ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡ ಚಿಂತನೆ

Update: 2018-11-03 18:19 GMT

ಮಾಲಿಕೆ 2

ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಲ್ಲಿ ನಿಷ್ಕ್ರಿಯವಾಗಿರುವ ಸರಕಾರಗಳ ಅಸಡ್ಡೆಯ ರಾಜಕಾರಣ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಲಾಭಕೋರತನದಿಂದ ಗ್ರಾಮೀಣ ಮಕ್ಕಳೂ ದೂರದಲ್ಲಿನ ಆಂಗ್ಲಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದಾರೆ. ನಗರ ಪ್ರದೇಶದ ಸಾರ್ವಜನಿಕ ವಲಯಗಳಲ್ಲಿ ಆಂಗ್ಲ ಭಾಷೆಯ ಬಳಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಕನ್ನಡ ಬಳಸುವುದೇ ಅಪಮಾನಕರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾಷೆ ಜೀವನದ ಅನಿವಾರ್ಯ ಅಂಶ. ಆದರೆ ಬದುಕಿನ ಆದ್ಯತೆಯಾಗಬೇಕಿಲ್ಲ. ನಮ್ಮ ಆಯ್ಕೆಯ ಅಗತ್ಯವೇ ಇಲ್ಲದೆ ಒದಗಿ ಬರುವ ಜೀವನ ನಿರ್ವಹಣೆಗೆ ಭಾಷೆ ಒಂದು ಸಾಧನ. ಕೇವಲ ಸಂಪರ್ಕ ಸಾಧನ ಮಾತ್ರವಲ್ಲ, ನಿತ್ಯ ಜೀವನ ಶೈಲಿಯನ್ನು ರೂಪಿಸುವ ಒಂದು ಸಾಧನವೂ ಹೌದು. ಮಾನವ ಸಮಾಜವನ್ನು ಭಾವನಾತ್ಮಕ ನೆಲೆಯಲ್ಲಿ ಒಂದಾಗಿರಿಸುವ ನಿಟ್ಟಿನಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುವುದನ್ನು ಪ್ರಪಂಚದ ಎಲ್ಲೆಡೆಯೂ ಕಾಣಬಹುದು. ಆದರೆ ಭಾವನಾತ್ಮಕ ನೆಲೆಯಲ್ಲಿ ಕಂಡುಬರುವ ಸಾಮಾಜಿಕ ಸ್ಥಿತ್ಯಂತರಗಳನ್ನು ವಾಸ್ತವದ ನೆಲೆಯಲ್ಲಿ ಕಾಣುವ ಸಂದರ್ಭದಲ್ಲಿ ಜನಸಾಮಾನ್ಯರ ಬದುಕು ಭಾಷೆಯನ್ನು ಅವಲಂಬಿಸಿರುವುದಿಲ್ಲ ಎಂಬ ಸತ್ಯ ಗೋಚರಿಸುತ್ತದೆ. ಒಂದು ಸ್ಪಷ್ಟ ನೆಲೆ ಇಲ್ಲದೆಯೇ ತಮ್ಮ ಜೀವನ ನಿರ್ವಹಿಸಿ, ಬದುಕು ಕಟ್ಟಿಕೊಳ್ಳುವ ವಲಸೆ ಕಾರ್ಮಿಕರು, ಅಲೆಮಾರಿ ಬುಡಕಟ್ಟು ಗಳು ಇಲ್ಲಿ ನಿದರ್ಶನವಾಗಿ ನಿಲ್ಲುತ್ತಾರೆ. ಈಗಷ್ಟೇ ಕನ್ನಡ ರಾಜ್ಯೋತ್ಸವ ಆಚರಿಸಿದ್ದೇವೆ. ಉನ್ಮತ್ತ ಭಾಷಾಭಿಮಾನದ ಚೌಕಟ್ಟಿನಲ್ಲಿ ನಡೆಯುವ ರಾಜ್ಯೋತ್ಸವವನ್ನು 60 ವರ್ಷಗಳ ನಂತರವೂ ಕನ್ನಡದ ಉತ್ಸವವಾಗಿಯೇ ಆಚರಿಸುತ್ತಿದ್ದೇವೆಯೇ ಹೊರತು ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸುತ್ತಿಲ್ಲ. ಭಾಷಾ ಸಂರಕ್ಷಣೆಗಾಗಿ ಹೋರಾಡುತ್ತಿರುವ ಅಸಂಖ್ಯಾತ ಕನ್ನಡ ಸಂಘಟನೆಗಳಿಗೆ, ಸ್ಥಳೀಯ ಕನ್ನಡ ಸಂಘಗಳಿಗೆ ಕನ್ನಡ ಭಾಷೆಯ ಅಳಿವು ಉಳಿವಿನಿಂದಾಚೆಗೆ ದೃಷ್ಟಿ ಹಾಯುತ್ತಿಲ್ಲ ಎನ್ನುವ ವಿಷಾದದೊಂದಿಗೇ ಮತ್ತೊಂದು ರಾಜ್ಯೋತ್ಸವ ಮುಗಿದಿದೆ.

ನಿಜ, ಒಂದು ಭಾಷೆಯಾಗಿ ಕನ್ನಡ ತನ್ನದೇ ಆದ ಪರಂಪರೆ, ಇತಿಹಾಸ ಹೊಂದಿದೆ. ಕನ್ನಡ ಭಾಷೆ ಎಷ್ಟು ಪ್ರಾಚೀನವಾದದ್ದು, ಎಷ್ಟು ಶ್ರೇಷ್ಠ ಎನ್ನುವ ಅಹಮಿಕೆಯ ಆತ್ಮರತಿಯನ್ನು ಬದಿಗಿಟ್ಟು, ಕನ್ನಡ ನಿಜಕ್ಕೂ ಕನ್ನಡಿಗರಿಗೆ, ಅಂದರೆ ಕರ್ನಾಟಕದ ಜನತೆಗೆ, ಅನ್ನ ನೀಡುತ್ತಿದೆಯೇ ಎಂದು ನೋಡಿದಾಗ ನಿರಾಸೆ ಕವಿಯುತ್ತದೆ. ಕನ್ನಡ ಜನಸಾಮಾನ್ಯರ ನಿತ್ಯ ಜೀವನದಲ್ಲಿ ನಶಿಸುತ್ತಿಲ್ಲ ಆದರೆ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ಕನ್ನಡಿಗರ ಪಾಲಿಗೆ ದಕ್ಕುತ್ತಿಲ್ಲ. ಈ ವಿರೋಧಾಭಾಸವನ್ನು ಗ್ರಹಿಸುವಷ್ಟು ಸಂಯಮ ಮತ್ತು ಸಂವೇದನೆ ಬಹುತೇಕ ಕನ್ನಡ ಸಂಘಟನೆಗಳಿಗೆ ಇಲ್ಲ. ಬಹುಶಃ ಕನ್ನಡ ಸಾಹಿತ್ಯ ಪರಿಷತ್ತು ಸಹ ಇದೇ ನ್ಯೂನತೆಯನ್ನು ಅನುಭವಿಸುತ್ತಿದೆ. ಎಲ್ಲಿಂದಲೋ ಬಂದು ಇಲ್ಲಿ ಬದುಕು ಕಟ್ಟುವವರನ್ನು ಕನ್ನಡ ಕಲಿಯಲು ಪ್ರೇರೇಪಿಸುವ ಸಂಘಟನೆಗಳು ಇಲ್ಲಿಯೇ ಹುಟ್ಟಿ ತಮ್ಮ ಬದುಕು ಕಟ್ಟಿಕೊಳ್ಳಲಾರದೆ ತೊಳಲಾಡುತ್ತಿರುವ ಅಸಂಖ್ಯಾತ ಶ್ರಮಜೀವಿಗಳಿಗೂ ಕನ್ನಡದ ಬಳಕೆಗೂ ಇರುವ ಅನನ್ಯ ಸಂಬಂಧವನ್ನು ಕುರಿತು ಯೋಚಿಸುವುದೇ ಇಲ್ಲ . ಇದು ಜಟಿಲ ಪ್ರಶ್ನೆ, ಸಂಕೀರ್ಣ ಸವಾಲು ಆದರೆ ಭಾಷಾವಾರು ಪ್ರಾಂತ ರಚನೆಯ ಸೀಮಿತ ಚೌಕಟ್ಟಿನಿಂದಾಚೆ ನೋಡಿದಾಗ ಈ ಪ್ರಶ್ನೆಯೇ ಕನ್ನಡ ಅಳಿವು ಉಳಿವಿನ ಪ್ರಶ್ನೆಗೆ ಸಂವಾದಿಯಾಗಿ ರೂಪುಗೊಳ್ಳುವುದು ಸತ್ಯ. ಕನ್ನಡ ಭಾಷೆ ನಶಿಸುತ್ತಿದೆ, ಕನ್ನಡಿಗರಿಗೆ ಸ್ವಾಭಿಮಾನ ಇಲ್ಲ, ಕನ್ನಡಿಗರು ನಿರಭಿಮಾನಿಗಳು, ಅಭಿಮಾನ ಶೂನ್ಯರು ಇತ್ಯಾದಿ ಆರೋಪಗಳು ಹಲವು ದಶಕಗಳಿಂದಲೂ ಕೇಳಿಸುತ್ತಲೇ ಇದೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದರೂ ತಪ್ಪೇನಿಲ್ಲ. ವಾಸ್ತವತೆಗಳ ಪರಾಮರ್ಶೆಯಲ್ಲಿ ತೊಡಗದೆ ಭಾವನಾತ್ಮಕ ನೆಲೆಗಟ್ಟಿನಲ್ಲಿಯೇ ಒಂದು ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಯನ್ನು ವೈಭವೀಕರಿಸಲು ಹೋದಾಗ ಈ ರೀತಿಯ ಅತಿಶಯೋಕ್ತಿಗಳು ಸಹಜ, ಸ್ವಾಭಾವಿಕ, ನಿಜ. ನಗರ ಪ್ರದೇಶಗಳಲ್ಲಿ, ಮಧ್ಯಮವರ್ಗದ ಸುಶಿಕ್ಷಿತರಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ, ಆಂಗ್ಲ ವ್ಯಾಮೋಹ ಹೆಚ್ಚಾಗುತ್ತಿದೆ. ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಲ್ಲಿ ನಿಷ್ಕ್ರಿಯವಾಗಿರುವ ಸರಕಾರಗಳ ಅಸಡ್ಡೆಯ ರಾಜಕಾರಣ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಲಾಭಕೋರತನದಿಂದ ಗ್ರಾಮೀಣ ಮಕ್ಕಳೂ ದೂರದಲ್ಲಿನ ಆಂಗ್ಲಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದಾರೆ. ನಗರ ಪ್ರದೇಶದ ಸಾರ್ವಜನಿಕ ವಲಯಗಳಲ್ಲಿ ಆಂಗ್ಲ ಭಾಷೆಯ ಬಳಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಕನ್ನಡ ಬಳಸುವುದೇ ಅಪಮಾನಕರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವೂ ಕಣ್ಣಿಗೆ ರಾಚುವ ಅಲ್ಲಗಳೆಯಲಾಗದ ಸತ್ಯ. ಆದರೆ ಕರ್ನಾಟಕ ಎಂದರೆ ನಗರ ಪ್ರದೇಶಗಳು ಮಾತ್ರವಲ್ಲ. ಗ್ರಾಮೀಣ ಪ್ರದೇಶಗಳೂ ಅಸ್ತಿತ್ವದಲ್ಲಿವೆ ಅಲ್ಲವೇ? ಶೇ.70ರಷ್ಟು ಗ್ರಾಮೀಣ ಪ್ರದೇಶವನ್ನು ಹೊಂದಿರುವ ಕರ್ನಾಟಕದ ಸ್ಥಿತ್ಯಂತರಗಳನ್ನು ನಗರಕೇಂದ್ರಿತ ದೃಷ್ಟಿಕೋನದಿಂದಲೇ ನೋಡುವುದು ಎಷ್ಟು ಸಮಂಜಸ? ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡದ ಭಾಷಾ ಸೊಗಡು ಜೀವಂತವಾಗಿದೆ. ಉತ್ತರ ಕರ್ನಾಟಕದ ಜನ ದಕ್ಷಿಣದವರಷ್ಟು ಆಂಗ್ಲ ವ್ಯಾಮೋಹಿಗಳಲ್ಲ ಎಂಬುದೂ ಸ್ಪಷ್ಟ. ನೆರೆ ರಾಜ್ಯಗಳ ದ್ರಾವಿಡ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕನ್ನಡ ಭಾಷೆಯ ಬಳಕೆಯ ವಿಚಾರದಲ್ಲಿ ಅತಿಯಾಗಿ ಗೋಳಾಡುವ ಪರಿಸ್ಥಿತಿ ಉದ್ಭವಿಸಿಲ್ಲವೆಂದೇ ಹೇಳಬಹುದು. ಆದರೆ ವ್ಯಾಪಕವಾಗಿ, ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ನಗರ ಸಂಸ್ಕೃತಿ ಮತ್ತು ಜಾಗತೀಕರಣ ಸೃಷ್ಟಿಸಿರುವ ಗ್ರಾಮೀಣ-ಕೃಷಿ ಬಿಕ್ಕಟ್ಟಿನ ಪರಿಣಾಮವಾಗಿ ಹೆಚ್ಚುತ್ತಿರುವ ವಲಸೆ ಸಂಸ್ಕೃತಿ ಭಾಷೆಯ ಮೇಲೂ ಪ್ರಭಾವ ಬೀರಿರುವುದನ್ನು ಅಲ್ಲಗಳೆ ಯಲಾಗುವುದಿಲ್ಲ. ಹಾಗಾಗಿ ಬೆಂಗಳೂರು ಮುಂತಾದ ನಗರಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಇದನ್ನು ಭಾಷಾ ಸಮಸ್ಯೆ ಎಂದು ಹಲುಬುವುದಕ್ಕಿಂತಲೂ ಸಮಾಜೋ-ಆರ್ಥಿಕ ಸಮಸ್ಯೆ ಎಂದು ಪರಿಗಣಿಸಿದಲ್ಲಿ ಪರಿಹಾರ ಮಾರ್ಗಗಳು ಸುಲಭ.

ತಮ್ಮ ದೈನಂದಿನ ಜೀವನ ನಿರ್ವಹಣೆಯಲ್ಲಿ ತೊಡಗಿರುವ ಯಾವುದೇ ಜನಸಮುದಾಯಗಳಿಗೆ ಭಾಷೆ, ಧರ್ಮ, ಜಾತಿ ಮತ್ತಿತರ ಸಮಸ್ಯೆಗಳು ಪ್ರಾಥಮಿಕ ಎನಿಸುವುದಿಲ್ಲ. ಅವು ಕೇವಲ ಭಾವನಾತ್ಮಕ ವಿಷಯಗಳಾಗುತ್ತವೆ. ಕನ್ನಡ ಪರ ಸಂಘಟನೆಗಳ ಅಬ್ಬರ ಮತ್ತು ವಿಜೃಂಭಣೆಗಳು ಜನಸಾಮಾನ್ಯರ ಈ ಸೂಕ್ಷ್ಮತೆಗಳನ್ನು ಗ್ರಹಿಸಲು ವಿಫಲವಾಗಿರುವುದೇ ಇಂದು ಮೂಲಭೂತ ಸಮಸ್ಯೆಯಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಹತ್ತಾರು ಗುಂಪುಗಳಲ್ಲಿ ಹಂಚಿ ಹೋಗಿರುವ ಕನ್ನಡ ಪರ ಸಂಘಟನೆಗಳ ಕಾರ್ಯವೈಖರಿಯನ್ನೂ ಪರಾಮರ್ಶಿಸುವುದು ಅತ್ಯಗತ್ಯವಲ್ಲವೇ? ಕನ್ನಡ ಸೇನೆ, ಕರುನಾಡ ಸೇನೆ, ರಕ್ಷಣಾ ವೇದಿಕೆ ಹೀಗೆ ಹತ್ತು ಹಲವಾರು ಸಂಘಟನೆಗಳು ಕನ್ನಡದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿವೆ. ಈ ಸಂಘಟನೆಗಳ ಮೂಲ ಧ್ಯೇಯ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕರ್ನಾಟಕದ ನೆಲ, ಜಲ ಸಂಪತ್ತಿನ ರಕ್ಷಣೆ. ಆದರೆ ವಾಸ್ತವದಲ್ಲಿ ಭಾಷೆಯ ಬಗ್ಗೆ ಮಾತ್ರ ಸೊಲ್ಲೆತ್ತಲಾಗುತ್ತಿರುವುದೇ ಹೊರತು, ಭಾಷಿಕರ ಸಮಸ್ಯೆಗಳು ನೇಪಥ್ಯಕ್ಕೆ ಸರಿದಿವೆ. ಕನ್ನಡ ಪರ ಸಂಘಟನೆಗಳು ಪರೋಕ್ಷವಾಗಿ ರಾಜಕೀಯ ಪಕ್ಷಗಳ ಬಾಲಂಗೋಚಿಗಳಂತೆ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ವವಾಗಿ ಗೋಚರಿಸುತ್ತಿದೆ. ಫ್ಲೆಕ್ಸ್‌ಬೋರ್ಡುಗಳಲ್ಲಿ ರಾರಾಜಿಸುತ್ತಲೇ ಮುಂದಿನ ರಾಜಕೀಯ ಹೆಜ್ಜೆಗಳನ್ನು ಗುರುತಿಸಿಕೊಳ್ಳುವ ವೇದಿಕೆಯಂತೆ ಗೋಚರಿಸುತ್ತಿದೆ. ಈ ಸಂಘಟನೆಗಳ ಬದ್ಧತೆ, ಶ್ರದ್ಧೆ ಏನೇ ಇರಲಿ, ಕನ್ನಡ-ಕನ್ನಡಿಗ ಮತ್ತು ಕನ್ನಡತನವನ್ನು ಕುರಿತಂತೆ ಒಂದು ಸ್ಪಷ್ಟ ಆಯಾಮ ಇಲ್ಲವೆಂಬುದಂತೂ ಸತ್ಯ. ಕರ್ನಾಟಕದ ಮತ್ತೊಂದು ದುರಂತವೆಂದರೆ ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡಬೇಕೆಂಬ ಸಮಸ್ತ ಕನ್ನಡಿಗರ ಕೂಗು ಆಳುವವರ ಕಿವಿಗೆ ಬೀಳುತ್ತಲೇ ಇಲ್ಲ. ರಾಷ್ಟ್ರೀಯವಾದಿ ಪಕ್ಷಗಳಿಗೂ ಸಹ ಉಪರಾಷ್ಟ್ರೀಯತೆಯ ಸಂವೇದನೆಗಳನ್ನು ಗ್ರಹಿಸುವ ಮನೋಭಾವವಾಗಲೀ, ಇಚ್ಛೆಯಾಗಲೀ ಇದ್ದಂತಿಲ್ಲ. ಪರಿಣಾಮ ಸರಕಾರಿ ಶಾಲೆಗಳ ಅವಸಾನ ಅವ್ಯಾಹತವಾಗಿ ಸಾಗಿದೆ. ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡುವ ದಿಕ್ಕಿನಲ್ಲಿ ಸರಕಾರಕ್ಕೆ ಆಸಕ್ತಿಯೇ ಇಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಎಲ್ಲರನ್ನೂ ಒಳಗೊಳ್ಳುವ ಹಣಕಾಸು ಇನ್‌ಕ್ಲೂಷನ್ ಯೋಜನೆಯಡಿಯಲ್ಲಿ ಶೇ.100ರಷ್ಟು ಜನರನ್ನು ಗ್ರಾಹಕರನ್ನಾಗಿ ಮಾಡಲು ಯೋಜಿಸುತ್ತಿವೆ. ಆದರೆ ಬ್ಯಾಂಕುಗಳ ಅರ್ಜಿಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತವೆಯೇ ಹೊರತು ಕನ್ನಡದಲ್ಲಿರುವುದು ವಿರಳ. ಹಾಗಾಗಿ ಗ್ರಾಹಕರು ಕನ್ನಡದಲ್ಲಿ ಸಹಿ ಮಾಡಿದರೆ ಆ ಅರ್ಜಿ ನಮೂನೆಯಲ್ಲಿರುವ ಮಾಹಿತಿಯನ್ನು ಗ್ರಾಹಕನಿಗೆ ಓದಿ ಹೇಳಿದ್ದೇನೆಂದು ಮತ್ತೊಬ್ಬರು, ಅಂದರೆ ಆಂಗ್ಲ ಸಹಿ ಮಾಡುವವರು, ಪ್ರಮಾಣೀಕರಿಸಬೇಕು. ಈ ಬಗ್ಗೆ ಯಾವುದೇ ಸಂಘಟನೆಗಳೂ ಈವರೆಗೂ ದನಿ ಎತ್ತದಿರುವುದು ಅಚ್ಚರಿ ಮೂಡಿಸುತ್ತದೆ. ಮೈಸೂರು ಬ್ಯಾಂಕ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಾಗಲೇ ಮೌನಕ್ಕೆ ಶರಣಾಗಿದ್ದ ಸಂಘಟನೆಗಳು ಈ ಸೂಕ್ಷ್ಮ ವಿಚಾರಗಳನ್ನು ಗ್ರಹಿಸಲಾದರೂ ಹೇಗೆ ಸಾಧ್ಯ? ನವ ಉದಾರವಾದ ಎಲ್ಲವನ್ನೂ ನುಂಗಿ ಹಾಕುತ್ತದೆ, ಭಾಷೆಯನ್ನೂ ಒಳಗೊಂಡಂತೆ.

