ಬಹುತ್ವದ ನೆಲೆಯಲ್ಲಿ ನಂಬಿಕೆ ಮತ್ತು ವೈಚಾರಿಕತೆ

Update: 2018-10-26 18:34 GMT

ಭಾಗ-1

ನಂಬಿಕೆ ಮತ್ತು ವೈಚಾರಿಕತೆಯೆನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಬದುಕಿಗೆ ಇವೆರಡು ಬಹಳ ಅವಶ್ಯಕವಾಗಿವೆ. ನಂಬಿಕೆ ಮತ್ತು ವೈಚಾರಿಕತೆ ಇಲ್ಲದೆ ಈ ಜಗತ್ತು ಮುನ್ನಡೆಯಲು ಸಾಧ್ಯವಿಲ್ಲ. ಆದರೆ ನಂಬಿಕೆ ಅಪನಂಬಿಕೆಯಾದಾಗ, ಮೂಢನಂಬಿಕೆಯಾದಾಗ ವೈಚಾರಿಕತೆ ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ. ಅಪನಂಬಿಕೆ ಮತ್ತು ಮೂಢನಂಬಿಕೆಯ ಮೂಲಕ ದ್ವೇಷ ಸಂಸ್ಕೃತಿಯನ್ನು ಬೆಳೆಸುವ ಸಂದರ್ಭದಲ್ಲಿ ನಮ್ಮ ದೇಶ ಬಹಳ ಇಕ್ಕಟ್ಟಿಗೆ ಸಿಲುಕುತ್ತದೆ. ಅಂತಹ ಒಂದು ಭಯಾನಕ ಸ್ಥಿತಿಯಲ್ಲಿ ನಾವು ಇವತ್ತು ಬದುಕುತ್ತಿದ್ದೇವೆ. ಇವುಗಳನ್ನು ತೊಡೆದು ಹಾಕಿ ಮತ್ತೆ ಜನಮಾನಸದಲ್ಲಿ ಏಕತೆಯ ಒಂದು ಶಕ್ತಿಯನ್ನು ತುಂಬುವಂಥ ಬಹುತ್ವ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಈ ಕಾಲದ ಅವಶ್ಯಕತೆಯಾಗಿದೆ.

ಈ ಸಲದ ‘ನುಡಿಸಿರಿ’ ಬಹುತ್ವವನ್ನು ಕೇಂದ್ರ ಬಿಂದುವಾಗಿಸಿಕೊಂಡು ನಮ್ಮ ಮುಂದೆ ಬಹಳ ಹೊಸತನವನ್ನು ಸೂಚಿಸುತ್ತಿದೆ. ಬಹುತ್ವ ಈ ದೇಶದ ಆತ್ಮ. ಈ ಆತ್ಮರಕ್ಷಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಆಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸಂಸ್ಕೃತಿ ಕೇವಲ ಒಂದು ದೇಶದ ಬಹುತ್ವವನ್ನು ರಕ್ಷಿಸಿಸುವ ಸಂಸ್ಕೃತಿ ಅಲ್ಲ, ಇಡೀ ವಿಶ್ವದ ಬಹುತ್ವವನ್ನು ರಕ್ಷಿಸುವ ಸಂಸ್ಕೃತಿ ಆಗಿದೆ. ಎಲ್ಲ ಧರ್ಮಗಳನ್ನು ಮೀರಿ ನಿಲ್ಲುವಂಥದ್ದು ಭಾರತೀಯ ಮನಸ್ಸು ಎಂದು ನಾನು ಹೇಳಲಿಕ್ಕೆ ಇಷ್ಟಪಡುತ್ತೇನೆ.

‘ಯತ್ರ ವಿಶ್ವಂ ಭವತಿ ಏಕ ನೀಡಂ’ (ಇಡೀ ವಿಶ್ವವೇ ಒಂದು ಗೂಡು) ಎಂದು ಆರು ಸಾವಿರ ವರ್ಷಗಳಷ್ಟು ಹಿಂದಿನ ಋಗ್ವೇದ ಹೇಳುತ್ತದೆ. ಜಗತ್ತು ಒಂದು ಗುಬ್ಬಿಯ ಗೂಡು. ಈ ಗುಬ್ಬಿಯ ಗೂಡಿನಂಥ ಜಗತ್ತಿನಲ್ಲಿ ಮಾನವಕುಲ ಹಕ್ಕಿಗಳ ಹಾಗೆ ಬದುಕಿದಾಗ ಮಾತ್ರ ಈ ಜಗತ್ತು ಉಳಿಯುತ್ತದೆ. ಯುದ್ಧಗಳಿಂದ, ಕೋಮುವಾದದಿಂದ, ದ್ವೇಷದಿಂದ, ಉಗ್ರವಾದದಿಂದ, ಜಾತೀಯತೆಯಿಂದ ಈ ಜಗತ್ತು, ಈ ದೇಶ ಉಳಿಯಲಿಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ನಮ್ಮ ಪೂರ್ವಜರು ನಮಗೆ ಹೇಳಿಕೊಟ್ಟಿದ್ದಾರೆ ಮತ್ತು ಕಲಿಸಿದ್ದಾರೆ. ಅದೇ ಋಗ್ವೇದಲ್ಲಿ ‘‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ.’’ ‘‘ಸತ್ಯ ಒಂದೇ ಇದೆ, ಜ್ಞಾನಿಗಳು ಆ ಸತ್ಯವನ್ನು ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾರೆ’’ ಎಂಬುದು ಈ ಶ್ಲೋಕದ ಅರ್ಥ. ಇನ್ನೂ ಒಂದು ಮಾತಿದೆ, ‘‘ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ’’ ಉದಾತ್ತ ವಿಚಾರಗಳು ನಮಗೆ ಎಲ್ಲೆಡೆಯಿಂದ ಬರಲಿ ಎಂಬುದು ಋಗ್ವೇದದ ಆಶಯ. ಇದು ವಿಶ್ವವ್ಯಾಪಿ ಮಾತು. ಇದೇ ಬಹುತ್ವ. ನಮ್ಮ ಬಹುತ್ವವನ್ನು ರಕ್ಷಣೆ ಮಾಡಲಿಕ್ಕೆ ಲೋಕಾಯತರು, ಜೈನರು, ಬೌದ್ಧರು ಮತ್ತು ಲಿಂಗಾಯತರು ಬಹಳ ಹೋರಾಟ ಮಾಡಿದ್ದಾರೆ. ಇವರೆಲ್ಲರ ಸಿದ್ಧಾಂತಗಳು ಬಹುತ್ವವಾದಿ ಸಿದ್ಧಾಂತಗಳಾಗಿವೆ. ಈ ಹಿನ್ನೆಲೆಯಲ್ಲಿ ನಾವು ಈ ನಂಬಿಕೆ ಮತ್ತು ವೈಚಾರಿತೆ ಕುರಿತು ಯೋಚನೆ ಮಾಡಬೇಕಿದೆ.
