ಕತ್ತು ಹಿಸುಕುವಂತೆ ಅಡುಗೆ ಮನೆಯ ಪಾತ್ರಗಳು ಕಾದಂಬರಿಯಲ್ಲಿ ಮಾತನಾಡುತ್ತಾರೆ. ಇನ್ನೊಮ್ಮೆ ಅಂತಹದಕ್ಕೆ ಉತ್ತರವಾಗಿ ನಾಯಕನು ‘‘ಮೊದಲು ಊಟ ಮಾಡೋಣ, ಅದೂ ನಿದ್ದೆಯಷ್ಟೇ ಮುಖ್ಯ ಅಲ್ಲವಾ? ನಿದ್ದೆ ಮತ್ತು ಊಟ ಕ್ರಿಯಾಶೀಲವಾಗಿರುವ ಜೀವಕ್ರಿಯೆಯನ್ನು ಸದಾ ಸಮೃದ್ಧವಾಗಿಡುವಂತಹದ್ದು. ಬನ್ನಿ ಈಗ ಅದರ ಮೊರೆ ಹೋಗೋಣ ಆಮೇಲೆ ಮಿಕ್ಕಿದ್ದನ್ನು ನಿರ್ಧರಿಸೋಣ’’ ಎಂದು ಭೋಜನಕ್ಕೆ ತೆರಳುತ್ತಾನೆ.

ಹೀಗೆ ನೈಜತೆಗಳಿರದ ಸನ್ನಿವೇಶ, ಡೈಲಾಗ್‌ಗಳು ಯಾತ್ರೆಯಲ್ಲಿ ತುಂಬಿವೆ. ಪಾತ್ರಗಳು, ಸನ್ನಿವೇಶಗಳು ಅತೀ ಕೃತಕವೆನಿಸದೇ ಹೋದರೂ ಸಹ ನಿರೂಪಣಾ ವಿಧಾನದಿಂದಾಗಿ ಅವೆಲ್ಲಾ ಓದುಗನೊಳಗೆ ಇಳಿಯದೆ ತಡೆಯೊಡ್ಡುತ್ತವೆ.

ಆದರೆ ಕಾದಂಬರಿಯ ಒಟ್ಟಾರೆ ಆಶಯವು ಜೀವಪರವಾದದ್ದು. ದಟ್ಟ ಪ್ರೀತಿ, ಭಾವುಕತೆಯಿಂದ ತುಂಬಿದೆ. ಒಳ್ಳೆಯತನವೆಂಬ ಈ ಕಾಲದ ದುಬಾರಿ ಮತ್ತು ಅಪಾಯಕಾರಿ ಅಂಶಗಳೊಂದಿಗೇ ಇಲ್ಲಿನ ಪಾತ್ರ ಸನ್ನಿವೇಶಗಳು ಓದುಗರನ್ನು ಕೊಂಡೊಯ್ಯುತ್ತವೆ. ಈ ಭೂಗ್ರಹದ ಯಾವ ಜೀವಿಯೂ ತಮ್ಮ ತಮ್ಮ ಬದುಕಿನ ಅರ್ಥವೇನೆಂದು ಸೀರಿಯಸ್ಸಾಗಿ ಯೋಚಿಸದಿದ್ದರೂ ಸಹ ಅದನ್ನೇ ಧ್ಯಾನಿಸುವ ಮಾನವ ಜೀವಿಗಳ ಪ್ರವೃತ್ತಿ ಒಂದಿದೆಯಲ್ಲವೆ? ಅದನ್ನೇ ಈ ಕಾದಂಬರಿಯ ಪ್ರಮುಖ ಪಾತ್ರಗಳು ಹುಡುಕುತ್ತಿರುವಂತೆ ಕಾಣುತ್ತದೆ.

ಆಧುನೀಕರಣದ ಕೃತಕ ಮಾನವ ಸಂಬಂಧಗಳು, ನಮ್ಮ ಬದುಕಿನ ಜೀವತಂತುಗಳಿಂದ ನಮ್ಮನ್ನೇ ಪರಕೀಯಗೊಳಿಸುವ ಲಾಭಬಡುಕ ಜಾಗತೀಕರಣದ ವಿರುದ್ಧ ಈ ಕಾದಂಬರಿ ಮಾತನಾಡುತ್ತದೆ. ಸರಳತೆ, ಜೀವನಪ್ರೀತಿ ಹಾಗೂ ನಿಸರ್ಗದೊಂದಿಗಿನ ತಾದ್ಯಾತ್ಮ ಹೊಂದಬಯಸುವ ಶಿಬಿರದಲ್ಲಿ ಯಾತ್ರೆ ಕಾದಂಬರಿಯ ಬಹುತೇಕ ಪಾತ್ರಗಳು ಮೇಳೈಸಿವೆ. ನಟರಾಜ ಬೂದಾಳು ತಮ್ಮ ಮುನ್ನುಡಿಯಲ್ಲಿ ‘‘ಅನ್ನಿಗತನ (ಏಲಿಯನ್) ಭಾವನೆಯನ್ನು ದಾಟಲು ಇಲ್ಲಿರುವ ಬಹುಪಾಲು ಎಲ್ಲರೂ ಮಾಡುವ ಪ್ರಯತ್ನವು ನಮ್ಮ ಮನಸ್ಸುಗಳನ್ನು ದ್ರವಿಸುವಂತೆ ಮಾಡುತ್ತದೆ’’ ಎಂದು ಕುರಿತೇಟು ಹೊಡೆದಂತೆ ಸರಿಯಾಗಿ ಹೇಳುತ್ತಾರೆ. ಬಹುಶಃ ಈ ಕಾದಂಬರಿಯ ಸರಿಯಾದ ಒನ್‌ಲೈನ್ ವಿಮರ್ಶೆ ಇದು.

‘‘ಹೆಚ್ಚಿನ ಓದುಗರು ಓದುವ ಖುಷಿಗೆಂದೇ ಪುಸ್ತಕಗಳನ್ನು ಓದುತ್ತಾರೆ ಅವರಿಗೆ ಬೇರೆ ಯಾವ ಗೊಡವೆಗಳೂ ಬೇಕಿರುವುದಿಲ್ಲ. ಇಂತಹ ಓದುಗರನ್ನು ಕೂಡಾ ನಾವು ಸಮಾನ ಗೌರವದಿಂದ ಕಾಣಬೇಕಾಗುತ್ತದೆ’’ ಎಂದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ತಮಗೆ ಬರೆದ ಪತ್ರದಲ್ಲಿ ತಿಳಿಸಿದ್ದನ್ನು ನಟರಾಜ ಬೂದಾಳು ತಮ್ಮ ಮುನ್ನುಡಿಯಲ್ಲಿ ನೆನೆದಿದ್ದಾರೆ.

ಅದೇ ತರ್ಕವನ್ನು ಕೊಂಚ ವಿಸ್ತರಿಸಿ ‘‘ಬರಹಗಾರರೂ ಕೂಡ ಬರೆಯುವ ಖುಷಿಗೆಂದೇ ಬರೆಯುತ್ತಾರೆ. ಅವರಿಗೆ ಬೇರೆ ಗೊಡವೆಗಳು ಬೇಕಿರುವುದಿಲ್ಲ’’ ಅಂತಂದುಕೊಂಡರೆ ಯಾತ್ರೆಯಲ್ಲಿ ಅಡ್ಡಬರುವ ಕಲ್ಲು ಮುಳ್ಳಿನ ಹಾದಿಯನ್ನು ಕ್ಷಣಕಾಲ ಮರೆತುಬಿಡಬಹುದು. ಬಾಕಿ ಉಳಿದಂತೆ ಇದರ ಓದು ಕರೆದೊಯ್ದಲ್ಲೆಲ್ಲಾ ಒಮ್ಮೆ ಅಡ್ಡಾಡಿ ಬರಲಡ್ಡಿಯಿಲ್ಲ.

ಅಂಕಿತಾ ಪ್ರಕಾಶನದ 318 ಪುಟಗಳ ಈ ಪುಸ್ತಕಕ್ಕೆ 295 ರೂಪಾಯಿ ಬೆಲೆ ಇಡಲಾಗಿದೆ. ಇದು ಕೊಂಡು ಓದುವವರನ್ನು ದೂರ ತಳ್ಳುವ ನಿರ್ದಯ ವ್ಯವಹಾರದಂತೆ ಕಾಣುತ್ತಿದೆ. ಕವರ್‌ಪೇಜ್‌ಗೆ ಬಳಸಿರುವ ಸೌಮ್ಯಪ್ರಭು ಕಲ್ಯಾಣಕರ್‌ರವರ ಚಿತ್ರ ಒಂದು ಕಲಾಕೃತಿಯಾಗಿ ಚೆನ್ನಾಗಿದೆಯಾದರೂ ‘ಯಾತ್ರೆ’ ಕಾದಂಬರಿಯಲ್ಲಿ ಕಾಣಿಸುವ ಜೀವನಪ್ರೀತಿ, ಹಸಿರು ಪ್ರಾಣಿಪಕ್ಷಿಗಳಿರದೆ ಬೆಂಗಾಡಿನಂತೆ ನೀರಸವೆನಿಸುತ್ತದೆ.

ಅಪಾರ ಜೀವನಾನುಭವಗಳ ಮೇಲುದನಿಯ ಶೂದ್ರ ಶ್ರೀನಿವಾಸ್‌ರವರು ಬೇರೆ ಟೇಬಲ್‌ಗಳನ್ನು ಬಿಟ್ಟು ಬರೆಯುವ ಟೇಬಲ್‌ನತ್ತ ಇತ್ತೀಚೆಗೆ ಹೆಚ್ಚು ವಾಲುತ್ತಿರುವುದು ಸಂತೋಷದ ಸಂಗತಿಯಾಗಿದೆ.

ನಾನು ಓದಿದ ಪುಸ್ತಕ: ಪಾರ್ವತೀಶ ಬಿಳಿದಾಳೆ

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News