ಯಕ್ಷಗಾನ ಕಲಾಕೌಸ್ತುಭ ಕೆರೆಮನೆ ಶಂಭುಹೆಗಡೆ
ವ್ಯಕ್ತಿ ತಾನು ಮಾಡಿರಬಹುದಾದ, ಕೆಲಸಗಳ ಯಶಸ್ಸಿನ ಗುಂಗಿನಲ್ಲಿಯೆ ಇರಬಾರದು. ನಿರಂತರವಾಗಿ ಹೊಸ ಸಾಧ್ಯತೆಯ ಎಚ್ಚರದಲ್ಲಿರಬೇಕು. ಮೊದಲಿನದರ ವಿಷಯದಲ್ಲಿರುವ ಅತೃಪ್ತಿ ಹೊಸದರ ಅನ್ವೇಷಣೆಗೆ ಕಾರಣವಾಗಬೇಕು ಎಂಬ ತತ್ತ್ವವನ್ನು ಬಾಚಿ ತಬ್ಬಿಕೊಂಡು, ಸದಾ ಹೊಸತನಕ್ಕೆ ತುಡಿಯುತ್ತ, ಆಡಿದ ಮಾತಿನ ಸಿಂಧುತ್ವವನ್ನು ಪ್ರಶ್ನಿಸಿಕೊಳ್ಳುವ ಕೋಮಲ ಹೃದಯಿ, ಭಾವನಾಜೀವಿ, ರಾಷ್ಟ್ರಪ್ರಶಸ್ತಿ ವಿಜೇತ ಮಹಾನ್ ಕಲಾವಿದ ಶ್ರೀಕೆರೆಮನೆ ಶಂಭು ಹೆಗಡೆ ಕನ್ನಡ ನಾಡು ಕಂಡ ವಿರಳಾತಿವಿರಳ ಯಕ್ಷಗಾನ ಕಲಾವಿದರಲ್ಲಿ ಒಬ್ಬರು.
ಪ್ರಜ್ಞಾವಂತ ರಂಗನಟ ಮತ್ತು ಸಂಘಟಕ ಕೆರೆಮನೆ ಶಂಭು ಹೆಗಡೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶ್ರೀಕೆರೆಮನೆ ಶಿವರಾಮ ಹೆಗಡೆಯವರ ಹಿರಿಯ ಮಗ. 1938ರಲ್ಲಿ ಜನಿಸಿದ ಶಂಭು ಹೆಗಡೆಯವರ ತಾಯಿ ಶ್ರೀಮತಿ ಮೂಕಾಂಬಿಕೆ. ಯಕ್ಷಗಾನ ಕಲೆ ಶ್ರೀಯುತರಿಗೆ ವಾಂಶಿಕ ಪಾರಂಪರ್ಯವಾಗಿ ಬಂದದ್ದು. ತಂದೆ ಶಿವರಾಮ ಹೆಗಡೆ, ಅಜ್ಜ ಶಂಭು ಹೆಗಡೆ, ಮುತ್ತಜ್ಜ ರಾಮಹೆಗಡೆ ಮರು ಮುತ್ತಜ್ಜ ನಾರ್ಣಪ್ಪ ಹೆಗಡೆ ಈ ನಾಲ್ಕು ತಲೆಮಾರುಗಳಿಂದ ಯಕ್ಷಗಾನ ಕೆರೆಮನೆಯ ದತ್ತಕ ಆಸ್ತಿಯಾಗಿ ಒದಗಿಬಂದಿದೆ. ಕಲಾತ್ಮಕ ಅಭಿವ್ಯಕ್ತಿಯ ಪ್ರಯತ್ನ ನಡೆದಿರುವುದು ಈ ವಂಶಸ್ಥರಲ್ಲಿ ಎದ್ದುಕಾಣುತ್ತದೆ. ಕೆರೆಮನೆ ಶಂಭು ಹೆಗಡೆಯವರ ಅಜ್ಜನ ಹೆಸರೂ ಶಂಭು ಹೆಗಡೆ. ಅವರಿಗೆ ಯಕ್ಷಗಾನದ ರಾಗ ವಿಶೇಷಗಳು ತಿಳಿದಿದ್ದವು. ತಮ್ಮ ವಯಸ್ಸಿಗೆ ಬಂದ ಹೆಣ್ಣು ಮಗಳೊಬ್ಬಳ ಸಾವಿನಿಂದ ಜರ್ಜರಿತರಾಗಿ ರಚಿಸಿದ ಶ್ರೀರಾಗರಚನೆಯ ತುಣುಕನ್ನು ಇಲ್ಲಿ ನೋಡಬಹುದು.
ರತುನ ಪೋದುದು ನನ್ನ ರತುನ....
ಮಿನುಗುವ ರತುನವು ವನಿತಯ ಕರದೊಳು
ಘನತೇಜದಿಂದಿರೆ ಇನಜನೊಯ್ದನೆ ಆಹಾ! ಪಲ್ಲವಿ
ಹಸಿದು ಬಂದರೆ ಮನೆಗೆ ಶಶಿಯಂತೆ ಬೆಳಗುತ್ತ
ಕುಶಲದಿ ಮೋಹದಿ ತೃಷೆಯ ಸಂತೈಸುವ ರತುನ ಪೋದುದು ಎನ್ನ ರತುನ ಪೋದುದು....
ಶಿವರಾಮ ಹೆಗಡೆ ಪ್ರಾದೇಶಿಕ ರಂಗಭೂಮಿ ಯಕ್ಷಗಾನದ ಪಡುವಲಪಾಯದ ಬಡಗುತಿಟ್ಟಿನ ಅತ್ಯಂತ ಶ್ರೇಷ್ಠಾತಿಶ್ರೇಷ್ಠ ಕಲಾವಿದರಾಗಿ, ಯಕ್ಷಗಾನದ ವೃತ್ತಿಪರ ಸಂಘಟನೆಯ ಆದ್ಯ ಪ್ರವರ್ತಕರಾಗಿ, ಪ್ರಯೋಗಶೀಲ ನಿರ್ದೇಶಕರಾಗಿ, ಸುಮಾರು ಆರು ದಶಕಗಳ ಕಾಲ ಯಕ್ಷಗಾನ ರಂಗಭೂಮಿಯ ಶ್ರೀಮಂತ ಅನುಭವದಿಂದ ಅನೇಕ ಬಗೆಯ ಪ್ರಶಸ್ತಿ ಸನ್ಮಾನ-ಪುರಸ್ಕಾರಗಳನ್ನು ಪಡೆದ ಅಪರೂಪದ ಪ್ರತಿಭಾನ್ವಿತರಲ್ಲಿ ಒಬ್ಬರಾಗಿ ಕಾಣಿಸಿಕೊಂಡರೂ, ತಮ್ಮ ಮಗ ಶಂಭುಹೆಗಡೆ ತಮ್ಮಂತೆ ಆಗಬಾರದೆಂದು ಆಶಿಸಿದರು. ಆ ಕಾರಣದಿಂದ ಮಗನನ್ನು ಓದಿಸಿದರು. ಎಸೆಸೆಲ್ಸಿ ಪಾಸು ಮಾಡಿದ ಶಂಭುಹೆಗಡೆ ಪ್ರಾಥಮಿಕ ಶಾಲಾ ಮಾಸ್ತರು ಆದರು. ಜೊತೆಗೆ ಪೊಲೀಸ್ ಪಟೇಲಿಕೆಯೂ ಹೆಗಲೇರಿತು. ಇವು ಯಾವುವೂ ಕೆರೆಮನೆ ಶಂಭುಹೆಗಡೆಯವರ ಆಕರ್ಷಕ ವೃತ್ತಿಯಾಗಲಿಲ್ಲ. ತಂದೆಯವರ ಕಲಾಪ್ರೇಮದ ದಿವ್ಯ ಸೊಡರಿನ ಕುಡಿಯ ಕಿಟ್ಟವಾದರೂ ಆಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿದರು. ಮುಂದೆ ತಮ್ಮನ್ನೇ ತಾವು ಯಕ್ಷಗಾನ ಕಲೆಗೆ ಅರ್ಪಿಸಿಕೊಂಡರು. ಇದು ಅವರ ಜೀವನದ ಒಂದು ಮಹತ್ವದ ತಿರುವು ಎಂದೇ ಹೇಳಬೇಕು.
