ಕನ್ನಡ ನಾಡಿನ ಬ್ಯಾಂಕುಗಳಲ್ಲಿ ಕನ್ನಡವೇಕಿಲ್ಲ?

Update: 2018-11-15 18:53 GMT

ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರ ಪಾಲಿಸಬೇಕೆಂಬ ಕಾನೂನೊಂದಿದೆ. ಆದರೆ ಅದು ಕನ್ನಡ ನಾಡಿಗೆ ಅನ್ವಯವಾಗುವುದಿಲ್ಲವೇನೋ ಎಂಬಂತಿದೆ ಕನ್ನಡ ನಾಡಿನ ಕೆಲವು ಬ್ಯಾಂಕುಗಳ ಕನ್ನಡದ ಕಡೆಗಣನೆ. ತ್ರಿಭಾಷಾ ಸೂತ್ರವೆಂದರೆ ಹಿಂದಿ, ಇಂಗ್ಲಿಷ್ ಮತ್ತು ಆಯಾ ರಾಜ್ಯದ ಆಡಳಿತ ಭಾಷೆ.

ಸಾಮಾನ್ಯವಾಗಿ ನನ್ನಂತಹ ತುಸು ಇಂಗ್ಲಿಷ್ ಬಲ್ಲವರು ಎಟಿಎಂಗೆ ಹೋದಾಗ ಅಲ್ಲಿ ಅತೀ ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಿ ನಮ್ಮ ವ್ಯವಹಾರ ಮಾಡುತ್ತೇವೆ. ಕರ್ನಾಟಕದಲ್ಲಿರುವ ಎಟಿಎಂಗಳಲ್ಲಿ ಕಡ್ಡಾಯವಾಗಿ ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡದ ಆಯ್ಕೆಯಿರಲೇಬೇಕು. ನಾನು ಗಮನಿಸಿದಂತೆ ಕನ್ನಡ ನಾಡಿನಲ್ಲೇ ಸ್ಥಾಪನೆಯಾದ ಅದೂ ನಮ್ಮ ದಕ್ಷಿಣ ಕನ್ನಡದ ಅಮ್ಮೆಂಬಳ ಸುಬ್ಬರಾಯರೇ ಸ್ಥಾಪಿಸಿದ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ಕನ್ನಡದ ಆಯ್ಕೆಯೇ ಇಲ್ಲ. ಕನ್ನಡದ ಬದಲಾಗಿ ಹಿಂದಿ, ಇಂಗ್ಲಿಷ್ ಜೊತೆ ಮರಾಠಿ ಭಾಷೆಯ ಆಯ್ಕೆಯಿದೆ. ಒಂದು ವೇಳೆ ಮಹಾರಾಷ್ಟ್ರದ ಯಾವುದಾದರೂ ಎಟಿಎಂನಲ್ಲಿ ಮರಾಠಿಯ ಬದಲಿಗೆ ಕನ್ನಡ ಇದ್ದಿದ್ದರೆ ಪರಿಣಾಮ ಏನಾಗುತ್ತಿತ್ತು?

ಇಲ್ಲಿ ಮರಾಠಿ ಭಾಷೆಯ ಅಗತ್ಯವಾದರೂ ಏನಿದೆ? ಎಲ್ಲೋ ಬೆಳಗಾವಿಯಲ್ಲಿ ಒಂದಿಷ್ಟು ಗಡಿನಾಡಿಗರಿಗೆ ಮತ್ತು ಅಲ್ಲೋ ಇಲ್ಲೋ ಲಕ್ಷದಲ್ಲೊಬ್ಬನಿಗೆ ಬಿಟ್ಟರೆ ಕರ್ನಾಟಕದಲ್ಲಿ ಎಷ್ಟು ಮಂದಿಗೆ ಮರಾಠಿ ಅರ್ಥವಾಗುತ್ತದೆ? ಅರ್ಥವಾಗುತ್ತದೋ ಇಲ್ಲವೋ ಎನ್ನುವ ಪ್ರಶ್ನೆಯೇ ಉದ್ಭವವಾಗಬಾರದು. ನಮ್ಮ ನೆಲದಲ್ಲಿ ನಮ್ಮ ಭಾಷೆಯ ಆಯ್ಕೆ ಇರಲೇಬೇಕು.

