ಮೀಸಲಾತಿಯೋ; ಪ್ರಾತಿನಿಧ್ಯವೋ?

Update: 2018-10-19 18:38 GMT

ಭಾಗ-1

ಭಾರತ ಮುಂದುವರಿಯುತ್ತಿದೆ, ಪ್ರಕಾಶಿಸುತ್ತಿದೆ ಮತ್ತು 2025ರ ವೇಳೆಗೆ ಮುಂದುವರಿದ ದೇಶವಾಗುತ್ತದೆ ಎನ್ನುವ ಹೇಳಿಕೆಗಳು ಕೇಳಿಬರುತ್ತಿವೆ. ಆದರೆ ನಿಜವಾಗಿಯೂ ಒಂದು ದೇಶ ಮಾದರಿ ದೇಶವಾಗಿ ವಿನ್ಯಾಸಗೊಳಿಸಬೇಕು ಎಂದರೆ ಹೇಗೆ ವಿನ್ಯಾಸಗೊಳಿಸುವಿರಿ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಂಡರೆ ನಮಗೆ ಮೀಸಲಾತಿಯ ಸರಿಯಾದ ಸಾರ ಅರ್ಥವಾದೀತು.

ಭಾರತದಲ್ಲಿ ಇತ್ತೀಚೆಗೆ ತುಂಬಾ ಚರ್ಚಿತವಾಗುತ್ತಿರುವ ವಿಷಯವೆಂದರೆ ಮೀಸಲಾತಿ. ಮೀಸಲಾತಿಯ ಕುರಿತು ಕೇಳಿ ಬರುತ್ತಿರುವ ಹೇಳಿಕೆಗಳೆಂದರೆ, ಮೀಸಲಾತಿ ಆರ್ಥಿಕತೆಗೋ, ಅಸಮಾನತೆಗೋ?, ಸ್ವತಂತ್ರ ಬಂದು ಎಪ್ಪತ್ತೆರಡು ವರ್ಷಗಳಾದರೂ ಇನ್ನೂ ಮೀಸಲಾತಿ ಜಾರಿಯಲ್ಲಿದೆ, ಇದಕ್ಕೆ ಕೊನೆ ಎಂದು? ಆರ್ಥಿಕ ಅಂಶದ ಆಧಾರದ ಮೇಲೆ ಮೀಸಲಾತಿಯನ್ನು ತೆಗೆದು ಹಾಕುವುದು ಸೂಕ್ತವಲ್ಲವೆ?, ಮೀಸಲಾತಿ ನೀಡಿರುವುದು ಹತ್ತು ವರ್ಷಕ್ಕಲ್ಲವೇ, ಇನ್ನು ಯಾಕೆ ಮುಂದುವರಿಯುತ್ತಿದೆ? ಮತ್ತು ಮೀಸಲಾತಿಯಿಂದ ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ತರಹದ ಹೇಳಿಕೆಗಳು ಚಿತ್ರಗಳ ಮೂಲಕ ಮತ್ತು ವೀಡಿಯೊಗಳ ಮೂಲಕ ವ್ಯಕ್ತಪಡಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಹೇರಳವಾಗಿದೆ. ಯಾವ ವೆಬ್‌ಸೈಟ್ ತೆಗೆದು ನೋಡಿದರೂ ಮೀಸಲಾತಿಗೆ ವಿರುದ್ಧವಾದ ಹೇಳಿಕೆಗಳು ಮತ್ತು ಅಭಿಪ್ರಾಯಗಳು ಕಂಡು ಬರುತ್ತವೆ.
