ಭಾರತದ ಒಣಪ್ರತಿಷ್ಠೆಗೊಂದು ಅದ್ದೂರಿಯ ಪ್ರತಿಮೆ!

Update: 2018-10-30 18:38 GMT

ಪಟೇಲರ ಪ್ರತಿಮೆ ಮೂಲತಃ ರಾಷ್ಟ್ರೀಯತೆಯೇ ಆದರೂ, ಅದು ಜಾಗತಿಕ ಸರಕಾರಗಳ ಮೂಲ ಬಿಗಿತಗಳನ್ನು, ಆತಂಕಗಳನ್ನು ಒಳಗೊಂಡಿದೆ; ಪ್ರತಿಮೆಯ ಬಹುಮಟ್ಟದ ಸಂಕೇತ, ಅದರ ನಿರ್ಮಾಣ ಮತ್ತು ರಾಜಕೀಯ ರಂಗದಲ್ಲಿ ಅದು ಬೀರಬಹುದಾದ ಊಹಿಸಲಾಗದ ಪರಿಣಾಮಗಳನ್ನು ನಾವು ಗಮನಿಸಬೇಕಾಗಿದೆ. ಪ್ರತಿಮೆಯ ಮೂಲದಲ್ಲಿರುವ ಈ ಒತ್ತಡಗಳನ್ನು ಹಾಗೂ ಬಿಗಿತಗಳನ್ನು, ಟೆನ್ಶನ್‌ಗಳನ್ನು ಯಾವುದೇ ಜಾಗತಿಕ ಮಟ್ಟದ ಇಂಜಿನಿಯರಿಂಗ್ ಪರಿಣತಿ ಪರಿಹರಿಸಲಾರದು.

ಇಂದು (ಅಕ್ಟೋಬರ್ 31) ಪ್ರಧಾನಿ ನರೇಂದ್ರ ಮೋದಿಯವರು ವಿವಾದಾಸ್ಪದ ಸರ್ದಾರ್ ಸರೋವರ ಬೃಹತ್ ಅಣೆಕಟ್ಟಿನ ಸಮೀಪವಿರುವ ಒಂದು ನದಿ ದ್ವೀಪವಾಗಿರುವ ಸಾಧು ಬೇಟ್‌ನಲ್ಲಿ 597ಅಡಿ (182 ಮೀಟರ್) ಎತ್ತರದ ಸರ್ದಾರ್ ಪಟೇಲರ ‘ಏಕತೆಯ ಪ್ರತಿಮೆ’ ಅಥವಾ ‘ಸ್ಟಾಚೂ ಆಫ್ ಯುನಿಟಿ’ಯನ್ನು ಉದ್ಘಾಟಿಸಲಿದ್ದಾರೆ.
ಸ್ಟಾಚೂ ಆಫ್ ಲಿಬರ್ಟಿಯ ಎರಡು ಪಾಲು ಎತ್ತರವಿರುವ ಈ ಪ್ರತಿಮೆ ಸದ್ಯಕ್ಕೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾಗಲಿದೆ. ಆದರೆ ಇನ್ನು ಕೆಲವು ವರ್ಷಗಳಲ್ಲಿ ಮುಂಬೈಯ ಕರಾವಳಿಯಿಂದ ದೂರದಲ್ಲಿ ಸ್ಥಾಪನೆಯಾಗಲಿರುವ ಶಿವಾಜಿಯ 695 ಅಡಿ(212 ಮೀಟರ್) ಎತ್ತರದ ಪ್ರತಿವೆುಯ ಮುಂದೆ ಈ ಪ್ರತಿಮೆ ‘ವಿಶ್ವದ ಅತ್ಯಂತ ಎತ್ತರದ ಪ್ರತಿಮೆ’ ಎಂಬ ತನ್ನ ಹೆಗ್ಗಳಿಕೆಯನ್ನು ಕಳೆದುಕೊಳ್ಳಲಿದೆ. ಇದುವರೆಗೆ ಚೀನಾದ ಹೆನಾನ್‌ನಲ್ಲಿರುವ 420 ಅಡಿ ಎತ್ತರದ ಸ್ಟ್ರಿಂಗ್ ಟೆಂಪಲ್ ಬುದ್ಧ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾಗಿತ್ತು. ವಿಶ್ವದ ಅತ್ಯಂತ ಬೃಹತ್ ಪ್ರತಿಮೆಗಳಲ್ಲಿ ಹೆಚ್ಚಿನವುಗಳು ಚೀನಾ, ಭಾರತ ಜಪಾನ್ ಮತ್ತು ತೈವಾನ್‌ನಲ್ಲಿವೆೆ.
