ಟಿಪ್ಪು ಕಾಲದ ವಿದ್ಯಮಾನಗಳು

Update: 2018-11-17 12:49 GMT

ಕರ್ನಾಟಕದ ಇತಿಹಾಸದಲ್ಲಿ ಇಸ್ಲಾಂ ಮತ್ತು ಹಿಂದೂ ಧರ್ಮಗಳ ನಡುವೆ ಸಂಘರ್ಷದ ಬದಲಾಗಿ ಶೈವ-ವೈಷ್ಣವ, ವೈಷ್ಣವ- ಜೈನ, ಜೈನ-ಬೌದ್ಧ, ಜೈನ-ಲಿಂಗಾಯತರ ನಡುವಿನ ಘರ್ಷಣೆಗಳ ಘೋರ ಕತೆಗಳಿವೆ. ಇಂಗ್ಲೆಂಡ್ ತನ್ನ ವಿಸ್ತೀರ್ಣದ 96 ಪಟ್ಟು ಹೆಚ್ಚಿನ ಭೂಭಾಗವನ್ನು ಜಗತ್ತಿನಾದ್ಯಂತ ವಸಾಹತಾಗಿ ಹೊಂದಿತ್ತು. ಅಂತಹ ಸೂರ್ಯ ಮುಳುಗದ ಸಾಮ್ರಾಜ್ಯದ ವಿರುದ್ಧ ನಮ್ಮ ಮೈಸೂರು, ನಮ್ಮ ಹೈದರ್-ಟಿಪ್ಪು ಸತತ 4 ಯುದ್ಧಗಳನ್ನು ಮಾಡಿದರೆಂಬುದು ತಮಾಷೆಯ ಮಾತಲ್ಲ. ಇವರ ಕಾಲದಲ್ಲಿ ಮೈಸೂರು ರಾಜ್ಯದ ಜನಸಂಖ್ಯೆ ಅಂದಾಜು 29 ಲಕ್ಷ ಎನ್ನಲಾಗಿದೆ. ಅದರಲ್ಲಿ ಒಂದೂವರೆ ಲಕ್ಷದಷ್ಟು ಸೇನೆ, ಒಂದು ಲಕ್ಷದಷ್ಟು ಕಂದಾಚಾರ ಪಡೆ, ಒಂದು ಲಕ್ಷದಷ್ಟು ಕುಶಲಕರ್ಮಿಗಳು, 80 ಸಾವಿರ ಜನ ವಸ್ತ್ರೋದ್ಯಮದಲ್ಲಿ, ಉಳಿದವರು ಕೃಷಿ ಆರ್ಥಿಕತೆಯಲ್ಲಿದ್ದವರು. 30 ಲಕ್ಷ ಎಕರೆ ಕೃಷಿ ಭೂಮಿ, 8 ಲಕ್ಷ ಎಕರೆ ನೀರಾವರಿ, 3.40 ಲಕ್ಷ ನೇಗಿಲುಗಳಿದ್ದ ಗ್ರಾಮೀಣ ಕೃಷಿ ಆರ್ಥಿಕತೆ ಅದು.

