ಸಿಮ್ ಸ್ವಾಪ್ ವಂಚನೆಯ ಬಗ್ಗೆ ಗೊತ್ತೇ?

Update: 2018-11-16 18:35 GMT

ಯಾರಾದರೂ ನಿಮ್ಮ ಮೊಬೈಲ್‌ಗೆ ಕರೆ ಮಾಡಿ, ನಿಮ್ಮ ಸಿಮ್ ಕಾರ್ಡ್‌ನ್ನು ಅಪ್‌ಡೇಟ್ ಮಾಡದಿದ್ದರೆ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ತಿಳಿಸಿದರೆ ತುಂಬ ಎಚ್ಚರಿಕೆ ಯಿಂದಿರಿ. ಏಕೆಂದರೆ ಇಂತಹ ಕರೆಯು ಸಿಮ್ ಸ್ವಾಪ್ ಅಥವಾ ಸಿಮ್ ಬದಲಾವಣೆ ವಂಚನೆಯ ಜಾಲದೊಳಗೆ ನಿಮ್ಮನ್ನು ಕೆಡವಬಹುದು. ಇದು ಭಾರತದಾದ್ಯಂತ ಹಲವರನ್ನು ದೋಚುತ್ತಿರುವ ಅತ್ಯಂತ ಸಾಮಾನ್ಯ ಸೈಬರ್ ವಂಚನೆಗಳಲ್ಲೊಂದಾಗಿದೆ. ಇತ್ತೀಚೆಗಷ್ಟೇ ಪುಣೆಯ ನಿವಾಸಿಯೋರ್ವರು ಸಿಮ್ ಬದಲಾವಣೆ ವಂಚನೆಯಿಂದಾಗಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 93,500 ರೂ.ಗಳನ್ನು ಕಳೆದುಕೊಂಡಿದ್ದಾರೆ.
ಡಿಜಿಟಲ್ ನಿರಕ್ಷರಸ್ಥರು ಮಾತ್ರ ಇಂತಹ ವಂಚನೆಗಳಿಗೆ ಬಲಿಯಾಗುತ್ತಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು ಗ್ರಹಿಕೆಯಾಗುತ್ತದೆ. ತಂತ್ರಜ್ಞಾನ ಕೌಶಲ್ಯ ಹೊಂದಿರುವ ಹಲವಾರು ನಗರ ಪ್ರದೇಶಗಳ ಯುವಜನರೂ ಈ ವಂಚನೆಗೆ ಬಲಿಯಾಗಿ ಹಣವನ್ನು ಕಳೆದುಕೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಸ್ವಿಮ್ ಸ್ವಾಪ್ ವಂಚನೆಯನ್ನೆಸಗಲು ಕ್ರಿಮಿನಲ್‌ಗಳು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ವಂಚನೆಯನ್ನು ತಡೆಯಲು ನಿಮಗೆ ತಿಳಿದಿರಬೇಕಾದ ಮಾಹಿತಿಗಳಿಲ್ಲಿವೆ.
 ಸಿಮ್ ಸ್ವಾಪ್, ಸರಳವಾಗಿ ಹೇಳುವುದಾದರೆ ಹೊಸ ಸಿಮ್ ಕಾರ್ಡ್‌ನ್ನು ನಿಮ್ಮ ಫೋನ್ ನಂಬರ್ ಜೊತೆಗೆ ನೋಂದಾಯಿಸುವ ಕಾನೂನುಬದ್ಧ ಪ್ರಕ್ರಿಯೆಯಾಗಿದೆ. 2ಜಿಯಿಂದ 3ಜಿ ಅಥವಾ 4ಜಿಗೆ ವರ್ಗಾವಣೆಗೊಂಡಾಗ ನೀವೂ ಈ ಪ್ರಕ್ರಿಯೆ ಕೈಗೊಂಡಿದ್ದೀರಿ ಎನ್ನುವುದು ನಿಮಗೆ ನೆನಪಿರಬಹುದು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಹಳೆಯ ಸಿಮ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ನಿಮ್ಮ ಫೋನ್ ಯಾವುದೇ ಸಂಕೇತಗಳನ್ನು ಸ್ವೀಕರಿಸುವುದಿಲ್ಲ. ವಂಚಕರಿಗೆ ನಿಮ್ಮ ಫೋನ್ ನಂಬರ್ ಸಿಕ್ಕಿದ್ದರೆ ಅವರು ತಮ್ಮ ಸಿಮ್ ಕಾರ್ಡ್‌ಗೆ ಒಂದು ಬಾರಿಯ ಪಾಸ್‌ವರ್ಡ್(ಒಟಿಪಿ)ಗಳನ್ನು ಪಡೆದುಕೊಳ್ಳುತ್ತಾರೆ. ಇದರೊಂದಿಗೆ ಅವರು ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಾರೆ ಮತ್ತು ಒಟಿಪಿಗಳನ್ನು ಪಡೆದುಕೊಂಡ ಬಳಿಕ ಆನ್ ಲೈನ್ ಶಾಪಿಂಗ್‌ನ್ನೂ ಮಾಡಬಹುದು.
