ಅಂಬೇಡ್ಕರ್ ಆಯ್ಕೆಯ ಬೌದ್ಧ ಧರ್ಮ

Update: 2018-10-14 18:45 GMT

ಬುದ್ಧನ ತಾತ್ವಿಕತೆಯ ಪ್ರಮುಖ ಲಕ್ಷಣವೆಂದರೆ ನಮ್ಮ ವಿವೇಕವೇ ನಮ್ಮನ್ನು ಮುನ್ನಡೆಸಬೇಕು. ಅದು ಮತ್ತೊಬ್ಬರು ನಮ್ಮನ್ನು ಆಳದೆ, ನಮ್ಮನ್ನು ನಾವೇ ಆಳಿಕೊಳ್ಳುವ ಪ್ರಜಾಪ್ರಭುತ್ವದಂತೆ. ಅಂದಿಗೆ ಇದ್ದ 63 ತಾತ್ವಿಕ ನಿಲುವುಗಳನ್ನು ನಿರಾಕರಿಸಿದ ಬುದ್ಧನಿಗೆ ಹಾಗಾದರೆ ನಿನ್ನ ನಿಲುವೇನು? ಎಂದ ಪ್ರಶ್ನೆಗೆ ಅವನು ನೀಡಿದ ಉತ್ತರವೆಂದರೆ: ಏನೂ ಇಲ!್ಲ. ಇದು ಆಶ್ಚರ್ಯವೆನ್ನಿಸಬಹುದು. ಯಾಕೆಂದರೆ ಯಾವ ನಿಲುವನ್ನೂ ಶಾಶ್ವತವೆಂದು ಬುದ್ಧಗುರು ಹೇಳಿಲ್ಲ. ವಿಜ್ಞಾನವೂ ಹೇಳುವುದಿಲ್ಲ. ಎಲ್ಲವೂ ಆಯಾ ಸಂದರ್ಭದ ಸತ್ಯವೇ ಹೊರತು ಶಾಶ್ವತ ಸತ್ಯವೆನ್ನುವುದು ಇರಲು ಸಾಧ್ಯವಿಲ್ಲ. ಈ ಲೋಕವೆಲ್ಲ ಯಾವುದರಿಂದ ಆಗಿದೆ? ಕಣವೋ, ಅಲೆಯೋ? ಎಂದು ವಿಜ್ಞಾನವನ್ನು ಕೇಳಿದರೆ, ಇನ್ನೂ ತೀರ್ಮಾನವಾಗಿಲ್ಲ ತಡೆಯಿರಿ ಎನ್ನುತ್ತದೆಯೇ ಹೊರತು ಪರಬ್ರಹ್ಮನಿಂದ ಎಂದು ಉತ್ತರಿಸುವುದಿಲ್ಲ.

ಕೇವಲ ದಲಿತರಿಗೆ ಅಂಬೇಡ್ಕರ್ ಬಿಡುಗಡೆಯ ದಾರಿಯನ್ನು ತೋರಲಿಲ್ಲ. ಇಡಿಯಾಗಿ ಇದು ಶೂದ್ರ ಸಮೂಹಕ್ಕೆ ಅನ್ವಯವಾಗುವ ಸಂಗತಿ. ನಮ್ಮಲ್ಲಿ ವರ್ಣವ್ಯವಸ್ಥೆಯ ದೃಷ್ಟಿಯಿಂದ ಗಮನಿಸುವುದಾದರೆ ಇರುವುದು ಎರಡೇ ವರ್ಣ. ಒಂದು ಬ್ರಾಹ್ಮಣ ಇನ್ನೊಂದು ಶೂದ್ರ. ವೈಶ್ಯ, ಕ್ಷತ್ರಿಯ ಎನ್ನುವ ವರ್ಣಗಳು ಈಗ ಇಲ್ಲ. ಅವುಗಳು ಮಾಡುತ್ತಿದ್ದ ವೃತ್ತಿಯನ್ನು ಯಾವುದಾದರೂ ಶೂದ್ರ ಸಮೂಹವೇ ಮಾಡಿಕೊಂಡು ಬಂದಿದೆ. ಹಾಗಾಗಿ ಈಗ ನೇರ ಸಮಸ್ಯೆ ಇರುವುದು ಈ ಎರಡು ವರ್ಣಗಳ ನಡುವೆ ಮಾತ್ರ. ಹಾಗಾಗಿ ನಾವೀಗ ಯಾರ ಬಿಡುಗಡೆಯ ಬಗೆಗೆ ಮಾತನಾಡಬೇಕು ಎನ್ನುವ ಸ್ಪಷ್ಟತೆ ಇರಬೇಕಾಗಿದೆ.
ಇಲ್ಲಿ ಎರಡು ಸಂಗತಿಗಳಿವೆ. ಒಂದು ಈಗಿರುವ ಬಂಧನದಿಂದ ಬಿಡುಗಡೆ. ಇನ್ನೊಂದು ಬಂಧನಕ್ಕೆ ಒಳಗಾಗದಂತೆ ಇರಬೇಕಾದ ಎಚ್ಚರ. ಬೇಸರದ ಸಂಗತಿಯೆಂದರೆ ಈ ಮಾತುಕತೆ ಕೇವಲ ದಲಿತ ಸಮೂಹಗಳ ನಡುವೆ ಮಾತ್ರ ನಡೆಯುತ್ತಿದೆ! ಇನ್ನೂ ಶೇ.70ರಷ್ಟಿರುವ ಶೂದ್ರ ಸಮೂಹಗಳು ಈ ಚರ್ಚೆಯನ್ನೇ ಶುರು ಮಾಡಿಲ್ಲ. ಅವೆಲ್ಲ ತಮ್ಮ ದಾಸ್ಯವನ್ನು ಸಂಭ್ರಮಿಸುತ್ತಲೇ ಇವೆ. ತಲೆಯ ಮೇಲಿರುವ ವಾಮನಪಾದವನ್ನು ಪೂಜಿಸುತ್ತ, ಪಟಾಕಿ ಒಡೆಯುತ್ತ ಇವೆ!
