ಪಜೀರಿನಲ್ಲಿ ಪ್ರತಿದಿನ ಬೆಲ್ಲ ಹುಡಿಮಾಡಿ ಮರ, ಗಿಡಗಳ ಬಳಿ ಚೆಲ್ಲುವ ಕೋದಂಡಪಾಣಿಯ ಬಗ್ಗೆ ಗೊತ್ತಿದೆಯೇ?
ಇವರ ಹೆಸರು ಕೋದಂಡಪಾಣಿ.. ತಮಿಳುನಾಡಿನ ಪೊಳ್ಳಾಚಿಯವರು... ವಯಸ್ಸು ಸುಮಾರು ಅರವತ್ತೈದರ ಆಜುಬಾಜು... ಅಜಾನುಬಾಹು, ಬಕ್ಕತಲೆ, ಪರಮ ದೈವ ಭಕ್ತ. ಆದರೆ ತನ್ನ ನಂಬಿಕೆಯೊಂದೇ ಶ್ರೇಷ್ಟವೆಂದು ಬಗೆದವರಲ್ಲ. ಬಂಟ್ವಾಳ ತಾಲೂಕಿನ ಪಜೀರು ಗ್ರಾಮದಲ್ಲಿ ತಮಿಳುನಾಡಿನ ಕಟ್ಟಡ ನಿರ್ಮಾಣ ಕಂಪೆನಿಯೊಂದಕ್ಕೆ ಕಚ್ಚಾ ವಸ್ತು ಸಪ್ಲೈ ಮಾಡುವ ಘಟಕವೊಂದರಲ್ಲಿ ಮ್ಯಾನೇಜರ್ ಆಗಿ ದುಡಿಮೆ.
ವಿಷಯಕ್ಕೆ ಬರುತ್ತೇನೆ…..
ಬೀದಿ ನಾಯಿಗಳಿಗೆ, ಹಕ್ಕಿಗಳಿಗೆ ಉಣಿಸುವವರನ್ನು ನೀವು ನೋಡಿರಬಹುದು. ಆದರೆ ಇವರು ತನ್ನ ಜೀವ ಪ್ರೇಮವನ್ನು ಅದರಾಚೆಗೂ ವಿಸ್ತರಿಸಿದವರು. ಪ್ರತೀ ದಿನ ಮುಂಜಾನೆದ್ದು ಅರ್ಧ ಕಿಲೋ ಬೆಲ್ಲವನ್ನು ಹುಡಿಮಾಡಿ ಮರಗಿಡಗಳ, ಪೊದೆಗಳ, ಪೊಟರೆಗಳ ಬಳಿ ಹೋಗಿ ಬೆಲ್ಲದ ಹುಡಿಯನ್ನು ಅಲ್ಲಲ್ಲಿ ಹಾಕುತ್ತಾ ಹೋಗುತ್ತಾರೆ. ಯಾಕೆಂದು ಕೇಳಿದರೆ " (ಉರುಂಬುಕ್ಕು ಚಾಮಿ) ಇರುವೆಗಳಿಗೆ" ಎನ್ನುತ್ತಾರೆ. “ರೀ ಸ್ವಾಮೀ,ನೀವು ಆಹಾರ ಕೊಡದಿದ್ದರೆ ಇರುವೆಗಳು ಹಸಿವಿನಿಂದ ಸಾಯುತ್ತೇನ್ರೀ.. ಎಂದರೆ "ಹೇ.... ಹಾಗಲ್ಲಾ ಸಾರ್ , ಸೃಷ್ಟಿಕರ್ತ ಎಲ್ಲಾ ಜೀವಿ ಚರಾಚರಗಳಿಗೂ ಉಣಿಸುತ್ತಾನೆ. ಆತ ಇಲ್ಲಿನ ಕೆಲವು ಇರುವೆಗಳಿಗೆ ನನ್ನ ಮೂಲಕ ಉಣಿಸುತ್ತಿದ್ದಾನೆಂದು ನಾನು ನಂಬಿರುವೆ ಸಾರ್” ಎಂದವರು ಹೇಳುತ್ತಾರೆ.
ದಿನವೊಂದಕ್ಕೆ ಮೂಕ ಪ್ರಾಣಿಗಳಿಗೆ ಉಣಿಸಲು ನೂರು ರೂಪಾಯಿ ಖರ್ಚು ಮಾಡುವ ಇವರು ನಾಯಿಗಳಿಗೆ ಬಿಸ್ಕತ್ತು, ಕಾಗೆಗಳಿಗೆ ಮತ್ತಿತರ ಪಕ್ಷಿಗಳಿಗೆ ರೊಟ್ಟಿ ಚೂರು, ಪಾರಿವಾಳಗಳಿಗೆ ಅಕ್ಕಿ, ಗೋಧಿ, ಕಾಳು… ಹೀಗೆ ತನ್ನ ದಿನಚರಿ ಪ್ರಾರಂಭಿಸುತ್ತಾರೆ. ಪ್ರತೀ ದಿನ ಮೂಕಪ್ರಾಣಿ ಪಕ್ಷಿಗಳಿಗೆ ಉಣಿಸಲೆಂದೇ ತನ್ನ ಒಂದು ಗಂಟೆ ಮೀಸಲಿಡುತ್ತಾರೆ.
ಅಂದ ಮಾತ್ರಕ್ಕೆ ಇವರ ಕರುಣೆ ಕೇವಲ ಪ್ರಾಣಿಗಳಿಗೆ ಮಾತ್ರ ಮೀಸಲಲ್ಲ. ಭಿಕ್ಷುಕರಿಗೆ ಮತ್ತು ಅಸಹಾಯಕರಿಗೆಂದೂ ಒಂದಷ್ಟು ದುಡ್ಡು ಪ್ರತಿನಿತ್ಯ ಖರ್ಚು ಮಾಡುತ್ತಾರೆ.
