ಜನಮಾನಸದಿಂದ ಕಣ್ಮರೆಯಾಗಿರುವ ಸ್ವಾತಂತ್ರ್ಯ ಹೋರಾಟಗಾರ ‘ಮುಸ್ಲಿಂ ವೆಲ್ಲೂರಿ’

Update: 2018-10-28 18:46 GMT

ದೇಶಕ್ಕೆ ಸ್ವಾತಂತ್ರ ದೊರೆತು 72 ವರ್ಷಗಳಾಗಿವೆ. ಆದರೆ, ಇಂದಿಗೂ ಹಲವಾರು ಮಂದಿ ಸ್ವಾತಂತ್ರ ಹೋರಾಟಗಾರರ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ನಮ್ಮ ರಾಜ್ಯದ ಹೆಮ್ಮೆಯ ಸ್ವಾತಂತ್ರ ಹೋರಾಟಗಾರರೊಬ್ಬರು ಜನಮಾನಸದಿಂದ ಕಣ್ಮರೆಯಾಗಿರುವುದು ದುರದೃಷ್ಟಕರ.

1977ರ ಅಕ್ಟೋಬರ್ 30ರಂದು ಬೆಂಗಳೂರಿನ ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ಮುಸ್ಲಿಂ ವೆಲ್ಲೂರಿ, ನಮ್ಮನ್ನು ಅಗಲಿ ಇಂದಿಗೆ 40 ವರ್ಷಗಳೇ ಕಳೆದು ಹೋಗಿವೆ. ತಮ್ಮ ಜೀವನವನ್ನು ಸ್ವಾತಂತ್ರ ಹೋರಾಟ, ಸಮಾಜ ಸೇವೆ, ಪ್ರಗತಿಪರ ಚಿಂತನೆಗೆ ಮುಡಿಪಾಗಿಟ್ಟ ಧೀಮಂತ ವ್ಯಕ್ತಿ ಮುಹಮ್ಮದ್ ಅಬ್ದುಲ್ ವಾಹಿದ್‌ಖಾನ್ ಯಾನೆ ಮುಸ್ಲಿಂ ವೆಲ್ಲೂರಿ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಮ್‌ನಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಮುಹಮ್ಮದ್ ಆದಮ್ ಖಾನ್ ಅವರ ಮಗನಾಗಿ 1883ರಲ್ಲಿ ಮುಹಮ್ಮದ್ ಅಬ್ದುಲ್ ವಾಹಿದ್‌ಖಾನ್ ಜನಿಸಿದರು. ಮಂಡ್ಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಇವರು, ಆನಂತರ ತಮಿಳುನಾಡಿನ ವೆಲ್ಲೂರಿನಲ್ಲಿರುವ ಮದ್ರಸಾದಲ್ಲಿ ಉರ್ದು, ಪರ್ಶಿಯನ್ ಹಾಗೂ ಧಾರ್ಮಿಕ ಶಿಕ್ಷಣವನ್ನು ಪಡೆದರು. ಆನಂತರ, ಮುಹಮ್ಮದ್ ಅಬ್ದುಲ್ ವಾಹಿದ್‌ಖಾನ್, ವೌಲ್ವಿ ುುಸ್ಲಿಂ ವೆಲ್ಲೂರಿಯಾಗಿ ಕರೆಯಲ್ಪಟ್ಟರು.
ಸ್ವಾತಂತ್ರ ಸಂಗ್ರಾಮದಲ್ಲಿ ‘ಮುಸ್ಲಿಂ ವೆಲ್ಲೂರಿ’ ಎಂದೇ ಇವರು ಖ್ಯಾತಿಯನ್ನು ಗಳಿಸಿದರು. ಬ್ರಿಟಿಷ್ ಆಡಳಿತದ ವಿರುದ್ಧ ಮುಸ್ಲಿಂ ವೆಲ್ಲೂರಿ ಧ್ವನಿ ಎತ್ತುತ್ತಿದ್ದುದರಿಂದ, ಬ್ರಿಟಿಷ್ ಅಧಿಕಾರಿಗಳಿಂದ ವೆಲ್ಲೂರಿ ಹಲವು ಬಾರಿ ತೊಂದರೆ, ಕಿರುಕುಳನ್ನು ಅನುಭವಿಸುವಂತಾಗುತ್ತಿತ್ತು.