ನಂಬಿಕೆ ಮತ್ತು ವೈಚಾರಿಕತೆಯೆನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಬದುಕಿಗೆ ಇವೆರಡು ಬಹಳ ಅವಶ್ಯಕವಾಗಿವೆ. ನಂಬಿಕೆ ಮತ್ತು ವೈಚಾರಿಕತೆ ಇಲ್ಲದೆ ಈ ಜಗತ್ತು ಮುನ್ನಡೆಯಲು ಸಾಧ್ಯವಿಲ್ಲ. ಆದರೆ ನಂಬಿಕೆ ಅಪನಂಬಿಕೆಯಾದಾಗ, ಮೂಢನಂಬಿಕೆಯಾದಾಗ ವೈಚಾರಿಕತೆ ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ. ಅಪನಂಬಿಕೆ ಮತ್ತು ಮೂಢನಂಬಿಕೆಯ ಮೂಲಕ ದ್ವೇಷ ಸಂಸ್ಕೃತಿಯನ್ನು ಬೆಳೆಸುವ ಸಂದರ್ಭದಲ್ಲಿ ನಮ್ಮ ದೇಶ ಬಹಳ ಇಕ್ಕಟ್ಟಿಗೆ ಸಿಲುಕುತ್ತದೆ. ಅಂತಹ ಒಂದು ಭಯಾನಕ ಸ್ಥಿತಿಯಲ್ಲಿ ನಾವು ಇವತ್ತು ಬದುಕುತ್ತಿದ್ದೇವೆ. ಇವುಗಳನ್ನು ತೊಡೆದು ಹಾಕಿ ಮತ್ತೆ ಜನಮಾನಸದಲ್ಲಿ ಏಕತೆಯ ಒಂದು ಶಕ್ತಿಯನ್ನು ತುಂಬುವಂಥ ಬಹುತ್ವ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಈ ಕಾಲದ ಅವಶ್ಯಕತೆಯಾಗಿದೆ.

ನಂಬಿಕೆಯ ಪ್ರಶ್ನೆ ಯಾಕೆ ಬರುತ್ತದೆ ಎಂದರೆ, ‘ಅದು ಹೇಗೆ’ ಎನ್ನುವುದಕ್ಕೆ ವಿಜ್ಞಾನ ಉತ್ತರ ಕೊಡುತ್ತದೆ, ‘ಅದು ಏಕೆ’ ಎನ್ನುವುದಕ್ಕೆ ಉತ್ತರ ಕೊಡುವುದಿಲ್ಲ. ಆದ್ದರಿಂದಲೇ ಧರ್ಮಗಳು ಹುಟ್ಟುತ್ತವೆ. ‘ನಾವು ಹೇಗೆ ಹುಟ್ಟಿದ್ದೇವೆ’ ಎಂಬುದಕ್ಕೆ ವಿಜ್ಞಾನ ಉತ್ತರ ಕೊಡುತ್ತದೆ. ‘ನಾವು ಏಕೆ ಹುಟ್ಟಿದೆವು’ ಎಂಬುದಕ್ಕೆ ಉತ್ತರ ಕೊಡಲು ವಿಜ್ಞಾನಕ್ಕೆ ಆಗುವುದಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಆಗ ನಂಬಿಕೆಗಳು ಹುಟ್ಟುತ್ತವೆ. ನಂಬಿಕೆ ಅಂದ್ರೇನೇ ಧರ್ಮ. ಇಂಗಿಷ್‌ನಲ್ಲಿ ಫೈಥ್ (Faith) ಎಂದು ಕರೆಯುತ್ತೇವೆ. ಹಿಂದೂ ಫೈಥ್, ಕ್ರಿಶ್ಚಿಯನ್ ಫೈಥ್, ಇಸ್ಲಾಮಿಕ್ ಫೈಥ್. ಹೀಗೆ ನಂಬಿಕೆಯಿಂದ ನಾವು ಬದುಕುತ್ತಿರುತ್ತೇವೆ. ವೈಚಾರಿಕತೆಯ ಕಡೆಗೆ ಆ ನಂಬಿಕೆ ಹೋಗಬೇಕೆಂಬುದೇ ಎಲ್ಲಾ ಧರ್ಮ ಸಂಸ್ಥಾಪಕರ ಆಶಯವಾಗಿದೆ. ಹೀಗೆ ಎಲ್ಲಾ ಧರ್ಮಗಳು ವಿವಿಧ ರೀತಿಯ ನಂಬಿಕೆಗಳ ಆಧಾರದ ಮೇಲೆ ಹುಟ್ಟಿವೆ. ನಮ್ಮ ಕೆಲವು ನಂಬಿಕೆಗಳನ್ನು ವಿಜ್ಞಾನ ಪ್ರಶ್ನಿಸುವ ಸಾಮರ್ಥ್ಯ ಹೊಂದಿದೆ. ಅದು ಯಾವಾಗ ನಮ್ಮ ನಂಬಿಕೆಯನ್ನು ನಿಖರವಾಗಿ ಪ್ರಶ್ನಿಸುವ ಶಕ್ತಿ ಪಡೆಯುವುದೋ, ಆಗ ಆ ನಂಬಿಕೆ ಆ ಹೊತ್ತಿನಿಂದ ಮೂಢನಂಬಿಕೆಯಾಗಿ ಕರೆಯಿಸಿಕೊಳ್ಳುತ್ತದೆ. ನಾವು ಮೂಢನಂಬಿಕೆಗಳಿಗೆ ಜೋತು ಬಿದ್ದರೆ, ಹಾಗೇ ಮುಂದುವರಿಯುತ್ತೇವೆ.
ನಂಬಿಕೆ ಇಲ್ಲದೆ ಮಾನವ ಬದುಕಲಾರ. ಆದರೆ ಮೂಢನಂಬಿಕೆ ಯಿಂದ ಆತನ ಬದುಕು ಕುಂಠಿತಗೊಳ್ಳುತ್ತದೆ. ನಂಬಿಕೆ ಮತ್ತು ವೈಚಾರಿಕತೆಗಳ ಸಂಶ್ಲೇಷಣೆ ಅಂದರೆ Synthesis . ಅದರಿಂದ ಮಾತ್ರ ನಾಗರಿಕತೆಯ ತಳಹದಿಯ ಮೆೀಲೆ ಮಾನವೀಯತೆ ಬೆಳೆಯಲು ಸಾಧ್ಯ.
ವಿವಿಧ ಧರ್ಮಗಳು ಎಂದರೆ ವಿವಿಧ ನಂಬಿಕೆಗಳು ಮತ್ತು ವಿವಿಧ ಜೀವನ ವಿಧಾನಗಳು. ಹುಟ್ಟು ಸಾವು ಮತ್ತು ಬದುಕಿಗೆ ಸಂಬಂಧಿಸಿದ ವಿವಿಧ ಪರಿಕಲ್ಪನೆಗಳು. ಒಟ್ಟಾರೆ ಬಹುತ್ವದ ಭಾಗಗಳು. ಇವುಗಳ ಮಧ್ಯೆ ವೈರುಧ್ಯಗಳು ಬೆಳೆಯದಂತೆ ನೋಡಿಕೊಂಡು, ಮಾನವೀಯ ಸಂಬಂಧಗಳನ್ನು ಗುರುತಿಸುವುದರ ಮೂಲಕ ನಾವು ವೈಚಾರಿಕತೆಯ ಕಡೆಗೆ ಸಾಗಲು ಸಾಧ್ಯವಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಅನುಪಮವಾಗಿದೆ. ಕನ್ನಡ ನಾಡಿಗೆ, ಕನ್ನಡ ಸಂಸ್ಕೃತಿಗೆ, ಕನ್ನಡ ಸಾಹಿತ್ಯಕ್ಕೆ ವಿಶ್ವವ್ಯಾಪಿ ನೆಲೆಯಿದೆ ಎಂಬುದನ್ನು ನಾವು ಮರೆಯಬಾರದು. ಒಂಬತ್ತನೇ ಶತಮಾನದಲ್ಲಿ ನಮಗೆ ಸಿಕ್ಕ ‘ಕವಿರಾಜಮಾರ್ಗ’ ಕನ್ನಡ ಗ್ರಂಥಗಳಲ್ಲೇ ಅತ್ಯಂತ ಹಳೆಯದು. ಅದು ಲಕ್ಷಣಗ್ರಂಥ. ಮಹಾಕಾವ್ಯವನ್ನು ಹೇಗೆ ಬರೆಯಬೇಕು ಎಂಬುದನ್ನು ಹೇಳುವಂತಹ ಗ್ರಂಥ. ಇದರ ಅರ್ಥ ಅದಕ್ಕಿಂತಲೂ ಮುಂಚೆ ಅನೇಕ ಗ್ರಂಥಗಳು ಇದ್ದವೆಂಬುದನ್ನು ನಾವು ತಿಳಿದುಕೊಳ್ಳಬೇಕು. ನೃಪತುಂಗನ ಆಸ್ಥಾನದಲ್ಲಿ ಇದ್ದವನು ಕವಿರಾಜ ಮಾರ್ಗಕಾರ ಶ್ರೀವಿಜಯ. ‘‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮಂ ಪರ ಧರ್ಮಮುಮಂ’’ ಎಂದು ಶ್ರೀವಿಜಯ ಹೇಳಿದ್ದು ನಮ್ಮ ಇವತ್ತಿನ ವಿಷಯದ ಹೃದಯವೇ ಆಗಿದೆ. ಕಸವರ ಎಂದರೆ ಅಪರಂಜಿ, ಶುದ್ಧ ಬಂಗಾರ. ಅನ್ಯರ ವಿಚಾರವನ್ನು ಮತ್ತು