ಉನ್ನತ ವಲಯಗಳಲ್ಲಿದ್ದ ಗೆಳೆಯರೇ ಖಶೋಗಿಯನ್ನು ಮೌನವಾಗಿಸಿದರು...

Update: 2018-10-25 18:42 GMT

ಅವರ ಸಾವಿನ ಬಗ್ಗೆ ತೀರಾ ಇತ್ತೀಚೆಗೆ ಬಂದಿರುವ ಟರ್ಕಿಯ ಮೀಡಿಯಾ ಮತ್ತು ಅಧಿಕಾರಿಗಳು ನೀಡಿರುವ ವರದಿಗಳು ನಿಜವೇ ಆಗಿದ್ದರೆ ಇಸ್ತಾಂಬುಲ್ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಅವರ ಮೇಲೆ ದಾಳಿ ನಡೆದಿತ್ತು ಮತ್ತು ಹೋರಾಟ ನಡೆದಿತ್ತು. ಅಧಿಕಾರದ ಎದುರು ಸರಕಾರಕ್ಕೆ ಸತ್ಯ ಹೇಳಿದ್ದಕ್ಕಾಗಿ ದುರಂತಮಯವಾಗಿ ತಮ್ಮ ಪ್ರಾಣ ತೆತ್ತ ಇತರ ಹಲವು ಟೀಕಾಕಾರರ ಉದ್ದನೆಯ ಸಾಲಿನಲ್ಲಿ ಖಶೋಗಿ ಸಾಗಿದ್ದಾರೆ.

ಅಕ್ಟೋಬರ್ 2ರಂದು ನಾಪತ್ತೆಯಾದ ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ಜೊತೆ ನನಗೆ ಮೊದಲ ಸಂಪರ್ಕ ವಾದದ್ದು 2003ರಲ್ಲಿ. ಉಸಾಮಾ ಬಿನ್ ಲಾದೆೆನ್‌ನ ಮಾಜಿ ಆಪ್ತ ಗೆಳೆಯ ಮತ್ತು ಬಾವ ಮುಹಮ್ಮದ್ ಜಮಾಲ್ ಖಲೀಫಾ ಜೊತೆ ಸಿಬಿಸಿಗಾಗಿ ಒಂದು ಸಂದರ್ಶನ ನಡೆಸಲು ಏರ್ಪಾಡು ಮಾಡುತ್ತಿದ್ದ ವೇಳೆಗೆ ಅಲ್ಖಾಯಿದಾ ಭಯೋತ್ಪಾದಕ ಗುಂಪು ಅಮೆರಿಕದ ವಿರುದ್ಧ ನಡೆಸಿದ ದಾಳಿಗಳಲ್ಲಿ 2001ರ ಸೆಪ್ಟಂಬರ್ 11ರಂದು 2,977 ಮಂದಿ ಕೊಲ್ಲಲಟ್ಟು ಎರಡು ವರ್ಷಗಳು ಕಳೆದಿದ್ದವು.

