'ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿ' ಮಲೆನಾಡಿಗೆ ಯಾಕೆ ಬೇಡ?

Update: 2018-11-11 04:32 GMT

ಈ ವರದಿಗಳಲ್ಲಿ ಮಲೆನಾಡಿನ ಜನರ ಜೀವನಕ್ಕೆ ಮಾರಕವಾದ ಅಂಶಗಳು ಹಲವಾರಿವೆ. ಗಣಿಗಾರಿಕೆಯನ್ನು ನಿಷೇಧ ಮಾಡಿ ಅಂತ ಹೇಳುತ್ತಾರೆ. ಗಣಿಗಾರಿಕೆಯಲ್ಲಿ ಜಂಬಿಟ್ಟಿಗೆ ಗಣಿಗಾರಿಕೆ, ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಕೂಡ ಸೇರಿದೆ. ವಾಣಿಜ್ಯ ಉದ್ದೇಶಗಳಿಗೆ ಇಂತಹ ಗಣಿಗಾರಿಕೆ ಮಾಡಿದರೆ ಪರಿಸರಕ್ಕೆ ಮಾರಕ ಅಂತ ಭಾವಿಸಿದರೂ ಇಲ್ಲಿನ ಜನ ಸಾಮಾನ್ಯರು ಮನೆ ಕಟ್ಟಲು ಇಲ್ಲವೇ ದುರಸ್ತಿ ಮಾಡಲು ಸಹಿತ ಕಲ್ಲು ಮರಳು ಇಟ್ಟಿಗೆ ತೆಗೆಯದಂತೆ ನಿರ್ಬಂಧ ಹೇರಲಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ರಸ್ತೆ, ಸೇತುವೆ, ಆಸ್ಪತ್ರೆ, ಶಾಲೆ, ವಿದ್ಯುತ್ ಇತ್ಯಾದಿ ಕಟ್ಟಲು ತಡೆ ಇಲ್ಲದಿದ್ದರೂ ಅವುಗಳ ನಿರ್ಮಾಣಕ್ಕೆ ಅನುಮತಿ ಪಡೆಯಲು ವಿಸ್ತೃತ ನಿಬಂಧನೆಗಳು ಇವೆ.

ಪಶ್ಚಿಮ ಘಟ್ಟ ಅಥವಾ ಮಲೆನಾಡು ಜಗತ್ತಿಗೆ ಜೀವ ವೈವಿಧ್ಯದ ಸಂಪತ್ತು ತುಂಬಿರುವ ಆಗಿದ್ದರೆ ಮಲೆನಾಡಿನ ಜನರಿಗೆ ಶಾಪವಾಗಿದೆ. ಘಟ್ಟ ಪ್ರದೇಶದ ಪರಿಸರ ಸಂಪತ್ತಿನ ಅರಿವು ಬ್ರಿಟಿಷರಿಗೆ ಆದಾಗ ಹಾಗೂ ಕಾಫಿ ಏಲಕ್ಕಿ ಚಹಾ, ಸಾಗುವಾನಿ, ಗಂಧ ಹಾಗೂ ಸಂಬಾರ ಪದಾರ್ಥಗಳ ಉತ್ಪಾದನೆ ಹೆಚ್ಚಳಕ್ಕೆ ಸೂಕ್ತ ವಾತಾವರಣ ಮಲೆನಾಡಿನಲ್ಲಿ ಇದೆ ಎಂದು ಗೊತ್ತಾದಾಗ ಮೊದಲ ಹಂತದ ದೌರ್ಜನ್ಯ ಅಲ್ಲಿನ ಜನರ ಮೇಲಾಯ್ತು. ತಮ್ಮ ಕಾಡು ಕೃಷಿ, ವಾಣಿಜ್ಯ ಕೃಷಿ ಹಾಗೂ ಬೇಟೆಗೆಂದು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಸಂರಕ್ಷಿತ ಪ್ರದೇಶ, ಮೀಸಲು ಅರಣ್ಯ ಎಂದು ಜನರ ಪ್ರವೇಶ ನಿಷೇಧವನ್ನು ಬ್ರಿಟಿಷರು ಮಾಡಿದರು. ಅರಣ್ಯ ಇಲಾಖೆ ಸ್ಥಾಪಿಸಿ, ಅರಣ್ಯ ಸಂಪತ್ತಿನ ಲೂಟಿ, ಸ್ಥಳೀಯರ ಶೋಷಣೆ ಶುರು ಮಾಡಿದರು. ಇದೆ ನೀತಿಯನ್ನು ಮುಂದುವರಿಸಿಕೊಂಡು ಬಂದ ಸ್ವತಂತ್ರ ಇಂಡಿಯಾ ಸರಕಾರಗಳು ಹೊಸತಾಗಿ ಭೂಮಿಯ ಸಮೀಕ್ಷೆ ಮಾಡದೆ ಸಂರಕ್ಷಿತ ಅರಣ್ಯ, ಕಂದಾಯ ಭೂಮಿ ಅಂತ ದಾಖಲೆ ಮುಂದುವರೆಸಿಕೊಂಡು ಬಂದವು. ಅಸಮರ್ಪಕ, ಅಪೂರ್ಣ ಭೂಮಿಯ ಸಮೀಕ್ಷೆ ಕಾರಣ ಹಲವಾರು ಕಡೆ ಅರಣ್ಯ ಭೂಮಿ ಎಂದು ಗುರುತಿಸಿದ ಪ್ರದೇಶದಲ್ಲಿ ಜನವಸತಿ, ಜಮೀನು, ಮನೆ ಇದ್ದರೂ ದಾಖಲೆ ಸರಿಪಡಿಸುವ ಗೋಜಿಗೆ ಸರಕಾರ ಹೋಗಲೇ ಇಲ್ಲ. 70ರ ದಶಕದ ನಂತರ ಇಂದಿರಾ ಗಾಂಧಿ ಸರಕಾರದಲ್ಲಿ ವಿವಿಧ ಪರಿಸರ ಸಂರಕ್ಷಣೆ ಕಾಯ್ದೆಗಳು ಬಂದು ಅರಣ್ಯ ಪ್ರದೇಶದಲ್ಲಿ ವಾಸವಿರುವ ಅಥವಾ ಮೀಸಲು ಅರಣ್ಯದ ಸುತ್ತಮುತ್ತ ಇರುವ ಜನರಿಗೆ ವಿವಿಧ ಸಮಸ್ಯೆಗಳು ಶುರುವಾದವು. ಜಗತ್ತು ವಿವೇಚನೆ ಇಲ್ಲದ, ಪರಿಸರಕ್ಕೆ ಸಂಪೂರ್ಣವಾಗಿ ಮಾರಕವಾದ ಅಭಿವೃದ್ಧಿ ಹಾದಿಯನ್ನು ತುಳಿದ ಪರಿಣಾಮ ಭೀಕರ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಸಿರುಮನೆ ಅನಿಲಗಳು ನಿಯಂತ್ರಣ ಮೀರಿ ವಾತಾವರಣಕ್ಕೆ ಬಿಡುಗಡೆ ಆಗಿ ಜಾಗತಿಕ ತಾಪಮಾನ ಹೆಚ್ಚಳವಾಗಿದ್ದು ಜಗತ್ತಿನ ನೆಮ್ಮದಿ ಕೆಡಿಸಿದೆ. ಜಾಗತಿಕ ಮಟ್ಟದಲ್ಲಿ ವನ್ಯಜೀವಿಗಳ ನಾಶ, ಪರಿಸರ ನಾಶ, ಜಾಗತಿಕ ತಾಪಮಾನದ ಹೆಚ್ಚಳ, ಹಸಿರುಮನೆ ಅನಿಲ ವಾತಾವರಣದಲ್ಲಿ ಮಿತಿಮೀರಿರುವುದರ ಕುರಿತ ಚರ್ಚೆಗಳು ನಡೆದು ಹಲವಾರು ಒಪ್ಪಂದಗಳನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮಾಡಿಕೊಂಡವು. ಈ ಒಪ್ಪಂದಗಳಿಗೆ ಸಹಿ ಹಾಕಿದ ದೇಶದಲ್ಲಿ ಪರಿಸರ ಸಂರಕ್ಷಣೆಗೆ ದೊಡ್ಡ ಪ್ರಮಾಣದ ಯೋಜನೆಗಳನ್ನು ತಯಾರು ಮಾಡಲಾಯಿತು. ಅಳಿವಿನಂಚಿನ ಪ್ರಾಣಿಗಳನ್ನು ಉಳಿಸಲು ವಿಶೇಷ ಯೋಜನೆಗಳು, ಉದಾಹರಣೆಗೆ ಹುಲಿ ಸಂರಕ್ಷಣೆ ಯೋಜನೆ, ಆನೆ, ಘೇಂಡಾ ಮೃಗ ಇತ್ಯಾದಿ, ಬ್ರಿಟಿಷರ ಕಾಲದಲ್ಲಿ ಮೀಸಲಿಟ್ಟ ಅರಣ್ಯ ಪ್ರದೇಶ ಹಾಗೂ ಇತರ ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಉದ್ಯಾನಗಳು, ಸ್ಯಾಂಕ್ಚೂರಿಗಳು ಇತ್ಯಾದಿ ಸ್ಥಾಪನೆ ಮಾಡಲಾಯಿತು. ಅಲ್ಲಿ ಜನವಸತಿ ಬಗ್ಗೆ ಯಾವುದೇ ಸಮೀಕ್ಷೆ ಮಾಡದೆಯೇ, ಜನರಿಗೆ ಯೋಜನೆಯ ಕುರಿತು ತಿಳುವಳಿಕೆ ಮೂಡಿಸುವ ಕೆಲಸ ಮಾಡದೆಯೇ, ಅವರು ಅಲ್ಲಿಂದ ಒಕ್ಕಲೇಳಲು ಸ್ವಯಂಪ್ರೇರಿತರಾಗಿ ಒಪ್ಪದಿದ್ದರೂ ಈ ಯೋಜನೆಗಳನ್ನು ಮಾಡಲಾಯಿತು.

