ಪವಾಡ ಬಯಲು ರಹಸ್ಯದೊಳಗೆ ನನ್ನ ಪ್ರವೇಶ...
ಭಾಗ 60
ಅಬ್ರಹಾಂ ಕೋವೂರು ಅವರು ಭಾರತಕ್ಕೆ ಬಂದಾಗ ವಿವಿಧ ಸಂಘಟನೆಗಳು ಕಾರ್ಯಕ್ರಮಗಳ ವೆಚ್ಚವನ್ನು ಹಂಚಿಕೊಂಡು ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಅವರು ಮದ್ರಾಸಿಗೆ ಬಂದಾಗ ಮಂಗಳೂರಿಗೆ ಅವರನ್ನು ಕರೆಸಲಾಯಿತು. ಅವರ ಕಾರ್ಯಕ್ರಮ ಸಂಘಟನೆಗಳ ಮೂಲಕ ಮಾಡಲು ಮಾತ್ರವೇ ಅವಕಾಶ ದೊರೆಯುತ್ತಿತ್ತು. 1976ರ ನವೆಂಬರ್‌ನಲ್ಲಿ ಅವರು ಮಂಗಳೂರಿಗೆ ಬಂದಾಗ ಇಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಿತು. ಈ ಬಗ್ಗೆ ನಾನು ಈಗಾಗಲೇ ವಿವರ ನೀಡಿದ್ದೇನೆ. ಈ ರೀತಿಯಾಗಿ ಈ ಕಾರ್ಯಕ್ರಮಗಳನ್ನು ನಾವು ಮಂಗಳೂರಿನಲ್ಲಿ ಮುಂದುವರಿಸಲಾರಂಭಿಸಿದೆವು. ಕೋವೂರು ನಿಧನದ ಬಳಿಕ ಪ್ರೇಮಾನಂದ್ ಅವರು ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮವನ್ನು ಮುಂದುವರಿಸಲಾರಂಭಿಸಿದರು. ಪ್ರೇಮಾನಂದ್ ಕೆಲವು ಸಾವಿರ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ಕೋವೂರು ಅವರಿಂದ ಕಲಿತು ಪಟ್ಟಿಮಾಡಿಕೊಂಡಿದ್ದರು. ಕೋವೂರು ಇರುವಾಗಲೇ ಪ್ರೇಮಾನಂದ್‌ರವರ ಈ ಪಟ್ಟಿಯನ್ನು ನೋಡಿ ನೀವ್ಯಾಕೆ ಪವಾಡ ರಹಸ್ಯಗಳನ್ನು ಬಯಲು ಮಾಡಬಾರದು ಎಂದು ಹೇಳಿಕೊಂಡಿದ್ದರಂತೆ. ಕೋವೂರು ಬಳಿಕ ಪ್ರೇಮಾನಂದ್‌ರವರು ಪವಾಡ ರಹಸ್ಯ ಕಾರ್ಯಕ್ರಮಕ್ಕೆ ವಿಸ್ತೃತ ರೂಪವನ್ನು ಜನರ ಮುಂದಿರಿಸಿದರು. ಅವರು ಪ್ರತಿಯೊಂದು ಪವಾಡದ ಪ್ರದರ್ಶನದ ವೇಳೆ ಅದರ ವಿವರಣೆಯನ್ನು ನೀಡುತ್ತಿದ್ದರು. ಸಣ್ಣ ಮಟ್ಟದ ಕಾರ್ಯಕ್ರಮಗಳ ಮೂಲಕ ಆರಂಭಗೊಂಡ ಪ್ರೇಮಾನಂದರ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಅವರು ಕಾರ್ಯಕ್ರಮ ನೀಡಲು ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಜೀಪ್‌ನಲ್ಲೊಂದು ಹಾರನ್ ಇತ್ತು. ಅವರು ಜೀಪ್‌ನ ಬಾಗಿಲು ತೆಗೆದಾಕ್ಷಣ ಆ ಹಾರನ್ ಶಬ್ದ ಬಾರಿಸಲಾರಂಭಿಸುತ್ತಿತ್ತು. ಜನರು ಓಡಿ ಬರುತ್ತಿದ್ದರು. ಅವರು ಜೀಪ್‌ನ ಬಾನೆಟ್ ಮೇಲೆ ಹತ್ತಿ ಪವಾಡ ಬಯಲು ಕಾರ್ಯಕ್ರಮ ನೀಡುತ್ತಿದ್ದರು. ಈ ಕಾರ್ಯಕ್ರಮ ಯಶಸ್ಸು ಕಂಡಿತು. 1981ರಲ್ಲಿ ಉಡುಪಿಯ ಶಂಕರ್ ಅವರು ನನ್ನ ಬಳಿ ಮಾತನಾಡುತ್ತಾ, ಪ್ರೇಮಾನಂದ್ ಹಾಗೂ ಅವರ ಸಹೋದರ ದಯಾನಂದ್‌ರನ್ನು ಮಂಗಳೂರಿಗೆ ಕರೆಸುವ ಪ್ರಸ್ತಾಪ ಇರಿಸಿದ್ದರು. ನಾವು ಅವರನ್ನು ಕರೆಸಿ, ಉಡುಪಿಯಲ್ಲಿ ಕಾರ್ಯಕ್ರಮ ನಾವು ಮಾಡಿಸುತ್ತೇವೆ. ಮಂಗಳೂರಿನಲ್ಲಿ ನಿಮ್ಮ ಜತೆ ಕಾರ್ಯಕ್ರಮ ಮಾಡಿಸೋಣ ಎಂದು ಹೇಳಿದರು. ಇದಕ್ಕೆ ಮುಂಚಿತವಾಗಿ 1977ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾನು ಒಂದು ಉಪನ್ಯಾಸ ನೀಡಿದ್ದೆ. ಆಗ ಡಾ. ಪಂಡಿತಾರಾಧ್ಯ ಉಪನ್ಯಾಸಕರಾಗಿದ್ದರು. ನಮ್ಮನ್ನು ಅವರು ಕರೆಸಿದ್ದರು. ನಾನು ಪವಾಡಗಳ ಬಗ್ಗೆ ಮಾತನಾಡುತ್ತಾ, ಪುಟ್ಟಪರ್ತಿ ಸಾಯಿಬಾಬಾ ವಿಭೂತಿ ಕೊಡುವುದನ್ನು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದೆ. ಅಲ್ಲಿ ನಾವು ತೀರಾ ಇರಿಸು ಮುರಿಸುಂಟಾಗುವ ರೀತಿಯಲ್ಲಿ ಉಪನ್ಯಾಸಕರಿಂದ ಬೈಗುಳ ಕೇಳಬೇಕಾಯಿತು. ಅದು ನನ್ನ ಮೊದಲ ಶಿಬಿರವಾಗಿತ್ತು. ಹೀಗೆ 1981ರಲ್ಲಿ ಪ್ರೇಮಾನಂದ್‌ರನ್ನು ಮಂಗಳೂರಿಗೆ ಕರೆಸಲಾಯಿತು. ಪ್ರೇಮಾನಂದ್ ಸಹೋದರ ದಯಾನಂದ್ ಖ್ಯಾತ ಜಾದೂಗಾರ. ಉಡುಪಿಯಲ್ಲಿ ಆ ಸಹೋದರರ ಪ್ರಥಮ ಕಾರ್ಯಕ್ರಮ ನಡೆಯಿತು. ಟಿಕೆಟ್ ಮೂಲಕ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರೇಮಾನಂದರ ಕಾರ್ಯಕ್ರಮದ ನಡುವೆ ಜೂನಿಯರ್ ಶಂಕರ್‌ರಿಂದ ಜಾದೂ ಆಯೋಜಿಸಲಾಗಿತ್ತು. ಪ್ರೇಮಾನಂದ್‌ರವರು ಆರಂಭದಲ್ಲಿ ಓಂ ಬಗ್ಗೆ ಮಾತನಾಡಲಾರಂಭಿಸಿದಾಗ ಅಲ್ಲಿ ಸೇರಿದ್ದ ಒಂದು ವರ್ಗದಿಂದ ವಿರೋಧ ವ್ಯಕ್ತವಾಯಿತು. ‘‘ನಾವು ಇಲ್ಲಿ ನಿಮ್ಮ ಅಸಂಬದ್ಧ ಮಾತುಗಳನ್ನು ಕೇಳಲು ಬಂದಿಲ್ಲ. ನಾವು ಜಾದೂ ನೋಡಲು ಬಂದಿದ್ದು. ಅದನ್ನು ತೋರಿಸಿ’’ ಎಂದು ಅಡ್ಡಿ ಪಡಿಸಿದರು. ಕಾರಣಾಂತರದಿಂದ ಅಲ್ಲಿ ಪ್ರೇಮಾನಂದ್‌ರನ್ನು ಹಿಂದಕ್ಕೆ ಸರಿಸಿ, ದಯಾನಂದ್ ಹಾಗೂ ಜೂನಿಯರ್ ಶಂಕರ್ ತೇಜಸ್ವಿಯವರಿಂದ ಜಾದೂ ಕಾರ್ಯಕ್ರಮ ನೀಡಲಾಯಿತು. ಈ ಸಂದರ್ಭ ಕೆಂಡದ ಮೇಲೆ ನಡೆಯುವ ಪವಾಡ ರಹಸ್ಯವನ್ನು ಬಯಲು ಮಾಡಲು ಅವಕಾಶವಷ್ಟೇ ದೊರೆಯಿತು. ಪ್ರೇಮಾನಂದ್‌ರವರು ಪ್ರಥಮ ಶೋಗೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸೂಕ್ತ ಅವಕಾಶ ದೊರೆಯದಾಗ ನಮಗೆ ನಿರಾಶೆಯಾಯಿತು. ಮಂಗಳೂರಿನ ಕಾರ್ಯಕ್ರಮದ ಸಂದರ್ಭ ನಾನು ಪ್ರೇಮಾನಂದ್‌ರವರ ಬಳಿ ನೀವು ಪವಾಡ ರಹಸ್ಯ ಬಯಲು ಮಾಡಿ ತೋರಿಸಿ, ನಾನು ವಿವರ ನೀಡುತ್ತೇನೆ ಎಂದು ಹೇಳಿದೆ. ಹಾಗೆ ಕಾರ್ಯಕ್ರಮ ನಡೆದು ಈ ಬಗ್ಗೆ ಪತ್ರಿಕೆಗಳಲ್ಲಿ ಟೀಕೆಗಳು ಬರಲಾರಂಭಿಸಿತು. ಸಂಪಾದಕರಿಗೆ ಪತ್ರ ವಿಭಾಗದಲ್ಲಿ ‘ವಿಚಾರವಾದಿಗಳು ಇಂದು ಪವಾಡ ಇಲ್ಲ ಎನ್ನುತ್ತಾರೆ, ನಾಳೆ ದೇವರಿಲ್ಲ’ ಎಂದು ಹೇಳುತ್ತಾರೆ ಎಂಬುದಾಗಿ ಟೀಕೆಗಳು ಬಂದಿತ್ತು. ಅದಕ್ಕ ನಾನು ಉತ್ತರಿಸಿ, ನಾಳೆ ಅಲ್ಲ ಇವತ್ತೇ ನಾನು ದೇವರಿಲ್ಲ ಎನ್ನುತ್ತೇನೆ ಎಂದೆ. ಈ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಯಿತು. ಬಹಳಷ್ಟು ಸಮಯದವರೆಗೆ ಇದು ಮುಂದುವರಿಯಿತು. ಆಗ ಶಂಕರ್‌ರವರು ಹೇಳಿಕೆಯೊಂದನ್ನು ನೀಡಿ, ನಾವು ಜಾದೂಗಾರರು. ನಮಗೂ ವಿಚಾರ ವಾದಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದರು. ಆಗ ನಾವು ಇನ್ನು ಮುಂದೆ ಕಾರ್ಯಕ್ರಮ ಮಾಡುವುದಾದರೆ ಸಮಾನ ಮನಸ್ಕರೊಂದಿಗೆ ಮಾತ್ರ ಎಂದು ನಿರ್ಧರಿಸಿದೆವು. ಮುಂದೆ, ಪ್ರೇಮಾನಂದರನ್ನು ಮಂಗಳೂರಿಗೆ ಕರೆಸಿದಾಗ ನಾವು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾರಂಭಿಸಿದೆವು. ನಾವೇ ನಮ್ಮ ಗುಂಪನ್ನು ಸೇರಿಸಿ ಸಮುದಾಯ ಸಂಘಟನೆಯಿಂದ ಬೀದಿ ನಾಟಕ, ಪ್ರೇಮಾನಂದರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ನಡೆಸಿದೆವು. ಈ ರೀತಿಯಲ್ಲಿ ಹಲವಾರು ಬಾರಿ ನಾವು ಮಂಗಳೂರಿಗೆ ಕರೆಸಿ ಕಾರ್ಯಕ್ರಮಗಳನ್ನು ನೀಡಿದೆವು. ಹೀಗೆ ಪ್ರೇಮಾನಂದರು ತಮ್ಮ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರೆ ನಾನು ಅದನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದೆ. ಅದೊಂದು ಬಾರಿ ಪ್ರೇಮಾನಂದರು ನನ್ನ ಬಳಿ ನೀನು ಹೇಗೂ ಮಾತನಾಡಲು ಕಲಿತಿದ್ದಿ, ಇದೀಗ ಪವಾಡಗಳನ್ನು ಬಯಲು ಮಾಡಿ ತೋರಿಸುವುದನ್ನೂ ಕಲಿ ಎಂದರು. ನಾನು ಪವಾಡ ಬಯಲು ಮಾಡುವುದನ್ನು ಅಭ್ಯಾಸಮಾಡಿಕೊಂಡು ಪ್ರದರ್ಶನ ನೀಡಲಾರಂಭಿಸಿದೆ. ಹೀಗೆ ಪವಾಡ ಬಯಲು ರಹಸ್ಯದೊಳಕ್ಕೆ ನನ್ನ ಪ್ರವೇಶವಾಯಿತು. ನರೇಂದ್ರ ನಾಯಕ್