ದೇಶದ ಜನರೇಕೆ ಹಸಿವಿನಿಂದ ಬಳಲುತ್ತಿದ್ದಾರೆ?

Update: 2018-11-07 18:29 GMT

‘‘ಸುಜಲಾಂ ಸುಫಲಾಂ ಭಾರತ್ ದೇಶ್ ಮೇ

ರೋಟಿ ಮೆಹಂಗಿ ಕ್ಯೋಂರೆ ಭಾ’’
 (ಹೇರಳವಾಗಿ ನೀರು ಮತ್ತು ಸಂಪನ್ಮೂಲಗಳಿರುವ ಭಾರತದಲ್ಲಿ ರೊಟ್ಟಿ ದುಬಾರಿ ಯಾಕೆ?)
 -‘ಭಾರತ್ ಅಪ್ನಾ ಮಹಾನ್ ಭೂಮಿ’ಯಿಂದ ಕ್ರಾಂತಿ ಕಾರ್ಯಕಾರಿ ಗದ್ದರ್ ಬರೆದ ಕವನದ ಹಿಂದಿ ಅನುವಾದ ಮಾಡಿದವರು ಕ್ರಾಂತಿಕಾರಿ ಕವಿ ಗಾಯಕ ವಿಲಾಸ್ ಘೋರೆ.

ಬಡತನ ಮತ್ತು ಹಸಿವು ಭಾರತದ ಸಾಮಾನ್ಯ ಲಕ್ಷಣಗಳಾಗಿವೆ. ಅಂತರ್‌ರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ಐಎಫ್‌ಪಿಆರ್‌ಐ ಸಿದ್ಧಪಡಿಸಿರುವ ಜಾಗತಿಕ ಹಸಿವು ಸೂಚ್ಯಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್) ಜಿಎಚ್‌ಐ ಈ ಸತ್ಯವನ್ನು ಇನ್ನಷ್ಟು ಬಯಲು ಮಾಡಿದೆ. ವರದಿಯ ಪ್ರಕಾರ 119 ದೇಶಗಳಲ್ಲಿ ಭಾರತ 100ನೇ ಸ್ಥಾನದಲ್ಲಿದೆ ಮತ್ತು ಸಮಗ್ರ ಏಶ್ಯಾದಲ್ಲಿ ಹಸಿವಿನಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಾತ್ರ ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿವೆ. 2017ರಲ್ಲಿ 31.4 ಅಂಕ ಪಡೆದಿರುವ ಭಾರತವು ‘ಗಂಭೀರ’ ವರ್ಗದಲ್ಲಿವೆ. ‘ಹೌ ಹಂಗ್ರಿ ಇಸ್ ಇಂಡಿಯಾ ಆ್ಯಂಡ್ ವೈ?’ ಎಂಬ ಲೇಖನದಲ್ಲಿ ಮೋಹನ್ ಗುರುಸ್ವಾಮಿ ಹೇಳುತ್ತಾರೆ: ‘‘ಭಾರತದಲ್ಲಿ ಹಸಿವು ಸಾಕಷ್ಟು ಆಹಾರ ವಸ್ತುಗಳನ್ನು ಉತ್ಪಾದಿಸದೆ ಇರುವುದರ ಪರಿಣಾಮವಲ್ಲ. ಅದು ಲಕ್ಷಾಂತರ ಜನರ ಬಳಿ ಆಹಾರ ಕೊಂಡು ಹೋಗಲು ಬೇಕಾಗುವಷ್ಟು ಹಣ ಇಲ್ಲದೇ ಇರುವುದರ ಪರಿಣಾಮ. ಒಮ್ಮಾಮ್ಮೆ ಕನಿಷ್ಠ ಆವಶ್ಯಕತೆಗಳನ್ನು ಕೊಂಡುಕೊಳ್ಳಲೂ ಅವರ ಬಳಿ ಹಣ ಇರುವುದಿಲ್ಲ.’’
ಶ್ರೀಮಂತಿಕೆಯ ನಡುವೆ ಬಡತನ
2014ರಲ್ಲಿ ಆಹಾರ ಸಿಗದೆ ಬಳಲಿದವರ ಸಂಖ್ಯೆ 190.7 ಮಿಲಿಯ ಇತ್ತು. ಅದೀಗ ಹೆಚ್ಚಾಗಿದೆ. ವರದಿಯೊಂದರ (ಎಫ್‌ಒಬಿ) ಪ್ರಕಾರ ಈಗ 195.9 ಮಿಲಿಯ ಭಾರತೀಯರು ಹಸಿವಿನಿಂದ ಬಳಲುತ್ತಿದ್ದಾರೆ. ಅಂದರೆ ದೇಶದ ಒಟ್ಟು ಜನಸಂಖ್ಯೆ ಶೇ.14.8 ಮಂದಿಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಹಸಿವಿನಿಂದ ಬಳಲುವವರು ಗರಿಷ್ಠ ಸಂಖ್ಯೆಯಲ್ಲಿರುವಾಗಲೇ 2015ರಲ್ಲಿ ದೇಶದಲ್ಲಿ ಗರಿಷ್ಠ ಅಂದರೆ 251.12 ಮಿಲಿಯ ಟನ್ ಆಹಾರ ಧಾನ್ಯಗಳನ್ನು ಬೆಳೆಯಲಾಗಿತ್ತು. ಹೀಗೆ ಆಹಾರ ವಸ್ತುಗಳ ಸಮರ್ಪಕ ವಿತರಣೆಯಾಗದಿರುವುದು ಭಾರತದಲ್ಲಿ ಜನರು ಉಪವಾಸ ಬಿದ್ದು ಸಾಯಲು ಮುಖ್ಯ ಕಾರಣವಾಗಿದೆ.
ಕೆಲ ವಿಷಯಗಳು
ಹಸಿವಿಗೆ ಕಾರಣವಾಗಿರುವ ಅತ್ಯಂತ ಮುಖ್ಯ ಅಂಶವೆಂದರೆ ಬಹಳಷ್ಟು ಮಂದಿ ಬಡವರಿಗೆ ಆಹಾರ ವಸ್ತುಗಳು ಅಲಭ್ಯವಾಗುತ್ತಿರುವುದು. ಅವುಗಳು ಅವರ ಕೈಗೆ ಎಟಕುತ್ತಿಲ್ಲ. ಬಹಳ ಆಹಾರ ವಸ್ತುಗಳು ವ್ಯರ್ಥವಾಗಿ ಹೋಗುತ್ತಿವೆ. ಇಡೀ ಬ್ರಿಟನ್ ಬಳಸುವಷ್ಟು ಆಹಾರವನ್ನು ಭಾರತೀಯರು ಹಾಳು ಮಾಡುತ್ತಿದ್ದಾರೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಪ್ರಕಾರ ಭಾರತದಲ್ಲಿ ಉತ್ಪಾದಿಸಲಾಗುವ ಒಟ್ಟು ಆಹಾರದ ಶೇ. 40 ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ. ಬೇಸಾಯ ಜಮೀನಿನ ಹಿಡುವಳಿಗಳ ಚಿಕ್ಕ ಚಿಕ್ಕ ಗಾತ್ರವು ಇನ್ನೊಂದು ಅಂಶವಾಗಿದೆ. 2011ರ ಗಣತಿಯ ಪ್ರಕಾರ ದೇಶದಲ್ಲಿ 118.9 ಮಿಲಿಯ ಬೇಸಾಯಗಾರರಿದ್ದಾರೆ. ಅಲ್ಲದೆ ಮೂರ್ನಾಲ್ಕು ಮಿಲಿಯ ಭೂರಹಿತ ಕಾರ್ಮಿಕರಿದ್ದಾರೆ. ಇವರೆಲ್ಲ ಸೇರಿ ದೇಶದ ಜನಸಂಖ್ಯೆಯ ಶೇ. 22 ಆಗುತ್ತಾರೆ. 1970ರಿಂದ ಬೇಸಾಯ ಜಮೀನಿನ ಗಾತ್ರ ಕುಗ್ಗುತ್ತಾ ಬಂದು 1.05 ಹೆಕ್ಟೇರ್ ಆಗಿದೆ. 