ಶಂಭು ಹೆಗಡೆಯವರ ಕಲಾ ಪ್ರತಿಭೆ ರೂಪುಗೊಳ್ಳಲು ಅವರ ಕೌಟುಂಬಿಕ ಪರಿಸರದ ಜೊತೆಗೆ ವಂಶಪಾರಂಪರ್ಯವಾಗಿ ಬಂದ ಕಲೆಗಾರಿಕೆ ಪ್ರಮುಖ ಕಾರಣವಾಯಿತು. ತಂದೆ ಕಡೆಯಿಂದ ನಾಲ್ಕಾರು ತಲೆಮಾರಿನ ಕಲಾಪ್ರತಿಭೆಗಳು, ತಾಯಿ ಕಡೆಯಿಂದ ಒಂದೆರಡು ತಲೆಮಾರಿನ ಕಲಾ ಸಂಪನ್ನರು ! ಶೈಶವ ಹಾಗೂ ಬಾಲ್ಯದ ಕೌಟುಂಬಿಕ ವಾತಾವರಣ ಶಂಭುಹೆಗಡೆಯವರಲ್ಲಿ ಸೃಜನಶೀಲ ಮನೋಧರ್ಮವನ್ನು ಬೆಳೆಸಿತು. ಆನುವಂಶಿಕವಾದ ಉಜ್ವಲ ಪರಂಪರೆ, ಒಡನಾಟ, ಮಾರ್ಗದರ್ಶನ ಶಂಭುಹೆಗಡೆಯವರಿಗೆ ದೊರೆತದ್ದು ಒಂದು ವರದಾನ.
ಸರಕಾರಿ ಉದ್ಯೋಗವನ್ನು ಬಿಟ್ಟು ಬಂದ ಮಗನ ಬಗ್ಗೆ ಶಿವರಾಮ ಹೆಗಡೆಯವರಿಗೆ ತಿರಸ್ಕಾರ ಭಾವವಿದ್ದರೂ ತೋರಗೊಡದೆ ಯಕ್ಷಗಾನದ ಪಾತ್ರಗಳಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ಮಹಾಬಲ ಹೆಗಡೆಯವರ ಜೊತೆ ಸಲಿಗೆಯಿಂದಿದ್ದ ಶಂಭುಹೆಗಡೆಯವರು ಹೆಜ್ಜೆ ಹಾಕುವುದನ್ನು ಕಲಿತರು. ತಮ್ಮ ಗಜಾನನ ಹೆಗಡೆ ಜೊತೆಗೂಡಿ ಹಾಸ್ಯ ಪಾತ್ರಗಳನ್ನು ಮಾಡಿದರು. ಯಕ್ಷಗಾನದ ರಂಗಸಂಸ್ಕಾರ ಸಿಗುತ್ತಿದ್ದ ಹೊತ್ತಿಗೆ ಯಕ್ಷಗಾನದ ರೂಢಮೂಲದ ಆವರಣದಿಂದ ದೂರದಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ಸಂಪೂರ್ಣವಾಗಿ ಬೇರೆಯಾದ ವಲಯದಲ್ಲಿ ಕೋರಿಯೋಗ್ರಫಿ ಶಿಕ್ಷಣದ ಅವಕಾಶ ಸಿಕ್ಕಿದ್ದು ಶಂಭುಹೆಗಡೆಯವರ ಜೀವನದಲ್ಲಿ ಮತ್ತೊಂದು ತಿರುವು (1966). ಸ್ವತಃ ಕಲಾವಿದರೂ ಕಲಾಸಂಘಟಕರೂ ಆದ ಪ್ರಸಿದ್ಧ ಕಥಕ್ ಅಭಿನೇತ್ರಿ ಶ್ರೀಮತಿ ಮಾಯಾರಾವ್ ಅವರ ಶಿಷ್ಯರಾಗಿ ಕೋರಿಯೋಗ್ರಫಿ ಎಂಬ ಅತ್ಯಾಧುನಿಕ ರಂಗಶಿಕ್ಷಣವನ್ನು ಪಡೆದರು. ....ಇದರಿಂದ ವಂಶಪಾರಂಪರ್ಯವಾಗಿ ಬಂದ ಯಕ್ಷಗಾನ ಕಲೆಯ ಅಭಿವ್ಯಕ್ತಿಯಲ್ಲಿ ಬದಲಾವಣೆ ಉಂಟಾಯಿತು. .....