ಡಾ.ಸುನೀತಾ ಎಂ. ಶೆಟ್ಟಿ ಅವರ ‘ಸಮಾರಾಧನೆ’ ಕೃತಿ ಕುರಿತು ಒಂದಿಷ್ಟು...

Update: 2018-10-27 13:40 GMT

ಮುಂಚ್ಗಿಯ ಅಕ್ಷಯ ಪ್ರಕಾಶನ ದವರು ಪ್ರಕಟಿಸಿರುವ ದಕ್ಷಿಣ ಕನ್ನಡ ಮೂಲದ ಹಿರಿಯ ಲೇಖಕಿ, ಡಾ.ಎಂ. ಸುನೀತಾ ಶೆಟ್ಟಿ ಅವರ ಇತ್ತೀಚಿನ ವೈಚಾರಿಕ ಲೇಖನಗಳ ಸಂಗ್ರಹ ‘ಸಮಾರಾಧನೆ’ ಅನೇಕ ವಿಧದಲ್ಲಿ ಗಮನ ಸೆಳೆಯುತ್ತದೆ. ಒಟ್ಟು 213 ಪುಟಗಳ ಈ ಕೃತಿಯಲ್ಲಿ 28 ಲೇಖನಗಳಿದ್ದು ಇದರಲ್ಲಿನ ವಿಷಯ ವೈವಿಧ್ಯತೆಗಳ ಕಾರಣ ಓದುಗರಿಗೆ ಇದು ಎಲ್ಲೂ ಬೇಸರ ತರಿಸುವುದಿಲ್ಲ. ವಿವಿಧ ಸಿಹಿ ಭಕ್ಷಗಳು ಹಾಗೂ ವ್ಯಂಜನಗಳು ಸೇರಿದಂಥ ಸಮಾರಾಧನೆ ಊಟ ನೆನಪಿಸುವಂತೆ ಈ ಕೃತಿಗೆ ಇಂಥದ್ದೊಂದು ಶೀರ್ಷಿಕೆ ಸೂಕ್ತವಾದುದು ಎಂದು ಲೇಖಕಿ ಊಹಿಸಿರಬಹುದು. ಈ ಹಿಂದೆ ತಾನು ರಚಿಸಿದ್ದ ‘ಮೆರವಣಿಗೆ’ ಶೀರ್ಷಿಕೆಯ ಕೃತಿಯನ್ನು ಓದುಗರು ಮೆಚ್ಚಿಕೊಂಡಿದ್ದೇ ಈ ಕೃತಿ ರಚಿಸಲು ತನಗೆ ಪ್ರೇರಣೆಯಾಯಿತು. ಎಂದು ಲೇಖಕಿ ತನ್ನ ಮೊದಲ ಮಾತಿನಲ್ಲಿ ಹೇಳಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ಒಳ-ಹೊರನಾಡುಗಳಲ್ಲಿ ನಡೆದ ಸಾಹಿತ್ಯ ಗೋಷ್ಠಿಗಳಲ್ಲಿ, ಸಮ್ಮೇಳನದಲ್ಲಿ ಲೇಖಕಿ ಮಂಡಿಸಿದ ಪ್ರಬಂಧಗಳು ಹಾಗೂ ಇನ್ನಿತರ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದ ಸಂದರ್ಭದಲ್ಲಿ ಕರ್ನಾಟಕದ ಕನ್ನಡ ಸಂಸ್ಕೃತಿ ಇಲಾಖೆಯವರು ನಡೆಸಿದ ವಿಚಾರ ಸಂಕಿರಣದಲ್ಲಿ ಲೇಖಕಿ ಮಂಡಿಸಿದ ವಿಚಾರಗಳು ಅವರ ಪ್ರಥಮ ಲೇಖನ ಕನ್ನಡ ಅಭಿಮಾನ ಅಭಿಮಾನದಲ್ಲಿ ಪ್ರಕಟವಾಗಿವೆ. ಒಳ-ಹೊರನಾಡುಗಳಲ್ಲಿ ಹಾಗೂ ಕನ್ನಡ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾಡಿದ ಭಾಷಣಗಳೂ ಇಲ್ಲಿ ಅಚ್ಚಾಗಿದ್ದು ಕವಿಯಿತ್ರಿ ಕನ್ನಡಿಗರ ಮೆಚ್ಚಿನ ತ್ರಿವೇಣಿ, ವೀರಶೈವ ಶರಣ ಪ್ರಭಾವಿ ಭೋರಣ್ಣ ಮುಂತಾದವರ ವ್ಯಕ್ತಿ ಚಿತ್ರಣಗಳೂ ಇದ್ದು ಬರಲಿರುವ ಪೀಳಿಗೆಯವರಿಗೆ ಇವು ಮಾಹಿತಿ ಪೂರಕವಾಗಿದೆ. ಲಿಂಗ ಸಮಾನತೆ ವಿಷಯದ ಕುರಿತಾದ ಕ್ಲೀಷೆಯಾಗುತ್ತಿರುವ ಇಂದಿನ ದಿನಗಳಲ್ಲಿ ಯಾವ ಆಕ್ರೋಶ ಘೋಷಣೆಗಳಿಲ್ಲದೇ ವೌನಕ್ರಾಂತಿಯ ಸಾಧ್ಯತೆಗಳ ಕುರಿತು ತಾನು ವಿವೇಚನೆ ನಡೆಸಿದ್ದಾಗಿ ಲೇಖಕಿ ಹೇಳಿಕೊಂಡಿದ್ದಾರೆ. ಜೊತೆಗೆ ಸಿರಿ- ಒಂದು ಅಧ್ಯಯನ, ಅವಳಿ ವೀರರ ಮಹಾಕಾವ್ಯ, ಕರ್ನಾಟಕದ ರಾಣಿಯರ ಇತಿಹಾಸದ ಕುರಿತಾದ ಲೇಖನಗಳೂ ಈ ಕೃತಿಯಲ್ಲಿ ದಾಖಲಾಗಿವೆ.

