ಕನ್ನಡದಲ್ಲಿ ವಿಜ್ಞಾನ ಸಂವಹನ, ಸಾಮಾಜೀಕರಣ

Update: 2018-11-25 05:12 GMT

ಒಂದು ಅವಲೋಕನ

ವಿಜ್ಞಾನದ ಸಂವಹನದಲ್ಲಿ ವೈಜ್ಞಾನಿಕ ವಿಷಯಗಳನ್ನು ಅತ್ಯಂತ ಸರಳವಾಗಿ ನಿರೂಪಿಸಿ, ಕೈಗೆಟಕುವ ಬೆಲೆಯಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಶ್ವವಿದ್ಯಾನಿಲಯಗಳು ಶ್ರಮಿಸುತ್ತಿರುವುದು ತಿಳಿದಿದೆ. ಇದು ಸೀಮಿತ ಪರಿಧಿಯಲ್ಲಿರುವ ಕಾರಣ ನವಕರ್ನಾಟಕ, ಸಪ್ನ, ಅಂಕಿತ ಮುಂತಾದ ಕೆಲವೇ ಕೆಲವು ಪ್ರಕಾಶಕರು ಸಣ್ಣ ಊರುಗಳಲ್ಲಿಯೂ ಪುಸ್ತಕ ಮಾರಾಟ ಮೇಳಗಳನ್ನು ನಡೆಸಿ , ಪುಸ್ತಕ ಪ್ರೀತಿಯನ್ನು, ಓದುವ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ.

ವಿಜ್ಞಾನವು ನಿಸರ್ಗದ ನಿಯಮದೊಳಗಿನ ಸತ್ಯದ ಅನ್ವೇಷಣೆ. ಅದರ ಪರಮ ಗುರಿಯು ನಿಸರ್ಗದ ಆಗುಹೋಗುಗಳ ಸಮಸ್ಥಿತಿಯನ್ನು ಕಂಡುಕೊಳ್ಳುವುದೇ ಆಗಿದೆ. ಹಾಗಾಗಿ ವಿಜ್ಞಾನ ಎನ್ನುವುದು ಒಂದು ಸಂಚಿತವಾದ ಜ್ಞಾನದ ಜೊತೆಗೆ ನಿಸರ್ಗದ ಯಾವುದೇ ಆಗುಹೋಗುಗಳ ಸತ್ಯದರ್ಶನ. ವಿಜ್ಞಾನಕ್ಕೆ ಹಲವು ಶತಮಾನಗಳ ರೋಚಕ ಇತಿಹಾಸವಿದೆ. ಅದು ಧರ್ಮ ಮತ್ತು ಪ್ರಭುತ್ವಗಳು ಒಡ್ಡಿದ ಪ್ರಬಲ ವಿರೋಧಗಳನ್ನು ಎದುರಿಸಿ, ಮೌಢ್ಯಗಳನ್ನು ಅವಿಚ್ಛಿನ್ನವಾಗಿ ಖಂಡಿಸಿ, ತಂತ್ರಜ್ಞಾನಗಳ ಬೆಳವಣಿಗೆಗೆ ಬೆನ್ನುಲುಬಾಗಿ ಎಲ್ಲರನ್ನು,ಎಲ್ಲವನ್ನು ಒಳಗೊಂಡ ಒಂದು ನಿರಂತರ ಮತ್ತು ದೈತ್ಯ ಪ್ರವಾಹವಾಗಿ ಸದಾ ಬದಲಾವಣೆ ಗಳನ್ನು ಸ್ವೀಕರಿಸುತ್ತ ಪ್ರಗತಿಯೆಡೆಗೆ ದಾಪುಗಾಲಿಡುತ್ತಿದೆ. ವಿಜ್ಞಾನ ಇತಿಹಾಸಕಾರ ಜೆ.ಡಿ. ಬರ್ನಾಲ್ ಹೇಳುವಂತೆ ವಿಜ್ಞಾನಕ್ಕೆ ಪ್ರತ್ಯೇಕ ಅಸ್ತಿತ್ವವಿಲ್ಲ. ಅದು ಸಮಾಜದ ಬೆಳವಣಿಗೆಯ ಹೃದಯಭಾಗ. ನಾವು ಇಂದು ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿದ್ದೇವೆ. ತಂತ್ರಜ್ಞಾನಗಳ ನಿಜವಾದ ಬಳಕೆಯು ನೈಸರ್ಗಿಕ ಸಮನ್ವತೆಯಿಂದ ಸಾಧಿಸುವಂತಹ ಜನಸಾಮಾನ್ಯರ ವಿಜ್ಞಾನದ ಅರಿವನ್ನು ಒಳಗೊಂಡಿರುತ್ತದೆ. ಈ ಕ್ಷೇತ್ರದ ಕೊಡುಗೆಗಳು ನೇರ ಅಥವಾ ಪರೋಕ್ಷವಾಗಿ ನಿರಂತರತೆಯಿಂದ ಜನ ಸಾಮಾನ್ಯರನ್ನು ತಲುಪುತ್ತಿವೆ. ವಿಜ್ಞಾನ ತಂತ್ರಜ್ಞಾನದ ಪ್ರಭಾವಲಯದಿಂದ ಹೊರತಾದ ನಾಗರಿಕ ಬದುಕನ್ನು ಕಲ್ಪಿಸಿಕೊಳ್ಳಲು ಇಂದು ಸಾಧ್ಯವಿಲ್ಲದಂತಾಗಿದೆ. ಲೌಕಿಕ ಬದುಕಿಗೆ ನಿಸರ್ಗದೊಡನೆ ಹೊಂದಾಣಿಕೆ ಮಾಡಿಕೊಂಡು, ಅದರಲ್ಲಿ ಆವರ್ತನೀಯವಾಗಿ ಘಟಿಸುವ ವಿದ್ಯಮಾನಗಳನ್ನು ಬೆರಗುಗೊಂಡು ವೀಕ್ಷಿಸಿ, ಸಮಕಾಲೀನರೊಡನೆ ಚರ್ಚಿಸಿ, ತಮ್ಮ ನಿತ್ಯ ಪುರುಷಾರ್ಥಗಳಿಗೆ ಸಮನ್ವಯ ಗೊಳಿಸಿಕೊಳ್ಳುವ ಪ್ರಕ್ರಿಯೆಯೇ ವಿಜ್ಞಾನ ಮತ್ತು ಅದನ್ನು ದಾಖಲಿಸಿದಾಗ ರೂಪುಗೊಂಡದ್ದೇ ವಿಜ್ಞಾನ ಸಾಹಿತ್ಯ.

