ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ‘ಕನಕದಾಸರ ಕೃತಿಗಳ ಅಧ್ಯಯನ’

Update: 2018-11-24 18:52 GMT

ಕನಕದಾಸರ ಕೃತಿಗಳ ಅಧ್ಯಯನವು ಬಹುಮುಖಿ ಆಯಾಮಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಕನ್ನಡ ಸಂಸ್ಕೃತಿಯ ಅಧ್ಯಯನದ ಆಕರಗಳನ್ನಾಗಿ ಕನಕದಾಸರ ಕೃತಿಗಳ ಅಧ್ಯಯನ. ಎರಡನೆಯದು ಕನಕದಾಸರ ಕೃತಿಗಳ ಅಧ್ಯಯನದ ಮೂಲಕ ಕನ್ನಡ ಸಂಸ್ಕೃತಿಯ ಆಕೃತಿಗಳನ್ನು ಕಟ್ಟಿಕೊಳ್ಳುವ ಬಗೆ.

ಈ ನಿಟ್ಟಿನಲ್ಲಿ ಕನಕದಾಸರ ಕೃತಿಗಳನ್ನು ಒಂದು ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಮತ್ತು ನಿರಂತರವಾಗಿ ರೂಪುಗೊಳ್ಳುತ್ತಲೇ ಇರುವ ಸಾಹಿತ್ಯಕ- ಸಾಂಸ್ಕೃತಿಕ ಪ್ರಕ್ರಿಯೆಯ ಮುಖೇನವಾಗಿ ಚರ್ಚಿಸುವ ಅಗತ್ಯವಿದೆ.

ಕನ್ನಡದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ್ದಾದ ಎರಡು ಸಾಮಾಜಿಕ ಕ್ರಾಂತಿಯ ಘಟ್ಟಗಳಿವೆ. ಒಂದು, ವಚನ ಚಳವಳಿಯ ಕಾಲ. ಮತ್ತೊಂದು ಹರಿದಾಸರ ಕೀರ್ತನೆಗಳ ಮೂಲಕ ರೂಪುಗೊಂಡ ಸಾಮಾಜಿಕ ಬದಲಾವಣೆಯ ಕಾಲಘಟ್ಟ. ಸರಳವಾದ ಭಾಷೆಯಲ್ಲಿ ಕಾಯಕದ ಮಹತ್ವ ಸಾರಿ, ಜಾತಿ-ಭೇದವನ್ನು ತೊಡೆದು ಹಾಕಲು ಪ್ರಯತ್ನಿಸಿ, ಸ್ತ್ರೀ-ಪುರುಷ ಸಮಾನತೆಯ ಸಾರಿದ ವಚನ ಚಳವಳಿಯ ನಂತರ ಹದಿನೈದನೆಯ ಶತಮಾನದಲ್ಲಿ ಕನ್ನಡದ ನೆಲೆಯಲ್ಲಿ ಮೂಡಿದ ಮತ್ತೊಂದು ಮುಖ್ಯ ಸಂಚಲನೆ ಹರಿದಾಸರು ತಮ್ಮ ಕೀರ್ತನೆ ಮತ್ತು ಕೃತಿಗಳ ಮೂಲಕ ಉಂಟು ಮಾಡಿದ ಹೊಸ ಸಾಮಾಜಿಕ ಎಚ್ಚರ. ಅದರ ಫಲವಾಗಿ ರೂಪುಗೊಂಡ ಮಾನವನ ಆತ್ಮಾವಲೋಕನ ಹಾಗೂ ಮಾನವೀಯ ವೌಲ್ಯಗಳ ಅನುಷ್ಠಾನವು ಕನ್ನಡ ಸಂಸ್ಕೃತಿಯ ಪುನಶ್ಚೇತನದ ಮಾದರಿಗಳಾಗಿವೆ.

ಸಂಸ್ಕೃತಿ ಎಂಬುದು ಒಂದು ಜನ ಸಮುದಾಯದ ಸಮಗ್ರ ಜೀವನ ವಿಧಾನ ಮತ್ತು ಆ ಸಮುದಾಯವು ಆಲೋಚಿಸುವ ಸಮಸ್ತ ಆಯಾಮಗಳನ್ನು ಒಳಗೊಳ್ಳುವ ಒಂದು ಪರಿಭಾಷೆ ಮನುಷ್ಯ ಸಂಸ್ಕೃತಿಯನ್ನು ರೂಪಿಸುತ್ತಿದ್ದಾನೆ. ಸಂಸ್ಕೃತಿ ಮನುಷ್ಯ ನನ್ನು ರೂಢಿಸುತ್ತಿರುತ್ತದೆ. ಸಂಸ್ಕೃತಿಯನ್ನು ರೂಪಿಸುತ್ತಾ ಹೋಗುವ ಮನುಷ್ಯ ತನ್ನನ್ನು ತಾನೇ ರೂಪಿಸಿಕೊಳ್ಳುತ್ತಾನೆ ಎಂದು ಶಂ.ಬಾ.ಜೋಶಿಯವರು ಹೇಳುತ್ತಾರೆ.

