ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಕಣಕ್ಕಿಳಿಸುವುದರ ಹಿಂದಿದೆ ದೇವೇಗೌಡ-ಕುಮಾರಸ್ವಾಮಿಯ ರಾಜಕೀಯ ತಂತ್ರಗಾರಿಕೆ

Update: 2018-10-15 17:02 GMT

ಶಿವಮೊಗ್ಗ, ಅ. 15: ಕಳೆದ ವಿಧಾನಸಭೆ ಎಲೆಕ್ಷನ್‍ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಅಸೆಂಬ್ಲಿಗಳಲ್ಲಿ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದ ಹೊರತಾಗಿಯೂ, ಕ್ಷೇತ್ರದಲ್ಲಿ ಹೇಳಿಕೊಳ್ಳುವಷ್ಟು ಮಟ್ಟಕ್ಕೆ ಪಕ್ಷದ ಸಂಘಟನೆ ಇಲ್ಲದ ಹೊರತಾಗಿಯೂ ಪ್ರಸ್ತುತ ಉಪ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಮಧು ಬಂಗಾರಪ್ಪ ಅಖಾಡಕ್ಕಿಳಿಸುತ್ತಿರುವ ಜೆಡಿಎಸ್ ಪಕ್ಷದ ನಡೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆಡೆ ಮಾಡಿಕೊಟ್ಟಿದೆ. 

ಅಭ್ಯರ್ಥಿ ಕಣಕ್ಕಿಳಿಸುತ್ತಿರುವುದರ ಹಿಂದೆ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಮಹತ್ವದ ರಾಜಕೀಯ ತಂತ್ರಗಾರಿಕೆ ಅಡಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ 'ಸಮ್ಮಿಶ್ರ ಸರ್ಕಾರ' ಉಳಿಸಿಕೊಳ್ಳುವ ಚಾಣಕ್ಯ ಲೆಕ್ಕಾಚಾರವಿದೆ.

ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ದುಃಸ್ವಪ್ನವಾಗಿ ಪರಿಣಮಿಸಿರುವ, ಸಿಎಂ ಗಾದಿಗೇರಲು ತುದಿಗಾಲ ಮೇಲೆ ನಿಂತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ, ಅವರ ತವರೂರಲ್ಲಿಯೇ ಕಟ್ಟಿ ಹಾಕುವ ಹಾಗೂ ಭವಿಷ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಬಿ.ಎಸ್.ವೈ.ರಿಂದ ಎದುರಾಗಬಹುದಾದ ಕಂಟಕ ತಪ್ಪಿಸಿಕೊಳ್ಳುವ ಐಡಿಯಾ ಹೆಚ್.ಡಿ.ಡಿ- ಹೆಚ್.ಡಿ.ಕೆಯದ್ದಾಗಿದೆ ಎಂದು ಹೇಳಲಾಗುತ್ತಿದೆ. 

'ಶಿವಮೊಗ್ಗ ಕ್ಷೇತ್ರದ ಬಗ್ಗೆ ಹೆಚ್.ಡಿ.ಡಿ. ಹಾಗೂ ಹೆಚ್.ಡಿ.ಕೆ., ತಮ್ಮದೆ ಆದ ತಂತ್ರಗಾರಿಕೆಯೊಂದನ್ನು ರೂಪಿಸಿಕೊಂಡಿದ್ದಾರೆ. ಅದರಂತೆ ಮಧು ಬಂಗಾರಪ್ಪರ ಮನವೊಲಿಸಿ, ಅಭ್ಯರ್ಥಿಯ ಪಟ್ಟ ಕಟ್ಟಿದ್ದಾರೆ. ಹಾಗೆಯೇ ಎಐಸಿಸಿ ವರಿಷ್ಠ ರಾಹುಲ್ ಗಾಂಧಿಯವರನ್ನು ಒಪ್ಪಿಸಿ, ಕಾಂಗ್ರೆಸ್ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿಯೂ ಯಶವಾಗಿದ್ದಾರೆ. ಅಸ್ತಿತ್ವ ಕಂಡುಕೊಳ್ಳಲು ಪರದಾಡುತ್ತಿರುವ ಕ್ಷೇತ್ರದಲ್ಲಿ, 'ಅಪ್ಪ-ಮಗ' ಇಷ್ಟೆಲ್ಲ ಶ್ರಮಪಟ್ಟು ಅಭ್ಯರ್ಥಿ ಕಣಕ್ಕಿಳಿಸುತ್ತಿರುವುದರ ಹಿಂದೆ 'ಬಿ.ಎಸ್.ಯಡಿಯೂರಪ್ಪ ಫ್ಯಾಕ್ಟರ್' ಅತ್ಯಂತ ಪ್ರಮುಖವಾಗಿದೆ" ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. 

