ಬಾಪುವಿನ ಗುಣ ಗೋಡ್ಸೆಯ ಮೇಲೆ ಪರಿಣಾಮ ಬೀರಲಿಲ್ಲ

Update: 2018-10-21 04:24 GMT

ಮಹಾತ್ಮಾ ಗಾಂಧಿಯವರನ್ನು ಕುರಿತಂತೆ ಅವರ ವಂಶಸ್ಥರಾದ ತುಷಾರ್ ಅರುಣ್ ಗಾಂಧಿಯವರು ಇತ್ತೀಚಿನ ಸಂದರ್ಶನವೊಂದರಲ್ಲಿ ಆಡಿರುವ ಮಾತುಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿ ಇಲ್ಲಿ ಪ್ರಕಟಿಸಲಾಗಿದೆ. ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ತುಷಾರ್ ಗಾಂಧಿ ಅವರು ನಮಗೆ ಗಾಂಧಿಯವರ ಕುರಿತಾದ ಒಳನೋಟವುಳ್ಳ ಕಥೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ತುಷಾರ್ ಅವರು ‘ಲೆಟ್ಸ್ ಕಿಲ್ ಗಾಂಧಿ!: ಎ ಕ್ರಾನಿಕಲ್ ಆಫ್ ಹಿಸ್ ಲಾಸ್ಟ್ ಡೇಸ್, ದ ಮರ್ಡರ್, ಇನ್ವೆಸ್ಟಿಗೇಶನ್ ಆ್ಯಂಡ್ ಟ್ರಯಲ್ ಎಂಬ ಪುಸ್ತಕ ಬರೆದಿದ್ದಾರೆ.

ಗಾಂಧಿ ಮಾಲಿಕೆ: ಭಾಗ 4

ತುಷಾರ್ ಅರುಣ್ ಗಾಂಧಿ ಇನ್ನೂ ಸಣ್ಣವರಾಗಿದ್ದಾಗ, ಅವರ ಅಜ್ಜಿ ಹೇಳಿದರು ‘‘ನಿನ್ನ ಮುತ್ತಜ್ಜನಾದ ಮಹಾತ್ಮಾ ಗಾಂಧಿಯೆಂಬ ಮಹಾನ್ ವೃಕ್ಷದ ನೆರಳಿನಿಂದ ಹೊರತಾಗಿ ನೀನು ಎಂದಿಗೂ ಬೆಳೆಯಲು ಸಾಧ್ಯವಾಗುವುದಿಲ್ಲ’’ ಎಂದು. ಆಗ ತುಷಾರ್ ಮುಂದೆ ಎರಡು ಆಯ್ಕೆಗಳಿಗೆ ಅವಕಾಶವಿತ್ತು. ಒಂದು ಗಾಂಧೀಜಿಯ ಪರಂಪರೆಯನ್ನು ಅಳವಡಿಸಿಕೊಂಡು ಬೆಳೆಯುತ್ತ ಹೋಗುವುದು, ಅಥವಾ ಆ ಪರಂಪರೆಯ ಬೆಳವಣಿಗೆಯನ್ನು ಟೊಂಗೆ ಹೇಗೆ ತಾನೇ ಬೆಳೆಯುತ್ತದೋ ಹಾಗೆಯೇ ಬೆಳೆಯಲು ಬಿಡುವುದು. ಆಗ ತುಷಾರ್ ಅವರು ಮೊದಲಿನದನ್ನೇ ಆಯ್ಕೆ ಮಾಡಿಕೊಂಡರು. ಬಾಪು ಪ್ರಪಂಚ ತೊರೆದ ಏಳು ದಶಕಗಳ ನಂತರವೂ ಹೆಮ್ಮೆಯಿಂದ ತುಷಾರ್ ಅವರು, ದೇಶದಲ್ಲಿ ಶಾಂತಿ ಮತ್ತು ಅಹಿಂಸೆಗಾಗಿ ಹೋರಾಡುವ ಗಾಂಧಿಯ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ನಿಮ್ಮ ಕುಟುಂಬದಿಂದ ಗಾಂಧಿಯವರ ಬಗ್ಗೆ ಕೇಳಿದ ಕಥೆಗಳಲ್ಲಿ ನಿಮಗಿಷ್ಟವಾದ ನೆನಪುಗಳು ಯಾವುವು?

    -ನನಗೆ ಹೇಳಿದವರೆಲ್ಲರ ಪ್ರಕಾರ ಗಾಂಧಿಯವರು ಉತ್ತಮ ಹಾಸ್ಯಪ್ರಜ್ಞೆ ಹೊಂದಿದ್ದರೆಂದು ಹೇಳಿದ್ದು ನನಗೆ ಆಕರ್ಷಣೀಯವಾಗಿ ಕಂಡಿತು. ಅತ್ಯಂತ ಗಂಭೀರ ಸಂದರ್ಭಗಳಲ್ಲೂ ಸಹಿತ ಅವರು ಹಾಸ್ಯ ಮಾಡಬಲ್ಲವರಾಗಿದ್ದರು. ಈಗಿನ ದಿನಗಳ ಯುವಕರಲ್ಲಿ ಕೋಪವನ್ನು ನಿರ್ವಹಿಸುವಲ್ಲಿನ ದುರ್ಬಲತೆಯನ್ನು ಮತ್ತು ಅದನ್ನು ನಿಭಾಯಿಸುವಲ್ಲಿನ ಅಸಮರ್ಥತೆಯನ್ನು ನಾನು ಕಾಣುತ್ತಿದ್ದೇನೆ.

    ಒಂದು ಪರಿಸ್ಥಿತಿಯಿಂದ ಹೇಗೆ ಹೊರಬರಬೇಕು, ಅದಕ್ಕಾಗಿ ಏನನ್ನು ಮಾಡಬೇಕು ಎಂಬ ಬಗ್ಗೆ, ನನ್ನ ಅಜ್ಜಿಯಿಂದ ಮತ್ತು ತಂದೆಯಿಂದ ಬಾಪು ಬಗ್ಗೆ ಕೇಳಿದ ಹಲವಾರು ಕಥೆಗಳಿಂದ ಕಲಿತಿದ್ದೇನೆ. 1946ರ ಸುಮಾರಿಗೆ ಬಾಪು ಅವರು ಪುಣೆಯಲ್ಲಿ ಸರ್ದಾರ್ ಪಟೇಲ್ ಅವರ ಅರೋಗ್ಯವನ್ನು ನೋಡಿಕೊಳ್ಳುತ್ತಿದ್ದಾಗ, ನನ್ನ ತಂದೆ ಮತ್ತು ಅಜ್ಜಿಯವರು ದಕ್ಷಿಣ ಆಫ್ರಿಕಾದಿಂದ ಭೇಟಿ ನೀಡಲು ಬಂದಿದ್ದರು. ಆಗ ಬಾಪು ಅವರು ಪಟೇಲರ ಆರೋಗ್ಯವೇ ನನಗೆ ಪ್ರಧಾನ ಆದ್ಯತೆ ಎಂದು ಸ್ಟಷ್ಟಪಡಿಸಿದರು. ಒಂದು ದಿನ ಅವರು ಪಟೇಲರಿಗೆ ಔಷಧ ಕೊಡುವಲ್ಲಿ ನಿರತರಾಗಿದ್ದಾಗ, ಒಬ್ಬ ತರುಣ ಅಂದವಾಗಿ ಅಲಂಕರಿಸಲ್ಪಟ್ಟ ಚೀಲವನ್ನು ಹಿಡಿದು ಬಾಪು ಅವರಿಗಾಗಿ ಹುಡುಕುತ್ತಿದ್ದ. ಅದನ್ನು ಬಾಪು ಅವರಿಗೆ ಉಡುಗೊರೆಯಾಗಿ ನೀಡಲು ತಂದಿದ್ದೇನೆ, ಕಾಯಲು ನನ್ನ ಬಳಿ ಸಮಯವಿಲ್ಲ, ಹಾಗಾಗಿ ನೀವೇ ಇದನ್ನು ಅವರಿಗೆ ಕೊಟ್ಟುಬಿಡಿ ಎಂದು ನನ್ನ ತಂದೆಯ ಬಳಿ ಹೇಳಿದ. ಆ ಸಮಯದಲ್ಲಿ ನನ್ನ ತಂದೆಗೆ 12 ಅಥವಾ 13 ವರ್ಷದವರಾಗಿದ್ದು, ಬಾಪು ಅವರಿಗೆ ಉಡುಗೊರೆ ತಂದಿದ್ದರ ಕುರಿತು ಬಹಳ ಉತ್ಸುಕರಾಗಿದ್ದರು.

  

  ಬಾಪು ಚೀಲ ತೆಗೆದು ನೋಡಿದಾಗ, ಅದರಲ್ಲಿ ಬಳಸಿದ ಹಳೆಯ ಸ್ಯಾಂಡಲ್‌ಗಳು, ಹರಿದ ಬಟ್ಟೆಗಳು ತುಂಬಿತ್ತು. ಇದು ಬಹಳ ಅವಮಾನಕಾರಿಯಾಗಿತ್ತು. ಅಲ್ಲಿದ್ದ ಪ್ರತಿಯೊಬ್ಬರೂ ರೋಷದ ಪ್ರತಿಕ್ರಿಯೆ ನಿರೀಕ್ಷಿಸಿದ್ದರು. ಆದರೆ ಎಲ್ಲರೂ ಚಕಿತರಾಗುವಂತೆ ಬಾಪು ಜೋರಾಗಿ ನಗಾಡಿ, ಚಪ್ಪಾಳೆ ತಟ್ಟುತ್ತಾ ಹೇಳಿದರು ‘‘ನಾನು ಮೌಲ್ಯಯುತ ಉಡುಗೊರೆಯನ್ನು ಸ್ವೀಕರಿಸಿದ್ದೇನೆ’’ ಎನ್ನುತ್ತಾ, ನನ್ನ ತಂದೆಗೆ ‘‘ಇದನ್ನೊಯ್ದು ಗುಜರಿಗೆ ಹಾಕಿ ಮಾರಿ ಬಂದ ದುಡ್ಡನ್ನು ಹರಿಜನ ಫಂಡ್‌ಗೆ ಹಾಕು’’ ಎಂದು ಹೇಳಿದರು. ಮಾರನೇ ದಿನ ಒಂದು ಪ್ರಾರ್ಥನಾ ಸಭೆಯಿತು. ಅದರಲ್ಲಿ ತನಗೆ ನೀಡಿದ ಮೌಲ್ಯಯುತ ಉಡುಗೊರೆಗಾಗಿ ಬಾಪು ಆ ಯುವಕನಿಗೆ ಧನ್ಯವಾದ ಹೇಳಲು ಬಯಸಿದರು. ಬಾಪು ಅವರ ಅಹಿಂಸೆ ಆಚರಣೆಯನ್ನು ಮುರಿಯಲು ಈ ಉಡುಗೊರೆ ನೀಡಿ ಬಾಪುವಿನಿಂದ ಕೋಪೋದ್ರಿಕ್ತ ಪ್ರತಿಕ್ರಿಯೆಯನ್ನು ಆ ಯುವಕ ನಿರೀಕ್ಷಿಸಿದ್ದ. ಆದರೂ ಬಾಪು ಕೋಪಗೊಳ್ಳದೆ ಅವನಿಗೆ ಧನ್ಯವಾದ ಹೇಳಿದ್ದರಿಂದ ಯುವಕನೇ ಸಿಟ್ಟಾಗಿದ್ದನು.

    ಇದರಲ್ಲಿ ಇನ್ನೊಂದು ಸೂಕ್ತ ರೀತಿಯ ಆಸಕ್ತಿದಾಯಕ ಅಂಶವಿದೆ. 1948ರಲ್ಲಿ ಬಾಪು ಅವರ ಹತ್ಯೆಯ ನಂತರ, ನನ್ನ ಅಜ್ಜಿ ದಕ್ಷಿಣ ಆಫ್ರಿಕಾದ ಪತ್ರಿಕೆಗಳಲ್ಲಿ ಸುದ್ದಿಯನ್ನು ನೋಡಿದಾಗ ‘‘ಬಾಪುಗೆಂದು ಉಡುಗೊರೆಯಾಗಿ ಚಪ್ಪಲಿಗಳನ್ನು ತಂದ ವ್ಯಕ್ತಿ ಇವನೇ ಅಲ್ಲವೇ?’’ ಎಂದು ಅಪ್ಪನನ್ನು ಕೇಳಿದಳು. ಅವರಿಬ್ಬರೂ ನಾಥೂರಾಮ್ ಗೋಡ್ಸೆಯನ್ನು ಗುರುತಿಸಿದರು. ಆ ಸಿಟ್ಟು ಅವನಲ್ಲಿ ಹಾಗೆಯೇ ಬೆಳೆದು ಅವನನ್ನು ಎಲ್ಲಿಗೆ ಕರೆದೊಯ್ಯಿತು ನೋಡಿ. ಆದರೆ ಬಾಪುವಿನ ಗುಣ ಅವನ ಮೇಲೆ ಪರಿಣಾಮ ಬೀರಲಿಲ್ಲ. ನನ್ನ ಮೇಲೆ ದೊಡ್ಡ ಪರಿಣಾಮ ಬೀರಿದ ಕಥೆಗಳಲ್ಲಿ ಇದೂ ಒಂದು. ಇಂದಿನ ನನ್ನ ವಯಸ್ಸಿನಲ್ಲಿ ನನಗಿದು ಸಂಬಂಧಪಡುವಂತಿದ್ದು ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.

ಗಾಂಧಿಯಂತಹ ಹೆಸರಿನ ಜೊತೆಗೆ ಬದುಕುವುದು ಎಷ್ಟು ಕಷ್ಟ?

-ಅದು ದೊಡ್ಡ ಹೊರೆಯಾಗಿರುತ್ತದೆ. ಎಲ್ಲ ಸಂದರ್ಭಗಳಲ್ಲೂ ನೀವು ಆ ಹೆಸರಿನ ಗುಣಮಟ್ಟದ ನಿರೀಕ್ಷೆಯಂತೆ ಬದುಕಲಾಗುವುದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಗಿಂತ ಟೀಕೆ ಎನ್ನುವುದು ಬಹಳ ದೊಡ್ಡ ವಿಷಯವಾಗಿರುತ್ತದೆ. ಒಬ್ಬ ಮಹಾನ್ ವ್ಯಕ್ತಿಯ ವಂಶಸ್ಥನೆಂದೂ ಮತ್ತು ನಾನು ಅಂತಹ ಸಾಮರ್ಥ್ಯಗಳನ್ನು ಹೊಂದಿಲ್ಲವೆಂಬುದು ಅದೃಷ್ಟವಶಾತ್ ನಾನು ಗ್ರಹಿಸಿದ್ದೇನೆ. ಜನರು ನನ್ನನ್ನು ಟೀಕಿಸಿದರೂ, ಕನಿಷ್ಠ ನಾನು ಕಪಟ, ಸುಳ್ಳಿನ ಜೀವನ ನಡೆಸುತ್ತಿಲ್ಲವೆಂದು ನನಗೆ ತಿಳಿದಿದೆ. ಆದರೆ ನನ್ನ ಬಹತೇಕ ಸಂಬಂಧಿಕರಿಗೆ ಈ ಪರಂಪರೆ ಹೊರೆಯಾಗಿದೆ.

ಗಾಂಧಿಯನ್ ಸಿದ್ಧಾಂತದ ವಿರುದ್ಧ ಇರುವ ಸ್ನೇಹಿತರು, ಶಿಕ್ಷಕರು ಅಥವಾ ಇತರರೊಂದಿಗೆ ಒಡನಾಡುತ್ತೀರ?

-ಹೆಚ್ಚು ಇಲ್ಲ. ಆದರೆ ಕೆಲವು ಜನರು ತಮ್ಮ ಅಭಿಪ್ರಾಯವನ್ನು ಸ್ವಂತವಾಗಿ ಹೊಂದಿದವರಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ನಾನು ಇದನ್ನು ಹೆಚ್ಚು ಎದುರಿಸಬೇಕಾಯಿತು. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿಯಂತೂ ಈ ತರಹದ ನಿಂದನೆ ಅಪಾರವಾಗಿರುತ್ತದೆ. ಆಗ ನಾನು ಕ್ಷೋಭೆಗೊಳಗಾಗುತ್ತಿದ್ದೆ, ಹಿಂದಿರುಗಿ ಜವಾಬು ನೀಡಲು ಪ್ರಯತ್ನಿಸುತ್ತಿದ್ದೆ. ಆದರೆ ವರ್ಷಗಳ ನಂತರ ನಾನು ನನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದೆ ಎಂದು ಅರಿತೆ. ಹಾಗಾಗಿ ಇದಕ್ಕೆಲ್ಲಾ ಹೊಣೆ ಎಂದು ಅಂದುಕೊಳ್ಳುವುದನ್ನು ಬಿಟ್ಟುಬಿಟ್ಟೆ. ಏಕೆಂದರೆ ಕಡೆಯಲ್ಲಿ, ಬಾಪು ತೀರಿಕೊಂಡರು ಮತ್ತು ಅಗಲಿದರು. ಆದ್ದರಿಂದ ಅವರನ್ನು ನೀವು ಶ್ಲಾಘಿಸುತ್ತೀರಾ ಅಥವಾ ತೆಗಳುತ್ತೀರಾ ಎಂಬುದು ಅಪ್ರಸ್ತುತವೇ ಆಗಿದೆ. ವರ್ಷಗಳ ಹಿಂದೆ ಮೃತಪಟ್ಟವರ ಬಗ್ಗೆ ಕುಳಿತು ಚಿಂತಿಸುವುದರ ಬದಲಾಗಿ ನೀವು ನಿಮ್ಮ ಬದುಕಿನೊಂದಿಗೆ ಏನು ಮಾಡುವವರಿದ್ದೀರಾ, ನಿಮ್ಮ ದೇಶ ಮತ್ತು ನಿಮ್ಮ ಜನರೊಂದಿಗೆ ನೀವು ಏನು ಮಾಡುತ್ತಿರುವಿರಿ ಎಂಬುದು ಮುಖ್ಯವಾಗಿದೆ.