ಒಂದು ಕಡೆ ಸಂರಕ್ಷಣೆ ಅಂತ ಯೋಜನೆ ಮಾಡುತ್ತಿದ್ದರೆ ಮತ್ತೊಂದು ಕಡೆ ಘಟ್ಟದಲ್ಲಿ ಇದ್ದ ಖನಿಜ ಸಂಪತ್ತನ್ನು ಕೂಡ ಅವ್ಯಾಹತವಾಗಿ ಲೂಟಿ ಮಾಡಲಾಯಿತು. ವಿದ್ಯುತ್ ಉತ್ಪಾದನೆ, ನೀರಾವರಿಗೆ ಅಣೆಕಟ್ಟು ಕಟ್ಟಿ ಸಾವಿರಾರು ಎಕರೆ ಅರಣ್ಯ ನಾಶ ಮಾಡಲಾಯಿತು. ಅರಣ್ಯ ನಾಶದ ಯೋಜನೆಗೆ ಪರ್ಯಾಯವಾಗಿ ಅರಣ್ಯ ಉಳಿಸುವ ಕೆಲಸ ಕೂಡ ನಡೆಯಿತು. ಇದಕ್ಕೆಲ್ಲಾ ದೊಡ್ಡ ಪ್ರಮಾಣದಲ್ಲಿ ಬಲಿಯಾಗಿದ್ದು ಅರಣ್ಯ ಪ್ರದೇಶದಲ್ಲಿ ವಾಸವಿದ್ದ ಆದಿವಾಸಿಗಳು, ಸಣ್ಣ ಪ್ರಮಾಣದ ರೈತರು. ಇಲ್ಲಿನ ಜನರ ಪರಿಸರದ ಜೊತೆ ಸಹಬಾಳ್ವೆ ನಡೆಸುವ ಜೀವನಪದ್ಧತಿ ಹೊಂದಿದವರಾಗಿದ್ದು ಅಗತ್ಯವಿಲ್ಲದೆಯೇ ಒಂದು ಗಿಡವನ್ನಾಗಲಿ ಕಡಿಯದೆ ಪ್ರಾಣಿಯನ್ನು ಸಾಯಿಸದೆ ಬದುಕುವವರು. ಆದರೆ ಸರಕಾರದ ಹೇರಿಕೆಯ ಸಂರಕ್ಷಣೆಯ ಯೋಜನೆಗಳು ಹಾಗೂ ಪರಿಸರಕ್ಕೆ ಮಾರಕವಾದ ಅಭಿವೃದ್ಧಿ ಯೋಜನೆಗಳಿಗೆ ಅವರನ್ನೇ ಬಲಿಪಶು ಮಾಡಲಾಯಿತು. ಪರಿಸರ ಸಂರಕ್ಷಣೆಯ ನೆಪದಲ್ಲಿ ಮಲೆನಾಡಿನ ಜನರನ್ನು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ದೂಡುವ ಹುನ್ನಾರವೇ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳು. ಮಲೆನಾಡಿನಲ್ಲಿ ಈಗ ಜನರ ವಾಸ ಹಾಗೂ ಸಣ್ಣ ಪ್ರಮಾಣದ ಕೃಷಿಗೆ ಉಳಿದಿರುವ ಜಾಗವೇ ಅತ್ಯಂತ ಕಡಿಮೆ, ಮಂಗ, ಹುಲಿ, ಆನೆ, ಕಾಳಿಂಗ ಇತ್ಯಾದಿ ಪ್ರಾಣಿಗಳ ಸಂರಕ್ಷಣೆ, ಮೀಸಲು ಅರಣ್ಯ, ಪ್ರಸ್ತಾವಿತ ಅರಣ್ಯ, ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ, ಔಷಧೀಯ ಸಸ್ಯಗಳ ಕೋರ್ ಪ್ರದೇಶ ಇತ್ಯಾದಿ ಹೆಸರಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶ ಬಹುತೇಕ ಜನರಹಿತವಾಗಿದೆ ಇಲ್ಲವೇ ಜನರಿಗೆ ಮೂಲ ಸೌಕರ್ಯ ಇಲ್ಲದೆ ಕಷ್ಟದಲ್ಲಿ ಬದುಕುವ ಪರಿಸ್ಥಿತಿ ಇದೆ. ಗಾಡ್ಗೀಳ್ ವರದಿ ಪಶ್ಚಿಮ ಘಟ್ಟದ 1,29, 037 ಲಕ್ಷ ಚದರ ಕಿಲೋಮೀಟರ್ ಪ್ರದೇಶ ವನ್ನು ಪರಿಸರ ಸೂಕ್ಷ್ಮ ಪ್ರದೇಶ ಅಂತ ಘೋಷಣೆ ಮಾಡಿದ್ದರೇ ಕಸ್ತೂರಿ ರಂಗನ್ ವರದಿ ರಾಜ್ಯ ಸರಕಾರದ ವಿರೋಧದ ಕಾರಣ ಪಶ್ಚಿಮ ಘಟ್ಟದ ಶೇ.37ರಷ್ಟು ಪ್ರದೇಶವನ್ನು (ಇದರಲ್ಲಿ ಶೇ. 