 ವೆಲ್ಲೂರಿನಲ್ಲಿ ಧಾರ್ಮಿಕ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮುಸ್ಲಿಂ ವೆಲ್ಲೂರಿ, ತಮ್ಮ ಸಂಬಂಧಿಕರ ಮೂಲಕ ಜೀವನೋಪಾಯಕ್ಕಾಗಿ ಮುಂಬೈನಲ್ಲಿ ಒಂದು ಹಡಗಿನ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಇದರ ಪರಿಣಾಮವಾಗಿ ದೇಶದ ಪ್ರಮುಖ ವ್ಯಕ್ತಿಗಳೊಂದಿಗೆ ವಿದೇಶ ಪ್ರಯಾಣ ಮಾಡುವ ಅವಕಾಶವು ಅವರಿಗೆ ಒದಗಿ ಬಂದಿತ್ತು.
ಬರ್ಮಾ, ಸುಮಾತ್ರ, ಜಾವಾ, ಮಾರಿಷಸ್, ಸಿಲೋನ್, ಮಡಗಾಸ್ಕರ್ ಸೇರಿದಂತೆ ಮಧ್ಯಪ್ರಾಚ್ಯದ ಹಲವಾರು ನಗರಗಳಿಗೆ ಮುಸ್ಲಿಂ ವೆಲ್ಲೂರಿ ಭೇಟಿ ನೀಡಿದ್ದರು. ಒಮ್ಮೆ ಡರ್ಬನ್‌ನಲ್ಲಿ ಮಹಾತ್ಮಾಗಾಂಧೀಜಿಯನ್ನು ಭೇಟಿ ಮಾಡುವ ಅವಕಾಶವು ಅವರಿಗೆ ಲಭಿಸಿತು. ಈ ಭೇಟಿಯೂ ವೆಲ್ಲೂರಿ ಅವರ ಜೀವನದ ಮೇಲೆ ಗಾಢವಾದ ಪರಿಣಾಮ ಬೀರಿತು. ಡರ್ಬನ್‌ನಿಂದ ಇವರು ಹಿಂದಿರುಗಿದಾಗ ಮುಂಬೈನ ಬ್ರಿಟಿಷ್ ಸರಕಾರ ಇವರನ್ನು ಬಂಧಿಸಿ ಜೈಲಿಗೆ ಅಟ್ಟಿತು.
ನೇತಾಜಿ ಸುಭಾಶ್ಚಂದ್ರ ಬೋಸ್ ಅವರೊಂದಿಗೆ ಸಿಂಗಾಪುರಕ್ಕೂ ಮುಸ್ಲಿಂ ವೆಲ್ಲೂರಿ ಹೋಗಿದ್ದರು. 1919-1922ರಲ್ಲಿ ನಡೆದ ಖಿಲಾಫತ್ ಚಳವಳಿಯಲ್ಲಿ ಸಕ್ರಿವಾಗಿ ಪಾಲ್ಗೊಂಡ ಮುಸ್ಲಿಂ ವೆಲ್ಲೂರಿಗೆ ಮಹಾತ್ಮಾಗಾಂಧಿ, ಮುಹಮ್ಮದ್ ಅಲಿ ಹಾಗೂ ಶೌಕತ್ ಅಲಿ(ಅಲಿ ಸಹೋದರರು), ಡಾ.ಮುಖ್ತಾರ್‌ಅಹ್ಮದ್ ಅನ್ಸಾರಿ, ಹಕೀಮ್ ಅಜ್ಮಲ್‌ಖಾನ್, ಸೈಫುದ್ದೀನ್ ಕಿಟ್ಚ್‌ಲೇವ್ ಅವರ ಸಾಂಗತ್ಯ ಸಿಕ್ಕಿತು.
