ಬಸವ ತತ್ವ್ವ ಅಂದು ಇಂದು

Update: 2018-11-10 18:30 GMT

ಭಾಗ-2

ರಾಜಕೀಯ ತತ್ವ್ವಜ್ಞಾನಿಯಾಗಿದ್ದ ಪ್ರಧಾನಿ ಬಸವಣ್ಣನವರು ಆಡಳಿತ ನಿಪುಣರಾಗಿದ್ದರು. ಸಾಮೂಹಿಕ ನಾಯಕತ್ವದ ಮೂಲಕ ಸರ್ವಾಧಿಕಾರಿಗಳು ತಲೆ ಎತ್ತದಂತೆ ನೋಡಿಕೊಂಡರು. ಅವರು ಸಾಮಾಜಿಕ ಮತ್ತು ಆರ್ಥಿಕ ತಜ್ಞರಾಗಿದ್ದರು. ಇಂದು ಜಗತ್ತು ನ್ಯಾಯಬದ್ಧವಾಗಿ ಮುನ್ನಡೆಯಬೇಕಾದರೆ ಅದು ಬಸವಾದಿ ಶರಣರ ತತ್ವ್ವಗಳನ್ನು ಅನುಸರಿಸಬೇಕು. ಈ ಕುರಿತು ಜಗತ್ತಿಗೆ ತಿಳಿಸುವ ಕಾಲ ಇದಾಗಿದೆ.

ಸಮರತಿ, ಸಮಕಳೆ, ಸಮಸುಖ ಅರಿತುಕೊಳ್ಳದಿದ್ದರೆ ಲಿಂಗಪೂಜಾ ಫಲವಿಲ್ಲ. ‘ನಾನು ಮತ್ತು ನನ್ನ ಸತಿ ಸಹಚರರು ಮತ್ತು ಸಮಾನರು’ ಎಂಬುದೇ ಸಮರತಿ ಪ್ರಜ್ಞೆ. ಸಮಕಳೆಯ ಪ್ರಜ್ಞೆ ಕೂಡ ಅಷ್ಟೇ ಮಹತ್ವದ್ದಾಗಿದೆ. ಒಂದು ಸುಳ್ಳನ್ನು ನಮ್ಮ ದೇಶದಲ್ಲಿ ಧಾರ್ಮಿಕವಾಗಿ ಮತ್ತು ಸಾಹಿತ್ಯಕವಾಗಿ ಹೇಳುತ್ತ ಬಂದಿದ್ದೇವೆ. ಬ್ರಾಹ್ಮಣರಿಗೆ ಬ್ರಹ್ಮಕಳೆ ಇರುತ್ತದೆ ಎಂದೂ ಕ್ಷತ್ರಿಯರಿಗೆ ಕ್ಷಾತ್ರಕಳೆ ಇರುತ್ತದೆ ಎಂದೂ ಭಾವಿಸಿದ್ದೇವೆ. ಬ್ರಹ್ಮತೇಜಸ್ಸು ಮತ್ತು ಕ್ಷಾತ್ರತೇಜಸ್ಸಿನಂಥ ಯಾವ ವಿಶೇಷ ತೇಜಸ್ಸು ಅಥವಾ ಕಳೆ ಇಲ್ಲ. ಇರುವುದೊಂದೇ ಮಾನವ ಕಳೆ ಎಂದು ಬಸವಣ್ಣನವರು ಪ್ರತಿಪಾದಿಸಿದ್ದಾರೆ, ವಿಜ್ಞಾನ ಕೂಡ ಇದನ್ನೇ ಹೇಳುತ್ತದೆ. ಕೆಲವರಿಗೆ ಮಾತ್ರ ಪ್ರಭಾವಳಿ ಇದೆ ಎಂಬುದನ್ನು ವಿಜ್ಞಾನ ಅಲ್ಲಗಳೆಯುತ್ತದೆ. ಪ್ರತಿಯೊಬ್ಬರಿಗೂ ಪ್ರಭಾವಳಿ ಇದೆ ಎಂದು ತಿಳಿಸುತ್ತದೆ. ಸಮಸುಖವು ಪ್ರಕೃತಿಯ ನಿಯಮವಾಗಿದೆ. ಪ್ರಕೃತಿಯು ಶ್ರೀಮಂತರಿಗೆ ವಿಶೇಷವಾದ ಸುಖವನ್ನು ಕಲ್ಪಿಸುವುದಿಲ್ಲ. ಬಿಸಿಲು, ಬೆಳದಿಂಗಳು, ಮಳೆ, ನೀರು ಹೀಗೆ ಪ್ರಕೃತಿಯ ಎಲ್ಲವೂ ಸಕಲಜೀವಿಗಳಿಗೆ ಒಂದೇ ತೆರನಾಗಿವೆ. ಈ ಅರಿವು ಕೂಡ ಲಿಂಗಪೂಜಾಫಲವೇ ಆಗಿದೆ.
ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಕೂಡುವ ಹಾಗೆ ಮಾನವಕುಲದ ಜೊತೆ ಕೂಡಿ ಒಂದಾಗುವಂಥ ಅರಿವನ್ನು ಪಡೆಯದೆ ಹೋದರೆ ಇಷ್ಟಲಿಂಗವನ್ನು ಪೂಜಿಸಿಯೂ ಫಲವಿಲ್ಲ.
ಕೂಡಿ ಬದುಕುತ್ತ ಒಳಗೊಳ್ಳುವ ಸಿದ್ಧಾಂತವನ್ನು ಬಸವಣ್ಣನವರು ನಮಗೆ ಕೊಟ್ಟಿದ್ದಾರೆ. ಮನುವಾದದ ಬಹಿಷ್ಕಾರ ಸಿದ್ಧಾಂತವನ್ನು ಈ ಮೂಲಕ ಅಲ್ಲಗಳೆದಿದ್ದಾರೆ. ನಾವು ಎಲ್ಲ ಜನಾಂಗಗಳ ಜೊತೆ, ಎಲ್ಲ ದೇಶಗಳ ಜೊತೆ, ಎಲ್ಲ ಭಾಷಿಕರ ಜೊತೆ ಮತ್ತು ಎಲ್ಲ ಧರ್ಮದವರ ಜೊತೆ ನದಿಯಲ್ಲಿ ನದಿ ಕೂಡುವ ಮೂಲಕ ಕೂಡಲಸಂಗಮವಾಗುವ ಹಾಗೆ ನಾವು ಮಾನವಕುಲದಲ್ಲಿ ಒಂದಾಗಿ ಹೋಗಬೇಕು. ಇದುವೆ ಇಷ್ಟಲಿಂಗ ಪೂಜೆಯ ಅರಿವು. ಈ ಅರಿವನ್ನು ಆಚರಣೆಯಲ್ಲಿ ತರುವುದೇ ನಡೆನುಡಿ ಎಂಬ ಶರಣಸಿದ್ಧಾಂತ.
ಬಸವಣ್ಣನವರು ಮಹಾನ್ ಅರ್ಥಶಾಸ್ತ್ರಜ್ಞರಾಗಿದ್ದರು. ಜಗತ್ತಿನಲ್ಲಿ ಆ ಕಾಲದಲ್ಲಿ ನಮಗೆ ಸಾಮಾಜಿಕ ನಿಧಿಯ ಪರಿಕಲ್ಪನೆ ಎಲ್ಲಿಯೂ ಕಂಡುಬರುವುದಿಲ್ಲ. ಬಸವಣ್ಣನವರು ಶರಣಸಂಕುಲದಲ್ಲಿ ಶಿವನಿಧಿಯನ್ನು ಸ್ಥಾಪಿಸಿದ್ದರು. ಅದಕ್ಕೆ ‘ಶಿವನ ಸೊಮ್ಮು’ ಎಂದು ಕರೆದರು. ಅದು ಸಾಮಾಜಿಕ ನಿಧಿಯಾಗಿತ್ತು. ಯಾರೂ ಆರ್ಥಿಕ ಸಮಸ್ಯೆಯಿಂದ ಬಳಲಬಾರದು ಎಂಬುದು ಈ ಸಾಮಾಜಿಕ ನಿಧಿ ಸ್ಥಾಪನೆಯ ಉದ್ದೇಶವಾಗಿತ್ತು. ದಾಸೋಹಕ್ಕೆ ಬಹುದೊಡ್ಡ ಅರ್ಥವಿದೆ. ದಾಸೋಹ ಎಂದರೆ ಬರೀ ನಾವು ಜೊತೆಯಾಗಿ ಪ್ರಸಾದ ಸ್ವೀಕರಿಸುವುದಲ್ಲ. ಅದೊಂದು ಪರಿಪೂರ್ಣ ಅರ್ಥಶಾಸ್ತ್ರದ ಪರಿಜ್ಞಾನವನ್ನು ಕೊಡುವಂಥದ್ದಾಗಿದೆ.