ಒಳ - ಹೊರನಾಡು ಕನ್ನಡಿಗರು ಅಭಿಮಾನ ಪೂರ್ವಕ ಲೇಖಕಿಗೆ ಕಳಿಸಿಕೊಟ್ಟ ಕೃತಿ ವಿಮರ್ಶೆಗಳನ್ನು ಇದರಲ್ಲಿ ದಾಖಲಿಸಲಾಗಿದೆ. ವ್ಯಾಸರಾವ್ ನಿಂಜೂರರ ‘ಚಾಮುಂಡೇಶ್ವರಿ ಭವನ’, ಪ್ರೊ.ರಾಧಾಕೃಷ್ಣರ ‘ಪ್ರೇತಂಭಟ್ಟರ ನಿಂತಿಲ್ಲರು’, ಶಾರದಾ ಭಟ್ಟರ ‘ಪದರುಗಳು’ ಕಾದಂಬರಿಗಳ ವಿಮರ್ಶೆಯನ್ನು ಲೇಖಕಿ ಮಾಡಿದ್ದಾರೆ. ಗಮನ ವಚನ, ಹಿಂದಿ ಲೇಖಕ ಧನಾನಂದರ ಕುರಿತಾಗಿಯೂ ಲೇಖಕಿ ದಾಖಲಿಸಿರುತ್ತಾರೆ. ಹಲವಾರು ವರ್ಷಗಳಿಂದ ಮುಂಬೈಯಲ್ಲಿ ನೆಲೆಸಿರುವ ಲೇಖಕಿ ಮರಾಠಿ ಭಾಷೆಯ ಕುರಿತಾಗಿಯೂ ತನ್ನ ಒಲುಮೆ ಬೆಳೆಸಿಕೊಂಡಿದ್ದಾರೆ. ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡ ಇವರ ಅನೇಕ ನಾಟಕಗಳು ಪ್ರಯೋಗದ ನೆಲೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂಬುದೇ ಇದಕ್ಕೆ ಸಾಕ್ಷಿ . ಅದೇ ರೀತಿ ಡಾ.ಭಾಸ್ಕರಾನಂದ ಕುಮಾರರ ಮಹಾಭಾರತದ ಮುಖ್ಯ ಪಾತ್ರವಾದ ಭೀಷ್ಮನ ಕುರಿತಾದ ‘ಭೀಷ್ಮನ ಕೊನೆಯ ದಿನಗಳು’ ನಾಟಕದ ವಿವೇಚನಾತ್ಮಕ ವಿಮರ್ಶೆಯನ್ನು ಈ ಕೃತಿ ಒಳಗೊಂಡಿದೆ.

