ಕಾರ್ಮಿಕರ ಹಕ್ಕುಗಳು ಬಾಯ್ಮಾತಿಗಷ್ಟೇ ಸೀಮಿತ
ಪ್ರಸಕ್ತ ವಲಸೆ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಎಲ್ಲಾ ರೀತಿಯ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುವುದೇ ಈ ಸಮಸ್ಯೆಗೆ ಇರುವ ನೈಜ ಪರಿಹಾರವಾಗಿದೆ. ಹೀಗಾಗಿ ಕಾರ್ಮಿಕ ಮಾರುಕಟ್ಟೆಯ ವಿಭಜನೆ ದುರ್ಬಲಗೊಂಡಲ್ಲಿ ಹಾಗೂ ಕಾರ್ಮಿಕ ಮಾರುಕಟ್ಟೆಯಲ್ಲಿ ಕಾರ್ಮಿಕರು (ಸ್ಥಳೀಯ ಹಾಗೂ ವಲಸಿಗ) ನ್ಯಾಯಯುತವಾದ ಹಾಗೂ ಸರಿಸಮಾನವಾದ ವೇತನ, ಸೌಲಭ್ಯವನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ. ಇದು ಸ್ಥಳೀಯ ಹಾಗೂ ವಲಸಿಗ ಕಾರ್ಮಿಕರ ನಡುವಿನ ನ್ಯಾಯಯುತವಲ್ಲದ ಸ್ಪರ್ಧೆಯನ್ನು ಕೂಡಾ ದುರ್ಬಲಗೊಳಿಸಲಿದೆ
ಗುಜರಾತ್ ರಾಜ್ಯವು ಅತ್ಯಧಿಕ ಸಂಖ್ಯೆಯ ವಲಸಿಗ ಕಾರ್ಮಿಕರನ್ನು ಬರಮಾಡಿಕೊಳ್ಳುವ ರಾಜ್ಯಗಳಲ್ಲೊಂದಾಗಿದೆ. ಗುಜರಾತ್‌ನಲ್ಲಿ ಅವರು ಕೃಷಿ, ಇಟ್ಟಿಗೆ ಗೂಡುಗಳು, ನಿರ್ಮಾಣ ಕಾಮಗಾರಿ, ಉಪ್ಪು ತಯಾರಿಕೆಯ ಗದ್ದೆಗಳು ಹಾಗೂ ಮನೆಗೆಲಸ, ಚಿಕ್ಕಪುಟ್ಟ ಸೇವೆಗಳು ಮತ್ತು ವ್ಯಾಪಾರಗಳು (ಆಹಾರ ಮತ್ತು ಬೀದಿ ವ್ಯಾಪಾರ) ದಂತಹ ಕುಶಲತೆರಹಿತ ಅಥವಾ ಅರೆಕುಶಲತೆಯ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಾರೆ. ಜವಳಿ ಹಾಗೂ ಉಡುಪುಗಳು, ಎಂಬ್ರಾಯಿಡರಿ, ವಜ್ರ ಕತ್ತರಿಸುವಿಕೆ (ಡೈಮಂಡ್ ಕಟ್ಟಿಂಗ್), ಪಾಲಿಶಿಂಗ್, ಸಣ್ಣ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಹಾಗೂ ಸಣ್ಣ ಮತ್ತು ದೊಡ್ಡ ಕಾರ್ಖಾನೆಗಳಲ್ಲಿ ವಲಸೆ ಕಾರ್ಮಿಕರು ಗಣನೀಯ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ.
ಈ ಕಾರ್ಮಿಕರಲ್ಲಿ ಹೆಚ್ಚಿನವರು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಬಿಹಾರ, ಉತ್ತರಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ಛತ್ತೀಸ್‌ಗಢ, ಅಸ್ಸಾಂ ಹಾಗೂ ಕರ್ನಾಟಕ ರಾಜ್ಯಗಳ ಕಾರ್ಮಿಕರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಸಾಧ್ಯವಿದ್ದಷ್ಟು ಕಡಿಮೆ ದರದ ಕೂಲಿಯಲ್ಲಿ ದುಡಿಯಲು ಸಿದ್ಧರಿರುವ ಕಾರ್ಮಿಕರನ್ನು ಸಂಪಾದಿಸಲು, ಮಾಲಕರು ಗುತ್ತಿಗೆದಾರರನ್ನು ಅನತಿ ದೂರದ ಪ್ರದೇಶಗಳಿಗೆ ಕಳುಹಿಸಿಕೊಡುತ್ತಾರೆ. ಉದಾಹರಣೆಗೆ, ಗುಜರಾತ್‌ನಲ್ಲಿ ಬೃಹತ್ ಕೈಗಾರಿಕೋದ್ಯಮಿಯೊಬ್ಬರು ಪ್ರವರ್ತಕರಾಗಿರುವ ನೂತನ ಪಟ್ಟಣ ನಿವೇಶನವೊಂದನ್ನು ಅಸ್ಸಾಂನ ಕಾರ್ಮಿಕರು ನಿರ್ಮಿಸಲಿದ್ದಾರೆ. ಅಚ್ಚರಿಯೆಂದರೆ, ಗುಜರಾತ್‌ನಿಂದ ಆಗಮಿಸುವ ವಲಸಿಗ ಕಾರ್ಮಿಕರ ಬಗ್ಗೆ ಯಾವುದೇ ದತ್ತಾಂಶಗಳು ಗುಜರಾತ್ ಸರಕಾರದ ಬಳಿಯಿಲ್ಲ. ಔಪಚಾರಿಕವಾಗಿ, ಈ ಸಂಖ್ಯೆಯು 40 ಲಕ್ಷದಿಂದ ಒಂದು ಕೋಟಿಯವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಕಾರ್ಮಿಕ ಮಾರುಕಟ್ಟೆಯನ್ನು ವಿಭಜಿಸುವುದು ಹಾಗೂ ಸುಲಭವಾಗಿ ಶೋಷಣೆಗೊಳಗಾಗಬಲ್ಲ ವಲಸಿಗ ಕಾರ್ಮಿಕರಿಗಾಗಿ ಪ್ರತ್ಯೇಕ ಕಾರ್ಮಿಕ ಮಾರುಕಟ್ಟೆಯನ್ನು ಸೃಷ್ಟಿಸುವುದು ದೇಶಾದ್ಯಂತ ಮಾಲಕರು ಅನುಸರಿಸುತ್ತಿರುವ ಸಾಮಾನ್ಯ ಕಾರ್ಯತಂತ್ರವಾಗಿದೆ. ವಲಸಿಗ ಕಾರ್ಮಿಕರು ಕಡಿಮೆ ವೇತನವನ್ನು ಗಳಿಸುತ್ತಾರೆ, ಓವರ್‌ಟೈಮ್ ಸೌಲಭ್ಯವಿಲ್ಲದೆ ದೀರ್ಘ ತಾಸುಗಳವರೆಗೆ ದುಡಿಯುತ್ತಾರೆ ಹಾಗೂ ಹೆಚ್ಚುಕಮ್ಮಿ ಯಾವುದೇ ರಜೆ ಅಥವಾ ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ. ಲಕ್ಷಾಂತರ ಕೌಶಲ್ಯರಹಿತ ಹಾಗೂ ವಲಸಿಗ ಕಾರ್ಮಿಕರು ತಾತ್ಕಾಲಿಕವಾಗಿ ನಿರ್ಮಿಸಿದ ಜೋಪಡಿಗಳಲ್ಲಿ ಅಥವಾ ರಸ್ತೆಗಳ ಮೇಲೆ, ಕೊಳೆಗೇರಿಗಳಲ್ಲಿ ಹಾಗೂ ಪೌರಾಡಳಿತ ಸಂಸ್ಥೆಗಳ ಸೇವೆ ಲಭ್ಯವಾಗದ ಅಕ್ರಮ ನಿವೇಶನಗಳಲ್ಲಿ ವಾಸವಾಗಿದ್ದಾರೆ. ಈ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಮರಳಿದಾಗ ತಮ್ಮ ಪರಿಸ್ಥಿತಿಯನ್ನು ಸುಧಾರಿಸಲು ಅಥವಾ ಇತ್ತ ಗುಜರಾತ್‌ನಲ್ಲಿ ನೆಮ್ಮದಿಯಿಂದ ಬದುಕಲಾದರೂ ಸಾಕಷ್ಟು ಹಣ ಉಳಿತಾಯ ಮಾಡಲು ಇವರಿಗೆ ಸಾಧ್ಯವಾಗುವುದಿಲ್ಲ.