ಫ್ರಾನ್ಸ್ ದೇಣಿಗೆಯಾಗಿ ನೀಡಿದ ಲೇಡಿ ಲಿಬರ್ಟಿ ಪ್ರತಿಮೆಯಿಂದಾಗಿ ಅಮೆರಿಕ ಜಾಗತಿಕ ಅಧಿಕಾರದ ಒಂದು ಸಂಕೇತವಾಯಿತೆನ್ನುವುದಾದರೆ, ಈ ಏಶ್ಯನ್ ರಾಷ್ಟ್ರಗಳು ಕೂಡ ತಮ್ಮ ಖ್ಯಾತಿಯನ್ನು, ಪ್ರತಿಷ್ಠೆಯನ್ನು, ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇದೇ ಹಾದಿಯನ್ನು ಹಿಡಿಯುತ್ತಿದೆಯೆನ್ನಬಹುದು.
  ಪ್ರತಿಮೆಗಳು ಹಾಗೂ ಬೃಹತ್ ಸ್ಮಾರಕಗಳು ಪ್ರಾಚೀನ ಹಾಗೂ ಬಹುಪಾಲು ವಿಶ್ವಾತ್ಮಕ ರೂಪಗಳು. ಆದರೆ ಭಾರತದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಪ್ರತಿಮೆಗಳ ಪುನರೋದಯಕ್ಕೂ ಇತ್ತೀಚಿನ ನಿರ್ದಿಷ್ಟ ಬೆಳವಣಿಗೆಗಳಿಗೂ ಸಂಬಂಧವಿದೆ: ಜಾತಿ ರಾಜಕಾರಣ, ಉದಾರೀಕರಣೋತ್ತರ ಧಾರ್ಮಿಕ ಆಶ್ರಯದಾತರ ಪುನರುಜ್ಜೀವನ ಮತ್ತು ನವ ಉದಾರವಾದೀ ‘ಮುಕ್ತ ವ್ಯಾಪಾರ’ದ ಶಕ್ತಿಗಳಿಂದ ಒಂದು ಆರ್ಥಿಕ ಶಕ್ತಿಯಾಗಿ ದೇಶವನ್ನು ಪುನರ್ ಬಿಂಬಿಸುವ ಪ್ರಯತ್ನ.
ದೊಡ್ಡ ಸರ್ದಾರ್, ಸಣ್ಣ ಸರ್ದಾರ್
  ಪಟೇಲರನ್ನು ನೆಹರೂರವರಿಗೆ ಓರ್ವ ಇದಿರಾಳಿಯಾಗಿ, ಕೌಂಟರ್‌ಪಾಯಿಂಟ್ ಆಗಿ ಮಾಡಿ ಸ್ವಾತಂತ್ರ ಚಳವಳಿ ಮತ್ತು ಆದರ ಕೊಡುಗೆಗಳಲ್ಲಿ ಬಿಜೆಪಿಯನ್ನು ಒಳಗಾಗಿಸುವ ಒಂದು ಪ್ರಯತ್ನವೇ ಏಕತೆಯ ಪ್ರತಿಮೆ ಎಂದು ಭಾವಿಸಲಾಗಿದೆ. ಅದೇನಿದ್ದರೂ, ಮೋದಿ ಈ ಪ್ರತಿಮೆ ಸ್ಥಾಪನೆಯ ಯೋಜನೆಯನ್ನು ಆರಂಭಿಸಿದ್ದು, 2010ರಲ್ಲಿ, ಗುಜರಾತಿನಲ್ಲಿ ತಾನು ಮುಖ್ಯಮಂತ್ರಿಯಾಗಿ ಒಂದು ದಶಕ ಪೂರೈಸಿದ್ದರ ಸಂಭ್ರಮ ಆಚರಣೆಯ ಅಂಗವಾಗಿ. ಆಗ ಅವರ ಕಣ್ಣು ಕೇಂದ್ರ ಸರಕಾರದ ಮೇಲಿತ್ತು. ಆದ್ದರಿಂದ ಅದರ ಮೂಲ ಕಾರಣ ಮತ್ತು ಉದ್ದೇಶ, ಗುಜರಾತಿ ಮಣ್ಣಿನ ಮಗನಾಗಿದ್ದ ಗಾಂಧಿಗೆ ಒಂದು ಬದಲಿ ಸಂಕೇತವನ್ನು (ಪಟೇಲರನ್ನು) ತರುವುದೇ ಆಗಿದ್ದಿರುವ ಸಂಭಾವ್ಯತೆ ಹೆಚ್ಚು ಇತ್ತು ಎನ್ನಬಹುದು.