ಕಾರ್ಯತಂತ್ರ: ಅತ್ಯಧಿಕ ಸ್ಥಾನ ಜಯಿಸಿದರೂ ಅಧಿಕಾರ ವಂಚಿತವಾಗುವಂತಾಗಿರುವ ಬಿಜೆಪಿ, ಸಮ್ಮಿಶ್ರ ಸರ್ಕಾರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಹೆಚ್.ಡಿ.ಕೆ. ಸಿಎಂ ಆದಾಗಿನಿಂದಲೂ ಬಿಜೆಪಿ ಸರ್ಕಾರ ರಚಿಸಲು ತೆರೆಮರೆಯ ಕಸರತ್ತು ನಡೆಸುತ್ತಿರುವುದು ಸುಳ್ಳಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಬಿ.ಎಸ್.ವೈ. ಕೂಡ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಶತಪ್ರಯತ್ನ ನಡೆಸುತ್ತಿದ್ದಾರೆ. ಈ ಕಾರಣದಿಂದ ರಾಜ್ಯ ರಾಜಕಾರಣದಲ್ಲಿ ಸದ್ಯದ ಮಟ್ಟಿಗೆ ಹೆಚ್.ಡಿ.ಕೆ ಹಾಗೂ ಬಿ.ಎಸ್.ವೈ. ಹಾವು-ಮುಂಗಸಿಯಂತಾಗಿ ಪರಿವರ್ತಿತವಾಗಿದ್ದಾರೆ. 

ದೀಪಾವಳಿ ಹಬ್ಬದ ನಂತರ ಸಮ್ಮಿಶ್ರ ಸರ್ಕಾರ ಅಲುಗಾಡಲಿದೆ. ಮುಂದಿನ ವರ್ಷದ ಲೋಕಸಭೆ ಸಾರ್ವತ್ರಿಕ ಚುನಾವಣೆಯೊಳಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬೆಲ್ಲ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಸರ್ಕಾರ ರಕ್ಷಿಸಿಕೊಳ್ಳಲು ಕಾಂಗ್ರೆಸ್‍ಗಿಂತ ಜೆಡಿಎಸ್ ಭಾರೀ ಕಸರತ್ತು ನಡೆಸುತ್ತಿದೆ. 

ಈ ಎಲ್ಲ ವಿದ್ಯಮಾನಗಳ ನಡುವೆಯೇ, ಶಿವಮೊಗ್ಗ ಕ್ಷೇತ್ರದ ಲೋಕಸಭೆ ಉಪ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಸರ್ಕಾರ ರಕ್ಷಣೆಯ ಭಾಗವಾಗಿಯೇ ಹೆಚ್.ಡಿ.ಡಿ.-ಹೆಚ್.ಡಿ.ಕೆ.ಯು ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಈ ಮೂಲಕ ಬಿ.ಎಸ್.ವೈ.ಗೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಾರೆ. 