ಒಂದಿಷ್ಟು ಶಿಕ್ಷಣ ಹಾಗೂ ಕುಶಲತೆಯಿರುವ ಅರೆಕುಶಲ ಕಾರ್ಮಿಕರು (ವಜ್ರ ಕಟ್ಟಿಂಗ್, ವಿದ್ಯುತ್ ಬಟ್ಟೆಗಿರಣಿಗಳು ಹಾಗೂ ಕಾರ್ಖಾನೆಗಳು) ಕೊಂಚ ಮಟ್ಟಿಗೆ ಅಧಿಕ ವೇತನ ಹಾಗೂ ರಜೆ ಭತ್ತೆಯನ್ನು ಪಡೆಯುತ್ತಾರೆ. ಆದಾಗ್ಯೂ ಈ ಕಾರ್ಮಿಕರನ್ನು ವಿವಿಧ ರೀತಿಯಲ್ಲಿ ಶೋಷಿಸಲಾಗುತ್ತದೆ. ಕಾರ್ಖಾನೆ ಮಾಲಕರು, ಉದ್ಯೋಗದಾತರು ಹಾಗೂ ವ್ಯಾಪಾರಿಗಳು, ಕೂಲಿಕಾರ್ಮಿಕರ ಶೋಷಣೆಯಿಂದ ಅಪಾರ ಲಾಭವನ್ನು ಪಡೆಯುತ್ತಿದ್ದಾರೆ.
ಅಸಮಾಧಾನದ ಕಿಡಿ
ಗುಜರಾತ್‌ನಲ್ಲಿ ವಲಸೆ ಕಾರ್ಮಿಕರ ಉಪಸ್ಥಿತಿಯು ಸ್ಥಳೀಯ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ. ವಲಸೆ ಕಾರ್ಮಿಕರು ಕಾರ್ಖಾನೆಗಳು ಮತ್ತಿತರ ಸ್ಥಳಗಳಲ್ಲಿ ತೀರಾ ಕಡಿಮೆ ವೇತನದಲ್ಲಿ ದುಡಿಯುವುದರಿಂದ ಅವರು ತಮ್ಮ ವೇತನವನ್ನು ಕಸಿಯುತ್ತಿದ್ದಾರೆಂದು ಅವರು ಭಾವಿಸುತ್ತಾರೆ. ಕಳೆದ ತಿಂಗಳ ಅಂತ್ಯದಲ್ಲಿ ಬಿಹಾರದ ವಲಸೆ ಕಾರ್ಮಿಕನೊಬ್ಬ 14 ತಿಂಗಳು ಪ್ರಾಯದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆನ್ನಲಾದ ಘಟನೆ ನಡೆದ ಬಳಿಕ ಗುಜರಾತ್‌ನಲ್ಲಿ ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲೆ ದಾಳಿಗಳು ನಡೆದಿರುವುದು ಈ ಅಸಮಾಧಾನದ ಪರಿಣಾಮವಾಗಿದೆ. ವಲಸೆ ಕಾರ್ಮಿಕರ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಹಲವಾರು ಸ್ಥಳೀಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಹೊರತಾಗಿಯೂ ಭಾರೀ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ವಾಪಸಾಗಿದ್ದಾರೆ. ಗುಜರಾತ್‌ನಲ್ಲಿ 60 ಸಾವಿರದಿಂದ ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು ವಾಸವಾಗಿದ್ದಾರೆಂದು ವಿವಿಧ ವರದಿಗಳು ಅಂದಾಜಿಸಿವೆ. ಹಿಂಸಾಚಾರದ ಬಳಿಕವೂ ಗುಜರಾತ್‌ನಲ್ಲಿಯೇ ಉಳಿದುಕೊಂಡಿರುವವರು ನಿರಂತರವಾದ ಭೀತಿಯಡಿ ಬದುಕುತ್ತಿದ್ದಾರೆ.