ತಾಳ, ಲಯಬದ್ಧವಾದ ಇವರ ನರ್ತನ ಸಂಪ್ರದಾಯಕ್ಕೆ ಚ್ಯುತಿಬರದೆ ಒಂದು ರೀತಿಯ ಹೊಸತನವನ್ನು ಬಿಂಬಿಸುತ್ತಿವೆ. ಕುಣಿದರೆ ಮಿಂಚಿನಂತೆ, ಮಾತನಾಡಿದರೆ ಮುತ್ತು ಸುರಿದಂತೆ, ನಟಿಸಿದರೆ ಭಾವವೇ ಅಭಿವ್ಯಕ್ತಿಗೊಂಡಂತೆ ಸಿದ್ಧಿ ಪಡೆದ ಈ ಸುಸಂಸ್ಕೃತ ಕಲಾವಿದ ಯಕ್ಷಗಾನದಲ್ಲಿ ತನ್ನದೇ ಕೆಲವು ಪ್ರಗತಿಶೀಲ ವಿಚಾರಗಳನ್ನಿಟ್ಟುಕೊಂಡಿದ್ದಾರೆ ಎಂದು ಅಂದಿನ ಒಂದು ಪತ್ರಿಕೆ ದಾಖಲಿಸಿತು. ಕೌಟುಂಬಿಕ ಪರಿಸ್ಥಿತಿಯ ಒತ್ತಡದಿಂದಾಗಿ, ತಂದೆಯನ್ನು ಅವಲಂಬಿಸಿರುವುದು ನೈತಿಕವಾಗಿ ಸರಿಯಿಲ್ಲದಿದ್ದರಿಂದ ಶಂಭು ಹೆಗಡೆಯವರು ವೃತ್ತಿಮೇಳ ಸೇರಿ ತಿರುಗಾಟಕ್ಕೆ ತೊಡಗಿದರು. ತಮ್ಮ ಪೂಜ್ಯ ತಂದೆಯವರಾದ ಶಿವರಾಮ ಹೆಗಡೆಯವರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಮೊದಲ ವೇಷ ಮಾಡಿ, ಇಪ್ಪತ್ತಾರನೇ ವಯಸ್ಸಿಗೆ ತಮ್ಮದೇ ಆದ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದರು (1934). ಮೇಳ ಸ್ಥಾಪನೆಯಾದ ಸುಮಾರು ನಾಲ್ಕು ವರ್ಷಗಳ ನಂತರ (1938) ಶಂಭು ಹೆಗಡೆ ಜನಿಸಿದರು. ಬಯಲಾಟದ ಮೇಳವಾಗಿ ಆರಂಭಗೊಂಡು, ಮುಂದೆ ಥಿಯೇಟರ್ ಮೇಳವಾಗಿ, ಟೆಂಟಿನ ಮೇಳವಾಗಿ ಮಾರ್ಪಟ್ಟು ನೂರಾರು ಪ್ರಸಂಗಗಳನ್ನು ಪ್ರಯೋಗಿಸಿತ್ತು. ಜನಸಾಮಾನ್ಯರಲ್ಲಿ ಹೊಸ ಬಗೆಯ ಕಲಾಸಂವೇದನೆಯನ್ನು ತಂದು ಕೊಟ್ಟು ಮುಗ್ಗರಿಸುತ್ತ ನಡೆದಿತ್ತು. ಶಂಭು ಹೆಗಡೆಯವರು ಜನಿಸಿದ ವರ್ಷ ಈ ಮೇಳ ಬೆಳಗಾವಿಗೆ ಹೋಗಿ ಪ್ರದರ್ಶನ ನೀಡುವ ಮೂಲಕ ಸೀಮೋಲ್ಲಂಘನ ಮಾಡಿತ್ತು. ಆರ್ಥಿಕ ಮುಗ್ಗಟ್ಟು, ಕಲಾವಿದರ ಅಸಹಕಾರ ಮತ್ತು ಶಿವರಾಮ ಹೆಗಡೆಯವರ ವಯೋಮಾನದಿಂದಾಗಿ ಇಡಗುಂಜಿ ಮೇಳ ನೆಲಕಚ್ಚಿತ್ತು. ಅಂಥ ದಿನಗಳಲ್ಲಿ ವ್ಯಾಪಾರಿ ಮೇಳ ಸೇರಿ ಕುಣಿದ ಶಂಭು ಹೆಗಡೆಯವರು ಅದನ್ನು ಉಳಿಸುವ ಮಾರ್ಗೋಪಾಯಗಳನ್ನು ಯೋಚಿಸಿದರು.
