ಚಿನ್ನದ ನಾಣ್ಯಗಳ ಖರೀದಿ

Update: 2018-10-24 18:50 GMT

ಈ ವಿಷಯಗಳು ಗಮನದಲ್ಲಿರಲಿ

ನಮ್ಮ ದೇಶದಲ್ಲಿ ಹಬ್ಬಗಳ ಸಂದರ್ಭದಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿದೆ. ಜನರು ಚಿನ್ನಾಭರಣಗಳಲ್ಲದೆ ಗಟ್ಟಿಗಳು ಮತ್ತು ನಾಣ್ಯಗಳ ರೂಪಗಳಲ್ಲಿಯೂ ಚಿನ್ನವನ್ನು ಖರೀದಿಸುತ್ತಾರೆ.
ಚಿನ್ನದ ನಾಣ್ಯಗಳನ್ನು ಅರ್ಧ ಗ್ರಾಮ್‌ನಷ್ಟು ಕಡಿಮೆ ಪ್ರಮಾಣದಲ್ಲಿಯೂ ಖರೀದಿಸಬಹುದು, ಹೀಗಾಗಿ ಹೂಡಿಕೆಯ ದೃಷ್ಟಿಯಿಂದ ಚಿನ್ನವನ್ನು ನಿಯಮಿತವಾಗಿ ಖರೀದಿಸುವವರು ಮತ್ತು ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಚಿನ್ನದ ಖರೀದಿ ಸಾಧ್ಯವಾಗದಿದ್ದವರು ಚಿನ್ನದ ನಾಣ್ಯಗಳನ್ನು ಇಷ್ಟ ಪಡುತ್ತಾರೆ. ಚಿನ್ನದ ನಾಣ್ಯಗಳ ಖರೀದಿ ಆಭರಣಗಳ ಖರೀದಿಯಷ್ಟು ಗೋಜಲಿನಿಂದ ಕೂಡಿರುವುದಿಲ್ಲ. ಆದರೆ ನಾಣ್ಯಗಳ ಖರೀದಿ ಸಂದರ್ಭ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು.
♦ ಚಿನ್ನದ ನಾಣ್ಯಗಳ ಶುದ್ಧತೆ
  ಚಿನ್ನದ ಶುದ್ಧತೆಯನ್ನು ತಿಳಿದುಕೊಳ್ಳಲು ಕ್ಯಾರಟ್ ಮತ್ತು ಫೈನ್‌ನೆಸ್ ಹೀಗೆ ಎರಡು ವಿಧಾನಗಳಿವೆ. ಈ ಪೈಕಿ ಕ್ಯಾರಟ್ ಹೆಚ್ಚು ಬಳಕೆಯಾಗುತ್ತಿದೆ. 24 ಕ್ಯಾರಟ್ ಬಂಗಾರ ಶುದ್ಧ ಚಿನ್ನವಾಗಿದ್ದು ಅದು 24ರಲ್ಲಿ 24 ಭಾಗ ಚಿನ್ನವನ್ನೇ ಒಳಗೊಂಡಿರುತ್ತದೆ. ಇದೇ ರೀತಿ 22 ಕ್ಯಾರಟ್ 22 ಭಾಗ ಚಿನ್ನ ಮತ್ತು ಎರಡು ಭಾಗ ಸತುವು,ತಾಮ್ರ ಅಥವಾ ಬೆಳ್ಳಿಯಂತಹ ಇತರ ಲೋಹಗಳನ್ನು ಒಳಗೊಂಡಿರುತ್ತದೆ. ಆಭರಣಗಳನ್ನು ತಯಾರಿಸಲು ಚಿನ್ನವನ್ನು ಕಠಿಣಗೊಳಿಸಲು ಅದಕ್ಕೆ ಈ ಲೋಹಗಳನ್ನು ಸೇರಿಸಲಾಗುತ್ತದೆ.
