ಬುದ್ಧನೆಡೆಗೆ ಅಂಬೇಡ್ಕರ್ ನಡಿಗೆ: ಒಂದು ಅವಲೋಕನ

Update: 2018-10-13 18:36 GMT

ಗಾಂಧೀಜಿಯವರ ಈ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸುವ ಅಂಬೇಡ್ಕರರು, ‘‘ನನ್ನ ವೈಯಕ್ತಿಕ ಮುನ್ನಡೆಗೆ, ಸ್ಫೂರ್ತಿಗೆ, ನಡತೆಗೆ ಪೂರ್ವ ಧರ್ಮವೊಂದು ಅರ್ಹ ಆದರ್ಶವಾಗಲಿಲ್ಲವೆಂದರೆ ತಾನು ಅಲ್ಲಿ ಇರುವುದು ಹೇಗೆ ಸಾಧ್ಯ?. ಹಾಗೆಯೇ ನಾನು ಧರ್ಮ ಬದಲಿಸಲು ನಿರ್ಧರಿಸಿದ್ದೇನೆ. ಜನ ಹಿಂದೆ ಬರಲಿ ಬಿಡಲಿ ಅದು ಅವರಿಗೆ ಬಿಟ್ಟದ್ದು. ನನ್ನ ನಿರ್ಧಾರ ಒಳ್ಳೆಯದು ಅನಿಸಿದರೆ ಅವರು ಬರುತ್ತಾರೆ, ಇಲ್ಲಾ ಅಂದರೆ ಬರುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಗಾಂಧೀಜಿಯವರು ಅವರಿಗೆ ತಡೆಯಾಗಬಾರದು’’ ಎನ್ನುತ್ತಾರೆ.

ಬಾಬಾಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸಿದ್ದು ಎಲ್ಲರಿಗೂ ತಿಳಿದಿದೆ. ಅಕ್ಟೋಬರ್ 14ಕ್ಕೆ ಅವರು ಬೌದ್ಧ ಧರ್ಮ ಸ್ವೀಕರಿಸಿ 62 ವರ್ಷಗಳು ತುಂಬುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಶ್ನೆ ಎಂದರೆ ಏಕೆ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು? ಜೀವನದ ಕೊನೆಯ ದಿನಗಳಲ್ಲಿ ಅದು ಅವರ ದಿಢೀರ್ ನಿರ್ಧಾರವೇ? ಅದಕ್ಕೊಂದು ಇತಿಹಾಸವಿಲ್ಲವೇ? ಖಂಡಿತ, ಬೌದ್ಧ ಧರ್ಮ ಸ್ವೀಕರಿಸಿದ ಅವರ ನಿರ್ಧಾರ ರಾತ್ರೋರಾತ್ರಿ ದಿಢೀರನೆ ತೆಗೆದುಕೊಂಡಿದ್ದಲ್ಲ. ನಿಜ ಹೇಳಬೇಕೆಂದರೆ ಅವರ ಜೀವನ ಪಯಣವೇ ಬುದ್ಧ್ದನೆಡೆಗಿನ ಪಯಣದ ದಟ್ಟ ಅನುಭವದಂತಿದೆ. ಮತ್ತೂ ಆಳವಾಗಿ ಹೇಳುವುದಾದರೆ ಈ ದೇಶದ ಅಸಮಾನ ಸಾಮಾಜಿಕ ವ್ಯವಸ್ಥೆಗೆ ಅವರು ಕಂಡುಕೊಂಡ ಉತ್ತರ ಬುದ್ಧ ಧರ್ಮ.

