ಬಹುತ್ವದ ನೆಲೆಯಲ್ಲಿ ನಂಬಿಕೆ ಮತ್ತು ವೈಚಾರಿಕತೆ
ಭಾಗ-2
ಸಮಕಳೆ ಅಂದರೆ ಪ್ರಭಾವಳಿ. ವಿಭಿನ್ನ ಕಳೆ, ತೇಜಸ್ಸು ಇವೆಲ್ಲ ಸುಳ್ಳು. ಮಾನವ ತೇಜಸ್ಸು ಒಂದೇ ಸತ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಯಾವ ಬ್ರಹ್ಮಕಳೆಯೂ ಇಲ್ಲ, ಯಾವ ಬ್ರಹ್ಮತೇಜಸ್ಸೂ ಇಲ್ಲ, ಯಾವ ಕ್ಷಾತ್ರ ಕಳೆಯೂ ಇಲ್ಲ. ಇರುವುದೊಂದೇ ಮಾನವ ಕಳೆ, ಮಾನವ ತೇಜಸ್ಸು. ಇವತ್ತು ವಿಜ್ಞಾನವು ಇದನ್ನು ಸಮರ್ಥಿಸಿದೆ. ನಾವು ಯಾವುದನ್ನು ಪ್ರಭಾವಳಿ ಎಂದು ಕರೆಯುತ್ತೇವೆಯೋ ಅದು ದಲಿತನಿಗೂ ಇದೆ, ಬಡವನಿಗೂ ಇದೆ, ನಿರಕ್ಷರಿಗೂ ಇದೆ. ಕೇವಲ ಜ್ಞಾನಿಗಳ, ಶ್ರೀಮಂತರ, ಸಂತರ ಮತ್ತು ಮೇಲ್ಜಾತಿಯವರ ಸೊತ್ತು ಅಲ್ಲ ಅದು. ಪ್ರತಿಯೊಬ್ಬ ಮನುಷ್ಯನಿಗೂ ಆ ಕಳೆ ಇದೆ ಎಂದು ಬಸವಣ್ಣನವರು ಹೇಳಿದ್ದಾರೆ. ವಿಜ್ಞಾನವೂ ಅದನ್ನೇ ಹೇಳುತ್ತದೆ.
ಸಮಸುಖ ಅಂದರೆ ಈ ನಿಸರ್ಗ ಶ್ರೀಮಂತನಿಗೊಂದು ಬೆಳದಿಂಗಳು ಬಡವನಿಗೊಂದು ಬೆಳ ದಿಂಗಳನ್ನು ಕೊಟ್ಟಿಲ್ಲ. ಶ್ರೀಮಂತನಿಗೊಂದು ಬಿಸಿಲು ಬಡವನಿಗೊಂದು ಸೂರ್ಯೋದಯ ಕೊಟ್ಟಿಲ್ಲ. ಇಡೀ ನಿಸರ್ಗ ಬಹುತ್ವವನ್ನು ರಕ್ಷಣೆ ಮಾಡಿದೆ. ಮಾನವ ಕುಲವನ್ನಷ್ಟೇ ಅಲ್ಲ, ಸಕಲ ಜೀವಾತ್ಮರನ್ನು ಒಂದಾಗಿ ನೋಡುವ ಪಾಠವನ್ನು ಕಲಿಸಿದೆ. ಈ ನಿಸರ್ಗ ಸಿದ್ಧಾಂತವೇ ಬಸವ ಸಿದ್ಧಾಂತ ವಾಗಿದೆ. ಈ ಸಿದ್ಧಾಂತವನ್ನು ನಾವು ಇವತ್ತು ಅರ್ಥ ಮಾಡಿಕೊಳ್ಳಬೇಕಾಗಿದೆ. ಕೂಡಲಸಂಗಮದೇವರ ಪೂಜೆ ನದಿಯೊಳಗೆ ನದಿ ಬೆರೆಸಿದ ಹಾಗೆ ಮಾನವಕುಲವನ್ನು ಅಭೇದ್ಯವಾಗಿಸುವ ಶಕ್ತಿಯನ್ನು ಪಡೆದಿದೆ. ಹೀಗೆ ಎಲ್ಲ ಭೇದಗಳನ್ನು ಅಳಿಸುತ್ತ ಮಾನವಕುಲ ಒಂದಾಗುವ ಅರಿವೇ ಇಷ್ಟಲಿಂಗ ಪೂಜಾಫಲ!