‘‘ನಾನಾವಾವ ಕರ್ಮಂಗಳ ಮಾಡಿದಡೆಯು ಆ ಕರ್ಮ ಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು’’ ಎಂದು ಬಸವಣ್ಣನವರು ಹೇಳಿದ್ದಾರೆ. ಇಷ್ಟುಮಾತ್ರ ಹೇಳಿದ್ದರೆ ಬಸವಣ್ಣನವರು ಮಹಾನುಭಾವಿಗಳಾಗುತ್ತಿರಲಿಲ್ಲ. ‘‘ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು. ನಿಮ್ಮ ಸೊಮ್ಮಿಂಗೆ ಸಲಿಸುವೆನು, ನಿಮ್ಮಾಣೆ ಕೂಡಲಸಂಗಮದೇವಾ’’ ಎಂದು ಅವರು ಮುಂದುವರಿದು ತಿಳಿಸಿದ್ದಾರೆ. ಹೀಗೆ ವ್ಯಕ್ತಿಗತವಾದ ಸಂಪತ್ತನ್ನು ಸಾಮಾಜಿಕ ಸಂಪತ್ತಾಗಿ ಪರಿವರ್ತಿಸುವ ಪಾಠ ಕಲಿಸುತ್ತಾರೆ.
‘‘ಹೊನ್ನಿನೊಳಗೊಂದೊರೆಯ ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವಾ.’’

ಎಂದು ಬಸವಣ್ಣನವರು ತಿಳಿಸಿದ್ದಾರೆ. ಹೀಗೆ ಅವರು ನರನ ಸಂಗ್ರಹಬುದ್ಧಿಯನ್ನು ಅಲ್ಲಗಳೆದಿದ್ದಾರೆ. ಯಾವುದಕ್ಕೆ ನಾವು ‘ಸರ್‌ಪ್ಲಸ್ ವ್ಯಾಲ್ಯೂ’ ಎಂದು ಕರೆಯುತ್ತೇವೋ ಆ ವೈಯಕ್ತಿಕ ಮಿಗುತಾಯ ಮೌಲ್ಯವನ್ನು ಸಾಮಾಜಿಕ ನಿಧಿಯಾಗಿ ಅಂದರೆ ಸಾಮಾಜಿಕ ಮಿಗುತಾಯ ಮೌಲ್ಯವಾಗಿ ಮಾಡಿದ ಜಗತ್ತಿನ ಮೊತ್ತಮೊದಲ ಅರ್ಥಶಾಸ್ತ್ರಜ್ಞ ಯಾರಾದರೂ ಇದ್ದರೆ ಅವರು ಬಸವಣ್ಣನವರು.
ಇನ್ನು ಕಾಯಕಜೀವಿಗಳ ಸಂಘಟನೆ. ಐರೋಪ್ಯ ರಾಷ್ಟ್ರಗಳಲ್ಲಿ 19ನೇ ಶತಮಾನದ ವರೆಗೆ ಅಂದರೆ ಕಾರ್ಲ್ ಮಾರ್ಕ್ಸ್ ಬರುವವರೆಗೆ ದುಡಿಯುವ ಜನರ ಸಂಘಟನೆ ಆಗಿರಲಿಲ್ಲ. ಆದರೆ 12ನೇ ಶತಮಾನದಲ್ಲಿ, ನಮ್ಮ ಕನ್ನಡದ ನೆಲದಲ್ಲಿ ಬಸವಣ್ಣನವರು ಕಾಯಕಜೀವಿಗಳ ಸಂಘಟನೆ ಮಾಡಿದರು. ಅವರಿಗೂ ಮರ್ಯಾದೆ ಇದೆ, ಘನತೆ ಇದೆ, ಕಾಯಕಜೀವಿಗಳಾದ ಕೂಡಲಸಂಗನ ಶರಣರು ಸ್ವತಂತ್ರಧೀರರು ಎಂದು ತಿಳಿಸಿದರು. ಜಗತ್ತಿನ ದುಡಿಯುವ ವಗದರ್ ಮೊತ್ತಮೊದಲ ನಾಯಕರಾದರು.