 ಬಾಬಾಸಾಹೇಬ್ ಅಂಬೇಡ್ಕರರು ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಅಂದು ಅಸ್ತಿತ್ವದಲ್ಲಿದ್ದ ಶೋಷಿತರಿಗೆ ಸಾರ್ವಜನಿಕ ಕೆರೆಯಿಂದ ಕುಡಿಯಲು ನೀರು ತೆಗೆದುಕೊಳ್ಳಲು ಇದ್ದ ನಿಷೇಧವನ್ನು ಪ್ರಶ್ನಿಸುವುದರ ಮೂಲಕ ಆರಂಭಿಸುತ್ತಾರೆ. 1927 ಮಾರ್ಚ್ 19 ಮತ್ತು 20ರಂದು ಬಾಬಾಸಾಹೇಬರು ನಡೆಸುವ ಮಹಾರಾಷ್ಟ್ರದ ಮಹಾಡ್ ನಗರದ ಚೌಡರ್ ಕೆರೆ ನೀರು ಕುಡಿಯುವ ಹೋರಾಟವೇ ಅಂತಹ ಒಂದು ಅದ್ಭುತ ಹೋರಾಟವಾಗಿದೆ. ಅದ್ಭುತ, ಏಕೆಂದರೆ ಸ್ವತಃ ಅಂಬೇಡ್ಕರರೇ ‘‘ಶೋಷಿತರು ಚೌಡರ್ ಕೆರೆಯ ನೀರನ್ನು ಕುಡಿದದ್ದು 1789ರ ಫ್ರಾನ್ಸ್ ಕ್ರಾಂತಿಯಷ್ಟೆ ಮಹತ್ವದ್ದು’’ ಎನ್ನುತ್ತಾರೆ. ದುರಂತವೆಂದರೆ ಇಂತಹ ಅದ್ಭುತ ಹೋರಾಟದ ವಿರುದ್ಧ ಹಿಂದೂಗಳೂ ಭೀಕರ ದಾಳಿ ನಡೆಸುತ್ತಾರೆ. ಡಾ.ಅಂಬೇಡ್ಕರರನ್ನೂ ಒಳಗೊಂಡಂತೆ ಅವರ ನೂರಾರು ಅನುಯಾಯಿಗಳು ಹಲ್ಲೆಗೊಳಗಾಗುತ್ತಾರೆ. ಈ ಘಟನೆ ಅಂಬೇಡ್ಕರರನ್ನು ತೀವ್ರವಾಗಿ ಘಾಸಿಗೊಳಿಸುತ್ತದೆ. ಹೇಗೆಂದರೆ ಹಿಂದೂ ಧರ್ಮವನ್ನು ಅದರ ಅಸಮಾನತೆಯನ್ನು ತೀವ್ರವಾಗಿ ಪ್ರಶ್ನಿಸಲು ಈ ಘಟನೆ ಪ್ರೇರಣೆ ನೀಡುತ್ತದೆ. ಪರಿಣಾಮ ಚೌಡರ್ ಕೆರೆ ಸತ್ಯಾಗ್ರಹ ನಡೆದ ಕೆಲವೇ ದಿನಗಳಲ್ಲಿ ಅಂದರೆ ಅದೇ ವರ್ಷದ(1927) ಡಿಸೆಂಬರ್ 25ರಂದು ಅವರು ಯಾವುದರ ಆಧಾರದ ಮೇಲೆ ಹಿಂದೂ ಧರ್ಮ ಸ್ಥಾಪಿತಗೊಂಡಿದೆಯೋ ಆ ಗ್ರಂಥವನ್ನು ಅರ್ಥಾತ್ ಅಸಮಾನತೆ ಪ್ರತಿಪಾದಿಸುವ ಗ್ರಂಥ ಮನುಸ್ಮತಿಯನ್ನು ಸಾರ್ವಜನಿಕವಾಗಿ ದಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮನುಸ್ಮತಿ ಬಗ್ಗೆ ಅಂಬೇಡ್ಕರರು ಆರೋಪಿಸುವುದು ‘‘ಅದು ಅಸಮಾನತೆಯ ಸಂಕೇತವಾಗಿದೆ. ಆ ಕಾರಣಕ್ಕಾಗಿ ಅದನ್ನು ಸುಡಬೇಕಾಯಿತು’’ ಎಂದು.