ಧರ್ಮವನ್ನು ಸಂಪೂರ್ಣ ಸಹನಶೀಲವಾಗಿ ಕಾಣುವ ಮನಸ್ಸೇ ಶುದ್ಧ ಬಂಗಾರ. ನಾವು ಅನೇಕ ಧರ್ಮಗಳ ಮತ್ತು ಜೀವನವಿಧಾನಗಳ ಒಂದು ಸಮಾಜದಲ್ಲಿ ಬದುಕುವಾಗ ಬೇರೆಯವರ ವಿಚಾರಗಳನ್ನು ಹಾಗೂ ಬೇರೆಯವರ ಧರ್ಮವನ್ನು ಕೊಂಡಾಡುವ (Celebrate) ಹಾಗೆ ಬದುಕಬೇಕು. ನಾವು ಅವುಗಳನ್ನು ಸಹನಶೀಲವಾಗಿ ನೋಡುವ ಮನಸ್ಸನ್ನು ಹೊಂದಿರಬೇಕು. ಇದು ನಮ್ಮ ನೆಲದ ಗುಣ. ನಮ್ಮ ಪೂರ್ವಜರ, ನಮ್ಮ ಹಳ್ಳಿಗಾಡಿನ ಜನರ, ನಮ್ಮ ಮುಗ್ಧ ಜನರ, ಬದುಕಿನ ವಿಧಾನವೇ ಬಹುತ್ವದ ವಿಧಾನವಾಗಿತ್ತು ಎನ್ನುವುದು ನಮಗೆಲ್ಲ ಗೊತ್ತಿದೆ. ಇಂತಹ ಒಂದು ಮಾನವೀಯ ನಂಬಿಕೆಯೇ ಬಹುತ್ವದ ನಂಬಿಕೆ. ಈ ನಂಬಿಕೆಯೇ ವೈಚಾರಿಕತೆ. ಇಲ್ಲಿ ಬಹಳ ಮುಖ್ಯವಾದ ಒಂದು ವಿಚಾರವೇನೆಂದರೆ, ಅದೇ ಪರವಿಚಾರ ಮತ್ತು ಪರಧರ್ಮ. ಇದರ ಅರ್ಥವೇನೆಂದರೆ ವಿಚಾರಗಳು ಒಂದೇ ತರಹ ಇರುವುದಿಲ್ಲ. ವೈಚಾರಿಕತೆಯು ಒಂದೇ ತರಹ ಇರುವುದಿಲ್ಲ ಮತ್ತು ಧರ್ಮಗಳು ಒಂದೇ ತರಹ ಇರುವುದಿಲ್ಲ. ಆದರೆ ಅವುಗಳ ಮಧ್ಯೆ ಒಂದು ಸಾಮಾನ್ಯ ಮಾನವೀಯ ಗುಣವಿರುತ್ತದೆ. ಅಂದರೆ ಅವುಗಳಲ್ಲಿನ ಎಲ್ಲಾ ಜನಾಂಗಗಳನ್ನು ಒಟ್ಟುಗೂಡಿಸುವಂತಹ ಮಾತುಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ ಎಂಬುದನ್ನು ನಮ್ಮ ಸಂಸ್ಕೃತಿ ಕಲಿಸಿಕೊಟ್ಟಿದೆ.
 ಕ್ರಿಸ್ತ ಪೂರ್ವ ಮೂರನೇ ಶತಮಾನದ ಅಶೋಕ ಚಕ್ರವರ್ತಿಯ ಶಾಸನ ನನಗೆ ಬಹಳ ಆಶ್ಚರ್ಯ ಹುಟ್ಟಿಸಿತು. ಜೀಸಸ್ ಜನ್ಮತಾಳುವುದಕ್ಕೆ ಮುನ್ನೂರು ವರ್ಷಗಳಿಗೂ ಮುಂಚೆ. ಅಶೋಕನ ಶಿಲಾ ಶಾಸನ ಏನು ಹೇಳುತ್ತೆ ಅಂದರೆ, ‘‘ಮತ ಧರ್ಮದ ವಿಷಯದಲ್ಲಿ ಜಗಳವಾಡಬೇಡ. ಸಾಂಗತ್ಯ ಶ್ಲಾಘನೀಯವಾದದ್ದು.’’ ಈ ಸಾಲು ನಮಗೆ ಬಹಳ ಮುಖ್ಯವಾದದ್ದು. ನಾವು ಸೋಲುತ್ತಿರುವುದು ಇಲ್ಲೇ. ಯಾಕೆಂದರೆ ನಾವು ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ವಿಚಾರಗಳೇ ಶ್ರೇಷ್ಠ, ನಮ್ಮ ಜೀವನ ವಿಧಾನವೇ ಶ್ರೇಷ್ಠ ಎನ್ನುವ ಹೇವಕ್ಕೆ ಬಿದ್ದು ಮನಸ್ಸಿನ ಶಾಂತಿಯನ್ನು ಮತ್ತು ಸಮಾಜದ ಶಾಂತಿಯನ್ನು