ಸಿಬಿಐನಿಂದ ಆರ್‌ಬಿಐವರೆಗೆ...

Update: 2018-11-14 18:42 GMT

ಸಿಬಿಐ ಮತ್ತು ಆರ್‌ಬಿಐ ನಮಗೆ ಕಾಣಿಸುತ್ತಿರುವ ಹಿಮಬಂಡೆಯ ತುದಿ ಮಾತ್ರ. 2016ರಲ್ಲಿ ನೋಟು ರದ್ದತಿಯ ವೇಳೆ ಸರಕಾರವು ಸಮಸ್ಯಾತ್ಮಕ ಸೂಚನೆಗಳನ್ನು ನೀಡಿದಾಗ ವೌನವಾಗಿದ್ದರೆಂದು ಅದರ ಮೇಲೆ ಅಪಾದನೆ ಮಾಡಿದ್ದನ್ನು ನೆನಪಿಸಿಕೊಳ್ಳಿ ಮತ್ತು ಈಗ ರಜೆಯ ಮೇಲೆ ಕಳುಹಿಸಲಾಗಿರುವ ಸಿಬಿಐ ನಿರ್ದೇಶಕರನ್ನು, ವಿಪಕ್ಷಗಳ ಭಿನ್ನಮತದ ಹೊರತಾಗಿಯೂ, ಮೋದಿ ನೇಮಕ ಮಾಡಿದ್ದರು ಎಂಬುದನ್ನೂ ಜ್ಞಾಪಿಸಿಕೊಳ್ಳಿ. ಕಾಂಗ್ರೆಸ್‌ಗಿಂತ ತಾನು ಇಂತಹ ಸಂಸ್ಥೆಗಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತೇನೆಂದು ಹೇಳಿದ್ದ ಬಿಜೆಪಿ ಈಗ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಒಂದು ಇಣುಕು ನೋಟ ಇಲ್ಲಿದೆ.

ದೂರ ನಿಯಂತ್ರಣದ (ರಿಮೋಟ್) ಮೂಲಕ ಆಡಳಿತ ನಡೆಸಲು ಪ್ರಯತ್ನಿಸುತ್ತ ಭಾರತದ ಸಂಸ್ಥೆಗಳನ್ನು ದುರ್ಬಲಗೊಳಿಸಿತೆಂದು ಬಿಜೆಪಿಯು ಕಾಂಗ್ರೆಸ್‌ನ್ನು, ವಿಶೇಷವಾಗಿ ಸೋನಿಯಾ ಗಾಂಧಿಯವರ ರಾಷ್ಟ್ರೀಯ ಸಲಹಾ ಸಮಿತಿಯನ್ನು ದೂಷಿಸುತ್ತ ಹಲವು ವರ್ಷಗಳನ್ನೇ ಕಳೆಯಿತು. ಬಿಜೆಪಿ ಮತ್ತು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಇದೆಲ್ಲ ಬದಲಾಗಿ, ದೇಶದ ಸಂಸ್ಥೆಗಳು ಅವುಗಳು ಕಾರ್ಯನಿರ್ವಹಿಸಬೇಕಾದ ರೀತಿಯಲ್ಲೇ, ಯಾರದೇ ಹಸ್ತಕ್ಷೇಪವಿಲ್ಲದೆ, ಕಾರ್ಯನಿರ್ವಹಿಸುತ್ತವೆ ಎಂಬುದು ಹೀಗೆ ದೂಷಿಸಿದವರ ವಾದದ ಸಾರವಾಗಿತ್ತು. ಆದರೆ ಈಚೆಗೆ ದೇಶದಲ್ಲಿ ನಡೆದಿರುವ ಘಟನೆಗಳು, ಬೆಳವಣಿಗೆಗಳು ಇದಕ್ಕೆ ತದ್ವಿರುದ್ಧವಾದದ್ದು ನಡೆದಿರುವುದನ್ನು ಸೂಚಿಸುತ್ತವೆ: ಕೇಂದ್ರ ಸರಕಾರವು ಕೇಂದ್ರೀಯ ತನಿಖಾ ಆಯೋಗವನ್ನು ಸಿಬಿಐಯ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸಲು ಬಳಸಿಕೊಂಡಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಓರ್ವ ಉಪನಿರ್ದೇಶಕರು ಬ್ಯಾಂಕಿನ ಕಾರ್ಯ ವಿಧಾನದಲ್ಲಿ ಸರಕಾರ ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆ ಬಹಿರಂಗವಾಗಿ ಮಾತಾಡಿದ್ದಾರೆ. ಆದರೆ ಸಿಬಿಐ ಮತ್ತು ಆರ್‌ಬಿಐ ನಮಗೆ ಕಾಣಿಸುತ್ತಿರುವ ಹಿಮಬಂಡೆಯ ತುದಿ ಮಾತ್ರ. 2016ರಲ್ಲಿ ನೋಟು ರದ್ದತಿಯ ವೇಳೆ ಸರಕಾರವು ಸಮಸ್ಯಾತ್ಮಕ ಸೂಚನೆಗಳನ್ನು ನೀಡಿದಾಗ ವೌನವಾಗಿದ್ದರೆಂದು ಅದರ ಮೇಲೆ ಅಪಾದನೆ ಮಾಡಿದ್ದನ್ನು ನೆನಪಿಸಿಕೊಳ್ಳಿ ಮತ್ತು ಈಗ ರಜೆಯ ಮೇಲೆ ಕಳುಹಿಸಲಾಗಿರುವ ಸಿಬಿಐ ನಿರ್ದೇಶಕರನ್ನು, ವಿಪಕ್ಷಗಳ ಭಿನ್ನಮತದ ಹೊರತಾಗಿಯೂ, ಮೋದಿ ನೇಮಕ ಮಾಡಿದ್ದರು ಎಂಬುದನ್ನೂ ಜ್ಞಾಪಿಸಿಕೊಳ್ಳಿ. ಕಾಂಗ್ರೆಸ್‌ಗಿಂತ ತಾನು ಇಂತಹ ಸಂಸ್ಥೆಗಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತೇನೆಂದು ಹೇಳಿದ್ದ ಬಿಜೆಪಿ ಈಗ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಒಂದು ಇಣುಕು ನೋಟ ಇಲ್ಲಿದೆ.

ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)
ಸಿಬಿಐ ನಿರ್ದೇಶಕ ಅಲೋಕ್ ವರ್ಮ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನುಡುವಣ ಜಗಳ ಹೇಗೆ ಬಯಲಾಗಿದೆ ಎಂಬ ಕಾರಣಕ್ಕಾಗಿಯಷ್ಟೆ ಸಿಬಿಐಯ ಗೋಜಲು ಮುಖ್ಯವಲ್ಲ; ಅಂತಿಮವಾಗಿ ಸರಕಾರ ಈ ಗೋಜಲಿನಲ್ಲಿ ಯಾವ ರೀತಿ ಹಸ್ತಕ್ಷೇಪ ನಡೆಸಿತು ಎಂಬ ಕಾರಣಕ್ಕಾಗಿಯೂ ಇದು ಆತಂಕದ ವಿಷಯ.
‘‘ಸರಕಾರ ಬೀರುವ ಎಲ್ಲ ಪ್ರಭಾವವೂ ನೇರವಾಗಿ ಅಥವಾ ಲಿಖಿತವಾಗಿ ಇರುವುದಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಅದು ಪರೋಕ್ಷವಾಗಿ, ಸೂಚ್ಯವಾಗಿ ಇರುತ್ತದೆ; ಮತ್ತು ಅದನ್ನು ತಡೆದುಕೊಳ್ಳಲು, ನಿರಾಕರಿಸಲು ಸಾಕಷ್ಟು ಧೈರ್ಯವಿರಬೇಕಾಗುತ್ತದೆ’’ ಎಂದಿದ್ದಾರೆ, ತನ್ನನ್ನು ರಜೆಯ ಮೇಲೆ ಹೋಗಲು ಹೇಳಿದ ಸರಕಾರದ ಆಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿರುವ ಅಲೋಕ್ ವರ್ಮ.


ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)
ಆರ್‌ಬಿಐಯ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅಕ್ಟೋಬರ್ 26ರಂದು ನೀಡಿದ ಒಂದು ಉಪನ್ಯಾಸವನ್ನು, ಕೇಂದ್ರ ಸರಕಾರಕ್ಕೆ ಒಂದು ಎಚ್ಚರಿಕೆ ಎಂದೇ ಪರಿಗಣಿಸಬಹುದಾದ ಮಾತಿನೊಂದಿಗೆ ಪರಿಸಮಾಪ್ತಿ ಗೊಳಿಸಿದರು: ‘‘ಕೇಂದ್ರೀಯ ಬ್ಯಾಂಕ್‌ನ ಸ್ವಾತಂತ್ರವನ್ನು ಗೌರವಿಸದ ಸರಕಾರಗಳು ಖಂಡಿತವಾಗಿಯೂ ಹಣಕಾಸು ಮಾರುಕಟ್ಟೆಗಳ ಕೋಪಕ್ಕೆ ಗುರಿಯಾಗುತ್ತವೆ, ಆರ್ಥಿಕ ಜ್ವಾಲೆಗೆ ಕಿಡಿ ಹಚ್ಚುತ್ತವೆ ಮತ್ತು ತಾವು ಬಹಳ ಮುಖ್ಯವಾದ ಒಂದು ನಿಯಂತ್ರಕ ಸಂಸ್ಥೆಯನ್ನು ದುರ್ಬಲಗೊಳಿಸಿದವೆಂದು ಪಶ್ಚಾತ್ತಾಪ ಪಡುತ್ತವೆ.’’
ಅವರ ಮಾತುಗಳು ಏಕಾಏಕಿಯಾಗಿ ಬಂದ ಮಾತುಗಳಲ್ಲ. ಕಳೆದ ಕೆಲವು ವರ್ಷಗಳಿಂದ ಹಣಕಾಸು ಸಚಿವಾಲಯವು, ಕೇಂದ್ರ ಸರಕಾರಕ್ಕೆ ಬೇಕಾದಂತೆ ಬಳಸುವ ನಿಟ್ಟಿನಲ್ಲಿ ಕಾರ್ಯವೆಸಗುವಂತೆ ಆರ್‌ಬಿಐಯನ್ನು ಸತತವಾಗಿ ತಳ್ಳುತ್ತ ಬಂದಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಅದರ ಜತೆ ಸಮಾಲೋಚಿಸದೆಯೇ ಹೊಸ ಕ್ರಮಗಳನ್ನು ಘೋಷಿಸಿದೆ. ಅದು ನೀರವ್ ಮೋದಿ ಹಗರಣವನ್ನು ಸೆಂಟ್ರಲ್ ಬ್ಯಾಂಕ್‌ನ ತಲೆಗೆ ಕಟ್ಟಿದೆ.
ಸರಕಾರದ ಕೆಲವು ಕ್ರಮಗಳು ತುಂಬ ಕೆಟ್ಟ ಕ್ರಮಗಳಾಗಿ ತೋರುತ್ತವೆ. ಉದಾಹರಣೆಗೆ, ಆರ್‌ಬಿಐಯ ಹಾಲಿ ಗವರ್ನರ್ ಊರ್ಜಿತ್ ಪಟೇಲ್ ಅಧಿಕಾರ ವಹಿಸಿಕೊಂಡಾಗ, ನೋಟು ರದ್ದತಿ ತೀರ್ಮಾನದ ಬಗ್ಗೆ ಸರಕಾರ ನೀಡಿದ ಬೇಕಾಬಿಟ್ಟಿ ಸೂಚನೆಗಳಿಗೆ ಅವರು ಒಪ್ಪಿಗೆ ನೀಡಿದರೆಂದು ಅವರ ಮೇಲೆ ಆಪಾದಿಸಲಾಯಿತು. ಆದರೆ ಆಗ ಸರಕಾರದ ಕ್ರಮಗಳನ್ನು ಸಮರ್ಥಿಸುವಂತೆ ಆರ್‌ಬಿಐಯ ಮೇಲೆ ಇತ್ತಡ ಹೇರಲಾಯಿತು.
ಚುನಾವಣಾ ಆಯೋಗ
ಚುನಾವಣಾ ಬಾಂಡ್‌ಗಳನ್ನು ಮೊದಲು ಚುನಾವಣಾ ಆಯೋಗವು ‘‘ಹಿಮ್ಮುಖವಾದ ಒಂದು ಹೆಜ್ಜೆ’’ ಎಂದು ಕರೆಯಿತು. ಆದರೆ ಸ್ವಲ್ಪವೇ ಸಮಯದಲ್ಲಿ ಅದು ತನ್ನ ಮನಸ್ಸು ಬದಲಾಯಿಸಿ ಈ ಬಾಂಡ್‌ಗಳು ‘‘ಸರಿಯಾದ ದಿಕ್ಕಿನಲ್ಲಿ ಇಟ್ಟ ಒಂದು ಹೆಜ್ಜೆ’’ ಎಂದು ಹೇಳಿತು. ಇವಿಎಂ(ಮತದಾನ ಯಂತ್ರ)ಗಳ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಮುಖ್ಯ ಚುನಾವಣಾ ಆಯುಕ್ತರು ‘‘ಚುನಾವಣೆಯಲ್ಲಿ ಸೋತವರು ಚುನಾವಣಾ ಫಲಿತಾಂಶಗಳನ್ನು ಒಪ್ಪಬೇಕಾಗಿಲ್ಲ’’ ಎಂದು ಬಿಟ್ಟರು.
 ಈ ನಿಟ್ಟಿನಲ್ಲಿ ಅತ್ಯಂತ ಕೆಟ್ಟ ಬೆಳವಣಿಗೆಗಳೆಂದರೆ ಚುನಾವಣಾ ದಿನಾಂಕಗಳ ಪ್ರಕಟನೆೆಗೆ ಸಂಬಂಧಿಸಿ ನಡೆದ ಘಟನೆಗಳು. ಅಕ್ಟೋಬರ್‌ನಲ್ಲಿ, ಐದುರಾಜ್ಯಗಳಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸ ಬೇಕಾಗಿದ್ದ ಪ್ರತಿಕಾ ಗೋಷ್ಠಿಯನ್ನು ಆಯೋಗವು ಕೆಲವು ಗಂಟೆಗಳ ಕಾಲ ವಿಳಂಬ ಮಾಡಿತು. ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಪ್ರಧಾನಿ ಮೋದಿ ಒಂದು ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಲು ಅನುವು ಮಾಡಿ ಕೊಡುವುದಕ್ಕಾಗಿ ಹೀಗೆ ವಿಳಂಬಿಸಲಾಗಿತ್ತು.
2017ರಲ್ಲಿ ಚುನಾವಣಾ ಆಯೋಗವು ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳನ್ನು ಪ್ರತ್ಯೇಕ ದಿನಾಂಕಗಳಲ್ಲಿ ನಡೆಸಲು ನಿರ್ಧರಿಸಿತು. ಗುಜರಾತ್‌ನಲ್ಲಿ ಚುನಾವಣೆಗಳನ್ನು ತಡವಾಗಿ ನಡೆಸಿದಲ್ಲಿ ಸರಕಾರವು ಮತ್ತಷ್ಟು ಯೋಜನೆಗಳನ್ನು ಘೋಷಿಸಿ ಸರಕಾರದ ವಿರೋಧಿ ಶಕ್ತಿಗಳನ್ನು ದುರ್ಬಲಗೊಳಿಸಬಹುದೆಂಬ ಉದ್ದೇಶದಿಂದ ಚುನಾವಣೆಗಳನ್ನು ವಿಳಂಬಿಸುವಂತೆ ಸರಕಾರವು ಆಯೋಗದ ಮೇಲೆ ಒತ್ತಡ ಹೇರಿತು ಎಂಬುದು ಆಗ ಇದ್ದ ಸಾಮಾನ್ಯವಾದ ಒಂದು ಭಾವನೆಯಾಗಿತ್ತು.


ನ್ಯಾಯಾಂಗ
ಜನವರಿಯಲ್ಲಿ ಸುಪ್ರೀಂ ಕೋರ್ಟಿನ ಐವರು ಉನ್ನತ ನ್ಯಾಯಾಧೀಶರಲ್ಲಿ ನಾಲ್ವರು ಇದುವರೆಗೆ ಎಂದೂ ಕರೆಯದಿದ್ದಂತಹ ಪತ್ರಿಕಾಗೋಷ್ಠಿಯೊಂದನ್ನು ಕರೆದು ದೇಶದ ಪ್ರಜಾಪ್ರಭುತ್ವ ಅನ್ಯಾಯದಲ್ಲಿದೆ ಎಂದು ದೂರಿದರು.
 ಅಂದಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ಆ ನಾಲ್ವರ ಕ್ರೋಧದ ಗುರಿಯಾಗಿದ್ದರು. ತನ್ನದೇ ಆದ ಒಂದು ಮೊಕದ್ದಮೆಯಲ್ಲಿ ತೀರ್ಪು ನೀಡುವ ನ್ಯಾಯಾಧೀಶರಾಗಿ ದೀಪಕ್‌ಮಿಶ್ರಾ ಕುಳಿತ್ತಿದ್ದರು. ನಾಲ್ವರು ನ್ಯಾಯಮೂರ್ತಿಗಳ ಸಿಟ್ಟಿಗೆ ಇದೊಂದೇ ಕಾರಣವಾಗಿರಲಿಲ್ಲ; ಉತ್ತರಾಖಂಡ್‌ನ ಮುಖ್ಯ ನ್ಯಾಯಾಧೀಶ ಕೆ. ಎಂ. ಜೋಸೆಫ್‌ರವರಿಗೆ ಪದೋನ್ನತಿ ನೀಡುವ ಕಡತವನ್ನು ಕೇಂದ್ರ ಸರಕಾರವು ತಿಂಗಳುಗಟ್ಟಲೆ ತಡೆಹಿಡಿದಿತ್ತು. 2016ರಲ್ಲಿ ಜೋಸೆಫ್ ಉತ್ತರಾಖಂಡ ದಲ್ಲಿ ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿದ್ದರು. ಇದು ಬಿಜೆಪಿಗೆ ಒಂದು ದೊಡ್ಡ ಹೊಡೆತವಾಗಿತ್ತು.
ಅಂತಿಮವಾಗಿ, ಸರಕಾರವು ಜೋಸೆಫ್‌ರ ಹೆಸರಿಗೆ ಒಪ್ಪಿಗೆ ನೀಡಿತ್ತಾದರೂ, ಸೇವಾಹಿರಿತನದ ಬಗ್ಗೆ ಅದು ಇನ್ನೊಂದು ವಿವಾದವನ್ನು ಹುಟ್ಟುಹಾಕಿತು. 2015ರಲ್ಲಿ ಸುಪ್ರೀಂಕೋರ್ಟ್ ಸರಕಾರದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಮಂಡಳಿಯನ್ನು ರದ್ದುಗೊಳಿಸಿತು. ಅದು ಹೀಗೆ ಮಾಡದೇ ಇರುತ್ತಿದ್ದಲ್ಲಿ, ಇಡೀ ನ್ಯಾಯಾಂಗ ವ್ಯವಸ್ಥೆಯೇ (ಸರಕಾರಕ್ಕೆ ಅನುಕೂಲವಾಗುವ ಹಾಗೆ) ಬದಲಾಗಿ ಬಿಡುತ್ತಿತ್ತು. ಇಷ್ಟೇ ಅಲ್ಲದೆ, ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್.ಲೋಯಾರವರ ಸಾವಿನ ಸುತ್ತ, ಇನ್ನೂ ಉತ್ತರ ಸಿಗದ, ಹಲವಾರು ಪ್ರಶ್ನೆಗಳಿವೆ.
ರಾಜ್ಯ ಸಭೆ
ಒಂದು ವಿತ್ತ ಮಸೂದೆ ಕಾನೂನು ಆಗಬೇಕಾದರೆ, ಅದನ್ನು ಲೋಕಸಭೆ ಅನುಮೋದಿಸಿದರೆ ಸಾಕಾಗುತ್ತದೆ. ಅಂದರೆ ವಿತ್ತ ಮಸೂದೆಗಳು ರಾಜ್ಯಸಭೆಯ ಅನುಮೋದನೆ ಇಲ್ಲದೆಯೇ ಕಾನೂನಾಗಬಲ್ಲವು. ಈಗ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ. ಹೀಗಾಗಿ ಸರಕಾರವು ವಿಶೇಷವಾಗಿ ಆಧಾರ್ ಮಸೂದೆಯ ವಿಷಯದಲ್ಲಿ ಈ ವಿಧಾನವನ್ನೇ ಬಳಸಿಕೊಂಡಿದೆ.
ರಾಜ್ಯಸಭೆಯನ್ನು ಬದಿಗೆ ತಳ್ಳಿ ತನಗೆ ಬೇಕಾದಂತೆ ಮಸೂದೆಯೊಂದನ್ನು ಕಾನೂನಾಗಿ ಮಾಡುವ ಸರಕಾರದ ಕ್ರಮವು ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಒಂದು ಮುಖ್ಯ ಅಂಗವಾಗಿರುವ ರಾಜ್ಯಸಭೆಯ ಬಗ್ಗೆ ಅದರ ಮನೋಧರ್ಮ ಏನು ಎಂಬುದನ್ನು ಸೂಚಿಸುತ್ತದೆ. ಕೇಂದ್ರ ಸಚಿವ ಅರುಣ್ ಜೇಟ್ಲಿ ಯವರಂತೂ ‘‘ಚುನಾಯಿತವಲ್ಲದ ಸದನ’’ವು ಲೋಕಸಭೆಯನ್ನು ಪ್ರಶ್ನಿಸಬಹುದೇ? ಎಂದು ಕೇಳಿದ್ದಾರೆ.
