ಜನಾಭಿಪ್ರಾಯ ನಿಯಂತ್ರಿಸುತ್ತಿರುವ ಆದಿತ್ಯನಾಥ್

Update: 2018-11-05 07:22 GMT

ಉತ್ತರಪ್ರದೇಶದ ಮುಖ್ಯಮಂತ್ರಿ ನಗರಗಳ ಸ್ಥಳ ಹೆಸರು ಬದಲಿಸುವ ಭರಾಟೆಯಲ್ಲಿರುವಂತೆ ಕಾಣುತ್ತದೆ. ಈ ನಿಟ್ಟಿನಲ್ಲಿ ತೀರ ಇತ್ತೀಚೆಗೆ ಯುಪಿಯ ಪ್ರಸಿದ್ಧ ನಗರ ಅಲಹಾಬಾದ್‌ನ ಹೆಸರನ್ನು ಪ್ರಯಾಗರಾಜ್ ಎಂದು ಅವರು ಬದಲಿಸಲಿದ್ದಾರೆ. ನಮ್ಮ ನಗರಗಳಿಗಿರುವ ಇಸ್ಲಾಮಿಕ್ ಸ್ಪರ್ಶವನ್ನು ಕಿತ್ತೆಸೆಯುವ ತನ್ನ ಪ್ರಯತ್ನಗಳ ಅಂಗವಾಗಿ ಅವರು ಈ ಹೆಸರು ಬದಲಾವಣೆ ಮಾಡಿರಬೇಕು. ಈ ನಗರದ ಮೂಲ ಹೆಸರಿನ ಹಲವು ರೂಪಗಳು ಕಂಡು ಬರುತ್ತವೆ. ಇಲಾ-ವಾಜ್, ಅಲ್ಲಾ-ಉದಲ್ ಇತ್ಯಾದಿ. ಅಕ್ಬರ್ ಈ ನಗರಕ್ಕೆ ಇಲಾಹಾ-ಬಾದ್ ಅಥವಾ ಇಲಾಹಿ ಬಾಸ್( ದೇವರುಗಳ ನಿವಾಸ) ಎಂದು ಹೆಸರು ಇಟ್ಟಿದ್ದ. ಅದೇನೇ ಇದ್ದರೂ ಯೋಗಿ ಈಗಾಗಲೇ ಮೊಗಲ್ ಸರಾಯಿಯನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಜಂಕ್ಷನ್ ಎಂದೂ, ಆಗ್ರಾ ವಿಮಾನ ನಿಲ್ದಾಣಕ್ಕೆ ಇದೇ ನಾಯಕರ ಹೆಸರನ್ನೂ, ಉರ್ದು ಬಝಾರ್‌ಗೆ ಹಿಂದಿ ಬಝಾರ್ ಎಂದೂ, ಅಲಿ ನಗರಕ್ಕೆ ಆರ್ಯ ನಗರ ಎಂದೂ ಮರುನಾಮಕರಣ ಮಾಡಿದ್ದಾರೆ. ಮುಸ್ಲಿಂ ಹೆಸರಿನಂತೆ ಕಾಣುವ ಎಲ್ಲ ಹೆಸರುಗಳನ್ನು ಅವರು ಪರಕೀಯವೆಂದು ಪರಿಗಣಿಸುತ್ತಾರೆ.

 ಅವರ ಕಾರ್ಯಸೂಚಿಯಲ್ಲಿ ಇನ್ನೂ ಹಲವು ಹೆಸರುಗಳ ಬದಲಾವಣೆ ಇದೆ. ಉದಾಹರಣೆಗೆ, ತಾಜ್‌ಮಹಲ್ ಬದಲು ತೇಜೋ ಮಹಲ್, ಅಝಂಗಡದ ಬದಲು ಆರ್ಯಗಡ. ಇಷ್ಟೇ ಅಲ್ಲದೆ ಅವರ ಪ್ರಕಾರ ನಮ್ಮ ಸಂವಿಧಾನದಲ್ಲಿರುವ ಇಂಡಿಯಾ ಎಂಬ ಹೆಸರನ್ನು ಹಿಂದುಸ್ಥಾನ್ ಎಂದು ಬದಲಿಸಬೇಕು.ಅವರು ಸಾಕ್ಷಿ ಮಹಾರಾಜ್, ಸಾಧ್ವಿ ಉಮಾಭಾರತಿ, ಸಾಧ್ವಿ ನಿರಂಜನ್ ಜ್ಯೋತಿ ಮೊದಲಾದವರ ಗುಂಪಿಗೆ ಸೇರಿದವ ರಾಗಿದ್ದಾರೆ. ಇವರೆಲ್ಲ ಹಿಂದೂ ರಾಷ್ಟ್ರೀಯವಾದಿ ಅಜೆಂಡಾದ ಭಾಗವಾಗಿದ್ದಾರೆ.