ಟಿಪ್ಪು ಸುಲ್ತಾನ್ ಮತ್ತು ಹೈದರಲಿ ಕುರಿತಂತೆ ವಿವರವಾಗಿ ಮಾತನಾಡಬೇಕಾದ ಸಂದರ್ಭವೊಂದು ಸೃಷ್ಟಿಯಾಗುತ್ತಿದೆ. ಟಿಪ್ಪು ಸುಲ್ತಾನನ ಆಡಳಿತ ಕಾಲದ ವಿದ್ಯಮಾನಗಳು ಮತ್ತು ಕೊಡುಗೆಗಳ ಬಗ್ಗೆ ಚರ್ಚಿಸುವಾಗ ಅವನು ಯಾವ ಪರಂಪರೆಯ ಮುಂದುವರಿಕೆಯೆಂದು ನೋಡುವುದು ಸಹ ಉತ್ತಮ. ಮೈಸೂರು ಸಂಸ್ಥಾನದಲ್ಲಿ ಚಿಕ್ಕದೇವರಾಜ ಒಡೆಯರ್ ಸ್ಥಳೀಯ ಪಾಳೇಗಾರರನ್ನು ಬಗ್ಗುಬಡಿದು ಹೊಸದೊಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆ ತರುವ ಯತ್ನ ಆರಂಭಿಸುತ್ತಾರೆ. ಹೊಸ ತೆರಿಗೆ ಪದ್ಧತಿ, ಭೂಕಂದಾಯ, ಮಿಲಿಟರಿ, ಆಡಳಿತ ವಿಧಾನಗಳಿಂದ ತನ್ನ ಹತೋಟಿ ಬಿಗಿಗೊಳಿಸಿಕೊಳ್ಳುತ್ತಾರೆ. ಇದಕ್ಕೊಂದು ಹಿನ್ನೆಲೆಯೂ ಇತ್ತು. ಅಹಮದ್ ನಗರದ ಮಲ್ಲಿಕ್ (ಅಂಬರ್ 1549-1626), ಅಕ್ಬರ್‌ನ ಹಣಕಾಸು ಸಚಿವ ತೋಡರ್ ಮಲ್ (16 ನೇ ಶತಮಾನ’, ಕೆಳದಿಯ ಶಿವಪ್ಪ ನಾಯಕ (1645-1660), ಬಿಜಾಪುರದ 2ನೇ ಅದಿಲ್ ಷಾ (1627-1656) ಮತ್ತು ಸವಣೂರಿನ ನವಾಬ ಅಬ್ದುಲ್ ಮಜೀದ್ ಖಾನ್ (1725-1754) ಇವರೆಲ್ಲರೂ ಬೇರೆ ಬೇರೆ ಸಮಯದಲ್ಲಿ ಈ ಹೊಸ ಆಡಳಿತ ಪದ್ಧತಿಯ ರೂವಾರಿಗಳು ಮತ್ತು ಫಲಾನುಭವಿಗಳೂ ಹೌದು. ಮೈಸೂರಿನಲ್ಲಿ ಚಿಕ್ಕದೇವರಾಯ ಆರಂಭಿಸಿದ ಈ ಬದಲಾವಣೆಯು ಒಂದು ಶತಮಾನದ ನಂತರ ಹೈದರನ ಮೂಲಕ ಮುಂದುವರಿಯಿತು. ರೈತಾಪಿ ಮತ್ತು ಕುಶಲಕರ್ಮಿಗಳ ರಕ್ತ ಕುಡಿಯುತ್ತಿದ್ದ ಸ್ಥಳೀಯ ಚಿಕ್ಕ ಪಾಳೇಗಾರರನ್ನೆಲ್ಲ ಬಡಿದು ಒಂದು ವಿಶಾಲ ಕೇಂದ್ರೀಕೃತ ಶಿಸ್ತುಬದ್ಧ ಆಡಳಿತ ಏರ್ಪಡುವ ಪ್ರಕ್ರಿಯೆ ಮೊದಲಾಯಿತು. ಇತಿಹಾಸಕಾರರು ಇವರನ್ನೆಲ್ಲ ’ಕಾಗಜ್ ಸುಲ್ತಾನ’ ರೆಂದು ಬ್ರಾಂಡ್ ಮಾಡುತ್ತಾರೆ. ಅಂದರೆ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳೆಲ್ಲವೂ ದಾಖಲೆಯಲ್ಲಿರುವಂತಹ ಪದ್ಧ್ದತಿ ಅದು. ಹೈದರನ ಕಾಲದಲ್ಲಿ ನವಾಬಗಿರಿ, ದಿವಾನಗಿರಿ, ಅಮಲ್ದಾರಿಗಿರಿ ಇದ್ದಂತೆಯೆ ‘ಬರಕೋಗಿರಿ ’ ಅನ್ನುವುದು ಒಂದು ಪ್ರಮುಖ ಸರಕಾರಿ ಹುದ್ದೆ. (ನಮ್ಮ ಕಾಲದ ಸ್ಟೆನೋ ಇದ್ದಂತೆ) ಹೈದರ್ ತನ್ನ ಆದೇಶಗಳನ್ನು ಡಿಕ್ಟೇಶನ್ ಕೊಡಬೇಕು, ಬರಕೋಗಿರಿಯ ಗುಮಾಸ್ತ ಅವನ್ನೆಲ್ಲ ಬರೆದು ಪ್ರತಿ ಮಾಡಿ ಸಂಬಂಧಪಟ್ಟವರಿಗೆ ತಲುಪಿಸಬೇಕು..ಹೀಗೆ.. ಇವರೆಲ್ಲರಿಂದಾಗಿ 17-18 ನೇ ಶತಮಾನದಲ್ಲಿ ಕಾಗದದ ತಯಾರಿ ಹಾಗೂ ಮಾರಾಟವೂ ಒಂದು ಪ್ರಮುಖ ಉದ್ದಿಮೆಯಾಗಿ ಬೆಳೆದಿತ್ತು. ಬಂಗಾಳ, ಬಿಹಾರ, ಕಾಶ್ಮೀರ, ಸಿಯಾಲ್ಕೋಟ್, ಲಾಹೋರ್, ರಾಜಗೀರ್, ಔರಂಗಾಬಾದ್, ಅಹಮದ್ ನಗರ್ ಇವೆಲ್ಲ ಆಗ ಕಾಗದ ತಯಾರಿಕಾ ಕಾರ್ಖಾನೆಗಳಿದ್ದ ಕೇಂದ್ರಗಳಾಗಿದ್ದವು. ಆಡಳಿತದಲ್ಲಿ ಒಂದು ಶಿಸ್ತುಬದ್ಧ ಕ್ರಮವಿತ್ತೆನ್ನಲು ಇದೇ ಪುರಾವೆ. ಪ್ರಭುತ್ವವೇ ಆಗ ಕಾಗದದ ಪ್ರಧಾನ ಬಳಕೆದಾರ.. ಪ್ರಮುಖ ನಗರಗಳಲ್ಲಿ ಕಾಗಜ್ ಪುರ್ ಎಂಬ ಏರಿಯಾಗಳೇ ಇರುತ್ತಿದ್ದವಂತೆ. ದಿಲ್ಲಿಯಲ್ಲಿ ಈಗಲೂ ಕಾಗಜ್ ಪುರ್ ಹೆಸರಿನ ಪುರಾತನ ಬಡಾವಣೆ ಯೊಂದಿದೆ ಎಂದು ಓದಿದ ನೆನಪು.

ಕರ್ನಾಟಕದ ಇತಿಹಾಸದಲ್ಲಿ ಇಸ್ಲಾಂ ಮತ್ತು ಹಿಂದೂ ಧರ್ಮಗಳ ನಡುವೆ ಸಂಘರ್ಷದ ಬದಲಾಗಿ ಶೈವ-ವೈಷ್ಣವ, ವೈಷ್ಣವ- ಜೈನ, ಜೈನ-ಬೌದ್ಧ, ಜೈನ-ಲಿಂಗಾಯತರ ನಡುವಿನ ಘರ್ಷಣೆಗಳ ಘೋರ ಕತೆಗಳಿವೆ. ಇಂಗ್ಲೆಂಡ್ ತನ್ನ ವಿಸ್ತೀರ್ಣದ 96 ಪಟ್ಟು ಹೆಚ್ಚಿನ ಭೂಭಾಗವನ್ನು ಜಗತ್ತಿನಾದ್ಯಂತ ವಸಾಹತಾಗಿ ಹೊಂದಿತ್ತು. ಅಂತಹ ಸೂರ್ಯ ಮುಳುಗದ ಸಾಮ್ರಾಜ್ಯದ ವಿರುದ್ಧ ನಮ್ಮ ಮೈಸೂರು, ನಮ್ಮ ಹೈದರ್-ಟಿಪ್ಪು ಸತತ 4 ಯುದ್ಧಗಳನ್ನು ಮಾಡಿದರೆಂಬುದು ತಮಾಷೆಯ ಮಾತಲ್ಲ. ಇವರ ಕಾಲದಲ್ಲಿ ಮೈಸೂರು ರಾಜ್ಯದ ಜನಸಂಖ್ಯೆ ಅಂದಾಜು 29 ಲಕ್ಷ ಎನ್ನಲಾಗಿದೆ. ಅದರಲ್ಲಿ ಒಂದೂವರೆ ಲಕ್ಷದಷ್ಟು ಸೇನೆ, ಒಂದು ಲಕ್ಷದಷ್ಟು ಕಂದಾಚಾರ ಪಡೆ([native militia]), ಒಂದು ಲಕ್ಷದಷ್ಟು ಕುಶಲಕರ್ಮಿಗಳು, 80 ಸಾವಿರ ಜನ ವಸ್ತ್ರೋದ್ಯಮದಲ್ಲಿ, ಉಳಿದವರು ಕೃಷಿ ಆರ್ಥಿಕತೆಯಲ್ಲಿದ್ದವರು. 30 ಲಕ್ಷ ಎಕರೆ ಕೃಷಿ ಭೂಮಿ, 8 ಲಕ್ಷ ಎಕರೆ ನೀರಾವರಿ, 3.40 ಲಕ್ಷ ನೇಗಿಲುಗಳಿದ್ದ ಗ್ರಾಮೀಣ ಕೃಷಿ ಆರ್ಥಿಕತೆ ಅದು. (ಆಗ ಕೆಲಕಾಲ ನೇಗಿಲುಗಳ ಲೆಕ್ಕದಲ್ಲಿ ತೆರಿಗೆ ಹಾಕುವ ಪದ್ಧತಿ ಇದ್ದ ಕಾರಣ ಈ ಅಂದಾಜು ಲೆಕ್ಕ ಸಿಗುತ್ತದೆ) .ಇದರ ಆಹಾರೋತ್ಪಾದನೆಯ ಅಂದಾಜು ಯೋಚಿಸಿ. ಅಂದರೆ ಬಹುತೇಕ ಕುಟುಂಬಗಳು ಒಂದಲ್ಲಾ ಒಂದು ಉತ್ಪಾದಕ ಚಟುವಟಿಕೆಯೋ, ವ್ಯಾಪಾರವೋ ಇಲ್ಲಾ ಸೇನೆ-ಆಡಳಿತ ವಿಭಾಗದಲ್ಲೋ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ತಯಾರಾಗುತ್ತಿದ್ದ ರತ್ನಗಂಬಳಿಗಳಿಗೆ ದೂರದ ಯೂರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಬೇಡಿಕೆ ಇತ್ತು. ಮೈಸೂರಿನ ಸಕ್ಕರೆ, ಕಬ್ಬಿಣ, ಗಾಜು ಮುಂತಾದವಕ್ಕೂ ಅಪಾರ ಬೇಡಿಕೆ ಇತ್ತು. ಒಟ್ಟು _16 ಟಂಕಸಾಲೆ ಮೈಂಟೇನ್ ಮಾಡುತ್ತಿದ್ದ ಟಿಪ್ಪು ನಾಣ್ಯಗಳ ಉತ್ತಮ ಫಿನಿಷಿಂಗ್‌ಗಾಗಿ ಮಿಲ್ಲಿಂಗ್ ಎನ್ನಲಾಗುತ್ತಿದ್ದ ಫ್ರೆಂಚ್ ಟೆಕ್ನಾಲಜಿ ಅಳವಡಿಸಿಕೊಂಡಿದ್ದ. ಯೂರೋಪದ ಟಿಪ್ಪು ಸಮಕಾಲೀನರು ಮತ್ತು ಅನೇಕ ಇತಿಹಾಸಕಾರರು ಟಿಪ್ಪುವಿನ ಕರೆನ್ಸಿಗಳ ಉತ್ತಮ ಗುಣಮಟ್ಟದ ಬಗ್ಗೆ ದಾಖಲಿಸಿದ್ದಾರೆ. ಟಿಪ್ಪು ಯೂರೋಪ್ ನಲ್ಲಿ ಬಳಕೆಗೆ ಬಂದಿದ್ದ (steam engine) ಒಂದನ್ನು ತರಿಸುವ ಪ್ರಯತ್ನದಲ್ಲಿರುತ್ತಾನೆ. ಬ್ಯಾಂಕ್ ನ ಪ್ರಾಥಮಿಕ ರೂಪದ ಹಣಕಾಸು ಸಂಸ್ಥೆಯೊಂದರ ಸ್ಥಾಪನೆ ಬಗ್ಗೆ ಯೋಚಿಸಿರುತ್ತಾನೆ. ಚಾರ್ಲ್ಸ್ ಡಾರ್ವಿನ್ನನ ಗುರುವಾಗಿದ್ದ ಜಾನ್ ಹೋಪನ ಮಗ ಚಾರ್ಲ್ಸ್ ಹೋಪನ ಜೀವ ಸಂಕುಲಗಳ ಉಗಮ ಕುರಿತ ಶೋಧಗಳ ಬಗ್ಗೆ ತಿಳಿಯುವ ಕುತೂಹಲ ಹೊಂದಿರುತ್ತಾನೆ. (ಈ ಬಗ್ಗೆ ಹಿಂದೆ ಬರೆದಿದ್ದೆ, ಡಾರ್ವಿನ್ನನ ಗುರುವಿನ ಮಗ ಸ್ಕಾಟ್ಲ್ಯಾಂಡ್‌ನ ಖ್ಯಾತ ಸಸ್ಯಶಾಸ್ತ್ರಜ್ಙ ಹೋಪನ ನೋಟ್ಸಗಳು ಟಿಪ್ಪು ಮರಣಾ ನಂತರ ಅವರ ಲೈಬ್ರರಿಯಲ್ಲಿ ಬ್ರಿಟಿಷರಿಗೆ ಸಿಗುತ್ತದೆ.) ಇಂಗ್ಲೆಂಡ್ (Workshop Of The World) ಎನಿಸಿಕೊಳ್ಳುವ ಚಾರಿತ್ರಿಕ ಘಟ್ಟವನ್ನು ಹಾದು ಹೋಗುತ್ತಿರುವಾಗ ಇತ್ತ ನಮ್ಮ ಮೈಸೂರು ಬಹುಭಾಷಾ ರಾಜ್ಯವೂ ಸಹ (workshop of the Indian sub continent)ಆಗಿ ವೇಗವಾಗಿ ರೂಪಾಂತರಗೊಳ್ಳುತ್ತಿತ್ತು. ರಾಜಾಧಿರಾಜ ರಾಜ ಪರಮೇಶ್ವರ, ಕ್ಷತ್ರಿಯ ಕುಲತಿಲಕ ರಾಜ ಮಾರ್ತಾಂಡ ಇವೇ ಮುಂತಾದ ಭಟ್ಟಂಗಿಗಳ ಮಾತು ಕೇಳಿಸಿಕೊಳ್ಳುವ ವ್ಯವಧಾನ ಬಹುಶಃ ಆಗ ಹೈದರ್-ಟಿಪ್ಪುಗಿರಲಿಲ್ಲ. ಅದೇ ರೀತಿಯಲ್ಲಿ ಧಣಿ, ಒಡೆಯ, ಜೀ ಹುಜೂರ್, ಹೇಳಿಯೇ ಬದುಕುಳಿಯಬೇಕಾಗಿದ್ದ ಹೀನ ಸ್ಥಿತಿಯಿಂದ. ನಮ್ಮ ರೈತ ಕುಶಲಕರ್ಮಿ ಸೈನಿಕ ವರ್ಗಗಳು ಬಿಡುಗಡೆ ಪಡೆಯುವ ಪ್ರಕ್ರಿಯೆಗೆ ಚಾಲನೆ ಸಿಗಲಾರಂಭಿಸಿತ್ತು.

ಆದರೆ ಭರತ ಭೂ ಖಂಡವನ್ನು ಇಡಿಯಾಗಿ ವಶಪಡಿಸಿಕೊಳ್ಳಲು ಬ್ರಿಟಿಷರು ಅಪಾರ ಸಿದ್ಧ್ದತೆ ನಡೆಸಿದ್ದರು. ಹಲ ಹಂತಗಳಲ್ಲಿ ಇಂಗ್ಲೆಂಡ್‌ನ ಹೈಲಿಬರಿಯಲ್ಲಿ ಒಂದು ಸಿವಿಲ್ ಸರ್ವಿಸ್ ತರಬೇತಿ ಕಾಲೇಜು ಮತ್ತು ಅಡಿಸ್ ಕ್ರಾಂಬೆಯಲ್ಲಿ ಒಂದು ಮಿಲಿಟರಿ ತರಬೇತಿ ಕಾಲೇಜನ್ನು ಭಾರತದ ಕಾರ್ಯಾಚರಣೆಗಳಿಗಾಗಿಯೇ ಸ್ಥಾಪಿಸಿದರು. ಅಷ್ಟರಲ್ಲಿ ಇಂಗ್ಲೆಂಡ್‌ನಲ್ಲೂ ಕ್ರಾಂತಿಯಾಗಿ ಆಲಿವರ್ ಕ್ರಾಮ್ ವೆಲ್ ನಾಯಕತ್ವದಲ್ಲಿ ರಾಜನ ರುಂಡ ಹಾರಿಸಿ ಮತ್ತೆ ಕೊನೆಗೆ ರಾಜಶಾಹಿಯು ವ್ಯಾಪಾರಿಗಳೊಡನೆ ಶಾಮೀಲಾಗಿ ಕ್ರಾಮ್ವೆಲ್‌ನ ತಲೆಯನ್ನೇ ತೆಗೆಸಿ ಬಂಡವಾಳಶಾಹಿ- ಪ್ಯೂಡಲಿಸಂನ ಹೊಸ (Equation)  ಒಂದು ಏರ್ಪಟ್ಟಿರುತ್ತದೆ.ಒಂದೆರಡು ಶತಮಾನಗಳ ಈ ಅನುಭವ ಬ್ರಿಟಿಷರು ಎಷ್ಟೇ ಆಧುನಿಕರಾದರೂ ಫ್ಯೂಡಲಿಸಂನಿಂದಾಗುವ ಲಾಭದರಿವಿದ್ದವರನ್ನಾಗಿಸುತ್ತದೆ..

