ನೆಹರೂ: ಭಾರತ ಮರೆಯಲು ಸಾಧ್ಯವಿಲ್ಲದ ಮೇರು ವ್ಯಕ್ತಿತ್ವ

Update: 2018-11-14 06:21 GMT

ನೆಹರೂ ಬದುಕಿದ್ದಾಗ ಜನತೆಗೆ ಅವರೊಬ್ಬ ಅನುಕರಣೀಯ ವ್ಯಕ್ತಿಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಮರೆತುಬಿಡಲು ಹಾಗೂ ಸ್ವತಂತ್ರ ಭಾರತದ ನಿರ್ಮಾಣದಲ್ಲಿ ಅವರ ಪಾತ್ರವನ್ನು ಕ್ಷುಲ್ಲಕಗೊಳಿಸಲು ಯತ್ನಿಸುತ್ತಿರುವಂತಹ ಪ್ರವೃತ್ತಿ ಕಂಡುಬರುತ್ತಿದೆ.

ಭಾರತ ಹಾಗೂ ಪ್ರಪಂಚದಲ್ಲಿ ತನ್ನ ಛಾಪನ್ನು ಉಳಿಸಿಹೋಗಿರುವ ಜವಾಹರಲಾಲ್ ನೆಹರೂ ಅವರನ್ನು ಐತಿಹಾಸಿಕ ವ್ಯಕ್ತಿಯಾಗಿ ಪರಿಗಣಿಸುವಲ್ಲಿ ಜಗತ್ತು ಯಾವತ್ತೂ ಹಿಂಜರಿಯಲಿಲ್ಲವೆಂಬುದನ್ನು ನರೇಂದ್ರ ಮೋದಿಯವರು ಒಪ್ಪಿಕೊಳ್ಳಲಾರರು. ನೆಹರೂ ಅವರು 1964ರಲ್ಲಿ ಮೃತಪಟ್ಟಾಗ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಅವರನ್ನು ‘ಆಧುನಿಕ ಭಾರತದ ಶಿಲ್ಪಿ’ ಎಂದು ಬಣ್ಣಿಸಿತ್ತು. ದಿ ಇಕಾನಮಿಸ್ಟ್ ಪತ್ರಿಕೆಯು, ‘ನೆಹರೂ ಇಲ್ಲದ ಜಗತ್ತು’ ಎಂಬ ಶೀರ್ಷಿಕೆಯ ಮುಖಪುಟ ಸುದ್ದಿಯನ್ನು ಪ್ರಕಟಿಸಿತ್ತು. ಜನಸಮೂಹದ ಮೇಲೆ ಅವರಿಗಿದ್ದ ‘‘ಮಾಂತ್ರಿಕ ಹಿಡಿತ’’ವನ್ನು ಅದು ಸ್ಮರಿಸಿಕೊಂಡಿತ್ತು ಹಾಗೂ ಈ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ಜಗತ್ತು ಬಡವಾಯಿತು ಎಂದು ಅದು ಶೋಕ ವ್ಯಕ್ತಪಡಿಸಿತ್ತು.

