ಸಂವಿಧಾನ ಅಥವಾ ಧರ್ಮ ಸಂಸದ್ ದೇಶದ ಆಯ್ಕೆ ಯಾವುದು?

Update: 2018-11-28 18:40 GMT

ನಮ್ಮ ಸಂವಿಧಾನದ ಬಗ್ಗೆ ಕೇಸರಿವಾದಿಗಳಿಗೆ ಯಾವುದೇ ಗೌರವ ಇರುತ್ತಿದ್ದರೆ, ಅವರದನ್ನು ಧರ್ಮಸಂಸದ್ ಎಂಬುದಾಗಿ ಕರೆಯುತ್ತಿರಲಿಲ್ಲ. ಧರ್ಮ ಸಂಸದ್ ಎಂದರೇನು? ಅದು ಭಾರತದ ವೈವಿಧ್ಯ ಹಾಗೂ ಬಹುಜನ ಸಿದ್ಧಾಂತಗಳನ್ನು ಪ್ರತಿಫಲಿಸುತ್ತವೆಯೇ? ಧರ್ಮಸಂಸದ್‌ನಲ್ಲಿ ಎಷ್ಟು ಮಂದಿ ದಲಿತ, ಆದಿವಾಸಿ, ಬಹುಜನ ಸಮುದಾಯಗಳಿವೆ. ಧರ್ಮಸಂಸದ್‌ನಂತಹ ನೀತಿ ನಿರೂಪಣಾ ಸಂಸ್ಥೆಯಲ್ಲಿ ಅವರು ವಹಿಸುವ ಪಾತ್ರವೇನು?

ಸಂಘಪರಿವಾರ ಪ್ರೇರಿತ ಭಾರತ ಸರಕಾರವು ಅಧಿಕಾರಕ್ಕೆ ಬಂದ ಆನಂತರ ರಾಜಕೀಯ ಚರ್ಚೆಗಳಲ್ಲಿ ಬಳಕೆಯಾಗುತ್ತಿರುವ ಭಾಷೆಯು ಅತ್ಯಂತ ಆಘಾತಕಾರಿಯಾಗಿದೆ. ಪ್ರತಿಯೊಂದು ಚರ್ಚೆಯನ್ನೂ, ತು...ತು... ಮೈ..ಮೈ...ಎಂಬಂತಹ ಬೀದಿ ಜಗಳವಾಗಿ ಪರಿವರ್ತಿಸುವುದು ಸಂಘಪರಿವಾರದ ಪ್ರತಿಯೊಬ್ಬರೂ ಕಲಿತಿರುವ ಕಲೆಯಾಗಿದೆ. ದಿನಂಪ್ರತಿ ಬೈಗುಳಗಳು ಹಾಗೂ ಇತಿಹಾಸವನ್ನು ತಿರುಚಿ ಮಾತನಾಡುವ ಕಲೆಯಲ್ಲಿ ಅವರು ಪರಿಣಿತರಾಗಿದ್ದಾರೆ. ನೀವು ಪ್ರಜಾಪ್ರಭುತ್ವವಾದಿಯಾಗಿರುವ ತನಕ ಹಾಗೂ ಪ್ರಜಾಪ್ರಭುತ್ವದ ಮೂಲಭೂತ ಸಿದ್ಧಾಂತಗಳ ಮೇಲೆ ಗೌರವವಿರಿಸಿಕೊಂಡು ನಿಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಟಿವಿ ಸ್ಟುಡಿಯೋಗಳಲ್ಲಿ ‘ಹಿಂದುತ್ವವಾದದ ಡಾನ್’ಗಳು ಮಾಡುತ್ತಿರುವ ನಿಂದನೆಗಳು, ಬೆದರಿಕೆಗಳನ್ನು ನೋಡಿದಾಗ ಹಿಂಸಾಚಾರವು ಭಾರತದಲ್ಲಿ ಎಂದೆಂದಿಗೂ ಆಳ್ವಿಕೆ ನಡೆಸಲಿದೆ ಎಂಬಂತಹ ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
