ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು

Update: 2018-11-04 18:49 GMT

ಕಾಶ್ಮೀರದ ಪ್ರಧಾನಧಾರೆ ಚುನಾವಣಾ ಪಕ್ಷಗಳು ತೀವ್ರ ಸ್ವರೂಪದ ಸವಾಲನ್ನು ಎದುರಿಸುತ್ತಿವೆ. ಇದು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಪಕ್ಷಗಳು ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಬಹಿಷ್ಕರಿಸಿದ್ದರಲ್ಲೇ ಸ್ಪಷ್ಟವಾಗಿ ವ್ಯಕ್ತವಾಗಿದೆ. ಸಂವಿಧಾನದ 35ಎ ಕಲಮಿನ ಸಿಂಧುತ್ವವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿರುವುದರಿಂದ ಉಂಟಾಗಿರುವ ರಾಜಕೀಯ ಅತಂತ್ರತೆಯ ಕಾರಣದಿಂದ ಈ ಎರಡೂ ಪಕ್ಷಗಳು ಚುನಾವಣಾ ಪ್ರಕ್ರಿಯೆಗಳಿಂದ ದೂರ ಉಳಿಯಬೇಕಾಯಿತು ಎಂದು ಹೇಳಿಕೊಳ್ಳು ತ್ತಿದ್ದರೂ ಅಸಲಿ ಕಾರಣವೆಂದರೆ ಕಾಶ್ಮೀರದಲ್ಲಿನ ಪರಿಸ್ಥಿತಿ ಪ್ರಧಾನಧಾರೆ ರಾಜಕೀಯಕ್ಕೆ ಪೂರಕವಾಗಿಲ್ಲ ಎಂಬುದೇ ಆಗಿದೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಮುಖ್ಯಧಾರೆ ರಾಜಕೀಯ ಪಕ್ಷಗಳಿಗೆ ಶುಭ ಸೂಚನೆಯನ್ನೇನೂ ನೀಡುತ್ತಿಲ್ಲ.

ರೇಖಾ ಚೌಧರಿ ಬರೆಯುತ್ತಾರೆ:

ಜಮ್ಮು-ಕಾಶ್ಮೀರದ ನಗರ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳು ಕಾಶ್ಮೀರ ಕಣಿವೆಯಲ್ಲಿ ಪ್ರಜಾತಂತ್ರದ ಅವಕಾಶಗಳು ಕಿರಿದಾಗುತ್ತಿರುವುದನ್ನು ಸ್ಪಷ್ಟವಾಗಿ ಬಯಲುಗೊಳಿಸಿದೆ. 2002ರ ಶಾಸನಸಭಾ ಚುನಾವಣೆಗಳನಂತರ ಅಲ್ಲಿ ತೆರೆದುಕೊಂಡಿದ್ದ ಸಕ್ರಿಯ ಚುನಾವಣಾ ಪ್ರಜಾತಂತ್ರದ ಅವಕಾಶಗಳು ಕಳೆದ ಕೆಲವು ವರ್ಷಗಳಿಂದ ಕಿರಿದಾಗುತ್ತಾ ಸಾಗಿವೆ.