ಕನ್ನಡ ಸಂಸ್ಕೃತಿ ಎಂಬುದು ಏಕವಾದುದಲ್ಲ, ಬಹುಮುಖಿ ರೂಪದ್ದು. ಆದ್ದರಿಂದಲೇ ನಾಟಕಕಾರ ಶ್ರೀರಂಗರು ನಮಗೊಂದು ಸಂಸ್ಕೃತಿ ಇದೆಯೇ ಎಂದು ಪ್ರಶ್ನಿಸುತ್ತಾ ಸಂಸ್ಕೃತಿಯು ಕಾಲಾನುಕ್ರಮದಲ್ಲಿ ಬದಲಾಗುತ್ತಾ ಸಾಗುವಂತಹದೆಂದು ಚರ್ಚಿಸುತ್ತಾರೆ.

ಕನ್ನಡನಾಡಿನ ವಿಜಯನಗರ ಅರಸರ ಕಾಲದಲ್ಲಿ (15-16ನೇ ಶತಮಾನ) ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನಸಾಮಾನ್ಯರ ಭೇಟಿ ಮಾಡುತ್ತಾ ಅವರ ಸಾಮಾಜಿಕ ಬದುಕನ್ನು ತಿದ್ದುತ್ತಾ, ಅಂತರಂಗದ ಮನೆಗೂ ಅರಿವಿನ ಬೆಳಕನ್ನು ಹೊತ್ತಿಸಿದರು. ಕನಕದಾಸರು ಕೆಳವರ್ಗದವರಾಗಿದ್ದು, ವೈಷ್ಣವ ಭಕ್ತಿ ಮಾರ್ಗದ ಪ್ರತಿಪಾದಕರಾಗಿದ್ದರು. ಕರ್ನಾಟಕದಲ್ಲಿ ಪ್ರಚಲಿತವಿದ್ದ ಇತರ ಧರ್ಮಗಳನ್ನು ವಿರೋಧಿಸಲಿಲ್ಲ. ಅವರು ದ್ವೈತ ಮತ್ತು ಅದ್ವೈತ ತತ್ವಗಳಿಂದ ಪ್ರಭಾವಿತರಾಗಿದ್ದರೂ ಪರಂಪರಾಗತ ಶ್ರದ್ಧೆ ವಿಚಾರಗಳನ್ನು ಮಾನವೀಯ ಅಂತಃಕರಣದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದವರು. ಜಾತಿ, ಮತ, ಪಂಥ ಹಾಗೂ ವೈಯಕ್ತಿಕ ಪ್ರತಿಷ್ಠೆಗಳು ಮನುಷ್ಯನ ಅಹಂಕಾರಕ್ಕೆ ಕಾರಣವಾಗಿರುವುದನ್ನು ಖಂಡಿಸಿ ಮಾನವೀಯ ಸಂಬಂಧಗಳ ಉನ್ನತೀಕರಣಕ್ಕೆ ಪ್ರಯತ್ನಿಸಿದ್ದರು.

ಕನಕದಾಸರು ಒಬ್ಬ ಭಕ್ತಕವಿ. ಸಮಾಜ ಸುಧಾರಕ. ಅವರು ಕೀರ್ತನೆಗಳನ್ನಷ್ಟೇ ಬರೆದಿಲ್ಲ. ಹರಿಭಕ್ತಸಾರ, ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ನಳ ಚರಿತೆ ಎಂಬ ಕೃತಿಗಳನ್ನು ಬರೆದಿದ್ದಾರೆ. ಕನಕದಾಸರ ಕೃತಿಗಳ ಪರಿಚಯ ಮಾಡಿಕೊಡುತ್ತಾ ರಂ.ಶ್ರೀಮುಗುಳಿಯವರು ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯಗಳ ಸಿದ್ಧಿಯಿಂದ ಕನ್ನಡಿಗರಿಗೆ ಬೆಳಕನ್ನು ನೀಡುವ ಚಿರಂತನವಾದ ಸಂಸ್ಕೃತಿ ಪ್ರದೀಪಗಳಲ್ಲಿ ಒಂದಾಗಿದ್ದಾರೆ ಎನ್ನುತ್ತಾರೆ.