ವಲಸೆ ಕಾರ್ಮಿಕರು ಗುಳೆ ಹೋಗುತ್ತಿರುವುದು ಗುಜರಾತ್‌ನ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವವನ್ನು ಬೀರಲಿದೆ ಹಾಗೂ ಕಾರ್ಖಾನೆ ಮಾಲಕರು ಮತ್ತು ಇತರ ಉದ್ಯೋಗದಾತರಲ್ಲಿ ಅದರಲ್ಲೂ ವಿಶೇಷವಾಗಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಲಿದೆ.
ವಲಸೆ ಕಾರ್ಮಿಕರನ್ನು ಹೊರದಬ್ಬಲು ಪ್ರತಿಪಕ್ಷಗಳು ಸ್ಥಳೀಯರಿಗೆ ಪ್ರಚೋದನೆ ನೀಡಿವೆಯೆಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಆರೋಪಿಸಿದ್ದರು. ಇತ್ತ ಪ್ರತಿಪಕ್ಷಗಳು ಕೂಡಾ ವಲಸೆ ಕಾರ್ಮಿಕರು ಗುಳೆಹೋಗುವುದನ್ನು ತಡೆಯಲು ರೂಪಾನಿ ಸಾಕಷ್ಟು ಪ್ರಯತ್ನ ನಡೆಸಿಲ್ಲವೆಂದು ಆರೋಪಿಸಿದ್ದವು ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿದ್ದವು.
ಹೀಗೆ ಎರಡೂ ಕಡೆಗಳಿಂದಲೂ ವ್ಯಕ್ತವಾಗಿರುವ ಆಕ್ರೋಶವು, ವಲಸೆ ಕಾರ್ಮಿಕರ ಹಿತರಕ್ಷಣೆಯ ಕುರಿತಾದ ಕಾಳಜಿಗಿಂತ ಹೆಚ್ಚಾಗಿ ಗುಜರಾತ್‌ನ ಪ್ರಗತಿಯ ಬೆಲೆತೆತ್ತು ಅಗ್ಗದ ದರದ ದಿನಗೂಲಿ ಕಾರ್ಮಿಕರನ್ನು ಕಳೆದುಕೊಳ್ಳಬಹುದೆಂಬ ಭೀತಿಯಿಂದಾದುದಾಗಿದೆ. ಮುಖ್ಯಮಂತ್ರಿಯ ಪಕ್ಷದ ಉನ್ನತ ನಾಯಕತ್ವವು ಅವರಿಗೆ ರಾಜ್ಯದ ಪರಿಸ್ಥಿತಿಯನ್ನು ಸಹಜತೆಗೆ ತರಬೇಕೆಂದು ಸಂಕೇತವನ್ನು ಕಳುಹಿಸಿತ್ತು. ಆ ಮೂಲಕ ವಲಸಿಗರ ತವರು ರಾಜ್ಯಗಳಲ್ಲಿ ನಿರುದ್ಯೋಗಿಗಳ ದೊಡ್ಡ ಸೈನ್ಯವನ್ನೇ ನಿಭಾಯಿಸಬೇಕಾದ ಬಿಕ್ಕಟ್ಟನ್ನು ತಪ್ಪಿಸಬಹುದೆಂಬ ಲೆಕ್ಕಾಚಾರವನ್ನು ಕೂಡಾ ಅದು ಹೊಂದಿತ್ತು.
