ಶೌಚಾಲಯಗಳನ್ನು ನಿರ್ಮಿಸುವುದನ್ನೇ ‘ಸ್ವಚ್ಛತೆ’ ಎಂದು ಕರೆಯಬಹುದೇ?

Update: 2018-10-16 18:32 GMT

ಹೆಚ್ಚೆಚ್ಚು ಶೌಚಾಲಯಗಳನ್ನು ನಿರ್ಮಿಸುವುದರಿಂದ ಮತ್ತು ಪರ್ಯಾಯ ತಂತ್ರಜ್ಞಾನಗಳನ್ನು ಅಳವಡಿಸುವುದರಿಂದ ಹೆಚ್ಚೆಚ್ಚು ಕಾರ್ಪೊರೇಟ್ ಬಂಡವಾಳಗಳನ್ನು ಮತ್ತು ಪ್ರಖ್ಯಾತರ ಬೆಂಬಲಗಳನ್ನು ಮತ್ತು ಚುನಾವಣೆಯ ಸಂದರ್ಭದಲ್ಲಿ ಒಂದಷ್ಟೂ ಸಕಾರಾತ್ಮಕ ಅಂಶಗಳನ್ನೂ ಪಡೆದುಕೊಳ್ಳಬಹುದು. ಆದರೆ ಅವ್ಯಾವುದೂ ನೈರ್ಮಲ್ಯ ಮತ್ತು ಶೌಚ ಶುಚೀಕರಣಗಳು ಕೆಳಜಾತಿಗಳ ಕೆಲಸವೆಂಬ ಮನಸ್ಸತ್ವವನ್ನು ಮಾತ್ರ ಬದಲಿಸುವುದಿಲ್ಲ. ಮೋದಿಯವರ ‘ಸ್ವಚ್ಛತೆಯೇ ಸೇವೆ’ಯೆಂಬ ಘೋಷಣೆಗಳು ಅದೇ ರೀತಿಯ ಸೇವಾಕಂಪನಗಳನ್ನು ಎಲ್ಲರಲ್ಲೂ ಹುಟ್ಟಿಸುತ್ತಿವೆಯೇ?

ಭಾರತದಲ್ಲಿ ವ್ಯಾಪಕವಾಗಿರುವ ಬಯಲು ಶೌಚದ ಸಮಸ್ಯೆಯನ್ನು ನಿವಾರಿಸಲು ಎನ್‌ಡಿಎ ಸರಕಾರವು (ನರೇಂದ್ರ ಮೋದಿ ಎಂದು ಹೇಳಿದರೂ ತಪ್ಪೇನಿಲ್ಲ) ಸ್ವಚ್ಛ ಭಾರತ್ ಅಭಿಯಾನದ ಮೂಲಕ ನೀರು ಸುರಿದು ಸ್ವಚ್ಛ ಮಾಡುವ ತೋಡು ಗುಂಡಿ ಪಾಯಿಖಾನೆ ವ್ಯವಸ್ಥೆಗೆ ವಿಶೇಷ ಉತ್ತೇಜನವನ್ನು ನೀಡುತ್ತಿದೆ. ಈ ಪದ್ಧತಿಯು ಹಳೆಯ ಸೆಫ್ಟಿಕ್ ಟ್ಯಾಂಕ್ ಪದ್ಧತಿಗಿಂತ ಹೆಚ್ಚು ಸುರಕ್ಷಿತವೂ, ಕಡಿಮೆ ವೆಚ್ಚದ್ದೂ ಆಗಿದೆಯೆಂಬುದು ಹಾಗೂ ಈ ಆಂದೋಲನದ ಮೂಲಕ ಈ ತಂತ್ರಜ್ಞಾನವನ್ನು ತ್ವರಿತವಾಗಿ ಹರಡಲಾಗಿದೆಯೆಂಬುದು ಜನಜನಿತ ಸಂಗತಿಯೇ ಆಗಿಬಿಟ್ಟಿದೆ. 2014-2017ರ ನಡುವಿನ ಕೇವಲ ನಾಲ್ಕು ವರ್ಷಗಳಲ್ಲಿ ಶೌಚಾಲಯಗಳಿರುವ ಮನೆಗಳ ಸಂಖ್ಯೆಯನ್ನು ಶೇ.42ರಿಂದ ಶೇ.64ಕ್ಕೇರಿಸಲಾಗಿದೆಯಲ್ಲದೆ 25 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿಕೊಂಡಿರುವ 5 ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿಸಲಾಗಿದೆ. ಆದರೆ ಈ ಸ್ಫೂರ್ತಿದಾಯಕ ಸಂಖ್ಯೆಗಳಾಚೆಗಿರುವ ಸತ್ಯಗಳು