   ಭಾರತದಲ್ಲಿ ನೆಹರೂ ಅವರ ಕುರಿತ ಅಭಿಪ್ರಾಯದಲ್ಲಿ ಗಣನೀಯವಾದ ಬದಲಾವಣೆಯುಂಟಾಗಿದೆ. ಅವರು ಬದುಕಿದ್ದಾಗ ಜನತೆಗೆ ಅವರೊಬ್ಬ ಅನುಕರಣೀಯ ವ್ಯಕ್ತಿಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಮರೆತುಬಿಡಲು ಹಾಗೂ ಸ್ವತಂತ್ರ ಭಾರತದ ನಿರ್ಮಾಣದಲ್ಲಿ ಅವರ ಪಾತ್ರವನ್ನು ಕ್ಷುಲ್ಲಕಗೊಳಿಸಲು ಯತ್ನಿಸುತ್ತಿರುವಂತಹ ಪ್ರವೃತ್ತಿ ಕಂಡುಬರುತ್ತಿದೆ. ‘‘ ಕಾಂಗ್ರೆಸ್ ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಿರುವಂತೆ, ಭಾರತಕ್ಕೆ ಸ್ವಾತಂತ್ರ ದೊರೆತಿರುವುದು ಪಂಡಿತ್ ಜವಾಹರಲಾಲ್ ನೆಹರೂ ಅವರಿಂದಲ್ಲ’’ ಎಂದು ಮೋದಿ ಸಂಸತ್‌ಗೆ ತಿಳಿಸಿದ್ದರು. ರಾಜಸ್ಥಾನದ ಎಂಟನೆ ತರಗತಿಯ ಪಠ್ಯಪುಸ್ತಕದಿಂದ ನೆಹರೂ ಅವರ ಕುರಿತ ಪಾಠವನ್ನು ಕೈಬಿಡಲಾಗಿದೆ. ಕ್ವಿಟ್ ಇಂಡಿಯಾ ಚಳವಳಿ ಕುರಿತ ರಾಷ್ಟ್ರೀಯ ದಾಖಲೆಗಳ ವಸ್ತುಪ್ರದರ್ಶನದಲ್ಲಿ ನೆಹರೂ ಅವರ ಪ್ರಸ್ತಾವವೇ ಇರಲಿಲ್ಲ. ನೆಹರೂ ಅವರ ಅಧಿಕೃತ ನಿವಾಸದಲ್ಲಿದ್ದ ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಲೈಬ್ರರಿಯನ್ನು ಎಲ್ಲಾ ಭಾರತೀಯ ಪ್ರಧಾನಿಗಳ ಜೀವನವನ್ನು ಪರಿಚಯಿಸುವ ಸಂಕೀರ್ಣವಾಗಿ ಪರಿವರ್ತಿಸಲು ಸಂಸ್ಕತಿ ಸಚಿವಾಲಯ ನಿರ್ಧರಿಸಿದೆ.
      ನೆಹರೂ ಅವರನ್ನು ಗುರಿಯಿರಿಸಲು ಹಲವಾರು ಕಾರಣಗಳಿವೆ. ಮಹಾತ್ಮಾಗಾಂಧಿ ಅವರ ಹತ್ಯೆಯ ಬಳಿಕ ತನ್ನ ಮೇಲೆ ನಿಷೇಧ ಹೇರಿದ್ದಕ್ಕಾಗಿ ಆರೆಸ್ಸೆಸ್ ಅವರನ್ನು ದೀರ್ಘಸಮಯದಿಂದ ದ್ವೇಷಿಸುತ್ತಲೇ ಬಂದಿದೆ ಹಾಗೂ ಜಾತ್ಯತೀತವಾದವನ್ನು ಆಡಳಿತದ ಪದ್ಧತಿಯಾಗಿ ಅವರು ರೂಪಿಸಿರುವುದನ್ನು ಅದು ತೀವ್ರವಾಗಿ ವಿರೋಧಿಸುತ್ತಿತ್ತು. ಚೀನಾ ವಿರುದ್ಧದ ಸಮರದಲ್ಲಿ ಭಾರತದ ಅಪಮಾನಕಾರಿ ಸೋಲನ್ನು ಪದೇ ಪದೇ ನೆನಪಿಸುವ ಮೂಲಕ ನೆಹರೂ ವಿರುದ್ಧ ಸಾರ್ವಜನಿಕರ ಭಾವನೆಯನ್ನು ಕೆರಳಿಸುವುದು ಅದಕ್ಕೆ ಅತ್ಯಂತ ಸುಲಭವಾಗತೊಡಗಿತು. ನೆಹರೂ ಅವರ ಆಲಿಪ್ತ ವಿದೇಶಾಂಗ ನೀತಿ ಹಾಗೂ ಸರಕಾರಿ ಯೋಜನೆಗಳಲ್ಲಿ ಅವರಿಗಿದ್ದ ನಂಬಿಕೆಯನ್ನು ಪ್ರಶ್ನಿಸಲಾಯಿತು. ಸಾರ್ವಜನಿಕ ಬದುಕಿನಲ್ಲಿ ಅವರಿಗಿದ್ದ ಪ್ರಾಮುಖ್ಯತೆಯ ವಿರುದ್ಧ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಅವರ ಪ್ರತಿಮೆಗಳನ್ನು ಸ್ಥಾಪಿಸಿರುವುದನ್ನು, ರಸ್ತೆಗಳು ಹಾಗೂ ಹಲವಾರು ಸರಕಾರಿ ಯೋಜನೆಗಳಿಗೆ ಅವರ ಹೆಸರಿಟ್ಟಿರುವುದನ್ನು, ಅವರ ಚಿತ್ರವಿರುವ ಹಲವಾರು ಜಾಹೀರಾತುಗಳನ್ನು ಸುದ್ದಿಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವುದಕ್ಕಾಗಿ ಅನೇಕರು ಅಸಮಾಧಾನಪಟ್ಟುಕೊಂಡಿದ್ದಾರೆ.
    ಭಾರತದ ಬಗ್ಗೆ ನೆಹರೂ ಯಾವ ರೀತಿ ಅರ್ಥ ಮಾಡಿಕೊಂಡಿದ್ದರು ಹಾಗೂ ದೇಶಕ್ಕೆ ಅವರ ಕೊಡುಗೆ ಏನಿತ್ತು ಎಂಬುದನ್ನು ತಿಳಿಯಲು ಅವರ ಜೀವನಚರಿತ್ರೆಯನ್ನು ಅಧ್ಯಯನ ಮಾಡುವ ಅಗತ್ಯವಿದೆ. ನೆಹರೂ ಬಗ್ಗೆ ಕೆಲವೇ ಕೆಲವು ಜೀವನಚರಿತ್ರೆಗಳಿವೆ. 2003ರಲ್ಲಿ ಇತಿಹಾಸಕಾರ ಜ್ಯೂಡಿತ್ ಎಂ. ಬ್ರೌನ್ ಪ್ರಕಟಿಸಿದ ನೆಹರೂ: ಎ ಪೊಲಿಟಿಕಲ್ ಲೈಫ್ ಕೃತಿಯು ನೆಹರೂ ಜೀವನವನ್ನು ಅರಿತುಕೊಳ್ಳುವುದಕ್ಕೆ ಬಹಳಷ್ಟು ನೆರವಾಗುತ್ತದೆ. 1947ರ ಆನಂತರದ ನೆಹರೂ ಕುರಿತಾದ ದಾಖಲೆಗಳನ್ನು ಲೇಖಕಿಗೆ ಸೋನಿಯಾಗಾಂಧಿ ದೊರಕಿಸಿಕೊಟ್ಟಿದ್ದರು. ಶ್ರೀಮಂತ ವಕೀಲ ಹಾಗೂ ರಾಜಕೀಯ ನಾಯಕರಾದ ಮೋತಿಲಾಲ್ ನೆಹರೂ ಅವರ ಮಗನಾಗಿ ಸ್ಥಿತಿವಂತ ಕುಟುಂಬದಲ್ಲಿ ಜವಾಹರಲಾಲ್ ನೆಹರೂ ಜನಿಸಿದ್ದರು. ಸುಶಿಕ್ಷಿತ ಭಾರತೀಯರಿಗೆ ಭೌತಿಕ ಹಾಗೂ ರಾಜಕೀಯ ಅವಕಾಶಗಳ ಹೆಬ್ಬಾಗಿಲನ್ನು ತೋರಿಸಿಕೊಟ್ಟ ಅವರು ಭಾರತದ ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಿಕತೆಗಳನ್ನು ಬಲವಾಗಿ ಪ್ರಶ್ನಿಸಿದ್ದರು. ಹಾರೊ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಲ್ಲಿಅವರು ಪಡೆದ ಶಿಕ್ಷಣವು ಅವರ ರಾಜಕೀಯ ನಿಲುವುಗಳನ್ನು ರೂಪಿಸುವಲ್ಲಿ ಪಾತ್ರ ವಹಿಸಿತು. ಆಗ ಅವರು ಸಾಮ್ರಾಜ್ಯಶಾಹಿವಾದದ ವಿರುದ್ಧ ಅಸಹನೆಯನ್ನು ಬೆಳೆಸಿಕೊಂಡರು. ಮಹಾತ್ಮಗಾಂಧಿ ಹಾಗೂ 1919-20ರ ಅವಧಿಯಲ್ಲಿ ನಡೆದ ಸ್ವಾತಂತ್ರ ಹೋರಾಟಗಳಿಂದ ಸ್ಫೂರ್ತಿ ಪಡೆದು ಅರು ರಾಜಕೀಯಕ್ಕೆ ಧುಮುಕಿದ್ದರು.