‘ಲೆಟ್ಸ್ ಕಿಲ್ ಗಾಂಧಿ’ ಪುಸ್ತಕವನ್ನು ಬರೆಯಲು ಯಾವ ಪ್ರೇರಣೆಗೊಳಗಾದಿರಿ?

-ಬಾಪುವಿನ ಹತ್ಯೆಯನ್ನು ನಾನು ಸಮರ್ಥಿಸುತ್ತಿದ್ದೇನೆ ಎಂಬಂತಹ ಪಿಸುಮಾತಿನ ಪ್ರಚಾರವು ಆರಂಭದಿಂದ ಮುಂದುವರಿದಂತೆ, ನಾನೇ ಗೊಂದಲಕ್ಕೊಳಗಾಗಿಬಿಟ್ಟಿದ್ದೆ. ಕಾಲಾನಂತರದಲ್ಲೂ ಈ ಆರೋಪಗಳು ಮತ್ತಷ್ಟು ಗಟ್ಟಿಯಾಗಿ ಹಾಗೂ ಗುಂಪಾಗಿ ನಡೆಸಲ್ಪಟ್ಟವು. ಇಂಥ ವಿಭಿನ್ನ ಕಥೆಗಳಿಂದ ನಾನು ಪ್ರಬುದ್ಧನಾಗಿದ್ದೇನೆ. ಈ ಸುಳ್ಳುಗಳು ನಾನು ವ್ಯಗ್ರನಾಗುವಂತೆ ಮಾಡಿದ್ದವು. ಮತ್ತು ಇದನ್ನು ಯಾರೊಬ್ಬರೂ ಕೂಡ ಕೌಂಟರ್ ಮಾಡಲಿಲ್ಲ. ಇದರ ಫಲವಾಗಿ, ಸರಿಸುಮಾರು ಎರಡು ತಲೆಮಾರುಗಳು ಈ ಸುಳ್ಳುಗಳನ್ನು ಸತ್ಯಗಳೆಂದು ಒಪ್ಪಿಕೊಳ್ಳಲು ಆರಂಭಿಸಿದೆ. ಇದು ಎಲ್ಲಿಯವರೆಗೆ ಹೋಗಿದೆಯೆಂದರೆ, ಅವರು ಈ ಕೊಲೆಗಾರರಿಗಾಗಿ ದೇವಸ್ಥಾನಗಳನ್ನು ಕಟ್ಟಲು ಬಯಸುತ್ತಿದ್ದಾರೆ. ಐ ವಾಸ್ ಆ್ಯಂಗ್ರಿ ಆ್ಯಂಡ್ ಹಿಸ್ ಬುಕ್ ಬಿಕೇಮ್ ಮೈ ಔಟ್‌ಲೆಟ್.

ಮಹಾತ್ಮಾ ಗಾಂಧಿಯವರು ಇಂದಿನ ಮಹಿಳಾ ಸಬಲೀಕರಣವನ್ನು ನೋಡಿ ಖುಷಿಪಡುತ್ತಿದ್ದರು. ಈ ಬಗ್ಗೆ ಅವರಲ್ಲಿ ಮೋಸವಿರಲಿಲ್ಲ. ಅವರಿಗೆ ಈ ಕ್ಷಣಗಳು ಸಂತಸ ನೀಡುತ್ತಿತ್ತು.

ಗಾಂಧಿಯವರನ್ನು ಕೊಂದ ಸಿದ್ಧಾಂತವು ದಿನೇದಿನೇ ಬೆಳೆಯುತ್ತಿದೆ ಅಲ್ಲವೇ?