ಅಷ್ಟೊಂದು ಹಿತವಾಗಿಯೇನೂ ಇಲ್ಲ. ವಾಸ್ತವ ಸತ್ಯಗಳು ಹೇಳುವ ಸಂಗತಿಯೇನೆಂದರೆ ಶೌಚಾಲಯವು ಇದ್ದ ಮಾತ್ರಕ್ಕೆ ಅವು ಬಳಕೆಯಾಗುತ್ತಿವೆಯೆಂಬುದು ಖಾತ್ರಿಯಲ್ಲ. ಹಾಗೆಯೇ ಬಯಲು ಶೌಚ ಮುಕ್ತ ಗ್ರಾಮಗಳೆಂದು ಪ್ರಮಾಣಪತ್ರ ಪಡೆದ ಗ್ರಾಮಗಳು ಸಹ ಬಯಲು ಶೌಚದಿಂದ ಮುಕ್ತವಾಗೇನಿಲ್ಲ.
ಶೌಚಾಲಯ ನಿರ್ಮಾಣ ಮತ್ತು ಬಯಲು ಶೌಚ ಮುಕ್ತ ಪ್ರಮಾಣ ಪತ್ರದ ಸುತ್ತ ಇರುವ ಆಡಂಬರಗಳು ಸಾರ್ವತ್ರಿಕ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳು ಸಂವಿಧಾನದ 21 ನೇ ಕಲಮಿನಲ್ಲಿರುವ ಜೀವಿಸುವ ಹಕ್ಕಿನಿಂದ ಜನತೆಗೆ ದೊರೆತಿರುವ ಸಾಂವಿಧಾನಿಕ ಹಕ್ಕೆಂಬುದನ್ನು ಗೌಣಗೊಳಿಸುತ್ತಿದೆ. ಅದೇ ರೀತಿ ನೀರು, ನೈರ್ಮಲ್ಯ ಹಾಗೂ ಇತರ ಹಲವಾರು ಮಾನವ ಹಕ್ಕುಗಳನ್ನು ಖಾತರಿಗೊಳಿಸುವ ಹಲವಾರು ಅಂತರ್‌ರಾಷ್ಟ್ರೀಯ ಒಪ್ಪಂದಗಳಿಗೆ ಭಾರತವು ಸಹಿ ಹಾಕಿದೆ. ಆದರೂ ಭಾರತದಲ್ಲಿ ಈ ಹಕ್ಕುಗಳನ್ನು ಖಾತರಿಗೊಳಿಸುವ ಯಾವುದೇ ರಾಷ್ಟ್ರೀಯ ಕಾನೂನುಗಳಿಲ್ಲ. ಶಾಸನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ತಾವು ಇಂತಹ ಕ್ರಮಗಳನ್ನು ಕೈಗೊಂಡೆವೆಂದು ಸ್ಪಷ್ಟಗೊಳಿಸಲು ಎಷ್ಟು ಬೇಕೋ ಅಷ್ಟು ಮಾತ್ರ ಮಾಡುವ ಹಲವಾರು ಕ್ರಮಗಳನ್ನು ಸರಕಾರ ತೆಗೆದುಕೊಳ್ಳುತ್ತಿದೆ. ಪಡಿತರ ಚೀಟಿಗಳನ್ನು ಮತ್ತು ವಿದ್ಯುತ್ ಸೇವೆಗಳನ್ನು ಹಿಂಪಡೆದುಕೊಳ್ಳುವಂತಹ ಮತ್ತು ಬಯಲು ಶೌಚ ಮಾಡುವವರನ್ನು ಅವಮಾನ ಮಾಡುವ, ದಂಡ ವಿಧಿಸುವುದು ಮಾತ್ರವಲ್ಲದೆ ಮತ್ತು ಶೌಚಾಲಯಗಳನ್ನು ನಿರ್ಮಿಸುವಂತಹ ವರ್ತನೆಗಳನ್ನು ಉತ್ತೇಜಿಸುವಂಥಾ ಶೈಕ್ಷಣಿಕ ಮತ್ತು ಸಂವಹನಾ ಕಾರ್ಯಕ್ರಗಳಿಗಾಗಿ ನಿಗದಿಯಾಗಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತಹ ಹಲವು ಆಕ್ರಮಣಕಾರಿ ಮತ್ತು ಅಧಿಕಾರದ ದುರ್ಬಳಕೆಯಂತಹ ಕ್ರಮಳನ್ನು ತೆಗೆದುಕೊಳ್ಳಲಾಗುತ್ತಿದೆ.
ಇಂತಹ ಮೇಲಿನಿಂದ ಕೆಳಗೆ ಹರಿದುಬರುವ ರೀತಿಯಲ್ಲಿ ನಿರ್ಮಿತವಾಗಿರುವ ವ್ಯವಸ್ಥೆಯಲ್ಲಿ ಫಲಾನುಭವಿಗಳಿಗೆ ಯಾವುದೇ ಒಡೆತನವಿಲ್ಲದಿರುವುದರಿಂದ ಮತ್ತು ಸೇವಾ ಪೂರೈಕೆದಾರರಿಗೆ ಯಾವುದೇ ಉತ್ತರದಾಯಿತ್ವವಿಲ್ಲದಿರುವುದರಿಂದ ಜನತೆಯ ಹಕ್ಕುಗಳು ವ್ಯಾಪಕವಾಗಿ ಉಲ್ಲಂಘನೆಯಾಗುತ್ತವೆ. ಉದಾಹರಣೆಗೆ ಸರಕಾರವು ಒಂದು ಸುರಕ್ಷಿತ ನೈರ್ಮಲ್ಯ ತಂತ್ರಜ್ಞಾನದ ಬಗ್ಗೆ ಭರವಸೆ ನೀಡಿದರೂ ಶೌಚಾಲಯದ ನಿರ್ಮಾಣದ ಬಗ್ಗೆ ಅಥವಾ ತಂತ್ರಜ್ಞಾನದ ಆಯ್ಕೆಯ ಬಗ್ಗೆ ಫಲಾನುಭವಿಗೆ ತಿಳಿವಳಿಕೆಯೇ ಕೊಡದಿರುವುದರಿಂದ ಅಥವಾ ಫಲಾನುಭವಿಗಳನ್ನು ಒಳಗೊಳ್ಳದೇ ಹೋಗುವುದರಿಂದ ಆಚರಣೆಯಲ್ಲಿ ಅವು ಸುರಕ್ಷಿತ ಸೌಲಭ್ಯವಾಗದಿರಬಹುದು. 2017ರಲ್ಲಿ ವಾಟರ್‌ಏಯ್ಡೆ ಎಂಬ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ‘ಸ್ವಚ್ಛ ಭಾರತ್ ಮಿಷನ್’ (ಎಸ್‌ಬಿಎಂ)ನಡಿಯಲ್ಲಿ ನಿರ್ಮಿತವಾದ ಶೇ.30ಕ್ಕೂ ಹೆಚ್ಚು ಶೌಚಾಲಯಗಳಲ್ಲಿ ಗುಂಡಿಯ ವ್ಯವಸ್ಥೆ ಸರಿಯಾಗಿಲ್ಲದಿರುವುದರಿಂದ ಮತ್ತು ಅದು ಕುಡಿಯುವ ನೀರಿನ ವ್ಯವಸ್ಥೆಯ ಸಮೀಪದಲ್ಲೇ ನಿರ್ಮಿತವಾಗಿರುವುದರಿಂದ ವರ್ಜಿತ ಮಲಮೂತ್ರದೊಡನೆ ಮನುಷ್ಯರ ಸಂಪರ್ಕವನ್ನು ಸಂಪೂರ್ಣವಾಗಿ ತಡೆಗಟ್ಟಲು ಆಗಿಲ್ಲ. ಮಾನವ ಹಕ್ಕುಗಳ ದೃಷ್ಟಿಯಿಂದ ನೋಡುವುದಾದರೆ ನೈರ್ಮಲ್ಯವೆಂಬುದು ಫಲಾನುಭವಿಯೊಬ್ಬರು