      ಇಂತಹ ಸನ್ನಿವೇಶದಲ್ಲಿ ನೆಹರೂ ಅವರು ಗಾಂಧೀಜಿ ಜೊತೆ ನಿಂತರು ಹಾಗೂ ಅವರನ್ನು ಸ್ವಾತಂತ್ರದೆಡೆಗೆ ಭಾರತದ ದಾರಿಯ ಕೇಂದ್ರಬಿಂದುವೆಂಬುದಾಗಿ ಪರಿಗಣಿಸಿದರು. ನೆಹರೂ ಅವರ ಜಾತ್ಯತೀತ ದೃಷ್ಟಿಕೋನ ರೂಪುಗೊಳ್ಳಲು ಇತರ ಅಂಶಗಳು ಕೂಡಾ ಕಾರಣವಾಗಿದ್ದವು. ಹಿಂದೂ-ಮುಸ್ಲಿಂ ಸಾಂಸ್ಕೃತಿಕ ಸಮ್ಮಿಶ್ರಣದ ಕುಟುಂಬದಲ್ಲಿ ಅವರು ಬೆಳೆದಿದ್ದರು. ಮೋತಿಲಾಲ್ ಅವರು ತನ್ನ ಬಾಲ್ಯದ ಶಿಕ್ಷಣವನ್ನು ಮುಸ್ಲಿಂ ಶಿಕ್ಷಕರೊಬ್ಬರಿಂದ ಅರಬ್ಬಿ ಹಾಗೂ ಪಾರ್ಸಿ ಭಾಷೆಯಲ್ಲಿ ಪಡೆದುಕೊಂಡಿದ್ದರು. ಸ್ವಾತಂತ್ರ ಚಳವಳಿಗೆ ಧುಮುಕಿದ ಬಳಿಕ ನೆಹರೂ ಅವರು ಕಾಂಗ್ರೆಸ್ ಹಾಗೂ ರಾಜಕಾರಣದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅವರೊಬ್ಬ ಪ್ರಚಂಡ ಓದುಗನೂ ಆಗಿದ್ದರು. ಜೈಲುವಾಸ ಕೂಡಾ ಅವರಿಗೆ ಈ ನಿಟ್ಟಿನಲ್ಲಿ ತುಂಬಾ ನೆರವಾಯಿತು. 1921ರಿಂದ 1945ರವರೆಗೆ ಅವರು ಒಟ್ಟು 9 ಬಾರಿ ಜೈಲಿಗೆ ಕಳುಹಿಸಲ್ಪಟ್ಟರು. ಅವರ ಜೈಲು ವಾಸದ ಅವಧಿಗಳು 9 ದಿನಗಳಿಂದ ಹಿಡಿದು 1,041 ದಿನಗಳವರೆಗಿದ್ದು, ಒಟ್ಟು 3,259 ದಿನಗಳಾಗಿದ್ದವು. ಅಂದರೆ ಅವರು ತನ್ನ ಬದುಕಿನ 9 ವರ್ಷಗಳನ್ನು ಜೈಲಿನಲ್ಲಿ ಕಳೆದಂತಾಗಿತ್ತು. ತನ್ನ ಜೈಲಿನ ದಿನಗಳಲ್ಲಿ ಅವರು ತನ್ನ ಹವ್ಯಾಸಗಳು ಹಾಗೂ ಸ್ನೇಹಬಾಂಧವ್ಯಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಅವರ ಜೈಲುವಾಸದ ಒಂದು ಹಂತದಲ್ಲಿ ಅಂದರೆ ಫೆಬ್ರವರಿ, 1934 ಹಾಗೂ ಸೆಪ್ಟಂಬರ್ 1935ರ ಮಧ್ಯದ ಅವಧಿಯಲ್ಲಿ ಅವರು 188 ಪುಸ್ತಕಗಳನ್ನು ವಾಚಿಸಿದ್ದರು.