 ‘ಲೋಹ ಪುರುಷ’ ಅಥವಾ ‘ಉಕ್ಕಿನ ಮನುಷ್ಯ’ನೆಂದೂ, ‘ಭಾರತದ ಬಿಸ್ಮ್ಮಾರ್ಕ್’ ಎಂದೂ ಖ್ಯಾತರಾದ ಸರ್ದಾರ್ ಪಟೇಲ್, ಮೋದಿಯವರಿಗೆ ದುರ್ಬಲ, ಸಣಕಲು ದೇಹದ ಶಾಂತಿಪ್ರಿಯ ಗಾಂಧಿಗಿಂತ ತನ್ನ ದೃಢಕಾಯ (ಮಸ್ಕಲರ್) ರಾಜಕೀಯ ಶೈಲಿಗೆ ಹೆಚ್ಚು ಹೊಂದಿಕೆಯಾಗುವ ಒಂದು ವ್ಯಕ್ತಿತ್ವವಾಗಿ ಕಂಡರು. ನಿಜ ಹೇಳಬೇಕೆಂದರೆ, ಗುಜರಾತ್ ರಾಜ್ಯಕ್ಕೆ ಜಾಗತಿಕ ಭೂಪಟದಲ್ಲಿ ಮನ್ನಣೆ ದೊರಕಿಸುತ್ತದೆಯೆನ್ನಲಾದ ಪ್ರತಿಮೆಯ ಯೋಜನೆಯನ್ನು ಸ್ವಾಗತಿಸಿದ ಗುಜರಾತಿಗಳು ಮೋದಿಯವರಿಗೆ ‘ಚೋಟೆ ಸರ್ದಾರ್’ ಎಂಬ ಹಣೆಪಟ್ಟಿ ಅಂಟಿಸಲು ತಡಮಾಡಲಿಲ್ಲ.
ಪಟೇಲ್ ಪ್ರತಿಮೆಯ ಯೋಜನೆಯನ್ನು 2014ರ ವರೆಗೆ ರಾಷ್ಟ್ರಮಟ್ಟದ ಒಂದು ವಿಷಯವಾಗಿ ಮಾಡಿರಲಿಲ್ಲ. 2014ರ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ‘ಏಕತೆಯ ಪ್ರತಿಮೆ’ಯ ಚಳವಳಿಯನ್ನು ಸೇರಿಸಲಾಯಿತು. ಪ್ರತಿಮೆಯ ತಯಾರಿಯಲ್ಲಿ ಕಬ್ಬಿಣದ ಬೇಸಾಯದ ಉಪಕರಣಗಳನ್ನು ಕರಗಿಸಲು ಅವುಗಳನ್ನು ಸಂಗ್ರಹಿಸುವ ಒಂದು ರಾಷ್ಟ್ರಿೀಯ ಅಭಿಯಾನವನ್ನೂ ನಡೆಸಲಾಯಿತು.