ಪಜೀರಿಗರು ಇವರ ಜೀವಕಾರುಣ್ಯವನ್ನು ಪ್ರತಿನಿತ್ಯ ನೋಡುತ್ತಿರುತ್ತಾರೆ. ಇವರು ಮುಂಜಾನೆ ಒಂದು ತಂಗೀಸಿನ ಕೈ ಚೀಲ ಹಿಡಿದುಕೊಂಡು ಬಂದಾಕ್ಷಣ ಬೀದಿನಾಯಿಗಳು ಇವರ ಸುತ್ತ ಇವರ ಬಾಡಿಗಾರ್ಡ್ ಗಳಂತೆ ತಿರುಗಾಡುತ್ತವೆ. ನಾಯಿಗಳಿಗೆ ನೆಲದ ಮೇಲೆ ತಿಂಡಿಗಳನ್ನು ಹಾಕುತ್ತಾರೆ. ಆಶ್ಚರ್ಯವೇನೆಂದರೆ ನಾಯಿಗಳು ಮಾತ್ರವಲ್ಲದೇ ಕಾಗೆಗಳು ಮತ್ತಿತರ ಪಕ್ಷಿಗಳೂ ಇವರ ತಲೆಯ ಸುತ್ತ ಹಾರುತ್ತಿರುವ ದೃಶ್ಯಗಳೂ ನನ್ನೂರಿನವರಿಗೆ ಪ್ರತಿನಿತ್ಯದ ನೋಟ.
ಪಕ್ಷಿಗಳಿಗೆಲ್ಲಾ ತುಸು ಎತ್ತರದ ಅಂದರೆ ನಾಯಿಗಳು ಏರಲಾರದ ಸ್ಥಳದಲ್ಲಿ ತಿನಿಸು ಹಾಕುತ್ತಾರೆ.
ಹಸಿವನ್ನು ಅನುಭವಿಸಿ ಗೊತ್ತಿರುವ ಇವರಿಗೆ ರಮಝಾನ್ ಉಪವಾಸವೆಂದರೆ ವಿಶೇಷ ಗೌರವ. ಮುಂದಿನ ರಮಝಾನ್‌ನಿಂದ ಪ್ರತೀ ವರ್ಷ ಪಜೀರು ಮಸೀದಿಯಲ್ಲಿ ಒಂದು ದಿನದ ಇಫ್ತಾರ್ ನ ವ್ಯವಸ್ಥೆ ಮಾಡುವೆ ಎಂದು ಹೇಳುತ್ತಾರೆ.
ಈ ಕೋದಂಡಪಾಣಿ ಹೇಳುತ್ತಾರೆ " ಸಾರ್, ಹಸಿದವರ ಹಸಿವು ತಣಿಸುವದಕ್ಕಿಂತ ಪುಣ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ"
ಇವರ ಪುತ್ರನೋರ್ವ ಇಂಜಿನಿಯರಿಂಗ್ ಪಾಸಾಗಿ ಉನ್ನತ ಹುದ್ದೆಗೇರಿದ ಬಳಿಕ ಬಡ ವಿದ್ಯಾರ್ಥಿಗಳಿಗೆ ತನ್ನ ಕೈಲಾದ ಸಹಾಯ ಮಾಡುವುದನ್ನೂ ರೂಡಿಸಿಕೊಂಡಿದ್ದಾರೆ. ಸ್ವತಃ ನನ್ನಲ್ಲೇ ಅನೇಕ ಬಾರಿ ಹೇಳಿದ್ದಾರೆ "ಸಾರ್, ಯಾರಾದರೂ ಬಡ ವಿದ್ಯಾರ್ಥಿಗಳು ಫೀಸು ಕಟ್ಟಲಾರದೇ, ಪುಸ್ತಕ ಖರೀದಿಸಲಾರದೇ ಶಾಲೆ ತೊರೆಯುತ್ತಿದ್ದರೆ ತಿಳಿಸಿ. ನಾನು ತುಸು ಸಹಾಯ ಮಾಡುವೆ."
ನೋಡಲು ಓರ್ವ ಯಕಶ್ಚಿತ್ ಕೂಲಿಯಾಳುವಿನಂತೆ ಕಾಣುವ ಇವರಲ್ಲಿ ಇವರ ಕಾಳಜಿಯ ಬಗ್ಗೆ ಕೇಳಿದರೆ "ಸಾರ್, ಈ ಜೀವನ ನೀರ ಮೇಲಿನ ಗುಳ್ಳೆಯಂತೆ.. ಇರುವಷ್ಟು ದಿನ ನಮ್ಮ ಕೈಲಾದ ಮಟ್ಟಿಗೆ ಒಳಿತನ್ನು ಮಾಡೋಣ ಸಾರ್.. ಬರುವಾಗ ಯಾರೂ ಏನೂ ತಂದಿಲ್ಲ, ಹೋಗುವಾಗ ಕೊಂಡೊಯ್ಯುವುದೂ ಇಲ್ಲ ಸಾರ್.
ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದೇನೆ, ಅವರಿಗಾಗಿ ನಾನೇನೂ ಕೂಡಿಡಬೇಕಿಲ್ಲ ಸಾರ್ " ಎನ್ನುತ್ತಾರೆ.
ಇಂತಹವರ ಸಂತತಿ ಹೆಚ್ಚಾಗಲಿ ಎಂದು ಹಾರೈಸೋಣ.