-ಇದು ಚಕ್ರದ ರೀತಿಯ ಅಂದರೆ ಸೈಕ್ಲಿಕ್ ವಿದ್ಯಮಾನವಾಗಿದೆ. ಮತಾಂಧತೆ ಮತ್ತು ಶಾಂತಿವಾದಿ ಉದಾರವಾದದ ಚಕ್ರಗಳ ಮೂಲಕ ಮಾನವತ್ವವು ಸಾಗುತ್ತಿದೆ. ಕೆಲವು ಘಟನೆಗಳಲ್ಲಿ ಈ ಅಸೂಕ್ಷ್ಮತೆಯು ಕ್ರೂರತೆಯತ್ತ ಕೊಂಡೊಯ್ಯುತ್ತಿದೆ. ಕೆಲವರ ಕುರಿತಾಗಿ ನೀವು ಸಹಾನುಭೂತಿ ಹೊಂದಿಲ್ಲದಿದ್ದರೆ ಅದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಾವೆಲ್ಲರೂ ಸಹ ನಮ್ಮದೇ ಆದ ಸಹಾನುಭೂತಿಯ ಮಾನದಂಡ ಹೊಂದಿರುತ್ತೇವೆ. ನಾವು ಒಂದು ಕೊಲೆ ನಡೆಯುವುದನ್ನು ವೀಡಿಯೊ ತೆಗೆಯಬಹುದು, ಆದರೆ ಅದಕ್ಕೆ ನಾವು ಹೊಣೆಗಾರರಲ್ಲ ಎಂದು ಭಾವಿಸುತ್ತಿರುವುದು ಸಮಾಜದಲ್ಲಿನ ಅಪಾಯಕಾರಿ ಲಕ್ಷಣವಾಗಿದ್ದು, ಇದು ವಾಸ್ತವವೂ ಆಗಿದೆ. ಈ ಮನಸ್ಥಿತಿಯು ಕೊಲೆ ನಡೆಯುತ್ತಿರುವ ಕೃತ್ಯದ ಆ ಕ್ಷಣದ ಕ್ರೂರತೆಗೂ, ಮೃಗೀಯತೆಗೂ ಮೀರಿದ್ದಾಗಿದೆ.

ನಿಮ್ಮ ಅಭಿಪ್ರಾಯದ ಪ್ರಕಾರ ಈ ಎಲ್ಲದರ ಹಿಂದೆ ಕಾರಣವೇನಿರಬಹುದು?

-ನಮ್ಮ ಎಳೆಯ ವಯಸ್ಸಿನಲ್ಲೇ ನಮ್ಮಲ್ಲಿ ಜಾತೀಯತೆ, ಪೂರ್ವಗ್ರಹಗಳು ಬಿತ್ತಲ್ಪಡುತ್ತವೆ. ಈ ಪೂರ್ವಗ್ರಹಗಳು ನಂತರ ಎಲ್ಲಾ ಅಸೂಕ್ಷ್ಮತೆ ಮತ್ತು ಅಮಾನವೀಯ ನಡವಳಿಕೆಗೆ ಕಾರಣವಾಗುತ್ತವೆ. ಮೂಲದಲ್ಲಿ ನೀವು ಉಳಿದವರಿಗಿಂತ ಉತ್ತಮರು ಎಂದು ನಂಬುತ್ತೀರಿ. ಸಮಾಜದ ಈ ಎಲ್ಲ ಬಿರುಕುಗಳು ಹೆಚ್ಚು ಎದ್ದುಕಾಣಲು ಆರಂಭವಾಗುತ್ತದೆ. ನಮ್ಮದೇ ದೇಶದಲ್ಲೇ ಇರುವ ಅಸಮಾನತೆಯನ್ನು ನೋಡಿದರೆ, ವಿವಿಧ ವರ್ಗಗಳಿಗೆ ವಿಭಿನ್ನ ರೀತಿಯ ಸೌಲಭ್ಯಗಳಿವೆ. ಅದು ಲಿಂಗ ಅಸಮಾನತೆಯಿರಲಿ, ಆರ್ಥಿಕ ಸ್ಥಾನಮಾನವಿರಲಿ ಅಥವಾ ಧರ್ಮವೇ ಆಗಿರಲಿ ಇಂತಹ ಹಲವಾರು ಬಿರುಕುಗಳಿವೆ. ಹಾಗಾದರೆ ನಾವು ನಿಜವಾಗಿಯೂ ಎಲ್ಲಿ ಸೇರಲಿದ್ದೇವೆ? ಒಂದು ದೇಶದ ಜೀವನಕ್ಕೆ ಹೋಲಿಸಿದಾಗ, ಅದರ ಭಾಗವೇ ಆದ ನಮ್ಮ ಜೀವನದ 70 ವರ್ಷಗಳು ಅತಿ ಕಡಿಮೆ ಅವಧಿಯದ್ದಾಗಿದೆ.