ಪ್ರತಿಮೆಯ ಉದ್ಘಾಟನೆಯ ದಿನ ಸಮೀಪಿಸಿದಂತೆ ಯೋಜನೆಯ ಟೀಕಾಕಾರರು ತಮ್ಮ ವಿರೋಧವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ರಾಹುಲ್ ಗಾಂಧಿ ಪ್ರತಿಮೆಯನ್ನು ‘‘ಮೇಡ್ ಇನ್ ಚೈನಾ’’ ಎಂದು ಕರೆದಿದ್ದಾರೆ. ಯಾಕೆಂದರೆ ಪ್ರತಿಮೆಗೆ ಹೊದಿಸುವ ಕಂಚಿನ ಪ್ಲೇಟ್‌ಗಳನ್ನು, 5 ಲಕ್ಷ ಮಂದಿಯನ್ನು ನೇಮಿಸಿಕೊಂಡಿರುವ ಭಾರತದ 4,600 ಫೌಂಡ್ರಿಗಳಲ್ಲಿ ತಯಾರಿಸದೆ, ಚೀನಾದ ಜಿಯಾಂಗ್ ಕ್ಸಿ ಚಾಂಗ್ ಕಿಂಗ್ ಮೆಟಲ್ ಹ್ಯಾಂಡಿಕ್ರಾಫ್ಟ್ಸ್‌ನಲ್ಲಿ ತಯಾರಿ ಸಲಾಗಿದೆ. ಮೋದಿಯವರ ‘‘ಮೇಕ್ ಇನ್ ಇಂಡಿಯಾ’’ ಅಭಿಯಾನಕ್ಕೆ ಬದಲಾಗಿ ಪ್ರತಿಮೆ ‘‘ಮೇಡ್ ಇನ್ ಚೈನಾ’’ ಆಗಿದೆ.
ಯೋಜನೆಯಿಂದಾಗಿ ಒಂದು ‘ಆದಿವಾಸಿ’ ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂದು ಸರಕಾರ ಹೇಳಿದೆ. ಆದರೆ ಯೋಜನೆಯಿಂದಾಗಿ ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ. ಯೋಜನೆಗೆ ಖರ್ಚು ಮಾಡುವ ರೂ. 3,000 ಕೋಟಿಯನ್ನು ಆ ಪ್ರದೇಶದ ಅಭಿವೃದ್ಧಿಗೆ ನೇರವಾಗಿ ಬಳಸ ಬಹುದಾಗಿತ್ತು.

ಪ್ರತಿಮೆ ಯುದ್ಧಗಳು
 ಮಾಯಾವತಿಯವರ ‘ದಲಿತ ಸ್ಮಾರಕ’ ಕಾರ್ಯಕ್ರಮದೊಂದಿಗೆ 2000ನೇ ದಶಕದಲ್ಲಿ ಪ್ರತಿಮೆಗಳ ಸ್ಥಾಪನೆ ಮತಗಳಿಸುವ ಒಂದು ರಾಜಕೀಯ ಉಪಕರಣವಾಯಿತು. ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ಯುಪಿಎ ಕ್ಯಾಬಿನೆಟ್ ಸಚಿವ ಕಮಲನಾಥ್ ಉದ್ಘಾಟಿಸಿದ 101 ಅಡಿ ಎತ್ತರದ ಹನುಮಾನ್ ಪ್ರತಿಮೆ, ಅಖಿಲೇಶ್ ಯಾದವ್ ಅಡಿಗಲ್ಲು ಹಾಕಿದ ಖುಶಿನಗರದಲ್ಲಿ ನಿರ್ಮಾಣವಾಗುವ 200 ಅಡಿ ಎತ್ತರದ ಮೈತ್ರೇಯ ಪ್ರತಿಮೆ, ದಿವಂಗತ ಜಯಲಲಿತಾ ಘೋಷಿಸಿದ್ದ ತಮಿಳ್ ತಾಯಿಯ ಒಂದು ಬೃಹತ್ ಪ್ರತಿಮೆ, ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದ 108 ಮತ್ತು 111 ಅಡಿ ಎತ್ತರದ ಬಸವೇಶ್ವರ ಪ್ರತಿಮೆಗಳು... ಇತ್ಯಾದಿ ಇತ್ಯಾದಿ ಪ್ರತಿಮೆ ಸ್ಥಾಪನೆಗಳ ಪ್ರತಿಮೆ ಯುದ್ಧಗಳೇ ನಡೆಯುತ್ತಿವೆ.