1977ರ ಹೊತ್ತಿಗೆ ಪ್ರಧಾನ ಕಲಾವಿದ ಮಹಾಬಲ ಹೆಗಡೆ ವೃತ್ತಿರಂಗ ಭೂಮಿಯಿಂದ ನಿರ್ಗಮಿಸಿದ್ದು, ಮೇಳದ ಜೀವವಾಗಿದ್ದ ಗಜಾನನ ಹೆಗಡೆಯ ಆಕಸ್ಮಿಕ ಮರಣ, ಮೇಳಕ್ಕೆ ಅಗ್ನಿಪರೀಕ್ಷೆಯ ಕಾಲ. ಅನೇಕರು ಮೇಳಬಿಟ್ಟರು. ಸಾಲ 70-80 ಸಾವಿರ. ಇಂಥ ಸ್ಥಿತಿಯಲ್ಲಿ ಮೇಳವನ್ನು ಮುನ್ನಡೆಸಿದ ಕೀರ್ತಿ ಶಂಭುಹೆಗಡೆಯವರದು. ಕಲಾವಿದರು ಮೇಳದಿಂದ ಮೇಳಕ್ಕೆ ಆಕರ್ಷಿತರಾಗಿ ಹೋಗುತ್ತಿದ್ದು ವ್ಯಾವಸಾಯಿಕ ಪೈಪೋಟಿಯ ಮಧ್ಯೆ ಇಡಗುಂಜಿ ಮೇಳ ಬೆಳೆಯಬೇಕಿರುವುದನ್ನು ಮನಗಂಡು, ಶಂಭುಹೆಗಡೆ ಶಾಬ್ಧಿಕ ಅಭಿನಯವನ್ನು ಹೆಚ್ಚು ಮಾಡಿದರು. ಪ್ರದರ್ಶನದಲ್ಲಿ ಅಭಿನಯದ ಜೊತೆಗೆ ನೃತ್ಯ ಸಂಯೋಜನೆ ಹಾಗೂ ಚಲಾವಣೆ ಇಲ್ಲದಿದ್ದ ಹಳೆಯ ಕಥೆಗಳಿಗೆ ಹೊಸ ಜೀವ ನೀಡಿ ಪ್ರದರ್ಶಿಸುವ ವ್ಯವಸ್ಥೆ ಮಾಡಿದರು. ದೊಡ್ಡ ಬೀಸಿನ ವೈವಿಧ್ಯಮಯ ಪಾತ್ರಗಳನ್ನು ಲೀಲಾಜಾಲವಾಗಿ ಅಭಿವ್ಯಕ್ತಿಸಿ ಮೆರೆದ ಹೆಗ್ಗಳಿಕೆ ಶ್ರೀಕೆರೆಮನೆ ಶಂಭುಹೆಗಡೆಯವರದು !