   ಜನಪ್ರಿಯ ವಿಷಯಗಳ ಚರ್ಚೆಯಲ್ಲಿ ಚೇಲಾಗಳು ತಮ್ಮ ನಾಯಕರನ್ನು ನಿಜಕ್ಕೂ ಅನುಕರಿಸತೊಡಗುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ ವ್ಯಕ್ತಿ ಸಂಜಯ್‌ಗಾಂಧಿ ಆಗಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂಜಯ್‌ಗಾಂಧಿಯವರ ಯುವಬ್ರಿಗೇಡ್‌ಗೆ, ಎದುರಾಳಿಗಳನ್ನು ಬೆದರಿಸುವುದಷ್ಟೇ ಕಾಯಕವಾಗಿತ್ತು ಎಂಬುದಾಗಿ ನಾನು ಸುದೀರ್ಘ ಲೇಖನವೊಂದನ್ನೇ ಬರೆದಿದ್ದೆ. ಅವರಾಗ ಅರಚುವ ಬ್ರಿಗೇಡ್ ಆಗಿದ್ದರು ಮತ್ತು ಅವರೀಗ ಎಲ್ಲಿದ್ದಾರೆಂಬುದು ಕೂಡಾ ಯಾರಿಗೂ ಗೊತ್ತಿಲ್ಲ. ಇಂದಿರಾಗಾಂಧಿಯವರು ‘‘ವಿದೇಶಿ ಶಕ್ತಿಯಾ ಭಾರತ್ ಕಿ ಏಕತಾ ಅಖಂಡತಾ ಕೋ ತೋಡ್ನಾ ಚಾಹತಿ ಹೈ’’ (ವಿದೇಶಿ ಶಕ್ತಿಗಳು ಭಾರತದ ಅಖಂಡತೆಯನ್ನು ಮುರಿಯಲು ಬಯಸಿದ್ದಾರೆ) ಎಂದು ಆಗಾಗ್ಗೆ ವಿರೋಧಿಗಳ ವಿರುದ್ಧ ಗೂಬೆ ಕೂರಿಸುತ್ತಿದ್ದರೇ ಹೊರತು, ಅವರು ಬೀದಿಭಾಷೆಯಲ್ಲಿ ತನ್ನ ವಿರೋಧಿಗಳ ವಿರುದ್ಧ ಹರಿಹಾಯುತ್ತಿದ್ದುದು ತೀರಾ ಕಡಿಮೆ. ರಾಜೀವ್‌ಗಾಂಧಿಯವರು ರಾಜಕಾರಣಕ್ಕೆ ಹೊಸಬರಾಗಿದ್ದರಿಂದ ಅವರ ಭಾಷಣದ ಬಹುದೊಡ್ಡ ಭಾಗವನ್ನು ಸಲಹೆಗಾರರೇ ಬರೆದು ಕೊಡುತ್ತಿದ್ದರು. ಪ್ರತಿಪಕ್ಷ ನಾಯಕರ ಬಗ್ಗೆ ರಾಜೀವ್ ಸೌಹಾರ್ದ ಹಾಗೂ ಗೌರವವನ್ನು ಕಾಯ್ದಿರಿಸಿಕೊಂಡಿದ್ದರಾದರೂ, ಕೆಲವು ಸಂದರ್ಭಗಳಲ್ಲಿ ಅದರಲ್ಲೂ ವಿಶೇಷವಾಗಿ, ವಿ.ಪಿ.ಸಿಂಗ್ ಸರಕಾರಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಮೇಲೆ ವಾಗ್ದಾಳಿ ನಡೆಸತೊಡಗಿದ ತನ್ನ ಚಮಚಾಗಳನ್ನು ನಿಯಂತ್ರಿಸುವಲ್ಲಿ ಸಹನೆಯನ್ನು ಕಳೆದುಕೊಂಡರು.
 ಕೆ.ಕೆ.ತಿವಾರಿ, ಕಲ್ಪನಾಥ್ ರಾಯ್, ವೀರ್ ಬಹಾದೂರ್ ಸಿಂಗ್ ಮತ್ತಿತರರು ಹದ್ದುಮೀರಿ ವರ್ತಿಸಿ, ವಿ.ಪಿ.ಸಿಂಗ್ ಅವರ ರ್ಯಾಲಿಗಳನ್ನು ತಡೆಯಲು ಯತ್ನಿಸಿದರಾದರೂ, ಅಂತಿಮವಾಗಿ ಅದು ತಿರುಗುಬಾಣವಾಗಿ ಪರಿಣಮಿಸಿತು.