ಧಾರ್ಮಿಕ ಬೇರುಗಳು
  ಪ್ರತಿಮೆಗಳ ಸ್ಥಾಪನೆಯ ನಿಟ್ಟಿನಲ್ಲಿ ಮಾಯಾವತಿಯವರ ಸ್ಮಾರಕಗಳು ಇತರ ರಾಜಕಾರಣಿಗಳಿಗೆ ಈ ರೀತಿಯ ಜನಪ್ರಿಯತೆಯ ಸಲಕರಣೆಗಳನ್ನು ಬಳಸಿಕೊಳ್ಳುವ ಹಾದಿಯಲ್ಲಿ ಸಾಗಲು ಧೈರ್ಯ ನೀಡಿದಂತೆ ಕಾಣುತ್ತದೆ. ಅದೇನಿದ್ದರೂ, 1990ರ ದಶಕದ ಆದಿಯಿಂದಲೇ ಧಾರ್ಮಿಕ ಆಶ್ರಯದ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನವನ್ನು ಹೆಚ್ಚ್ಚಿಸಿಕೊಳ್ಳಲು ಭಾರೀ ಗಾತ್ರದ ಪ್ರತಿಮೆಗಳನ್ನು ಸ್ಥಾಪಿಸುವ ಯೋಜನೆಗಳು ಆರಂಭಗೊಂಡಿದ್ದವು. ದೇವಸ್ಥಾನಗಳನ್ನು ನಿರ್ಮಿಸುವ ಅಥವಾ ದೇವಾಲಯಗಳಿಗೆ ದೇಣಿಗೆ ನೀಡುವ ಹಾಗೆಯೇ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿತ್ತು.
ಬಿರ್ಲಾಗಳು ಈ ದಿಕ್ಕಿನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳಾಗಿದ್ದರು. 1994ರಲ್ಲಿ ಅವರು ದೇವಾಲಯ ನಿರ್ಮಿಸುವ ತಮ್ಮ ಕಾರ್ಯಕ್ರಮದ ಅಂಗವಾಗಿ ದಿಲ್ಲಿ ವಿಮಾನ ನಿಲ್ದಾಣದ ಸಮೀಪದ ಉದ್ಯಾನವೊಂದರಲ್ಲಿ 60 ಅಡಿ ಎತ್ತರದ ನಿಂತಭಂಗಿಯಲ್ಲಿರುವ ಶಿವನ ಪ್ರತಿಮೆಯನ್ನು ಸ್ಥಾಪಿಸಿದರು. ಈ ಮೂರ್ತಿಯ ಅನುಕರಣೆಯಾಗಿ ಬಳಿಕ, ಕನಿಷ್ಠ ಎಂಟು ಪ್ರತಿಮೆಗಳು ಸ್ಥಾಪನೆಗೊಂಡವು. ರಸ್ತೆ ಬದಿಯ ಓರ್ವ ಜ್ಯೂಸ್ ವ್ಯಾಪಾರಿಯಾಗಿದ್ದ ಗುಲ್ಶನ್‌ಕುಮಾರ್ ಬಾಲಿವುಡ್ ಸಿನೆಮಾ ಉದ್ಯಮದಲ್ಲಿ ಓರ್ವ ಪ್ರಮುಖ ವ್ಯಕ್ತಿಯಾಗಿ ರೂಪಾಂತರಗೊಂಡದ್ದರ ಹಿಂದೆ, ನೋಯ್ಡಿದ ತನ್ನ ಸ್ಟುಡಿಯೋದಲ್ಲಿ 1998ರಲ್ಲಿ ಮತ್ತು 2000 ದಲ್ಲಿ ದ್ವಾರಕಾದಲ್ಲಿ ಸ್ಥಾಪಿಸಿದ 65 ಅಡಿ ಎತ್ತರದ ಶಿವನ ಮೂರ್ತಿಗಳು ಅವರ ಧಾರ್ಮಿಕ ಕಾಳಜಿಯ ಸಾರ್ವಜನಿಕ ರೂಪವಾಗಿ, ಅವರಿಗೆ ಅಪಾರವಾದ ಪ್ರಚಾರ ನೀಡಿದ್ದವು.