 ಈ ಪುರುಷ-ಸ್ತ್ರೀ ಧಾರ್ಮಿಕ ನಾಯಕ ನಾಯಕಿಯರು ಈಗ ಹಲವು ದೇಶಗಳಲ್ಲಿ ರಾಜಕಾರಣದಲ್ಲಿರುವುದು ಇತ್ತೀಚಿನ ಬೆಳೆವಣಿಗೆಯಾಗಿದೆ. ಈ ದೇಶಗಳಲ್ಲಿ ತೀವ್ರ ಸ್ವರೂಪದ ಭೂಸುಧಾರಣೆಗಳ ಗೈರುಹಾಜರಿ ಮತ್ತು ಜಮೀನುದಾರರು- ಪುರೋಹಿತಶಾಹಿ ಪ್ರಾಬಲ್ಯ ರಾಜಕೀಯ ರಂಗದಲ್ಲಿ ಇಂತಹ ಧಾರ್ಮಿಕ ವ್ಯಕ್ತಿಗಳು ಪ್ರಬಲರಾಗುವುದಕ್ಕೆ ಕಾರಣ ವಿರಬಹುದು.

 ಭಾರತದಲ್ಲಿ ಹಲವು ರೀತಿಗಳಲ್ಲಿ ರಾಜಕೀಯ ರಂಗದಲ್ಲಿ ಪ್ರಾಬಲ್ಯ ಸಾಧಿಸಿರುವ ಈ ‘ಗಾಡ್‌ಮೆನ್-ವಿಮೆನ್’ಗಳಲ್ಲಿ ಹೆಚ್ಚಿನವರು ಹಿಂದೂ ರಾಷ್ಟ್ರೀಯವಾದಿ ಚಳವಳಿಯ ಭಾಗವಾಗಿ ಮುಂಚೂಣಿಗೆ ಬಂದವರು ಮತ್ತು ದ್ವೇಷ ಭಾಷಣಗಳನ್ನು ಮಾಡುವುದರಲ್ಲಿ ನಿಷ್ಣಾತರು. ಉದಾಹರಣೆಗೆ, ಸಾಧ್ವಿ ನಿರಂಜನ್ ಜ್ಯೋತಿ ‘ಹರಾಮ್ ಜಾದೆ’ ಎಂಬ ಪದಗಳನ್ನು ಬಳಸಿದ್ದರು; ಜನಸಂಖ್ಯಾ ಹೆಚ್ಚಳಕ್ಕೆ ಕಾರಣವೆಂದು ಮುಸ್ಲಿಮರನ್ನು ದ್ವೇಷಿಸಿದ್ದಕ್ಕೆ ಸಾಕ್ಷಿ ಮಹಾರಾಜ್ ಮೇಲೆ ಮೊಕದ್ದಮೆ ಹೂಡಲಾಯಿತು. ದ್ವೇಷಪೂರಿತ ಭಾಷಣಗಳನ್ನು ಮಾಡಿದ್ದಕ್ಕಾಗಿ ಸ್ವತಃ ಯೋಗಿವಿರುದ್ಧವೇ ಹೂಡಲಾದ ಹಲವು ಮೊಕದ್ದಮೆಗಳಿವೆ. ಇವುಗಳಲ್ಲಿ ಅತ್ಯಂತ ಕೆಟ್ಟ ದ್ವೇಷ ಭಾಷಣವೆಂದರೆ ಮೃತಪಟ್ಟ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವೆಸಗಬೇಕೆಂದು ಅವರು ನೀಡಿದ್ದ ಸಲಹೆ.