ಮುಂದುವರಿದು ಅಂಬೇಡ್ಕರರ ಇಂತಹ ಹೋರಾಟ ದೇವಸ್ಥಾನ ಪ್ರವೇಶವನ್ನು ನಿರಾಕರಿಸುವ ಮಟ್ಟಕ್ಕೆ ಬೆಳೆಯುತ್ತದೆ. ಹೇಗೆಂದರೆ ಸ್ವತಃ ಗಾಂಧೀಜಿಯವರೇ 1933 ಫೆಬ್ರವರಿ 4ರಂದು ಅಂಬೇಡ್ಕರರನ್ನು ಅಸ್ಪಶ್ಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವ ಮಸೂದೆಯೊಂದಕ್ಕೆ ಬೆಂಬಲ ನೀಡುವಂತೆ ಕೇಳಿಕೊಳ್ಳುತ್ತಾರೆ. ಅದಕ್ಕೆ ಅಂಬೇಡ್ಕರರು ನೀಡುವ ಉತ್ತರ ‘‘ನಮಗೆ ಬೇಕಿರುವುದು ಅಸ್ಪಶ್ಯತೆ ನಿಷೇಧವೇ ಹೊರತು ದೇವಾಲಯ ಪ್ರವೇಶವಲ್ಲ. ಯಾಕೆಂದರೆ ನಮ್ಮನ್ನು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಸಿದ ಆ ಧರ್ಮದ ಬಗ್ಗೆ ನಾವು ಹೆಮ್ಮೆ ಪಡುವುದಾದರೂ ಹೇಗೆ? ಆ ಕಾರಣದಿಂದ ದೇವಾಲಯ ಪ್ರವೇಶದಿಂದ ನಮಗೆ ಯಾವುದೇ ಅನುಕೂಲ ಆಗುವುದಿಲ್ಲ.’’ ಈ ಸಂದರ್ಭದಲ್ಲಿ ತಮ್ಮ ಅನುಯಾಯಿಗಳಿಗೂ ಅವರು ಹೇಳುವುದು ನಿಮಗೆ ತಿನ್ನಲು ಆಹಾರ ಇಲ್ಲ, ಉಡಲು ಬಟ್ಟೆ ಇಲ್ಲ, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅವಕಾಶ ಇಲ್ಲ, ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ಬಳಿ ಹಣ ಇಲ್ಲ. ಆದ್ದರಿಂದ ಮೊದಲು ಭೌತಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಗಮನ ಕೊಡಿ. ಆಧ್ಯಾತ್ಮಿಕತೆ ಕಡೆ(ದೇಗುಲ ಪ್ರವೇಶ) ಆಮೇಲೆ ಗಮನಕೊಡುವಿರಂೆ ಎಂದು.
ಒಟ್ಟಾರೆ ಅಸಮಾನತೆಯನ್ನು ಹೀಗೆ ತೀವ್ರವಾಗಿ ಪ್ರಶ್ನಿಸಲು ಆರಂಭಿಸುವ, ಸಾರ್ವಜನಿಕ ಹೋರಾಟಗಳನ್ನು ರೂಪಿಸುವ ಅಂಬೇಡ್ಕರರು ಇದರ ಮುಂದಿನ ಭಾಗವಾಗಿ 1935 ಅಕ್ಟೋಬರ್ 13ರಂದು ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡುತ್ತಾರೆ. ಆ ಘಟನೆ ಎಂದರೆ ಅಂದು ಅವರು ಮೊಳಗಿಸಿದ ‘‘ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ’’ ಎಂಬ ಕ್ರಾಂತಿಕಾರಿ ಘೋಷಣೆ. ಮೊದಲೇ ಹೇಳಿದಂತೆ ಈ ಘೋಷಣೆಗೆ ಇಡೀ ದೇಶವೇ ಬೆಚ್ಚುತ್ತದೆ. ಹೇಗೆಂದರೆ ಸ್ವತಃ ಗಾಂದೀಜಿಯವರೇ ಇದರ ಮಾರನೇ ದಿನ ಅಂದರೆ ಅಕ್ಟೋಬರ್ 15ರಂದು ಪ್ರತಿಕ್ರಿಯಿಸಿ, ‘‘ಅಂಬೇಡ್ಕರರ ಈ ಮಾತು ನಂಬಲಸಾಧ್ಯವಾದುದು. ಹೀಗೇನಾದರೂ ಅವರ ನೇತೃತ್ವದ ಶೋಷಿತರ ಸಮ್ಮೇಳನ ಹಿಂದೂ ಧರ್ಮ ತೊರೆಯುವ ನಿರ್ಧಾರ ಕೈಗೊಂಡಿದ್ದರೆ ನಿಜಕ್ಕೂ ಅದು ದುರದೃಷ್ಟಕರ.’’ ಈ ಸಂದರ್ಭದಲ್ಲಿ ಗಾಂಧೀಜಿಯವರ ಈ ಹೇಳಿಕೆಗೆ ತತಕ್ಷಣ ಪ್ರತಿಕ್ರಿಯಿಸುವ ಅಂಬೇಡ್ಕರರು, ‘‘ನನ್ನ ವೈಯಕ್ತಿಕ ಮುನ್ನಡೆಗೆ, ಸ್ಫೂರ್ತಿಗೆ, ನಡತೆಗೆ ಪೂರ್ವ ಧರ್ಮವೊಂದು ಅರ್ಹ ಆದರ್ಶವಾಗಲಿಲ್ಲವೆಂದರೆ ತಾನು ಅಲ್ಲಿ ಇರುವುದು ಹೇಗೆ ಸಾಧ್ಯ?. ಹಾಗೆಯೇ ನಾನು ಧರ್ಮ ಬದಲಿಸಲು ನಿರ್ಧರಿಸಿದ್ದೇನೆ. ಜನ ಹಿಂದೆ ಬರಲಿ ಬಿಡಲಿ ಅದು ಅವರಿಗೆ ಬಿಟ್ಟದ್ದು. ನನ್ನ ನಿರ್ಧಾರ ಒಳ್ಳೆಯದು ಅನಿಸಿದರೆ ಅವರು ಬರುತ್ತಾರೆ, ಇಲ್ಲಾ ಅಂದರೆ ಬರುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಗಾಂಧೀಜಿಯವರು ಅವರಿಗೆ ತಡೆಯಾಗಬಾರದು’’ ಎನ್ನುತ್ತಾರೆ. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ 3, ಪು.99).
ಆಶ್ಚರ್ಯವೆಂದರೆ ಅಂಬೇಡ್ಕರರು ಹೀಗೆ ‘‘ಹಿಂದೂವಾಗಿ ಸಾಯಲಾರೆ’’ ಎಂದು ಘೋಷಿಸುತ್ತಿದ್ದಂತೆ ಒಂದಷ್ಟು ಮಂದಿ ದಲಿತರು ಇಂತಹ ಘೋಷಣೆಯಾದ ಕೆಲವೇ ದಿನಗಳಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುತ್ತಾರೆ. ಹಾಗೆಯೇ ಬಹುಸಂಖ್ಯೆಯಲ್ಲಿ ಹಲವರು ಸಿಖ್ ಧರ್ಮಕ್ಕೂ ಮತಾಂತರ ಹೊಂದುತ್ತಾರೆ. ಮೇ 31, 1936ರಲ್ಲಿ ಬಾಂಬೆಯ ದಾದರ್‌ನಲ್ಲಿ ಸಮ್ಮೇಳನ ನಡೆಸುವ ಅವರು ಅಂದು ಮಾಡಿದ ‘ವಿಮೋಚನೆಯ ಮಾರ್ಗ ಯಾವುದು?’ ಎಂಬ ಸುದೀರ್ಘ ಮರಾಠಿ ಭಾಷಣದಲ್ಲಿ, ಭಾಷಣದ ಕೊನೆಯಲ್ಲಿ ಪ್ರಸ್ತಾಪಿಸುವುದು ಭಗವಾನ್ ಬುದ್ಧನ ‘ನಿನಗೆ ನೀನು ಬೆಳಕು’ ಎಂಬ ನುಡಿಗಳನ್ನು. ತನ್ಮೂಲಕ ತನ್ನ ಹಾದಿ ಬೌದ್ಧ ಧರ್ಮ ಎಂಬುದನ್ನು ಅವರು 1936ರಲ್ಲೇ ಸ್ಪಷ್ಟಪಡಿಸುತ್ತಾರೆ.