ಶ್ರೀನಗರ ಮತ್ತು ಜಮ್ಮುವಿನ 71 ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನೂ ಒಳಗೊಂಡಂತೆ 79 ನಗರ ಸ್ಥಳೀಯ ಸಂಸ್ಥೆಗಳಿಗೂ, ಆರು ಮುನ್ಸಿಪಲ್ ಕೌನ್ಸಿಲ್ ಮತ್ತು 71 ಮುನ್ಸಿಪಲ್ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಶೇ.35ರಷ್ಟು ಮತದಾನವಾಗಿದೆ. ಮತದಾನದ ಪ್ರಮಾಣ ಇಷ್ಟಾದರೂ ಆಗಲು ಪ್ರಮುಖ ಕಾರಣವೆಂದರೆ ಜಮ್ಮು ಮತ್ತು ಲಡಾಖ್ ಪ್ರದೇಶದಲ್ಲಿ ಅತಿಹೆಚ್ಚು ಮತದಾನವಾಗಿದ್ದು. ಆದರೆ ಕಾಶ್ಮೀರ ಕಣಿವೆಯಲ್ಲಿ ಈ ಚುನಾವಣಾ ಕಸರತ್ತನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದರು. ಚುನಾವಣೆಯ ಮೊದಲ ಹಂತದಲ್ಲಿ ಆದ ಶೇ.8.3ರಷ್ಟು ಮತದಾನವೇ ಕಣಿವೆಯಲ್ಲಾದ ಅತೀ ಹೆಚ್ಚು ಮತದಾನವಾಗಿತ್ತು. ಮತದಾನದ ನಂತರದ ಹಂತದಲ್ಲಿ ಈ ಪ್ರಮಾಣ ಇನ್ನೂ ಕುಸಿಯಿತು. ಎರಡನೇ ಹಂತದಲ್ಲಿ ಮತದಾನದ ಪ್ರಮಾಣ ಶೇ.3.4ಕ್ಕೆ ಕುಸಿದರೆ, ಮೂರನೇ ಹಂತದಲ್ಲಿ ಶೇ.3.49 ಮತ್ತು ನಾಲ್ಕನೇ ಹಂತದಲ್ಲಿ ಶೇ. 4ರಷ್ಟು ಮಾತ್ರ ಮತದಾನವಾಯಿತು. ಜನರು ಈ ಚುನಾವಣಾ ಕಸರತ್ತನ್ನು ತಿರಸ್ಕರಿಸಲಿದ್ದಾರೆಂಬುದು ಮತದಾನದ ದಿನಗಳಿಗೆ ಮುನ್ನವೇ ಸಾಬೀತಾಗಿತ್ತು. ಏಕೆಂದರೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿದ್ದರೂ ನಾಮಪತ್ರವನ್ನು ಸಲ್ಲಿಸಲು ಸ್ಪರ್ಧಿಗಳೇ ಮುಂದೆ ಬಂದಿರಲಿಲ್ಲ. ಬಹಳಷ್ಟು ವಾರ್ಡುಗಳಲ್ಲಿ ಒಂದೋ ಒಬ್ಬ ಸ್ಪರ್ಧಿಯೂ ಇರಲಿಲ್ಲ ಅಥವಾ ಒಬ್ಬರೇ ಒಬ್ಬ ಸ್ಪರ್ಧಿಯಿದ್ದರು. ಹೀಗಾಗಿ ಕಾಶ್ಮೀರದ ಒಟ್ಟು 598 ವಾರ್ಡುಗಳಲ್ಲಿ ಕೇವಲ 186 ವಾರ್ಡುಗಳಲ್ಲಿ ಮಾತ್ರ ಮತದಾನವು ನಡೆಯಿತು. ಅಲ್ಲದೆ 231 ವಾರ್ಡುಗಳಲ್ಲಿ ಸ್ಪರ್ಧಿಗಳು ಅವಿರೋಧವಾಗಿ ಆಯ್ಕೆಯಾದರೆ, 181 ವಾರ್ಡುಗಳಲ್ಲಿ ಒಬ್ಬ ಸ್ಪರ್ಧಿಯೂ ಇರಲಿಲ್ಲ. ಹೀಗಾಗಿ ಅಂತಿಮವಾಗಿ 412ರಷ್ಟು ವಾರ್ಡುಗಳಲ್ಲಿ ಮತದಾನವೇ ನಡೆಯಲಿಲ್ಲ. ಪ್ರತ್ಯೇಕತಾವಾದಿಗಳು ಮತ್ತು ಮಿಲಿಟೆಂಟ್ ಸಂಘಟನೆಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದರಿಂದ ಪರಿಸ್ಥಿಯು ಎಷ್ಟು ಕೆಟ್ಟದಾಗಿತ್ತೆಂದರೆ ಮತದಾನವು ನಡೆದ ವಾರ್ಡುಗಳಲ್ಲಿ ಯಾವುದೇ ಪ್ರಚಾರ ನಡೆದಿರಲಿಲ್ಲ. ಇನ್ನೂ ಎಷ್ಟೋ ವಾರ್ಡುಗಳಲ್ಲಿ ಭದ್ರತೆಯ ಕಾರಣದಿಂದ ಸ್ಪರ್ಧಾಳುಗಳ ಹೆಸರನ್ನು ಕೊನೆ ನಿಮಿಷದವರೆಗೆ ರಹಸ್ಯವಾಗಿಟ್ಟಿದ್ದರಿಂದ ಸ್ಪರ್ಧಿಗಳು ಯಾರೆಂಬುದೇ ಮತದಾರರಿಗೆ ಗೊತ್ತಾಗಲಿಲ್ಲ. ಈ ಚುನಾವಣಾ ಸನ್ನಿವೇಶವು 1989ರ ನಂತರದ ಮಿಲಿಟೆನ್ಸಿ ಪ್ರಬಲಗೊಂಡ ಕಾಲಾವಧಿಯನ್ನು ನೆನಪಿಸುವಂತಿತ್ತು. ಆ ದಿನಗಳಲ್ಲಿ ಪ್ರಧಾನಧಾರೆ ರಾಜಕಾರಣವು ಸಂಪೂರ್ಣವಾಗಿ ಕುಸಿದಿತ್ತಲ್ಲದೆ ಚುನಾವಣಾ ರಾಜಕಾರಣವು ಸಂಪೂರ್ಣವಾಗಿ ಅಮಾನ್ಯಗೊಂಡಿತ್ತು. ಉದಾಹರಣೆಗೆ 1989ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕೇವಲ ಶೇ.5ರಷ್ಟು ಮಾತ್ರ ಮತದಾನವಾಗಿತ್ತು ಮತ್ತು ಆ ಚುನಾವಣೆಯನ್ನು ಮೋಸಪೂರಿತ ಚುನಾವಣೆಯೆಂದು ಬಣ್ಣಿಸಲಾಗಿತ್ತು. 1996ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾದರೂ ಮತದಾರರ ನಡುವೆ ಅಪಾರವಾದ ಸೇನಾ ತುಕಡಿಗಳ ಮತ್ತು ದ್ರೋಹಿ ಮಿಲಿಟೆಂಟುಗಳ ಓಡಾಟಗಳು ವಿಸ್ತೃತವಾಗಿ ಇದ್ದಿದ್ದರಿಂದ ಅದು ಬಲವಂತದ ಮತದಾನವೆಂದು ಪರಿಗಣಿತವಾಗಿ ಮಾನ್ಯತೆಯನ್ನು ಗಳಿಸಲಾಗಲಿಲ್ಲ. 2001ರಲ್ಲಿ ನಡೆದ ಪಂಚಾಯತ್ ಚುನಾವಣೆಗಳು ಸಹ ವಿವಾದಕ್ಕೀಡಾಗಿದ್ದವು. ಏಕೆಂದರೆ ಬಹಳಷ್ಟು ಕ್ಷೇತ್ರಗಳಲ್ಲಿ ಯಾವೊಬ್ಬ ಸ್ಪರ್ಧಿಯೂ ನಾಮಪತ್ರವನ್ನು ಸಲ್ಲಿಸಿರಲಿಲ್ಲ. ಆದರೆ 2002ರ ವಿಧಾನಸಭಾ ಚುನಾವಣೆಗಳನಂತರ ಚುನಾವಣಾ ಪ್ರಕ್ರಿಯೆಗಳ ಮಾನ್ಯತೆಯು ಹೆಚ್ಚುತ್ತಾ ಹೋಯಿತು. ಪ್ರತ್ಯೇಕತಾವಾದಿಗಳ ಪ್ರಭಾವವು ಒಂದೆಡೆ ದಟ್ಟವಾಗಿಯೇ ಇದ್ದರೂ, ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಗಳ ನಡುವಿನ ತುರುಸಿನ ಸ್ಪರ್ಧೆಯು ಚುನಾವಣಾ ರಾಜಕೀಯದ ಬಗೆಗಿನ ಹಿತಾಸಕ್ತಿಯನ್ನು ಮತ್ತು ಜನರ ಪಾಲ್ಗೊಳ್ಳುವಿಕೆಯನ್ನೂ ಹೆಚ್ಚಿಸಿತು. ಒಂದು ನಿರ್ದಿಷ್ಟ ಮಾದರಿಯಲ್ಲಿ ನಂತರದ ಪ್ರತಿ ಚುನಾವಣೆಗಳಲ್ಲೂ ಮತದಾನದ ಪ್ರಮಾಣ ವೇಗವಾಗಿ ಹೆಚ್ಚುತ್ತಾ ಹೋಯಿತು. ಚುನಾವಣೆಯು ಹೆಚ್ಚು ಸ್ಥಳೀಯವಾದಷ್ಟು ಮತದಾನದ ಪ್ರಮಾಣವೂ ಹೆಚ್ಚಾಗುತ್ತಿತ್ತು. ಹೀಗಾಗಿ ಲೋಕಸಭಾ ಚುನಾವಣೆಗಳಿಗಿಂತ ರಾಜ್ಯ ವಿಧಾನಸಭಾ ಚುನಾವಣೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಉತ್ಸಾಹ ವ್ಯಕ್ತವಾಗುತ್ತಿತ್ತು. ವಿಧಾನಸಭಾ ಚುನಾವಣೆಗಳಿಗಿಂತ ಪಂಚಾಯತ್ ಚುನಾವಣೆಗಳು ಜನರಲ್ಲಿ ಇನ್ನೂ ಹೆಚ್ಚಿನ ಉತ್ಸಾಹವನ್ನು ಮೂಡಿಸಿತ್ತು. 2011ರ ಪಂಚಾಯತ್ ಚುನಾವಣೆಯಲ್ಲಂತೂ ಶೇ.80ರಷ್ಟು ಮತದಾನವಾಗಿತ್ತು. ಈ ಇಡೀ ಅವಧಿಯಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಮಿಲಿಟೆಂಟ್ ಸಂಘಟನೆಗಳು ಚುನಾವಣೆಗಳನ್ನು ಬಹಿಷ್ಕರಿಸಲು ಕೊಟ್ಟ ಕರೆಯನ್ನು ಜನರು ತಿರಸ್ಕರಿಸಿದರು. ಅಮರನಾಥ ಭೂಮಿ ವಿವಾದದ ಸಂದರ್ಭದಲ್ಲಿ 2008ರಲ್ಲಿ ಮತ್ತೊಮ್ಮೆ ಬೃಹತ್ ಪ್ರತ್ಯೇಕತವಾದಿ ಬಂಡಾಯವು ಹುಟ್ಟಿಕೊಂಡ ಸನ್ನಿವೇಶದಲ್ಲೂ ಕೆಲವೇ ತಿಂಗಳನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಶೇ.52ರಷ್ಟು ಮತದಾನವಾಗಿತ್ತು (ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ಶೇ.60ರಷ್ಟು ಮತದಾನವಾಗಿತ್ತು). ಅದೇ ರೀತಿ 2010ರಲ್ಲಿ ಭುಗಿಲೆದ್ದ ಮತ್ತೊಂದು ಸುತ್ತಿನ ಪ್ರತ್ಯೇಕತಾವಾದಿ ಬಂಡಾಯವು 5 ತಿಂಗಳ ಕಾಲ ನಿರಂತರವಾಗಿ ಮುಂದುವರಿದರೂ, 