 1930ರ ದಶಕದಲ್ಲಿ ನೆಹರೂ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮುಖ್ಯತೆ ಪಡೆಯುತ್ತಿದ್ದಂತೆಯೇ, ಈ ರೀತಿಯ ಬೌದ್ಧಿಕ ಚಿಂತನೆಯ ಬೆಳವಣಿಗೆಯು ಭಾರತದ ಭವಿಷ್ಯದ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಆ ವೇಳೆಗೆ ಗಾಂಧೀಜಿಯವರು ಗಂಭೀರ ರಾಜಕೀಯ ನಾಯಕನ ಸ್ಥಾನದಿಂದ ಹೊರಬಂದರು ಮತ್ತು ಅವರು ತನ್ನ ಇಡೀ ಶಕ್ತಿಯನ್ನು ಅಸ್ಪಶ್ಯರ ಪರಿಸ್ಥಿತಿಯ ಸುಧಾರಣೆಗಾಗಿ ವ್ಯಯಿಸಲಾರಂಭಿಸಿದರು. ನೆಹರೂ ಅವರನ್ನು ತನ್ನ ಉತ್ತರಾಧಿಕಾರಿಯೆಂದು ಸಾರ್ವಜನಿಕವಾಗಿ ಘೋಷಿಸಿದ್ದರು ಹಾಗೂ ಅವರು ಯಾವುದೇ ವರ್ಗೀಯ ಅಥವಾ ವೈಯಕ್ತಿಕ ಹಿತಾಸಕ್ತಿಗಳಿಂದ ದೂರವಿರುವುದು ಗಾಂಧೀಜಿಗೆ ತುಂಬಾ ಚೆನ್ನಾಗಿ ಮನದಟ್ಟಾಗಿತ್ತು.
ಭಾರತಕ್ಕೆ ಸ್ವಾತಂತ್ರ ದೊರೆತ ಆನಂತರದ ದಿನಗಳಲ್ಲಿ ಪ್ರಧಾನಿ ನೆಹರೂ ಹಾಗೂ ಅವರ ಸಹೋದ್ಯೋಗಿಗಳು ಹಲವಾರು ರೀತಿಯ ಸವಾಲುಗಳನ್ನು ಎದುರಿಸಿದ್ದರು. ಕೋಮುಹಿಂಸಾಚಾರ, ಭಾರತ ಅಥವಾ ಪಾಕಿಸ್ತಾನಕ್ಕೆ ಸೇರ್ಪಡೆಗೊಳ್ಳುವ ಆಯ್ಕೆಯನ್ನು ಪ್ರಾಂತಗಳಿಗೆ ನೀಡುವುದು, ಭಾರತದ ರಾಜರುಗಳ ಭವಿಷ್ಯ, ಬ್ರಿಟಿಷ್ ಕಾಲದ ಭಾರತದಲ್ಲಿನ ಆಸ್ತಿಗಳ ವಿಭಜನೆ ಇತ್ಯಾದಿ ಸವಾಲುಗಳು ಅವರ ಮುಂದಿದ್ದವು. ಕಾಶ್ಮೀರದಲ್ಲಿನ ಬಿಕ್ಕಟ್ಟು ಹಾಗೂ ಸ್ವಾತಂತ್ರ ದೊರೆತ ಆರು ತಿಂಗಳ ಬಳಿಕ ಮಹಾತ್ಮಾಗಾಂಧೀಜಿ ಅವರ ಹತ್ಯೆ ನಡೆದ ಹಿನ್ನೆಲೆಯಲ್ಲಿ ಉಂಟಾದ ಪರಿಸ್ಥಿತಿಯನ್ನು ಕೂಡಾ ಅವರು ನಿಭಾಯಿಸಬೇಕಾಯಿತು.