ಖಲೀಫಾ ಆಗ ಓರ್ವ ಅನುಮಾನಾಸ್ಪದ ವ್ಯಕ್ತಿಯಾಗಿದ್ದ. ಬಳಿಕ 2007ರಲ್ಲಿ ಮಡಗಾಸ್ಕರ್‌ನಲ್ಲಿ ಆತ ರಹಸ್ಯಾತ್ಮಕವಾಗಿ ನಡೆದ ಹತ್ಯೆಯೊಂದರಲ್ಲಿ ಮೃತಪಟ್ಟ. ಅಲ್ಖಾಯಿದಾ ಜೊತೆ ಸಖ್ಯವಿದ್ದ ಅಬು ಸಯ್ಯೆಫ್ ಭಯೋತ್ಪಾದಕ ಗುಂಪಿಗೆ ಹಣಕಾಸು ಪೂರೈಸುತ್ತಿದ್ದ ಓರ್ವ ಪ್ರಮುಖನೆಂಬ ಆಪಾದನೆ ಅವನ ಮೇಲಿತ್ತು.
ಆಗ ಖಶೋಗಿ ‘ಅರಬ್ ನ್ಯೂಸ್’ನ ದೈನಿಕದ ಉಪ ಮುಖ್ಯ ಸಂಪಾದಕನಾಗಿದ್ದರು. ಅದು ಇಂಗ್ಲಿಷ್‌ನಲ್ಲಿ ಪ್ರಕಟವಾಗುವ ಒಂದು ದಿನಪತ್ರಿಕೆ. ಖಲೀಫಾನನ್ನು ಪತ್ತೆ ಹಚ್ಚಲು ನಾನು ಸಂಪರ್ಕಿಸಿದ ಹತ್ತಾರು ಸೌದಿ ಪತ್ರಕರ್ತರಲ್ಲಿ ಖಶೋಗಿ ಕೂಡ ಒಬ್ಬರು. ಹಲವು ತಿಂಗಳುಗಳ ಕಾಲ ನಾನು ಮಾಡಿದ ದೂರವಾಣಿ ಕರೆಗಳಿಗೆ ಮತ್ತು ಕಳುಹಿಸಿದ ಇ ಮೇಲ್ಗಳಿಗೆ ಯಾವುದೇ ಪ್ರತಿಕ್ರಿಯೆ, ಉತ್ತರ ಬಂದಿರಲಿಲ್ಲ. ಆಮೇಲೆ ಒಂದು ದಿನ ಖಶೋಗಿ ಉತ್ತರಿಸಿದರು. ‘‘ಹೌದು ನನಗೆ ಖಲೀಫಾ ಗೊತ್ತು’’ ಎಂದು ಅವರು ಇಮೇಲ್ ಮೂಲಕ ತಿಳಿಸಿದರು ಮತ್ತು ಅವನ ಜೊತೆ ಒಂದು ಮುಖಾಮುಖಿ ಸಂದರ್ಶನ ನಡೆಸಲು ಸಹಾಯ ಮಾಡುವುದಾಗಿ ಹೇಳಿದರು.

ಸುದ್ದಿಯ ದೃಷ್ಟಿಯಿಂದ ಅದೊಂದು ಭಾರೀ ದೊಡ್ಡ ಸ್ಕೂಪ್ ಆಗಿತ್ತು. ಒಂದು ಕಾಲದಲ್ಲಿ ಲಾದೆನ್‌ನ ನಿಕಟವರ್ತಿಯಾಗಿ ಇದ್ದವನೊಬ್ಬನ ಜೊತೆ ನೇರವಾಗಿ ಮಾತನಾಡುವ ಅಪರೂಪದ ಒಂದು ಅವಕಾಶ ಅದು. ಖಸೋಗಿ ಸಂದರ್ಶನದ ಉದ್ದಕ್ಕೂ ತುಂಬ ಆಸಕ್ತಿ ವಹಿಸಿದರು.

ವ್ಯಾಪಕವಾದ ಸಂಪರ್ಕಯಾದಿ: ಸೌದಿ ರಾಜ ಮನೆತನದವರು ಮತ್ತು ಭಯೋತ್ಪಾದಕರು
ಖಶೋಗಿಯ ಜತೆ ಕೆಲಸ ಮಾಡುವಾಗ ಉತ್ತಮ ಅನುಭವಗಳನ್ನು ಪಡೆದ ವಿದೇಶಿ ಪತ್ರಕರ್ತರಲ್ಲಿ ನಾನು ಮಾತ್ರ ಅಲ್ಲ. ಹಲವರು ನನಗಾದಂತೆ ಧನಾತ್ಮಕ ಅನುಭವ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಖಶೋಗಿ ಸದಾ ಹೊಸ ಹೊಸ ಸುದ್ದಿಗಳನ್ನು ನೀಡುವ ಒಂದು ಭಂಡಾರವಾಗಿದ್ದರು. ಅದೇ ವೇಳೆ, ಆತ ತುಂಬಾ ಜಾಗರೂಕನಾಗಿರುತ್ತಿದ್ದರು. ಖಶೋಗಿಗೆ ಅಂತರ್‌ರಾಷ್ಟ್ರೀಯ ಭಯೋತ್ಪಾದಕರ ಮತ್ತು ಸೌದಿ ರಾಜಮನೆತನದ ಸದಸ್ಯರ ಸಂಪರ್ಕವನ್ನು ದೊರಕಿಸುವ ಮೂಲಗಳಿದ್ದು ಖಶೋಗಿ ಪತ್ರಿಕಾ ವರದಿಗಾರನಾಗಿ ಮತ್ತು ಸರಕಾರಕ್ಕೆ ಓರ್ವ ಸಲಹೆಗಾರನಾಗಿ ಎರಡು ರೀತಿಯ ವೃತ್ತಿಯಲ್ಲಿ ತೊಡಗಿದ್ದರೆೆಂಬುದು ಗುಟ್ಟಾಗಿ ಏನೂ ಉಳಿದಿಲ್ಲ. 2003ರಿಂದ 2006ರವರೆಗೆ ಅವರು ಬಲಿಷ್ಠ ಸೌದಿ ರಾಜಕುಮಾರ ಫೈಸಲ್ ಬಿನ್ ತುರ್ಕಿಯ ಬಲಗೈ ಬಂಟನಾಗಿದ್ದರು. ಒಟ್ಟಿನಲ್ಲಿ ಆತ ಸರ್ವ ಸಾಮಾನ್ಯ ಪತ್ರಕರ್ತನಾಗಿರಲಿಲ್ಲ.