ವ್ಯಕ್ತಿಗತವಾಗಿ ಬಳಸುವ ಹಕ್ಕು ಮಾತ್ರವಲ್ಲ, ಬದಲಿಗೆ ಅದು ಶೌಚದ ತ್ಯಾಜ್ಯ ವಸ್ತುಗಳ ಅಸಮರ್ಪಕ ನಿರ್ವಹಣೆಯ ನಕಾರಾತ್ಮಕ ಪರಿಣಾಮಗಳಿಗೆ ಇತರರು ತುತ್ತಾಗದಂತೆ ತಡೆಗಟ್ಟಬೇಕಾದ ಇತರರ ಮಾನವ ಹಕ್ಕನ್ನು ಒಳಗೊಂಡಿರುತ್ತದೆ. ಅದಕ್ಕೆಂದೇ ಸರಕಾರವು ‘ಒಡಿಎಫ್ (ಬಯಲು ಶೌಚ ಮುಕ್ತ)ಪ್ಲಸ್’ ಯೋಜನೆಗಳನ್ನೂ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಸ್ತುಗಳ ಸಂಸ್ಕರಣೆಯ ಬಗ್ಗೆ ಹೊಸ ‘ಅಟಲ್ ತ್ಯಾಜ್ಯ ನಿರ್ವಹಣೆ ಮತ್ತು ನಗರ ಪರಿವರ್ತನೆ’ ಯೋಜನೆಯನ್ನು ಪ್ರಾರಂಭಿಸಿದ್ದರೂ ಅದರ ಫಲಿತಾಂಶಗಳು ಮಾತ್ರ ಗೊಂದಲಮಯವಾಗಿವೆ. ಒಂದೆಡೆ 2017-18ರ ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸರ್ವೇಯು ದೇಶದ ಶೇ.70ರಷ್ಟು ಹಳ್ಳಿಗಳಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯು ಅಸ್ತಿತ್ವದಲ್ಲಿದೆಯೆಂದು ವರದಿ ಮಾಡಿದೆ. ಆದರೆ ಮತ್ತೊಂದೆಡೆ 2017ರ ವಾಟರ್‌ಏಯ್ಡೊ ವರದಿ ಮತ್ತು ವಿಶ್ವ ಆರೋಗ್ಯ ಸಂಸ್ಥೆ/ವಿಶ್ವ ಸಂಸ್ಥೆಯ ಮಕ್ಕಳ ನಿಧಿಯ 2015ರ ವರದಿಗಳು ಗ್ರಾಮೀಣ ಪ್ರದೇಶದ ಕೇವಲ ಶೇ.30ರಷ್ಟು ಮತ್ತು ನಗರ ಪ್ರದೇಶದ ಶೇ.9ರಷ್ಟು ಜನಸಂಖ್ಯೆಯು ಮಾತ್ರ ಸುರಕ್ಷಿತ ಮಲತ್ಯಾಜ್ಯ ವಿಸರ್ಜನಾ ಪದ್ಧತಿಗಳನ್ನು ಅುಸರಿಸುತ್ತಿದೆ ಎಂದು ಹೇಳುತ್ತವೆ.