ಕನಕದಾಸರು ರಾಮಧ್ಯಾನ ಚರಿತೆ ಎಂಬ ಕಾವ್ಯವನ್ನು ರಚಿಸಿ ರಾಗಿ ಮತ್ತು ಭತ್ತಗಳ ನಡುವಿನ ಸಂವಾದವನ್ನಾಗಿ, ಅದರಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಸಂಘರ್ಷವನ್ನು ರೂಪಕದ ಮೂಲಕ ಚಿತ್ರಿಸಿ ರಾಗಿಯನ್ನು ಗೆಲ್ಲಿಸಿ, ಅದಕ್ಕೆ ರಾಘವ ಎಂಬ ರಾಮನಾಮವನ್ನು ನೀಡಿ ಬಡವರ ಪರವಾದ ಕಾಳಜಿಯನ್ನು, ಜೊತೆಗೆ ರಾಗಿಯನ್ನು ಕನ್ನಡನಾಡಿನ ಜನರ ಸಂಸ್ಕೃತಿಯ ಪ್ರತೀಕ ಎಂಬುದಾಗಿಯೂ ಚಿತ್ರಿಸಿದ್ದಾರೆ. ಅವರ ಮೋಹನ ತರಂಗಿಣಿ ಕಾವ್ಯವು ಕೃಷ್ಣಚರಿತೆ ಎಂದು ಕರೆದಿದ್ದರು, ಕೃಷ್ಣದೇವರಾಯನ ಚರಿತೆಯು ಮೇಳೈಸಿದೆ. ಈ ಕಾವ್ಯದ ವರ್ಣನಾ ಭಾಗಗಳಲ್ಲಿ ವಿಜಯನಗರ ಕಾಲದ ವಿವಿಧ ಜೀವನವು ಪರ್ಯಾಯವಾಗಿ ಚಿತ್ರಿತವಾಗಿದೆ. ನಾಣ್ನುಡಿ-ಒಳ್ಪುನುಡಿಗಳೂ ಸೇರಿ ಪೌರಾಣಿಕ ಕಥೆಯ ಮೂಲಕ ತಾತ್ಕಾಲಿಕ ಜೀವನವನ್ನು ಚಿತ್ರಿಸಿ ಚಿರಂತನವಾದ ಭಕ್ತಿ ಸಂದೇಶವನ್ನು ಬೀರಿ ಈ ಕೃತಿ ಸಫಲವಾಗಿದೆ. ಎಂಬ ರಂ.ಶ್ರೀ ಮುಗುಳಿಯವರ ಮಾತುಗಳು ಮೋಹನ ತರಂಗಿಣಿ ಕಾವ್ಯಕ್ಕೆ ಕೈಗನ್ನಡಿ ಹಿಡಿದಿದೆ.