ಹೊಸ ಸ್ವಾತಂತ್ರ್ಯಗಳಿಗಾಗಿ ವಿನಯಪೂರ್ವಕ ವಿನಂತಿಗಳು 

ಹಾಗೆಯೇ ಖಶೋಗಿ ಓರ್ವ ಸಾಮಾನ್ಯ ರಾಜಕೀಯ ಸಲಹೆಗಾರರೂ ಆಗಿರಲಿಲ್ಲ. ಸೌದಿ ಯುವಜನತೆಗೆ ಇನ್ನಷ್ಟು ಹೆಚ್ಚಿನ ಸ್ವಾತಂತ್ರ್ಯ ಹಾಗೂ ಉದ್ಯೋಗಾವಕಾಶಗಳಿಗೆ ಕರೆ ನೀಡುವ ಸಂಪಾದಕೀಯಗಳನ್ನು ಆತ ಧೈರ್ಯವಾಗಿ ಪ್ರಕಟಿಸಿದ್ದರು. ಹಾಗಂತ ಖಶೋಗಿ ಸೌದಿ ಸರಕಾರದ ಓರ್ವ ಉಗ್ರ ಟೀಕಾಕಾರನೂ ಆಗಿರಲಿಲ್ಲ. ಅವರ ಟೀಕೆ ಸೌದಿ ಆಡಳಿತದ ನೀತಿಗಳನ್ನು ಕುರಿತು ತುಂಬಾ ವಿನಯ ಪೂರ್ವಕವಾದ ಟೀಕೆಯಾಗಿರುತ್ತಿತ್ತು ಯೆಮನ್‌ಲ್ಲಿ ನಡೆಯುತ್ತಿದ್ದ ವಿನಾಶಕಾರಿ ಯುದ್ಧದ ಕುರಿತಾದ ಸೌದಿ ನಿಲುವನ್ನು ಆತ ಸಾರ್ವಜನಿಕವಾಗಿಯೇ ಬೆಂಬಲಿಸಿದ್ದರು.