ಇವೆಲ್ಲವೂ, ವಲಸಿಗ ಕಾರ್ಮಿಕರ ಯೋಗಕ್ಷೇಮ ಹಾಗೂ ಅವರ ಹಕ್ಕುಗಳ ಬಗ್ಗೆ ರಾಜ್ಯಗಳ ಘೋರ ನಿರಾಸಕ್ತಿಯನ್ನು ತೋರಿಸಿಕೊಡುತ್ತದೆ. ರಾಜ್ಯದಲ್ಲಿ ಸಹಜತೆ ಮರಳಬೇಕೆಂದು ಗುಜರಾತ್ ಸರಕಾರ ಬಯಸುತ್ತಿದೆ. ಆ ಮೂಲಕ ಗುಜರಾತ್‌ನ ಪ್ರಗತಿಗಾಗಿ ವಲಸೆ ಕಾರ್ಮಿಕರು ಬೆವರು ಹರಿಸಬೇಕೆಂಬುದೇ ಅದರ ಉದ್ದೇಶವಾಗಿದೆ. ವಲಸೆ ಕಾರ್ಮಿಕರ ಹಠಾತ್ ವಾಪಸಾತಿ ಯನ್ನು ನಿಭಾಯಿಸಲು ಶತಪ್ರಯತ್ನ ನಡೆಸುತ್ತಿರುವ ಬಿಹಾರ ಸರಕಾರವು, ಗುಜರಾತ್‌ಗೆ ಹಿಂದಿನಂತೆ ತನ್ನ ರಾಜ್ಯದಿಂದ ವಲಸೆ ಮುಂದುವರಿಯಬೇಕೆಂದು ಬಯಸುತ್ತಿದೆ. ‘ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ’ ಉತ್ತರ ಪ್ರದೇಶವು ಗುಜರಾತ್ ಸರಕಾರವನ್ನು ಪ್ರಶಂಸಿಸಿದೆ.
ಕಡತದಲ್ಲಿ ಮಾತ್ರ
ಅಂತರ್ ರಾಜ್ಯ ವಲಸಿಗ ಕಾರ್ಮಿಕರ ಕಾಯ್ದೆ ಹಾಗೂ ಇತರ ಕಾರ್ಮಿಕ ಕಾನೂನುಗಳ (ಅಸಂಘಟಿತ ಕಾರ್ಮಿಕರು) ಅಡಿಯಲ್ಲಿ ಗುಜರಾತ್‌ನ ವಲಸೆ ಕಾರ್ಮಿಕರು ತಮ್ಮ ಎಲ್ಲಾ ಮೂಲಭೂತ ಹಕ್ಕುಗಳಿಗೆ ಕಾನೂನು ಬದ್ಧ ಅಧಿಕಾರವನ್ನು ಹೊಂದಿದ್ದಾರೆ. ಕನಿಷ್ಠ ವೇತನ, ನಿಯಮಿತ ವೇತನ ಪಾವತಿ, ನಿಯಮಿತ ಕೆಲಸದ ಸಮಯಗಳು ಹಾಗೂ ಓವರ್‌ಟೈಮ್ ಪಾವತಿ ಮತ್ತು ಕಾರ್ಮಿಕರ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಕಾಳಜಿ ವಹಿಸುವುದು ಸೇರಿದಂತೆ ಸಭ್ಯವಾದ ಕೆಲಸದ ಹಾಗೂ ಜೀವನಪರಿಸ್ಥಿತಿಯನ್ನು ಒಳಗೊಂಡಿದೆ.
ಇದೇ ಕಾಯ್ದೆಯಡಿ ವಲಸಿಗ ಕಾರ್ಮಿಕಶಕ್ತಿಯು ಸೃಷ್ಟಿಯಾದ ರಾಜ್ಯಗಳು, ಕಾರ್ಮಿಕರನ್ನು ಸಾಗಾಟ ಮಾಡುವ ಗುತ್ತಿಗೆದಾರರಿಗೆ ಪರವಾನಿಗೆಗಳನ್ನು ನೀಡುವ ನಿರೀಕ್ಷೆಯಿದೆ. ಇಂತಹ ಕಾರ್ಮಿಕರ ನೋಂದಣಿ ಹಾಗೂ ಇತರ ರಾಜ್ಯಗಳಲ್ಲಿ ಅವರ ಕೆಲಸದ ಹಾಗೂ ಜೀವನದ ಪರಿಸ್ಥಿತಿಯ ಮೇಲೂ ನಿಗಾ ಇರಿಸಲಾಗುವುದು. ಆದರೆ ಬಹುತೇಕ ರಾಜ್ಯ ಸರಕಾರಗಳು ಇಂತಹ ಕಾನೂನುಗಳ ಬಗ್ಗೆ ತಮ್ಮ ಅಸಡ್ಡೆಯನ್ನು ತೋರುತ್ತಿವೆ. ಗುಜರಾತ್ ರಾಜ್ಯವು ಈ ನಿಟ್ಟಿನಲ್ಲಿ ಕೆಲವೊಂದು ಹೆಜ್ಜೆಗಳನ್ನಿಟ್ಟಿದೆ ಆದರೂ ಸಮರ್ಪಕವಾಗಲು ಇನ್ನೂ ಬಹುದೂರ ಕ್ರಮಿಸಬೇಕಾಗಿದೆ. ರಾಜಕೀಯ ಸ್ತರದಲ್ಲಿಯೂ ವಲಸಿಗ ಕಾರ್ಮಿಕರ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವ ಕುರಿತಾಗಿ ಯಾವುದೇ ಆಸಕ್ತಿ ಕಂಡುಬರುತ್ತಿಲ್ಲ. ವಲಸೆ ಕಾರ್ಮಿಕರ ಶೋಷಣೆಗೆ ಆಸ್ಪದ ನೀಡುವಂತಹ ಪ್ರಚಲಿತ ಪರಿಸ್ಥಿತಿಯನ್ನು ಮುಂದುವರಿಸುವಂತಹ ಮನೋಭಾವನೆ ರಾಜಕೀಯ ವಲಯದಲ್ಲಿ ಕಾಣಿಸುತ್ತಿದೆ.
ಕೈಗಾರಿಕೆಗಳು ಹಾಗೂ ಉದ್ಯೋಗದಾತರು ಸ್ಥಳೀಯರಿಗೆ ಶೇ.85ರಷ್ಟು ಉದ್ಯೋಗಗಳನ್ನು ನೀಡುವುದನ್ನು ಕಡ್ಡಾಯಗೊಳಿಸುವ ಕಾನೂನೊಂದನ್ನು ಗುಜರಾತ್ ಸರಕಾರವು 1995ರಲ್ಲಿ ಜಾರಿಗೊಳಿಸಿತ್ತು. ಆದರೆ ವಾಸ್ತವಿಕವಾಗಿ ಈ ಕಾನೂನು ಯಾವತ್ತೂ ಜಾರಿಗೆ ಬಂದಿರಲಿಲ್ಲ. ಆದರೆ ಗುಜರಾತ್‌ಗೆ ಆಗಮಿಸತೊಡಗಿದ ನೂತನ ಹಾಗೂ ಬೃಹತ್ ಹೂಡಿಕೆದಾರರು ಇಂತಹ ಯಾವುದೇ ನಿರ್ಬಂಧಗಳನ್ನು ಮೆಚ್ಚಲಿಲ್ಲ. ತರುವಾಯ ರಾಜ್ಯ ಸರಕಾರವು ಅನುಷ್ಠಾನಕ್ಕೆ ತಂದ ಕೈಗಾರಿಕಾ ನೀತಿಗಳು ಆ ಕಾನೂನನ್ನು ನಗಣ್ಯಗೊಳಿಸಿತು.