ನಳ ಚರಿತ್ರೆ ಎಂಬ ಮಹಾಭಾರತದ ಉಪಕಥೆಯಾದ ನಳ ದಮಯಂತಿ ಕಥೆಯೊಂದನ್ನು ತೆಗೆದುಕೊಂಡು ತಿರುಳುಗನ್ನಡದಲ್ಲಿ ಸೊಗಸಾಗಿ ಕಾವ್ಯವನ್ನು ರಚಿಸಿದ್ದಾರೆ. ಸೊಗಸಾದ ಲೌಕಿಕ ಕಾವ್ಯ ಭಕ್ತಿ ಸುಧೆಯ ಕಾರಂಜಿಯನ್ನು ಪುಟಿದೇಳಿಸಿ ಮಾನವ ಪ್ರಕೃತಿಯ ಹಿರಿದಾದ ಚಿತ್ರಣವನ್ನಿತ್ತ ಸುಂದರ ಕಾವ್ಯವಿದು ಎಂಬ ನಳ ಚರಿತ್ರೆಯ ಪುಸ್ತಕದ ಉಪೋದ್ಘಾತದ ಮಾತುಗಳು ಆ ಕಾವ್ಯದ ಪರಿಚಯವನ್ನು ಮಾಡಿಕೊಡುತ್ತದೆ. ಹರಿಭಕ್ತಸಾರ ಎಂಬುದು ಹರಿಭಕ್ತಿಯ ಮಹತ್ವವನ್ನು ಸಾರುವ ಕಾವ್ಯಾತ್ಮಕ ಕೃತಿ ಇದು. ಇದಲ್ಲದೆ ಕನಕದಾಸರು ಅನೇಕ ಕೀರ್ತನೆಗಳನ್ನು ಬರೆದಿದ್ದಾರೆ. ಕನಕದಾಸರ ಕೀರ್ತನೆಗಳಲ್ಲಿ ವಿಚಾರ ಸ್ವಾತಂತ್ರದ ಜನಜೀವನದ, ಜನಭಾಷೆ ಅರಿವು ಹೆಚ್ಚು. ಸಮಾಜ ವಿಮರ್ಶೆ ಮತ್ತು ಜನ ಜೀವನ ಚಿತ್ರಕ್ಕೆ ಮೀಸಲಾದ ಎಷ್ಟೋ ಕೀರ್ತನೆಗಳಿವೆ. ಇವುಗಳಲ್ಲಿ ಕನಕದಾಸರು ಸಮಾಜದ ಕುಂದುಕೊರತೆಗಳನ್ನು ಮುಚ್ಚುಮರೆಯಿಲ್ಲದೆ ನುಡಿದಿದ್ದಾರೆ. ಅವರ ಕಳಕಳಿ ನೈಜ, ಮಾತು ಹರಿತ, ನಿರೀಕ್ಷಣೆ ತೀವ್ರ ಎಂಬುದು ತಿಳಿಯುತ್ತದೆ ರಂ.ಶ್ರೀ. ಮುಗಳಿ ಕನಕದಾಸರ ಕೀರ್ತನೆಗಳನ್ನು ವಿಶ್ಲೇಷಿಸಿದ್ದಾರೆ. ವಿಡಂಬನಾತ್ಮಕ ಕೀರ್ತನೆಗಳಲ್ಲಿ ಕನಕದಾಸರು ತಮ್ಮ ಸವಕಾಲೀನ ಸಮಾಜದ ಅನಿಷ್ಟಗಳನ್ನು ಖಂಡಿಸುತ್ತಾರೆ. ಅಂತರಂಗದ ಶುದ್ದೀಕರಣವನ್ನು ನಿರ್ಲಕ್ಷಿಸಿ ಬಾಹ್ಯ ಆಚರಣೆಗೆ ಗಮನ ನೀಡುವ ಜಾತಿಯತೆ ಮತ್ತು ಮಡಿವಂತಿಕೆಯಲ್ಲಿ ತೊಡಗಿರುವ ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ಕುಲಕುಲ ಕುಲವೆನ್ನುತ್ತಿಹರು ಕುಲ ಯಾವುದು ಸತ್ಯ ಸುಖವುಳ್ಳ ಜನರಿಗೆ ಧರ್ಮವಿಲ್ಲದ ಅರಸು, ಮುರಿದ ಕಾಲಿನ ಗೊರಸು ನೇಮವಿಲ್ಲದ ಹೋಮವೇತಕಯ್ಯ ರಾಮ ದಾನ ಧರ್ಮವ ಮಾಡಿ ಸುಖಿಯಾಗು ಮನವೆ ನೋಡಿ ಮರುಳಾಗದಿರು ಪರ ಸತಿಯರ ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೇ? ಮೊದಲಾದ ಕೀರ್ತನೆಗಳ ಮೂಲಕ ಲೋಕದ ಡೊಂಕನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಜಾನಪದೀಯ ನಾಣ್ನುಡಿಗಳು, ನುಡಿಗಟ್ಟುಗಳು ಮತ್ತು ಶಬ್ದಗಳು ಅವರ ಕೀರ್ತನೆಗಳಲ್ಲಿ ತುಂಬಿಕೊಂಡಿದ್ದು, ಅವು ದೇಶೀಯ ಸೊಗಡನ್ನು ಹೆಚ್ಚಿಸುತ್ತವೆ. ಜಾತಿ ವರ್ಗ ಭೇದವಿಲ್ಲದ ಉದಾರ ಸಮಾಜ ನಿರ್ಮಾಣಕ್ಕಾಗಿ ಅವರ ಕೀರ್ತನೆಗಳು ಶ್ರಮಿಸಿವೆ. ಸಂಸ್ಕೃತಿ ಎಂಬ ಪದಕ್ಕೆ ಶುದ್ಧ್ದೀಕರಿಸುವ, ಸಂಸ್ಕರಿಸುವ ಎಂಬ ಅರ್ಥವೂ ಇದೆ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಕನ್ನಡ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜೊತೆಗೆ ಅದನ್ನು ಉನ್ನತೀಕರಿಸುವ ಮತ್ತಷ್ಟು ಮಾನವೀಯ ನೆಲೆಗೆ ಸಾಗಿಸುವ ಪ್ರಯತ್ನ ನಡೆಸಿದ್ದಾರೆ.