ವಾಣಿಜ್ಯೋದ್ಯಮಿಗಳು ನಿರ್ಮಿಸಿದ ಇಂತಹ ಹಲವು ಪ್ರತಿಮೆಗಳಿವೆ, 1995ರಲ್ಲಿ ಬೆಂಗಳೂರಿನ ತನ್ನ ಕೆಂಫ್ ಫೋರ್ಟ್ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಹಿಂಬದಿಯಲ್ಲಿ ರವಿ ಮೆಲ್ವಾನಿ ಸ್ಥಾಪಿಸಿದ 65 ಅಡಿ ಎತ್ತರದ ನಿಂತಭಂಗಿಯ ವಿವಾದಾಸ್ಪದ ಶಿವನ ಪ್ರತಿಮೆ ಇದೆ. (ಇದು ಜಮೀನನ್ನು ಅಕ್ರಮವಾಗಿ ಕಬಳಿಸಲು ಮಾಡಿದ ತಂತ್ರವೆಂದು ಹೇಳಲಾಗಿದೆ.) 2002ರಲ್ಲಿ ಆರ್.ಎನ್. ಶೆಟ್ಟಿ ಮುರ್ಡೇಶ್ವರದಲ್ಲಿ ಸ್ಥಾಪಿಸಿದ 123 ಅಡಿ ಎತ್ತರದ ಶಿವನ ಪ್ರತಿಮೆ ಈಗ ಪ್ರಸಿದ್ಧವಾಗಿದೆ.
 ಇಂತಹ ಆಶ್ರಯದಾತ ಕೋಟ್ಯಧಿಶರಲ್ಲದೆ ಚಿನ್ಮಯ ಮಿಶನ್, ಸತ್ಯಸಾಯಿ ಇಂಟರ್‌ನ್ಯಾಶನಲ್, ಅವಧೂತ ದತ್ತಪೀಠ, ಇಶಾ ಫೌಂಡೇಶನ್‌ನಂತಹ ನವ-ಆಧ್ಯಾತ್ಮಿಕ ಸಂಘಟನೆಗಳು ಕೂಡ ಪ್ರತಿಮೆಗಳನ್ನು ಸ್ಥಾಪಿಸಿವೆ. 2017ರಲ್ಲಿ ಪ್ರಧಾನಿ ಮೋದಿ ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ ಸ್ಥಾಪಿಸಿದ 112 ಅಡಿಗಳ ಶಿವನ ಪ್ರತಿಮೆಯನ್ನು ಉದ್ಘಾಟಿಸಿದ್ದರು.
ಸೆಕ್ಯುಲರ್ ಹಾಗೂ ಧಾರ್ಮಿಕ- ಎರಡು ರೀತಿಯ ಪ್ರತಿಮೆಗಳಿಗೆ ರಾಜಕೀಯ ಆಶ್ರಯ, ನೆರವು ನೀಡಲಾಗುತ್ತಿದೆ. ಆದರೆ ಪ್ರವಾಸೋದ್ಯಮದ ಹೆಸರಿನಲ್ಲಿ ರಾಜಕಾರಣಿಗಳು ಧಾರ್ಮಿಕ ಪ್ರತಿಮೆಗಳ ಸ್ಥಾಪನೆಯನ್ನು ಸಮರ್ಥಿಸಿಕೊಳ್ಳುತ್ತಾರೆ. 2010ರಲ್ಲಿ ಏಕತೆಯ ಪ್ರತಿಮೆಯ ನಿರ್ಮಾಣವನ್ನು ಪ್ರಕಟಿಸುತ್ತ ಪ್ರಧಾನಿ ಮೋದಿ ಅದನ್ನು ‘‘ರಾಷ್ಟ್ರಕ್ಕೆ ಮತ್ತು ವಿಶ್ವಕ್ಕೆ ಗುಜರಾತಿನ ಒಂದು ಕೊಡುಗೆ’’ ಎಂದು ಹೇಳಿದ್ದರು.