ಲಭ್ಯ ದಾಖಲೆ ಹಾಗೂ ಮಾಹಿತಿಗಳ ಪ್ರಕಾರ ಶಂಭು ಹೆಗಡೆಯವರು ಇದುವರೆಗೆ ಸುಮಾರು 70 ಪ್ರಸಂಗಗಳಲ್ಲಿ 180ಕ್ಕೂ ಹೆಚ್ಚು ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಥಿಂಗ್ಸ್ ಉಡುಪಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪಡವಲಪಾಯದ ಯಕ್ಷಗಾನ ರಂಗಭೂಮಿಯ ಸರ್ವಶ್ರೇಷ್ಠ ಪುರುಷವೇಷಧಾರಿ ಎಂದು ಶಂಭು ಹೆಗಡೆಯವರು ಆಯ್ಕೆಯಾದರೂ ಅವರು ಅಷ್ಟೇ ಸಮರ್ಥವಾದ ಸ್ತ್ರೀ ವೇಷಧಾರಿಗಳೂ ಆಗಿದ್ದರು. ತನ್ನ ಹಿರಿಯ ಮಗ ಸ್ತ್ರೀ ಪಾತ್ರಧಾರಿಯಾಗಲಿ ಎಂದು ಅವರ ತಂದೆ ನಿರೀಕ್ಷಿಸಿದ್ದರಂತೆ. ಭೀಷ್ಮ ವಿಜಯದ ಅಂಬೆ ಪಾತ್ರ ಅವರು ಮಾಡಿದ ಮೊದಲ ಸ್ತ್ರೀ ವೇಷ. ಅನಂತರ ಚಂದ್ರಾವಳಿಯ ರಾಧೆ, ಕೃಷ್ಣಾರ್ಜುನ ಕಾಳಗದ ಸುಭದ್ರೆ, ರುಕ್ಮಿಣಿ, ವಿರಾಟ ಪರ್ವದ ಸೈರಂಧ್ರಿ, ಸುಧೇಷ್ಣೆ, ಪಾದುಕಾ ಪಟ್ಟಾಭಿಷೇಕದ ಕೈಕೆಯಿಂದ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತಮ್ಮ ತಂದೆಯವರು ಆರಂಭಿಸಿದ ಶ್ರೀಇಡಗುಂಜಿ ಮಹಾಗಣಪತಿ ಮೇಳ ನೆಲಕಚ್ಚುವ ಸಂದರ್ಭದಲ್ಲಿ ಅದನ್ನು ದಕ್ಷಿಣ ಕನ್ನಡದ ಕಾರ್ಕಳ ತಾಲೂಕಿನ ಮುದ್ರಾಡಿಯ ಡಾ.ಎಂ.ಎಸ್. ರಾವ್ ಸಹೋದರರ ಮತ್ತು ಕುಟುಂಬದ ವರ್ಗದವರ ಪ್ರೋತ್ಸಾಹದಿಂದ ಪುನಃಸಂಘಟಿಸಿದ್ದರು. ಶ್ರೇಷ್ಠ ಮಟ್ಟದ ಬಯಲಾಟ ಪ್ರದರ್ಶನಗಳನ್ನು ನೀಡಬೇಕಿದ್ದರೆ ಮುಖ್ಯವಾಗಿ ಸುವ್ಯವಸ್ಥಿತ ಮೇಳವನ್ನು ಸಂಘಟಿಸಬೇಕು ಎಂಬ ಅವರ ಅಚಲ ವಿಶ್ವಾಸ ಅವರೊಂದಿಗೆ ಕೆಲಸ ಮಾಡಿತು. ನಟನೆಗೂ ಸಂಘಟನೆಗೂ ಅವಿನಾಭಾವ ಸಂಬಂಧವಿರುವುದನ್ನು ಸಾಬೀತುಪಡಿಸಿದರು. ಯಕ್ಷಗಾನ ರಂಗಕಲೆಯ ಅತ್ಯಂತ ಜಟಿಲವಾದ ಪ್ರದರ್ಶನ ಕ್ಷೇತ್ರದಲ್ಲಿ ವ್ಯಾವಹಾರಿಕವಾಗಿ ಮೇಳವನ್ನು ಸಂಘಟಿಸಿ ನಡೆಸುವ ಯಜಮಾನ, ಕಲಾವಿದ, ಪ್ರೇಕ್ಷಕ ವರ್ಗ ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅರಿವಿದ್ದ ಹೆಗಡೆ ಅವರು ಅವಕ್ಕೆ ಪರಿಹಾರೋಪಾಯ ಕಂಡುಕೊಂಡು ಮುನ್ನಡೆದುದರಿಂದ ಶ್ರೀಇಡಗುಂಜಿ ಮಹಾಗಣಪತಿ ಮೇಳ ಇಂದು ಎಪ್ಪತ್ತೈದು ಸಂವತ್ಸರಗಳನ್ನು ಕಾಣುವಂತಾಯಿತು.