ಇದಕ್ಕೆ ಪೂರಕವೆಂಬಂತೆ ಈಗಾಗಲೆ 2006ರಲ್ಲಿ ಕೇಂದ್ರ ಸರಕಾರ ಕೆಲವು ವಿಶೇಷ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಪ್ರವೇಶಾತಿಯಲ್ಲಿ ಮೀಸಲಾತಿ ನೀಡುವ ಕುರಿತ ಆದೇಶವನ್ನು ಹೊರಡಿಸಿದಾಗ ದಿಲ್ಲಿಯಲ್ಲಿ ಮೀಸಲಾತಿಯ ವಿರುದ್ಧ ವೈದ್ಯರು ಬೀದಿಗಿಳಿದು ಹೋರಾಟ ಮಾಡಿದರು. ದಿನ ನಿತ್ಯ ಜನರ ದುಃಖ ನೋವು ಕಂಡಂತಹ ವೈದ್ಯರು, ಸಮಾಜದ ಉನ್ನತ ಸ್ತರದಲ್ಲಿದ್ದು, ಭಾರತದ ಸಾಮಾಜಿಕ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಇಂತಹ ಸಂದರ್ಭದಲ್ಲಿ ಏಕೆ ಪ್ರತೀ ಬಾರಿಯೂ ಮೀಸಲಾತಿ ವಿಷಯ ಬಂದಾಗ ಮೇಲ್ವರ್ಗದ ಗುಂಪುಗಳೆಲ್ಲವೂ ಇದಕ್ಕೆ ವಿರುದ್ಧವಾಗಿರುತ್ತವೆ, ಮೀಸಲಾತಿಯಿಂದ ಮೇಲ್ವರ್ಗಕ್ಕೆ ನಿಜವಾಗಲೂ ಅನ್ಯಾಯ ವಾಗಿದೆಯಾ ಎನ್ನುವ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವುದು ಅವಶ್ಯಕ. ಹಾಗೆಯೇ ಮೇಲ್ವರ್ಗದ ಗುಂಪಿನ ಜನರಿಗೂ ಇದನ್ನೂ ಅರ್ಥೈಸುವ ಅನಿವಾರ್ಯತೆ ಇದೆ ಎಂದೆನಿಸುತ್ತದೆ.
ಭಾರತದ ಸಂವಿಧಾನದಲ್ಲಿರುವ ಅನುಚ್ಛೇದ-15(4) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಮೀಸಲಾತಿ ಮತ್ತು ಅನುಚ್ಛೇದ-16(4) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಲಾಗಿದೆ.
ದೇಶದಲ್ಲಿ ಸಂಘಟಿತ ವಲಯದಲ್ಲಿ ಶೇ. 7 ಮತ್ತು ಅಸಂಘಟಿತ ವಲಯದಲ್ಲಿ ಶೇ. 93 ಉದ್ಯೋಗಗಳಿವೆ. ಉದ್ಯೋಗ ಮೀಸಲಾತಿಯನ್ನು ಗಮನಿಸುವುದಾದರೆ, ಅದು ಸಂಘಟಿತ ವಲಯದಲ್ಲಿ ಮಾತ್ರ. ಸಂಘಟಿತ ವಲಯವು ಶೇ. 40ರಷ್ಟು ಸರಕಾರಿ ಮತ್ತು ಶೇ. 60ರಷ್ಟು ಖಾಸಗಿ ವಲಯದಲ್ಲಿ ಉದ್ಯೋಗಗಳನ್ನು ಹೊಂದಿವೆ. ಖಾಸಗಿ ವಲಯದಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. ಹಾಗಾಗಿ ಕೇವಲ ಶೇ. 3ರಷ್ಟು ಸರಕಾರಿ ವಲಯದ ಉದ್ಯೋಗಗಳು ಮಾತ್ರ ಮೀಸಲಾತಿಗೆ ಒಳಪಡುತ್ತವೆ. ಅದೇ ಶೇ. 3 ಉದ್ಯೋಗಗಳಲ್ಲಿ ಶೇ. 1ರಷ್ಟು ಭಡ್ತಿಯನ್ನು ನೀಡಲಾಗುತ್ತದೆ ಮತ್ತು ಶೇ. 2ರಷ್ಟು ಉದ್ಯೋಗಗಳು ಮಾತ್ರ ಆರಂಭಿಕ ಉದ್ಯೋಗಗಳು. ಆ ಶೇ. 2ರಷ್ಟು ಉದ್ಯೋಗಗಳಲ್ಲಿ ಅರ್ಧದಷ್ಟು ಸಿ ಮತ್ತು ಡಿ ಗುಂಪಿನ ಹುದ್ದೆಗಳು. ಕೇವಲ ಶೇ. 2ರಷ್ಟು ಉದ್ಯೋಗಗಳು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಮತ್ತು ಇತರ ವಿಶೇಷ ವರ್ಗಗಳಿಗೆ ಮೀಸಲಾತಿಯಿಂದ ದೊರೆಯುವಂತಹವು. ಈ ಶೇ. 2ರಷ್ಟು ಉದ್ಯೋಗಗಳೇ ಮೇಲ್ವರ್ಗದ ಗುಂಪಿನ ಕೆಂಗಣ್ಣಿಗೆ ಗುರಿಯಾಗಿರುವಂತಹದು.

ಮೀಸಲಾತಿ ಯಾಕೆ ಜಾತಿ ಆಧಾರಿತವಾಗಿದೆ?
ಭಾರತದಲ್ಲಿ ಮೀಸಲಾತಿಯ ಜನನ ಅದರ ಧರ್ಮ ಗ್ರಂಥಗಳಲ್ಲಿ ಕಾಣ ಬಹುದು. ಸುಮತಿ ಭಾರ್ಗವ ಬರೆದ ಮನುಧರ್ಮ ಶಾಸ್ತ್ರದಲ್ಲಿ ಚತುವರ್ಣದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸ್ತ್ರದ ಪ್ರಕಾರ ಬ್ರಾಹ್ಮಣ ವಿದ್ಯೆಗೆ, ಕ್ಷತ್ರಿಯ ರಾಜ್ಯಭಾರಕ್ಕೆ, ವೈಶ್ಯ ವ್ಯಾಪಾರಕ್ಕೆ ಮತ್ತು ಶೂದ್ರ ಉಳಿದ ಮೂರು ವರ್ಗಗಳ ಸೇವೆಗೆ ಶೇ. 100 ಮೀಸಲಾತಿಯನ್ನು ನೀಡಲಾಗಿತ್ತು. ಮೇಲಿನ ಮೂರು ವರ್ಗಗಳು ಉತ್ತಮ ಜಾತಿಯವರೆಂದೂ, ಕೆಳಗಿನ ವರ್ಗಗಳು ಕೆಳವರ್ಗದವರೆಂದು ನಿರೂಪಿಸಲಾಗಿ ಯಾವುದೇ ಹಕ್ಕುಗಳನ್ನು ನೀಡಿರಲಿಲ್ಲ. ಈ ಅಮಾನವೀಯ ಅಸಮಾನತೆಯನ್ನು ಸಾರುವ ಮೀಸಲಾತಿ 5,000 ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಈ ಜಾತಿ ಆಧಾರಿತ ಅಮಾನವೀಯ ಮೀಸಲಾತಿಯಿಂದ ಶೂದ್ರರನ್ನು, ಅತಿ ಶೂದ್ರರನ್ನು, ಅಸ್ಪಶ್ಯರನ್ನು ಮತ್ತು ಆದಿವಾಸಿಗಳನ್ನು ಇಂದಿಗೂ ಸಹ ಮೇಲಿನ ಮೂರು ವರ್ಗದವರು ದೌರ್ಜನ್ಯಕ್ಕೊಳಪಡಿಸುತ್ತಿದ್ದಾರೆ ಮತ್ತು ಜಾತಿ ನಿಂದನೆಗಳನ್ನು ಮಾಡುತ್ತಿದ್ದಾರೆ. ಈ ಮೇಲ್ವರ್ಗದ ಜನರು 5,000 ವರ್ಷಗಳಿಂದ ಕೆಳವರ್ಗದ ಜನರಿಗೆ ನಿಂದಿಸುವುದು, ದೌರ್ಜನ್ಯಗೈಯುವುದು, ಹೀಯಾಳಿಸುವುದು ಮತ್ತು ಅಸಮಾನತೆಯಿಂದ ಕಾಣುವುದು, ಹಕ್ಕುಗಳಿಂದ ವಂಚಿತರನ್ನಾಗಿ ಮಾಡುತ್ತಲೇ ಬರುತ್ತಿದ್ದಾರೆ. ಇಂದಿಗೂ ಅವರಿಗೆ ತೃಪ್ತಿಯಾದಂತೆ ಕಾಣುವುದಿಲ್ಲ.