ಸ್ವರಾಜ್ ಅಥವಾ ಸುರಾಜ್
 ಒಂದು ಅರ್ಥದಲ್ಲಿ, ಸರ್ದಾರ್ ಪ್ರತಿಮೆ ಹಳೆಯ ಬಾಟಲಿಯಲ್ಲಿ ನೀಡುವ ಹೊಸ ಮದ್ಯ. ಆದರೆ ಇದು ಯಾವ ರೀತಿಯ ಹೊಸ ಬಾಟಲಿ? ಪ್ರತಿಮೆಯನ್ನು ನಿರ್ಮಿಸುವ ಟೆಂಡರ್‌ನ್ನು ತನ್ನ ಬಗಲಿಗೆ ಹಾಕಿಕೊಂಡು ಅಂತರ್‌ರಾಷ್ಟ್ರೀಯ ಕಂಪೆನಿ ಸಮೂಹದಲ್ಲಿ ಅಮೆರಿಕದಲ್ಲಿರುವ ಟರ್ನರ್ ಕನ್‌ಸ್ಟ್ರಕ್ಷನ್ ಕಂಪೆನಿಯೂ ಸೇರಿದೆ. ಇದು ವಿಶ್ವದ ಅತ್ಯಂತ ಎತ್ತರವಾದ ಕಟ್ಟಡವಾಗಿರುವ ಬುರ್ಜ್ ಖಲೀಫಾವನ್ನು ನಿರ್ಮಿಸಿದ ಕಂಪೆನಿ. ಸರ್ದಾರ್ ಪ್ರತಿಮೆ ಯೋಜನೆಯ ವಾಸ್ತು ಶಿಲ್ಪಿ ಬರ್ಬ್ಯಾಂಕ್‌ನಲ್ಲಿ 1985ರಲ್ಲಿ ಟೀಮ್ ಡಿಸ್ನಿ ಬಿಲ್ಡಿಂಗನ್ನು ವಿನ್ಯಾಸಗೊಳಿಸಿದ ಆಧುನಿಕೋತ್ತರ ವಿನ್ಯಾಸಕಾರ ಮೈಕೇಲ್‌ಗ್ರೇವ್ಸ್. ಅದರ ಇಂಜಿನಿಯರಿಂಗ್ ಸಲಹೆಗಾರರು ಪ್ರಸಿದ್ದ ಮೈನ್ ಹಾರ್ಡ್ಟ್ ಗ್ರೂಪ್. ಈ ಗ್ರೂಪ್‌ನ ಪ್ರಸ್ತಾವಿತ ಯೋಜನೆಗಳಲ್ಲಿ ದುಬೈ ಯಲ್ಲಿ ನಿರ್ಮಾಣವಾಗಲಿರುವ ‘ಅಲ್ಲಾವುದ್ದೀನ್ ನಗರ’ವೂ ಸೇರಿದೆ.
 ಇಲ್ಲಿ ಯೋಜನೆಯ ಡಿಸ್ನೀಕರಣ( ಡಿಸ್ನೀಫಿಕೇಶನ್) ಕೇವಲ ಒಂದು ರೂಪಕವಲ್ಲ. ಯಾಕೆಂದರೆ ಈ ಯೋಜನೆಯಲ್ಲಿ ಸರ್ದಾರ್ ಪಟೇಲ್ ‘ಉತ್ತಮ ಆಡಳಿತ’ ಥೀಮ್ ಪಾರ್ಕ್ ನ ಒಂದು ವಿಷಯ ವಾಗುತ್ತಾರೆ. ಇಲ್ಲಿ ರಾಷ್ಟ್ರೀಯತೆಯ ಒಂದು ಹೊಸ ಬ್ರಾಂಡ್‌ನ ಐಕಾನ್ ಆಗಿ ಪಟೇಲರನ್ನು ಪ್ರಸ್ತುತ ಪಡಿಸಲಾಗುತ್ತಿದೆ: 2015ರಿಂದ ಪಾಟಿದಾರ್ ಅಥವಾ ಪಟೇಲ್ ಸಮುದಾಯವು ‘ಒಬಿಸಿ’ ವರ್ಗದಲ್ಲಿ ತಮಗೆ ಮಿಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಸಿದ ಚಳವಳಿಯಲ್ಲಿ ಸರ್ದಾರ್ ಪಟೇಲರನ್ನು ತನ್ನ ಐಕಾನ್ ಆಗಿ ದೇಶದ ಮುಂದೆ ಬಿಂಬಿಸಿದ, ಮೋದಿಯವರು ಪಟೇಲರನ್ನು ಓರ್ವ ರಾಷ್ಟ್ರೀಯ ನಾಯಕನಾಗಿ ತನ್ನೆಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಪಾಟಿದಾರ್ ಸಮುದಾಯದ ಪ್ರತಿಭಟನೆಗಳು ಸರ್ದಾರ್ ಪಟೇಲರನ್ನು ತಮ್ಮ ಜಾತಿಯ ಓರ್ವ ಪ್ರತಿನಿಧಿಯಾಗಿ ಹೈಜಾಕ್ ಮಾಡಿವೆ.