ಕೆಡಿಸುತ್ತಿದ್ದೇವೆ. ‘‘ಸತ್ಯದ ಮೇಲೆ ನಿನ್ನ ಸಂಪೂರ್ಣ ಸ್ವಾಮ್ಯವಿದೆ ಎಂದು ಕಲ್ಪನೆ ಮಾಡಿಕೊಳ್ಳಬೇಡ, ನಿನ್ನ ಸ್ವಾಮ್ಯವಿಲ್ಲದಿರಬಹುದು. ಯಾವ ಮತ ಧರ್ಮವೂ ಸತ್ಯದ ಮೇಲೆ ಪೂರ್ಣ ಸ್ವಾಮ್ಯ ಹೊಂದಿರುವುದಿಲ್ಲ’’ ಎಂದು ಆ ಶಾಸನದಲ್ಲಿ ಅಶೋಕ ತಿಳಿಸುತ್ತ, ಮುಂದುವರಿದು ‘‘ನೀನು ಬೇರೆ ಬೇರೆ ರೀತಿಗಳಲ್ಲಿ ಹಾಗೂ ಬೇರೆ ಬೇರೆ ವ್ಯಕ್ತಿಗಳಲ್ಲಿ ಅಭಿವ್ಯಕ್ತಿಯಾಗುವ ದೇವರನ್ನು ಅರಿಯಲು ಪ್ರಯತ್ನಿಸು’’ಎಂದು ಬರೆಸುತ್ತಾನೆ. ಇಷ್ಟು ದೊಡ್ಡ ಮಾತನ್ನು ನಮ್ಮ ಸಂಸ್ಕೃತಿ ನಮಗೆ ಕಲಿಸಿಕೊಟ್ಟಿದೆ.
ಬಹಳ ವರ್ಷಗಳ ಹಿಂದೆ ಡಿವಿಜಿಯವರು ಜನಸಾಮಾನ್ಯರಿ ಗೋಸ್ಕರ ಬರೆದ ಸುಂದರವಾದ ಚಿಕ್ಕ ಪುಸ್ತಕ ‘ಬಾಳಿಗೊಂದು ನಂಬಿಕೆ’. ಜ್ಞಾಪಕ ಚಿತ್ರ ಶಾಲೆಯ ನಂತರ ನನಗೆ ಬಹಳ ಇಷ್ಟವಾದ ಹೊತ್ತಿಗೆ ಇದು. ಅದರಲ್ಲಿನ ಶ್ಲೋಕವೊಂದು ನಂಬಿಕೆ ಮತ್ತು ವೈಚಾರಿಕತೆಯ ಸಂಗಮದಂತೆ ಕಾಣುತ್ತದೆ. ‘‘ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರಿಃ’’ ಈ ಕಷಾಯವೇ ಸಂಜೀವಿನಿಯಾದ ಗಂಗಾತೀರ್ಥ. ಈ ಡಾಕ್ಟರ್ ದೇವರ ಸ್ವರೂಪ ಎಂಬುದು ಇದರ ಅರ್ಥ. ನಂಬಿಕೆಯನ್ನು ವೈಚಾರಿಕವಾಗಿ ಪರಿವರ್ತನೆ ಮಾಡುವಂತಹ ಸಾಲುಗಳಿವು. ನೀವು ರೋಗ ಬಂದಾಗ ಗಂಗಾ ನದಿಯ ನೀರನ್ನೇ ಔಷಧಿ ಎಂದು ಸ್ವೀಕರಿಸಿದರೆ ಏನಾಗುತ್ತದೆ ಎಂದು ನಾನು ಹೇಳಲಿಕ್ಕೆ ಇಷ್ಟಪಡುವುದಿಲ್ಲ. ಆದರೆ ಔಷಧಿಯನ್ನೇ ಗಂಗೆಯ ತೀರ್ಥವೆಂದು ಭಾವಿಸಿ ಕುಡಿದರೆ ಬದುಕುತ್ತೀರಿ. ಅಂದರೆ ನಂಬಿಕೆಯನ್ನು ವೈಚಾರಿಕತೆಯ ಕಡೆಗೆ ಒಯ್ಯುವುದು ಇದೆಯಲ್ಲ, ಅದು ಮುಖ್ಯವಾದುದು. ಆಗ ನಮ್ಮ ದೈನಂದಿನ ಬದುಕಿನಲ್ಲಿ ನಮ್ಮ ಔಷಧಿ ಗಂಗಾಜಲವಾಗುತ್ತದೆ. ನಮ್ಮ ಡಾಕ್ಟರ್ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಜನರೇ ದೇವರುಗಳಾಗುತ್ತಾರೆ. ಈ ರೀತಿಯಾಗಿ ನಂಬಿಕೆಯನ್ನು ವೈಚಾರಿಕತೆಯ ಕಡೆಗೆ ಕೊಂಡೊಯ್ಯುವುದರ ಮೂಲಕ ಸಾಮಾಜಿಕ ಪರಿವರ್ತನೆ ಮಾಡುವುದು ಕೂಡ ಒಂದು ರೀತಿಯ ಮೌನಕ್ರಾಂತಿಯೆ ಆಗಿದೆ.