ಭಾರತ ಮುಂದುವರಿಯುತ್ತಿದೆ, ಪ್ರಕಾಶಿಸುತ್ತಿದೆ ಮತ್ತು 2025ರ ವೇಳೆಗೆ ಮುಂದುವರಿದ ದೇಶವಾಗುತ್ತದೆ ಎನ್ನುವ ಹೇಳಿಕೆಗಳು ಕೇಳಿಬರುತ್ತಿವೆ. ಆದರೆ ನಿಜವಾಗಿಯೂ ಒಂದು ದೇಶ ಮಾದರಿ ದೇಶವಾಗಿ ವಿನ್ಯಾಸಗೊಳಿಸಬೇಕು ಎಂದರೆ ಹೇಗೆ ವಿನ್ಯಾಸಗೊಳಿಸುವಿರಿ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಂಡರೆ ನಮಗೆ ಮೀಸಲಾತಿಯ ಸರಿಯಾದ ಸಾರ ಅರ್ಥವಾದೀತು. ಈ ದೇಶದಲ್ಲಿ ಕೊಳೆಗೇರಿಗಳಿವೆ ಮತ್ತು ಬಹುಮಹಡಿ ಕಟ್ಟಡಗಳಿವೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಿವೆ, ಮೇಲ್ವರ್ಗ ಮತ್ತು ಹಿಂದುಳಿದ ವರ್ಗಗಳಿವೆ, ವಿವಿಧ ಜಾತಿಗಳಿವೆ. ಹೀಗಿದ್ದಾಗ ನಾವು ನಮ್ಮನ್ನು ಯಾವ ಸ್ತರದಲ್ಲಾದರೂ, ಯಾವ ವರ್ಗದಲ್ಲಾದರೂ, ಯಾವ ಜಾತಿಯಲ್ಲಾದರೂ ಇಟ್ಟ್ಟುಕೊಳ್ಳಬೇಕೆಂದರೆ, ನಾವು ಅಪೇಕ್ಷಿಸುವ ಉತ್ತರ ಒಂದು ದೇಶ ಒಂದು ಉತ್ತಮ ವ್ಯವಸ್ಥೆಯನ್ನು ಹೊಂದಿರಬೇಕು. ಹಾಗಾದರೆ ಉ್ತಮ ವ್ಯವಸ್ಥೆ ಎಂದರೆ ಯಾವುದು?
ಈ ಮೇಲಿನ ಆಲೋಚನಾ ಪ್ರಯೋಗವು ನಮ್ಮನ್ನು ನಮ್ಮ ಹುಟ್ಟಿನ ಜಾತಿಯಿಂದ ಬೇರ್ಪಡಿಸುವ ಕಾರ್ಯವಾಗಿದೆ. ಇದಕ್ಕೆ ಪೂರಕವಾದಂತಹ ನಿದರ್ಶನವನ್ನು ಜಾನ್ ರಾಲ್ಸ್‌ರವರು ತಮ್ಮ ಪುಸ್ತಕ ‘ನ್ಯಾಯದ ಸಿದ್ಧಾಂತ’ದಲ್ಲಿ ನೀಡಿದ್ದಾರೆ. ಜಾನ್ ರಾಲ್ಸ್ ಪ್ರಕಾರ ‘‘ಜೀವನದ ಅವಕಾಶಗಳು ಜನನಕ್ಕೆ ಸೀಮಿತ ವಾಗಿರಬಾರದು. ಸಮಾಜದಲ್ಲಿ ಅವಕಾಶಗಳು ಆದ್ಯತೆಗೆ ಅನುಗುಣವಾಗಿ, ಮತ್ತು ಗಣನೀಯವಾಗಿ ಸಮಾನವಾದಂತಹುಗಳಾಗಿರಬೇಕು. ಸಮಾನತೆ ಅಂದರೆ ಸಮವಾದ ಅವಕಾಶವಲ್ಲ, ಬದಲಾಗಿ ಆದ್ಯತೆಗೆ ಅನುಗುಣವಾದ ಅವಕಾಶ.’’