2011ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಕಾಶ್ಮೀರದ ಜನ ಉತ್ಸಾಹದಿಂದಲೇ ಭಾಗವಹಿಸಿದರು. ಈ ಸಜೀವ-ಸಕ್ರಿಯ ಚುನಾವಣಾ ಪ್ರಕ್ರಿಯೆಗಳು 2014ರ ವಿಧಾನಸಭಾ ಚುನಾವಣೆಗಳಲ್ಲೂ ಮುಂದುವರಿದವು. ಚುನಾವಣಾ ಪಕ್ಷಗಳು ಈ ಪ್ರಕ್ರಿಯೆಗಳಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರಲ್ಲದೆ ಮತದಾನಕ್ಕೆ ಮುನ್ನ ಬಿರುಸಾದ ಚುನಾವಣಾ ಪ್ರಚಾರಗಳೂ ನಡೆದಿದ್ದವು. ಕಾಶ್ಮೀರ ಪ್ರದೇಶದಲ್ಲಿರುವ 46 ವಿಧಾನಸಭಾ ಕ್ಷೇತ್ರಗಳಲ್ಲಿ 23 ಕ್ಷೇತ್ರಗಳಲ್ಲಿ ಶೇ.60ರಷ್ಟು ಮತದಾನವಾಗಿತ್ತು. ಅದರಲ್ಲಿ 13 ಕ್ಷೇತ್ರಗಳಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನವಾಗಿದ್ದರೆ 5 ಕ್ಷೇತ್ರಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನವಾಗಿತ್ತು. ಚುನವಣಾ ಪ್ರಕ್ರಿಯೆಗಳು ಸಜೀವವಾಗಿದ್ದ ಈ ಇಡೀ ಅವಧಿಯಲ್ಲಿ ಕಾಶ್ಮೀರಿಗಳು ಆಡಳಿತದ ರಾಜಕಾರಣ (ಮುಖ್ಯಧಾರೆ ರಾಜಕಾರಣ) ಮತ್ತು ಸಂಘರ್ಷ ಪರಿಹಾರ ರಾಜಕಾರಣ (ಪ್ರತ್ಯೇಕತವಾದಿ ರಾಜಕೀಯ)ಗಳನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಮಾಡಿಕೊಂಡಿದ್ದರು. ಹೀಗಾಗಿ ಪ್ರತ್ಯೇಕತಾವಾದಿ ರಾಜಕಾರಣ ಸಜೀವವಾಗಿದ್ದರೂ ಪ್ರಜಾತಾಂತ್ರಿಕ ರಾಜಕಾರಣವೂ ಕೂಡಾ ಸಕ್ರಿಯವಾಗಿತ್ತು. ಪ್ರತ್ಯೇಕತಾವಾದಿ ಮನೋಭಾವನೆಯನ್ನು ಉಳಿಸಿಕೊಂಡು ಸಹ ತಮ್ಮ ದಿನನಿತ್ಯದ ಅಗತ್ಯಗಳಾದ ನೀರು, ರಸ್ತೆ, ವಿದ್ಯುತ್‌ಗಳಂಥ ವಿಷಯಗಳಿಗೆ ಚುನಾವಣಾ ರಾಜಕಾರಣವು ಅಗತ್ಯವೆಂಬುದು ಕಾಶ್ಮೀರಿಗಳಿಗೆ ಮನವರಿಕೆಯಾಗಿತ್ತು. ಈ ಕಾರಣದಿಂದಾಗಿಯೇ ಪ್ರತ್ಯೇಕತಾವಾದಿ ರಾಜಕಾರಣವೂ ಭುಗಿಲೆದ್ದು ನಿಂತಾಗಲೂ ಕಾಶ್ಮೀರಿಗಳು ಚುನಾವಣಾ ರಾಜಕಾರಣಕ್ಕೆ ಮತ್ತು ಆಡಳಿತದ ರಾಜಕೀಯಕ್ಕೆ ಮಾನ್ಯತೆಯನ್ನು ನೀಡುತ್ತಾ ಬಂದಿದ್ದರು.