ಕುತೂಹಲ ತಣಿಸಲು ಮತ್ತು ದೈನಂದಿನ ಅವಶ್ಯಕತೆಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ವಿಜ್ಞಾನದ ವಿಷಯ ಅರಿಯಲು ನಮಗೆ ಜನಪ್ರಿಯ ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳು ಮತ್ತು ಪತ್ರಿಕೆಗಳು ಆವಶ್ಯಕ. ಇಂತಹ ಬರಹಗಳು ಅಕ್ಷರ ಸಾಕ್ಷರತೆಗಿಂತ ಭಿನ್ನವಾದ ವೈಜ್ಞಾನಿಕ ಸಾಕ್ಷರತೆಗೆ ಒತ್ತಾಸೆಯಾಗಿವೆ. ಈ ವೈಜ್ಞಾನಿಕ ಸಾಕ್ಷರತೆಯು ಅನೌಪಚಾರಿಕ ವಿಜ್ಞಾನ ಶಿಕ್ಷಣದ ಜೊತೆಗೆ ಶೋಷಣೆ, ಮೂಢನಂಬಿಕೆ ಮತ್ತು ಕೃತಕತೆಯನ್ನು ಭೇದಿಸುವ ವೈಚಾರಿಕತೆಯನ್ನು ಬೆಳೆಸುತ್ತವೆ.

ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ಈ ಹೊತ್ತಿನಲ್ಲಿ ಎಲ್ಲ ರಂಗವನ್ನು ಪ್ರಭಾವಿಸುತ್ತಿರುವ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ತಿಳಿವು ಸಮಾಜದ ಎಲ್ಲ ವರ್ಗದವರಿಗೂ ಅನಿವಾರ್ಯವಾಗಿದೆ. ಹಾಗಾಗಿ ವಿಜ್ಞಾನದ ಸಂವಹನ ಮತ್ತು ಸಾಮಾಜೀಕರಣ ಈ ಹೊತ್ತಿನ ಸವಾಲಾಗಿದೆ. ವಿಜ್ಞಾನದ ಸಂವಹನ ಹಾಗೂ ಸಾಮಾಜೀಕರಣವು ಹಲವು ಬಗೆಯಲ್ಲಿ ಆಗುವಂತಹದ್ದು. ಅವು ಸಹಜವಾಗಿ ಬರಹ ಹಾಗೂ ತಂತ್ರಜ್ಞಾನಗಳ ಮೂಲಕ ತಲುಪುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ಪ್ರಸಾರದಲ್ಲಿ ಸಂವಹನ ಮಾಧ್ಯಮಗಳಾದ ಬಾನುಲಿ, ದೂರದರ್ಶನ, ಉತ್ಸವ, ತರಬೇತಿ ಕಾರ್ಯಾಗಾರ, ಜಾಥಾ, ಪ್ರದರ್ಶನ, ಸಂಗ್ರಹಾಲಯ,ತಜ್ಞರ ಉಪನ್ಯಾಸಗಳು, ವಿಸ್ತರಣಾ ಚಟುವಟಿಕೆಗಳು, ಮಾರ್ಗದರ್ಶನಗಳು, ಪತ್ರಿಕೆ ಮತ್ತು ನಿಯತಕಾಲಿಕೆಗಳ ಲೇಖನಗಳು ಗಮನಾರ್ಹ ಕಾರ್ಯಸಾಧಿಸಿ ಗುರುತರ ಜವಾಬ್ದಾರಿ ಹೊಂದಿದ್ದರೂ ಈ ಕಾರ್ಯದಲ್ಲಿ ಪುಸ್ತಕಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹಾಗೂ ವಿಶಿಷ್ಟತೆಯನ್ನು ಹೊಂದಿದೆ. ಹೀಗಾಗಿ ಯಾವುದೇ ಭಾಷೆಯಲ್ಲಿ ವಿಜ್ಞಾನ ಸಾಹಿತ್ಯ ಪ್ರಕಾರಕ್ಕೆ ವಿಶೇಷವಾದ ಮಹತ್ವವಿದೆ. ಇನ್ನು ಕನ್ನಡದಲ್ಲಿ ವಿಜ್ಞಾನ ಸಂವಹನೆಯನ್ನು ಅವಲೋಕಿಸೋಣ, ಕನ್ನಡ ಭಾಷೆಯಲ್ಲಿ ಜಗತ್ತಿನ ವಿವಿಧ ಭಾಷೆಗಳಲ್ಲಿ ಮೂಡಿಬಂದಿರುವಷ್ಟೇ ಸಮರ್ಥವಾದ ರೀತಿಯಲ್ಲಿ ಕತೆ, ಕಾವ್ಯ, ಕಾದಂಬರಿ, ಪ್ರಬಂಧ, ನಾಟಕಗಳು ಮುಂತಾದ ಪ್ರಕಾರಗಳಲ್ಲಿ ಸೃಜಿಸಿರುವ ರಚನೆಗಳನ್ನು ಒಟ್ಟಾರೆ ‘ಕನ್ನಡ ಸಾಹಿತ್ಯ’ ಎಂದು ವಿಭಾಗಿಸಲಾಗಿದೆ. ನಮ್ಮ ಬಹುಪಾಲು ಕನ್ನಡದ ಬರಹಗಳು ಕನ್ನಡ ಅಧ್ಯಾಪಕರ ಅಥವಾ ಇಂಗ್ಲಿಷ್ ಅಧ್ಯಾಪಕರ ಸೃಷ್ಟಿಗಳೇ ಆಗಿವೆ. ಹಾಗಾಗಿ ಕನ್ನಡದ ಓದು ಮತ್ತು ಬರಹಗಳು ಹೆಚ್ಚಿನಂಶ ಸಾಹಿತ್ಯಿಕವೇ ಆಗಿವೆ. ಈ ನಿಟ್ಟಿನಲ್ಲಿ ಕನ್ನಡದ ವಿಜ್ಞಾನ ಬರಹಗಳೂ ಸಹ ಸಾಹಿತ್ಯಿಕ ಮಾದರಿಯನ್ನೇ ಅನುಸರಿಸಿ ಬರೆದಿರುವುದು ಹೆಚ್ಚು. ಆದರೆ ವಿಜ್ಞಾನದ ಓದು ಬರಹ ಸಾಹಿತ್ಯಿಕ ಮಾದರಿಗಿಂತ ಭಿನ್ನವಾದುದೆಂದು ತಿಳಿಯಬೇಕಾಗಿದೆ. ಕಾವ್ಯದ ಓದಿಗೂ ಗದ್ಯದ ಓದಿಗೂ ವಿಭಿನ್ನವಾದ ಗ್ರಹಿಕೆಗಳಿರುವ ಹಾಗೆ ಹಾಗೂ ಗದ್ಯಪ್ರಕಾರದಲ್ಲಿ ಕತೆಗೂ, ಪ್ರಬಂಧಕ್ಕೂ ಅಥವಾ ಕಾದಂಬರಿಗೂ ಭಿನ್ನವಾದ ಸಂರಚನೆಗಳು ಸೃಜಿಸಿ ಕೊಂಡಿರುವಂತೆಯೇ ವಿಜ್ಞಾನದ ಬರಹಗಳು ತಮ್ಮದೇ ಆದ ಭಿನ್ನತೆಯ ಸಂರಚನೆಯನ್ನು ಹೊಂದಿರುತ್ತವೆ. ವಿಜ್ಞಾನದೊಳಗಿನ ಬೆರಗು, ಸೌಂದರ್ಯಗಳನ್ನು ಗುರುತಿಸಿ, ಅವುಗಳ ಲಕ್ಷಣಗಳನ್ನು ಗ್ರಹಿಸಿ ಪರಿಭಾವಿಸುತ್ತಾ ಒಡಮೂಡುವ ವಿಜ್ಞಾನ ಬರಹ ಸಾಹಿತ್ಯಿಕ ಮಾದರಿಗಿಂತ ಭಿನ್ನವಾದ ವೈಶಿಷ್ಟತೆಯಿಂದ ಕೂಡಿರುತ್ತದೆ.

ಕನ್ನಡದಲ್ಲಿ ವಿಜ್ಞಾನ ಸಂವಹನಯೆಂದೊಡನೆ ಸಾಮಾನ್ಯ ವಾಗಿ ಕಳೆದ 300 ವರ್ಷಗಳಲ್ಲಿ ಪಾಶ್ಚಾತ್ಯರೊಡನೆ ಚಾರಿತ್ರಿಕವಾಗಿ ಏರ್ಪಟ್ಟ ಸಂಪರ್ಕದ ಫಲವಾಗಿ ಮತ್ತು ಇಂಗ್ಲಿಷ್ ಭಾಷೆಯ ಕಲಿಕೆಯೊಡನೆ ಲಭ್ಯವಾದ ವೈಜ್ಞಾನಿಕ ಮಾಹಿತಿಗಳನ್ನು ಕನ್ನಡದಲ್ಲಿ ತಿಳಿಸುವ ಪ್ರಯತ್ನದೊಂದಿಗೆ ಗುರುತಿಸಿಕೊಳ್ಳುವುದು ರೂಢಿಯಲ್ಲಿದೆ. ಆದರೆ ಕನ್ನಡಿಗರು ಪ್ರಾಚೀನ ಕಾಲದಿಂದಲೇ ಪಾಶ್ಚಾತ್ಯರೊಡನೆ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದರು ಅದಕ್ಕೆ ಬೇಕಾದ ತೂಕ ಅಳತೆಮಾಪಕಗಳು ಅತ್ಯಂತ ಮಹತ್ವವಾಗಿದ್ದವೆಂದು ಕ್ರಿ.ಶ.6 ನೇ ಶತಮಾನದ ಅಲೆಗ್ಸಾಂಡ್ರಿಯದ ವರ್ತಕನ ಉಲ್ಲೇಖ ಹಾಗೂ ಕ್ರಿ.ಶ 732-733ರ ಒಂದು ಶಾಸನವು ತಿಳಿಸುತ್ತವೆ. ಕ್ರಿ.ಶ.1025ರಲ್ಲಿ ಚಾವುಂಡರಾಯನು ಬರೆದ ‘ಲೋಕೋಪಕಾರ’ ವೆಂಬ ಗ್ರಂಥವು, ನರವೈದ್ಯ, ಸ್ತ್ರೀ ವೈದ್ಯ ಮತ್ತು ಬಾಲವೈದ್ಯವೆಂಬ ಅಧ್ಯಾಯದಲ್ಲಿ ಪುರುಷರ, ಸ್ತ್ರೀಯರ ಹಾಗೂ ಮಕ್ಕಳಿಗೆ ಸಂಬಂಧಿಸಿದ ರೋಗಗಳು ಮತ್ತು ಅವುಗಳ ಚಿಕಿತ್ಸಾಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ಕೃತಿ.ಜೊತೆಗೆ ಸಸ್ಯಗಳು,ಅವುಗಳಿಗೆ ತಗಲುವ ರೋಗಗಳು, ಚಿಕಿತ್ಸಾಕ್ರಮಗಳು, ಹಣ್ಣಿನ ಮತ್ತು ಹೂವಿನ ಗಿಡಗಳನ್ನು ಕಸಿಮಾಡುವ ವಿಧಾನಗಳನ್ನು ತಿಳಿ