ಆದ್ದರಿಂದ ಎಲ್ಲರನ್ನೂ ಒಳಗೊಳ್ಳುವ ಸಿದ್ಧಾಂತದ ಬಸವಧರ್ಮವು ವೈಜ್ಞಾನಿಕ ಮನೊೀಧರ್ಮದ ಪರಿಪೂರ್ಣ ಧರ್ಮವಾಗಿದೆ.
ಬಸವಣ್ಣನವರು ಕಾಯಕದ ಕುರಿತು ಹೇಳಿದ್ದಾರೆ. ಸೂರ್ಯ ಕಾಯಕ ಮಾಡದ ದಿನ ಸತ್ತಿರುತ್ತಾನೆ. ಚಂದ್ರ ಬೆಳದಿಂಗಳು ಕೊಡದ ದಿನ ಸತ್ತಿರುತ್ತಾನೆ. ನಕ್ಷತ್ರಗಳು ಬೆಳಕನ್ನು ಕೊಡದ ದಿನ ಸತ್ತಿರುತ್ತವೆ. ‘‘ರೂಪಿಂಗೆ ಕೇಡುಂಟು’’ ಯಾವುದು ಕಾಣಿಸುತ್ತದೋ ಅದು ಸಾಯುತ್ತದೆ. ‘‘ಸಕಲ ಜೀವರೆಲ್ಲರೂ ಪೃಥ್ವಿಯಿಂದ ಉದ್ಭವ.’’ ಎಲ್ಲ ಜೀವರು ಈ ಪೃಥ್ವಿಯಿಂದ ಉದ್ಭವವಾಗಿದ್ದಾರೆ. ಆದ್ದರಿಂದ ಜೀವಗಳ ಮಧ್ಯೆ ಮೈತ್ರಿ ಇರಬೇಕು. ಹೀಗೆ ಎಲ್ಲವನ್ನೂ ಒಳಗೊಳ್ಳುವ ಬಹುತ್ವದ ಪರಿಕಲ್ಪನೆ ಇರಬೇಕು ಎನ್ನುವುದು ಬಸವಾದಿ ಶರಣರ ದರ್ಶನವಾಗಿದೆ. ಆದ್ದರಿಂದ ಅವರು ದೇವರನ್ನು ಹೇಗೆ ನೋಡುತ್ತಾರೆ ಅಂದರೆ: ಸುಲಿಗೆ ಮಾಡುವ ದೇವರುಗಳು, ಅಭಿಷೇಕ ಬಯಸುವ ದೇವರುಗಳು, ಗುಡಿಯನ್ನು ಬೇಡುವ ದೇವರುಗಳು. ಇಂಥ ದೇವರುಗಳು ಲಿಂಗಾಯತದಲ್ಲಿ ಇಲ್ಲ. ಪ್ರತಿಯೊಬ್ಬರ ಒಳಗೆ ಬಸವಣ್ಣನವರ ದೇವರು ಆತ್ಮಸಾಕ್ಷಿಯ ರೂಪದಲ್ಲಿ ಇದ್ದಾನೆ. ಆ ಆತ್ಮಸಾಕ್ಷಿ ‘ಸಕಲ ಜೀವಾತ್ಮರಿಗೆ ಲೇಸನೇ ಬಯಸು’ ಎಂದು ಹೇಳುತ್ತದೆ. ‘‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು’’ ಎಂದು ಬಸವಣ್ಣ ಹೇಳಿದ್ದಾರೆ. ಆದ್ದರಿಂದ ಬಹುತ್ವದ ಬಹುದೊಡ್ಡ ಸಾಧನೆಯನ್ನು ನಮ್ಮ ಶರಣರು ಎಂಟುನೂರಾ ಐವತ್ತು ವರ್ಷಗಳ ಹಿಂದೆಯೇ ಮಾಡಿದರು. ಜಗತ್ತಿನಲ್ಲಿ ಎರಡೇ ಪ್ರಕಾರದ ಧರ್ಮಗಳಿವೆ ಎಂಬುದನ್ನು ಅವರು ಸರಳವಾಗಿ ಹೇಳಿದರು. ಆ ಧರ್ಮಗಳಿಗೆ ಯಾವುದೇ ದೇಶವಿರಲಿ, ಯಾವುದೇ ಭಾಷೆಯಿರಲಿ, ಯಾವುದೇ ಸಿದ್ಧಾಂತವಿರಲಿ; ಅವು ಎರಡೇ ಎರಡು ಪ್ರಕಾರದಲ್ಲಿ ವಿಭಜನೆಗೊಳ್ಳುತ್ತವೆ. ‘ಇವನಾರವ’ ಎಂದು ಕೇಳುವುದು ಒಂದು ಪ್ರಕಾರವಾದರೆ, ‘ಇವ ನಮ್ಮವ’ ಎಂದು ಹೇಳುವುದು ಇನ್ನೊಂದು ಪ್ರಕಾರ. ಈ ಪ್ರಕಾರಗಳು ಇಪ್ಪತ್ತೊಂದನೇ ಶತಮಾನದಲ್ಲಿ ಪ್ರಖರವಾಗಿವೆ. ‘ಇವನಾರವ’ ಎನ್ನುವುದು ಬಹುತ್ವಕ್ಕೆ ವಿರುದ್ಧವಾದದ್ದು. ಇವನಾರವ ಇವನಾರವ ಎಂದರೆ ಇವನು ಬಿಳಿಯ, ಕರಿಯ, ಎಂದು ಐರೋಪ್ಯದೇಶಗಳಲ್ಲಿ ಹೇಳಿದರೆ, ನಮ್ಮ ದೇಶದಲ್ಲಿ ಇವನು ಹೊಲೆಯ, ದಲಿತ, ಮಾದಿಗ, ಲಿಂಗಾಯತ, ಬ್ರಾಹ್ಮಣ, ಕುರುಬ, ಇವನು ಅಹಿಂದೂ ಇವನು ಹಿಂದೂ. ಈ ತೆರನಾದ ಇವನಾರವ ಎಂಬ ಪ್ರಶ್ನೆ ಮಾನವೀಯ ಸಂಸ್ಕೃತಿಗೆ ಮಾನವ ಘನತೆಗೆ ಮತ್ತು ಮನುಷ್ಯತ್ವಕ್ಕೆ ವಿರುದ್ಧವಾದುದು. ‘ಇವ ನಮ್ಮವ’ ಎಂದು ಹೇಳುವ ಮೂಲಕ ಬಸವಣ್ಣನವರು ಬಹುತ್ವವನ್ನು ಎತ್ತಿಹಿಡಿದಿದ್ದಾರೆ. ‘ಇವನಾರ’ ಎನ್ನುವುದನ್ನು ವಿರೋಧಿಸಿದ್ದಾರೆ.
ಬಸವಣ್ಣನವರು ಯಾವ ರೀತಿಯಾಗಿ ದೇವರನ್ನು ಪಡೆದುಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯವಾದದ್ದು. ನಿನ್ನ ನಾ ಅರಿಯದ ಮುನ್ನ ನೀನೆಲ್ಲಿದ್ದೆ ಎಂದು ತಮ್ಮೆಳಗಿನ ದೇವರಿಗೆ ಪ್ರಶ್ನಿಸುತ್ತಾರೆ. ಬಸವಣ್ಣನವರು ಯಾವುದೇ ರೀತಿಯ ಹೊರಗಿನ ದೇವರನ್ನು ಸ್ವೀಕರಿಸಿಲ್ಲ ಎಂಬುದಕ್ಕೆ ಈ ಸಾಲು ಸಾಕ್ಷಿಯಂತಿದೆ. ‘‘ನಿನ್ನ ನಾ ಅರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೇ ರೂಪಾದೆ. ಇನ್ನು ಜಂಗಮವೆ ಲಿಂಗವೆಂದು ನಂಬಿದೆ ಕೂಡಲಸಂಗಮದೇವಾ’’ಎಂದು ಬಸವಣ್ಣನವರು ಹೇಳುತ್ತಾರೆ. ಇದು ಬಹುತ್ವ. ಬಸವಣ್ಣನವರ ದೃಷ್ಟಿಯಲ್ಲಿ ಸಮಾಜವೆಂದರೆ ಬರಿ ಲಿಂಗಾಯತರಲ್ಲ, ಬರೀ ಕನ್ನಡಿಗರಲ್ಲ, ಬರೀ ಭಾರತೀಯರಲ್ಲ, ಬರೀ ಮನುಷ್ಯರೂ ಅಲ್ಲ, ಸಕಲ ಜೀವಾತ್ಮರೇ ಜಂಗಮ. ಜಂಗಮವೆಂದರೆ ಸಮಾಜ. ಈ ಸಮಾಜ ಹೇಗಿದೆ ಎಂದರೆ ಇರುವೆ ಎಂಬತ್ತು ಕೋಟಿ ಜೀವರಾಶಿ ಅಂತಾರಲ್ಲಾ ಹಾಗೆ. ಇದೆಲ್ಲವು ಸೇರಿ ಬಸವ ಸಮಾಜ. ಸಕಲ ಜೀವಾತ್ಮರ ಸಮಾಜ. ಅಲ್ಲಮ ಹೇಳಿದಂತೆ ಸಕಲ ಜೀವಾತ್ಮರು ಪೃಥ್ವಿಯಿಂದ ಉದ್ಭವಿಸಿದವರು. ಆದ್ದರಿಂದ ಇಡೀ ಜೀವಸಂಕುಲವೇ ಒಂದು ಕುಟುಂಬ.