ಶ್ರೇಷ್ಠ ಕವಿ ಮುಹಮ್ಮದ್ ಇಕ್ಬಾಲ್ ಅವರ ಕವಿತೆಗಳಿಂದ ಪ್ರೇರಿತರಾಗಿ ಮುಂಬೈನಲ್ಲಿ ಖಿಲಾಫತ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜನಸಾಮಾನ್ಯರನ್ನು ತಮ್ಮ ಪ್ರಖರ ಭಾಷಣಗಳ ಮೂಲಕ ಮುಸ್ಲಿಂ ವೆಲ್ಲೂರಿ ಆಕರ್ಷಿಸುತ್ತಿದ್ದರು. ಸ್ವಾತಂತ್ರ ಸಂಗ್ರಾಮದಲ್ಲಿ ಜನರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಅವರು ಮಾಡುತ್ತಿದ್ದ ಭಾಷಣಗಳಿಂದಾಗಿ ಹಲವಾರು ಬಾರಿ ಜೈಲುವಾಸ ಅನುಭವಿಸುವಂತಾಯಿತು.
ನಾಗ್ಪುರದಲ್ಲಿ ನಡೆದ ಕಾಂಗ್ರೆಸ್ ಮಹಾ ಅಧಿವೇಶನದ ಬಳಿಕ ಮುಸ್ಲಿಂ ವೆಲ್ಲೂರಿಯನ್ನು ಬಂಧಿಸಿ ಎರಡು ವರ್ಷ ಜೈಲಿಗೆ ಅಟ್ಟಲಾಯಿತು. ಆನಂತರ, ತಮ್ಮ 28ನೆ ವಯಸ್ಸಿನಲ್ಲಿ 1924 ರಿಂದ 1927ರವರೆಗೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಮುಸ್ಲಿಂ ವೆಲ್ಲೂರಿ ಜೈಲುವಾಸ ಅನುಭವಿಸಿದರು.
  ಪ್ರತಿ ಬಾರಿ ಇವರನ್ನು ಜೈಲಿಗೆ ಅಟ್ಟಿದಾಗ ಇವರ ಆಸ್ತಿ, ಪಾಸ್ತಿಗಳನ್ನು ಬ್ರಿಟಿಷ್ ಸರಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು. ಜೈಲಿನಿಂದ ಹೊರಗೆ ಬಂದ ನಂತರ ತಮ್ಮ ಜೀವನೋಪಾಯಕ್ಕಾಗಿ ಪರದಾಡುವುದು ಸಾಮಾನ್ಯ ಸಂಗತಿಯಾಗುತ್ತಿತ್ತು. ಅಂಡಮಾನ್ ನಿಕೋಬಾರ್‌ನ ‘ಕಾಲಾ ಪಾನಿ’ ಜೈಲುಶಿಕ್ಷೆಯನ್ನು ಮುಸ್ಲಿಂ ವೆಲ್ಲೂರಿ ಅನುಭವಿಸಿದ್ದರು. ಆದರೂ, ಸ್ವಾತಂತ್ರ ಹೋರಾಟದಿಂದ ಹಿಂದೆ ಬೀಳಲಿಲ್ಲ.
ಮುಸ್ಲಿಂ ವೆಲ್ಲೂರಿ ಹೊಂದಿದ್ದ ಗಡ್ಡದ ಬಗ್ಗೆ ಬ್ರಿಟಿಷ್ ಅಧಿಕಾರಿಯೊಬ್ಬರು ಒಮ್ಮೆ ವ್ಯಂಗ್ಯವಾಡಿದ್ದರು. ಇದರಿಂದ ಕೆರಳಿದ ಅವರು, ಆತನ ಬಳಿಯಿದ್ದ ಆಯುಧವನ್ನೆ ಕಿತ್ತುಕೊಂಡು ಹಲ್ಲೆ ನಡೆಸಲು ಮುಂದಾಗಿದ್ದರು. ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, 1927ರಲ್ಲಿ ಮೈಸೂರಿನಲ್ಲಿ ಬಾಲಕರ ಅನಾಥಾಶ್ರಮವನ್ನು ಆರಂಭಿಸಿದರು. ಈ ಅನಾಥಾಶ್ರಮ ಆರಂಭಿಸಲು ಸಂಜೆ 6 ಗಂಟೆಯಿಂದ ಮುಂಜಾನೆ ನಾಲ್ಕು ಗಂಟೆಯವರೆಗೆ ಮೀಲಾದ್ ಮೈದಾನದಲ್ಲಿ ಭಾಷಣ ಮಾಡಿ ದೇಣಿಗೆ ಸಂಗ್ರಹ ಮಾಡಿದ್ದರು.