ವೈದಿಕ ನಿಲುವುಗಳನ್ನು ಹಿಂದೂ ಧರ್ಮದ ನಿಲುವುಗಳು ಎಂದು ಚರ್ಚಿಸುತ್ತ ಬಂದಿದ್ದೇವೆ. ಇದೀಗ ಪೂಜೆ ಮಾಡುವ ಉದ್ಯೋಗವನ್ನು ಶೂದ್ರರಿಗೂ ಕೊಡುತ್ತಾರಂತೆ, ಆದರೆ ಬ್ರಾಹ್ಮಣರ ಥರಾ ಪೂಜೆ ಮಾಡುವುದನ್ನು ಕಲಿಯಬೇಕಂತೆ! ನಮ್ಮದೇ ದೇವರುಗಳಿಗೆ ನಾವು ನಮ್ಮ ರೀತಿಯ ಪೂಜೆ ಮಾಡುವಂತಿಲ್ಲ! ನಮ್ಮ ದೈವಗಳನ್ನು ಕಳೆದುಕೊಂಡದ್ದಾಯಿತು. ಈಗ ನಮ್ಮ ಪೂಜಾವಿಧಾನಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವುದಕ್ಕೆ ಈ ತಯಾರಿ. ಶೂದ್ರ ವರ್ಗಕ್ಕೆ ಯಾವುದೂ ಸಮಸ್ಯೆಯಂತೆ ಕಾಣುತ್ತಿಲ್ಲ. ಏಕೆಂದರೆ ವೈದಿಕ ಮೂಲವನ್ನು ಯಜಮಾನ ಆಕರವನ್ನಾಗಿ ಒಪ್ಪಿಕೊಂಡ ಶೂದ್ರವರ್ಗ ನಮ್ಮ ನಡುವೆ ಇದೆ. ಹಾಗಾಗಿ ಅದರ ದಾಸ್ಯ ಇವರಿಗೆ ಸಮಸ್ಯೆಯಲ್ಲ.
ನೇರವಾಗಿ ಅಂಬೇಡ್ಕರ್ ಅವರ ಮಾತುಗಳಿಂದ ಆರಂಭಿಸ ಬಹುದು:


‘‘ನೇರವಾಗಿ ಉತ್ತರಿಸಬೇಕೆಂದರೆ, ನನ್ನ ದೃಷ್ಟಿಯಲ್ಲಿ ಬುದ್ಧನ ಧರ್ಮ ಪರಮೋತ್ತಮವಾದುದು. ಬೇರೆ ಯಾವೊಂದು ಧರ್ಮವನ್ನೂ ಕೂಡ ಅದರೊಂದಿಗೆ ಹೋಲಿಸಲಾಗದು. ವಿಜ್ಞಾನವನ್ನು ಚೆನ್ನಾಗಿ ತಿಳಿದುಕೊಂಡಿರುವ ಆಧುನಿಕ ವ್ಯಕ್ತಿಯೊಬ್ಬನು ಒಂದು ಧರ್ಮವನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ ಅವನು ಕೇವಲ ಬೌದ್ಧ ಧರ್ಮವನ್ನು ಮಾತ್ರ ಒಪ್ಪಿಕೊಳ್ಳಬೇಕು. ಯಾಕೆಂದರೆ ಅದನ್ನು ಬಿಟ್ಟು ಬೇರೆ ಯಾವ ಧರ್ಮವೂ ವೈಜ್ಞಾನಿಕ ಪರೀಕ್ಷೆಗಳನ್ನು ಗೆದ್ದು ಯಶಸ್ವಿಯಾಗಿ ಹೊರಹೊಮ್ಮಲಾರದು. ಸುಮಾರು ಮೂವತ್ತೈದು ವರ್ಷಗಳಷ್ಟು ದೀರ್ಘಕಾಲ ಎಲ್ಲ ಧರ್ಮಗಳನ್ನು ಕೂಲಂಕಷವಾಗಿ ಅಧ್ಯಯನಿಸಿದ ನಂತರವೇ ಈ ನಿಲುವಿಗೆ ತಲುಪಿದ್ದೇನೆ.
ನನ್ನ ಅಧ್ಯಾತ್ಮ ಬೆಳವಣಿಗೆಗಾಗಲಿ, ನೈತಿಕ ನಿಲುವಿಗಾಗಲಿ ಅಥವಾ ಸಾಮಾಜಿಕ ಸ್ಥಿತಿ-ಗತಿ, ಸ್ಥಾನ-ಮಾನ ಈ ಯಾವುದಕ್ಕೂ ಗಾಂಧೀಜಿ ನನಗೆ ಯಾವುದೇ ರೀತಿಯ ಕಾಣಿಕೆ ನೀಡಿಲ್ಲ. ನಾನು ಪರಮ ಋಣಿಯಾಗಿರುವ ಏಕೈಕ ವ್ಯಕ್ತಿಯೆಂದರೆ ಗೌತಮ. ಹೌದು, ನಿಜವಾಗಿಯೂ ನನ್ನ ಸರ್ವಸ್ವವೂ ಅವನಿಂದಲೇ.’’
ಬೌದ್ಧ ಧರ್ಮವೆನ್ನುವುದು ಕೇವಲ ಒಂದು ಧರ್ಮವಲ್ಲ; ಬದಲಿಗೆ ಅದೊಂದು ಸಾಮಾಜಿಕ ಪ್ರಜ್ಞೆ. ಸಾಮಾಜಿಕ ಪ್ರಜ್ಞೆಯ ಪ್ರಮುಖ ಆಕರಗಳೆಂದು ವಿಜ್ಞಾನ, ಪ್ರಜಾಪ್ರಭುತ್ವ ಮತ್ತು ಬೌದ್ಧ ಧರ್ಮ - ಈ ಮೂರನ್ನು ಮಾತ್ರ ಗುರುತಿಸಬಹುದು. ಈ ಮೂರೂ ಪರಸ್ಪರ ಸಾಪೇಕ್ಷ ಸಂಗತಿಗಳು. ಈ ಮೂರಕ್ಕೂ ಸಮಾನವಾದ ಕೆಲವು ಸಂಗತಿಗಳಿವೆ. ಈ ಮೂರೂ ಆಕರಗಳು:
1.
ತಮ್ಮನ್ನೂ ಸೇರಿದಂತೆ ಪ್ರಮಾಣಗಳನ್ನು ನಿರಾಕರಿಸುತ್ತವೆ
2.ಲೋಕಹಿತವನ್ನು ಕಾಪಾಡುವ, ಲೋಕವನ್ನು ದುಃಖದಿಂದ ಬಿಡುಗಡೆಗೊಳಿಸುವ ಉದ್ದೇಶ ಹೊಂದಿವೆ.
3.ಜ್ಞಾನವನ್ನು ಸ್ಥಳೀಯ, ಸಾಂದರ್ಭಿಕ ಮತ್ತು ನಿರಂತರ ಮುಕ್ತವೆಂದು ಭಾವಿಸುತ್ತವೆ.
4.ಯಾವುದೇ ತಾರತಮ್ಯವನ್ನು ಮಾನ್ಯ ಮಾಡುವುದಿಲ್ಲ.
5.ಅತಿಮಾನುಷ ಸಂಗತಿಗಳನ್ನು ಸ್ವೀಕರಿಸುವುದಿಲ್ಲ.
6.ಲೋಕವನ್ನು ನಿರಂತರ ಚಲನಶೀಲವಾಗಿ ಪರಿಭಾವಿಸುತ್ತವೆ.
7.ಶಾಶ್ವತ ಸತ್ಯವೆನ್ನುವುದು ಇಲ್ಲ ಎಂದು ನಂಬುತ್ತವೆ.
8.ತಮ್ಮ ಅರಿವಿಗೆ ದಕ್ಕಿಲ್ಲದ ಸಂಗತಿಗಳ ಬಗೆಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುವುದಿಲ್ಲ. ಉದಾ: ದೈವ, ಪರಬ್ರಹ್ಮ, ಆತ್ಮ, ಸ್ವರ್ಗ-ನರಕ, ವಿಧಿವಾದ ಇತ್ಯಾದಿ.
9.ಊಹೆಯನ್ನಾಧರಿಸಿದುದನ್ನು ಸತ್ಯವೆಂದು ನಂಬುವುದಿಲ್ಲ.
10.ಯಜ್ಞಯಾಗಾದಿಗಳನ್ನು, ವರ್ಣವ್ಯವಸ್ಥೆ, ಜಾತಿ ವ್ಯವಸ್ಥೆಗಳನ್ನು ಮಾನ್ಯ ಮಾಡುವುದಿಲ್ಲ.