ಈ ವಂಚನೆಯು ಒಂದು ಫೋನ್ ಕರೆಯೊಂದಿಗೆ ಆರಂಭ ವಾಗುತ್ತದೆ. ನೀವು ಯಾವ ಕಂಪೆನಿಯ ಸಿಮ್ ಬಳಸುತ್ತಿದ್ದೀರೋ ಆ ಕಂಪೆನಿಯ ಅಧಿಕಾರಿಯೆಂದು ಹೇಳಿಕೊಳ್ಳುವ ವ್ಯಕ್ತಿ(ಪುರುಷ ಅಥವಾ ಮಹಿಳೆ) ಕಾಲ್ ಡ್ರಾಪ್ ಸಮಸ್ಯೆಯನ್ನು ಕಡಿಮೆ ಮಾಡಲು ಅಥವಾ ನಿಮ್ಮ ಫೋನ್‌ಗೆ ಸಂಕೇತಗಳು ಇನ್ನಷ್ಟು ಚೆನ್ನಾಗಿ ದೊರೆಯುವಂತೆ ಮಾಡುವ ಉದ್ದೇಶದಿಂದ ಇದೊಂದು ಮಾಮೂಲು ಕರೆಯಾಗಿದೆಯೆಂದು ನಿಮಗೆ ತಿಳಿಸುತ್ತಾನೆ. ನಿಮಗೆ ಹಚ್ಚಿನ ಮೊಬೈಲ್ ಡಾಟಾ ಒದಗಿಸುವ ಅಥವಾ ನಿಮ್ಮ ಮೊಬೈಲ್ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಭರವಸೆಯನ್ನೂ ನಿಮಗೆ ನೀಡಬಹುದು ಅಥವಾ 4ಜಿ ಸಿಮ್ ಕಾರ್ಡ್‌ಗೆ ಬದಲಾಗುವಂತೆ ನಿಮಗೆ ಸರಳವಾದ ‘ಮಾರ್ಗದರ್ಶನ’ ನೀಡಬಹುದು.
ಇಂತಹ ಮಾತುಗಳನ್ನಾಡುತ್ತಲೇ ಕರೆ ಮಾಡಿದ ವ್ಯಕ್ತಿ ನಿಮ್ಮ ವಿಶಿಷ್ಟವಾದ 20 ಅಂಕಿಗಳ ಸಿಮ್ ನಂಬರ್ ಪಡೆದುಕೊಳ್ಳಲು ಹಲವಾರು ವಿಧಗಳಲ್ಲಿ ಯತ್ನಿಸುತ್ತಾನೆ. ನಿಮ್ಮ ಸಿಮ್ ಕಾರ್ಡ್‌ನ ಹಿಂಭಾಗದಲ್ಲಿ ಈ 20 ಅಂಕಿಗಳಿರುತ್ತವೆ. ಕಾಲ್ ಡ್ರಾಪ್‌ಗಳನ್ನು ಕಡಿಮೆಗೊಳಿಸುವ ಅಥವಾ ಮೇಲೆ ತಿಳಿಸಿದ ಇತರ ಯಾವುದೇ ಇಚ್ಛಿತ ಸೇವೆಗಾಗಿ ಈ 20 ಅಂಕಿಗಳ ಸಂಖ್ಯೆಯನ್ನು ಫೋನ್ ನಂಬರೊಂದರ ಜೊತೆ ಹಂಚಿಕೊಳ್ಳುವಂತೆ ನಿಮ್ಮನ್ನು ಓಲೈಸಲು ಆತ ಪ್ರಯತ್ನಿಸುತ್ತಾನೆ.
ಈ ವಿಶಿಷ್ಟ ಸಂಖ್ಯೆಯನ್ನು ಹಂಚಿಕೊಳ್ಳಲು ನಿಮ್ಮನ್ನು ಮನದಟ್ಟು ಮಾಡಿದ ಬಳಿಕ ಸ್ವಿಮ್ ಸ್ವಾಪ್‌ನ್ನು ಅಧಿಕೃತಗೊಳಿಸಲು 1ನ್ನು ಒತ್ತುವಂತೆ ನಿಮಗೆ ತಿಳಿಸುತ್ತಾನೆ. ನಿಮ್ಮಿಂದ ವಿಶಿಷ್ಟ ಸಂಖ್ಯೆಯನ್ನು ಪಡೆದುಕೊಂಡ ಬಳಿಕ ಆತ ನಿಮಗೆ ಸೇವೆಯನ್ನು ಒದಗಿಸುತ್ತಿರುವ ಟಿಲಿಕಾಂ ಕಂಪೆನಿಯೊಂದಿಗೆ ಸಿಮ್ ಸ್ವಾಪ್ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸುತ್ತಾನೆ. ಇದರೊಂದಿಗೆ ನೀವು ಸಿಮ್ ಸ್ವಾಪ್‌ಗೆ ಚಾಲನೆ ನೀಡಿದ್ದೀರೆಂದು ಕಂಪೆನಿಯು ತಿಳಿದುಕೊಳ್ಳುತ್ತದೆ, ಆದರೆ ಹೈಜಾಕರ್ ನಿಮ್ಮ ಪೋನ್ ಸಂಖ್ಯೆಯನ್ನು ಪಡೆದುಕೊಳ್ಳ್ಳುವಲ್ಲಿ ಯಶಸ್ವಿಯಾಗುತ್ತಾನೆ.