ಇಂತಹ ಕೆಲವು ಎಡವಟ್ಟುಗಳಿದ್ದರೂ ಸಾಮಾಜಿಕವಾಗಿ ಯಾರೂ ಚರ್ಚಿಸಲೊಲ್ಲದ ಬಯಲು ಶೌಚದಂಥ ವಿಷಯವನ್ನು ನೀತಿ ನಿರೂಪಣೆಗಳ ಕೇಂದ್ರ ಸ್ಥಾನಕ್ಕೆ ತಂದ ಶ್ರೇಯಸ್ಸು ಮೋದಿಯವರಿಗೇ ಸೇರಬೇಕು. ಆದರೆ ಮೋದಿ ಸರಕಾರ ಸಹ ಒಂದು ಅದ್ಭುತ ಅವಕಾಶವನ್ನು ಬಳಸಿಕೊಳ್ಳದೆ ಕೈಬಿಟ್ಟಿದೆ. ಏಕೆಂದರೆ ಭಾರತದಲ್ಲಿ ನೈರ್ಮಲ್ಯವೆಂಬುದು ತಂತ್ರಜ್ಞಾನ ಮತ್ತು ಸೌಲಭ್ಯಗಳ ವಿಷಯಕ್ಕಿಂತ ಹೆಚ್ಚಾಗಿ ಒಂದು ಜಾತಿಗ್ರಸ್ತ ಮೌಲ್ಯೀಕರಣದ ವಿಷಯವೆಂಬುದನ್ನು ಈ ಸರಕಾರವು ಸಹ ನಿರಾಕರಿಸುತ್ತದೆ. ಹೆಚ್ಚೆಚ್ಚು ಶೌಚಾಲಯಗಳನ್ನು ನಿರ್ಮಿಸುವುದರಿಂದ ಮತ್ತು ಪರ್ಯಾಯ ತಂತ್ರಜ್ಞಾನವನ್ನು ಅಳವಡಿಸುವುದರಿಂದ ಹೆಚ್ಚೆಚ್ಚು ಕಾರ್ಪೊರೇಟ್ ಬಂಡವಾಳಗಳನ್ನು ಮತ್ತು ಪ್ರಖ್ಯಾತರ ಬೆಂಬಲಗಳನ್ನು ಮತ್ತು ಚುನಾವಣೆಯ ಸಂದರ್ಭದಲ್ಲಿ ಒಂದಷ್ಟೂ ಸಕಾರಾತ್ಮಕ ಅಂಶಗಳನ್ನೂ ಪಡೆದುಕೊಳ್ಳಬಹುದು. ಆದರೆ ಅವ್ಯಾವುದೂ ನೈರ್ಮಲ್ಯ ಮತ್ತು ಶೌಚ ಶುಚೀಕರಣಗಳು ಕೆಳಜಾತಿಗಳ ಕೆಲಸವೆಂಬ ಮನಸ್ಸತ್ವವನ್ನು ಮಾತ್ರ ಬದಲಿಸುವುದಿಲ್ಲ. ಮೋದಿಯವರ ‘ಸ್ವಚ್ಛತೆಯೇ ಸೇವೆ’ಯೆಂಬ ಘೋಷಣೆಗಳು ಅದೇ ರೀತಿಯ ಸೇವಾಕಂಪನಗಳನ್ನು ಎಲ್ಲರಲ್ಲೂ ಹುಟ್ಟಿಸುತ್ತಿವೆಯೇ? ಒಂದು ಕಡೆ ಮೋದಿಯವರು ಈ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಲೇ ಬಂದಿರುವ ವಾಲ್ಮೀಕಿ ಜನಾಂಗದ ಬಗ್ಗೆ ಬರೆಯುತ್ತಾ ಯಾವುದೋ ಒಂದು ಗಳಿಗೆಯಲ್ಲಿ ಈ ಸ್ವಚ್ಛತಾ ಕೆಲಸ ಮಾಡುವುದು ದೇವರು ನಮಗೆ ನೀಡಿರುವ ಜವಾಬ್ದಾರಿಯೆಂದು ಈ ಜನಾಂಗದವರಿಗೆ ಜ್ಞಾನೋದಯವಾಗಿರಬೇಕು ಎಂದು ಸಫಾಯಿ ಕೆಲಸದ ಜೊತೆಗೆ ಕೆಳಜಾತಿಗಳ ಸಮೀಕರಣವನ್ನು ಸಮರ್ಥಿಸಿಕೊಳ್ಳುತ್ತಾರೆ. ಮತ್ತೊಂದೆಡೆ ಸಮರ್ಪಕವಾದ ತ್ಯಾಜ್ಯ ನಿರ್ವಹಣೆ ಮತ್ತು ತೊಳೆಯುವ ವ್ಯವಸ್ಥೆಯಿಲ್ಲದೆ ಶೌಚಾಲಯವನ್ನು ನಿರ್ಮಿಸುವ ಮೂಲಕ ಸರಕಾರದ ಹಿತ್ತಲಲ್ಲೇ ಜಾತಿಯಾಧಾರಿತ ಮತ್ತು ತಾರತಮ್ಯ ಪೂರಿತ ವೃತ್ತಿ ಗುತ್ತಿಗೆ ವ್ಯವಸ್ಥೆಯನ್ನು ಜಾರಿಯಲ್ಲಿಟ್ಟಿದೆ. ವಿಶ್ವ ಸಂಸ್ಥೆಯ ವಿಶೇಷ ವರದಿಗಾರರಾದ ಲಿಯೋ ಹೆಲ್ಲರ್ ಅವರು ತಮ್ಮ 2017ರ ವರದಿಯಲ್ಲಿ ಸ್ವಚ್ಛ ಭಾರತ ಮಿಷನ್‌ನ ಅನುಷ್ಠಾನವು ಸಫಾಯಿ ಕೆಲಸಗಳಲ್ಲಿ ತೊಡಗಿಕೊಂಡಿರುವ ನಿರ್ದಿಷ್ಟ ಜಾತಿ ಗುಂಪುಗಳ ಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವಚ್ಛ ಭಾರತ ಮಿಷನ್‌ನ ಅನುಷ್ಠಾನದಲ್ಲಿ ಅಗಾಧವಾದ ತಾರತಮ್ಯಗಳಿವೆ. ಅದು ಕೇವಲ ಜಾತಿ ಆಧಾರಿತ ತಾರತಮ್ಯವನ್ನು ಮಾತ್ರವಲ್ಲದೆ ಲಿಂಗಾಧಾರಿತವಾದ ತಾರತಮ್ಯವನ್ನು ಮುಂದುವರಿಕೆ ಮಾಡಿರುವುದಲ್ಲದೆ ವಿಶೇಷ ಅಗತ್ಯಗಳಿರುವ ವ್ಯಕ್ತಿಗಳಿಗೂ ತಾರತಮ್ಯ ಎಸಗಿದೆ. ಹೆಲ್ಲರ್ ಅವರ ವರದಿಯು ಈ ಶೌಚಾಲಯಗಳು ವಿಕಲಾಂಗರ, ಲಿಂಗಾಂತರಿಗಳ, ಮಹಿಳೆಯರ ಅದರಲ್ಲೂ ಮುಟ್ಟಾದ ಮಹಿಳೆಯರ ನೈರ್ಮಲ್ಯದ ಅಗತ್ಯಗಳಿಗೆ ಕಿಂಚಿತ್ತೂ ಪೂರಕವಾಗಿಲ್ಲವೆಂದು ಸ್ಪಷ್ಟಪಡಿಸುತ್ತದೆ. ಇದಲ್ಲದೆ 2016ರ ಎಎಸ್‌ಇಆರ್ ವರದಿಯ ಪ್ರಕಾರ ಶೇ. 62ರಷ್ಟು ಶಾಲೆಗಳಲ್ಲಿ ಮಾತ್ರ ಬಳಕೆಗೆ ಯೋಗ್ಯವಾಗಿರುವ ಹುಡುಗಿಯರ ಶೌಚಾಲಯವಿದೆ. ಆಸಕ್ತಿದಾಯಕ ವಿಷಯವೆಂದರೆ ಭಾರತವು ಮನುಷ್ಯರ ನೀರು ಮತ್ತು ನೈರ್ಮಲ್ಯಗಳ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ಹಲವಾರು ಅಂತರ್‌ರಾಷ್ಟ್ರೀಯ ಒಪ್ಪದಗಳಿಗೆ ಸಹಿ ಹಾಕಿರುವುದರ ಜೊತೆಗೆ ಯಾವುದೇ ಬಗೆಯ ತಾರತಮ್ಯವನ್ನು ನಿವಾರಿಸುವಂಥ ಇನ್ನೂ ಹಲವಾರು ಒಪ್ಪಂದಗಳಿಗೂ ಸಹಿ ಮಾಡಿದೆ. ಆದರೆ ಈ ಒಪ್ಪಂದಗಳೆಲ್ಲಾ ಅಂತರರಾಷ್ಟ್ರೀಯ ರಂಗಮಂಚದಲ್ಲಿ ಮೋದಿಯವರನ್ನು ಭಾರತದ ಸ್ವಚ್ಛತಾ ಪುರುಷನೆಂದು ಬಿಂಬಿಲು ಮಾತ್ರ ಬಳೆಕೆಯಾಗುತ್ತಿವೆಯಷ್ಟೆ.
ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