ಕನಕದಾಸರ ಹಾಡುಗಳಲ್ಲಿ ಕಂಡುಬರುವ ಬಹಳಷ್ಟು ಅಂಶಗಳು ಅಂದು ಕನ್ನಡ ಭಾಷಿಕ ಸಮಾಜವು ತೊಡಗಿಕೊಂಡಿದ್ದ ಹಲವಾರು ಸಂಘರ್ಷಾತ್ಮಕ ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಹಲವಾರು ಜಾತಿ ಸಮುದಾಯಗಳ ಮೇಲೆ ಊಳಿಗಮಾನ್ಯವು ಈ ಮೊದಲಿನಿಂದಲೂ ಹಲವಾರು ಆಚರಣೆಗಳ ಸಂಕೋಲೆಯನ್ನು ಬಿಗಿದಿತ್ತು. ಉತ್ಪಾದನಾ ಕ್ಷೇತ್ರದಲ್ಲಿ ಹೊಸಬಗೆಯ ಸಂಚಲನೆಗಳು ಮೂಡಿ ಅಲ್ಲಿದ್ದ ಸಾಮಾಜಿಕ ವರ್ಗಗಳ ಚೈತನ್ಯದಲ್ಲಿ, ಅವುಗಳ ಮಹತ್ವದಲ್ಲಿ ಹೊಸ ಕಸುವು ಏರ್ಪಟ್ಟೊಡನೆ, ಸಹಜವಾಗಿ ಆ ಜಾತಿ ಸಮುದಾಯಗಳು ತಮ್ಮನ್ನು ಬಿಗಿಯುತ್ತಿದ್ದ ಪುರಾತನ ವೌಲ್ಯಗಳನ್ನು ಸಡಿಲಿಸಲು ಆಶಿಸಿದವು. ಅದು ಅಂದಿನ ಸಮಾಜ ಮತ್ತಷ್ಟು ಸುಸಂಘಟಿತವಾಗಿ ನೆಲೆಗೊಳ್ಳಲು ತಮ್ಮ ಸಾಮಾಜಿಕ ನೆಲೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಅಗತ್ಯವಾಗಿತ್ತು ಎಂದು ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಜನರ ಸಾಮಾಜಿಕ ಬದುಕಿನ ವಾಸ್ತವಿಕ ಚಿತ್ರಣಗಳನ್ನು ನೀಡುತ್ತಲೇ ರೂಪುಗೊಳ್ಳಬೇಕಾದ ಜಾತಿ ವರ್ಗ ಭೇದವಿಲ್ಲದ ಉದಾರ ಸಮಾಜದ ರೂಪುರೇಷೆಗಳನ್ನು ಕಟ್ಟಿಕೊಟ್ಟಿದ್ದಾರೆ. ಸಮಾಜ ವಿಮರ್ಶೆಯನ್ನು ಕೇಂದ್ರ ಆಶಯವನ್ನಾಗಿಟ್ಟುಕೊಂಡು ಕನಕದಾಸರ ಕೀರ್ತನೆಗಳು ಮತ್ತು ಅವರ ರಾಮಧಾನ್ಯ ಚರಿತ್ರೆಯ ಮೂಲದ್ರವ್ಯವನ್ನು ಬಳಸಿಕೊಂಡು ಕನ್ನಡದ ಕಾವ್ಯ ಚಿಂತಕರಾದ ಪ್ರೊ.ಕಿ.ರಂ.ನಾಗರಾಜ್ ರವರು ಕಾಲಜ್ಞಾನಿ ಕನಕ ನಾಟಕವನ್ನು ಬರೆದಿದ್ದಾರೆ. ಇದರಲ್ಲಿ ಯುದ್ಧ ಮಾನವಕುಲವನ್ನು ಸಾಮೂಹಿಕವಾಗಿ ನಾಶ ಮಾಡುವ ಸಾಂಕ್ರಾಮಿಕ ಕುತ್ತು ಎಂಬುದನ್ನು ಅರಿತ ಈತ ಶಸ್ತ್ರಾಸ್ತ್ರ ತ್ಯಾಗ ಮಾಡಿ, ದೈವಭಕ್ತನಾಗಿ ಮನುಷ್ಯ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಸಮರ್ಥವಾಗಿ, ತರ್ಕಬದ್ಧವಾಗಿ ಮಾಡುತ್ತಾನೆ. ಪಾಂಡಿತ್ಯ ವಾದ-ವಿವಾದಗಳ ಆಚೆಗೆ ಲೋಕವನ್ನು ನಿಯಂತ್ರಿಸುವ ಪರಮಾತ್ಮಕ ಶಕ್ತಿ,. ಸಾಮಾನ್ಯಜನರ ನಡುವೊಳಗಣ ಬಯಲಿನಲ್ಲಿಯೇ ಇದೆ ಎಂಬುದನ್ನು ಸಾಬೀತು ಮಾಡಿ ತೋರುತ್ತಾರೆ ಎಂಬ ವಿಚಾರಗಳಿವೆ. ಕನಕದಾಸ ನಾಡು ಕಂಡ ಸಾಂಸ್ಕೃತಿಕ ನಾಯಕ. ಭಕ್ತನಾಗಿದ್ದು, ಸಾಮಾಜಿಕ ಕಳಕಳಿಯ ಮಾನವೀಯ ಮುಖವೊಂದನ್ನು ಹೊಂದಿದ್ದ ಸಾರ್ವಕಾಲಿಕ, ಜಾಗತಿಕ, ಸತ್ಯಗಳನ್ನು ಸಾರಿದ ವಿಶ್ವ ಮಾನವ. ಆದರೆ, ಇಂದು ಜಾತಿ ಭೇದ ನಿರಾಕರಿಸಿದ ಸಂತನಾದ ಕನಕದಾಸರನ್ನು ಜಾತಿಯ ಗುರುತಾಗಿ ಬಳಸುವ ಅಪಾಯ ಕಂಡುಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ಕನಕದಾಸರ ಕೃತಿಗಳ ಅಧ್ಯಯನವನ್ನು ಕನ್ನಡ ಸಂಸ್ಕೃತಿಗಳ ಆಕರಗಳನ್ನಾಗಿ ಅಧ್ಯಯನ ಮಾಡುವ ಅಗತ್ಯ ಬಹಳ ಇದೆ. ಮತ್ತು ಕನಕದಾಸರ ವಿಚಾರಗಳನ್ನು ಮನನ ಮಾಡಿ ಅನುಸರಿಸಬೇಕಾಗಿದೆ.