ವಾಸ್ತವದ ಕಡೆಗೆ, ವೈಚಾರಿಕತೆಯ ಕಡೆಗೆ ಮತ್ತು ಸಾಮಾಜಿಕ ಪ್ರಜ್ಞೆಯ ಕಡೆಗೆ ನಾವು ಮುಂದುವರಿಯಬೇಕಾಗುತ್ತದೆ. ಅಂತಹ ಪ್ರಯೋಗಗಳನ್ನು ನಮ್ಮ ಪೂರ್ವಜರು ಮಾಡಿ ತೋರಿಸಿದ್ದಾರೆ. ಎಲ್ಲ ನಂಬಿಕೆಗಳನ್ನು ಪ್ರಶ್ನಿಸಬೇಕೆಂದು ಬುದ್ಧ ಹೇಳುತ್ತಾನೆ. ನಮ್ಮ ನಂಬಿಕೆಗಳು ವೈಚಾರಿಕ ನೆಲೆಯಲ್ಲಿ ಇರುವಂಥವೇ ಅಥವಾ ಮೂಢನಂಬಿಕೆಗಳೇ ಎಂಬುದನ್ನು ಪರೀಕ್ಷೆಗೆ ಒಡ್ಡುವುದು ಬಹಳ ಮಹತ್ವದ್ದು. ನಂಬಿಕೆಯಿಲ್ಲದೆ ಬದುಕಲಾರೆವು. ಆದರೆ ನಂಬಿಕೆಯನ್ನು ಪ್ರಯೋಗಕ್ಕೆ ಒಡ್ಡದೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಎಲ್ಲವನ್ನು ನಂಬಿ ಮುಂದೆ ಅದನ್ನು ವೈಚಾರಿಕತೆಯ ಕಡೆಗೆ ಒಯ್ಯದಿದ್ದರೆ ಅದು ಮೂಢನಂಬಿಕೆಯಾಗಿ ಪರಿವರ್ತನೆ ಹೊಂದುವುದೆಂದು ಎರಡು ಸಾವಿರದ ಆರುನೂರು ವರ್ಷಗಳ ಹಿಂದೆ ಬುದ್ಧ ಹೇಳಿದ್ದು ಇಂದಿಗೂ ಬದುಕಿನ ದಾರಿದೀಪವಾಗಿದೆ.
ನಮ್ಮ ದೇಶದ ಇತಿಹಾಸದಲ್ಲಿ ನಂಬಿಕೆ ಮತ್ತು ವೈಚಾರಿಕತೆಯ ಮಹಾಸಂಗಮ ಯಾರಾದರೂ ಇದ್ದರೆ ಅವರು ಬಸವಣ್ಣನವರು. ಇಡೀ ಜಗತ್ತಿನ ಇತಿಹಾಸದಲ್ಲಿ ನಂಬಿಕೆ ಮತ್ತು ವೈಚಾರಿಕತೆಯನ್ನು ಸಮ ಸಮನಾಗಿ ನೋಡಿದಂತಹ ತತ್ತ್ವಜ್ಞಾನಿ ಅವರು. ಬಸವಣ್ಣನವರು ಇಡೀ ಜಗತ್ತಿಗೆ ಹೊಸ ಸಿದ್ಧಾಂತವನ್ನು ಕೊಟ್ಟವರು. ಹೊಸ ದರ್ಶನವನ್ನು ಕೊಟ್ಟವರು. ಅದೇನೆಂದರೆ, ನೀನು ನಂಬು ಮತ್ತು ಅದನ್ನು ಪ್ರಯೋಗಕ್ಕೆ ಒಡ್ಡು ಎಂಬುದು ಅವರ ಸಂದೇಶವಾಗಿದೆ. ‘ಇಷ್ಟಲಿಂಗದಲ್ಲಿ ನಂಬಿಕೆ ಮತ್ತು ಜಂಗಮಲಿಂಗದಲ್ಲಿ ಅದರ ವೈಚಾರಿಕ ಪ್ರಯೋಗ’ವೆಂಬುದು ಬಸವಾದಿ ಶರಣರ ಸಿದ್ಧಾಂತ. ಇದಕ್ಕೆ ‘ಉಭಯಕುಳ’ ಎಂದು ಬಸವಣ್ಣನವರು ಹೇಳುತ್ತಾರೆ.
ಇಷ್ಟಲಿಂಗ ನಮ್ಮನ್ನು ಒಂದು ಶಕ್ತಿಯ ಜೊತೆ ಕೂಡಿಹಾಕುತ್ತದೆ. ಇದನ್ನೇ ‘ಲಿಂಗಾಂಗಸಾಮರಸ್ಯ’ ಎಂದು ಹೇಳುತ್ತಾರೆ. ಜಂಗಮಲಿಂಗ ಅದನ್ನು ಪ್ರಯೋಗಕ್ಕೆ ಒಡ್ಡುತ್ತದೆ. ಧಾರ್ಮಿಕವಾಗಿ ನಮ್ಮ ಸ್ಥಿತಿ ಹೇಗಿದೆ ಎಂದರೆ, ಧರ್ಮಗ್ರಂಥಗಳನ್ನು ಯಾರಾದರೂ ಹಿಡಿದು ಕುಳಿತರೆ, ಅವರು ತಮ್ಮ ಕೊನೆಯ ದಿನಗಳನ್ನು ಸಮೀಪಿಸುತ್ತಿದ್ದಾರೆ ಅಥವಾ ಅಂಥವರಿಗಾಗಿ ಆಯಾ ಧರ್ಮಗಳ ಗುರುಗಳು ಓದಿ ತಿಳಿಸುತ್ತಿದ್ದಾರೆ ಎಂಬ ಭಾವ ಮೂಡುತ್ತದೆ. ಆದರೆ ಬಸವಣ್ಣನವರು ‘‘ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ, ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ, ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ, ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮದೇವನ.’’
‘‘ಶರೀರ ಗೂಡುವೋಗದ ಮುನ್ನ’’ ಅಂದರೆ ಯುವಕರಿದ್ದಾಗಲೇ ಈ ತತ್ತ್ವಜ್ಞಾನ ತಿಳಿದುಕೊಳ್ಳಿ ಎಂದು ಅರ್ಥವಾಗುತ್ತದೆ. ಬಸವ ತತ್ತ್ವಜ್ಞಾನ ಯುವಕರಿಗಾಗಿ ಇರುವ ತತ್ತ್ವಜ್ಞಾನ ಆಗಿದೆ. ಈ ಬದುಕಿನಲ್ಲಿ ಹೋರಾಟ ಮಾಡುತ್ತಾ, ನಂಬುತ್ತಾ, ನಂಬಿದ್ದನ್ನು ಪ್ರಯೋಗಕ್ಕೆ ತರುತ್ತಾ, ನಾವು ಮುಂದೆ ಹೋಗಬೇಕಾಗುತ್ತದೆ. ಜಂಗಮಲಿಂಗ ಎಂದರೆ ನಾವು ‘ಕಾಯಕ ಪ್ರಸಾದ ದಾಸೋಹ’ ಭಾವದೊಂದಿಗೆ ಈ ಜಗತ್ತಿನ ಸೇವೆಯನ್ನು ಮಾಡುವುದು. ಇದು ಇಡೀ ಮಾನವಕುಲವನ್ನು ಒಳಗೊಳ್ಳುವ ಕ್ರಿಯೆ. ಅಷ್ಟೇ ಅಲ್ಲ ಸಕಲ ಜೀವಾತ್ಮರನ್ನು ಒಳಗೊಳ್ಳುವಂಥದ್ದು. ಕಾಯಕ ಎಂಬುದು ಮಾನವಕುಲಕ್ಕೆ ಯೋಗ್ಯವಾದ ಉತ್ಪಾದನೆ ಮಾಡುವ ಕ್ರಿಯೆ. ಪ್ರಸಾದವೆಂದರೆ ಅಂಥ ಉತ್ಪನ್ನಗಳ ಸದ್ವಿನಿಯೋಗ. ದಾಸೋಹ ಎಂದರೆ ಮಿಗುತಾಯ ಮೌಲ್ಯದ ಸಾಮಾಜಿಕ ವಿತರಣೆ. ಬಸವಣ್ಣನವರು ಈ ಮೂಲಕ ಪರಿಪೂರ್ಣ ಸಮಾನತೆಯ ಸಮಾಜ ನಿರ್ಮಿಸಲು ಪ್ರಯತ್ನಿಸಿದರು.
ಇಪ್ಪತ್ತೊಂದನೆಯ ಶತಮಾನದಲ್ಲಿ ಬಹುತ್ವವನ್ನು ಎತ್ತಿ ಹಿಡಿಯುವ ಸಿದ್ಧಾಂತಗಳು ಬಂದಿವೆ. ಅವುಗಳ ಆಶಯವೇ ಒಳಗೊಳ್ಳುವುದು. ಎಲ್ಲರನ್ನೂ ಒಳಗೊಳ್ಳುವುದು. ಯಾವುದೇ ಜಾತಿ, ಮತ, ವರ್ಣ, ಕುಲ, ವರ್ಗ, ಲಿಂಗ, ದೇಶ ಮತ್ತು ಭಾಷೆಯ ಭೇದವಿಲ್ಲದೆ ಎಲ್ಲ ಮನುಷ್ಯರನ್ನು ಒಳಗೊಳ್ಳುವ ಸಿದ್ಧಾಂತವೇ ಸ್ವೀಕಾರ ಸಿದ್ಧಾಂತ (ಥಿಯರಿ ಆಫ್ ಇನ್‌ಕ್ಲುಶನ್). ‘‘ಇವ ನಮ್ಮವ, ಇವ ನಮ್ಮವ, ಇವ ನಮ್ಮವ’’ ಎಂದು ಬಸವಣ್ಣ ಹೇಳಿದ ಸ್ವೀಕಾರದ ಬಯಕೆ ಇಂದು ಥಿಯರಿ ಆಫ್ ಇನ್‌ಕ್ಲುಶನ್ ಆಗಿದೆ.