ಭಾರತದಲ್ಲಿ ರಾಜರುಗಳ ನೆರವಿನಿಂದಲೇ ನಾಜೂಕಾಗಿ ಆಡಳಿತ ನಡೆಸಿದ್ದೂ ಸಹ ಈ ಅನುಭವದಿಂದಲೇ.ಆದರೆ ಸಾಧಾರಣ ರಾಜನಂತಿರದಿದ್ದ ದಕ್ಷ ಆಡಳಿತಗಾರ, ಯೋಧ, ವ್ಯಾಪಾರಿ, ಕನಸುಗಾರ, ಆಕ್ರಮಣಕಾರಿ, ರಾಜ್ಯ ವಿಸ್ತರಣಾಕಾಂಕ್ಷಿಯಂತಿದ್ದ ಟಿಪ್ಪು ಅವರಿ ಗೊಂದು ಸವಾಲಿನಂತಿದ್ದ. ಆಗಿನ ಈಸ್ಟ್ ಇಂಡಿಯಾ ಕಂಪೆನಿಯ ಯುದ್ಧಗಳು ಲಂಡನ್‌ನ ಷೇರು ಮಾರುಕಟ್ಟೆಯ ಏರಿಳಿತಗಳಿಗೂ ಕಾರಣವಾಗುತ್ತಿದ್ದವು. ಹಾಗಾಗಿ ಬ್ರಿಟಿಷರಿಗೆ 4 ನೇ ಮೈಸೂರು ಯುದ್ಧವು ನಿರ್ಣಾಯಕವಾಗಿತ್ತು. ಅವರ ಆಗಿನ ಯುದ್ಧ ತಯಾರಿಯ ವಿವರಗಳನ್ನೋದುವುದೇ ಒಂದು ರೋಚಕ ಅನುಭವ. ಟಿಪ್ಪು ವಿರುದ್ಧ ಅಂತಿಮ ಯುದ್ಧಕ್ಕಾಗಿ ನೇರವಾಗಿ ಭಾಗಿಯಾಗಿದ್ದ ಲಾರ್ಡ್ ಕಾರ್ನ್ ವಾಲೀಸನು 1798 ರಲ್ಲಿ ನಡೆದ ಐರ್ಲೆಂಡ್ ದಂಗೆಯನ್ನು ಅಡಗಿಸಿದ್ದವನು. 1776-1781 ರ ಅವಧಿಯಲ್ಲಿ ಅಮೆರಿಕದ ಸ್ವಾತಂತ್ರ ಹೋರಾಟದ ವಿರುದ್ಧ ಬ್ರಿಟಿಷ್ ಸೇನೆಯನ್ನು ಮುನ್ನಡೆಸಿದ್ದವನು. ಅದೇ ರೀತಿ ಕರ್ನಲ್ ವೆಲ್ಲೆಸ್ಲಿಯು ಸಹ ಮಹಾನ್ ಯುದ್ಧ ತಂತ್ರ ನಿಪುಣನಾಗಿದ್ದವನು. ಮೈಸೂರಿಗೆ ಬರುವ ಮುನ್ನ ನೆದರ್‌ರ್ಲೆಂಡ್ ಯುದ್ಧದಲ್ಲಿ ಭಾಗಿಯಾಗಿದ್ದವನು, ಮುಂದೆ 1813-15 ರ ಅವಧಿಯಲ್ಲಿ ನಡೆದ ವಾಟರ್ ಲೂ ಕದನದಲ್ಲಿ ಯೂರೋಪಿನ ಮಹಾನ್ ಸೇನಾನಿ ನೆಪೋಲಿಯನ್ ಬೋನಾಪಾರ್ಟೆಯನ್ನು ಮಣಿಸಿದ. ವೆಲ್ಲೆಸ್ಲಿಯು ಮುಂದೆ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಎನಿಸಿಕೊಳ್ಳುವ ವೇಳೆಗೆ ತನ್ನ ಮಿಲಿಟರಿ ಕೆರಿಯರ್ ನಲ್ಲಿ ಒಟ್ಟಾರೆ 80 ಯುದ್ಧಗಳಲ್ಲಿ ನೇರವಾಗಿ ಭಾಗಿಯಾಗಿದ್ದ ಅನುಭವಿ ಯೋಧ.

