ವಿಫಲವಾದ 'ಸಮ್ಮಿಶ್ರ ಸರ್ಕಾರ'ದ ದಾಳಿ : ಪ್ರಾಬಲ್ಯ ಮೆರೆದ ಬಿ.ಎಸ್.ಯಡಿಯೂರಪ್ಪ
ಶಿವಮೊಗ್ಗ, ನ. 7: ಶತಾಯಗತಾಯ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜಯ ಸಂಪಾದಿಸಲು, ತವರೂರಲ್ಲಿಯೇ ಬಿ.ಎಸ್.ಯಡಿಯೂರಪ್ಪಗೆ ಸೋಲುಣಿಸಲು ಭಾರೀ ಹೋರಾಟ ನಡೆಸಿದ್ದ ಹಾಗೂ ತನ್ನ ಪ್ರತಿಷ್ಠೆಯನ್ನೇ ಹೊರೆಗಚ್ಚಿದ್ದ 'ಸಮ್ಮಿಶ್ರ ಸರ್ಕಾರ'ಕ್ಕೆ ತೀವ್ರ ನಿರಾಸೆ ಉಂಟಾಗಿದೆ. ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸೋಲನುಭವಿಸುವ ಮೂಲಕ, ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪಗೆ ಶರಣಾಗಿದೆ.
ಕ್ಷೇತ್ರದ ಸಂಸದರಾಗಿದ್ದ ಬಿ.ಎಸ್.ವೈ.ರವರು, ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ನಾಲ್ಕೈದು ತಿಂಗಳ ಅಧಿಕಾರವದಿಯಿದ್ದುದು ಹಾಗೂ 2019 ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಹತ್ತಿರವಿದ್ದ ಕಾರಣದಿಂದ, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಶಿವಮೊಗ್ಗ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು ಅನುಮಾನವೆಂದು ಭಾವಿಸಿದ್ದವು. ಈ ಕಾರಣದಿಂದ ಉಪ ಚುನಾವಣೆಯ ಯಾವುದೇ ಪೂರ್ವಭಾವಿ ತಯಾರಿ ನಡೆಸಲು ಮುಂದಾಗಿರಲಿಲ್ಲ. ಸಾರ್ವತ್ರಿಕ ಚುನಾವಣೆಯತ್ತ ಚಿತ್ತ ಹರಿಸಿದ್ದವು.
ಆದರೆ ಕೇಂದ್ರ ಚುನಾವಣಾ ಆಯೋಗವು, ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಉಪ ಚುನಾವಣೆ ಘೋಷಿಸಿತ್ತು. ಆಗ ಕೂಡ ರಾಜಕೀಯ ರಂಗದಲ್ಲಿ ಹೇಳಿಕೊಳ್ಳುವಂತಹ ಉತ್ಸಾಹ ಕಂಡುಬರಲಿಲ್ಲ. ಬಿಜೆಪಿಯು ಬಿ.ವೈ.ರಾಘವೇಂದ್ರ ಕಣಕ್ಕಿಳಿಸುವ ಘೋಷಣೆ ಮಾಡಿತ್ತು. ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಶೂನ್ಯ ಸ್ಥಿತಿ ಕಂಡುಬಂದಿತ್ತು. ಬಿಜೆಪಿ ಎದುರು ಸಮರ್ಥ ಅಭ್ಯರ್ಥಿಯೇ ಇಲ್ಲದಂತಹ ಪರಿಸ್ಥಿತಿ ಆ ಪಕ್ಷಗಳಿಗೆ ಎದುರಾಗಿತ್ತು. ಇದರಿಂದ ಈ ಉಪ ಚುನಾವಣೆಯಲ್ಲಿ ಬಿಜೆಪಿ ನಿರಾಯಾಸವಾಗಿ ಜಯಿಸುವ ಲೆಕ್ಕಾಚಾರಗಳು ನಡೆಯುತ್ತಿದ್ದವು.
ತಂತ್ರಗಾರಿಕೆ: ಕಾಂಗ್ರೆಸ್ ಕಣಕ್ಕಿಳಿಸುವ ಅಭ್ಯರ್ಥಿಗೆ ಜೆಡಿಎಸ್ ಬೆಂಬಲಿಸುವ ನಿರ್ಧಾರ ಎರಡು ಪಕ್ಷಗಳಲ್ಲಾಗಿತ್ತು. ಆದರೆ ಕಾಂಗ್ರೆಸ್ ಪಾಳಯದಲ್ಲಿ ಸಮರ್ಥ ಹುರಿಯಾಳು ಸಿಗಲಿಲ್ಲ. ಈ ನಡುವೆ ಜೆಡಿಎಸ್ ಪಕ್ಷವು ಮಾಜಿ ಶಾಸಕಮಧು ಬಂಗಾರಪ್ಪರನ್ನು ಕಣಕ್ಕಿಳಿಸುವ ದಿಢೀರ್ ನಿರ್ಧಾರ ಪ್ರಕಟಿಸಿತ್ತು. ವಿದೇಶಿ ಯಾತ್ರೆಯಲ್ಲಿದ್ದ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡಿತ್ತು.
ಸ್ವತಃ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕರ ಮನವೊಲಿಸಿ, ಅವರ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಯಾವಾಗ ಮಧು ಅಭ್ಯರ್ಥಿಯಾಗುವುದು ಖಚಿತವಾಯಿತೋ ನೀರಸವಾಗಿದ್ದ ಶಿವಮೊಗ್ಗ ರಾಜಕೀಯ ಕಣ ಅಕ್ಷರಶಃ ರಂಗೇರಿತು. ರಾಷ್ಟ್ರ-ರಾಜ್ಯದ ಗಮನವನ್ನು ತನ್ನತ್ತ ಸೆಳೆಯಲಾರಂಭಿಸಿತು.
ಜೆಡಿಎಸ್ ಲೆಕ್ಕಾಚಾರ: ಸಾರ್ವತ್ರಿಕ ಲೋಕಸಭೆ ಚುನಾವಣೆಯೊಳಗೆ ಸಿಎಂ ಗದ್ದುಗೆಯೇರಲು ಬಿ.ಎಸ್.ಯಡಿಯೂರಪ್ಪ ಕಸರತ್ತು ನಡೆಸುತ್ತಿದ್ದಾರೆ. ಉಪ ಚುನಾವಣೆ ನಂತರ, 'ಸಮ್ಮಿಶ್ರ ಸರ್ಕಾರ'ದ ಪತನಕ್ಕೆ ಮೂಹೂರ್ತ ಫಿಕ್ಸ್ ಮಾಡಲು ತಯಾರಿ ನಡೆಸುತ್ತಿದ್ದ ಮಾತುಗಳು ಕೇಳಿಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ದೇವೇಗೌಡ ಹಾಗೂ ಕುಮಾರಸ್ವಾಮಿಯವರು, ಬಿ.ಎಸ್.ವೈ. ತವರೂರು ಶಿವಮೊಗ್ಗ ಕ್ಷೇತ್ರದತ್ತ ಗಮನಹರಿಸಲು ಮುಖ್ಯ ಕಾರಣವಾಗುವಂತಾಯಿತು.
ಬಿಜೆಪಿಯಿಂದ ಕಣಕ್ಕಿಳಿದಿರುವ ಬಿ.ವೈ.ರಾಘವೇಂದ್ರ ಎದುರು ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿದರೆ, ಬಿ.ಎಸ್.ವೈ. ಸ್ಪೀಡ್‍ಗೆ ಸುಲಭವಾಗಿ ಬ್ರೇಕ್ ಹಾಕಬಹುದು. ಸಮ್ಮಿಶ್ರ ಸರ್ಕಾರಕ್ಕೆ ಅವರಿಂದ ಎದುರಾಗಿರುವ ಗಂಡಾಂತರ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಅಪ್ಪ-ಮಗನದ್ದಾಗಿತ್ತು. ಅದರಂತೆ ಚುನಾವಣೆಗೆ ಸ್ಪರ್ಧಿಸಲು ಇಷ್ಟವಿಲ್ಲದಿದ್ದರೂ ಮಧು ಬಂಗಾರಪ್ಪ ಮನವೊಲಿಸಿ, ಕಾಂಗ್ರೆಸ್ ಬೆಂಬಲ ಪಡೆದು ಶಿವಮೊಗ್ಗ ಕ್ಷೇತ್ರದಲ್ಲಿ ಭಾರೀ ದೊಡ್ಡ ರಾಜಕೀಯ ದಾಳವನ್ನು ಹೆಚ್.ಡಿ.ಡಿ., ಹೆಚ್.ಡಿ.ಕೆ. ಉರುಳಿಸಿದ್ದರು.