ಯಾವ ಒತ್ತಡ ನಿಮ್ಮನ್ನು ಗೋಡ್ಸೆಯ ವಂಶಸ್ಥ ಗೋಪಾಲ್ ಗೋಡ್ಸೆಯನ್ನು ಭೇಟಿ ಮಾಡುವಂತೆ ಮಾಡಿತು?

    -ಮೊದಲಿಗೆ ನನಗೆ ಇಷ್ಟವಿರಲಿಲ್ಲ. 70ರ ದಶಕದ ಆರಂಭದಲ್ಲಿ ನನ್ನ ಅಜ್ಜಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದರು. ಆಗ ಆತನನ್ನು ಜೈಲಿಂದ ಬಿಡುಗಡೆ ಮಾಡಲಾಗಿತ್ತು. ಅವರ ಕುಟುಂಬವು ಸಾಮಾಜಿಕ ಬಹಿಷ್ಕಾರಕ್ಕೊಳಗಾದ ರೀತಿಯಲ್ಲಿ ಬದುಕುತ್ತಿರುವುದನ್ನು ಕೇಳಿ ತಿಳಿದೆವು. ಅವರ ಸ್ಥಿತಿ ನಿಜವಾಗಿ ಉತ್ತಮವಾಗಿರಲಿಲ್ಲ. ನನ್ನ ಅಜ್ಜಿ ಆತನನ್ನು ಭೇಟಿ ಮಾಡುವುದೆಂದು ನಿರ್ಧರಿಸಿದರು. ಆಕೆಯ ಪ್ರಕಾರ, ನಾವು ಯಾವುದೇ ದ್ವೇಷವನ್ನು ಹೊಂದಿಲ್ಲ ಎಂಬುದಾಗಿ ಹೇಳಲು ಆ ಭೇಟಿಯು ಒಂದು ಮಾರ್ಗವಾಗಿತ್ತು. ಪಶ್ಚಾತ್ತಾಪ ಇಲ್ಲದ ಒಬ್ಬನಿಗೆ ನಾವು ಯಾಕೆ ಕ್ಷಮಿಸುತ್ತಿದ್ದೇವೆ ಎಂಬುದು ನನಗರ್ಥವಾಗುತ್ತಿರಲಿಲ್ಲ. ಆದರೂ ನಾವು ಹೋಗಿದ್ದೆವು ಮತ್ತು ಅವರೂ ಕೆಲವು ಸಂದರ್ಭಗಳಲ್ಲಿ ನಮ್ಮ ಮನೆಗೆ ಬಂದರು. ಈ ಹಿಂದೆ ವಾಸ್ತವದಲ್ಲಿ, ನನ್ನ ಅಜ್ಜ ಮತ್ತು ಅವರ ಸಹೋದರರು ಗೋಡ್ಸೆ ಮೇಲಿನ ಮರಣದಂಡನೆ ಶಿಕ್ಷೆಯನ್ನು ಹಿಂದೆೆಗೆದುಕೊಳ್ಳಬೇಕೆಂದು ಆಗಿನ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಇದು ಅನ್-ಗಾಂಧಿಯನ್ ಎಂಬುದು ಅವರ ಅಭಿಪ್ರಾಯವಾಗಿತ್ತು.

ನೀವು ಯಾವಾಗಲೂ ಮರಣ ದಂಡನೆಯ ವಿರುದ್ಧವಾಗಿದ್ದೀರಿ. ಯಾಕೂಬ್ ಮೆನನ್‌ರ ಮರಣದಂಡನೆ ಶಿಕ್ಷೆಗೂ ಸಹ ಸ್ಟೇ ತರಲಿಚ್ಛಿಸಿದ್ದೀರಿ. ಈ ರಕ್ತದಾಹವು ನಮ್ಮ ದೇಶವನ್ನು ದುರಹಂಕಾರದ ಅವ್ಯವಸ್ಥೆಗೆ ಕೊಂಡೊಯ್ಯುತ್ತಿದೆ ಎಂದು ನಿಮಗನಿಸುತ್ತಿದೆಯೇ?