ಇಂತಹದ್ದೇ ಇನ್ನೊಂದು ಎಟಿಎಂ ನಾನು ನೋಡಿದ್ದು ಯೂನಿಯನ್ ಬ್ಯಾಂಕಿನದ್ದು. ಇದು ತ್ರಿಭಾಷಾ ಸೂತ್ರವೆಂಬ ಬ್ಯಾಂಕಿಂಗ್ ನಿಯಮಾವಳಿಗೆ ವಿರುದ್ಧವಾದುದು.

ನಾನು ಎಟಿಎಂಗೆ ಹೋದಾಗ ಅದೆಷ್ಟೋ ಬಾರಿ ವೃದ್ಧರು, ಮಹಿಳೆಯರು ಮಾತ್ರವಲ್ಲದೇ ಯುವಕರೂ ಅವರ ಎಟಿಎಂ ಪಿನ್ ಸಂಖ್ಯೆ ಹೇಳಿ ಅವರ ಎಟಿಎಂನಿಂದ ದುಡ್ಡು ತೆಗೆಸಿದ್ದೂ ಇದೆ. ಅವರಲ್ಲಿ ನನ್ನ ಪರಿಚಿತರೂ ಅಪರಿಚಿತರೂ ಇದ್ದಾರೆ. ಗುಪ್ತವಾಗಿಡಬೇಕಾದ ಅವರ ಎಟಿಎಂ ಸಂಖ್ಯೆಯನ್ನು ಯಾರ್ಯಾರ ಬಳಿಯೋ ಬಹಿರಂಗಪಡಿಸಲು ಕಾರಣ ಅಲ್ಲಿನ ಭಾಷೆ ಅವರಿಗೆ ಅರ್ಥವಾಗದಿದ್ದುದರಿಂದ ತಾನೆ? ಹೀಗಾದರೆ ಪಿನ್ ಸಂಖ್ಯೆಯ ಗುಪ್ತತೆಗೆ ಯಾವ ಅರ್ಥವಿದೆ?

ಸಾಮಾನ್ಯವಾಗಿ ಬ್ಯಾಂಕುಗಳ ಎಸ್ಸೆಮ್ಮೆಸ್ ಅಲರ್ಟ್ ಎಂಬ ಸೌಲಭ್ಯವಿದೆ. ಅದರ ಸಂದೇಶವನ್ನು ಇಂಗ್ಲಿಷ್‌ನಲ್ಲಿಯೇ ಗ್ರಾಹಕರ ಮೊಬೈಲ್ ಫೋನ್‌ಗಳಿಗೆ ಕಳುಹಿಸಲಾಗುತ್ತದೆ. ನಮ್ಮಲ್ಲಿ ನೂರರಲ್ಲಿ ಎಂಬತ್ತು ಜನಕ್ಕೆ ಇಂಗ್ಲಿಷ್ ಓದಿ ಅರ್ಥೈಸಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಗ್ರಾಹಕರೆಂದರೆ ಎಲ್ಲರಿಗೂ ಇಂಗ್ಲಿಷ್ ತಿಳಿದಿರಬೇಕೆಂದೇನಿಲ್ಲ. ಇಂಗ್ಲಿಷ್ ತಿಳಿಯದವನಿಗೆ ಆತನಿಗೆ ಅರ್ಥವಾಗುವ ಸಾಧ್ಯತೆ ಹೆಚ್ಚಿರುವ ಭಾಷೆಯಲ್ಲೇ ಸಂದೇಶವನ್ನು ಕಳುಹಿಸಬೇಕು. ನನ್ನ ಊರಿನ, ನನ್ನ ಪರಿಚಯದ ಅದೆಷ್ಟೋ ಮಂದಿ ಅವರ ಮೊಬೈಲ್ಗೆ ಬಂದಿರುವ ಬ್ಯಾಂಕ್ ಸಂದೇಶಗಳನ್ನು ನನಗೆ ತೋರಿಸಿ ಓದಿಸಿದ್ದಿದೆ. ಹಾಗಾದರೆ ಅವರ ವ್ಯವಹಾರದ ಗುಟ್ಟುಗಳು, ಅವರ ಖಾತೆಯಲ್ಲಿರುವ ಮೊತ್ತ ಇತ್ಯಾದಿ ವಿಚಾರಗಳು ಬಹಿರಂಗಗೊಳ್ಳುತ್ತದಲ್ಲವೇ...? ಈಗೀಗ ಅತ್ಯಂತ ಸುಲಭವಾದ ಕನ್ನಡ ಸಾಫ್ಟ್‌ವೇರ್‌ಗಳಿದ್ದೂ ಯಾಕೆ ಸಂದೇಶಗಳನ್ನು ಕನ್ನಡದಲ್ಲಿ ಕಳುಹಿಸಬಾರದು. ಇ ಬ್ಯಾಂಕಿಂಗ್, ಗಣಕೀಕೃತ ಬ್ಯಾಂಕಿಂಗ್ ವ್ಯವಸ್ಥೆ ಎಂದೆಲ್ಲಾ ಜಾಹೀರಾತು ನೀಡುವ ಬ್ಯಾಂಕುಗಳಿಗೆ ತನ್ನ ಗ್ರಾಹಕರಿಗೆ ಸಂದೇಶ ಕಳುಹಿಸಲು ಕನ್ನಡ ಸಾಫ್ಟ್‌ವೇರ್ ಬಳಸಲು ಯಾಕಷ್ಟು ಕಷ್ಟ ?