ಭಾರತೀಯ ಸೇನೆ
ತಾನು ಹಿಂದಿನ ಸರಕಾರಕ್ಕಿಂತ ಸೇನಾ ಬಲವನ್ನು ಬಳಸಲು ಹೆಚ್ಚು ಸಿದ್ಧನಿದ್ದೇನೆ ಎಂದು ಹೇಳುತ್ತಾ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರು. ಇದು ನಿಜ ಆಯಿತು. 2016ರಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಸೇನೆ ‘ಸರ್ಜಿಕಲ್ ದಾಳಿ’ಗಳನ್ನು ನಡೆಸಿತು. ಆ ಬಳಿಕ ಸರಕಾರವು ತನ್ನ ಸ್ವಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಸೇನಾಪಡೆಗಳನ್ನು ಬಳಸಿಕೊಂಡಿದೆ. ಸೇನಾ ಪಡೆಯ ಅಧಿಕಾರಿಗಳಿಗೆ ಕರೆದು ಮಾತಾಡಲು ಹಾಗೂ ಜನಪ್ರಿಯ ವೀಡಿಯೊಗಳನ್ನು ಮಾಡಲು ಅನುಮತಿ ನೀಡಿದೆ. ಸೇನಾ ಕ್ರಮದಿಂದ ರಾಜಕೀಯ ಲಾಭ ಪಡೆಯಲು ‘ಸರ್ಜಿಕಲ್ ದಾಳಿ’ಗಳ ದಿನಾಚರಣೆಯನ್ನು ಮಾಡಿದೆ. ಆದರೆ, ಇದೇ ವೇಳೆ ಅದು ಸೇನಾಪಡೆಗಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. 2018ರ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಹಾಗೂ ಹಿರಿಯ ಸಚಿವರ ಗೈರು ಹಾಜರಿ, ಇಬ್ಬರು ಸೇನಾ ಅಧಿಕಾರಿಗಳ ಹಿರಿತನವನ್ನು ಉಪೇಕ್ಷಿಸಿ ಬಿಪಿನ್‌ರಾವತ್‌ರನ್ನು ಸೇನಾ ಮುಖ್ಯಸ್ಥರಾಗಿ ಮಾಡಿದ ಸರಕಾರದ 2016ರ ನಿರ್ಧಾರ, ಮತ್ತು ಕಾಶ್ಮೀರದಲ್ಲಿ ‘ಮಾನವ ತಡೆಗೋಡೆ’ ಘಟನೆಯ ಬಗ್ಗೆ ಸರಕಾರದ ನಾಚಿಕೆಗೇಡು ಪ್ರತಿಕ್ರಿಯೆ -ಇವುಗಳೆಲ್ಲ ಸೇನಾ ಪಡೆಯನ್ನು ರಾಜಕೀಕರಿಸುವ ಸರಕಾರದ ಪ್ರಯತ್ನಗಳನ್ನು ಸೂಚಿಸುತ್ತವೆ. 2017ರ ನವೆಂಬರ್‌ನಲ್ಲಿ ಸೇನೆಯನ್ನು ರಾಜಕಾರಣದಿಂದ ದೂರವಿಡಬೇಕು ಎಂದು ರಾವತ್ ಹೇಳಬೇಕಾಯಿತು. ರಫೇಲ್ ವ್ಯವಹಾರದ ಕುರಿತು ಎದ್ದಿರುವ ಪ್ರಶ್ನೆಗಳು ಸರಕಾರವು ಸೇನೆಯ ಬಗ್ಗೆ ಹೇಳುವುದೆಲ್ಲಾ ಟೊಳ್ಳು ಎಂಬ ಭಾವನೆಯನ್ನು ಇನ್ನಷ್ಟು ಬಲಪಡಿಸುತ್ತದೆ.
ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) 2018ರ ಮಳೆಗಾಲದ ಅಧಿವೇಶನದಲ್ಲಿ ಸರಕಾರವು ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ತನ್ನ ಪ್ರಯತ್ನವನ್ನು ಕೈ ಬಿಡಲೇಬೇಕಾಯಿತು. ಒಂದು ವೇಳೆ ಆ ತಿದ್ದುಪಡಿಗಳಿಗೆ ಅಂಗೀಕಾರ ದೊರೆತಿದ್ದಲ್ಲಿ ಅವುಗಳು ಕೇಂದ್ರ ಸರಕಾರಕ್ಕೆ ಕೇಂದ್ರೀಯ ಹಾಗೂ ರಾಜ್ಯ ಮಾಹಿತಿ ಆಯೋಗಗಳ ಆಯುಕ್ತರ ವೇತನಗಳು, ಭತ್ತೆಗಳು ಹಾಗೂ ಇತರ ಶರತ್ತುಗಳನ್ನು ಬದಲಿಸುವ ಅಧಿಕಾರ ನೀಡುತ್ತಿದ್ದವು. ಸಾಮಾಜಿಕ ಕಾರ್ಯಕರ್ತರು ಇದನ್ನು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನವೆಂಬುದನ್ನು ಮನಗಂಡರು.
ವಿಶ್ವವಿದ್ಯಾನಿಲಯ ಆಯೋಗ (ಯುಜಿಸಿ)
 ಆಗಿನ್ನೂ ಸ್ಥಾಪನೆಯಾಗಿಯೇ ಇರದ ಜಿಯೊ ಸಂಸ್ಥೆಗೆ ಜುಲೈಯಲ್ಲಿ ‘ಪ್ರತಿಷ್ಠಿತ ಸಂಸ್ಥೆ’ ಎಂಬ ಹಣೆಪಟ್ಟಿ ನೀಡುವ ಸರಕಾರದ ನಿರ್ಧಾರವು ಸರಕಾರ ಹೇಗೆ ತನ್ನ ಮೂಗಿನ ನೇರಕ್ಕೆ ಬೇಕಾದಂತೆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಲು ಪ್ರಯತ್ನಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜೂನ್‌ನಲ್ಲಿ ಸರಕಾರವು ಯುಜಿಸಿಯ ಅಧಿಕಾರವನ್ನು ಮೊಟಕುಗೊಳಿಸುವ ಕ್ರಮ ತೆಗೆದುಕೊಂಡಿತು. ಯುಜಿಸಿಯ ಸ್ಥಾನದಲ್ಲಿ ಒಂದು ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸುವ ಕುರಿತಾದ ಕರಡೊಂದನ್ನು ಅದು ಪ್ರಕಟಿಸಿತು. ಆದರೆ ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಶಿಕ್ಷಕರಿಗೆ, ನೀತಿತಜ್ಞರಿಗೆ ಹಾಗೂ ಸಂಬಂಧಿತ ಇತರರಿಗೆ ಕೇವಲ 10 ದಿನಗಳ ಕಾಲಾವಕಾಶ ನೀಡಲಾಯಿತು.
ಸರಕಾರ ತರಲು ಉದ್ದೇಶಿಸಿರುವ ಹೊಸ ಕಾಯ್ದೆಯು ಒಂದು ಸ್ವಾಯತ್ತ ಸಂಸ್ಥೆಯಾಗಿರುವ ಯುಜಿಸಿಯನ್ನು ಅಮುಖ್ಯಗೊಳಿಸಿ ಅದಕ್ಕೆ ಈಗ ಇರುವ ಅನುದಾನ ನೀಡುವ ಹಕ್ಕನ್ನೂ ಕಸಿದುಕೊಳ್ಳುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವೇ ಸಂಬಂಧಿತ ಸಂಸ್ಥೆಗಳಿಗೆ ಹಣಕಾಸು, ಅನುದಾನ ಮಂಜೂರು ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಅಂದರೆ ರಾಜಕಾರಣಿಗಳ ಮರ್ಜಿಯನ್ನವಲಂಬಿಸಿ ಎಲ್ಲವೂ ನಡೆಯಬೇಕಾಗುತ್ತದೆ.
ಕೃಪೆ: scroll.in

Writer - ರೋಹನ್ ವೆಂಕಟ ರಾಮಕೃಷ್ಣನ್

contributor

Editor - ರೋಹನ್ ವೆಂಕಟ ರಾಮಕೃಷ್ಣನ್

contributor

Similar News

ಜಗದಗಲ
ಜಗ ದಗಲ