ಅವಕಾಶಗಳು ಏಕೆ ಆದ್ಯತೆಯ ಆಧಾರದ ಮೇಲೆ ನೀಡಬೇಕಾಗಿದೆ? ಭಾರತದಲ್ಲಿ ಅವಕಾಶಗಳು ಸಮಾನವಾಗಿ ಹರಡಿಕೊಂಡಿಲ್ಲ. ಅಂದರೆ, ಪ್ರದೇಶವನ್ನು ಪರಿಗಣಿಸುವುದಾದರೆ, ಗ್ರಾಮೀಣ ಭಾಗದಲ್ಲಿ ಕಡಿಮೆ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ವರ್ಗ ಪರಿಗಣಿಸುವುದಾದರೆ ಬಡವರಿಗೆ ಕಡಿಮೆ ಮತ್ತು ಶ್ರೀಮಂತರಿಗೆ ಹೆಚ್ಚಿನ ಅವಕಾಶಗಳಿವೆ. ಅದೇ ರೀತಿಯಾಗಿ ಮಹಿಳೆಯರಿಗೆ ಕಡಿಮೆ ಮತ್ತು ಪುರುಷರಿಗೆ ಹೆಚ್ಚಿನ ಅವಕಾಶಗಳಿವೆ. ಸಮುದಾಯಗಳಲ್ಲಿ ಕೆಳವರ್ಗಕ್ಕೆ ಕಡಿಮೆ ಮತ್ತು ಮೇಲ್ವರ್ಗಕ್ಕೆ ಹೆಚ್ಚಿನ ಅವಕಾಶಗಳಿವೆ.
ಹಾಗಾಗಿ ಆದ್ಯತೆಯ ಆಧಾರದ ಮೇಲೆ ಅವಕಾಶಗಳನ್ನು ಒದಗಿಸಲು ಮೀಸಲಾತಿ ಮುಖಾಂತರ ಪ್ರಾತಿನಿಧ್ಯ ನೀಡಲಾಯಿತು. ಭಾರತದಲ್ಲಿ ಈ ಪ್ರಾತಿನಿಧ್ಯದ ಇತಿಹಾಸ ವನ್ನು ನೋಡುವುದಾದರೆ, 1882ರಲ್ಲಿ ಸರ್ ವಿಲಿಯಮ್ ಹಂಟರ್‌ರವರ ಅಧ್ಯಕ್ಷತೆಯಲ್ಲಿ ‘ಭಾರತದ ಪ್ರಥಮ ಶಿಕ್ಷಣ ಆಯೋಗ’ ರಚನೆಯಾಯಿತು. ಇದರ ಉದ್ದೇಶವೇ ಭಾರತದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಬ್ರಿಟಿಷ್ ಸರಕಾರಕ್ಕೆ ಶಿಫಾರಸುಗಳನ್ನು ನೀಡುವುದಾಗಿತ್ತು. ಈ ಸಮಿತಿಯಲ್ಲಿ 20 ಜನ ಸದಸ್ಯರಿದ್ದರು, ಹೆಚ್ಚಿನ ಸದಸ್ಯರೆಲ್ಲರೂ ಮೇಲ್ವರ್ಗ ದವರಿರುತ್ತಾರೆ. ಇದನ್ನರಿತ ಸಾಮಾಜಿಕ ಕ್ರಾಂತಿಯ ಹರಿಕಾರ ಮಹಾತ್ಮ ಜೋತಿಬಾ ಫುಲೆರವರು ಶಿಕ್ಷಣದ ನಿಜವಾದ ಆವಶ್ಯಕತೆ ಯಿರುವುದು ಬ್ರಾಹ್ಮಣೇತರರಿಗೆ ಹಾಗೂ ಕೆಳವರ್ಗದವರಿಗೆ ಯಾಕೆಂದರೆ 90 ಪ್ರತಿಶತದಷ್ಟು ಹಿಂದುಳಿದ ವರ್ಗದವರು ಶಾಲೆಯನ್ನೇ ನೋಡಿಲ್ಲ. ಹಾಗಾಗಿ ನೈಜ ಸ್ಥಿತಿಗತಿ ತಿಳಿಯಲು ಕೆಳವರ್ಗದವರನ್ನು ಸಮಿತಿಯಲ್ಲಿ ಆಯ್ಕೆ ಮಾಡಬೇಕೆಂಬ ಮನವಿಯನ್ನು ಬ್ರಿಟಿಷ್ ಸರಕಾರಕ್ಕೆ ಸಲ್ಲಿಸಿದರು. ಮೇಲ್ವರ್ಗದ ಬ್ರಾಹ್ಮಣರು ಎಲ್ಲಾ ಕಚೇರಿಗಳಲ್ಲಿ ಇದ್ದಾರೆ. ಶಿಕ್ಷಕರೂ ಅವರೇ, ಹಾಗಾಗಿ ಕೆಳವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ, ಉಚಿತ ಕಡ್ಡಾಯ ಶಿಕ್ಷಣ ಎಲ್ಲಾ ಮಕ್ಕಳಿಗೆ ನೀಡಬೇಕು ಮತ್ತು ಉದ್ಯೋಗಗಳು ನೀಡುವಂತಹ ಪಾಲಿಸಿಗಳನ್ನು ರೂಪಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ.