ಅಂಬೇಡ್ಕರರೇನೋ ತನ್ನ ಹಾದಿ ಬೌದ್ಧ ಧರ್ಮ ಎಂದರು. ಆಗಿದ್ದರೆ ಈ ಹಾದಿಗೆ ತನ್ನವರನ್ನು ತಯಾರು ಮಾಡುವುದು ಯಾರು? ತಕ್ಷಣವೇ ಕಾರ್ಯಪ್ರವೃತ್ತರಾಗುವ ಅಂಬೇಡ್ಕರ್‌ರವರು 1937ರ ಆಗಸ್ಟ್ 28ರಂದು ಮುಂಬೈನ ಬಾಂದ್ರದಲ್ಲಿ ನಡೆಯುವ ಸಮ್ಮೇಳನದಲ್ಲಿ ಶೋಷಿತ ಸಮುದಾಯಗಳಿಗೆ ಹಿಂದೂ ಧರ್ಮದ ದೇವರುಗಳನ್ನು ಪೂಜಿಸುವುದು ಬೇಡ ಎಂದು ಕರೆಕೊಡುತ್ತಾರೆ. (ಅದೇ ಕೃತಿ. ಪು.160). ಹಾಗೆಯೇ ಅಂಬೇಡ್ಕರ್‌ರ ಈ ಆದೇಶವನ್ನು ಆ ಕಾಲದಲ್ಲಿ ದಲಿತರು ವಿಶೇಷವಾಗಿ ಮಹಾರಾಷ್ಟ್ರದವರು ಹೇಗೆ ಪಾಲಿಸುತ್ತಾರೆಂದರೆ 1942ರಷ್ಟೊತ್ತಿಗೆ ಮಹಾರಾಷ್ಟ್ರದಾದ್ಯಂತ ಇಡೀ ದಲಿತರು ಹಿಂದೂ ಹಬ್ಬಹರಿದಿನಗಳನ್ನು ಆಚರಿಸುವುದನ್ನು ಸಂಪೂರ್ಣ ಬಿಟ್ಟುಬಿಡುತ್ತಾರೆ! (Dr.Ambedkar And Untouchability by Christophe Jefforlot, Pp.131).
ಅಂದಹಾಗೆ ಈ ಸಮಯದ ಅಂಬೇಡ್ಕರರ ಬುದ್ಧ ಪ್ರೀತಿಯ ಒಂದಷ್ಟು ಅಂಶಗಳನ್ನು ದಾಖಲಿಸುವುದಾದರೆ, 1934ರಲ್ಲೇ ಅವರು ಮುಂಬೈನ ದಾದರ್‌ನಲ್ಲಿ ಒಂದು ಭವ್ಯವಾದ ಮನೆ ಕಟ್ಟುತ್ತಾರೆ. ಅದಕ್ಕೆ ಅವರು ಇಡುವ ಹೆಸರು ‘ರಾಜಗೃಹ’ ಎಂದು. ರಾಜಗೃಹ: ಪ್ರಾಚೀನ ಬಿಹಾರದಲ್ಲಿ ಬೌದ್ಧರ ರಾಜಧಾನಿ ಎಂಬುದು ಇಲ್ಲಿ ಉಲ್ಲೇಖನೀಯ. ಇನ್ನು 1940ರಲ್ಲಿ ಅವರು ಒಂದು ಕಾಲೇಜು ಆರಂಭಿಸುತ್ತಾರೆ ಅದಕ್ಕೆ ಅವರು ಇಡುವ ಹೆಸರು ‘ಸಿದ್ಧಾರ್ಥ ಕಾಲೇಜು’ ಎಂದು. ಮುಂದುವರಿದು 1948ರಲ್ಲಿ ಅವರು ಪ್ರಖ್ಯಾತ ಬೌದ್ಧ ಚಿಂತಕ ಲಕ್ಷ್ಮೀ ನರಸು ಅವರ ‘ಎಸೆನ್ಸ್ ಆಫ್ ಬುದ್ಧಿಸಂ’ ಕೃತಿಗೆ ಮುನ್ನುಡಿ ಬರೆದುಕೊಡುತ್ತಾರೆ. ಅಲ್ಲದೇ ಅದೇ ವರ್ಷ ‘ದಿ ಅನ್‌ಟಚಬಲ್ಸ್’ ಕೃತಿ ಬರೆಯುತ್ತಾರೆ. ಆ ಕೃತಿಯಲ್ಲಿ ಅಂಬೇಡ್ಕರರು ಅಸ್ಪಶ್ಯರು ಇತಿಹಾಸದಲ್ಲಿ ಬೌದ್ಧ ಅನುಯಾಯಿಗಳಾಗಿದ್ದರು ಮತ್ತು ಅವರು ಬೌದ್ಧ ಅನುಯಾಯಿಗಳಾಗಿ ಉಳಿದ ಕಾರಣಕ್ಕೇ ಹಿಂದೂಗಳು ಅವರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿ ಅವರನ್ನು ಅಸ್ಪಶ್ಯರನ್ನಾಗಿ ಮಾಡಿದರು ಎನ್ನುತ್ತಾರೆ. ತನ್ಮೂಲಕ ಶೋಷಿತ ಸಮುದಾಯಗಳು ಮೂಲದಲ್ಲಿ ಬುದ್ಧನ ಅನುಯಾಯಿಗಳು ಎಂಬ ಇತಿಹಾಸವನ್ನು ಹೊರತೆಗೆಯುತ್ತಾರೆ.