ನಾನು ಅದೆಷ್ಟೋ ಬ್ಯಾಂಕುಗಳಲ್ಲಿ ಹೆಲ್ಪ್‌ಡೆಸ್ಕ್‌ಗಳನ್ನು ಗಮನಿಸುತ್ತಿರುತ್ತೇನೆ. ಅನೇಕ ಬ್ಯಾಂಕುಗಳ ಹೆಲ್ಪ್ಡೆಸ್ಕ್ ಸಿಬ್ಬಂದಿ ಅದೇ ಡೆಸ್ಕಲ್ಲಿ ಕೂತರೂ ಗ್ರಾಹಕರಿಗೆ ನಯಾ ಪೈಸೆಯ ಉಪಕಾರ ಮಾಡುವುದಿಲ್ಲ. ಹೆಲ್ಪ್ಡೆಸ್ಕ್ ನ ಉದ್ದೇಶ ಓದು ಬರಹ ತಿಳಿಯದವರಿಗೆ ಬ್ಯಾಂಕಿನ ವಿತ್‌ಡ್ರಾ ಸ್ಲಿಪ್, ಚಲನ್ ಭರ್ತಿ ಮಾಡಿಕೊಡುವುದು, ಗ್ರಾಹಕರಿಗೆ ಸೂಕ್ತ ಮಾರ್ಗದರ್ಶನ ಕೊಡುವುದು ಇತ್ಯಾದಿ. ನಾನು ನೋಡಿದ ಅದೆಷ್ಟೋ ಬ್ಯಾಂಕುಗಳಲ್ಲಿ ಹೆಲ್ಪ್ಡೆಸ್ಕ್‌ನಿಂದ ಗ್ರಾಹಕರಿಗೆ ನಯಾ ಪೈಸೆಯ ಉಪಕಾರವಾಗುವುದಿಲ್ಲ. ನನ್ನಿಂದ ಅದೆಷ್ಟೋ ವೃದ್ಧರು, ಮಹಿಳೆಯರು ಸ್ಲಿಪ್‌ಗಳನ್ನು ಬರೆಸಿದ ಧಾರಾಳ ಉದಾಹರಣೆಗಳಿವೆ. ನನ್ನಿಂದ ಬರೆಸಲು ಸರದಿಯಲ್ಲಿ ಐದಾರು ಮಂದಿ ನಿಂತಿದ್ದರೂ ಬ್ಯಾಂಕಿನ ಹೆಲ್ಪ್ಡೆಸ್ಕ್ ಸಿಬ್ಬಂದಿ ಸುಮ್ಮನೆ ಏನೋ ಗಂಭೀರ ಕೆಲಸವಿದ್ದಂತೆ ಆಚೀಚೆ ಓಡಾಡುವುದನ್ನು ನೋಡಿದ್ದೇನೆ. ಹೆಲ್ಪ್ಡೆಸ್ಕ್ ಸಿಬ್ಬಂದಿಗೆ ವ್ಯವಹಾರದ ಸಮಯದಲ್ಲಿ ಗ್ರಾಹಕರಿಗೆ ಸಹಾಯ ಮಾಡುವುದರ ಹೊರತಾದ ಬೇರ್ಯಾವ ಕೆಲಸವನ್ನೂ ನೀಡಬಾರದೆಂಬ ಕನಿಷ್ಠ ಸಾಮಾನ್ಯ ಜ್ಞಾನವಾದರೂ ಶಾಖಾ ವ್ಯವಸ್ಥಾಪಕರಿಗಿರಬೇಕು ಮತ್ತು ಕಡ್ಡಾಯವಾಗಿ ಅವರು ಗ್ರಾಹಕರಿಗೆ ಅವರ ವ್ಯವಹಾರದಲ್ಲಿ ಸಹಕರಿಸುವಂತೆ ಆಜ್ಞೆ ನೀಡಬೇಕು. ಅದೆಷ್ಟೋ ಬಾರಿ ಹೊರರಾಜ್ಯದ ಕನ್ನಡ ಭಾಷೆ ತೀರಾ ತಿಳಿಯದ ಸಿಬ್ಬಂದಿಯನ್ನು ಹೆಲ್ಪ್‌ಡೆಸ್ಕಿನಲ್ಲಿ ಕೂರಿಸಲಾಗುತ್ತದೆ. ಗ್ರಾಹಕನೊಂದಿಗೆ ಮಾತನಾಡಲೂ ಅರಿಯದವನನ್ನು ಹೆಲ್ಪ್ಡೆಸ್ಕ್ ನಲ್ಲಿ ಕೂರಿಸುವುದು ಯಾವ ಪುರುಷಾರ್ಥಕ್ಕೆ?

