ಮೈಸೂರು ಮನಪಾ ಮೇಯರ್ ಸ್ಥಾನಕ್ಕಾಗಿ ಗುದ್ದಾಟ: ತೀವ್ರ ಕುತೂಹಲ ಕೆರಳಿಸಿದ ವರಿಷ್ಠರ ನಡೆ
ಮೈಸೂರು,ನ.16: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು ಮಹಾನಗರ ಪಾಲಿಕೆ ಚುನಾವಣಗೆ ಕ್ಷಣಗಣನೆ ಆರಂಭವಾಗಿದ್ದು, ಮಹಾಪೌರರ ಸ್ಥಾನ ಮೈತ್ರಿ ಪಕ್ಷದಲ್ಲಿ ಯಾವ ಪಕ್ಷಕ್ಕೆ ಎಂಬುದು ಇನ್ನೂ ನಿಗೂಢವಾಗಿದ್ದು, ಎಲ್ಲರ ದೃಷ್ಟಿ ರಾಜಧಾನಿ ಬೆಂಗಳೂರಿನತ್ತ ನೆಟ್ಟಿದೆ.
ಮೇಯರ್ ಆಯ್ಕೆ ಸಂಬಂದ ಕಳೆದ ಮೂರು ದಿನಗಳಿಂದಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರುಗಳು ಪ್ರತ್ಯೆಕ ಸಭೆಗಳನ್ನು ನಡೆಸಿ ಸದಸ್ಯರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಬೇಕು ಎಂದು ಹೇಳಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೇಳಿಕೆ ಜೆಡಿಎಸ್ ಪಕ್ಷದ ಮುಖಂಡರಲ್ಲಿ ಸಂಚಲನವನ್ನುಂಟುಮಾಡಿದೆ.
ಸಿದ್ದರಾಮಯ್ಯ ಮೈಸೂರಿಗೆ ಬರುತ್ತಿದ್ದಂತೆ ಅತ್ತ ಜೆಡಿಎಸ್ ಪಾಲಿಕೆ ಸದಸ್ಯರು ರೆಸಾರ್ಟ್‍ಗಳಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆಯಬೇಕು ಎಂದು ಹಠಕ್ಕೆ ಬಿದ್ದಿರುವ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ತಮ್ಮ ಪಕ್ಷದ ಮುಖಂಡರುಗಳಿಗೆ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನಬೇಕು ಎಂದು ಪಟ್ಟು ಹಿಡಿಯುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
ತನ್ವೀರ್-ಸಾ.ರಾ.ಮಾತುಕತೆ: ಈ ಮಧ್ಯೆ ಶುಕ್ರವಾರ ಶಾಸಕ ತನ್ವೀರ್ ಸೇಠ್ ಅವರು ಸಚಿವ ಸಾ.ರಾ.ಮಹೇಶ್ ಅವರ ಕಚೇರಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರವನ್ನು ಜೆಡಿಎಸ್ ಪಕ್ಷಕ್ಕೆ ನೀಡಿದ್ದೇವೆ. ಜಿಲ್ಲೆಯಲ್ಲಿ ಇಬ್ಬರು ಜೆಡಿಎಸ್ ಪಕ್ಷದ ಸಚಿವರಿದ್ದಾರೆ. ಹಾಗಾಗಿ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಿ ಎಂದು ಕೇಳಿದ್ದೇವೆ. ಇಂದು ರಾತ್ರಿ ಉಭಯ ಪಕ್ಷಗಳ ನಾಯಕರುಗಳು ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಜೆಡಿಎಸ್ ಹೋಗುವುದಿಲ್ಲ ಎಂದು ಹೇಳಿದರು.
ಸಚಿವ ಸಾ.ರಾ.ಮಹೇಶ್ ಮಾತನಾಡಿ, ಈಗಾಗಲೇ ಸ್ಥಳೀಯ ನಾಯಕರ ಮತ್ತು ಪಾಲಿಕೆ ಸದಸ್ಯರ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸಲಾಗಿದೆ. ಅವರ ತೀರ್ಮಾನವೇ ಅಂತಿಮ, ಯಾರಿಗೂ ಹೆದರಿ ನಮ್ಮ ಸದಸ್ಯರು ರೆಸಾರ್ಟ್‍ಗೆ ಹೋಗಿಲ್ಲ ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯ 65 ಸದಸ್ಯ ಸ್ಥಾನಗಳಲ್ಲಿ ಬಿಜೆಪಿ 22 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್-19, ಜೆಡಿಎಸ್-18, ಬಿಎಸ್‍ಪಿ-1, ಪಕ್ಷೇತರರು ಐದು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
18 ಸ್ಥಾನ ಪಡೆದಿರುವ ಜೆಡಿಎಸ್ ಮಿತ್ರ ಪಕ್ಷ ಬಿಎಸ್ಪಿ ಸದಸ್ಯರೊಬ್ಬರ ಬೆಂಬಲ ಸೇರಿ 19ಕ್ಕೆ ತನ್ನ ಬಲ ಹೆಚ್ಚಿಸಿಕೊಂಡಿದೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಂದೇಶ್ ನಾಗರಾಜ್ ಅವರ ಬೆಂಬಲದಿಂದ ಜೆಡಿಎಸ್ ಬಲ 23 ಆಗಿದೆ.
ಈ ಮಧ್ಯೆ ಜೆಡಿಎಸ್ ಗೆ ಸೆಡ್ಡು ಹೊಡೆಯಲು ಮುಂದಾಗಿರುವ ಕಾಂಗ್ರೆಸ್ ಇಬ್ಬರು ಪಕ್ಷೇತರರ ಬಲವನ್ನು ಪಕ್ಕಾ ಮಾಡಿಕೊಂಡಿದೆ. ಇದಲ್ಲದೆ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ ಹಾಗೂ ಶಾಸಕ ತನ್ವೀರ್ ಸೇಠ್ ಸೇರಿ ಕಾಂಗ್ರೆಸ್ ಬಲ 25ಕ್ಕೆ ಏರಿದೆ.
ಒಟ್ಟಾರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಮೇಯರ್ ಸ್ಥಾನ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ವರಿಷ್ಠರ ತೀರ್ಮಾನವೇ ಅಂತಿಮವಾಗಲಿದ್ದು, ಯಾವ ಪಕ್ಷ ಮೇಯರ್ ಪಟ್ಟವನ್ನು ಅಲಂಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.