ಅಷ್ಟೇ ಅಲ್ಲ, ಬಸವಣ್ಣನವರು ಪ್ರಜಾಪ್ರಭುತ್ವದ ಕನಸುಗಾರರಾ ಗಿದ್ದರು. 1215ರಲ್ಲಿ ಇಂಗ್ಲೆಂಡ್‌ನಲ್ಲಿ ಕಿಂಗ್ ಜಾನ್ ಮತ್ತು ಜಹಗೀರು ದಾರರ ಮಧ್ಯೆ ಒಂದು ಒಪ್ಪಂದವಾಯಿತು. ಅದಕ್ಕೆ ಮ್ಯಾಗ್ನಾಕಾರ್ಟಾ ಅಂದರೆ ‘ಮಹಾ ಒಪ್ಪಂದ’ ಎಂದು ಕರೆಯುವರು. ಈ ಒಪ್ಪಂದದಲ್ಲಿ ರಾಜನ ಹಕ್ಕುಗಳನ್ನು ಮೊಟಕುಗೊಳಿಸಿ ಜಹಗೀರುದಾರರಿಗೆ ಒಂದಿಷ್ಟು ಹಕ್ಕಗಳನ್ನು ನೀಡಲಾಯಿತು. 13ನೇ ಶತಮಾನದ ಈ ಮ್ಯಾಗ್ನಾಕಾರ್ಟಾ ಜಗತ್ತಿನ ಎಲ್ಲ ಸಂವಿಧಾನಗಳ ತಾಯಿ ಎಂದು ಸಂವಿಧಾನ ತಜ್ಞರು ಹೇಳುತ್ತಾರೆ. ಆದರೆ ಬಸವಾದಿ ಶರಣರು 12ನೇ ಶತಮಾನದಲ್ಲೇ ವಚನಗಳನ್ನು ಬರೆದರು. ಅವುಗಳನ್ನು ನಾವು ವಚನಸಂವಿಧಾನ ಎಂದು ಕರೆಯುತ್ತೇವೆ. ಖಂಡಿತವಾಗಿಯೂ ನಮ್ಮ ಶರಣರ ವಚನಸಂಪತ್ತು ಜಗತ್ತಿನ ಸಂವಿಧಾನಗಳ ತಾಯಿಯಾಗಿದೆ.
 ಮ್ಯಾಗ್ನಾಕಾರ್ಟಾದಲ್ಲಿ ದುಡಿಯುವ ಜನರ ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಫ್ರೆಂಚ್ ಕ್ರಾಂತಿಯಲ್ಲಿ ಮತ್ತು ಅಮೆರಿಕದ ಸ್ವಾತಂತ್ರ್ಯ ಘೋಷಣೆಯಲ್ಲಿ ಕೂಡ ಬಡವರ ಮತ್ತು ಮಹಿಳೆಯ ಹಕ್ಕುಗಳ ಬಗ್ಗೆ ಏನೂ ಹೇಳಲಿಲ್ಲ. ಅಷ್ಟೇ ಅಲ್ಲ, 1948ನೇ ಡಿಸೆಂಬರ್ 10ರಂದು ವಿಶ್ವಸಂಸ್ಥೆ ಘೋಷಿಸಿದ 30 ಅಂಶಗಳ ಮಾನವಹಕ್ಕುಗಳ ಕರಡುಪ್ರತಿಯಲ್ಲಿ ಕೂಡ ಮಹಿಳಾಹಕ್ಕುಗಳ ಬಗ್ಗೆ ಪ್ರಸ್ತಾಪವಿರಲಿಲ್ಲ. ಮಹಿಳಾ ಹಕ್ಕುಗಳನ್ನು ಸೇರಿಸುವುದಕ್ಕಾಗಿ ನ್ಯೂಯಾರ್ಕ್ ಮಹಿಳೆಯರು ಹೋರಾಟ ಮಾಡಬೇಕಾಯಿತು. ಆದರೆ ವಿಶ್ವಸಂಸ್ಥೆ ಘೋಷಿಸಿದ ಎಲ್ಲ 30 ಅಂಶಗಳು ಬಸವಣ್ಣನವರ ವಚನಗಳಲ್ಲಿವೆ.
ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಗನಾಥ ಮಿಶ್ರಾ ಅವರು ನಿವೃತ್ತಿ ನಂತರ ಮಾನವಹಕ್ಕುಗಳ ಆಯೋಗದ ಅಧ್ಯಕ್ಷರಾದರು. ಬಸವಣ್ಣನವರ ವಚನಗಳಲ್ಲಿನ ಮಾನವಹಕ್ಕುಗಳ ಕುರಿತು ನಾನು ಅವರಿಗೆ ತಿಳಿಸಿದಾಗ, ಅವರು ಆಶ್ಚರ್ಯ ವ್ಯಕ್ತಪಡಿಸಿದರು. ಅವರು ಬಸವಣ್ಣನವರ ಬಹುದೊಡ್ಡ ಅಭಿಮಾನಿಯಾಗಿದ್ದರು. ಮಾನವಹಕ್ಕುಗಳ ಬಗ್ಗೆ, ಸಮಾನತೆಯ ಬಗ್ಗೆ, ಬಡವ ಶ್ರೀಮಂತರ ಮಧ್ಯದ ಸಮಾನತೆ ಬಗ್ಗೆ ತೀವ್ರವಾಗಿ ಹೇಳಿದ ನಾಯಕ ಬಸವಣ್ಣ.

ಬಸವಣ್ಣನವರ ಅನುಭವ ಮಂಟಪ ಎಂಬುದು ಜಗತ್ತಿನ ಮೊದಲ ಸಮಾಜೋ ಧಾರ್ಮಿಕ ಸಂಸತ್ ಆಗಿದೆ. ಅಮರಗಣಂಗಳು ಎಂದು ಕರೆಯಿಸಿಕೊಳ್ಳುವ 770 ಜನ ಪ್ರತಿನಿಧಿಗಳು ವಿವಿಧ ಸಾಮಾಜಿಕ ಸ್ತರಗಳಿಂದ ಬಂದವರಾಗಿದ್ದರು. ಇಂದು ಜಗತ್ತಿನಲ್ಲಿ ಅತಿದೊಡ್ಡ ಸಂಸತ್ ಎಂದರೆ ಭಾರತದ ಸಂಸತ್. ಆದರೆ ಅಲ್ಲಿ ಕೂಡ 770 ಸಂಸತ್ ಸದಸ್ಯರಿಲ್ಲ. ಮಂತ್ರಿಮಂಡಲದ ಹಾಗೆ ಶರಣರಲ್ಲಿ 7 ಮಂದಿ ಗಣಾಧೀಶರಿದ್ದರು. ಅಕ್ಕ ನಾಗಮ್ಮ, ಅಕ್ಕ ಮಹಾದೇವಿ, ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ಧಾರಾಮ ಮತ್ತು ಮಡಿವಾಳ ಮಾಚಿದೇವರು ಈ ಗಣಾಧೀಶರು. ಅಲ್ಲಮಪ್ರಭುಗಳು ಅನುಭವ ಮಂಟಪದ ಶೂನ್ಯಸಿಂಹಾಸನಾಧೀಶರಾಗಿ ಜಗತ್ತಿನ ಮೊದಲ ಸ್ಪೀಕರ್ ಆದರು. ಬಸವಣ್ಣನವರು ಈ ರೀತಿಯಾಗಿ ವಚನ ಚಳವಳಿಗೆ ಸಾಮೂಹಿಕ ನಾಯಕತ್ವ ಒದಗಿಸಿದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿದರು. ಈ ರೀತಿಯ ಮಾದರಿ ಸಾಮೂಹಿಕ ನಾಯಕತ್ವ ಮತ್ತು ಪರಿಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಧರ್ಮದಲ್ಲೂ ಇಲ್ಲ. ಬಸವಣ್ಣನವರು ತುಳಿತಕ್ಕೊಳಗಾದವರಿಗೆ, ದಲಿತರಿಗೆ, ಮಹಿಳೆಯರಿಗೆ ಮತ್ತು ಎಲ್ಲ ಕಾಯಕಜೀವಿಗಳಿಗೆ ಶಿಕ್ಷಣದ ವ್ಯವಸ್ಥೆ ಮಾಡಿದರು. ಎಲ್ಲಿಯೂ ಇಲ್ಲದ ಸಾಮಾಜಿಕ ನ್ಯಾಯದ ಪರುಷಕಟ್ಟೆಯನ್ನು ಸ್ಥಾಪಿಸಿದರು. ಮಂದಿರಗಳ ನಿರಾಕರಣೆ ಮಾಡುತ್ತ, ಅವುಗಳಿಗೆ ಪರ್ಯಾಯವಾಗಿ ಯಾವುದೇ ಖರ್ಚಿಲ್ಲದ ಇಷ್ಟಲಿಂಗ ಸೃಷ್ಟಿಸಿದರು. ಹೀಗೆ ಮಹಾನುಭಾವಿ ಬಸವಣ್ಣನವರು ಧೀಮಂತ ವ್ಯಕ್ತಿತ್ವ ಉಳ್ಳವರಾಗಿದ್ದರು.
ಈಗಿನ ಬಹುಪಾಲು ಲಿಂಗಾಯತರ ಪೂರ್ವಜರಿಗೆ ವೈದಿಕರು ಮಂದಿರಗಳಲ್ಲಿ ಬಿಡುತ್ತಿರಲಿಲ್ಲ. ಮಂದಿರ ವ್ಯವಸ್ಥೆಯನ್ನು ವಿರೋಧಿಸಿದ ಬಸವಣ್ಣನವರು ದೇವರನ್ನು ಇಷ್ಟಲಿಂಗ ರೂಪದಲ್ಲಿ ತುಳಿತಕ್ಕೊಳಗಾದವರ ಎದೆಯ ಮೇಲೆ ತಂದಿಟ್ಟರು. ‘‘ನೀವು ಸುಲಿಗೆಗೆ ಒಳಗಾಗಬೇಡಿರಿ, ಬಿಟ್ಟಿಕೂಲಿಗೆ ಹೋಗಬೇಡಿರಿ ಎಂದು ಅವರಿಗೆ ಕರೆನೀಡಿದರು. ಅವರಿಗೆ ಇಷ್ಟಲಿಂಗ ಕೊಟ್ಟು ಅವರನ್ನು ಮಂದಿರಗಳಿಂದ ಮತ್ತು ಧಾರ್ಮಿಕ ಶೋಷಣೆಯಿಂದ, ವಿಮೋಚನೆ ಮಾಡಿದರು.
ರಾಜಕೀಯ ತತ್ವ್ವಜ್ಞಾನಿಯಾಗಿದ್ದ ಪ್ರಧಾನಿ ಬಸವಣ್ಣನವರು ಆಡಳಿತ ನಿಪುಣರಾಗಿದ್ದರು. ಸಾಮೂಹಿಕ ನಾಯಕತ್ವದ ಮೂಲಕ ಸರ್ವಾಧಿಕಾರಿಗಳು ತಲೆ ಎತ್ತದಂತೆ ನೋಡಿಕೊಂಡರು. ಅವರು ಸಾಮಾಜಿಕ ಮತ್ತು ಆರ್ಥಿಕ ತಜ್ಞರಾಗಿದ್ದರು. ಇಂದು ಜಗತ್ತು ನ್ಯಾಯಬದ್ಧವಾಗಿ ಮುನ್ನಡೆಯಬೇಕಾದರೆ ಅದು ಬಸವಾದಿ ಶರಣರ ತತ್ವ್ವಗಳನ್ನು ಅನುಸರಿಸಬೇಕು. ಈ ಕುರಿತು ಜಗತ್ತಿಗೆ ತಿಳಿಸುವ ಕಾಲ ಇದಾಗಿದೆ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