 ರಾಜೀವ್‌ಗಾಂಧಿ ಜೊತೆಗಿನ ವಿರೋಧವು ಪರಾಕಾಷ್ಠೆಯ ಹಂತ ತಲುಪಿದಾಗಲೂ ಅವರ ನಿಕಟವರ್ತಿಯಾಗಿದ್ದು, ಆನಂತರ ಕಡುವೈರಿಯಾಗಿ ತಿರುಗಿಬಿದ್ದ ವಿ.ಪಿ.ಸಿಂಗ್ ಕೂಡಾ ರಾಜೀವ್‌ಗೆ ಒಂದೇ ಒಂದು ಕೆಟ್ಟ ಮಾತನ್ನು ಆಡಿರಲಿಲ್ಲ. ಕಾಂಗ್ರೆಸ್ ಪಕ್ಷವು ಅಧಿಕಾರವಹಿಸಿಕೊಂಡ ಸಂದರ್ಭದಲ್ಲಿ ಬಹುತೇಕ ಅವರ ಚಿಲ್ಲರೆ ನೇತಾಗಳು ಉದ್ಧಟತನದಿಂದ ವರ್ತಿಸಿದವು ಹಾಗೂ ತಮ್ಮ ದಣಿಗಳನ್ನು ಸಮಾಧಾನಪಡಿಸಲು ಕೊಳಕುಭಾಷೆಗಳನ್ನು ಆಡಿದರೂ, ಸಹನೆ ಕಳೆದುಕೊಳ್ಳದ ವಿ.ಪಿ.ಸಿಂಗ್, ಆ ರೀತಿ ವರ್ತಿಸುವುದು ಪ್ರತಿಪಕ್ಷಗಳ ಸಂಸ್ಕೃತಿಗೆ ಥರವಲ್ಲ ಎಂದು ಹೇಳಿದ್ದರು. ಮಧು ದಂಡವತೆ, ಸುರೇಂದ್ರ ಮೋಹನ್, ಮಧು ಲಿಮಯೆ ಅಥವಾ ಇಂದ್ರಜಿತ್ ಗುಪ್ತಾ ಅಥವಾ ಸೋಮನಾಥ್ ಚಟರ್ಜಿಯಂತಹ ನಾಯಕರು ಅಥವಾ ಅಟಲ್‌ಬಿಹಾರಿ ವಾಜಪೇಯಿ ಅವರಂತಹ ಜನಸಂಘ ಮೂಲದ ನಾಯಕರು ತಮ್ಮ ವಿರೋಧಿಗಳ ವೈಯಕ್ತಿಕ ಪ್ರಾಮಾಣಿಕತೆಯನ್ನು ಸಂದೇಹಿಸುವಾಗ ಕೆಳಮಟ್ಟದ ಪದಗಳನ್ನು ಎಂದಿಗೂ ಬಳಸಲಿಲ್ಲ.
 ಪ್ರಾಮಾಣಿಕವಾಗಿ ಹೇಳುವುದಾದರೆ, ಜನರು ಜಗಳಕ್ಕಿಳಿಯುವಾಗ ಬೊಬ್ಬೆ ಹಾಕುತ್ತಾರೆ ಹಾಗೂ ಹಿಂಸೆಗೂ ಇಳಿಯುತ್ತಾರೆ. ಒಮ್ಮೆ ನೀವು ವಾದದಲ್ಲಿ ಸೋತಲ್ಲಿ, ಪ್ರತಿದಾಳಿ ನಡೆಸಲು ಸಾಧ್ಯವೇ ಇಲ್ಲದಾಗ ನೀವು ಹಿಂಸೆಗೆ ಮುಂದಾಗುತ್ತೀರಿ. ಹಿಂದುತ್ವವಾದಿ ರಾಜಕಾರಣವು ತನ್ನ ಕೋರೆಹಲ್ಲು ಹಾಗೂ ಉಗುರುಗಳನ್ನು ಪ್ರದರ್ಶಿಸಿದೆ. ವಿನಾಶದ ಹೊರತು ಈ ದೇಶಕ್ಕೆ ಕೊಡಲು ಅವರಲ್ಲಿ ಏನೂ ಉಳಿದಿಲ್ಲ. ಬ್ರಾಹ್ಮಣ್ಯ ಯಜಮಾನಿಕೆಯನ್ನು ಅವಿಚ್ಛಿನ್ನವಾಗಿ ಉಳಿಸಿಕೊಳ್ಳುವುದೇ ಅವರ ಏಕೈಕ ಗುರಿಯಾಗಿದೆ. ‘ಜಿಸ್ ಕಿ ಜಿತ್‌ನಿ ಸಂಖ್ಯಾ ಭರಿ, ಉಸ್ಕಿ ಉತ್‌ನಿ ಸಾಜ್‌ಹಿದಾರಿ’ ಹಾಗೂ ‘ವೋಟ್ ಹಮಾರಾ ರಾಜ್ ತುಮಾರಾ ನಹೀ ಚಲೇಗಾ ನಹೀ ಚಲೇಗಾ’ ಹಾಗೂ ನಮ್ಮ ವ್ಯವಸ್ಥೆಯ ಈ ಮಹತ್ವದ ಆಯಾಮಗಳು ನಮ್ಮ ಬದುಕಿನಲ್ಲಿ ಬ್ರಾಹ್ಮಣ್ಯವಾದದ ಮೇಲೆ ಸಂಪೂರ್ಣ ನಿಯಂತ್ರಣಕ್ಕೆ ಬೆದರಿಕೆ ಹಾಕುತ್ತಿವೆ. ಆ ಕಾರಣಕ್ಕಾಗಿ, ನಮ್ಮ ದೇಶದಲ್ಲಿ ದೇವರು ಹಾಗೂ ದೇವಿಯರು ಅಥವಾ ದೇಗುಲಗಳಿಗೆ ಕೊರತೆಯಿದೆಯೆಂಬಂತೆ ದೇಗುಲ ನಿರ್ಮಾಣ ಚಳವಳಿ ನಡೆಯುತ್ತಿದೆ. ಈ ವಿಷಯಗಳ ಮೇಲೆ ತೆರಿಗೆ ಪಾವತಿದಾರರಹಣವನ್ನು ಖರ್ಚು ಮಾಡುವಲ್ಲಿ ಅವರಿಗೆ ನಾಚಿಕೆಯೆಂಬುದೇ ಇಲ್ಲ. ನೈಜ ವಿಷಯಗಳತ್ತ ಜನರ ಗಮನವನ್ನು ಸೆಳೆಯುವುದನ್ನು ಹೊರತುಪಡಿಸಿದರೆ, ಈ ದೇಶವು ಮಾನಸಿಕವಾಗಿ ಬ್ರಾಹ್ಮಣ್ಯದ ಸಂಪ್ರದಾಯವಾದದಿಂದ ಮಾನಸಿಕವಾಗಿ ಗುಲಾಮಗಿರಿಗೊಳಗಾಗಬಹುದು ಎಂಬುದು ಅವರಿಗೆ ತಿಳಿದಿದೆ.
  ಸಾಮೂಹಿಕ ಮಾಧ್ಯಮಗಳು ಇಂದು ಭಾರತದ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಬೆದರಿಕೆಯಾಗಿ ಪರಿಣಮಿಸಿವೆೆ. ಮುಸ್ಲಿಮರ ವಿರುದ್ಧದ ಹಿಂಸಾಚಾರವನ್ನು ಅದು ಲಜ್ಜಾಹೀನವಾಗಿ ಸಾಮಾನ್ಯೀಕರಣಗೊಳಿಸಿದೆ. ದಲಿತರು, ಆದಿವಾಸಿಗಳ ವಿರುದ್ಧ ನಿಂದನೆಗಳನ್ನು ತೀವ್ರಗೊಳಿಸಿರುವ ಅದು, ಸಂಸ್ಕೃತಿಯ ಹೆಸರಿನಲ್ಲಿ ಹುಸಿ ಬ್ರಾಹ್ಮಣ್ಯವಾದವನ್ನು ಸಮರ್ಥಿಸಿಕೊಂಡಿದೆ. ಆದರೆ ನಮ್ಮ ಸಂವಿಧಾನವು ಅವರಿಗೆ ಅತಿ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ ಹಾಗೂ ಅದನ್ನು ದುರ್ಬಲಗೊಳಿಸಲು ಅವರು ಬೇರೆ ಬೇರೆ ಮಾರ್ಗೋಪಾಯಗಳನ್ನು ಹುಡುಕಾಡುತ್ತಿದ್ದಾರೆ. ನೆನಪಿಡಿ. ನಮ್ಮ ಸಂವಿಧಾನದ ಬಗ್ಗೆ ಕೇಸರಿವಾದಿಗಳಿಗೆ ಯಾವುದೇ ಗೌರವ ಇರುತ್ತಿದ್ದರೆ, ಅವರದನ್ನು ಧರ್ಮಸಂಸದ್ ಎಂಬುದಾಗಿ ಕರೆಯುತ್ತಿರಲಿಲ್ಲ. ಧರ್ಮ ಸಂಸದ್ ಎಂದರೇನು? ಅದು