 ಇಂದು ಒಂದು ಭಾಷೆಯಾಗಿ ಕನ್ನಡ ಎದುರಿಸುತ್ತಿರುವ ಅಪಾಯಗಳಿಗಿಂತಲೂ ಒಂದು ಜನಸಮುದಾಯವಾಗಿ ಕನ್ನಡಿಗರು ಅಂದರೆ ಕರ್ನಾಟಕದ ಜನತೆ ಎದುರಿಸುತ್ತಿರುವ ಸಮಸ್ಯೆಗಳು ಹೆಚ್ಚು ಆತಂಕಕಾರಿಯೂ, ಅಪಾಯಕಾರಿಯೂ ಆಗಿದೆ. ಈ ಸಮಸ್ಯೆಗಳ ಸಮಾಜೋ-ಆರ್ಥಿಕ ವಿಶ್ಲೇಷಣೆಯನ್ನು ಮಾಡದೆ ಹೋದಲ್ಲಿ ಕರ್ನಾಟಕದ ಜನತೆಯ ಅಸ್ತಿತ್ವಕ್ಕೇ ಧಕ್ಕೆ ಉಂಟಾಗುತ್ತದೆ. ವಿಪರ್ಯಾಸವೆಂದರೆ ಯಾವುದೇ ರಕ್ಷಣಾ ವೇದಿಕೆಗಳು ಈ ಕುರಿತ ಗಂಭೀರ ಚಿಂತನೆ ನಡೆಸಿಲ್ಲ. ಗ್ರಾಮೀಣ ಮಟ್ಟದಲ್ಲಿನ ಉದ್ಯೋಗ ಖಾತರಿ ಯೋಜನೆಯಿಂದ ಇನ್‌ಫೋಸಿಸ್‌ನಂತಹ ಸಾಫ್ಟ್‌ವೇರ್ ಉದ್ಯಮದವರೆಗೂ ಕರ್ನಾಟಕದ ಜನತೆ ಅಭದ್ರತೆ, ಅನಿಶ್ಚಿತತೆ ಮತ್ತು ಆತಂಕಗಳನ್ನು ಎದುರಿಸುತ್ತಿದ್ದಾರೆ. ಕೇವಲ ಅನ್ಯ ಭಾಷಿಕರ ದಾಳಿಯಷ್ಟೇ ಅಲ್ಲದೆ, ಅನ್ಯ ಸಂಸ್ಕೃತಿ, ಅನ್ಯ ರಾಷ್ಟ್ರಗಳ ಆರ್ಥಿಕ ಆಧಿಪತ್ಯವನ್ನೂ ಎದುರಿಸುತ್ತಿದ್ದಾರೆ. ಜೊತೆಗೆ ಆಡಳಿತಾರೂಢರ ಭ್ರಷ್ಟ ಸಂಸ್ಕೃತಿಯ ವಿರುದ್ಧವೂ ಸೆಣಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ತುಟಿ ಪಿಟಕ್ ಎನ್ನದ ಮಾಧ್ಯಮಗಳಾಗಲಿ, ಕನ್ನಡ ಪರ ಸಂಘಟನೆಗಳಾಗಲಿ ಕನ್ನಡ ಭಾಷೆಯ ಸುತ್ತ ಗಿರಕಿ ಹೊಡೆಯುವುದು ಒಂದು ವಿಡಂಬನೆಯಾಗಿಯೇ ಕಾಣುತ್ತದೆ. ಕರ್ನಾಟಕದ ಮಟ್ಟಿಗೆ ಅಥವಾ ಕನ್ನಡಿಗರ ಮಟ್ಟಿಗೆ ಹೇಳುವುದಾದರೆ ಕರ್ನಾಟಕದ ಔದ್ಯಮಿಕ ಕ್ಷೇತ್ರ ತನ್ನದೇ ಆದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿಲ್ಲ. ಇಲ್ಲಿ ಮಾರುಕಟ್ಟೆ ಎಂದಾಕ್ಷಣ ಜಾಗತೀಕರಣ-ನವ ಉದಾರವಾದ ಪೋಷಿಸುವ ಮಾರುಕಟ್ಟೆ ಎಂದು ಭಾವಿಸಬೇಕಿಲ್ಲ. ಕರ್ನಾಟಕದ ಜನಸಮುದಾಯಗಳ ಅಭ್ಯುದಯಕ್ಕೆ ನೆರವಾಗುವಂತಹ ಮತ್ತು ಈ ಜನಸಮುದಾಯಗಳ ಕನ್ನಡದ ಅಸ್ಮಿತೆಯನ್ನು ಸ್ಥಾಪಿಸುವಂತಹ ಒಂದು ಔದ್ಯಮಿಕ ನೆಲೆಗಟ್ಟಿನಲ್ಲಿ ಮಾರುಕಟ್ಟೆಯ ಪರಿಕಲ್ಪನೆಯನ್ನು ರೂಪಿಸಿಕೊಳ್ಳಬೇಕಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಔದ್ಯಮಿಕ ಕೊರತೆ ಇಲ್ಲ. ಔದ್ಯಮಿಕ ಪ್ರಗತಿಗೂ ಕೊರತೆಯಿಲ್ಲ. ಉದ್ಯಮಶೀಲತೆಯಲ್ಲಿ ಕರ್ನಾಟಕ ಎಂದಿಗೂ ಹಿಂದೆ ಬಿದ್ದಿಲ್ಲ. ದೇಶದ ಇಪ್ಪತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಾಲ್ಕು ಪ್ರಮುಖ ಬ್ಯಾಂಕುಗಳು ಕರ್ನಾಟಕದಲ್ಲೇ ಇರುವುದು ಮತ್ತು ಬೃಹತ್ ಕೈಗಾರಿಕೆಗಳ ಪೈಕಿ ಅನೇಕ ಉದ್ಯಮಗಳು ಇಲ್ಲಿ ನೆಲೆ ಕಂಡಿರುವುದು ರಾಜ್ಯದ ಉದ್ಯಮಶೀಲತೆಯ ದ್ಯೋತಕ. ಆದರೆ ನವ ಉದಾರವಾದ ಇವೆಲ್ಲವನ್ನೂ ನಿರ್ನಾಮ ಮಾಡುತ್ತಿದೆ. ಕನ್ನಡ ಭಾಷೆಯ ಉಳಿವಿಗಾಗಿ ಜೀವ ತೆರಲು ಸಿದ್ಧವಾಗಿರುವ ಸಂಘಟನೆಗಳು ಭಾಷೆ ಮತ್ತು ಬದುಕಿನ ನಡುವೆ ಇರುವ ಸೂಕ್ಷ್ಮ ತರಂಗಗಳನ್ನು ಗಮನಿಸುವ ವ್ಯವಧಾನವನ್ನೇ ಕಳೆದುಕೊಂಡಿರುವುದು ದುರಂತವಾದರೂ ಸತ್ಯ.