 ಫೈನ್‌ನೆಸ್ ಮುಖ್ಯವಾಗಿ 24 ಕ್ಯಾರಟ್ ಚಿನ್ನದ ಪರಿಶುದ್ಧತೆಯನ್ನು ನಿರ್ಧರಿಸಲು ಬಳಕೆಯಾಗುತ್ತದೆ. ಶುದ್ಧ ಚಿನ್ನವೂ ಕೂಡ ಕೆಲವು ಅಶುದ್ಧತೆಗಳನ್ನು ಹೊಂದಿದ್ದು,ಅವುಗಳನ್ನು ನಿವಾರಿಸಲು ಉತ್ಪಾದಕರಿಗೆ ಸಾಧ್ಯವಾಗಿರುವುದಿಲ್ಲ. ಫೈನ್‌ನೆಸ್ ಅನ್ನು ಪ್ರತಿ 1000ಕ್ಕೆ ಭಾಗಗಳನ್ನಾಗಿ ವ್ಯಕ್ತಪಡಿಸಲಾಗುತ್ತದೆ. ಅತ್ಯಂತ ಶುದ್ಧ ರೂಪವಾಗಿರುವ 24 ಕ್ಯಾರಟ್ ಚಿನ್ನವನ್ನು ಫೈನ್‌ನೆಸ್‌ನಲ್ಲಿ ಅಳೆದಾಗ ಅದು 999.9 ಫೈನ್‌ನೆಸ್‌ನ್ನು ತೋರಿಸುತ್ತದೆ. ಅಂದರೆ ಅದು 0.1 ಅಶುದ್ಧತೆಯಿಂದ ಕೂಡಿರುತ್ತದೆ.
ಅಂದ ಹಾಗೆ 24 ಕ್ಯಾರಟ್ ಚಿನ್ನಾಭರಣಗಳನ್ನು ಖರೀದಿಸಲು ಸಾಧ್ಯವಿಲ್ಲ, ಆದರೆ 24 ಕ್ಯಾರಟ್ ಚಿನ್ನದ ನಾಣ್ಯವನ್ನು ಖರೀದಿಸಹುದು.
♦  ಹಾಲ್‌ಮಾರ್ಕಿಂಗ್
ಚಿನ್ನದ ನಾಣ್ಯವನ್ನು ಖರೀದಿಸುವಾಗ ಶುದ್ಧತೆಯ ಜೊತೆಗೆ ಹಾಲ್ ಮಾರ್ಕ್‌ನ್ನೂ ಪರಿಶೀಲಿಸಬೇಕು. ಜನರು ಚಿನ್ನ ಖರೀದಿ ಸಂದರ್ಭ ಮೋಸ ಹೋಗಬಾರದು ಎಂದು ಭಾರತ ಸರಕಾರವು ಭಾರತೀಯ ಗುಣಮಟ್ಟ ಸಂಂಸ್ಥೆ(ಬಿಐಎಸ್)ಯನ್ನು ಸ್ಥಾಪಿಸಿದೆ. ಬಿಐಎಸ್ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮತ್ತು ಆಭರಣಗಳನ್ನು ಪರೀಕ್ಷಿಸಿ ಅವುಗಳ ಶುದ್ಧತೆಯನ್ನು ಪ್ರಮಾಣೀಕರಿಸಿ ಅವುಗಳ ಮೇಲೆ ತನ್ನ ಗುರುತನ್ನು ಅಚ್ಚು ಹಾಕಿರುತ್ತದೆ. ಅಲ್ಲದೆ ಚಿನ್ನಾಭರಣ ವ್ಯಾಪಾರಿಯ ಗುರುತಿನ ಸಂಕೇತ ಮತ್ತು ಸಂಖ್ಯೆಯನ್ನೂ ಅದು ಮೂಡಿಸಿರುತ್ತದೆ.
♦  ಪ್ಯಾಕೇಜಿಂಗ್
ಚಿನ್ನದ ನಾಣ್ಯಗಳನ್ನು ಖರೀದಿಸುವಾಗ ಅದರ ಪ್ಯಾಕಿಂಗ್ ಮೂಲಸ್ಥಿತಿಯಲ್ಲಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಪ್ಯಾಕೇಜಿಂಗ್ ಮೋಸ,ವಂಚನೆ ಮತ್ತು ಹಾನಿಯ ವಿರುದ್ಧ ರಕ್ಷಣೆಯಾಗಿದೆ. ಚಿನ್ನದ ನಾಣ್ಯಗಳ ಖರೀದಿದಾರರು ಅದನ್ನು ಮರುಮಾರಾಟ ಮಾಡುವ ಉದ್ದೇಶವನ್ನು ಹೊಂದಿದ್ದರೆ ಪ್ಯಾಕಿಂಗ್‌ನ್ನು ತೆರೆಯದಂತೆ ವ್ಯಾಪಾರಿಗಳು ಸಲಹೆ ನೀಡುತ್ತಾರೆ. ಪ್ಯಾಕಿಂಗ್ ಚಿನ್ನದ ನಾಣ್ಯದ ಶುದ್ಧತೆಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ.