ಇದಲ್ಲದೆ, ಆಂಧ್ರಪ್ರದೇಶದ ಕಡಪದಲ್ಲಿಯೂ ಅನಾಥಾಶ್ರಮ ಆರಂಭಿಸಿದ್ದಾರೆ. ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು, ಮಹಿಳೆಯರ ಹಕ್ಕುಗಳಿಗಾಗಿಯೂ ಧ್ವನಿ ಎತ್ತುತ್ತಿದ್ದರು. ರಾಜ್ಯದ ಪ್ರಮುಖ ಮುಸ್ಲಿಂ ಸಮಾಜದಲ್ಲಿ ಪ್ರಬಲ ನಾಯಕರಾಗಿ ಹೊರ ಹೊಮ್ಮಿದ್ದರೂ, ಸ್ವಾತಂತ್ರಾನಂತರ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನ ಕೆಲವು ನಾಯಕರ ಚಿತಾವಣೆಯಿಂದ ನೇಪಥ್ಯಕ್ಕೆ ಸರಿಯುವಂತಾಯಿತು ಎಂದು ಬೆಂಗಳೂರಿನ ಅಲ್ ಅಮೀಲ್ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕರಾಗಿರುವ ಅವರ ಮೊಮ್ಮಗಳು ಡಾ.ಶಾಕಿರಾ ಖಾನಂ ಬೇಸರ ವ್ಯಕ್ತಪಡಿಸುತ್ತಾರೆ.
ಕೈ ಹಿಡಿದ ಕೆಂಗಲ್: ಸ್ವಾತಂತ್ರ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ದೇಶ ಸ್ವತಂತ್ರಗೊಂಡ ನಂತರ ಮುಸ್ಲಿಂ ವೆಲ್ಲೂರಿ ಜೀವನ ಸಾಕಷ್ಟು ಕಷ್ಟದಲ್ಲಿ ಕಳೆಯಿತು. ತುಂಬು ಕುಟುಂಬದ ನಿರ್ವಹಣೆಯೇ ಬಹುದೊಡ್ಡ ಸವಾಲಾಗಿತ್ತು. ಇಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆ.ಆರ್.ಮಾರುಕಟ್ಟೆ ಬಳಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಗೆ ಇವರು ಎದುರಾದರು.
ಮುಸ್ಲಿಂ ವೆಲ್ಲೂರಿಗೆ ಕೆಂಗಲ್ ಹನುಮಂತಯ್ಯ ಕಾಂಗ್ರೆಸ್ ಟಿಕೆಟ್ ನೀಡಿ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆ ಮಾಡಿಸಿದರು. ಆನಂತರವಷ್ಟೇ ಇವರ ಕುಟುಂಬದ ಪರಿಸ್ಥಿತಿ ಸುಧಾರಿಸಿದ್ದು. ಮಹಾತ್ಮಾಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು, ಕೆಲವು ವಿಚಾರಗಳಿಂದ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು.
ಟಿಪ್ಪು ಸುಲ್ತಾನ್ ಮೇಲೆ ಅಭಿಮಾನ: ಮೈಸೂರು ಹುಲಿ ಟಿಪ್ಪುಸುಲ್ತಾನ್ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದ ಅವರು, ಅವರ ಆಡಳಿತ ವೈಖರಿಗೆ ಸಂಬಂಧಿಸಿದಂತೆ ‘ಸಲ್ತನತೇ ಖುದಾದಾದ್’ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದರು. ಅಲ್ಲದೆ, ತಮ್ಮ ಮೂವರು ಗಂಡು ಮಕ್ಕಳಿಗೆ ಟಿಪ್ಪು ಮುಜಾಹಿದ್‌ಖಾನ್, ಟಿಪ್ಪು ಖಾಲಿದ್‌ಖಾನ್, ಟಿಪ್ಪು ಶಾಹಿದ್‌ಖಾನ್ ಎಂದು ನಾಮಕರಣ ಮಾಡಿದ್ದರು.
ಸಾಹಿತ್ಯದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ವೆಲ್ಲೂರಿ ಸುಮಾರು 53 ಪುಸ್ತಕಗಳನ್ನು ಬರೆದಿದ್ದಾರೆ. ಇವರ ಹಲವು ಪುಸ್ತಕಗಳು ಉರ್ದು ಮಾಧ್ಯಮದ ಶಾಲೆಗಳಲ್ಲಿ ಪಠ್ಯಪುಸ್ತಕಗಳಾಗಿ ಬಳಕೆಯಾಗಿದ್ದವು ಎಂದು ಡಾ.ಶಾಕಿರಾ ಖಾನಂ ಸ್ಮರಿಸಿಕೊಳ್ಳುತ್ತಾರೆ.

Writer - ಅಮ್ಜದ್‌ಖಾನ್ ಎಂ.

contributor

Editor - ಅಮ್ಜದ್‌ಖಾನ್ ಎಂ.

contributor

Similar News

ಜಗದಗಲ
ಜಗ ದಗಲ