ಈ ನಡುವೆ ರಾಷ್ಟ್ರ ಮಟ್ಟದಲ್ಲಿ ಕೆಲವು ಬೌದ್ಧ ಸಂಸ್ಕೃತಿ ಉಳಿಸುವ ಕೆಲಸಗಳನ್ನು ಅಂಬೇಡ್ಕರ್ ಮಾಡುತ್ತಾರೆ. ಅವುಗಳೆಂದರೆ ತಾವು ಸಂವಿಧಾನ ರಚಿಸುವಾಗ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರ ಸೇರಿಸಿದ್ದು, ಅಶೋಕನ ಕಾಲದ ನಾಲ್ಕು ತಲೆಯ ಸಿಂಹ ಚಿತ್ರವನ್ನು ರಾಷ್ಟ್ರ ಲಾಂಛನವಾಗಿಸಿದ್ದು, ರಾಷ್ಟ್ರಪತಿಗಳ ದರ್ಬಾರ್ ಹಾಲ್‌ನಲ್ಲಿ ಬುದ್ಧನ ಮೂರ್ತಿ ಇರಿಸಿದ್ದು, ಮತಾಂತರಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದು ಹಾಗೂ ಬುದ್ಧ ಜಯಂತಿಗೆ ಸಾರ್ವಜನಿಕ ರಜೆ ಕೊಡಿಸಿದ್ದು... ಇತ್ಯಾದಿ. ಒಟ್ಟಾರೆ ತಮ್ಮ ಜೀವನದಲ್ಲಿ ಹೀಗೆ ಅಂಬೇಡ್ಕರರು ನಿರಂತರವಾಗಿ ಸಂಪೂರ್ಣವಾಗಿ ಬುದ್ಧಮಯವಾಗುತ್ತಾ ಹೋಗುತ್ತಾರೆ. ಈ ಸಂದರ್ಭದಲ್ಲಿ ಅಂದರೆ 1954ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಮಾಡುವ ಭಾಷಣದಲ್ಲಿಯೂ ಅವರು ತನ್ನ ಹಾದಿ ಬುದ್ಧನ ಹಾದಿ ಎಂದು ಸ್ಪಷ್ಟಪಡಿಸುತ್ತಾರೆ. ಹೇಗೆಂದರೆ ‘‘ಭಾರತ ಸಂವಿಧಾನ ಪ್ರತಿಪಾದಿಸುವ ಸ್ವಾತಂತ್ರ್ಯ, ಸಮಾನತೆ, ಮೈತ್ರಿ ಈ ತತ್ವಗಳನ್ನು ಎಲ್ಲರೂ ನಾನು ಅವುಗಳನ್ನು ಫ್ರೆಂಚ್ ಕ್ರಾಂತಿಯಿಂದ ಪಡೆದಿದ್ದೇನೆ ಎನ್ನುತ್ತಿದ್ದಾರೆ. ಆದರೆ ವಾಸ್ತವವೆಂದರೆ ಅವುಗಳನ್ನು ನಾನು ನನ್ನ ಗುರು ಭಗವಾನ್ ಬುದ್ಧರಿಂದ ಪಡೆದಿದ್ದೇನೆ ಎಂಬುದು.’’