  ‘‘ ನೆಹರೂ ಅವರು ನಮ್ಮ ಪ್ರಜಾಪ್ರಭುತ್ವದ ಪ್ರಶ್ನಾತೀತ ನಾಯಕನಾಗಿದ್ದರು. ಇತರ ಯಾವುದೇ ರಾಷ್ಟ್ರೀಯವಾದಿಗಿಂತಲೂ ಮಿಗಿಲಾಗಿ ಅವರು ಬಹುಪಕ್ಷೀಯ ವ್ಯವಸ್ಥೆಯನ್ನು ಪ್ರೋತ್ಸಾಹಿಸಿದ್ದರು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅವರು ತನ್ನ ಪ್ಯಾಟ್ರಿಯಾಟ್ಸ್ ಆ್ಯಂಡ್ ಪಾರ್ಟಿಸನ್ಸ್‌ನಲ್ಲಿ ಬರೆದಿದ್ದಾರೆ. ಸೋವಿಯತ್ ರಶ್ಯದ ಕೈಗಾರಿಕೀಕರಣದಿಂದ ಸ್ಫೂರ್ತಿಪಡೆದಿದ್ದ ನೆಹರೂ ಆಂತಹದೇ ಕ್ರಾಂತಿಯನ್ನು ಭಾರತದಲ್ಲಿ ರಕ್ತಪಾತವಿಲ್ಲದೆ ಸಾಧಿಸಬೇಕೆಂದು ಬಯಸಿದ್ದರು. ಭಾರತಕ್ಕೆ ಸ್ವಾತಂತ್ರ ದೊರೆತಾಗ ದೇಶದ ಜನತೆಯ ಸಾಕ್ಷರತೆಯ ಪ್ರಮಾಣ ಕೇವಲ ಶೇ.14 ಆಗಿತ್ತು. ಬಡತನವೂ ಅತ್ಯಧಿಕವಾಗಿತ್ತು. ಹಲವಾರು ವಲಯಗಳಲ್ಲಿ ಸರಕಾರದ ಮಧ್ಯಪ್ರವೇಶ ಆತ್ಯಗತ್ಯವಾಗಿತ್ತು. ಹಲವು ಕ್ಷೇತ್ರಗಳಲ್ಲಿ ಅದು ಅತ್ಯುತ್ತಮ ಫಲವನ್ನು ನೀಡಿದೆ. ಪರಮಾಣು ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳು ಅದಕ್ಕೆ ಸೂಕ್ತ ನಿದರ್ಶನಗಳಾಗಿವೆ.