ವಿಶೇಷವೆಂದರೆ ಅನ್ನ ತಿನ್ನುವ, ವಿವೇಕವಿರುವ ಯಾರಿಗಾದರೂ ಮೇಲಿನ ಸಂಗತಿಗಳು ಸರಿಯೆನ್ನಿಸುತ್ತದೆ. ಈ ತಿಳುವಳಿಕೆ ಎಲ್ಲರಿಗೂ ಹುಟ್ಟಿನ ಸಮೇತವೇ ಬಂದಿರುವಂಥದ್ದು ಮತ್ತು ಎಲ್ಲರಲ್ಲಿ ಇರುವ ವಿವೇಕ. ಅದನ್ನು ನಿಸರ್ಗ ವಿವೇಕವೆಂದೂ, ಬುದ್ಧ ಸತ್ವವೆಂದೂ ಕರೆಯಬಹುದು. ಬುದ್ಧ ಸತ್ವ ಈಗಾಗಲೇ ನಮ್ಮಲ್ಲಿ ಇರುವುದರಿಂದ ಅದನ್ನು ಹೊಸದಾಗಿ ಪಡೆದುಕೊಳ್ಳಬೇಕಾದ ಅಗತ್ಯವಿಲ್ಲ; ಆದರೆ ಅದನ್ನು ಕಳೆದುಕೊಂಡಿರುವುದರಿಂದ ಮತ್ತೆ ಹುಡುಕಿಕೊಳ್ಳಬೇಕಾಗಿದೆ. ಕಳೆದುಹೋದದ್ದು ಹೇಗೆ? ಯಾವಾಗ? ಎಲ್ಲಿ? ಇತ್ಯಾದಿ ಪ್ರಶ್ನೆಗಳು ಇದಿರಾದಾಗ ಗೋಚರವಾಗುವ ಸಂಗತಿಯೆಂದರೆ ಅದನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ. ಅದರ ಜಾಗದಲ್ಲಿ ಅಜ್ಞಾನ, ಅವಿವೇಕಗಳನ್ನು ತಂದು ತುಂಬಲಾಗಿದೆ. ಇನ್ನೂ ದುರಂತವೆಂದರೆ ಈ ಅಜ್ಞಾನವನ್ನು ನಾವು ತುಂಬಿಕೊಂಡಿದ್ದೂ ಸಾಲದೆ ಹೊಸ ಪೀಳಿಗೆಯ ಶುದ್ಧ ಜೀವಗಳಿಗೆ ವರ್ಗಾಯಿಸುತ್ತಿದ್ದೇವೆ. ನಮ್ಮನ್ನೊಮ್ಮೆ ನಾವು ನೋಡಿಕೊಳ್ಳಲು ತಯಾರಿಲ್ಲ. ಹಾಗಾಗಿ ಕಂಡಕಂಡವರೆಲ್ಲ ನಮ್ಮನ್ನು ನೀವು ಅದು ನೀವು ಇದು ಎಂದು ಅವರಿಗೆ ಇಷ್ಟಬಂದಂತೆ ವ್ಯಾಖ್ಯಾನಿಸಿ ಕೊಡುತ್ತಿದ್ದಾರೆ. ಅದನ್ನು ಪ್ರಶ್ನಿಸದೆ ನಾವೆಲ್ಲ ಒಪ್ಪಿ ಬಾಳುತ್ತಿದ್ದೇವೆ. ಈಗ ಬಾಳುತ್ತಿರುವ ಬಾಳೂ ನಮ್ಮದಲ್ಲ; ಸರಿಯಾದುದೂ ಅಲ್ಲ; ಬದಲಿಗೆ ಯಾರೋ ಅವರಿಚ್ಛೆಗೆ ಒದಗಿಸಿಕೊಟ್ಟಿರುವುದು!
ಹಿಂದೂ ಧರ್ಮ ಯಾಕೆ ಬೇಡ? ಈ ಪ್ರಶ್ನೆಯನ್ನು ನೇರವಾಗಿ ಅಂಬೇಡ್ಕರ್ ಅವರಿಗೇ ಕೇಳುವುದು ಸರಿ. ಅವರು ನೀಡಿದ ಉತ್ತರ ಮತ್ತು ಬುದ್ಧಗುರು ನೀಡಿದ ಉತ್ತರ ಹಾಗೂ ಇಂದಿನ ವಿಜ್ಞಾನ ನೀಡುವ ಉತ್ತರ ಬೇರೆ ಬೇರೆಯಲ್ಲ ಎನ್ನುವುದು ಮುಖ್ಯವಾದ ಸಂಗತಿ. ನಾವು ಅಂಬೇಡ್ಕರ್ ಅವರನ್ನು ಸಂಶಯಿಸಬಹುದೇನೋ, ಬುದ್ಧನನ್ನೂ ಸಂಶಯಿಸಬಹುದೇನೋ. ಆದರೆ ಆಧುನಿಕ ವಿಜ್ಞಾನವನ್ನು ಸಂಶಯಿಸಲಾಗದು. ಅಂಬೇಡ್ಕರ್ ಅವರು ಹಿಂದೂ ಧರ್ಮದ ತಾತ್ವಿಕತೆಯ ಆಳವಾದ ಅಭ್ಯಾಸ ಮಾಡಿದವರು. ಇವತ್ತು ಹಿಂದೂ ಧರ್ಮ ಎಂದು ಕರೆದುಕೊಳ್ಳುತ್ತಿರುವ ವ್ಯವಸ್ಥೆಯ ಸ್ವರೂಪ ಅರ್ಥಮಾಡಿಕೊಳ್ಳಲು ನಾವು ಶ್ರಮಪಡಬೇಕು. ಹಠ ಹಿಡಿದು ಹಿಂದೂ ತಾತ್ವಿಕತೆಯ ಅಧ್ಯಯನ ಮಾಡಬೇಕು. ಅಹಂ ಬ್ರಹ್ಮಾಸ್ಮಿ, ಸರ್ವಂ ಖಲ್ವಿದಂ ಬ್ರಹ್ಮಂ, ಎಂದು ಸಂಸ್ಕೃತದಲ್ಲಿ ಉಚ್ಛರಿಸಿದ ಮಾತ್ರಕ್ಕೆ ಬೆಪ್ಪುಗಳ ಹಾಗೆ ಪಿಳಿಪಿಳಿ ಕಣ್ಣು ಬಿಡುತ್ತ ಕತ್ತುಹಾಕುವುದನ್ನು ಬಿಟ್ಟು ಅಂಬೇಡ್ಕರ್ ಅವರ ರೀತಿಯಲ್ಲಿ ಅದನ್ನು ಅರ್ಥೈಸಿಕೊಳ್ಳುವುದರ ಮೂಲಕ ಅದರ ಹುಳುಕುಗಳನ್ನು ಬಯಲಿಗೆ ಎಳೆಯಬೇಕು.