10 ಈಗಾಗಲೇ ವಿವಿಧ ಯೋಜನೆಯಲ್ಲಿ ಈಗಾಗಲೇ ಪೂರ್ಣ ಸಂರಕ್ಷಣೆ ಮಾಡಲಾಗಿದೆ, ಶೇ.27 ಹೊಸತಾಗಿ ಪರಿಸರ ಸೂಕ್ಷ್ಮ ಪ್ರದೇಶ), ಇದರಲ್ಲಿ ಕರ್ನಾಟಕದ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶ ಸೇರುತ್ತದೆ. ಗಾಡ್ಗೀಳ್ ವರದಿ ಈ ಪ್ರದೇಶವನ್ನು 3 ಪರಿಸರ ಸೂಕ್ಷ್ಮ ವಲಯ ಅಂತ ಗುರುತಿಸಿದರೆ ಕಸ್ತೂರಿ ರಂಗನ್ ವರದಿ ಸಾಂಸ್ಕೃತಿಕ ಪ್ರದೇಶ ಹಾಗೂ ನೈಸರ್ಗಿಕ ಪ್ರದೇಶ (ಕಲ್ಚರಲ್ ಹಾಗೂ ನ್ಯಾಚುರಲ್ ಲ್ಯಾಂಡ್ ಸ್ಕೇಪ್) ಎಂದು 60,000 ಚದರ ಕಿ.ಮೀ. ಪ್ರದೇಶವನ್ನು ಗುರುತಿಸಿದೆ.

 ಪ್ರಪಂಚದ ಪರಿಸರ ಬಿಕ್ಕಟ್ಟಿಗೆ ಮುಖ್ಯ ಕಾರಣ ಸಿರಿವಂತ ದೇಶಗಳು ಹಾಗೂ ಸಿರಿವಂತರು. ಕೊಳ್ಳುಬಾಕ ಸಂಸ್ಕೃತಿಯ ಬಂಡವಾಳಶಾಹಿ ವ್ಯವಸ್ಥೆ ಪರಿಸರ ಸಂರಕ್ಷಣೆಯನ್ನು ನಿರ್ಲಕ್ಷ ಮಾಡಿದ್ದು ಮಾತ್ರವಲ್ಲದೆ ಸಂರಕ್ಷಣೆಯ ಹೊಣೆಯನ್ನು ನಾಶದಲ್ಲಿ ಯಾವುದೇ ಪಾಲಿಲ್ಲದ ಅಥವಾ ಅತ್ಯಂತ ಕಡಿಮೆ ಪಾಲಿರುವ ಕೇವಲ ಬಡ ದೇಶಗಳು ಹಾಗೂ ಅಲ್ಲಿನ ಬಡವರ ಮೇಲೆ ಹೇರಿದೆ. ಇಂತಹ ಪರಿಸರ ನಾಶ ಮಾಡುವ ಬಂಡವಾಳಿಗರು ಸರಕಾರೇತರ ಪರಿಸರ ಸಂರಕ್ಷಣೆ ಯ ಸಂಸ್ಥೆಗಳಿಗೆ ಯತೇಚ್ಛ ಹಣ ಕೊಟ್ಟು ನಮ್ಮಂತಹ ದೇಶಗಳಲ್ಲಿ ಸಂರಕ್ಷಣೆಯ ಕೆಲಸ ಮಾಡಿಸುತ್ತಾರೆ. ಈ ರೀತಿಯ ಪರಿಸರ ಸಂರಕ್ಷಣೆಯ ಮಾತು ಆಡುವ ಪರಿಸರವಾದಿಗಳು ಮನುಷ್ಯ ನೈಸರ್ಗಿಕ ಪರಿಸರದಲ್ಲಿ ಬದುಕಲು ಸಾಧ್ಯವೇ ಇಲ್ಲ, ಮನುಷ್ಯನೇ ಪರಿಸರದ ದೊಡ್ಡ ವಿನಾಶಕ ಅನ್ನುವ ಪಟ್ಟಣದ ವಾದವನ್ನು ಹೂಡಿ, ತಮ್ಮ ಪರಿಸರವಾದದಲ್ಲಿ ಅಲ್ಲಿ ಬದುಕುವ ಜನರನ್ನು ಪರಿಸರ ನಾಶಕರೆಂದು ಭಾವಿಸಿ ಅವರ ಬದುಕನ್ನು ನಿಯಂತ್ರಿಸುವ ವರದಿ ಕೊಟ್ಟಿದಾರೆ. ಈ ವರದಿಗಳಲ್ಲಿ ಮಲೆನಾಡಿನ ಜನರ ಜೀವನಕ್ಕೆ ಮಾರಕವಾದ ಅಂಶಗಳು ಹಲವಾರಿವೆ. ಗಣಿಗಾರಿಕೆಯನ್ನು ನಿಷೇಧ ಮಾಡಿ ಅಂತ ಹೇಳುತ್ತಾರೆ. ಗಣಿಗಾರಿಕೆಯಲ್ಲಿ ಜಂಬಿಟ್ಟಿಗೆ ಗಣಿಗಾರಿಕೆ, ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಕೂಡ ಸೇರಿದೆ. ವಾಣಿಜ್ಯ ಉದ್ದೇಶಗಳಿಗೆ ಇಂತಹ ಗಣಿಗಾರಿಕೆ ಮಾಡಿದರೆ ಪರಿಸರಕ್ಕೆ ಮಾರಕ ಅಂತ ಭಾವಿಸಿದರು, ಇಲ್ಲಿನ ಜನ ಸಾಮಾನ್ಯರು ಮನೆ ಕಟ್ಟಲು ಇಲ್ಲವೇ ದುರಸ್ತಿ ಮಾಡಲು ಸಹಿತ ಕಲ್ಲು ಮರಳು ಇಟ್ಟಿಗೆ ತೆಗೆಯದಂತೆ ನಿರ್ಬಂಧ ಹೇರಲಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ರಸ್ತೆ, ಸೇತುವೆ, ಆಸ್ಪತ್ರೆ, ಶಾಲೆ, ವಿದ್ಯುತ್ ಇತ್ಯಾದಿ ಕಟ್ಟಲು ತಡೆ ಇಲ್ಲದಿದ್ದರೂ ಅವುಗಳ ನಿರ್ಮಾಣಕ್ಕೆ ಅನುಮತಿ ಪಡೆಯಲು ವಿಸ್ತೃತ ನಿಬಂಧನೆಗಳು ಇವೆ.

20,000 ಚದರ ಮೀ. ಒಳಗಿನ ವಿಸ್ತೀರ್ಣದ ಕಟ್ಟಡ ಅಥವಾ ನಿರ್ಮಾಣದ ಯೋಜನೆ ಮಾತ್ರವೇ ಕೈಗೊಳ್ಳಬಹುದು ಎಂಬ ನಿರ್ಬಂಧ ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಅದರ ಸುತ್ತಲಿನ 10 ಕಿ.ಮೀ. ವ್ಯಾಪ್ತಿಗೂ ಅನ್ವಯ ಆಗುತ್ತದೆ. ಮುಖ್ಯವಾಗಿ ಕೃಷಿ ಕ್ಷೇತ್ರದ ಮೇಲೆ ಈ ವರದಿಗಳು ದೊಡ್ಡ ಪ್ರಹಾರ ಮಾಡಿವೆ. ಅತಿಯಾಗಿ ಮಳೆ ಆಗುವ ಮಲೆನಾಡಿನ ಪ್ರದೇಶದಲ್ಲಿ ಕೀಟನಾಶಕ, ಕಳೆನಾಶಕ, ಶಿಲೀಂದ್ರನಾಶಕ, ರಾಸಾಯನಿಕ ಗೊಬ್ಬರ ಕನಿಷ್ಠ ಇಳುವರಿ ಪಡೆಯಲು ಅತ್ಯಗತ್ಯ. ವರದಿಗಳು ಸಾವಯವ ಕೃಷಿಗೆ ಪ್ರಾಮುಖ್ಯತೆ ಕೊಟ್ಟು ಕೀಟನಾಶಕ, ಕಳೆನಾಶಕ ಹಾಗೂ ರಾಸಾಯನಿಕ ಗೊಬ್ಬರದ ಬಳಕೆ ಮೇಲೆ ನಿಯಂತ್ರಣ/ ನಿಷೇಧ ಹೇರಿವೆ. ಶೇ.30 ಹೆಚ್ಚು ಇಳಿಜಾರು ಇರುವ ಪ್ರದೇಶದಲ್ಲಿ ಏಕವಾರ್ಷಿಕ ಬೆಳೆ ಬೆಳೆಯದಂತೆ ಹೇಳುತ್ತದೆ. ಗುಡ್ಡಗಾಡು ಪ್ರದೇಶದಲ್ಲಿ ಹಲವಾರು ಕಡೆ ಶೇ.30 ಇಳಿಜಾರಿಗಿಂತ ಹೆಚ್ಚಿನ ಇಳಿಜಾರಿನಲ್ಲೂ ಬೆಳೆ ಬೆಳೆಯುವ ಅನಿವಾರ್ಯತೆ ಇರುತ್ತದೆ ಎಂಬ ಅಂಶವನ್ನು ಕಡೆಗಣಿಸಲಾಗಿದೆ. ಜೈವಿಕ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿರುವ ಸಸ್ಯ ಹಾಗೂ ಪ್ರಾಣಿಗಳನ್ನು ಈ ಪ್ರದೇಶದಲ್ಲಿ ಬೆಳೆಸದಂತೆ, ಪ್ಲಾಸ್ಟಿಕ್ ಪೂರ್ಣ ನಿಷೇಧ ಮಾಡುವಂತೆ ಕೂಡ ಹೇಳಲಾಗಿದೆ. ಪ್ಲಾಂಟೇಷನ್ ಕೃಷಿ ಅಡಿಕೆ, ಕಾಫಿ, ಚಹಾ, ಏಲಕ್ಕಿ ಇತ್ಯಾದಿ ಕೃಷಿ ಮಣ್ಣಿನ ಸವಕಳಿ ಹೆಚ್ಚಿಸುತ್ತದೆ, ಹೆಚ್ಚಿನ ರಾಸಾಯನಿಕ ಬೇಡುತ್ತದೆ ಎಂದು ವರದಿಗಳು ಅಪಸ್ವರ ಎತ್ತಿವೆ. ಕೃಷಿ ಭೂಮಿಯನ್ನು ಅರಣ್ಯ ಕೃಷಿಗೆ ಮಾತ್ರವೇ ಬದಲಾವಣೆ ಮಾಡಬಹುದು ಕೃಷಿಯೇತರ ಉದ್ದೇಶಕ್ಕೆ ಮಾರ್ಪಾಟು ಮಾಡುವಂತಿಲ್ಲ ಎಂದು ವರದಿಗಳು ಹೇಳುತ್ತವೆ, ಇದು ಸ್ಥಳೀಯ ವಸತಿ ಪ್ರದೇಶದ ವಿಸ್ತರಣೆಗೆ ತೆಡೆಯೊಡ್ಡುತ್ತದೆ. ಅಕ್ಕಪಕ್ಕದ ಗ್ರಾಮ ಗ್ರಾಮಗಳಿಗೆ ತಾಲೂಕು ತಾಲೂಕುಗಳಿಗೆ ಬೇರೆ ಬೇರೆ ನಿರ್ಬಂಧ ಬೇರೆ ಬೇರೆ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಕಾರಣ ಇದೆ, ಸರಕಾರಿ ಭೂಮಿಯನ್ನು ಸಾರ್ವಜನಿಕ ಬಳಕೆಗೆ, ಭೂಮಿ ಮನೆ ರಹಿತರಿಗೆ ಕೊಡಲು ನಿರ್ಬಂಧ ಸಹಿತ ಇದೆ. ಹೀಗೆ ಇಲ್ಲಿನ ಜನರ ಸರಳ ಬದುಕನ್ನು ಕೂಡ ದೊಡ್ಡ ಮಟ್ಟದಲ್ಲಿ ಈ ವರದಿಗಳು ಕೆಟ್ಟ ಪರಿಣಾಮ ಬೀರುವುದು. ಪರಿಸರ ಸೂಕ್ಷ್ಮ ಪ್ರದೇಶ 1ರಲ್ಲಿ ಗಾಡ್ಗೀಳ್ ವರದಿ ನಿರ್ಮಾಣ ಚಟುವಟಿಕೆಯನ್ನು ನಿಷೇಧ ಮಾಡಿತ್ತು, ಉಳಿದ ಪ್ರದೇಶದಲ್ಲಿ ಪರಿಸರಕ್ಕೆ ಪೂರಕವಾದ ಮನೆ ನಿರ್ಮಾಣ ಮಾಡಬೇಕು ಎಂದು ಹೇಳಿತ್ತು. ಇದಕ್ಕೆ ಬೇಕಾದ ತಂತ್ರಜ್ಞಾನ, ಅದಕ್ಕೆ ತಗಲುವ ಖರ್ಚು ವೆಚ್ಚ ಅದನ್ನು ಯಾರು ಕೊಡಬೇಕು ಎಂದು ಸ್ಪಷ್ಟತೆ ಇಲ್ಲ. ಈ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸಬೇಕು ಅಂತ ವರದಿಗಳು ಹೇಳುತ್ತವೆ. ಪ್ರವಾಸೋದ್ಯಮದಿಂದ ಸ್ಥಳೀಯ ಜನರ ಮೇಲೆ ಆಗುವ ಪರಿಣಾಮವನ್ನು ಇದು ಗಣನೆಗೆ ತೆಗೆದುಕೊಂಡಿಲ್ಲ, ಈಗಾಗಲೇ ಪ್ರವಾಸೋದ್ಯಮದಿಂದ ಸ್ಥಳೀಯರ ಮೇಲೆ ಆಗುತ್ತಿರುವ ತೊಂದರೆ ಬಗ್ಗೆ ಸಮಿತಿಗಳು ಗಮನ ಹರಿಸಿಲ್ಲ. ಪ್ರವಾಸೋದ್ಯಮಕ್ಕೆ ಮಲೆನಾಡನ್ನು ತೆರೆದಿಟ್ಟರೆ ಸ್ಥಳೀಯರು ಕೂಡ ಪ್ರವಾಸಿಗರಂತೆ ಹಣ ಕೊಟ್ಟು ಇಲ್ಲಿ ಓಡಾಡುವ ಪರಿಸ್ಥಿತಿ ಬರಬಹುದು ಇಲ್ಲವೇ ಪ್ರವಾಸಿಗರನ್ನು ನೋಡಿಕೊಳ್ಳುವ ಕೆಲಸಗಾರರಂತೆ ಬದಲಾಗಬಹುದು.