ಕೃತಿಯ ಕೊನೆಯಲ್ಲಿ ಲೇಖಕಿ ತಮ್ಮ ರಶ್ಯಾ ಪ್ರವಾಸದ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಅದನ್ನು ಓದಿದಾಗ ನಮಗೂ ರಶ್ಯಾ ಪ್ರವಾಸದ ಅನುಭವವಾಗುವಂತಿದೆ. ಅಲ್ಲಿ ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಪುಸ್ತಕ ಮೇಳಗಳನ್ನು ನೋಡಿದ ಇವರು ರಶ್ಯನ್ನರ ಪುಸ್ತಕ ಪ್ರೀತಿಯನ್ನು ಕೊಂಡಾಡಿದ್ದಾರೆ.

 ಈ ಕೃತಿಗೆ ಲೇಖಕ ವಿವೇಕ ಶ್ಯಾನುಭೋಗರು ಬೆನ್ನುಡಿಯನ್ನು ಬರೆದಿದ್ದು ಅದರ ಕೆಲವು ಮಾತುಗಳನ್ನು ಗಮನಿಸಿರಿ. ಮನುಷ್ಯನಿಗೆ ಒಂಟಿತನ ಕಾಡಿದಾಗಲೆಲ್ಲ ಅವನ ಮನಸ್ಸು ಪರ್ಯಾಯವಾಗಿ ಇನ್ನಿತರ ಆಸಕ್ತಿಗಳ ಕಡೆಗೆ ಜಾಗೃತವಾಗುತ್ತದೆ. ಇವುಗಳಲ್ಲಿ ಸಾಹಿತ್ಯ, ಕಲೆಗಳ ಜೊತೆಗೆ ಧಾರ್ಮಿಕ ವಿಷಯಗಳು ತಮ್ಮ ಒಳನೋಟ ಮತ್ತು ಸಹೃದಯರಿಗೆ ಮುಟ್ಟಬೇಕಾದರೆ ಜೀವನ ಪ್ರೀತಿ ಅವಶ್ಯ. ಏಕೆಂದರೆ ಸಾಹಿತ್ಯ ಬದುಕಿನ ನೈಜ ವ್ಯಾಖ್ಯಾನ ಅದು ಸಮಾಜದ ವ್ಯವಸ್ಥೆಯಲ್ಲಿನ ಸಾದೃಶ್ಯ ಮತ್ತು ವೈರುಧ್ಯಗಳನ್ನು ಕಟ್ಟಿಕೊಡುವಂಥದ್ದು. ಜೊತೆಗೆ ಬದುಕಿನ ಮಾನವೀಯ ಹಾಗೂ ಕರಾಳ ಚಹರೆಗಳನ್ನು ಪ್ರದರ್ಶಿಸುವಂಥಹದ್ದು. ಈ ದೃಷ್ಟಿಯಲ್ಲಿ ಮುಂಬೈಯ ಲೇಖಕಕರು ಇದನ್ನು ಪ್ರಜ್ಞಾಪೂರ್ವಕವಾಗಿ ಗಮನಿಸುತ್ತಾ ಬಂದಿದ್ದಾರೆ. ಈ ಮಾತಿಗೆ ಡಾ.ಸುನೀತಾ ಶೆಟ್ಟಿ ಇವರೂ ಹೊರತಾಗಿಲ್ಲ. ಕನ್ನಡ ಸಾಹಿತ್ಯದ ಕುರಿತು ಚರ್ಚಿಸುವಾಗ ಮುಂಬೈ ಲೇಖಕರ ಕೊಡುಗೆಯನ್ನು ಕಡೆಗಣಿಸುವಂತಿಲ್ಲ ಎಂದು ಹೇಳಿರುವ ವಿವೇಕ ಶ್ಯಾನುಭೋಗರ ಅಭಿಪ್ರಾಯ ನೂರಕ್ಕೆ ನೂರರಷ್ಟು ಸತ್ಯ ಎಂದು ಖಂಡಿತಾ ಹೇಳಬಹುದು.

Writer - ಕೆ.ಶಾರದಾ ಭಟ್, ಉಡುಪಿ

contributor

Editor - ಕೆ.ಶಾರದಾ ಭಟ್, ಉಡುಪಿ

contributor

Similar News