ಕ್ವಾಂಟಮ್ ಥಿಯರಿಯನ್ನು ಓದಿದವನಿಗೆ ಶಾಕ್ ಆಗದಿದ್ದರೆ ಅದು ಅವನಿಗೆ ಅರ್ಥವಾಗಿಲ್ಲವೆಂದೇ ಆರ್ಥ ಎನ್ನುತ್ತಾನೆ ಕ್ವಾಂಟಮ್ ಥಿಯರಿಯ ಪ್ರತಿಪಾದಕ ನೀಲ್ಸ್ ಬೋರ್. ಬೌದ್ಧ ಧರ್ಮದ ಬಗೆಗೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಬೌದ್ಧ ತಾತ್ವಿಕತೆಯನ್ನು ಅರಿತುಕೊಂಡವನಿಗೆ ಶಾಕ್ ಆಗುವುದು ಬುದ್ಧಗುರು ತಿಳಿಸಿಕೊಟ್ಟ ತಾತ್ವಿಕತೆಯ ಕಾರಣಕ್ಕಲ್ಲ; ಬದಲಿಗೆ ನಾವೀಗ ನಂಬಿ ಬದುಕುತ್ತಿರುವ ಪೊಳ್ಳಿನ ಕಾರಣಕ್ಕೆ! ಸುಳ್ಳನ್ನೇ ನಂಬಿ ಸುಳ್ಳನ್ನೇ ಹೇಳುತ್ತಾ ಸುಳ್ಳನ್ನೇ ಬಾಳುತ್ತಿರುವವರಿಗೆ ಯಾರಾದರೂ ನಿಜವನ್ನು ಹೇಳಿದಾಗ ಏನಾಗುತ್ತದೆಯೋ ಅದೇ ಇಂದು ಬೌದ್ಧ ತಾತ್ವಿಕತೆಯನ್ನು ಇದಿರಾಗುವವರಿಗೆ ಆಗುತ್ತದೆ. ಹಾಗೆ ಆಗದಿದ್ದರೆ ಒಂದೋ ಅವರಿಗೆ ಅದು ಅರ್ಥವಾಗಿಲ್ಲ ಅಥವಾ ನಿಜವಾದ ಬೌದ್ಧ ತಾತ್ವಿಕತೆಯನ್ನು ಅವರು ಇದಿರಾಗಿಲ್ಲ ಎಂದೇ ಅರ್ಥ.
ಇನ್ನೂ ಆಶ್ಚರ್ಯದ ಸಂಗತಿ ಎಂದರೆ, ಎಲ್ಲರೂ ಬೌದ್ಧರಾಗಿಯೇ ತಮ್ಮ ಯಾನವನ್ನು ಆರಂಭಿಸುತ್ತಾರೆ. ಯಾಕೆಂದರೆ ಎಲ್ಲ ಮಕ್ಕಳೂ ಬೌದ್ಧರೇ! ಆದರೆ ಬೆಳೆದಂತೆ ಬೌದ್ಧ ತಾತ್ವಿಕತೆಯನ್ನು ಅವರಿಂದ ದೂರ ಮಾಡಲಾಗುತ್ತದೆ. ಅಂದ ಮಾತ್ರಕ್ಕೆ ಬೌದ್ಧಧರ್ಮವೆಂದರೆ ಬಾಲಮುಗ್ಧತೆಯಲ್ಲ; ಲೋಕವನ್ನು ಅದಿರುವಂತೆಯೇ ನೋಡಲು ಸಾಧ್ಯವಾಗುವ ಮುಕ್ತ ಮನಸ್ಥಿತಿ. ಉದಾಹರಣೆಗೆ ಮಕ್ಕಳಲ್ಲಿ ಜಾತಿಯಿಲ್ಲ, ಲಿಂಗ ತಾರತಮ್ಯವಿಲ್ಲ, ಸುಳ್ಳಿಲ್ಲ, ಯಾವ ಕೇಡುಗಳೂ ಇಲ್ಲ. ಆದರೆ ಲೋಕವನ್ನು ಅರಿತುಕೊಳ್ಳುವ ಮನಸ್ಸಿದೆ, ಪ್ರೀತಿಯಿದೆ, ಮೈತ್ರಿಯಿದೆ. ಅವರ ಮನೋಕೋಶಕ್ಕೆ ಕೇಡುಗಳನ್ನು ಹೊರಗಿನಿಂದ ತುಂಬಲಾಗುತ್ತದೆ. ಇಲ್ಲಿ ಎರಡು ಸವಾಲುಗಳಿವೆ. ಒಂದು ಮನುಷ್ಯನ ಮನೋಕೋಶಕ್ಕೆ ಎಲ್ಲ ರೀತಿಯ ತಾರತಮ್ಯಗಳಿಗೆ ಕಾರಣವಾಗಿರುವ ಕೇಡುಗಳ ಸಂರಚನೆಗಳನ್ನು ಬರದಂತೆ ತಡೆಯುವುದು ಮತ್ತು ಎರಡನೆಯದು, ಲೋಕವನ್ನು