  ಈ ಎಲ್ಲ ರೀತಿಗಳಲ್ಲಿ ಏಕತೆಯ ಪ್ರತಿಮೆ ಭಾರತೀಯ ರಾಷ್ಟ್ರೀಯತೆಯನ್ನು ಪುನರ್‌ರೂಪಿಸುವ ಪ್ರಯತ್ನದ ಒಂದು ಉದಾಹರಣೆಯಾಗಿ ನಿಲ್ಲುತ್ತದೆ. ಸ್ಥಳೀಯ ಜನಪ್ರಿಯತೆ ಮತ್ತು ಜಾಗತೀಕರಿಸಲ್ಪಟ್ಟ ‘ಮುಕ್ತ ವ್ಯಾಪಾರ’ದ ವಾಗ್ವಾದಗಳನ್ನು ಜೋಡಿಸುವ ಒಂದು ರಾಜಕೀಯ ಪ್ರಯತ್ನವಾಗಿ ಅದು ಕಾಣುತ್ತದೆ. ಇಲ್ಲಿ ಬ್ರೆಕ್ಸಿಟ್ ಅಥವಾ ಟ್ರಂಪ್ ಸುತ್ತ ಕಂಡು ಬರುವ ಅನ್ಯಾಕ್ರಮಣಶೀಲತೆ, ಅತಿ ದೇಶಭಕ್ತಿ ಕಾಣಿಸುತ್ತದೆ; ಒಂದು ರೀತಿಯ ರಾಷ್ಟ್ರೀಯ ಆರ್ಥಿಕ ಹೆಮ್ಮೆಯನ್ನಾಧರಿಸಿದ ಜನಪ್ರಿಯ ಅತ್ಯುತ್ಸಾಹ, ರಣೋತ್ಸಾಹ ಕಂಡು ಬರುತ್ತದೆ.
ಪಟೇಲರ ಪ್ರತಿಮೆ ಮೂಲತಃ ರಾಷ್ಟ್ರೀಯತೆಯೇ ಆದರೂ, ಅದು ಜಾಗತಿಕ ಸರಕಾರಗಳ ಮೂಲ ಬಿಗಿತಗಳನ್ನು, ಆತಂಕಗಳನ್ನು ಒಳಗೊಂಡಿದೆ; ಪ್ರತಿಮೆಯ ಬಹುಮಟ್ಟದ ಸಂಕೇತ, ಅದರ ನಿರ್ಮಾಣ ಮತ್ತು ರಾಜಕೀಯ ರಂಗದಲ್ಲಿ ಅದು ಬೀರಬಹುದಾದ ಊಹಿಸಲಾಗದ ಪರಿಣಾಮಗಳನ್ನು ನಾವು ಗಮನಿಸಬೇಕಾಗಿದೆ. ಪ್ರತಿಮೆಯ ಮೂಲದಲ್ಲಿರುವ ಈ ಒತ್ತಡಗಳನ್ನು ಹಾಗೂ ಬಿಗಿತಗಳನ್ನು, ಟೆನ್ಶನ್‌ಗಳನ್ನು ಯಾವುದೇ ಜಾಗತಿಕ ಮಟ್ಟದ ಇಂಜಿನಿಯರಿಂಗ್ ಪರಿಣತಿ ಪರಿಹರಿಸಲಾರದು.
ಕೃಪೆ: thewire.in

Writer - ಕಜ್ರಿ ಜೈನ್

contributor

Editor - ಕಜ್ರಿ ಜೈನ್

contributor

Similar News

ಜಗದಗಲ
ಜಗ ದಗಲ