ಲೆಕ್ಕಾಚಾರ: 'ಒಂದು ವೇಳೆ ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರಾಭವಗೊಂಡರೇ, ಕಾಂಗ್ರೆಸ್ ಮತ್ತಷ್ಟು ಅಧಃಪತನಕ್ಕೆ ಕುಸಿಯುತ್ತದೆ. ಆದರೆ ಜೆಡಿಎಸ್‍ಗೆ ಅಂತಹ ನಷ್ಟವೇನೂ ಆಗುವುದಿಲ್ಲ. ಏನಾದರೂ ಜಯ ಸಾಧಿಸಿದರೆ, ಜೆಡಿಎಸ್‍ಗೆ ಸಂಪೂರ್ಣ ಕ್ರೆಡಿಟ್ ಲಭ್ಯವಾಗಲಿದೆ. ಆ ಪಕ್ಷಕ್ಕೆ ಮಲೆನಾಡ ಭಾಗದಲ್ಲಿ ದೊಡ್ಡ ಅಸ್ತಿತ್ವವೇ ಲಭ್ಯವಾಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಜೆಪಿ ವೇಗಕ್ಕೆ, ಅದರಲ್ಲಿಯೂ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಬಿ.ಎಸ್.ವೈ.ರನ್ನು ಕಟ್ಟಿ ಹಾಕಬಹುದಾಗಿದೆ. 

ಕಾಂಗ್ರೆಸ್‍ನಲ್ಲಿರುವ ತಮ್ಮ ಗುಪ್ತ ಎದುರಾಳಿಗಳಿಗೂ ತಮ್ಮ ಸಾಮರ್ಥ್ಯ ಏನೆಂಬುವುದನ್ನು ರವಾನಿಸಬಹುದಾಗಿದೆ. ತಾತ್ಕಾಲಿಕವಾಗಿ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಹುದಾದ ಸಂಭಾವ್ಯ ಕಂಟಕಗಳಿಂದಲೂ ಮುಕ್ತವಾಗಹುದು. ಹಾಗೆಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಏರ್ಪಡಲಿರುವ ಮೈತ್ರಿ ವೇಳೆ, ಇನ್ನಷ್ಟು ಲೋಕಸಭಾ ಕ್ಷೇತ್ರಗಳನ್ನು ಪಕ್ಷಕ್ಕೆ ಕ್ಲೈಮ್ ಮಾಡಲು ಸಹಕಾರಿಯಾಗಲಿದೆ. ಇದರಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಹೆಚ್.ಡಿ.ಡಿ ಹಾಗೂ ಹೆಚ್.ಡಿ.ಕೆ ಅದೃಷ್ಟದ ಆಟಕ್ಕೆ ಮುಂದಾಗಿದ್ದಾರೆ. ದೊಡ್ಡ ದಾಳವೊಂದನ್ನು ಉರುಳಿಸಿದ್ದಾರೆ. ಇದು ಫಲಪ್ರದವಾಗಲಿದೆಯೇ? ಇಲ್ಲವೇ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಒಟ್ಟಾರೆ ಶಿವಮೊಗ್ಗ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿರುವುದರ ಆ ಪಕ್ಷದ ವರಿಷ್ಠರ ನಡೆಯ ಹಿಂದೆ, ಸರ್ಕಾರ ರಕ್ಷಣೆಯ ತಂತ್ರಗಾರಿಕೆಯೂ ಅಡಗಿದೆ ಎಂದು ಹೇಳಲಾಗುತ್ತಿದೆ. ಇದು ನಿಜವೇ? ಸುಳ್ಳೇ? ಎಂಬುವುದು ಫಲಿತಾಂಶ ಪ್ರಕಟಣೆಯ ನಂತರದ ಬೆಳವಣಿಗೆಗಳಿಂದಷ್ಟೆ ತಿಳಿದುಬರಬೇಕಾಗಿದೆ. 