ಅದಿರುವಂತೆ ಸರಿಯಾಗಿ ಅರ್ಥಮಾಡಿಕೊಳ್ಳಲು ಬೇಕಾಗಿರುವ ನಿಸರ್ಗವಿವೇಕವನ್ನು ಕಾಪಾಡುವುದು. ಬುದ್ಧಸತ್ವ ಎನ್ನುವುದು ಲೋಕದ ಎಲ್ಲರಲ್ಲಿಯೂ ಇದೆ. ಹಾಗಾಗಿ ಬೌದ್ಧತಾತ್ವಿಕತೆಯೆಂಬುದು ಹೊರಗಿನಿಂದ ತಂದು ತುಂಬಿಕೊಳ್ಳುವುದಲ್ಲ; ಬದಲಿಗೆ ತನ್ನಲ್ಲೇ ಇರುವ ನಿಸರ್ಗವಿವೇಕವನ್ನು ಚಾಲ್ತಿಗೆ ತರುವುದು. ಅದು ನಮ್ಮ ನಡುವಿಗೆ ಬರದಂತೆ ತಡೆಯುತ್ತಿರುವವರು ನಾವೇ ಆಗಿದ್ದೇವೆ. ಅದಕ್ಕೆ ಕಾರಣ ನಮ್ಮ ಮನಸ್ಸಿನಲ್ಲಿ ತುಂಬಿಕೊಂಡಿರುವ ಸುಳ್ಳು ಸಂರಚನೆಗಳು. ಈ ಸಂರಚನೆಗಳು ನಮ್ಮ ತಿಳುವಳಿಕೆಯನ್ನು ಮತ್ತು ನಮ್ಮ ಎಲ್ಲ ನಡೆಗಳನ್ನು ನಿಯಂತ್ರಿಸುತ್ತಿವೆ. ಇವುಗಳಿಂದ ಮುಕ್ತವಾಗಿ ಯೋಚಿಸಿ ನಡೆದುಕೊಂಡರೆ ಮಾತ್ರ ಲೋಕವನ್ನು ಅದಿರುವಂತೆ ನೋಡಲು ಸಾಧ್ಯವಾಗುತ್ತದೆ. ಅಂದರೆ ನಮ್ಮ ಮನೋಕೋಶಕ್ಕೆ ನಿಜವಲ್ಲದ ಸಂಗತಿಗಳನ್ನು ತಂದು ತುಂಬಿ ಅವುಗಳ ಮೂಲಕ ನಮ್ಮನ್ನು ನಿಯಂತ್ರಿಸಲಾಗುತ್ತಿದೆ. ಈ ಅನ್ಯ ನಿಯಂತ್ರಣದಿಂದ ಮುಕ್ತವಾಗಬೇಕು. ಬುದ್ಧಗುರುವಿಗೆ ಇದ್ದ ಸವಾಲುಗಳು ಇವೇ ಅಗಿದ್ದವು.
ವಿಜ್ಞಾನದ ಎದುರಿಗೆ ಈ ನಿಲುವುಗಳನ್ನು (ಆತ್ಮ, ಪರಬ್ರಹ್ಮ, ವಿಧಿವಾದ, ಶಾಶ್ವತವಾದ, ಸ್ವತಂತ್ರವಾದ-ವಸ್ತುಗಳು ಇತ್ಯಾದಿಗಳನ್ನು) ಈ ಹೊತ್ತು ಇಟ್ಟರೆ ಅದು ಏನೆಂದು ಪ್ರತಿಕ್ರಿಯಿಸುತ್ತದೆಯೋ ಅದೇ ಪ್ರತಿಕ್ರಿಯೆಯನ್ನು ಬುದ್ಧ ಸುಮಾರು ಎರಡೂವರೆ ಸಾವಿರ ವರುಷಗಳ ಹಿಂದೆ ವ್ಯಕ್ತಪಡಿಸಿದ. ಈ ಎರಡೂ ನಿಲುವುಗಳನ್ನು ಸುಳ್ಳೆಂದು ತಿರಸ್ಕರಿಸಿದ ಬುದ್ಧಗುರು ಲೋಕವನ್ನು ಮೂರು ಲಕ್ಷಣಗಳ ಮೂಲಕ ವ್ಯಾಖ್ಯಾನಿಸಬಹುದು ಎಂದು ತೋರಿಸಿಕೊಟ್ಟನು. ಅವುಗಳೆಂದರೆ:

1. ಸಬ್ಬೇ ಸಂಖಾರ ಅನಿಚ್ಛ ( ಎಲ್ಲ ಸಂಯೋಜನೆಗಳೂ ಅನಿತ್ಯವಾದವು)
2. ಸಬ್ಬೇ ಸಂಖಾರ ದುಃಖ ( ಎಲ್ಲ ಸಂಯೋಜನೆಗಳೂ ದುಃಖ ಅಥವಾ ತಲ್ಲಣದಲ್ಲಿವೆ)
3) ಸಬ್ಬೇ ಧಮ್ಮ ಅನಾತ್ತ ( ಎಲ್ಲದರ ಧರ್ಮವೂ ಅನಾತ್ಮವೇ ಆಗಿದೆ).