ಇದೀಗ ಕೈಗಾರಿಕೆಗಳಲ್ಲಿ ಶೇ.80ರಷ್ಟು ಕಾರ್ಮಿಕ ಉದ್ಯೋಗಗಳು ರಾಜ್ಯದಲ್ಲಿ ವಾಸ್ತವ್ಯವಿರುವವರಿಗೆ ಹಾಗೂ ಶೇ.25ರಷ್ಟು ಉದ್ಯೋಗಗಳನ್ನು ಸ್ಥಳೀಯ ಕಾರ್ಮಿಕರಿಗೆ ಮೀಸಲಿಡುವ ಕಾನೂನೊಂದನ್ನು ಜಾರಿಗೆ ತರಲು ಗುಜರಾತ್ ಸರಕಾರ ಹೆಜ್ಜೆಯಿಟ್ಟಿದೆ. ಆದರೆ ಇಂತಹ ನಡೆ ನಿಷ್ಫಲವೆಂಬುದನ್ನು ಈ ಚಿಂತನೆಯ ಹಿಂದೆ ಇರುವವರಿಗೆ ಚೆನ್ನಾಗಿ ಅರಿವಿದೆ. ವಲಸಿಗ ಕಾರ್ಮಿಕರ ಹೇರಳ ಪೂರೈಕೆ ಇರುವವರೆಗೆ, ಸ್ಥಳೀಯ ಕಾರ್ಮಿಕರನ್ನು ಉದ್ಯೋಗಕ್ಕೆ ಸೇರ್ಪಡೆಗೊಳಿಸಲು ಉದ್ಯೋಗದಾತರು ಮುಂದಾಗಲಾರರು. ಆದರೆ ಬಹುಶಃ ಕನಿಷ್ಠ ಪಕ್ಷ 2019ರ ಲೋಕಸಭಾ ಚುನಾವಣೆಯವರೆಗಾದರೂ ಸ್ಥಳೀಯ ಕಾರ್ಮಿಕರ ಆಕ್ರೋಶವನ್ನು ನಿಯಂತ್ರಿಸುವುದೇ ರಾಜ್ಯ ಸರಕಾರದ ಈ ನಡೆಯ ಉದ್ದೇಶವಾಗಿರಬಹುದು.
ದಾರಿ ಯಾವುದು?
ಪ್ರಸಕ್ತ ವಲಸೆ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಎಲ್ಲಾ ರೀತಿಯ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುವುದೇ ಈ ಸಮಸ್ಯೆಗೆ ಇರುವ ನೈಜ ಪರಿಹಾರವಾಗಿದೆ. ಹೀಗಾಗಿ ಕಾರ್ಮಿಕ ಮಾರುಕಟ್ಟೆಯ ವಿಭಜನೆ ದುರ್ಬಲಗೊಂಡಲ್ಲಿ ಹಾಗೂ ಕಾರ್ಮಿಕ ಮಾರುಕಟ್ಟೆಯಲ್ಲಿ ಕಾರ್ಮಿಕರು (ಸ್ಥಳೀಯ ಹಾಗೂ ವಲಸಿಗ) ನ್ಯಾಯಯುತವಾದ ಹಾಗೂ ಸರಿಸಮಾನವಾದ ವೇತನ, ಸೌಲಭ್ಯವನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ. ಇದು ಸ್ಥಳೀಯ ಹಾಗೂ ವಲಸಿಗ ಕಾರ್ಮಿಕರ ನಡುವಿನ ನ್ಯಾಯಯುತವಲ್ಲದ ಸ್ಪರ್ಧೆಯನ್ನು ಕೂಡಾ ದುರ್ಬಲಗೊಳಿಸಲಿದೆ ಮತ್ತು ವಲಸಿಗ ಕಾರ್ಮಿಕರು ತಮ್ಮ ಕೆಲಸದ ಸ್ಥಳದಲ್ಲಿ ನೆಲೆಸಲು ಅವಕಾಶ ಲಭಿಸಲಿದೆ ಅಥವಾ ತಮ್ಮ ತವರು ರಾಜ್ಯಕ್ಕೆ ತೆರಳಿ, ಅಲ್ಲಿ ಉತ್ತಮ ಜೀವನವನ್ನು ಸಾಗಿಸಬಹುದಾಗಿದೆ. ಆದರೆ ಆರ್ಥಿಕ ಬೆಳವಣಿಗೆಯ ಬಗೆಗಷ್ಟೇ ಚಿತ್ತವಿರಿಸಿರುವ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಾರ್ಮಿಕರ ಜೀವನಪರಿಸ್ಥಿತಿಯನ್ನು ಸುಧಾರಿಸುವ ಬಗ್ಗೆ ಪ್ರಾಮಾಣಿಕವಾದ ಆಸಕ್ತಿಯನ್ನು ಹೊಂದಿವೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವೇ?.
ಕೃಪೆ: ದಿ ಹಿಂದೂ