ಈ ಬಗೆಯಲ್ಲಿ ಆಡಳಿತದ ರಾಜಕೀಯ ಮತ್ತು ಸಂಘರ್ಷ ಪರಿಹಾರದ ರಾಜಕೀಯವು ಏಕಕಾಲದಲ್ಲಿ ಪರ್ಯಾಯವಾಗಿ ಸಹ ಅಸ್ತಿತ್ವ ಪಡೆದಿದ್ದ ಹಂತವು ಈಗ ಮುಗಿದಂತೆ ಕಾಣುತ್ತಿದೆ. 2014ರಲ್ಲಿ ಯಶಸ್ವಿಯಾದ ಚುನಾವಣಾ ಪ್ರಕ್ರಿಯೆಗಳು ನಡೆದ ನಂತರದ ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ 2016ರ ಪ್ರತ್ಯೇಕತಾವಾದಿ ಬಂಡಾಯವು ಭುಗಿಲೆದ್ದ ನಂತರದಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿಗಳು ಗುಣಾತ್ಮಕವಾಗಿ ಬದಲಾಗಿದೆ. ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ 2017ರಲ್ಲಿ ನಡೆದ ಉಪಚುನಾವಣೆಯಲ್ಲೇ ಈ ವಿದ್ಯಮಾನ ಬೆಳಕಿಗೆ ಬಂದಿತ್ತು. ಆ ಚುನಾವಣೆಯಲ್ಲಿ ಸಾಕಷ್ಟು ಹಿಂಸಾಚಾರಗಳು ಮತ್ತು ಬೃಹತ್ ಪ್ರತಿಭಟನೆಗಳು ನಡೆದಿದ್ದವಲ್ಲದೆ ಕೇವಲ ಶೇ.8ರಷ್ಟು ಮಾತ್ರ ಮತದಾನವಾಗಿತ್ತು.

ಕಾಶ್ಮೀರದ ಪ್ರಧಾನಧಾರೆ ಚುನಾವಣಾ ಪಕ್ಷಗಳು ತೀವ್ರ ಸ್ವರೂಪದ ಸವಾಲನ್ನೆದುರಿಸುತ್ತಿವೆ. ಇದು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಪಕ್ಷಗಳು ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಬಹಿಷ್ಕರಿಸಿದ್ದರಲ್ಲೇ ಸ್ಪಷ್ಟವಾಗಿ ವ್ಯಕ್ತವಾಗಿದೆ. ಸಂವಿಧಾನದ 35ಎ ಕಲಮಿನ ಸಿಂಧುತ್ವವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿರುವುದರಿಂದ ಉಂಟಾಗಿರುವ ರಾಜಕೀಯ ಅತಂತ್ರತೆಯ ಕಾರಣದಿಂದ ಈ ಎರಡೂ ಪಕ್ಷಗಳು ಚುನಾವಣಾ ಪ್ರಕ್ರಿಯೆಗಳಿಂದ ದೂರ ಉಳಿಯಬೇಕಾಯಿತು ಎಂದು ಹೇಳಿಕೊ ಳ್ಳುತ್ತಿದ್ದರೂ ಅಸಲಿ ಕಾರಣವೆಂದರೆ ಕಾಶ್ಮೀರದಲ್ಲಿನ ಪರಿಸ್ಥಿತಿ ಪ್ರಧಾನಧಾರೆ ರಾಜಕೀಯಕ್ಕೆ ಪೂರಕವಾಗಿಲ್ಲ ಎಂಬುದೇ ಆಗಿದೆ.

ರೇಖಾ ಚೌಧರಿಯವರು ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡಿಯ ಫೆಲೋ ಆಗಿದ್ದು ‘‘ಜಮ್ಮು ಆ್ಯಂಡ್ ಕಾಶ್ಮೀರ್: ಪಾಲಿಟಿಕ್ಸ್ ಆಫ್ ಐಡೆಂಟಿಟಿ ಆ್ಯಂಡ್ ಸೆಪರೇಟಿಸಮ್’’ ಎಂಬ ಪುಸ್ತಕವನ್ನು ಬರೆದಿದ್ದಾರೆ.

Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