ಈ ಸಂಗತಿಗಳನ್ನು ಗಮನಿಸಿ. ಬುದ್ಧಗುರು ಹೇಳುತ್ತಿರುವ ಸಂಗತಿಗಳಲ್ಲಿ ಗುಟ್ಟು ಎನ್ನುವಂಥದ್ದೇನೂ ಇಲ್ಲ. ಇವೆಲ್ಲ ಸಾಮಾನ್ಯ ಮನುಷ್ಯನ ವಿವೇಕಕ್ಕೇ ನಿಲುಕಬಲ್ಲ ಸಂಗತಿಗಳಾಗಿವೆ. ಆದರೆ ಈ ಸತ್ಯಗಳೆಲ್ಲ ಕಾಣದಂತೆ, ಕಂಡರೂ ನಂಬದಂತೆ ಸುಳ್ಳುಗಳ ರಾಶಿಯನ್ನು ನಮ್ಮೆದುರಿಗೆ ಇಡಲಾಗಿದೆ. ಅಂದು ಅರುವತ್ತಮೂರು ಚಿಂತನಾ ಪ್ರಸ್ಥಾನಗಳು ಈ ಸುಳ್ಳುಗಳನ್ನು ಬುದ್ಧನೆದುರಿಗೆ ಇಟ್ಟರೆ, ಇಂದು ದಿನಬೆಳಗಾದರೆ ನೂರಾರು ಇ-ಚಾನಲ್‌ಗಳ ಮೂಲಕ ಇಂತಹ ಬೊಗಳೆಯನ್ನೇ ಹರಿಸುವ ಉದ್ಯೋಗ ನಡೆಯುತ್ತಿದೆ!
ಬುದ್ಧನ ತಾತ್ವಿಕತೆಯ ಪ್ರಮುಖ ಲಕ್ಷಣವೆಂದರೆ ನಮ್ಮ ವಿವೇಕವೇ ನಮ್ಮನ್ನು ಮುನ್ನಡೆಸಬೇಕು. ಅದು ಮತ್ತೊಬ್ಬರು ನಮ್ಮನ್ನು ಆಳದೆ, ನಮ್ಮನ್ನು ನಾವೇ ಆಳಿಕೊಳ್ಳುವ ಪ್ರಜಾಪ್ರಭುತ್ವದಂತೆ. ಅಂದಿಗೆ ಇದ್ದ ಅರುವತ್ತಮೂರು ತಾತ್ವಿಕ ನಿಲುವುಗಳನ್ನು ನಿರಾಕರಿಸಿದ ಬುದ್ಧನಿಗೆ ಹಾಗಾದರೆ ನಿನ್ನ ನಿಲುವೇನು? ಎಂದ ಪ್ರಶ್ನೆಗೆ ಅವನು ನೀಡಿದ ಉತ್ತರವೆಂದರೆ: ಏನೂ ಇಲ!್ಲ. ಇದು ಆಶ್ಚರ್ಯವೆನ್ನಿಸಬಹುದು. ಯಾಕೆಂದರೆ ಯಾವ ನಿಲುವನ್ನೂ ಶಾಶ್ವತವೆಂದು ಬುದ್ಧಗುರು ಹೇಳಿಲ್ಲ. ವಿಜ್ಞಾನವೂ ಹೇಳುವುದಿಲ್ಲ. ಎಲ್ಲವೂ ಆಯಾ ಸಂದರ್ಭದ ಸತ್ಯವೇ ಹೊರತು ಶಾಶ್ವತ ಸತ್ಯವೆನ್ನುವುದು ಇರಲು ಸಾಧ್ಯವಿಲ್ಲ. ಈ ಲೋಕವೆಲ್ಲ ಯಾವುದರಿಂದ ಆಗಿದೆ? ಕಣವೋ, ಅಲೆಯೋ? ಎಂದು ವಿಜ್ಞಾನವನ್ನು ಕೇಳಿದರೆ, ಇನ್ನೂ ತೀರ್ಮಾನವಾಗಿಲ್ಲ ತಡೆಯಿರಿ ಎನ್ನುತ್ತದೆಯೇ ಹೊರತು ಪರಬ್ರಹ್ಮನಿಂದ ಎಂದು ಉತ್ತರಿಸುವುದಿಲ್ಲ. ಬುದ್ಧಗುರುವಿನ ಉತ್ತರವೂ ಇದೇ ಆಗಿತ್ತು. ಯಾವಾಗಲೂ ಬದಲಾಗುತ್ತಲೇ ಇರುವ ಲೋಕಪ್ರವಾಹದಲ್ಲಿ ಶಾಶ್ವತ ಸತ್ಯವೆನ್ನುವುದು ಇರಲು ಸಾಧ್ಯವೂ ಇಲ್ಲ. ಆದರೆ ಲೋಕ ಸಮಸ್ತದೊಡನೆ ಕರುಣೆ ಮೈತ್ರಿಯಿಂದ ನಡೆದುಕೊಂಡರೆ ಸಾಕು, ಯಾರಿಗೂ ಕೇಡಾಗುವುದಿಲ್ಲ. ಕರುಣಾ ಮೈತ್ರಿ ಮಾರ್ಗವು ಕೇವಲ ಭಾವನಾತ್ಮಕವಾದ ನಿಲುವಲ್ಲ. ಲೋಕವನ್ನು ಸರಿಯಾಗಿ ಅರ್ಥೈಸಿಕೊಂಡಾಗ ತೆರೆಯುವ ಅರಿವಿನ ಕಣ್ಣು.