ಈ ಅವಧಿಯಲ್ಲಿ ರಂಗ ಪ್ರತಿನಿರ್ಮಾಣ, ಮುಖವರ್ಣಿಕೆ, ವೇಷ ಭೂಷಣ, ಪ್ರವೇಶಕ್ರಮ, ಪೀಠಿಕೆ, ನೃತ್ಯಶೈಲಿ, ನೃತ್ಯವಿಸ್ತರಣೆ, ಹಸ್ತಮುದ್ರೆಗಳ ನಿರ್ಮಾಣ, ಲಯಗತಿ, ಅರ್ಥಗಾರಿಕೆಯ ಕ್ರಮ, ಆವರ್ತನ ತಂತ್ರ, ಸ್ವಂತವಾಗಿ ಹಾಡಿಕೊಳ್ಳುವಿಕೆ ಪ್ರತಿಕ್ರಿಯಾತ್ಮಕ ಅಭಿನಯ, ಧರ್ಮ, ರಂಗ ಸಾಮಗ್ರಿ ಬಳಕೆ, ಅಭಿನಯ ಶ್ಲೇಷೆ ಇದರಲ್ಲೆಲ್ಲಾ ಪರಿಷ್ಕರಣೆ ತಂದರು. ಧರ್ಮ ನಿರಪೇಕ್ಷಣ ದೃಷ್ಟಿಯಿಂದ ಸ್ಥಿತಪ್ರಜ್ಞಾವಿಮರ್ಶಕ ಚಿಕಿತ್ಸಕರಾಗಿ ಇಡೀ ರಂಗಕಲೆಯನ್ನು ಶಂಭುಹೆಗಡೆಯವರು ನಿರಂತರವಾಗಿ ಸಂಸ್ಕರಿಸಿದರು. ಇದರಿಂದ ಪಾರಂಪರಿಕ ಯಕ್ಷಗಾನ ಕಲೆಗೆ ಒಂದು ಹೊಸ ಸಂವೇದನಾತ್ಮಕ ಸಂಸ್ಕಾರವನ್ನು ನೀಡಿದರು. ಸಾಮಾನ್ಯ ಪ್ರೇಕ್ಷಕರಲ್ಲಿದ್ದ ಅಂಧಾಭಿಮಾನವನ್ನು ಅಳಿಸಿ ಕಲಾನ್ವೇಷಕ ಕಲಾಭಿಮಾನಿಗಳನ್ನಾಗಿ ಮಾಡಿದರು. ವರ್ತಮಾನದ ಪರಿಸ್ಥಿತಿಯೊಂದಿಗೆ ವ್ಯವಹರಿಸುತ್ತ, ಸಾಂಪ್ರದಾಯಿಕ ಪ್ರೇಕ್ಷಕರಿಗೆ ಸ್ಪಂದಿಸುತ್ತ, ವ್ಯಾವಸಾಯಿಕ ಪೈಪೋಟಿ ಗಳನ್ನೆಲ್ಲ ಎದುರಿಸುತ್ತ ತಮ್ಮ ಸೃಜನಶೀಲತೆ ಯನ್ನು ಮೆರೆದ ಕೆರೆಮನೆ ಶಂಭುಹೆಗಡೆ ಅಧ್ಯಯನ ಯೋಗ್ಯರು. ಶಂಭುಹೆಗಡೆಯವರನ್ನು ಕುರಿತು ಡಾ.ಜಿ.ಎಸ್. ಭಟ್ಟರು ಮಹಾಪ್ರಬಂಧವನ್ನು ಬರೆದು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಶ್ರೀಇಡಗುಂಜಿ ಮೇಳವನ್ನು ಕುರಿತು ಡಾ. ರಾಮಕೃಷ್ಣ ಜೋಷಿಯವರು ಮಹಾಪ್ರಬಂಧವನ್ನು ಬರೆದಿದ್ದಾರೆ. ಶಂಭು ಹೆಗಡೆಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕೇಂದ್ರ ಅಕಾಡಮಿ ಪ್ರಶಸ್ತಿ ದೊರೆತಿದೆ. ಪರ್ವ ಚಲನಚಿತ್ರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಪುರಸ್ಕೃತರೂ ಆದ ಇವರಿಗೆ ಅಸಂಖ್ಯ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಭಾರತದಾದ್ಯಂತ ಸಂಚರಿಸಿ ಪ್ರದರ್ಶನ ನೀಡಿರುವ ಶ್ರೀಕೆರೆಮನೆ ಶಂಭು ಹೆಗಡೆಯವರು ಬಹರೈನ್, ಫ್ರಾನ್ಸ್, ಸ್ಪೈನ್, ನೇಪಾಳ, ಬೀಜಿಂಗ್, ಅಮೆರಿಕ ಹಾಗೂ ದಕ್ಷಿಣ ಪೂರ್ವ ಏಶ್ಯಾ ರಾಷ್ಟ್ರಗಳಲ್ಲಿ ಯಕ್ಷಗಾನ ಕಲಾಪ್ರದರ್ಶನ ನೀಡಿದ್ದಾರೆ. ಕೆರೆಮನೆಯ ಶ್ರೀಮತಿ ಕಲಾಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿರುವ ಇವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರೂ ಆಗಿದ್ದರು.