ಅಂದಹಾಗೆ ಬಾಬಾಸಾಹೇಬ್ ಅಂಬೇಡ್ಕರರು ಹೀಗೆ ಬೌದ್ಧ ಧರ್ಮದೆಡೆ ಚಲಿಸಿದರು. ಆ ಚಲನೆ ಕೂಡ ಬುದ್ಧ ಧರ್ಮ ಹೇಗಿದೆಯೋ ಹಾಗೇ ಹೋಗಲಿಲ್ಲ! ಬದಲಿಗೆ ಅಲ್ಲಿಯೂ ಇದ್ದ ಓರೆಕೋರೆಗಳನ್ನು ತಿದ್ದಲು ಯತ್ನಿಸಿದರು. ಬೈಬಲ್‌ನಂಥ ಒಂದು ಗ್ರಂಥ ಬೌದ್ಧ ಧರ್ಮದಲ್ಲಿ ಇಲ್ಲದ್ದನ್ನು ಗುರುತಿಸಿ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಎಂಬ ಬೃಹತ್ ಗ್ರಂಥ ರಚಿಸುತ್ತಾರೆ. ಕ್ರೈಸ್ತ ಧರ್ಮದ ರೀತಿ ಬೌದ್ಧ ಮಿಷನ್ ಸ್ಥಾಪಿಸಿ ಧರ್ಮ ಪ್ರಚಾರ ಮಾಡಲು ಭಿಕ್ಕುಗಳಿಗಿಂತ ವಿವಾಹಿತ ದಮ್ಮ ಬೋಧಕರಿಗೆ ಆದ್ಯತೆ ನೀಡಬೇಕು ಎನ್ನುತ್ತಾರೆ. ತನ್ಮೂಲಕ ಬೌದ್ಧ ಧರ್ಮಕ್ಕೆ ಒಂದು ಆಧುನಿಕ ರೂಪ ಕೊಡಲು ಕೂಡ ಯತ್ನಿಸುತ್ತಾರೆ. ಅಂತಿಮವಾಗಿ ಇಷ್ಟೆಲ್ಲಾ ಮಾಡಿದ ನಂತರ 1956 ಅಕ್ಟೋಬರ್ 14ರಂದು ಮಹಾರಾಷ್ಟ್ರದ ನಾಗಪುರದಲ್ಲಿ ತಮ್ಮ 5 ಲಕ್ಷ ಅನುಯಾಯಿಗಳೊಡನೆ ಬೌದ್ಧ ಧರ್ಮ ಸ್ವೀಕರಿಸುತ್ತಾರೆ. ಆಶ್ಚರ್ಯವೆಂದರೆ ಮತಾಂತರದ ಆ ದಿನ ಕೂಡ ಅವರು ಬರೀ ಬುದ್ಧನ ಪಂಚಶೀಲ, ತಿಸರಣಗಳನ್ನಷ್ಟೆ ಹೇಳುವುದಿಲ್ಲ. ಅವುಗಳ ಜೊತೆಗೆ ತಮ್ಮದೇ 22 ಪ್ರತಿಜ್ಞೆಗಳನ್ನು ಕೂಡ ಅವರು ನೂತನ ಬೌದ್ಧರಿಗೆ ಬೋಧಿಸುತ್ತಾರೆ. ಈ ನಿಟ್ಟಿನಲ್ಲಿ ಆ 22 ಪ್ರತಿಜ್ಞೆಗಳಲ್ಲಿ ‘‘ನಾವು ಬ್ರಾಹ್ಮಣರಿಂದ ಯಾವುದೇ ಪೂಜೆ ಮಾಡಿಸುವುದಿಲ್ಲ, ಹಿಂದೂ ದೇವರುಗಳನ್ನು ಪೂಜಿಸುವುದಿಲ್ಲ, ತಾರತಮ್ಯ ಎಸಗುವ ಹಿಂದೂ ಧರ್ಮ ತೊರೆಯುತ್ತೇವೆ..’’ ಇತ್ಯಾದಿ ಕ್ರಾಂತಿಕಾರಿ ಅಂಶಗಳಿರುವುದು ಯಾರನ್ನಾದರೂ ಖಂಡಿತ ಚಕಿತಗೊಳಿಸದಿರದು! ಒಟ್ಟಾರೆ ಬಾಬಾಸಾಹೇಬ್ ಅಂಬೇಡ್ಕರರ ಬುದ್ಧನೆಡೆ ಚಲನೆ ಮೇಲ್ನೋಟಕ್ಕೆ ಧಾರ್ಮಿಕ ವಿಮೋಚನೆಯಂತೆ ಕಂಡರೂ ಆಳದಲ್ಲಿ ಅದು ಸಾಮಾಜಿಕ ವಿಮೋಚನೆಯ ದಿಟ್ಟ ಪಥವಾಗಿದೆ.

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News

ಜಗದಗಲ
ಜಗ ದಗಲ