♦  ತೂಕಗಳು
ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ 0.5 ಗ್ರಾಮ್‌ನಿಂದ 50 ಗ್ರಾಂ. ತೂಕದವರೆಗಿನ ಚಿನ್ಯದ ನಾಣ್ಯಗಳು ದೊರೆಯುತ್ತವೆ. ಗ್ರಾಹಕರು ತಮ್ಮ ಬಜೆಟ್‌ಗೆ ತಕ್ಕ ತೂಕದ ನಾಣ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನೀವು ಖರೀದಿಸುವ ದಿನ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 31,902 ರೂ.ಆಗಿದ್ದರೆ 0.5 ಗ್ರಾಂ ತೂಕದ ನಾಣ್ಯದ ಬೆಲೆ ತಯಾರಿಕೆ ವೆಚ್ಚ ಮತ್ತು ತೆರಿಗೆಗಳನ್ನು ಹೊರತುಪಡಿಸಿ 1,600 ರೂ.ಆಗಿರುತ್ತದೆ.
♦  ತಯಾರಿಕೆ ವೆಚ್ಚಗಳು
ಚಿನ್ನಾಭರಣಗಳಿಗೆ ಹೋಲಿಸಿದರೆ ನಾಣ್ಯದ ಖರೀದಿಯು ಸುಲಭವಾಗಿದೆ. ಆಭರಣಗಳಿಗೆ ಹೋಲಿಸಿದರೆ ಅದರ ತಯಾರಿಕೆ ವೆಚ್ಚವೂ ಕಡಿಮೆಯಾಗಿರುತ್ತದೆ. ಸಾಮಾನ್ಯವಾಗಿ ಚಿನ್ನದ ನಾಣ್ಯಗಳಿಗೆ ಶೇ.8ರಿಂದ ಶೇ.16ರವರೆಗೆ ತಯಾರಿಕೆ ವೆಚ್ಚವನ್ನು ವಿಧಿಸಲಾಗುತ್ತದೆ. ಹೆಚ್ಚಿನ ಹಬ್ಬಗಳ ಸಂದರ್ಭಗಳಲ್ಲಿ ಇದರಲ್ಲಿ ರಿಯಾಯಿತಿಯೂ ದೊರೆಯಬಹುದು.
♦  ಖರೀದಿಗೆ ಬಹು ಆಯ್ಕೆ
ಸ್ಥಳಿಯ ಚಿನ್ನಾಭರಣ ವ್ಯಾಪಾರಿಯಲ್ಲದೆ ಆಲ್‌ಲೈನ್ ಇ-ಟೇಲರ್ಸ್‌, ಬ್ಯಾಂಕುಗಳು,ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ,ಎಂಎಂಟಿಸಿ ಮತ್ತು ಕೆಲವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದಲೂ ಚಿನ್ನದ ನಾಣ್ಯಗಳನ್ನು ಖರೀದಿಸಬಹುದಾಗಿದೆ.
♦  ಮರುಮಾರಾಟ ಸುಲಭ
  ನೀವು ಬ್ಯಾಂಕುಗಳಿಂದ ಚಿನ್ನದ ನಾಣ್ಯವನ್ನು ಖರೀದಿಸುತ್ತಿದ್ದರೆ ಆರ್‌ಬಿಐ ನಿರ್ದೇಶದಂತೆ ಅವು ನಿಮ್ಮಿಂದ ನಾಣ್ಯವನ್ನು ಮರುಖರೀದಿಸುವುದಿಲ್ಲ ಎನ್ನುವುದು ನೆನಪಿನಲ್ಲಿರಲಿ. ಉಳಿದಂತೆ ನೀವು ಚಿನ್ನಾಭರಣ ವ್ಯಾಪಾರಿಗಳಿಗೆ ಮರುಮಾರಾಟ ಮಾಡಿದರೆ ಚಿನ್ನಕ್ಕೆ ಮಾತ್ರ ವೌಲ್ಯ ದೊರೆಯುತ್ತದೆ,ಆದರೆ ನೀವು ಖರೀದಿಸಿದ್ದಾಗ ಪಾವತಿಸಿದ್ದ ತಯಾರಿಕೆ ವೆಚ್ಚ,ಲಾಭಾಂಶ ಇತ್ಯಾದಿಗಳನ್ನು ಮರೆಯಬೇಕಾಗುತ್ತದೆ.

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