    -ಹೌದು, ‘ಕಣ್ಣಿಗೆ ಕಣ್ಣು ’ ಎನ್ನುವುದು ಮಾನವ ಸ್ವಭಾವವಾಗಿದೆ. ಶಾಂತಿಯಲ್ಲಿ ವಿಶ್ವಾಸವಿಡುವ ದೇಶವೊಂದರ ನಾಗರಿಕ ಸಮಾಜದಲ್ಲಿದ್ದೇವೆ ಎಂದು ನಾವು ಹೆಮ್ಮೆಪಡುತ್ತೇವೆ. ಆದರೆ ಇನ್ನೂ ರಕ್ತಕ್ಕಾಗಿ ಅಳುತ್ತೇವೆ. ನನಗೆ ಯಾಕೂಬ್‌ನಲ್ಲಿ ಪ್ರೀತಿಯಿಲ್ಲ. ನಾನು ಬಾಂಬ್ ಸ್ಫೋಟದ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದೇನೆ. ಅವರು ಕಾರಣರಾದ ದುರಂತದ ಬಗ್ಗೆ ನನಗೆ ತಿಳಿದಿದೆ. ಈ ರೀತಿಯ ವಿಪರೀತದ ಕಲ್ಪನೆಯನ್ನು ನನಗೆ ಊಹಿಸಲೂ ಸಾಧ್ಯವಾಗಿಲ್ಲ. ಹಾಗಾಗಿ ಅವರ ಬಗ್ಗೆ ನನಗೆ ಯಾವುದೇ ಸಹಾನುಭೂತಿ ಇಲ್ಲ. ಆದರೂ ಸಹ ಈ ಕ್ಯಾಪಿಟಲ್ ಪನಿಷ್‌ಮೆಂಟ್ ಎನ್ನುವುದು ಅನಾಗರಿಕವಾಗಿದೆ. ಇದು ನ್ಯಾಯವಲ್ಲ, ಪ್ರತೀಕಾರದ ರೀತಿಯಾಗಿದೆ. ಇದರಿಂದ ದುರಂತ ಘಟನೆಯ ಸಂತ್ರಸ್ತ ಜನರಿಗೆ ಏನು ಫಲವಿದೆ?

ದಂಡಿ ಮಾರ್ಚನ್ನು ಪುನಃ ಜಾರಿಗೆ ತರಲು ನೀವು ಏಕೆ ನಿರ್ಧರಿಸಿದ್ದೀರಿ?

-ದಂಡಿ ಮಾರ್ಚ್ ನನಗೆ ಯಾವಾಗಲೂ ಸವಾಲಿನಂತೆ ಕಂಡಿದೆ. ಏಕೆಂದರೆ, ನನ್ನ ಮೂರು ತಲೆಮಾರುಗಳ ಪೂರ್ವಜರು ಈ ಮಾರ್ಗದಲ್ಲಿ ನಡೆದಿದ್ದಾರೆ. ಇದು ಎಂದಿಗೂ ನನ್ನನ್ನಾಕರ್ಷಿಸಿದೆ ಮತ್ತು ಸವಾಲಾಗಿ ಸ್ವೀಕರಿಸುವಂತೆ ಮಾಡಿದೆ.

‘ಕಣ್ಣಿಗೆ ಕಣ್ಣು ’ ಎನ್ನುವುದು ಮಾನವ ಸ್ವಭಾವವಾಗಿದೆ. ಶಾಂತಿಯಲ್ಲಿ ವಿಶ್ವಾಸವಿಡುವ ದೇಶವೊಂದರ ನಾಗರಿಕ ಸಮಾಜದಲ್ಲಿದ್ದೇವೆ ಎಂದು ನಾವು ಹೆಮ್ಮೆಪಡುತ್ತೇವೆ. ಆದರೆ ಇನ್ನೂ ರಕ್ತಕ್ಕಾಗಿ ಅಳುತ್ತೇವೆ. ನನಗೆ ಯಾಕೂಬ್‌ನಲ್ಲಿ ಪ್ರೀತಿಯಿಲ್ಲ. ನಾನು ಬಾಂಬ್ ಸ್ಫೋಟದ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದೇನೆ. ಅವರು ಕಾರಣರಾದ ದುರಂತದ ಬಗ್ಗೆ ನನಗೆ ತಿಳಿದಿದೆ. ಈ ರೀತಿಯ ವಿಪರೀತದ ಕಲ್ಪನೆಯನ್ನು ನನಗೆ ಊಹಿಸಲೂ ಸಾಧ್ಯವಾಗಿಲ್ಲ. ಹಾಗಾಗಿ ಅವರ ಬಗ್ಗೆ ನನಗೆ ಯಾವುದೇ ಸಹಾನುಭೂತಿ ಇಲ್ಲ.

Writer - ಆಶಾ ಸಿಂಗ್ ತುಮಕೂರು

contributor

Editor - ಆಶಾ ಸಿಂಗ್ ತುಮಕೂರು

contributor

Similar News