ಯಾವುದರಲ್ಲಿಯೂ ಆತ್ಮವೆನ್ನುವುದು ಇಲ್ಲ - ಎಂದು ಭಾರತೀಯರಿಗೆ ಹೇಳಿದರೆ ದಿಗ್ಭ್ರಮೆ ಆಗುತ್ತದೆ. ಆದರೆ ವಿಜ್ಞಾನಿ ಗಳು (ತರ್ಕಬದ್ಧವಾಗಿ ಯೋಚಿಸಬಲ್ಲವರು) ಮತ್ತು ಮಕ್ಕಳು ಸರಿ ಎನ್ನುತ್ತಾರೆ! ಇನ್ನುಳಿದವರಂತೂ ಅಲ್ಲೋಲ ಕಲ್ಲೋಲವೇ ಸಂಭವಿಸಿತೇನೋ ಎನ್ನುವಂತೆ ಆಡುತ್ತಾರೆ! ನಾವು ನಂಬಿ ಬದುಕುತ್ತಿರುವ ಸುಳ್ಳುಗಳ ಲೋಕ ದೊಡ್ಡದು. ಅವುಗಳನ್ನು ಕಳಚಿಬಿಟ್ಟರೆ ಉಂಟಾಗುವ ಒಳ್ಳೆಯ ಪರಿಣಾಮಗಳನ್ನು ಕಲ್ಪಿಸಿಕೊಂಡರೆ ಕೆಲವರಿಗೆ ಅಪಾರ ಸಂಕಟವಾಗುತ್ತದೆ. ತಮ್ಮ ಉದ್ಯೋಗ ನಿಲ್ಲುತ್ತದೆ, ತಮ್ಮ ಯಜಮಾನಿಕೆಗೆ ಭಂಗ ಬರುತ್ತದೆ, ತಮ್ಮ ಆಧಿಕಾರ ಹೋಗುತ್ತದೆ ಇತ್ಯಾದಿ. ಹಾಗಾಗಿ ಇಂತಹ ಸುಳ್ಳುಗಳನ್ನು ನಿರಂತರವಾಗಿ ಪೋಷಿಸಿಕೊಂಡು ಬರಲಾಗಿದೆ. ಇಂತಹ ಪೋಷಿತ ಸುಳ್ಳುಗಳನ್ನು ಗುಡಿಸಿ ಹಾಕಿ ಲೋಕವನ್ನು ಸುಂದರವಾಗಿ ಬಾಳಬಲ್ಲ ಆವರಣವೆಂದು ತೋರಿಸಿಕೊಟ್ಟವನು ಬುದ್ಧಗುರು. ಈ ಲೋಕವಿವರಣೆಯನ್ನು ಅವನು ನೀಡಿದ ಕಾರಣವೆಂದರೆ ನಾವು ಅನುಭವಿಸುತ್ತಿರುವ ಸಂಕಟಕ್ಕೆ ಇಲ್ಲಿ ಪರಿಹಾರ ಸಾಧ್ಯವಿತ್ತು. ಈ ವಿವರಣೆಗೂ ನಮ್ಮ ದುಃಖಕ್ಕೂ ನೇರವಾದ ಸಂಬಂಧವಿದೆ. ಅದಕ್ಕೆ ಪರಿಹಾರ ನೀಡಲು ಬುದ್ಧ ಈ ವಿವರಣೆ ನೀಡಿದ.
ಬೌದ್ಧ ತಾತ್ವಿಕತೆಯು ಜಗತ್ತಿನ ಯಾರಿಗಾದರೂ ಸರಳವಾಗಿ ಅರ್ಥವಾಗುವ ಮತ್ತು ಬಾಳಲು ಸಾಧ್ಯವಾಗುವ ಸಂಗತಿಯಾಗಿದೆ. ಬುದ್ಧ ಹೇಳಿದ್ದು: ಲೋಕವನ್ನು ಅದಿರುವಂತೆಯೇ ನೋಡಿ; ಹಾಗೆ ಕಂಡಾಗ ಮಾತ್ರ ನಮ್ಮ ಮತ್ತು ಲೋಕದ ನಡುವಿನ ಸಂಬಂಧ ಸರಿಯಾಗಿರುತ್ತದೆ. ಸಂಬಂಧ ಸರಿಯಾಗಿದ್ದರೆ ಸಂಘರ್ಷವಿರುವುದಿಲ್ಲ. ಸಂಘರ್ಷವಿಲ್ಲದಿದ್ದಾಗ ದುಃಖ ವಿರು ವುದಿಲ್ಲ. ದುಃಖದ ಉರಿಯಲ್ಲಿ ಲೋಕವೇ ಬೇಯುತ್ತಿರುವ ಈ ಹೊತ್ತು ಬುದ್ಧ ಗುರುವಿನ ಕರುಣಾ ಮೈತ್ರಿಯ ಸಾಮರಸ್ಯ ಇಂದಿನ ಅಗತ್ಯವಾಗಿದೆ. ಜಗತ್ತಿನ ಜ್ಞಾನದ ಚರಿತ್ರೆಯಲ್ಲಿ ಬುದ್ಧಗುರುವಿಗೆ ಇರುವ ಸ್ಥಾನ ಮತ್ತಾರಿಗೂ ಇಲ್ಲ.
‘‘ಸರ್ವದೃಷ್ಟಿವಾದಗಳಿಂದ ಮುಕ್ತಮಾಡುವ
ಸದ್ಧರ್ಮವನ್ನು ಅನುಕಂಪದಿಂದ ಬೋಧಿಸಿದ
ಗೌತಮನಿಗೆ ವಂದಿಸುತ್ತೇನೆ’’.


Writer - ಎಸ್. ನಟರಾಜ ಬೂದಾಳು

contributor

Editor - ಎಸ್. ನಟರಾಜ ಬೂದಾಳು

contributor

Similar News

ಜಗದಗಲ
ಜಗ ದಗಲ