ುವ ಸಸ್ಯಶಾಸ್ತ್ರವನ್ನು ಈ ಗ್ರಂಥ ಒಳಗೊಂಡಿದೆ. ಕ್ರಿ.ಶ.1200 ರಲ್ಲಿ ದೇವೇಂದ್ರ ಮುನಿ ಎಂಬವರು ‘ಬಾಲಗ್ರಹ ಚಿಕಿತ್ಸೆ’ ಎಂಬ ಗ್ರಂಥವನ್ನು ಬರೆದ ಉಲ್ಲೇಖವಿದೆ. ಇನ್ನು ಕೃಷಿಪ್ರಧಾನ ಸಮಾಜದಲ್ಲಿ ಪಶುಗಳ ಸಂರಕ್ಷಣೆ ಅಗತ್ಯವಾಗಿರುತ್ತದೆ. ಸುಮಾರು 8ನೇ ಶತಮಾನದಲ್ಲಿ ಶ್ರೀಪುರುಷ ವಿರಚಿತ ‘ಗಜಶಾಸ್ತ್ರ’ ಆನೆಗಳ ಬಗ್ಗೆ ಬರೆದ ವಿಜ್ಞಾನ ಸಾಹಿತ್ಯ. 6ನೇ ವಿಕ್ರಮಾದಿತ್ಯನ ತಮ್ಮ ಕೀರ್ತಿವರ್ಮನು ’ಗೋವೈದ್ಯ’ ಗ್ರಂಥದಲ್ಲಿ ಪಶುಗಳ ರೋಗಗಳು ಮತ್ತು ಅವುಗಳ ಚಿಕಿತ್ಸಾಕ್ರಮಗಳ ಬಗ್ಗೆ ಬರೆದಿದ್ದಾನೆ. ’ಮಾನಸೋಲ್ಲಾಸ’ ಎಂಬ ಕೃತಿಯಲ್ಲಿ ಆನೆಗಳ ಸ್ವಭಾವ ಮತ್ತು ಅವುಗಳನ್ನು ಪಳಗಿಸಲು ಬಳಸುತ್ತಿದ್ದ ಅನೇಕ ಔಷಧಿಗಳ ಉಲ್ಲೇಖದ ಜೊತೆಗೆ ಕೋಳಿ, ಟಗರು, ಕೋಣ, ಜಿಂಕೆ, ಪಾರಿವಾಳ, ಗಿಡುಗ ಮುಂತಾದ ಬೇರೆ ಬೇರೆ ತಳಿಗಳನ್ನು ಕುರಿತಾದ ವಿವರಗಳಿವೆ. ಕ್ರಿ.ಶ 1012ರ ಉಮ್ಮಚಿಗೆ ಶಾಸನದಂತೆ ನಾಗದೇಸಿಗ ಎಂಬ ಶಿಕ್ಷಕರು ಗಣಿತ ಮತ್ತು ಖಗೋಳ ವಿಷಯಗಳನ್ನು ಕುರಿತು ಗ್ರಂಥರಚನೆ ಮಾಡಬಲ್ಲವರಾಗಿದ್ದರೆಂದು ತಿಳಿದುಬರುತ್ತದೆ. ಕ್ರಿ.ಶ. 1000ರಲ್ಲಿ ಚಂದ್ರಭಟ್ಟ ಎಂಬವರು ಮಳೆಗೆ ಸಂಬಂಧಿಸಿದ ’ವೃಷ್ಟಿಶಾಸ್ತ್ರ’ ಗ್ರಂಥ ರಚನೆ ಮಾಡಿರುವ ಉಲ್ಲೇಖವಿದೆ. ಕನ್ನಡದ ಅತ್ಯಂತ ಶ್ರೇಷ್ಠ ಗಣಿತಜ್ಞ ರಾಜಾದಿತ್ಯ ಕ್ರಿ.ಶ.1120 ರಲ್ಲಿದ್ದ ವಿಜ್ಞಾನ ಲೇಖಕ. ಇವನು ’ವ್ಯವಹಾರ ಗಣಿತ’, ’ಕ್ಷೇತ್ರಗಣಿತ’,’ಲೀಲಾವತಿ’’ ಮತ್ತು ’ಚಿತ್ರಹಸುಗೆ’ ಮುಂತಾದ ಹಲವಾರು ವಿಜ್ಞಾನ ಗ್ರಂಥಗಳಲ್ಲಿ ಗಣಿತಶಾಸ್ತ್ರದ ಸೂತ್ರಗಳನ್ನು ಸುಲಭವಾಗಿ ಅರ್ಥವಾಗುವ ಹಾಗೆ, ಓದಲು ಮನೋಹರವಾಗಿರುವ ಶೈಲಿಯಲ್ಲಿ ನಿರೂಪಿಸಿದ್ದಾನೆನ್ನುವ ಉಲ್ಲೇಖವಿದೆ. ಜೊತೆಗೆ ಮನೆಕಟ್ಟುವ, ನೀರು ಸಂಗ್ರಹಿಸಲು ಬಾವಿತೋಡುವ, ಅದಕ್ಕೆ ಅಗತ್ಯವಾದ ಅಳತೆ ಮಾಪಕಗಳ, ಉಪಕರಣಗಳನ್ನು ಸಜ್ಜುಗೊಳಿಸುವ ವಿವರಗಳನ್ನೂ ಕಾಣಬಹುದಾಗಿದೆ. ಹೀಗೆ ವೈಜ್ಞಾನಿಕ ಆವಿಷ್ಕಾರಗಳು, ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೆ ಸಮಾಜಮುಖಿಯಾಗಿದ್ದು ಅವುಗಳ ನಿರೂಪಣಾ ಸಾಹಿತ್ಯವು ಸ್ವತಂತ್ರವೂ, ಕಾವ್ಯಮಯವೂ ಆಗಿದ್ದದು ಕಂಡುಬರುತ್ತದೆ. ಒಟ್ಟಿನಲ್ಲಿ, ಇಂಗ್ಲಿಷ್ ಭಾಷೆಯ ಪ್ರಭಾವದಿಂದಾಗಿ ವಿಜ್ಞಾನವು, ಕನ್ನಡದ ಇತರ ಸಾಹಿತ್ಯ ಪ್ರಕಾರಗಳಂತೆ ಕಾಲೇಜುಗಳಲ್ಲಿ ಅಧ್ಯಯನ ವಿಷಯವಾಗುವ ಮೊದಲೇ ವಿದ್ವಾಂಸರ ಅಧ್ಯಯನ ಮತ್ತು ಸಾಹಿತ್ಯಸೃಷ್ಟಿಯ ಸಾಮಗ್ರಿಯಾಗಿತ್ತೆಂಬುದು ಮುಖ್ಯವಾಗುತ್ತದೆ. ಇನ್ನು ಆಧುನಿಕ ವಿಜ್ಞಾನ ಸಾಹಿತ್ಯ ಸಂವಹನೆಯ ವಿಷಯಕ್ಕೆ ಬಂದರೆ, 19ನೆಯ ಶತಮಾನ ಕೊನೆಯಿಂದ ವಿಜ್ಞಾನ ಸಾಹಿತ್ಯವು ಹೆಚ್ಚಾಗಿ ಇಂಗ್ಲಿಷ್‌ನಲ್ಲಿ ಮುಂದುವರಿದ ದೇಶಗಳ ಸೀಮಿತ ಸುಶಿಕ್ಷಿತರನ್ನು ತಲುಪಿದೆ. ಅದೇ ಕಾರ್ಯ ಕನ್ನಡದಲ್ಲಿ ಸುಮಾರು 120 ವರ್ಷಗಳ ಹಿಂದೆ ಆರಂಭವಾಗಿ ಸುಮಾರು 4,000ಕ್ಕೂ ಮಿಗಿಲಾದ ಪುಸ್ತಕಗಳ ಪ್ರಕಟನೆ ಹಾಗೂ ಸಾವಿರಾರು ಲೇಖನಗಳು ಪ್ರಕಟಗೊಂಡಿವೆ. 1839ರಲ್ಲಿ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರಿಂದ ಪ್ರಕಟವಾದ ಕನ್ನಡದ ಮೊದಲ ಮುದ್ರಿತ ಪುಸ್ತಕ ‘‘ಸಿರಿಗನ್ನಡ, ನುಡಿಗನ್ನಡ’’.40 ವರ್ಷಗಳ ನಂತರ 1879ರಲ್ಲಿ ಬೆಂಗಳೂರಿನ ರಾಮಸ್ವಾಮಿ ಶಾಸ್ತ್ರಿಯವರಿಂದ ಅನುವಾದಗೊಂಡ ಮೊದಲ ಜನಪ್ರಿಯ ವಿಜ್ಞಾನ ಪುಸ್ತಕ ‘‘ವ್ಯವಸಾಯ ಕ್ರಮ ಬೋಧಿನಿ’’ ಎಂದು ಡಾ॥

ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳ ಪ್ರಕಟನೆಗೆ ಪ್ರಥಮ ದಿಟ್ಟ ಹೆಜ್ಜೆಯಿಟ್ಟ ಮೈಸೂರು ವಿಶ್ವವಿದ್ಯಾನಿಲಯದ ಪಾತ್ರ ನಿಜಕ್ಕೂ ಶ್ಲಾಘನೀಯ. 1920ರ ದಶಕದಲ್ಲಿ ಎಸ್.ಎನ್.ನರಹರಯ್ಯನವರಿಂದ ಬರೆಯಿಸಿ ಪ್ರಕಟಿಸಿದ ‘ಖಗೋಳ ಶಾಸ್ತ್ರ’ ವೆಂಬ 450 ಪುಟಗಳ ಬೃಹತ್ ಗ್ರಂಥ ಒಂದು ಉಲ್ಲೇಖನೀಯ ಪ್ರಯತ್ನ. ವಿಶ್ವವಿದ್ಯಾನಿಲಯದ ಮತ್ತೊಂದು ಸಾಧನೆಯೆಂದರೆ ಅಧ್ಯಾಪಕ ಸಂಘ 1932ರಲ್ಲಿ ಆರಂಭಿಸಿದ ‘‘ಪ್ರಚಾರೋಪನ್ಯಾಸ ಮಾಲೆ’’ ಮುಂದೆ ಪ್ರಾರಂಭಿಸಿದ ಪ್ರಸಾರಾಂಗಕ್ಕೆ ಬೀಜಾಂಕುರವಾಗಿ ಜನಪ್ರಿಯ ವಿಜ್ಞಾನ ಪುಸ್ತಕಗಳು ಪ್ರಕಟವಾಗಿ ಸುಲಭ ಬೆಲೆಯಲ್ಲಿ ಶ್ರೀಸಾಮಾನ್ಯನ ಕೈಸೇರುವಲ್ಲಿ ನಾಂದಿಯಾಯಿತು. ಮುಂದೆ ಇದೇ ಮಾದರಿಯ ಪ್ರಸಾರಾಂಗ ಪ್ರಕಟನೆಗಳು ರಾಜ್ಯದ ಇತರ ವಿಶ್ವವಿದ್ಯಾನಿಲಯಗಳಲ್ಲಿ ನಡೆದು, ಇತ್ತೀಚೆಗೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ 50ಕ್ಕೂ ಮಿಗಿಲಾದ ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸಿದೆ. ಮುಂದೆ ಪ್ರೌಢಶಾಲಾ ಮಟ್ಟದಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಲು ಪ್ರಾರಂಭವಾದದ್ದು ಸಹ ಕನ್ನಡದಲ್ಲಿ ವಿಜ್ಞಾನ ಸಂವಹನೆ ಬೆಳೆಯಲು ನೆರವಾಯಿತು.