ಯೋಗಿಯವರು ಕೋಮು ಕಾರ್ಯಸೂಚಿ ಅಜೆಂಡಾವನ್ನು ತುದಿಮೊದಲಿಲ್ಲದ ರೀತಿಯಲ್ಲಿ ತೀವ್ರಗೊಳಿಸಿದ್ದಾರೆ. ಉತ್ತರ ಪ್ರದೇಶವು ಹಿಂದೂ ಧಾರ್ಮಿಕ ಹಬ್ಬಗಳನ್ನು ಸಂಘಟಿಸುತ್ತಿದೆ. ದೀಪಾವಳಿಯ ಆಚರಣೆಯ ವೇಳೆ, ರಾಮ ಮತ್ತು ಸೀತೆಯನ್ನು ಹೊತ್ತ ಹೆಲಿಕಾಪ್ಟರ್ ಇಳಿದಾಗ, ಆ ದೇವತೆಗಳನ್ನು ಯೋಗಿ ಇದಿರುಗೊಂಡು ಸ್ವಾಗತಿಸಿದರು. ಅಲ್ಲದೆ, ಆಗ ಹಣತೆಗಳನ್ನು ಹಚ್ಚುವುದನ್ನು ಕೂಡ ಬೃಹತ್ ಪ್ರಮಾಣದಲ್ಲಿ ಸಂಘಟಿಸಲಾಯಿತು. ಕುಂಭ ಮೇಳಕ್ಕೆ ತನ್ನ ಸರಕಾರವು 5,000 ಕೋಟಿ ರೂ. ವ್ಯಯಿಸಲಿದೆ ಎಂದು ಇತ್ತೀಚೆಗೆ ಅವರು ಘೋಷಿಸಿದ್ದರು. ಇವೆಲ್ಲವೂ ರಾಜ್ಯದಲ್ಲಿ ಆರೋಗ್ಯ ಮತ್ತು ಇತರ ಮೂಲ ಚೌಕಟ್ಟುಗಳಿಗೆ ಸಂಬಂಧಿಸಿದಂತೆ ತೀವ್ರ ಹಣ ಕಾಸಿನ ಕೊರತೆ ಇರುವಾಗಲೇ ನಡೆಯುತ್ತಿದೆ. ಹಲವಾರು ಬಾರಿ ರಾಜ್ಯದಲ್ಲಿ ಅವಶ್ಯಕ ಸಾಮಗ್ರಿಗಳ ಕೊರತೆಯಿಂದಾಗಿ ಹತ್ತಾರು ಚಿಕ್ಕ ಮಕ್ಕಳು, ಶಿಶುಗಳು ಮೃತಪಟ್ಟಿವೆ. ಹೆಸರುಗಳನ್ನು ಬದಲಾಯಿಸಲಾದ ನಗರಗಳಲ್ಲಿ ಸಮರ್ಪಕ ಮೂಲ ಸೌಕರ್ಯಗಳಿಲ್ಲ; ರಾಜ್ಯವು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ತುಂಬ ಹಿಂದೆ ಉಳಿದಿದೆ. ರಾಜ್ಯದಲ್ಲಿ ಮಾನವ ಹಕ್ಕುಗಳ ಸ್ಥಿತಿ ಶೋಚನೀಯವಾಗಿದೆ. ಹಲವಾರು ಮಾಂಸದ ಅಂಗಡಿಗಳನ್ನು ಮುಚ್ಚುವ ಮೂಲಕ ಅಲ್ಪಸಂಖ್ಯಾತರ ಬದುಕನ್ನೇ ಕಸಿದುಕೊಳ್ಳುವ ರಾಜ್ಯ ಸರಕಾರದ ಪ್ರಾಯೋಜಿತ ಕ್ರಮಗಳಿಂದಾಗಿ ಅಲ್ಪಸಂಖ್ಯಾತರ ಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಹದಗೆಡುತ್ತಿದೆ. ತನ್ನ ಆಡಳಿತದ ಆರಂಭದಲ್ಲೇ ಯೋಗಿಯವರು ಇದನ್ನೆಲ್ಲ ಮಾಡಿದರು. ಜಾತ್ಯತೀತ, ಸೆಕ್ಯುಲರಿಸಂ ಒಂದು ದೊಡ್ಡ ಸುಳ್ಳು ಎಂದು ಯೋಗಿ ಖಾರವಾಗಿ ಹೇಳಿದ್ದಾರೆ. ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಉತ್ತರ ಪ್ರದೇಶ ರಾಜ್ಯವನ್ನು ಕೊಂಡೊಯ್ಯಲು ಅವರು ಹೇಗೆ ಬಲಾತ್ಕಾರ ಪೂರ್ವಕವಾಗಿ ಹೆಜ್ಜೆಗಳನ್ನು ಇಡುತ್ತಿದ್ದಾರೆ ಎಂಬುದನ್ನು ಅವರ ಕ್ರಮಗಳು, ಕ್ರಿಯೆಗಳು ತೋರಿಸಿಕೊಡುತ್ತಿವೆ. ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿರುವ ಜಾತ್ಯತೀತ ವೌಲ್ಯಗಳಿಗೆ ಕವಡೆ ಕಿಮ್ಮತ್ತನ್ನ್ನೂ ನೀಡದೆ ಅವರು ಈ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