Faithಜೀವಜಾಲ ಸಮತೋಲನದ ಕುರಿತು ಶರಣರು ಅವತ್ತೇ ಹೇಳಿದ್ದಾರೆ. ಆದ್ದರಿಂದ ಜಂಗಮವೇ ಲಿಂಗ, ಸಮಾಜವೇ ದೇವರು. ಇಂಥ ಬಹುತ್ವದ ಪರಿಕಲ್ಪನೆಯಲ್ಲಿಯೇ ಶರಣರು ತಮ್ಮ ವಚನಗಳನ್ನು ಬರೆದರು. ಇನ್ನು ನಂಬಿಕೆಗಳು ಮತ್ತು ವಿಚಾರಗಳು. ಕೆಳಮಟ್ಟದ ವ್ಯಕ್ತಿತ್ವ ಹೊಂದಿದವರ ಚಿಂತನೆಯಲ್ಲಿ ನಂಬಿಕೆ ಮತ್ತು ವಿಚಾರಗಳು ಒಟ್ಟೊಟ್ಟಿಗೆ ಸಾಗಲಾರವು. ನಂಬಿಕೆ ಎಂಬುದು ವಿಚಾರದ ಫಲವನ್ನು ಕೊಡುವಂತಿರಬೇಕು. ಅದು ಕುವಿಚಾರದ ಮತ್ತು ದ್ವೇಷದ ಫಲವನ್ನು ಕೊಟ್ಟರೆ ನಂಬಿಕೆಯಾಗಿ ಉಳಿಯುವುದಿಲ್ಲ. ನಂಬಿಕೆ ಅಂದ್ರೆ ಧರ್ಮ, .
ಎಲ್ಲ ಧರ್ಮಗಳಲ್ಲಿ ಎರಡು ಬಗೆಯ ಜನರನ್ನು ನೋಡುತ್ತೀರಿ. ಒಂದೇ ನಂಬಿಕೆಯಿಂದ ತದ್ವಿರುದ್ಧವಾದ ವಿಚಾರಗಳನ್ನು ಅವರು ಇಟ್ಟುಕೊಂಡಿರುತ್ತಾರೆ. ನಮಗೆ ಗೊತ್ತಿದೆ ಖಾನ್ ಅಬ್ದುಲ್ ಗಫ್ಫಾರ್ ಖಾನ್ ಅವರನ್ನು ‘ಗಡಿನಾಡ ಗಾಂಧಿ’ ಎಂದು ಕರೆಯುತ್ತೇವೆ. ಅವರು ಗಾಂಧೀಜಿಯವರ ನಿಜವಾದ ಶಿಷ್ಯರಾಗಿದ್ದರು. ಅವರು ಬಹುತ್ವದಲ್ಲಿ ನಂಬಿಕೆ ಇಟ್ಟಿದ್ದರು. ಇಸ್ಲಾಂ ಧರ್ಮದ ಹೆಸರಿನಲ್ಲಿ ಮಾನವ ಕುಲದ ಏಕತೆಯನ್ನು ಬಯಸಿದರು ಮತ್ತು ಬಹುತ್ವವನ್ನು ಗೌರವಿಸಿದರು. ಆದರೆ ಉಸಾಮಾ ಬಿನ್ ಲಾದೆನ್ ಅದೇ ಇಸ್ಲಾಂ ಧರ್ಮದ ಹೆಸರಿನಲ್ಲಿ ಸಾವಿರಾರು ಅಮಾಯಕ ಜನರನ್ನು ಕೊಲೆಗೈದ ನಂತರ ತಾನೇ ತನ್ನ ಕ್ರೌರ್ಯಕ್ಕೆ ಆಹುತಿಯಾದ. ನಾನು ಒಬ್ಬ ಸನಾತನ ಹಿಂದೂ ಎಂದು ಮಹಾತ್ಮಾ ಗಾಂಧೀಜಿಯವರು ಹೇಳುತ್ತಲೇ ನಮಗೆ ಬಹುತ್ವದ ಪಾಠವನ್ನು ಕಲಿಸಿದರು. ಆದರೆ ಗೋಡ್ಸೆ ಅಂಥ ಗಾಂಧೀಜಿಯವರನ್ನು ಕೊಲೆಮಾಡಿದ್ದು ಅದೇ ಹಿಂದೂ ಧರ್ಮದ ಒಂದು ತರ್ಕದ ಹಿನ್ನೆಲೆಯಲ್ಲಿ. ಜೀಸಸ್ ಜೀವನವಿಧಾನದ ಮೂಲಕ ಕ್ರೈಸ್ತ ಧರ್ಮದ ಸಂಸ್ಕೃತಿಯನ್ನು ಆಳವಾಗಿ ಅರಿತುಕೊಂಡ ಮದರ್ ತೆರೇಸಾ ಲಕ್ಷಾಂತರ ಜನ ಬೀದಿ ಮಕ್ಕಳನ್ನು ಮತ್ತು ಅನಾಥ ಮಕ್ಕಳನ್ನು ಸಾಕಿದರು. ಯಹೂದಿಗಳ ವಿರುದ್ಧ ಅದೇ ಕ್ರೈಸ್ತ ಧರ್ಮವನ್ನು ಬಳಸಿದ ಹಿಟ್ಲರ್, 1939ರಿಂದ 1945ರ ತನಕ ನಡೆದ ಎರಡನೇ ಮಹಾಯುದ್ಧದಲ್ಲಿ ಐದು ಕೋಟಿ ಜನರನ್ನು ಕೊಲೆಗೈದ. ಅದರಲ್ಲಿ ಶೇಕಡಾ ಇಪ್ಪತ್ತರಷ್ಟು ಮಾತ್ರ ಸೈನಿಕರು ಇದ್ದರು. ಉಳಿದ ಶೇಕಡಾ ಎಂಬತ್ತರಷ್ಟು ಜನ ಅಮಾಯಕರು, ತಾಯಂದಿರು, ವಯಸ್ಸಾದವರು, ಮಕ್ಕಳು, ಮುದುಕರು, ನಾಗರಿಕರು. ನಾಗರಿಕರು ವಾಸಿಸುವ ಸ್ಥಾನಗಳ ಮೇಲೆ ಹಿಟ್ಲರ್ ಬಾಂಬುಗಳನ್ನು ಹಾಕಿಸಿದ. ಅದೇ ಕ್ರೈಸ್ತ ಧರ್ಮದ ಹೆಸರಲ್ಲಿ ಯಹೂದಿ ಧರ್ಮ ವನ್ನು ದ್ವೇಷಿಸಿದ. ಗುರು ಗೋವಿಂದಸಿಂಗ್ ಸಿಖ್ಖರ ಹತ್ತನೇ ಧರ್ಮಗುರು. 1708ರಲ್ಲಿ ಗುರು ಗ್ರಂಥಸಾಹೇಬ್ ಗ್ರಂಥವನ್ನು ಸಂಪಾದಿಸಿದರು. ಇನ್ನು ಮೇಲೆ ಸಿಖ್ಖರಿಗೆ ಈ ಗ್ರಂಥವೇ ಗುರು; ಬೇರೆ ಯಾವ ಗುರುವೂ ಇಲ್ಲವೆಂದು ಹೇಳಿದರು. ಗ್ರಂಥಕ್ಕೆ ದೇವರ ಸ್ಥಾನವನ್ನು ಕಲ್ಪಿಸಿ ಸಿಖ್ಖರಿಗೆ ನೀಡಿದರು. ಅವರ ತಂದೆ ತೇಗ್‌ಬಹಾದ್ದೂರ್ ಅವರನ್ನು ಔರಂಗಜೇಬ್ ಸೈನಿಕರು ರಾಜಾಜ್ಞೆಯ ಪ್ರಕಾರ ಹಿಂಸೆಗೆ ಒಳಪಡಿಸಿದರು. ಕೊಲೆ ಮಾಡಿದರು. ನೋವು ಅನುಭವಿಸಿದ ಗುರುಗೋವಿಂದ ಸಿಂಗ್ ಹೇಳಿದ್ದೇನು. ‘‘ನನಗೆ ಯಾರ ಬಗ್ಗೆಯೂ ಅಸೂಯೆ ಇಲ್ಲ ನಾನೀಗ ಸಾಧು ಸಂತರ ಸಹವಾಸದಲ್ಲಿದ್ದೇನೆ. ಯಾರಿಗೂ ನಾನು ಹೊರತಾದವನಲ್ಲ. ಯಾರೂ ನನಗೆ ಹೊರತಾದವರಲ್ಲ’’ ಎಂದು ಇದು ಬಹುತ್ವ. ಇತಿಹಾಸವು ಕ್ರೌರ್ಯದ ಪುಟಗಳಿಂದ ತುಂಬಿದೆ. ನಾವು ಇತಿಹಾಸದ ತಪ್ಪುಗಳನ್ನು ಮನದಲ್ಲಿ ತುಂಬಿಕೊಂಡು ದ್ವೇಷವನ್ನು ಸಾಧಿಸುತ್ತ ಬದುಕಿದರೆ ಹುಲುಮಾನವರಾಗುತ್ತೇವೆ. ಹೊಸ ಇತಿಹಾಸವನ್ನು ರಚಿಸುವ, ಹೊಸ ಮಾನವೀಯ ಪರಿಕಲ್ಪನೆಯನ್ನು ಕೊಡುವ ಒಂದು ಶಕ್ತಿಯನ್ನು ಪಡೆದುಕೊಂಡಾಗ ನಿಜಕ್ಕೂ ಮನುಷ್ಯರಾಗುತ್ತೇವೆ. ಇದೇ ಬಹುತ್ವದ ುನುಷ್ಯತ್ವ.
ಮುಹಮ್ಮದ್ ಪೈಗಂಬರ್ ತಮ್ಮ ವಚನಗಳಲ್ಲಿ ಭಾರತದ ಬಗ್ಗೆ ಎರಡು ಕಡೆ ಮಾತನಾಡಿದ್ದಾರೆ. ಅವರು ಭಾರತವನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಆ ಕಾಲದಲ್ಲಿ ಅರಬರು ಭಾರತಕ್ಕೆ ‘ಹಿಂದ್’ ಎಂದು ಕರೆಯುತ್ತಿದ್ದರು. ಅವರೇಕೆ ಭಾರತವನ್ನು ಪ್ರೀತಿಸುತ್ತಿದ್ದರು ಅನ್ನಲಿಕ್ಕೆ ನಾವು ಬೃಹದಾರಣ್ಯಕ ಉಪನಿಷತ್ ಕಡೆ ತಿರುಗಬೇಕು. 1,500 ವರ್ಷಗಳ ಹಿಂದೆ ಮುಹಮ್ಮದ್ ಪೈಗಂಬರರು ಭಾರತವನ್ನು ಕುರಿತು ಹೀಗೆ ಹೇಳುತ್ತಾರೆ: ‘‘ನಾನು ಅರಬಸ್ತಾನದಲ್ಲಿ ಇದ್ದೇನೆ. ಆದರೆ ನನ್ನೊಳಗೆ ಅರಬಸ್ತಾನ ಇಲ್ಲ. ನಾನು ಭಾರತದಲ್ಲ್ಲಿ ಇಲ್ಲ ಆದರೆ ನನ್ನೊಳಗೆ ಭಾರತ ಇದೆ.’’ ಅವರೇ ಇನ್ನೊಂದು ಕಡೆ ‘‘ಭಾರತದಿಂದ ನನ್ನೆಡೆಗೆ ತಂಪುಗಾಳಿ ಬೀಸುತ್ತಿದೆ’’ ಎಂದು ತಿಳಿಸುತ್ತಾರೆ. ಇದು ಬಹಳ ಮಹತ್ವದ ಮಾತು. ಆಧ್ಯಾತ್ಮಿಕವಾಗಿ ತಂಪು ಎಂದರೆ ಶಾಂತಿ ಎಂದರ್ಥ. ಈ ದೇಶ ಸಹಸ್ರಾರು ವರ್ಷಗಳ ಹಿಂದೆ ಜಗತ್ತಿಗೆ ಏನಾದರು ಕೊಟ್ಟಿದ್ದರೆ ಅದು ತಂಪುಗಾಳಿ. ಈ ಶಾಂತಿಯ ಸಂದೇಶವನ್ನು ನಾವು ಮರೆಯಬಾರದು. ತಂಪುಗಾಳಿ ಈಗ ಗರಂ ಹವಾ ಆಗಿದೆ. 