 

ನಮ್ಮ ಟಿಪ್ಪು ಮತ್ತು ನಮ್ಮ ಮೈಸೂರಿನ ಯೋಧರು ಎದುರಿಸಿದ್ದು ಇಂತಹ ಬಲಿಷ್ಠರನ್ನು. 17-18ನೇ ಶತಮಾನದ ಅವಧಿಯು ಸಾಹಸಿಗರಿಗೆ ಮಹಾನ್ ಅವಕಾಶಗಳನ್ನು ತೆರೆದಿಟ್ಟಿದ್ದ ಕಾಲ. ಹೈದರ್-ಟಿಪ್ಪು ಆ ಸಂದರ್ಭದ ಧೀರೋದ್ದಾತ ಶಿಶುಗಳು....ಕಲಿಗಳು. ಹೈದರ್ ಮೈಸೂರು ಸಂಸ್ಥಾನದ ಹೊರಗಿನ ಶತ್ರುಗಳನ್ನು ಮಾತ್ರವಲ್ಲದೆ ಆಂತರಿಕವಾಗಿಯೂ ಸದಾ ಕಾಲ ತನ್ನ ವಿರುದ್ಧದ ಪಿತೂರಿಗಳ ನೆರಳಲ್ಲೇ ಬದುಕಿದವನು, ಖಂಡೇರಾಯನ ಮೂಲಕ ಒಡೆಯರ್ ವಂಶಸ್ಥರು ಒಮ್ಮೆ ನಡೆಸಿದ ಹೈದರ್‌ನ ಹತ್ಯಾ ಯತ್ನ ಮತ್ತು ಹೈದರ್ ಬಹುತೇಕ ಏಕಾಂಗಿಯಾಗಿ ರಾಜಧಾನಿ ಶ್ರೀರಂಗ ಪಟ್ಟಣದಿಂದ ಕಾವೇರಿ ನದಿ ದಾಟಿ ಪಾರಾದ ಪ್ರಸಂಗವು ಅತ್ಯಂತ ರೋಚಕ ಕತೆ. ಟಿಪ್ಪು ಮರಣದ ಸುದ್ದಿಯು ಆಗಲೇ ಅಮೆರಿಕದ ಪತ್ರಿಕೆಗಳಿಗೆ ಬಲು ಮಹತ್ವದ ಸುದ್ದಿಯಾಗಿ ಪ್ರಕಟಗೊಂಡಿತ್ತು. 1802 ಸುಮಾರಿನಲ್ಲಿ ಇಂಗ್ಲೆಂಡ್ ನಲ್ಲೇ ('The Storming Of Seriranga patanam 'action packed drama)ಒಂದು ಥಿಯೇಟರ್ ಗೆ ಬಂತು.( ಇದರ ಪ್ರಚಾರದ ಆಗಿನ ವಾಲ್ ಪೋಸ್ಟರ್ ಒಂದರ ಚಿತ್ರ ನನ್ನ ಸಂಗ್ರಹದಲ್ಲಿ ಎಲ್ಲೋ ಅಡಗಿದೆ. ಸಿಕ್ಕಾಗ ಪ್ರಕಟಿಸುವೆ) ಲಾರ್ಡ್ ವೆಲ್ಲೆಸ್ಲಿ ತನ್ನ ಬದುಕಿನ ಕತೆ ನೆನೆಯುವಾಗ ‘ನೀನು ಯುದ್ಧ ಭೂಮಿಯಲ್ಲಿ ಎದುರಿಸಿದ ಧೀರೋದ್ದಾತ ಯೋಧನಾರು ?’ ಎಂದು ಕೇಳಿದವರಿಗೆ ‘ಟಿಪ್ಪು ಸುಲ್ತಾನ್’ ಎಂದು ಉತ್ತರಿಸುತ್ತಾನೆ. ಶತ್ರುವೂ ಹೊಗಳಿದ ಕಲಿ ಟಿಪ್ಪು.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News