ಸ್ಥಳೀಯರ ಸಂಪರ್ಕ ಮಾಡದೆ, ಸಂವಾದ ನಡೆಸದೆ, ವರದಿಯ ಹಿನ್ನೆಲೆ ಅಗತ್ಯದ ಬಗ್ಗೆ ಅರಿವು ಮೂಡಿಸದೇ ಯಾರದ್ದೋ ಹಿತಾಸಕ್ತಿಗೆ ಸ್ಥಳೀಯರನ್ನು ಮೂಲೆಗುಂಪು ಮಾಡಿ ಎಲ್ಲಾ ಪರಿಸರ ಸಮಸ್ಯೆಗೂ ಅವರೇ ಕಾರಣ ಎಂಬಂತೆ ಬಿಂಬಿಸಿ ಈ ವರದಿ ಕೊಡಲಾಗಿದೆ. ಮಲೆನಾಡಿನ ಜನ ಮಲೆನಾಡಿನಲ್ಲಿ ಬದುಕಿರುವುದೇ ಅಪರಾಧ, ಇಲ್ಲೆ ಬದುಕು ಮುಂದುವರಿಸಬೇಕು ಅಂತ ಇದ್ದರೆ ನಮ್ಮ ನಿರ್ಬಂಧಗಳನ್ನು ಒಪ್ಪಿಕೊಂಡು ಮಾತ್ರವೇ ಎಂಬ ದಬ್ಬಾಳಿಕೆಯ ದನಿ ಈ ವರದಿಗಳಲ್ಲಿ ಇದೆ. ವರದಿಯಲ್ಲಿನ ಹಲವಾರು ಅಂಶಗಳು ಮೇಲ್ನೋಟಕ್ಕೆ ಒಳ್ಳೆಯವು ಪರಿಸರಕ್ಕೆ ಜನರಿಗೆ ಪೂರಕ ಅಂತ ಅನ್ನಿಸಿದರೂ ಭವಿಷ್ಯದಲ್ಲಿ ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯ ಇಲ್ಲ. ಪರಿಸರ ನಾಶ ಮಾಡುವ ಪಟ್ಟಣಗಳು, ದೊಡ್ಡ ಕಂಪೆನಿಗಳು ತಮ್ಮ ಸಂಪತ್ತಿನ ಲೂಟಿ ಹಾಗೂ ಪರಿಸರ ನಾಶ ಮುಂದುವರಿಸಲು ನಾವು ತಪ್ಪು ಕಾಣಿಕೆ ಕೊಡುವಂತೆ ಈ ವರದಿಗಳು ಬಂದಿವೆ. ಪಟ್ಟಣಗಳಿಗೆ, ಕಂಪೆನಿಗಳಿಗೆ ಮಲೆನಾಡಿನ ಜನ ವರದಿ ಕೊಟ್ಟರೇ ಅದನ್ನು ಅಲ್ಲಿನ ಜನ ಒಪ್ಪುವರೇ?