ಸಂಘ ಸಂಸ್ಥೆಗಳು ಹತ್ತಾರು ತಜ್ಞರನ್ನಿಟ್ಟು ಮಾಡಬಹುದಾದಕ್ಕಿಂತ ಹೆಚ್ಚಿನ ಕಾರ್ಯವನ್ನು ಏಕಾಂಗಿಯಾಗಿ ಸಾಧಿಸಿದ್ದು ಡಾ. ಕೋಟ ಶಿವರಾಮ ಕಾರಂತರು. ಭಾವಸಾಹಿತ್ಯ, ಬುದ್ಧಿಸಾಹಿತ್ಯ, ವೈಜ್ಞಾನಿಕವಾದ ವಿಚಾರ ಸಾಹಿತ್ಯಗಳನ್ನು ಹೇಗೆ ಹೇಳಬೇಕು ಎಂದು ಪ್ರಯೋಗ ಮಾಡಿದವರಲ್ಲಿ ಶಿವರಾಮ ಕಾರಂತರದ್ದು ದಿಟ್ಟ ಪ್ರಾಯೋಗಿಕ ಪ್ರಯತ್ನ. 1936ರಲ್ಲಿ ಮೂರು ಸಂಪುಟಗಳಲ್ಲಿ ಪ್ರಕಟವಾದ ‘‘ಬಾಲ ಪ್ರಪಂಚ’’ ಹಾಗೂ 1959-64 ರ ಕಾಲಘಟ್ಟದಲ್ಲಿ ಪ್ರಕಟವಾದ 4 ಸಂಪುಟಗಳ ‘‘ವಿಜ್ಞಾನ ಪ್ರಪಂಚ’’ ಹೊತ್ತಿಗೆಗಳು ಅವರ ಕ್ರಿಯಾಶೀಲತೆಗೆ ನಿದರ್ಶನವಾಗಿದೆ. ಕಾರಂತರ ಈ ಪ್ರಯತ್ನದ ಫಲವಾಗಿ ಕನ್ನಡ ಪತ್ರಿಕೆಗಳು ಕತೆ, ಕವನಗಳ ಜೊತೆಗೆ ಮಕ್ಕಳಿಗಾಗಿ ಮತ್ತು ಹಿರಿಯರಿಗಾಗಿ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿದವು. ಪ್ರಪಂಚ, ಕರ್ಮವೀರ, ಪ್ರಜಾವಾಣಿ ಮುಂತಾದ ಹಲವಾರು ಪತ್ರಿಕೆಗಳು ತಮ್ಮ ಸಾಪ್ತಾಹಿಕ ಪುರವಣಿಗಳಲ್ಲಿ ವಿಜ್ಞಾನಕ್ಕೂ ಸ್ಥಳ ನೀಡಿದವು. ನಂತರದ ಪ್ರಮುಖ ವಿಜ್ಞಾನ ಪ್ರಕಟನೆಗಳಲ್ಲಿ ಪ್ರಮುಖವಾದದ್ದು ಕಾದಂಬರಿಕಾರರಾದ ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ‘‘ಜ್ಞಾನ ಗಂಗೋತ್ರಿ: ಕಿರಿಯರ ವಿಶ್ವಕೋಶ’’, ಎಚ್,ಎನ್ ಸುಬ್ರಮಣ್ಯಂ ರವರ ಅನುವಾದ ಕೃತಿ ’ಗೂಢಮಯ ವಿಶ್ವ’, ಆರ್ ಎಲ್ ನರಸಿಂಹಯ್ಯರವರ ನಕ್ಷತ್ರದರ್ಶನ, ಜಗತ್ತಿನಹುಟ್ಟುಸಾವು ಮತ್ತು ಶಕ್ತಿ ಕೃತಿಗಳು.

ಕನ್ನಡದ ವಿಜ್ಞಾನ ಸಾಹಿತ್ಯದ ಮೈಲುಗಲ್ಲುಗಳನ್ನು ಗುರುತಿಸುವಾಗ ಹಲವಾರು ಹೆಸರುಗಳು ಢಾಳಾಗಿ ಕಾಣಿಸುತ್ತವೆ. ಹಠಾತ್ತನೆ ಮೂಡುವ ಹೆಸರೆಂದರೆ ಜಿ.ಟಿ, ನಾರಾಯಣರಾವ್(ಜಿ.ಟಿ.ಎನ್)ರವರದ್ದು. ಗಣಿತ ಅಧ್ಯಾಪಕರೂ, ಎಸ್‌ಸಿಸಿ ಅಧಿಕಾರಿಯೂ ಆಗಿದ್ದ ಅವರ ಭಾಷೆಯೂ ಅಷ್ಟೇ ನಿಖರ ಹಾಗೂ ಗಂಭೀರ. ವಿಜ್ಞಾನ ಸಂವಹನೆಗೆ ತನ್ನದೇ ಆದ ಶಿಷ್ಟ ಭಾಷೆ ಮತ್ತು ಶೈಲಿ ಅಗತ್ಯವೆಂದು ಅವರು ನಂಬಿದ್ದರು. 25ಕ್ಕೂ ಹೆಚ್ಚಿನ ಪುಸ್ತಕಗಳು, ನೂರಾರು ಲೇಖನಗಳನ್ನು ಬರೆದವರು ಜಿ.ಟಿ ಎನ್. 1969ರ ಹೊತ್ತಿಗಾಗಲೇ ಅಂದರೆ ಬೆಳ್ಳಾವೆಯವರು ಚಾಲನೆ ನೀಡಿದ ನಂತರದ ಕೇವಲ 50 ವರ್ಷಗಳಲ್ಲಿ ಇಂಗ್ಲಿಷ್‌ನಲ್ಲಿ ಬರೆದ ಮೂಲ ಲೇಖನದಷ್ಟೇ ಖಚಿತವಾದ ಅರ್ಥ ಹೊಮ್ಮಿಸುವ ಲೇಖನಗಳನ್ನು ಓದಿದಾಗ ಅವುಗಳನ್ನು ಸಂಪಾದಿಸುವಲ್ಲಿ ಜಿ.ಟಿ.ಎನ್ ರವರ ಸಿದ್ಧಹಸ್ತ ಗೋಚರವಾಗುತ್ತದೆ. ವಿಜ್ಞಾನ ಲೇಖಕರಿಗೆ ಕೈದೀವಿಗೆಯಾಗಿರುವ ನವಕರ್ನಾಟಕದವರು ಪ್ರಕಟಿಸಿರುವ ‘‘ವಿಜ್ಞಾನ ಪದವಿವರಣ ಕೋಶ’’ದ ಪ್ರಧಾನ ಸಂಪಾದಕರಾಗಿ ಜಿ.ಟಿ.ಎನ್. ನಿರ್ವಹಿಸಿದ ಕಾರ್ಯಕ್ಷಮತೆ ಎಲ್ಲ ಕಾಲಕ್ಕೂ ಸಲ್ಲುವಂತಹ ಅಮರ ಕೊಡುಗೆ.

ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಸ್ವಯಂ ಆಡಳಿತ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು(ಕ.ರಾ.ವಿ.ಪ) 1980ರಲ್ಲಿ ಪ್ರಾರಂಭವಾಯಿತು. ಕಿರುವಿಜ್ಞಾನ ಹೊತ್ತಿಗೆಗಳ ಪ್ರಕಟನೆ ಇದರ ಸಿಂಹಪಾಲು. ಜೆ.ಆರ್. ಲಕ್ಷ್ಮಣರಾವ್ ಮತ್ತು ಅಡ್ಯನಡ್ಕ ಕೃಷ್ಣಭಟ್ ರವರ ಸಂಪಾದಕತ್ವದಲ್ಲಿ 1990ರಲ್ಲಿ ಹೊರತಂದ ಇಂಗ್ಲಿಷ್-ಕನ್ನಡ ವಿಜ್ಞಾನ ಪದಕೋಶ ಅತ್ಯಂತ ಮಹತ್ವದ್ದಾಗಿದೆ. ಈ ಶಬ್ದಕೋಶದಲ್ಲಿ ಪಾರಿಭಾಷಿಕ ಪದಸಂಪತ್ತನ್ನು ರೂಪಿಸುವಾಗ ಅತ್ಯಂತ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯ ತಾನು 1919ರಲ್ಲಿ ಪ್ರಾರಂಭಿಸಿದ ಪ್ರಬುದ್ಧ ಕರ್ನಾಟಕದ ಅಂಗ ಪತ್ರಿಕೆಯಾಗಿ ‘‘ವಿಜ್ಞಾನ ಕರ್ನಾಟಕ’’ವೆಂಬ ನಿಯತಕಾಲಿಕವನ್ನು 1969ರಲ್ಲಿ ಪ್ರಕಟಿಸಲು ತೀರ್ಮಾನಿಸಿತು. ಹಾಗೂ ಇದೇ ಸಂದರ್ಭದಲ್ಲಿ ಪ್ರಬುದ್ಧ ಕರ್ನಾಟಕದ ಸುವರ್ಣ ಮಹೋತ್ಸವದ ಅಂಗವಾಗಿ , ಆಗಿನಿಂದ 25 ವರ್ಷಗಳ ಹಿಂದಿನ ದಿನಗಳಲ್ಲಿ ವಿಜ್ಞಾನ ಪ್ರಪಂಚದಲ್ಲಾದ ಸಾಧನೆ, ಸಂಶೋಧನೆ ಜೊತೆಗೆ ವಿಜ್ಞಾನಿಗಳ ಜೀವನಕಥೆಗಳನ್ನೊಳಗೊಂಡ ಎರಡು ಸಂಪುಟಗಳ ಪ್ರಬುದ್ಧ ಕರ್ನಾಟಕದ ಚಿನ್ನದ ಸಂಚಿಕೆಗಳಾಗಿ ಎರಡು ವಿಜ್ಞಾನ ಸಂಚಿಕೆಗಳು ಪ್ರಕಟವಾದವು. ಇವುಗಳಿಗೆ ಡಾ. ದೇ. ಜವರೇಗೌಡರವರು ಪ್ರಧಾನ ಸಂಪಾದಕರಾದರೆ, ಡಾ. ಹಾ.ಮಾ.ನಾಯಕ್, ಡಾ ಎಚ್. ತಿಪ್ಪೇರುದ್ರಸ್ವಾಮಿ ಮತ್ತು ಜೆ.ಆರ್. ಲಕ್ಷ್ಮಣರಾವ್ ರವರು ಸಂಪಾದಕರಾಗಿದ್ದರು. ಇದರಲ್ಲಿ ಒಟ್ಟು 1,572 ಪುಟಗಳಲ್ಲಿ ‘‘ವಿಜ್ಞಾನ ಇತಿಹಾಸದಲ್ಲಿ ಪ್ರಮುಖ ಮೈಲುಗಲ್ಲುಗಳು’’, ‘‘ಕಳೆದ 25 ವರ್ಷಗಳಲ್ಲಿ ವಿಜ್ಞಾನದ ಮುನ್ನಡೆ’’, ‘‘ಪ್ರಚಲಿತ ವಿಜ್ಞಾನ’’, ಮತ್ತು ‘‘ಭಾರತದಲ್ಲಿ ವಿಜ್ಞಾನ’’ ಎಂಬ ನಾಲ್ಕು ಶೀರ್ಷಿಕೆಗಳಲ್ಲಿ ವಿದ್ವತ್ಪೂರ್ಣವಾದ ವೈಜ್ಞಾನಿಕ ಲೇಖನಗಳಿವೆ. ದೇ.ಜವರೇಗೌಡರ ಪ್ರಕಾರ ‘‘ಸಾಹಿತ್ಯಾಂಕ ವಿಜ್ಞಾನಾಂಕಗಳೆರಡೂ 50ರ ಹರೆಯದ ಪ್ರಬುದ್ಧ ಕರ್ನಾಟಕದ ಅಪೂರ್ವ ಸಿದ್ಧಿಯ ಧವಳಗಿರಿ ಶೃಂಗಗಳು. ಕನ್ನಡದ ಶಕ್ತಿ ದಿಗ್ ದಿಗಂತದಲ್ಲಿ ಅನುರಣಿತವಾಗುವಂತೆ ಘೋಷಿಸಿದ ದೇವದತ್ತ ಪಾಂಚಜನ್ಯಗಳು’’