ಬದಲಾದ ಗೇಮ್‍ಪ್ಲ್ಯಾನ್: ಜೆಡಿಎಸ್-ಕಾಂಗ್ರೆಸ್ ತಂತ್ರಗಾರಿಕೆ ಅರಿತ ಬಿ.ಎಸ್.ವೈ. ಪುತ್ರನ ಗೆಲುವಿಗಾಗಿ ತಾವು ಮಾಡಿಕೊಂಡಿದ್ದ ಗೇಮ್‍ಪ್ಲ್ಯಾನ್ ಬದಲಾಯಿಸಿದರು. ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದರು. ಸ್ವತಃ ತಾವೇ ಕ್ಷೇತ್ರದಾದ್ಯಂತ ಮೂರ್ನಾಲ್ಕು ಬಾರಿ ಬಿರುಸಿನ ಓಡಾಟ ನಡೆಸಿದರು. ಪುತ್ರನ ಪರ ಮತಯಾಚಿಸಿದರು. ಮತ್ತೊಂದೆಡೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಡ ಕ್ಷೇತ್ರದಾದ್ಯಂತ ಭಾರೀ ಓಡಾಟ ನಡೆಸಿತು. ಮೈತ್ರಿ ಪಕ್ಷದ ನಾಯಕರ ದಂಡೇ ಕ್ಷೇತ್ರದಲ್ಲಿಯೇ ಬೀಡುಬಿಟ್ಟು, ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಿತು. ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರೇ ಮೂರು ದಿನ ಕ್ಷೇತ್ರದಲ್ಲಿದ್ದು, ಕ್ಷೇತ್ರ ಸುತ್ತು ಹಾಕಿದ್ದರು.
ಜಯಕ್ಕಾಗಿ ಎರಡೂ ಕಡೆಯವರು ತಂತ್ರ-ಪ್ರತಿತಂತ್ರ ರೂಪಿಸಿದ್ದರು. ಜಾತಿಯಾಧಾರಿತ ಮತಬೇಟೆಯೂ ಬಿರುಸುಗೊಂಡಿತ್ತು. ಆರೋಪ-ಪ್ರತ್ಯಾರೋಪಗಳು ಮುಗಿಲುಮುಟ್ಟಿದ್ದವು. ಎರಡೂ ಕಡೆಯವರು ಹಣದ ಹೊಳೆಯೇ ಹರಿಸಿದ ಮಾತುಗಳು ಕೂಡ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಇದರಿಂದ ಶಿವಮೊಗ್ಗ ಕಣ ಕಾವೇರುವಂತೆ ಮಾಡಿತ್ತು.
ಜಿದ್ದಾಜಿದ್ದಿನ ಅಖಾಡ: ಕ್ಷೇತ್ರದಲ್ಲಿ ಬಿಜೆಪಿಗಿದ್ದ ತಳಮಟ್ಟದ ಕಾರ್ಯಕರ್ತರ ಪಡೆ, ಆ ಪಕ್ಷಕ್ಕೆ ಅಕ್ಷರಶಃ ವರವಾಗಿತ್ತು. ಆದರೆ ತಳಮಟ್ಟದ ಸಂಘಟನೆಯ ವೈಫಲ್ಯವೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಾಲಿಗೆ ಮುಳುವಾಗಿತ್ತು. ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿ ಎದುರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೊನೆಗೂ ಶಸ್ತ್ರತ್ಯಾಗ ಮಾಡಿದವು. ಒಟ್ಟಾರೆ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿ ಪುತ್ರನನ್ನು ಗೆಲುವಿನ ಮೆಟ್ಟಿಲು ಹತ್ತಿಸುವ ಮೂಲಕ ಬಿ.ಎಸ್.ವೈ. ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆಯೇ? ಇಲ್ಲವೇ? ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಹೆಚ್.ಡಿ.ಕೆ. ವಿಫಲ: ಬಿ.ಎಸ್.ವೈ. ಸಫಲ
ಶಿವಮೊಗ್ಗ ಕ್ಷೇತ್ರದ ಉಪ ಚುನಾವಣೆಯು ಹಾಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವಿನ ಕಾದಾಟವೆಂದೇ ಬಿಂಬಿತವಾಗಿತ್ತು. ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ಅದಿಕೃತ ಅಭ್ಯರ್ಥಿಯಾಗಿದ್ದರೂ, ಹಾಲಿ - ಮಾಜಿ ಸಿಎಂಗಳೇ ಅಭ್ಯರ್ಥಿಗಳ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕಿದ್ದರು. ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದರು. ತಮ್ಮದೆ ಆದ ತಂತ್ರ-ಪ್ರತಿತಂತ್ರ ರೂಪಿಸಿದ್ದರು. ಅಂತಿಮವಾಗಿ ಮಾಜಿ ಸಿಎಂ ಸಫಲವಾಗಿದ್ದು, ಹಾಲಿ ಸಿಎಂ ವಿಫಲವಾಗಿದ್ದಾರೆ.