ಸಿಮ್ ಬದಲಾವಣೆ ಯಶಸ್ವಿಯಾದಾಗ ನಿಮ್ಮ ಸಿಮ್ ಕಾರ್ಡ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ನಿಮ್ಮ ಫೋನ್‌ಗೆ ಸಿಗ್ನಲ್‌ಗಳು ದೊರೆಯುವುದಿಲ್ಲ. ಅತ್ತ ವಂಚಕನ ಹೊಸ ಸಿಮ್ ಕಾರ್ಡ್ ನಿಮ್ಮ ಮೊಬೈಲ್ ನಂಬರ್‌ನೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಿಗ್ನಲ್‌ಗಳನ್ನು ಪಡೆಯುತ್ತಿರುತ್ತದೆ.
   ಪ್ರಾಥಮಿಕವಾಗಿ ಸಿಮ್ ಬದಲಾವಣೆ ವಂಚನೆಯು ಎರಡು ಹಂತಗಳ ಪ್ರಕ್ರಿಯೆಯಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ವಂಚಕ ಅದಾಗಲೇ ನಿಮ್ಮ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುತ್ತಾನೆ. ಅವನಿಗೆ ಬೇಕಾಗಿರುವುದು ಹಣಕಾಸು ವಹಿವಾಟುಗಳನ್ನು ನಡೆಸಲು ನೀವು ನಿಮ್ಮ ನೋಂದಾಯಿತ ಮೊಬೈಲ್‌ನಲ್ಲಿ ಸ್ವೀಕರಿಸುವ ಒಟಿಪಿ ಮಾತ್ರ.
ನಿಮ್ಮ ಬ್ಯಾಂಕಿಂಗ್ ವಿವರಗಳು ವಂಚಕರಿಗೆ ಹೇಗೆ ಗೊತ್ತಾಗುತ್ತವೇ ಎಂಬ ಅಚ್ಚರಿಯೇ? ಫಿಶಿಂಗ್ ದಾಳಿಗಳ ಮೂಲಕ ಈ ವಂಚನೆ ನಡೆಯುತ್ತದೆ. ನೀವು ನಿಮ್ಮ ಬ್ಯಾಂಕ್‌ನ ವೆಬ್‌ಸೈಟ್‌ನ್ನೇ ಹೋಲುವ ನಕಲಿ ವೆಬ್‌ಸೈಟ್ ಪ್ರವೇಶಿಸಿದರೆ ನಿಮ್ಮ ಎಲ್ಲ ವಿವರಗಳೂ ವಂಚಕರ ಪಾಲಾಗಿರುತ್ತವೆ.
ವಂಚಕರು ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳಬಹುದು. ಫೋನ್‌ನಲ್ಲಿ ಯಾರೊಂದಿಗೂ ಎಂದಿಗೂ ಈ ಸಂಖ್ಯೆಯನ್ನು ಹಂಚಿಕೊಳ್ಳಬೇಡಿ. ವಂಚಕರಿಗೆ ನಿಮ್ಮ ಫೋನ್ ನಂಬರ್ ಮತ್ತು ಆಧಾರ್ ಸಂಖ್ಯೆ ಎರಡೂ ದೊರೆತರೆ ವಂಚನೆಗೆ ನೀವೇ ಆಹ್ವಾನ ನೀಡಿದಂತಾಗುತ್ತದೆ. ಇಂದಿನ ದಿನಗಳಲ್ಲಿ ಇವೆರಡೂ ಸಂಖ್ಯೆಗಳನ್ನು ಬಳಸಿ ಹಲವಾರು ಸೇವೆಗಳನ್ನು ಪಡೆದುಕೊಳ್ಳಬಹುದು ಮತ್ತು ವಂಚಕರ ಕೈಗೆ ನಿಮ್ಮ ಪೋನ್ ನಂಬರ್ ಮತ್ತು ಆಧಾರ್ ಸಂಖ್ಯೆ ಸಿಕ್ಕಿದರೆ ಅದು ಗಂಭೀರ ಗುರುತು ಕಳ್ಳತನವಾಗುತ್ತದೆ.

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