ಭಾರತದ ಯಾವುದೇ ರಾಜ್ಯದ ವ್ಯಕ್ತಿಯನ್ನು ದೇಶದ ಯಾವುದೇ ಭಾಗದಲ್ಲಿ ಉದ್ಯೋಗಕ್ಕೆ ನೇಮಕ ಮಾಡಬಹುದು. ಆದರೆ ಹಾಗೆ ನೇಮಕ ಮಾಡುವ ಮುಂಚೆ ಅವರಿಗೆ ಆಯಾ ರಾಜ್ಯದ ಭಾಷೆಯಲ್ಲಿ ಕನಿಷ್ಠ ಮಾತನಾಡಲು ಸಾಧ್ಯವಾಗಬಲ್ಲಷ್ಟು ತರಬೇತಿ ನೀಡಬೇಕು. ಪ್ರಸ್ತುತ ನಮ್ಮ ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಯಲು ಬೇಕಾದ ಬ್ರಿಡ್ಜ್ ಕೋರ್ಸ್‌ಗಳಿವೆ. ಬ್ಯಾಂಕು ಸಿಬ್ಬಂದಿಗೆ ಕನಿಷ್ಠ ಆ ಬ್ರಿಡ್ಜ್‌ಕೋರ್ಸಾದರೂ ಇಟ್ಟು ಕನ್ನಡ ಕಲಿಸಬಹುದಲ್ಲವೇ..? ಅನೇಕ ಬ್ಯಾಂಕುಗಳಲ್ಲಿ ಮ್ಯಾನೇಜರ್‌ನಂತಹ ಉನ್ನತ ಹುದ್ದೆಯಲ್ಲಿ ಅನೇಕ ಹೊರರಾಜ್ಯದವರಿರುತ್ತಾರೆ. ಅವರಿಗೆ ಪ್ರಾದೇಶಿಕ ಭಾಷೆ ಒಂದಿನಿತೂ ತಿಳಿದಿರುವುದಿಲ್ಲ. ಆತ ಗ್ರಾಹಕರೊಂದಿಗೆ ವ್ಯವಹರಿಸಲು ಪ್ರತೀ ಬಾರಿಯೂ ದುಭಾಷಿಯನ್ನು ಅವಲಂಬಿಸಬೇಕಾಗುತ್ತದೆ.
ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಬ್ಯಾಂಕುಗಳಲ್ಲಿ ಕನ್ನಡ ಅಳವಡಿಕೆಗೆ ಬೇಕಾದ ಅಗತ್ಯ ಕ್ರಮ ಕೈ ಗೊಳ್ಳಬೇಕಾಗಿದೆ.
ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಬ್ಯಾಂಕ್ ಆಡಳಿತಗಾರರು ಸೂಕ್ತ ಪರಿಹಾರವನ್ನು ಶೀಘ್ರ ಒದಗಿಸಬೇಕು.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News