 ಪ್ರಮಾದಗಳು ಹಾಗೂ ವೈಫಲ್ಯಗಳು
  ನೆಹರೂ ಅವರ ಹಲವಾರು ವೈಫಲ್ಯಗಳನ್ನೂ ಕಂಡಿದ್ದಾರೆ. ಚೀನಾದ ಉದ್ದೇಶಗಳನ್ನು ತಪ್ಪಾಗಿ ಅವರು ಭಾವಿಸಿದ್ದರು. 1962ರಲ್ಲಿ ಭಾರತದ ಮೇಲೆ ಚೀನಾ ನಾಯಕ ಮಾವೋ ತ್ಸೆ ತುಂಗ್ ಆಕ್ರಮಣ ನಡೆಸುವರೆಂದು ಅವರು ಕನಸಿನಲ್ಲೂ ಎನಿಸಿರಲಿಲ್ಲ. ಭಾರತದ ರಕ್ಷಣಾ ಸಿದ್ಧತೆಗಳ ಬಗ್ಗೆಯೂ ಅವರಿಗೆ ಸರಿಯಾದ ಗ್ರಹಿಕೆ ಇದ್ದಿರಲಿಲ್ಲ.
 ಅವರು ಜಾರಿಗೊಳಿಸಲು ಉದ್ದೇಶಿಸಿದ ಭೂಸುಧಾರಣೆಯ ಕ್ರಮಗಳಿಗೆ ರಾಜ್ಯಮಟ್ಟದ ನಾಯಕರು ಹಾಗೂ ಶ್ರೀಮಂತ ಜಮೀನ್ದಾರರು ಅಡ್ಡಗಾಲು ಹಾಕಿದ್ದರು. ಶೇಕ್ ಅಬ್ದುಲ್ಲಾ ಅವರನ್ನು ದೀರ್ಘಾವಧಿಗೆ ಬಂಧಿಸಿದ ಪರಿಣಾಮವಾಗಿ ಕಾಶ್ಮೀರದಲ್ಲಿ ಭಾರತದ ಬಗ್ಗೆ ಪರಕೀಯತೆಯ ಭಾವನೆ ಬೆಳೆಯಿತು. ಆಡಳಿತಾತ್ಮಕ ಅಸಮರ್ಥತೆ, ಕೋಮುವಾದಿ ಘೋಷಣೆಗಳು, ಕಾಂಗ್ರೆಸ್ ಪಕ್ಷದೊಳಗಿನ ಭ್ರಷ್ಟಾಚಾರ ಹಾಗೂ ಸಂಕುಚಿತ ಪ್ರಾಂತೀಯ ಹಾಗೂ ಜಾತಿವಾದಗಳು ನೆಹರೂ ಅವರನ್ನು ಕೆಲವೊಮ್ಮೆ ಹತಾಶಗೊಳಿಸಿದ್ದೂ ಇದೆಯೆಂದು ರಾಮಚಂದ್ರ ಗುಹಾ ಅಭಿಪ್ರಾಯಿಸಿದ್ದರು.
ನೆಹರೂ ನಿಜಕ್ಕೂ ಭಾರತಕ್ಕಾಗಿ ಬಾಳಿದ್ದರು. ನೆಹರೂ ಅವರ ಛಾಪು ಇಲ್ಲದ ಅಥವಾ ಅವರ ಪ್ರಭಾವವಿಲ್ಲದಿರುವ ಸ್ವ್ವತಂತ್ರ ಭಾರತದ ನಂತರದ ಯಾವುದೇ ಸಾರ್ವಜನಿಕ ಸಂಸ್ಥೆ ಕಾಣಸಿಗುವುದು ಅಪರೂಪ. ಸ್ವಾತಂತ್ರ ಭಾರತದ ನಿರ್ಮಾಣದಲ್ಲಿ ನೆಹರೂ ಪಾತ್ರವನ್ನು ಕಡೆಗಣಿಸುವುದೆಂದರೆ, ಅವರನ್ನು ಮರೆಯುವುದೆಂದರೆ ದೇಶಕ್ಕೆ ದ್ರೋಹವೆಸಗಿದಂತೆ ಎಂದರೆ ತಪ್ಪಾಗದು.
 ಕೃಪೆ: ದಿ ವೈರ್.ಇನ್

Writer - ಸುಶೀಲ್ ಆ್ಯರೊನ್

contributor

Editor - ಸುಶೀಲ್ ಆ್ಯರೊನ್

contributor

Similar News

ಜಗದಗಲ
ಜಗ ದಗಲ