1,500 ವರ್ಷಗಳ ಹಿಂದೆಯೇ ಹಿಂದುಸ್ಥಾನದಿಂದ ತಂಪುಗಾಳಿ ಮುಹಮ್ಮದ್ ಪೈಗಂಬರರಿಗೆ ತಲುಪಿದೆ ಎಂದರೆ ಈ ನೆಲದ ಬಹುತ್ವದ ಶಕ್ತಿ ಎಷ್ಟು ಮಹತ್ವದ್ದು ಮತ್ತು ಜಗತ್ತು ಅದನ್ನು ಹೇಗೆ ಸ್ವೀಕರಿಸುತ್ತಿತ್ತು ಎನ್ನುವುದರ ಕುರಿತು ನಾವು ಆಲೋಚಿಸಬೇಕಾಗಿದೆ.
ನಮ್ಮ ಉಪನಿಷತ್ತುಗಳು ವಿಶ್ವಧರ್ಮಕ್ಕೆ ಸೇರಿವೆ. ದಯವಿಟ್ಟು ಉಪನಿಷತ್ತುಗಳನ್ನು ಯಾವುದೇ ಧರ್ಮದ ಬಾಲಂಗೋಚಿಗಳಾಗಿ ಮಾಡಬಾರದು ಎಂಬುದು ನನ್ನ ಮನವಿ. ಇಡೀ ವಿಶ್ವವನ್ನು ಬಹುತ್ವದ ಶಕ್ತಿಯೊಂದಿಗೆ ಏಕತ್ರಗೊಳಿಸುವ ಶಕ್ತಿ ನಮ್ಮ ಉಪನಿಷತ್ತುಗಳಿಗೆ, ವಚನಗಳಿಗೆ, ಮಹಾವೀರನ ಮಾತುಗಳಿಗೆ, ಬುದ್ಧನ ಮಾತುಗಳಿಗೆ ಇದೆ ಎಂಬುದನ್ನು ಮರೆಯಬಾರದು.
‘ಸಹನಾವವತು’ ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ ಪ್ರಾರ್ಥನೆ ಯಲ್ಲಿ ಹೇಳುತ್ತಿದ್ದ ಶ್ಲೋಕವಿದು. ‘‘ಸಹನಾವವತು ಸಹನೌ ಭುನಕ್ತು, ಸಹವೀರ್ಯಂ ಕರವಾವಹೈಃ ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈಃ ಓಂ ಶಾಂತಿಃ ಶಾಂತಿಃ ಶಾಂತಿಃ.’’
‘ಬೃಹದಾರಣ್ಯಕ ಉಪನಿಷತ್’ನ ಈ ಮಾತು: ನಾವೆಲ್ಲರೂ ಕೂಡಿ ಆಡೋಣ, ನಾವೆಲ್ಲರೂ ಕೂಡಿ ಉಣ್ಣೋಣ, ನಾವೆಲ್ಲರೂ ಸಮರ್ಥರಾಗೋಣ, ನಾವೆಲ್ಲರೂ ತೇಜಸ್ವಿಗಳಾಗೋಣ, ನಾವೆಲ್ಲರೂ ದ್ವೇಷವನ್ನು ತೊರೆಯೋಣ. ಓಂ ಶಾಂತಿಃ ಶಾಂತಿಃ ಶಾಂತಿಃ.