2001ರ ಗಣತಿಯ ಪ್ರಕಾರ 490 ಮಿಲಿಯ ಮಂದಿ ಚಿಕ್ಕ ಹಿಡುವಳಿಗಳನ್ನು ಅವಲಂಬಿಸಿಕೊಂಡಿದ್ದಾರೆ. ಇದು ಬಡತನದ ಹರಡುವಿಕೆಗೆ ಕಾರಣವಾಗಿದೆ. ತೀರಾ ಕೆಳಗಿನ ಹಾಗೂ ರಚನೆಯ ಕೂಲಿ ಬಟ್ಟೆಗಳಿಂದಾಗಿ ಬಡತನ ಮತ್ತು ಹಸಿವು ಕೆಳಜಾತಿಗಳಲ್ಲಿ ಹೆಚ್ಚಿನ ಮಟ್ಟದಲ್ಲಿದೆ. ಹಸಿವಿಗೆ ಇನ್ನೊಂದು ಕಾರಣ ವಿಪರೀತ ನಿರುದ್ಯೋಗ. ವಿಶೇಷವಾಗಿ ಕೆಳಗಿನ ಜಾತಿಗಳಲ್ಲಿ ಮತ್ತು ಸಮಾಜದ ಕೆಳ ವರ್ಗಗಳಲ್ಲಿ ಹಸಿವಿಗೆ ಇದು ಮುಖ್ಯ ಕಾರಣವಾಗಿದೆ. ಈ ಜನರಿಗೆ ಸಾಕಷ್ಟು ಹಣ ದೊರಕದೆ ಇರುವುದರಿಂದ ಹಲವು ದಿನಗಳವರೆಗೆ ಅವರಿಗೆ ಆಹಾರ ಸಿಗದಿರುವ ಸಂದರ್ಭಗಳು ಇವೆ. ಇಷ್ಟೇ ಅಲ್ಲದೆ ಇಂದಿನ ಗುರುತು ಚೀಟಿ ವ್ಯವಸ್ಥೆ ‘ಆಧಾರ್’ ಕೂಡಾ ಹಸಿವಿನಿಂದಾಗಿ ಸಂಭವಿಸುವ ಸಾವುಗಳಿಗೆ ಕಾರಣವಾಗಿದೆ. ಸಕಾಲದಲ್ಲಿ ಪಡಿತರ ಪೂರೈಸುವಲ್ಲಿ ನೆರವಾಗಬೇಕಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಫಲಾನುಭವಿಗಳ ಗುರುತನ್ನು ಸಾಬೀತು ಪಡಿಸುವಲ್ಲಿ ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪರಿಣಾಮವಾಗಿ ಹಲವು ಮಹಿಳೆಯರು ಮತ್ತು ಮಕ್ಕಳು ಒಡಿಶಾ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಪಡಿತರ ಸಾಮಗ್ರಿಗಳು ಸಿಗದೆ ಹಸಿವಿನಿಂದಾಗಿ ಮೃತಪಟ್ಟಿದ್ದಾರೆ.
ಉಪೇಕ್ಷೆ
ಹೀಗೆ ಹಸಿವು ಮತ್ತು ಉಪವಾಸದಿಂದ ಜನರು ಬಳಲಿ ಸಾಯುವುದಕ್ಕೆ ಬಹಳಷ್ಟು ಸಂದರ್ಭಗಳಲ್ಲಿ ಆಹಾರದ ಅಲಭ್ಯಕ್ಕಿಂತ ಮಿಗಿಲಾಗಿ ಸರಕಾರದ ಉಪೇಕ್ಷೆ, ಅಸಡ್ಡೆಯೇ ಕಾರಣವಾಗಿದೆ. ಸಂಪತ್ತು ಮತ್ತು ಸಂಪನ್ಮೂಲಗಳ ಅಸಮಾನ ಹಂಚಿಕೆ ಶ್ರೀಮಂತ ಮತ್ತು ಬಡವರ ನಡುವಣ ಅಂತರವನ್ನು ತುಂಬಾ ಹೆಚ್ಚಿಸಿದೆ. ಈ ಅಂತರ ಹೆಚ್ಚುತ್ತಲೇ ಇದೆ. ವಿತರಿಸಬಹುದಾದ ಸಂಪನ್ಮೂಲಗಳು ಹೇರಳವಾಗಿದ್ದರೂ ಹಸಿವು ಮತ್ತು ಆಹಾರದ ಕೊರತೆ ಹೆಚ್ಚುತ್ತಲೇ ಇದೆ. ಭಾರತ ನಿಜವಾಗಿಯೂ ಬಡ ಜನರಿರುವ ಒಂದು ಶ್ರೀಮಂತ ದೇಶ. ಸಮೀಕ್ಷೆಯೊಂದರ ಪ್ರಕಾರ ದೇಶದ ಸಂಪತ್ತು ಬೆರಳೆಣಿಕೆಯ ಮಂದಿಯ ಬಳಿ ಶೇಖರವಾಗಿದೆ. ಶೇ. 54ರಷ್ಟು ಸಂಪತ್ತನ್ನು ಕೆಲವೇ ಮಂದಿ ಮಿಲಿಯಾಧೀಶರು ಹೊಂದಿದ್ದಾರೆ. ದೇಶದ ಶೇ. 53 ಸಂಪತ್ತು ಅತ್ಯಂತ ಶ್ರೀಮಂತರಾದ ಶೇ. 1 ಮಂದಿಯ ಕೈಯಲ್ಲಿದೆ. ಅತ್ಯಂತ ಶ್ರೀಮಂತರಾದ ಶೇ. 5 ಮಂದಿಯ ಕೈಯಲ್ಲಿ ದೇಶದ ಒಟ್ಟು ಸಂಪತ್ತಿನ 68.6 ಇದೆ ಮತ್ತು ಇವರಲ್ಲಿ ಗರಿಷ್ಠ ಶ್ರೀಮಂತರಾದ ಮೊದಲ ಶೇ. 10 ಮಂದಿ ಶೇ. 76.3 ಸಂಪತ್ತಿನ ಒಡೆಯರಾಗಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಬಡವರ ಬಳಿ ಇರುವುದು ಒಟ್ಟು ರಾಷ್ಟ್ರೀಯ ಸಂಪತ್ತಿನ ಶೇ.4.1 ಮಾತ್ರ. ಹೀಗೆ ಆದಾಯದಿಂದ ಅಂತರವನ್ನು ಕಡಿಮೆ ಮಾಡಿ, ಆ ಮೂಲಕ ಬಡವರು ಹಸಿವು ಮತ್ತು ಉಪವಾಸದಿಂದಾಗಿ ಸಾಯುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶವು ಇನ್ನೂ ತುಂಬ ದೂರದ ಹಾದಿ ಸವೆಸಬೇಕಾಗಿದೆ.
ಕೃಪೆ: countercurrents.org

Writer - ಶೆೇಷು ಬಾಬು

contributor

Editor - ಶೆೇಷು ಬಾಬು

contributor

Similar News

ಜಗದಗಲ
ಜಗ ದಗಲ