ಅದೇ ರೀತಿ ಬಹಿಷ್ಕಾರ ಸಿದ್ಧಾಂತ ಕೂಡ (ಥಿಯರಿ ಆಫ್ ಎಕ್ಸ್‌ಕ್ಲುಶನ್) ಬಸವಪೂರ್ವ ಯುಗದಿಂದಲೂ ಇದೆ. ಅದುವೇ ‘‘ಇವನಾರವ, ಇವನಾರವ, ಇವನಾರವ’’ ಎಂದು ಹೇಳುವ ಸಿದ್ಧಾಂತ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಸ್ಪಶ್ಯ ಮುಂತಾದ ವರ್ಣ ಮತು ಜಾತಿಗಳಿಂದ ಬೇರ್ಪಡಿಸುವ ಮನುವಾದಿ ಸಿದ್ಧಾಂತವು ಬೇರ್ಪಡಿಸುವ ‘ಬಹಿಷ್ಕಾರ ಸಿದ್ಧಾಂತ’ವಾಗಿದೆ. ಮೊತ್ತಮೊದಲ ಬಾರಿಗೆ ನಾವು ನಮ್ಮ ನೆಲದಲ್ಲಿ ಬಹಳ ಸ್ಪಷ್ಟವಾಗಿ ಮತ್ತು ಪ್ರಾಯೋಗಿಕವಾಗಿ ಒಳಗೊಳ್ಳುವ ಸಿದ್ಧಾಂತವನ್ನು ಕಂಡಿದ್ದು ಇದ್ದರೆ ಅದು ಶರಣರ ಚಳವಳಿಯಲ್ಲಿ. ಎಲ್ಲಿ ಕುಲಗಳಿಲ್ಲವೋ, ಎಲ್ಲಿ ಜಾತಿಗಳಿಲ್ಲವೊ, ಎಲ್ಲಿ ಸ್ತ್ರೀ ಪುರುಷ ಭೇದಭಾವಗಳಿಲ್ಲವೋ, ಎಲ್ಲಿ ವರ್ಗ ಭೇದವಿಲ್ಲವೋ ಅದಕ್ಕೆ ‘ಶರಣಸಂಕುಲ’ ಎಂದು ಶರಣರು ಕರೆದಿದ್ದಾರೆ. ಈ ಸಂಕುಲ ಪ್ರಜ್ಞೆ ಇಡೀ ವಿಶ್ವದಲ್ಲಿ ದೊಡ್ಡಮಟ್ಟದಲ್ಲಿ ಪ್ರಯೋಗವಾದದ್ದು ಶರಣಸಂಕುಲದಲ್ಲಿ. ಇಷ್ಟಲಿಂಗ ಏಕತ್ವದ ನಂಬಿಕೆಯ ಶಕ್ತಿಯನ್ನು ಕೊಡುತ್ತದೆ. ‘‘ನಂಬಿ ಕರೆದರೆ ಓ ಎನ್ನನೇ ಶಿವನು’’ ಎಂದು ಬಸವಣ್ಣನವರು ಹೇಳುತ್ತಾರೆ. ನಂಬಬೇಕು ನಂಬಿದ್ದನ್ನು ಆಚರಣೆಗೆ ತರಬೇಕು. ಇಷ್ಟಲಿಂಗ ಪೂಜೆ ಕೂಡ ನಮ್ಮನ್ನು ಪರೀಕ್ಷಿಸುವ ಮತ್ತು ಅರಿವನ್ನು ಕೊಡುವ ಪೂಜೆಯಾಗಿದೆ.
‘‘ಲಿಂಗವ ಪೂಜಿಸಿ ಫಲವೇನಯ್ಯ, ಸಮರತಿ ಸಮಕಳೆ ಸಮಸುಖವ ಅರಿಯದನ್ನಕ್ಕ? ಲಿಂಗವ ಪೂಜಿಸಿ ಫಲವೇನಯ್ಯ, ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?’’ ಎಂದು ಬಸವಣ್ಣನವರು ಹೇಳಿದ್ದಾರೆ. ಲಿಂಗ ಪೂಜೆಯ ಫಲವೇನೆಂದರೆ ಅರಿವು. ಬಹುತ್ವದ ಅರಿವು. ನಂಬಿದ್ದನ್ನು ಕ್ರಿಯೆಗೆ ಇಳಿಸುವ ಅರಿವು. ಜ್ಞಾನವಿಲ್ಲದ ಕ್ರಿಯೆಯನ್ನು ಶರಣರು ನಂಬುವುದಿಲ್ಲ. ಹಾಗೆಯೆ ಕ್ರಿಯೆಯಿಲ್ಲದ ಜ್ಞಾನವನ್ನೂ ನಂಬುವುದಿಲ್ಲ. ಅವರು ಕೊಟ್ಟ ಅರಿವು ಸಮರತಿ ಇದಕ್ಕೆ ಬಹಳ ದೃಷ್ಟಿಕೋನಗಳಿವೆ. ಏಕಕಾಲಕ್ಕೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಅರ್ಥಗಳನ್ನು ಈ ಪದ ಸ್ಫುರಿಸುತ್ತದೆ. ‘ಶರಣ ಸತಿ, ಲಿಂಗ ಪತಿ’ ಇದು ಆಧ್ಯಾತ್ಮಿಕ ಭಾವ. ಇದುವೇ ಲಿಂಗಾಂಗಸಾಮರಸ್ಯದ ಅರಿವು. ಸಾಮಾಜಿಕವಾಗಿ ಸಮರತಿ ಎಂದರೆ ಲಿಂಗಭೇದವಿಲ್ಲದ ಮನಸ್ಥಿತಿ. ಇಷ್ಟಲಿಂಗ ಪೂಜೆಮಾಡಿ ತಮ್ಮ ಹೆಂಡಂದಿರನ್ನು ಕೀಳಾಗಿ ಕಂಡರೆ ಇಷ್ಟಲಿಂಗ ಪೂಜೆಯ ಫಲವಿಲ್ಲ. ‘‘ಲಿಂಗಭೇದವಿಲ್ಲದಂಥ ಮನಸ್ಥಿತಿಯನ್ನು ಉಂಟುಮಾಡುವಂತಹದ್ದೇ ಲಿಂಗಪೂಜಾಫಲ’’ ಎಂದು ಬಸವಣ್ಣನವರು ಹೇಳುತ್ತಾರೆ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