ನೆರೆ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡಿಗೆ ಹೋಲಿಸಿದಲ್ಲಿ ಕರ್ನಾಟಕದ ಮಾರುಕಟ್ಟೆ ತನ್ನದೇ ಆದ ಅಸ್ಮಿತೆಯನ್ನು ರೂಪಿಸುವ ಒಂದು ಚೌಕಟ್ಟನ್ನು ನಿರ್ಮಿಸಿಕೊಳ್ಳದಿರುವುದು ಸ್ಪಷ್ಟವಾಗಿದೆ. ಉದಾಹರಣೆಗೆ ತಮಿಳುನಾಡಿನ ತಿರುಪ್ಪೂರು-ತಿರುಪತ್ತೂರಿನ ಸಿದ್ಧ ಉಡುಪು ಉದ್ಯಮ, ಕೊಯಂಬತ್ತೂರಿನ ವಿದ್ಯುತ್ ಉಪಕರಣಗಳು, ಶಿವಕಾಶಿಯ ಪಟಾಕಿ, ಕಂಚಿಯ ರೇಷಿಮೆ ಉದ್ಯಮ ಹೀಗೆ ತನ್ನದೇ ಆದ ಮಾರುಕಟ್ಟೆಯನ್ನು ರೂಪಿಸಿಕೊಳ್ಳುವಲ್ಲಿ ಕರ್ನಾಟಕದ ಯಾವುದೇ ಉದ್ಯಮವೂ ಮುಂದುವರಿದಿಲ್ಲ. ರೇಷ್ಮೆ ಸೀರೆ ಎಂದಾಕ್ಷಣ ಕಂಚಿ ನೆನಪಾಗುತ್ತದೆಯೇ ಹೊರತು, ಕರ್ನಾಟಕದ ಮೊಳಕಾಲ್ಮೂರು, ದೊಡ್ಡಬಳ್ಳಾಪುರ, ಇಳಕಲ್ ನೆನಪಾಗುವುದು ವಿರಳ. ಈ ಪ್ರದೇಶಗಳಲ್ಲಿ ತಲೆತಲಾಂತರದಿಂದ ಅಸ್ತಿತ್ವದಲ್ಲಿರುವ ರೇಷ್ಮೆ ಸೀರೆಗಳ ಉದ್ದಿಮೆ ಕೇವಲ ರಾಜ್ಯ ಮಟ್ಟಕ್ಕೆ ಸೀಮಿತವಾಗಿದೆ. ಇದನ್ನು ರಾಷ್ಟ್ರಮಟ್ಟದ ಮಾರುಕಟ್ಟೆಯಾಗಿ ಪರಿವರ್ತಿಸುವ ಪ್ರಯತ್ನ ಸರಕಾರದಿಂದಲೂ ನಡೆದಿಲ್ಲ, ಉದ್ಯಮಿಗಳಿಂದಲೂ ನಡೆದಿಲ್ಲ. ಇದು ಔದ್ಯಮಿಕ ಕ್ಷೇತ್ರದ ವೈಫಲ್ಯ ಮತ್ತು ಆಳ್ವಿಕರ ನಿಷ್ಕ್ರಿಯತೆಯ ದ್ಯೋತಕವಾಗಿಯೇ ಕಾಣುತ್ತದೆ. ಇಲ್ಲಿ ಹೇಳಲೇಬೇಕಾದ ಸಂಗತಿ ಎಂದರೆ, ಚಿನ್ನದ ಗಣಿಯ ಪಾಡು. ಕೋಲಾರ ಚಿನ್ನದ ಗಣಿಯನ್ನು ಖಾಯಂ ಆಗಿ ಮುಚ್ಚಿಹಾಕಿದಾಗ ಕನ್ನಡ ಪರ ಸಂಘಟನೆಗಳಿಗೆ ಅದು ಪ್ರಮುಖ ಹೋರಾಟದ ವಿಷಯವಾಗಬೇಕಿತ್ತು. ಏಕೆಂದರೆ ಕನ್ನಡನಾಡು ಚಿನ್ನದ ಬೀಡು ಎಂಬ ಹೆಸರು ಬಂದಿದ್ದೇ ಗಣಿಗಳಿಂದ ಮತ್ತು ಸಾವಿರಾರು ಶ್ರಮಜೀವಿಗಳ ಪರಿಶ್ರಮದಿಂದ. ಆದರೆ ಗಣಿಯನ್ನು ಮುಚ್ಚಿಹಾಕಿದಾಗ ಅದು ಯಾವುದೇ ಸಂಚಲನ ಮೂಡಿಸಲಿಲ್ಲ. ಅಲ್ಲಿನ ಶ್ರಮಜೀವಿಗಳು ಮೂಲತಃ ಅನ್ಯಭಾಷಿಕರಾದರೂ ಕರ್ನಾಟಕದ ಅಭ್ಯುದಯಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಕನ್ನಡಿಗರೇ ಆಗಿದ್ದಾರೆ. ಈ ಎರಡು ಲಕ್ಷ ಜನ ಬೀದಿಪಾಲಾದ ಸಂದರ್ಭದಲ್ಲಿ ಅದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ ಆಗಲೇ ಇಲ್ಲ. ಕಾರ್ಮಿಕ ಸಂಘಟನೆಗಳನ್ನು ಹೊರತುಪಡಿಸಿ ಮತ್ತಾವ ಸಂಘಟನೆಯೂ ಚಿನ್ನದ ಗಣಿಯ ಉಳಿವಿಗಾಗಿ ಹೋರಾಟ ರೂಪಿಸಿಲ್ಲ. ಮತ್ತೊಂದೆಡೆ ಶೇ.75ಕ್ಕೂ ಹೆಚ್ಚು ದಲಿತರನ್ನು ಹೊಂದಿರುವ ಈ ಪ್ರದೇಶ ನಿರ್ಗತಿಕ ಸ್ಥಿತಿ ತಲುಪಿದಾಗಲೂ ದಲಿತ ಸಂಘಟನೆಗಳೂ ಇಲ್ಲಿ ಸಕ್ರಿಯವಾಗಿ ಪ್ರತಿಭಟಿಸಲಿಲ್ಲ. ಎಲ್ಲೋ ಒಂದೆಡೆ ಭಾವನಾತ್ಮಕ ಭಾಷಾಭಿಮಾನವೇ ಇಲ್ಲಿ ಮೇಲುಗೈ ಸಾಧಿಸಿರುವಂತೆ ಕಾಣುತ್ತದೆ. ಪರಿಣಾಮ ಕನ್ನಡಿಗರ ಮಹತ್ವದ ಔದ್ಯಮಿಕ ಕ್ಷೇತ್ರವೊಂದರ ಅವಸಾನ. ಇದು ಅಭಿಮಾನದ ಪ್ರಶ್ನೆಗಿಂತಲೂ ಅಳಿವು ಉಳಿವಿನ ಪ್ರಶ್ನೆಯಾಗಿ ನಿಲ್ಲುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕದ ಆಳ್ವಿಕರು ಮತ್ತು ಉದ್ಯಮಿಗಳು ಕನ್ನಡಿಗರ ಮಾರುಕಟ್ಟೆಯೊಂದನ್ನು ಸೃಷ್ಟಿಸುವಲ್ಲಿ ವಿಫಲರಾಗಿರುವುದು ಸ್ಪಷ್ಟ. ಹಾಗಾಗಿ ಆಧುನಿಕ ಐಟಿ-ಬಿಟಿ ಕ್ಷೇತ್ರ ಮತ್ತು ಕಾರ್ಪೊರೇಟ್ ಸಂಸ್ಕೃತಿಗೆ ಬಲಿಯಾಗಿರುವ ಗಣಿ ಉದ್ಯಮ ಸೃಷ್ಟಿಸುವ ಬಂಡವಾಳ ಮತ್ತು ಲಾಭ ಎರಡೂ ಸಹ ಕನ್ನಡಿಗರ ಪಾಲಿಗೆ ಮರೀಚಿಕೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಅಸ್ಸಾಂ ಮಾದರಿಯ ಹೋರಾಟವಲ್ಲ. ಕೊಡಗು ಪ್ರದೇಶದಲ್ಲಿ ಆಳ್ವಿಕರ ನಿರ್ಲಕ್ಷದ ಪರಿಣಾಮವಾಗಿ ಈಗಾಗಲೇ ಅಸ್ಸಾಂ ಮಾದರಿಯ ಹೋರಾಟ ರೂಪುಗೊಳ್ಳುತ್ತಿದ್ದು ಅದನ್ನು ಪರಿಹರಿಸಲು ಕರ್ನಾಟಕದ ಜನತೆ ಪರ್ಯಾಯ ಮಾರ್ಗಗಳನ್ನು ಕುರಿತು ಆಲೋಚಿಸಬೇಕಾಗಿದೆ. ಉಪರಾಷ್ಟ್ರೀಯತೆಯ ಸಮಸ್ಯೆಗಳನ್ನು ಕೇವಲ ಭಾಷೆ-ಸಂಸ್ಕೃತಿಯ ಭಾವನಾತ್ಮಕ ನೆಲೆಗಟ್ಟಿನಲ್ಲೇ ವಿಶ್ಲೇಷಿಸಲಾಗುವುದಿಲ್ಲ. ಆಧುನಿಕ ಜಗತ್ತಿನಲ್ಲಿ ಒಂದು ಭಾಷೆ, ಸಂಸ್ಕೃತಿ ಉಳಿಯ ಬೇಕಾದಲ್ಲಿ ಜನತೆಯ ಸಮಾಜೋ ಆರ್ಥಿಕ ಸ್ಥಿತ್ಯಂತರಗಳೂ ಅಷ್ಟೇ ಮಹತ್ವ ಗಳಿಸುತ್ತವೆ. ಕನ್ನಡದ ಅಳಿವು ಉಳಿವಿನ ಪ್ರಶ್ನೆಗಳಿಗಿಂತಲೂ ಕನ್ನಡಿಗರು ಎಂಬ ಚೌಕಟ್ಟಿನೊಳಗೆ ಸೇರುವ ಕರ್ನಾಟಕದ ಸಮಸ್ತ ಜನತೆಯ ಅಸ್ಮಿತೆಯನ್ನೂ, ಹಿತಾಸಕ್ತಿಗಳನ್ನೂ ಕಾಪಾಡುವ ಪ್ರಶ್ನೆ ಇಂದು ಹೆಚ್ಚು ಪ್ರಸ್ತುತ ಎನಿಸುತ್ತದೆ. ಭಾಷೆಯ ಬಳಕೆ ಕ್ಷೀಣಿಸಬಹುದು ಭಾಷೆ ಸಾಯುವುದಿಲ್ಲ. ಆದರೆ ಭಾಷಿಕರ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ, ಸೂಕ್ತ ರೀತಿಯಲ್ಲಿ ಸುಧಾರಿಸದೆ ಹೋದಲ್ಲಿ ಭಾಷಿಕರು ಸಾಯುತ್ತಾರೆ. ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಸಾವಿರಾರು ರೈತರನ್ನು ಕನ್ನಡಿಗರು ಎಂಬ ಚೌಕಟ್ಟಿನಲ್ಲಿ ಬಂಧಿಸಿ ನೋಡಿದಾಗ ಈ ವಾಸ್ತವದ ಅರಿವಾಗುತ್ತದೆ. ಭಾಷೆಯ ರಕ್ಷಣೆಗಾಗಿ ಟೊಂಕಕಟ್ಟಿ ನಿಲ್ಲುವ ಕನ್ನಡಪರ ಸಂಘಟನೆಗಳು ಮತ್ತು ಭಾಷೆಯ ಉಳಿವಿಗಾಗಿ ಹೋರಾಡುವ ಚಿಂತಕರು ಮೂಲಭೂತವಾಗಿ ಯೋಚಿಸಬೇಕಾಗಿರುವುದು ಈ ನಿಟ್ಟಿನಲ್ಲಿ. ಒಂದು ಜನಸಮುದಾಯದ ಅಸ್ತಿತ್ವ ನಿರ್ಧಾರವಾಗುವುದು ಸಮಾಜೋ-ಆರ್ಥಿಕ ನೆಲೆಗಟ್ಟಿನಲ್ಲಿ ಮಾತ್ರ. ಈ ಅಸ್ತಿತ್ವವನ್ನು ಕಾಪಾಡಿಕೊಂಡ ನಂತರವೇ ಭಾಷೆಯ ಪ್ರಶ್ನೆ ಪ್ರಧಾನವಾಗುತ್ತದೆ. ಭಾಷೆ ಬದುಕಿನ ಒಂದು ಅವಿಭಾಜ್ಯ ಅಂಗ. ಆದರೆ ಭಾಷೆಯೇ ಬದುಕು ಅಲ್ಲ. ಬದುಕು ಭಾಷೆಯನ್ನು ಅವಲಂಬಿಸುವುದೂ ಇಲ್ಲ. ಬದುಕು ಕಟ್ಟಿಕೊಳ್ಳಲು ಹಗಲಿರುಳೂ ದುಡಿಯುವ ಶ್ರಮಜೀವಿಗಳಿಗೆ, ದುಡಿಯುವ ವರ್ಗಗಳಿಗೆ ಭಾಷೆ ಒಂದು ಸಂವಹನ ಮಾಧ್ಯಮವಾಗಿ ಮಾತ್ರ ಕಾಣುತ್ತದೆ. ಈ ಸಂವಹನ ಪ್ರಕ್ರಿಯೆಗೆ ನಿರ್ದಿಷ್ಟ ಭಾಷೆ ಅನಿವಾರ್ಯವೂ ಅಲ್ಲ, ಅವಶ್ಯವೂ ಅಲ್ಲ. ಕರ್ನಾಟಕದ ಮೂಲ ಸಂರಚನೆಗಳ ಅಭಿವೃದ್ಧಿ ಪಥದಲ್ಲಿ ಒಮ್ಮೆ ಸಂಚರಿಸಿದರೆ ಕಾಮಗಾರಿಗಳಲ್ಲಿ ತೊಡಗಿರುವ ಹೊರ ರಾಜ್ಯದ ಶ್ರಮಜೀವಿಗಳ ಬೆವರಿನ ವಾಸನೆಯ ನಡುವೆ ಈ ಸೂಕ್ಷ್ಮವನ್ನೂ ಗಮನಿಸಬಹುದು. ರಾಜ್ಯೋತ್ಸವದ ಭುವನೇಶ್ವರಿ ಮತ್ತು ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಇಂತಹ ಕಹಿ ವಾಸ್ತವಗಳು ಮರೆಯಾಗಿಹೋಗುತ್ತವೆ. ಇದು ನಮ್ಮೆದುರಿನ ದುರಂತ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News