ಯಕ್ಷಗಾನ ರಂಗಮಾಧ್ಯಮ ನನ್ನ ಅತ್ಯಂತ ಗಾಢ ಆಸಕ್ತಿಗೆ ನೆಲೆಯಾದುದು. ಆನುವಂಶಿಕ ಹಿನ್ನೆಲೆ, ಕೌಟುಂಬಿಕ ಆವರಣ, ವೈಯಕ್ತಿಕ ತುಡಿತ ಮತ್ತು ಮಿಡಿತ, ಎಲ್ಲವೂ ಒಂದಾಗಿ ನನ್ನನ್ನು ಈ ಕ್ಷೇತ್ರದಲ್ಲಿ ಆಳವಾಗಿ ಬೇರಿಳಿಯುವಂತೆ ಮಾಡಿದೆ.... ಸಾಂಪ್ರದಾಯಿಕ ಸಂಸ್ಕಾರ, ಆವರಣ ಪ್ರೇರಣೆ, ಕೊರಿಯೋಗ್ರಫಿ ರಂಗ ಶಿಕ್ಷಣ, ಅಂತರ್‌ರಾಜ್ಯ ಸಾಂಸ್ಕೃತಿಕ ತಂಡದೊಟ್ಟಿಗಿನ ಪ್ರವಾಸ, ಅನ್ಯವೃತ್ತಿ ಮೇಳದೊಂದಿಗಿನ ತಿರುಗಾಟ, ಸ್ವಂತ ವೃತ್ತಿಮೇಳದ ಸಂಘಟನೆ, ಹಲವು ಹತ್ತು ಬಗೆಯ ಪಾತ್ರ ನಿರ್ವಹಣೆ, ಅನೇಕ ಹಿರಿಯರ, ಕಿರಿಯರ, ರಂಗ ಚಿಂತಕರ, ವಿಮರ್ಶಕರ, ಆತ್ಮೀಯರ ಮೈತ್ರಿ ಮತ್ತು ಒಡನಾಟ ಮುಂತಾದವುಗಳಿಂದ ನನ್ನನ್ನು ಒಬ್ಬ ಕಲಾವಿದನನ್ನಾಗಿ, ಸಂಘಟಕನನ್ನಾಗಿ, ರಂಗಕರ್ಮಿಯನ್ನಾಗಿ ಸಮಾಜ ನನ್ನನ್ನು ಗುರುತಿಸಿದೆಯೆಂದು ನನ್ನ ನಂಬುಗೆ. ಎಲ್ಲರಂತೆ ಸಾಮಾನ್ಯ ವೃತ್ತಿ ಕಲಾವಿದನೇ ಆದ ನಾನು ಕೊಳಪೆ ಹೊಂಡದ ಎಮ್ಮೆಯ ಹಾಗೆ ಈ ರಂಗಭೂಮಿಯ ಇಷ್ಟಾನಿಷ್ಟಗಳನ್ನೆಲ್ಲ ಮೈಗೆ ಮತ್ತು ಮನಸ್ಸಿಗೆ ಬಳಿದುಕೊಂಡು ಈ ರಂಗಭೂಮಿಯ ಎಲ್ಲ ಆಯಾಮ ಗಳ ವಿಷಯದಲ್ಲಿ ಪ್ರಾಮಾಣಿಕವಾಗಿ ಯೋಚನೆ ಮಾಡಬೇಕಾದ ಒತ್ತಡಕ್ಕೆ ಒಳಗಾದೆ ಎಂದಿದ್ದಾರೆ.
//////