ಫುಲೆಯವರ ಅನುಯಾಯಿಗಳಾಗಿದ್ದ ಕೋಲ್ಹಾಪುರ ಸಂಸ್ಥಾನದ ಛತ್ರಪತಿ ಶಾಹು ಮಹಾರಾಜರು 1902ರಲ್ಲಿ 50 ಪ್ರತಿಶತದಷ್ಟು ಉದ್ಯೋಗದಲ್ಲಿ ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ ನೀಡಿದರು. ಹಾಗೆಯೆ ಡಾ. ಬಿ. ಆರ್. ಅಂಬೇಡ್ಕರ್‌ರವರ ಉನ್ನತ ಶಿಕ್ಷಣಕ್ಕೆ ಧನಸಹಾಯ ಕೂಡ ಮಾಡಿದರು. 1918ರಲ್ಲಿ ಸೌಥ್ ಬರೋ ಆಯೋಗಕ್ಕೆ ಭಾರತೀಯರೆಲ್ಲರಿಗೂ ಮತದಾನದ ಹಕ್ಕನ್ನು ನೀಡಲು ಅಂಬೇಡ್ಕರವರು ಆಗ್ರಹಿಸಿದರು. 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಜಸ್ಟಿಸ್ ಮಿಲ್ಲರ್ ಕಮಿಶನ್ ವರದಿ ಆಧರಿಸಿ ಬ್ರಾಹ್ಮಣೇತರರಿಗೆ 75 ಪ್ರತಿಶತದಷ್ಟು ಉದ್ಯೋಗದಲ್ಲಿ ಮೀಸಲಾತಿಯನ್ನು ಎಲ್ಲಾ ಹಿಂದುಳಿದ ವರ್ಗದವರಿಗೆ ನೀಡಿದರು. 1929ರಲ್ಲಿ ದೇಶದ ಸಾಮಾಜಿಕ ಸ್ಥಿತಿಯನ್ನು ಅಧ್ಯಯನ ಮಾಡಲು ಸ್ಯೆಮನ್ ಆಯೋಗ ಬಂದಾಗ ಡಾ. ಬಿ. ಆರ್. ಅಂಬೇಡ್ಕರ್‌ರವರು ತಳಸಮುದಾಯಗಳ ಪರ ಹಕ್ಕನ್ನು ಮಂಡಿಸಿ ಸರಕಾರಕ್ಕೆ ಮನವಿಯನ್ನು ಸಲ್ಲಿಸುತ್ತಾರೆ. ಇದರ ಪ್ರಯುಕ್ತ ಲಂಡನ್‌ನಲ್ಲಿ ಜರುಗಿದ 1930, 1931 ಮತ್ತು 1932ರ ದುಂಡು ಮೇಜಿನ ಸಭೆಗಳಲ್ಲಿ ತಳಸಮುದಾಯಗಳ ಪರವಾಗಿ ಭಾಗವಹಿಸಿ ರಾಜಕೀಯ ಪ್ರಾತಿನಿಧ್ಯವನ್ನು ಕೊಡಿಸುವಲ್ಲಿ ಯಶಸ್ವಿಯಾಗುತ್ತಾರೆ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News

ಜಗದಗಲ
ಜಗ ದಗಲ