ಕೋಟ್ಯಂತರ ಜನರ ಜೀವನಕ್ಕೆ ಧಕ್ಕೆ ಬರುವ ವರದಿಯನ್ನು ಅನುಷ್ಠಾನ ಮಾಡುತ್ತೇವೆ ಅಂತ ಕೇಂದ್ರ ಸರಕಾರ ಒಪ್ಪಿಕೊಂಡಿದೆ, ಹಾಗೂ ಅದನ್ನು ಹಸಿರು ಪೀಠದ ಆದೇಶದ ಅನ್ವಯ 6 ತಿಂಗಳಿನಲ್ಲಿ ಜಾರಿಗೆ ತರಲು ಕರಡನ್ನು ಸಾರ್ವಜನಿಕರ ಆಕ್ಷೇಪಣೆಗೆ ಬಿಟ್ಟಿದೆ. ಈ ವರದಿಗಳಿಗೆ ಹಿಂದಿನಿಂದಲೂ ಜನರ ವಿರೋಧ ಇದ್ದರೂ ಸರಕಾರವಾಗಲಿ ನ್ಯಾಯಾಲಯವಾಗಲಿ ಪರಿಗಣನೆಗೆ ತೆಗೆದುಕೊಂಡೇ ಇಲ್ಲ. ಬದಲಾಗಿ ಇದರ ಜಾರಿಗೆ ವ್ಯವಸ್ಥಿತವಾಗಿ ಪ್ರಯತ್ನ ಮಾಡುತ್ತಿರುವುದು ಪರಿಸರ ನಾಶ ಮಾಡುವ ದೇಶ ವಿದೇಶದ ಬಂಡವಾಳಶಾಹಿಗಳ ದೇಣಿಗೆಯ ಪರಿಸರವಾದಿಗಳ ಶಕ್ತಿಯನ್ನು ಪ್ರಜಾತಂತ್ರದ ಅವಮಾನವನ್ನು ತೋರಿಸುತ್ತದೆ. ಕರ್ನಾಟಕ ಸರಕಾರ ಬೇರೆ ಕಾರಣದಿಂದ ವರದಿಗೆ ಮಾಡಿರುವ ವಿರೋಧವನ್ನು ಸಹಿತ ಕೇಂದ್ರ ಹಾಗೂ ನ್ಯಾಯಾಲಯ ಪರಿಗಣಿಸದೆ ಒಕ್ಕೂಟ ವ್ಯವಸ್ತೆಯ ಸಮಸ್ಯೆಯನ್ನು ಕೂಡ ತೋರಿಸುತ್ತದೆ.

ದೇಶದ ಮತ್ಯಾವ ರೈತರಿಗೂ ಇರದ ನಿರ್ಬಂಧ ಮಲೆನಾಡಿನ ರೈತರಿಗೆ, ದೇಶದ ಮತ್ಯಾವ ಜನವಸತಿ ಪ್ರದೇಶಕ್ಕೂ ಇರದ ನಿರ್ಬಂಧದ ವರದಿ ಮಲೆನಾಡಿಗೆ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂಬುದು ಮಲೆನಾಡಿನ ಜನರ ಭಾವನೆ. ಅರಣ್ಯ ಸಂರಕ್ಷಣೆಯ ಯೋಜನೆಯಿಂದ ಕಾಡು ಪ್ರದೇಶದಲ್ಲಿ ವಾಸ ಮಾಡುವುದು ಕೃಷಿ ಮಾಡುವುದು ದುಸ್ತರವಾಗಿದೆ, ಹಾಗಿರುವಾಗ ನಿರ್ಬಂಧಗಳನ್ನು ಹೆಚ್ಚು ಹಾಗೂ ಕಠಿಣ ಮಾಡುವ ವರದಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆಗೆ ಈಗಾಗಲೇ ಕಾನೂನುಗಳು ಇದೆ, ಸಂರಕ್ಷಣೆ ಯೋಜನೆಗಳು ಇವೆ. ಅದನ್ನು ಸರಕಾರ ಅನುಷ್ಟಾನಕ್ಕೆ ತಂದು, ಸ್ಥಳೀಯರ ಜೀವನಕ್ಕೆ ಯಾವುದೇ ತೊಂದರೆ ಕೊಡದೆ ನಿರ್ಬಂಧ ಹಾಕದೆ ದೊಡ್ಡ ಮಟ್ಟದ ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ, ಜಲವಿದ್ಯುತ್ ಸ್ಥಾವರ, ಅರಣ್ಯ ಇಲಾಖೆ ನೆಡುತೋಪುಗಳಿಗೆ ನಿಷೇಧ ಹಾಕಿ ಪರಿಸರದ ನಾಶ ತಡೆಯುವ ಅವಕಾಶ ಇದೆ. ಹಾಗಾಗಿ ಮಲೆನಾಡಿನ ಜನರು, ಅವರ ಪರಿಸರದೊಂದಿಗೆ ಸಂಬಂಧವನ್ನು ಗುರುತಿಸಿ ಪ್ರೋತ್ಸಾಹಿಸುವ ಜನಪರ ಪರಿಸರವಾದದ ಅಗತ್ಯ ಇದೆ ಹಾಗೂ ಏನೇ ನಿರ್ಬಂಧ ಅಗತ್ಯ ಅಂತ ಹೇಳಿದರೂಅದು ಬೇಕಾಗಿರುವುದು ಪಟ್ಟಣಗಳಿಗೆ ಹಾಗೂ ಪರಿಸರ ನಾಶ ಮಾಡುವ ದೊಡ್ಡ ಯೋಜನೆಗಳಿಗೇ ಹೊರತು ಮಲೆನಾಡಿನ ಜನರಿಗಲ್ಲ.

Writer - ಕೃಷಿಕ್ .ಎ.ವಿ

contributor

Editor - ಕೃಷಿಕ್ .ಎ.ವಿ

contributor

Similar News