'ಗೌಡರ' ಹೊಡೆತಕ್ಕೆ 'ಕೈ' ತತ್ತರ!
ಹೆಚ್.ಡಿ.ದೇವೇಗೌಡರ ರಾಜಕೀಯ ತಂತ್ರಗಾರಿಕೆ ಸದಾ ನಿಗೂಢವಾಗಿರುತ್ತದೆ ಎಂಬುವುದಕ್ಕೆ, ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದಿರುವುದೇ ಸಾಕ್ಷಿಯಾಗಿದೆ. ಉಪ ಚುನಾವಣೆ ಪ್ರಕ್ರಿಯೆ ಆರಂಭಗೊಂಡು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮೂರ್ನಾಲ್ಕು ದಿನಗಳಿರುವವರೆಗೂ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಖಾಡಕ್ಕಿಳಿಯುವ ಯಾವುದೇ ಮುನ್ಸೂಚನೆ, ಸಣ್ಣ ಸುಳಿವು ದೋಸ್ತಿ ಕಾಂಗ್ರೆಸ್ ಪಕ್ಷಕ್ಕಿರಲಿಲ್ಲ. ಈ ಕಾರಣದಿಂದಲೇ 'ಕೈ' ಪಾಳಯವು ಜೆಡಿಎಸ್ ಬೆಂಬಲದೊಂದಿಗೆ ಸಮರ್ಥ ಅಭ್ಯರ್ಥಿ ಅಖಾಡಕ್ಕಿಳಿಸುವ ಕಸರತ್ತು ನಡೆಸಿಕೊಂಡು ಬರುತ್ತಿತ್ತು. 
ಕಾಂಗ್ರೆಸ್ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡ ಹೆಚ್.ಡಿ.ದೇವೇಗೌಡರು, ಮಧು ಬಂಗಾರಪ್ಪರ ಹೆಸರನ್ನು ತೇಲಿಬಿಟ್ಟರು. ಇದು ಕಾಂಗ್ರೆಸ್ ಪಾಳಯವನ್ನೇ ತಬ್ಬಿಬ್ಬುಗೊಳ್ಳುವಂತೆ ಮಾಡಿತ್ತು. ಈ ಕಾರಣದಿಂದ ಕಾಂಗ್ರೆಸ್ ಪಕ್ಷವು ಪ್ರಬಲ ಹುರಿಯಾಳುವಿನ ಹುಡುಕಾಟ ಮತ್ತಷ್ಟು ತೀವ್ರಗೊಳಿಸಿತ್ತಾದರೂ, ಮಧು ಬಂಗಾರಪ್ಪಗೆ ಸರಿಸಮಾನವಾದ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ವಿಫಲವಾಗಿತ್ತು. ಇಷ್ಟೆಲ್ಲದರ ಹೊರತಾಗಿಯೂ ಜೆಡಿಎಸ್‍ಗೆ ಶಿವಮೊಗ್ಗ ಕ್ಷೇತ್ರ ಬಿಟ್ಟುಕೊಡದೆ, ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ನಿರ್ಧಾರ ರಾಜ್ಯ ಕಾಂಗ್ರೆಸ್ ವರಿಷ್ಠರದ್ದಾಗಿತ್ತು. 

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಗಿರುವ ಪ್ರಾಬಲ್ಯ, ಆ ಪಕ್ಷದ ಅಭ್ಯರ್ಥಿ ಎದುರಿಸಲು ಮೈತ್ರಿಕೂಟದಿಂದ ಸಮರ್ಥ ಹುರಿಯಾಳು ಕಣಕ್ಕಿಳಿಸುವ ಅನಿವಾರ್ಯತೆ, ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿಯ ಅಲಭ್ಯತೆಯ ಕುರಿತಂತೆ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಮೂಲಕ ಎಐಸಿಸಿ ವರಿಷ್ಠ ರಾಹುಲ್ ಗಾಂಧಿಯವರ ಗಮನಕ್ಕೆ ತರುವಲ್ಲಿ ಹೆಚ್.ಡಿ.ದೇವೇಗೌಡರು ಸಫಲವಾಗಿದ್ದರು. 

ಮಾಜಿ ಸಿಎಂ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅಭ್ಯರ್ಥಿಯಾದರೆ, ಕ್ಷೇತ್ರ ವ್ಯಾಪ್ತಿಯಲ್ಲಿರುವ ಈಡಿಗ ಮತಗಳ ಜೊತೆ ಅಲ್ಪಸಂಖ್ಯಾತ-ಹಿಂದುಳಿದ-ದಲಿತ ಮತ ಕ್ರೋಢೀಕರಣ ಸುಲಭವಾಗಲಿದೆ ಎಂದು ರಾಹುಲ್‍ಗಾಂಧಿಗೆ ತಿಳಿ ಹೇಳುವಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಫಲವಾಗಿದ್ದರು. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ ಕ್ಷೇತ್ರ ಜೆಡಿಎಸ್ ಬುಟ್ಟಿಗೆ ಬೀಳುವಂತಾಗಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News