ಕನಕದಾಸ ನಾಡು ಕಂಡ ಸಾಂಸ್ಕೃತಿಕ ನಾಯಕ. ಭಕ್ತನಾಗಿದ್ದು, ಸಾಮಾಜಿಕ ಕಳಕಳಿಯ ಮಾನವೀಯ ಮುಖವೊಂದನ್ನು ಹೊಂದಿದ್ದ ಸಾರ್ವಕಾಲಿಕ, ಜಾಗತಿಕ, ಸತ್ಯಗಳನ್ನು ಸಾರಿದ ವಿಶ್ವ ಮಾನವ. ಆದರೆ, ಇಂದು ಜಾತಿ ಬೇಧ ನಿರಾಕರಿಸಿದ ಸಂತನಾದ ಕನಕದಾಸನನ್ನು ಜಾತಿಯ ಗುರುತಾಗಿ ಬಳಸುವ ಅಪಾಯ ಕಂಡುಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ಕನಕದಾಸರ ಕೃತಿಗಳ ಅಧ್ಯಯನವನ್ನು ಕನ್ನಡ ಸಂಸ್ಕೃತಿಗಳ ಆಕರಗಳನ್ನಾಗಿ ಅಧ್ಯಯನ ಮಾಡುವ ಅಗತ್ಯ ಬಹಳ ಇದೆ. ಮತ್ತು ಕನಕದಾಸರ ವಿಚಾರಗಳನ್ನು ಮನನ ಮಾಡಿ ಅನುಸರಿಸಬೇಕಾಗಿದೆ.

Writer - ಡಾ. ಸುಜಾತ ಲಕ್ಷ್ಮೀಪುರ

contributor

Editor - ಡಾ. ಸುಜಾತ ಲಕ್ಷ್ಮೀಪುರ

contributor

Similar News