ಖಶೋಗಿ ನಾಪತ್ತೆಯಾದಾಗ
ಖಶೋಗಿ ನಾಪತ್ತೆಯಾದ ನಂತರದ ದಿನಗಳಲ್ಲಿ ಆತ ನಿಗದಿತವಾಗಿ ಯಾವ ತಜ್ಞರು, ಪತ್ರಕರ್ತರು ಮತ್ತು ರಾಜಕೀಯ ಅಧಿಕಾರಿಗಳೊಂದಿಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಸುತ್ತಿದ್ದರೋ, ಅವರೆಲ್ಲರೂ ಸಂತಾಪ ವ್ಯಕ್ತಪಡಿಸಿದ್ದರು. ಮತ್ತು ಆತ ಯಾವ ವಿಷಯಗಳ ಪರವಾಗಿ ನಿಂತಿದ್ದರೋ ಆ ಬಗ್ಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದರು. ‘‘ಜಮಾಲ್ ಖಶೋಗಿ ಮತ್ತು ನಾನು ಹಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದೆವು. ಆದರೆ ಆತ ಯಾವಾಗಲೂ ನನ್ನೊಡನೆ ಮತ್ತು ಇತರ ಇರಾನಿಗರೊಡನೆ ವಿನಯಪೂರ್ವಕವಾಗಿ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರು’’ ಎಂದು ಟೆಹರಾನ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಪ್ರಾಧ್ಯಾಪಕರಾಗಿರುವ ಮುಹಮ್ಮದ್ ಮರಾಂಡಿ ಟ್ವೀಟ್ ಮಾಡಿದ್ದಾರೆ.
ನಿಶಸ್ತ್ರಧಾರಿಗಳಾದ ಕಾರ್ಯಕರ್ತರನ್ನು ಹಿಂಸಾ ಪೂರ್ವಕವಾಗಿ ಬಗ್ಗುಬಡಿದ ಸೌದಿ ಸರಕಾರದ ಕ್ರಮವನ್ನು ವರದಿ ಮಾಡಿದ್ದಕ್ಕಾಗಿ ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿರುವ ಬಹರೈನ್‌ನಲ್ಲಿರುವ ಇನ್ನೊಬ್ಬ ಪತ್ರಕರ್ತ ಇರಾನ್ ಕುರಿತಾದ ಖಶೋಗಿಯ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದ. ಆದರೂ ಸುಧಾರಣೆಗಳನ್ನು ತರುವುದಕ್ಕಾಗಿ ಖಶೋಗಿ ಪ್ರಯತ್ನಿಸಿದ್ದಕ್ಕಾಗಿ ತಾನು ಆತನನ್ನು ಮೆಚ್ಚಿಕೊಂಡಿರುವುದಾಗಿ ಆ ಪತ್ರಕರ್ತ ನನ್ನ ಬಳಿ ಹೇಳಿದ್ದಾನೆ: ‘‘ನಿಮಗೆ ಗೆಳೆಯರು ಇಲ್ಲದಿದ್ದರೆ ಸೌದಿಯಲ್ಲಿ ನೀವು ಉಳಿಯಲಾರಿರಿ. ಖಶೋಗಿ ಸತ್ಯ ವಿಷಯಗಳನ್ನು ವರದಿ ಮಾಡುವುದರಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದ್ದರೆಂದು ನಾನು ನನ್ನ ಅನುಭವದಿಂದ ಹೇಳಬಲ್ಲೆ.’’
ಕೊನೆಗೆ, ಖಶೋಗಿಯ ‘ಗೆಳೆಯ’ರೇ ಆತನನ್ನು ಮೌನವಾಗಿಸಿದರು. ಅವರ ಸಾವಿನ ಬಗ್ಗೆ ತೀರಾ ಇತ್ತೀಚೆಗೆ ಬಂದಿರುವ ಟರ್ಕಿಯ ಮೀಡಿಯಾ ಮತ್ತು ಅಧಿಕಾರಿಗಳು ನೀಡಿರುವ ವರದಿಗಳು ನಿಜವೇ ಆಗಿದ್ದರೆ ಇಸ್ತಾಂಬುಲ್ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಅವರ ಮೇಲೆ ದಾಳಿ ನಡೆದಿತ್ತು ಮತ್ತು ಹೋರಾಟ ನಡೆದಿತ್ತು. ಅಧಿಕಾರದ ಎದುರು ಸರಕಾರಕ್ಕೆ ಸತ್ಯ ಹೇಳಿದ್ದಕ್ಕಾಗಿ ದುರಂತಮಯವಾಗಿ ತಮ್ಮ ಪ್ರಾಣ ತೆತ್ತ ಇತರ ಹಲವು ಟೀಕಾಕಾರರ ಉದ್ದನೆಯ ಸಾಲಿನಲ್ಲಿ ಖಶೋಗಿ ಸಾಗಿದ್ದಾರೆ. ಅವರ ಸಾವು ವಿಭಿನ್ನ ದೃಷ್ಟಿಕೋನ ಹೊಂದಿರುವ ಧೀಮಂತರನ್ನು ಗೌರವಿಸುವುದರ ಆವಶ್ಯಕತೆಯನ್ನು ಒತ್ತಿ ಹೇಳುತ್ತದೆ.

Similar News

ಜಗದಗಲ
ಜಗ ದಗಲ