ವಿಜ್ಞಾನದ ಸಂವಹನೆಯಲ್ಲಿ ವೈಜ್ಞಾನಿಕ ವಿಷಯಗಳನ್ನು ಅತ್ಯಂತ ಸರಳವಾಗಿ ನಿರೂಪಿಸಿ, ಕೈಗೆಟಕುವ ಬೆಲೆಯಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಶ್ವವಿದ್ಯಾನಿಲಯಗಳು ಶ್ರಮಿಸುತ್ತಿರುವುದು ತಿಳಿದಿದೆ. ಇದು ಸೀಮಿತ ಪರಿಧಿಯಲ್ಲಿರುವ ಕಾರಣ ನವಕರ್ನಾಟಕ, ಸಪ್ನ, ಅಂಕಿತ ಮುಂತಾದ ಕೆಲವೇ ಕೆಲವು ಪ್ರಕಾಶಕರು ಸಣ್ಣ ಊರುಗಳಲ್ಲಿಯೂ ಪುಸ್ತಕ ಮಾರಾಟ ಮೇಳಗಳನ್ನು ನಡೆಸಿ , ಪುಸ್ತಕ ಪ್ರೀತಿಯನ್ನು, ಓದುವ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಹಳ್ಳಿ ಹಳ್ಳಿಗೆ ವಿಜ್ಞಾನ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ, ಸಾವಿರಾರು ಸಂಖ್ಯೆಯಲ್ಲಿ ವಿಜ್ಞಾನಪುಸ್ತಕಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದ ಸಂಘಟನೆ: ‘‘ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿ.ಜೆ.ವಿ.ಎಸ್)’’. ಈ ಸಮಿತಿ ಕಳೆದ 16ವರ್ಷಗಳಿಂದ ಪ್ರಕಟಿಸುತ್ತಿರುವ ಮಾಸಿಕ ‘‘ಟೀಚರ್’’ ಪತ್ರಿಕೆಯಲ್ಲಿ ಪ್ರಚಲಿತ ವಿಜ್ಞಾನದ ಆವಿಷ್ಕಾರಗಳನ್ನು ವಿವರಿಸುವ ಉತ್ತಮವೂ, ಸಂಗ್ರಹ ಯೋಗ್ಯವೂ ಆದ ಲೇಖನಗಳು ಹೊರಹೊಮ್ಮುತ್ತಿವೆ. ಈ ಸಮಿತಿಯ ‘‘ಖಗೋಳ ಯಾನ’’, ’ಚಂದ್ರಯಾನ’’, ‘‘ನಂಬಿಕೆ-ಮೂಢನಂಬಿಕೆ’’,’’ಬಿಗ್ ಬ್ಯಾಂಗ್’’, ‘‘ಶುಕ್ರ ಸಂಕ್ರಮಣ’’,’’ ಪ್ರಳಯ-2012’’ ಕೃತಿಗಳು ಹತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿರುವುದು ವಿಜ್ಞಾನ ಸಂವಹನೆಯ ಕಾರ್ಯದಲ್ಲಿ ಒಂದು ಸಾಧನೆಯೆಂದರೆ ಅತಿಶಯೋಕ್ತಿಯಲ್ಲ.

ಇನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ 1978ರಲ್ಲಿ ಆರಂಭಿಸಿದ ‘‘ಬಾಲವಿಜ್ಞಾನ’’ ಮತ್ತು ‘‘ವಿಜ್ಞಾನ ಲೋಕ’’ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘‘ವಿಜ್ಞಾನ ಸಂಗಾತಿ’’ ಪತ್ರಿಕೆಗಳು ಇಂದಿಗೂ ಪ್ರಚಲಿತ ವಿಜ್ಞಾನ ವಿಚಾರಗಳೊಂದಿಗೆ ಪ್ರಕಟಗೊಳ್ಳುತ್ತಿರುವ ನಿಯತಕಾಲಿಕೆಗಳೆಂಬುದು ಹೆಮ್ಮೆಯ ವಿಷಯ.

ಇದರೊಟ್ಟಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಧಾನ್ ಗುರುದತ್ ಮತ್ತು ಟಿ.ಆರ್ ಅನಂತರಾಮ್ ರವರ ಸಂಪಾದಕತ್ವದಲ್ಲಿ ಅನುವಾದ ಗೊಂಡಿರುವ ಜೆ.ಡಿ. ಬರ್ನಾಲ್ ರವರ ಇತಿಹಾಸದಲ್ಲಿ ವಿಜ್ಞಾನ ಕೃತಿ ಹಾಗೂ ನವಕರ್ನಾಟಕದಿಂದ ಟಿ.ಆರ್ ಅನಂತರಾಮ್ ರವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಇತ್ತೀಚಿನ ಕೃತಿ ‘‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’’ ಸಹ ಕನ್ನಡ ವಿಜ್ಞಾನ ಸಾಹಿತ್ಯದ ಸಂವಹನೆಯ ಮುಖ್ಯತಿರುವುಗಳೆಂದರೆ ತಪ್ಪಲ್ಲ. ಇನ್ನು ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ವಾರ್ತಾಪತ್ರಿಕೆಗಳ ಕೊಡುಗೆಯನ್ನು ತಿಳಿಯುವುದಾದರೆ, ಅವುಗಳು ವಿಜ್ಞಾನ ಸಂವಹನಕ್ಕೆ ಮೀಸಲಿಟ್ಟ ಪ್ರಮಾಣ ಶ�

Writer - ರೂಪದರ್ಶಿ ಜಿ. ವೆಂಕಟೇಶ್

contributor

Editor - ರೂಪದರ್ಶಿ ಜಿ. ವೆಂಕಟೇಶ್

contributor

Similar News