ಭಾರತದ ವೈವಿಧ್ಯತೆ ಹಾಗೂ ಬಹುಜನ ಸಿದ್ಧಾಂತಗಳನ್ನು ಪ್ರತಿಫಲಿಸುತ್ತವೆಯೇ?. ಧರ್ಮಸಂಸದ್‌ನಲ್ಲಿ ಎಷ್ಟು ಮಂದಿ ದಲಿತ, ಆದಿವಾಸಿ, ಬಹುಜನ ಸಮುದಾಯಗಳಿವೆ. ಧರ್ಮಸಂಸದ್‌ನಂತಹ ನೀತಿ ನಿರೂಪಣಾ ಸಂಸ್ಥೆಯಲ್ಲಿ ಅವರು ವಹಿಸುವ ಪಾತ್ರವೇನು?.
ಈ ಧರ್ಮಸಂಸದ್ ಎಂಬುದು ಬಹುಜನ ಸಮೂಹದ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಳ್ಳಲು ನಡೆಸಲಾಗುತ್ತಿರುವ ತಂತ್ರ ಹಾಗೂ ವಿಧಾನವಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಪೂರ್ಣ ಆವೃತ್ತಿಯನ್ನು ಸಂವಿಧಾನರಚನಾ ಸಭೆಗೆ ಅನುಮೋದನೆಗಾಗಿ ಹಸ್ತಾಂತರಿಸಿದ್ದರು ಹಾಗೂ ಅದು ಅಂಗೀಕರಿಸಲ್ಪಟ್ಟಿತ್ತು. ‘‘ಈ ಸಂವಿಧಾನವು ನನಗೆ ರಾಜಕೀಯ ಸಮಾನತೆಯನ್ನು ನೀಡಿದೆ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ನಮಗೆ ಸಮಾನತೆ ಸಾಧಿಸದೆ ಹೋದಲ್ಲಿ ಸಂವಿಧಾನವು ಯಶಸ್ವಿಯಾಗಲಾರದು’’ ಎಂದು ಹೇಳಿದ್ದರು.
 ಆದರೆ ದುರಂತ ನೋಡಿ. ಜನತೆ ಈಗಲೂ ಹಸಿವಿನಿಂದ ಸಾಯುತ್ತಿದ್ದಾರೆ. ದಲಿತರ ವಿರುದ್ಧ ಹಿಂಸಾಚಾರ ಪರಾಕಾಷ್ಠೆಗೇರಿದೆ. ಮಹಿಳೆಯರ ವಿರುದ್ಧ ಹಿಂಸಾಚಾರವು ಜಗತ್ತಿನಲ್ಲೇ ಭಾರತವನ್ನು ಅಸುರಕ್ಷಿತ ದೇಶಗಳಲ್ಲೊಂದಾಗಿ ಮಾಡಿದೆ. ಆದಿವಾಸಿಗಳನ್ನು ದೂರವಿರಿಸುವುದು ಹಾಗೂ ಸ್ಥಳಾಂತರಿಸುವುದು ವಾಸ್ತವಿಕ ವಿಷಯವಾಗಿದೆ. ನಮ್ಮ ಸಾಮಾಜಿಕ ಹಾಗೂ ರಾಜಕೀಯ ಜೀವನದಿಂದ ಮುಸ್ಲಿಮರನ್ನು ಸಂಪೂರ್ಣವಾಗಿ ದುರ್ಬಲ ಗೊಳಿಸುತ್ತಿರುವುದು ಆಘಾತಕಾರಿಯಾಗಿದೆ ಹಾಗೂ ಅಸಾಂವಿಧಾನಿಕವಾಗಿದೆ. ಆದಾಗ್ಯೂ, ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನು, ನಮ್ಮ ಉದ್ಯಮವನ್ನು, ನಮ್ಮ ಮಾಧ್ಯಮವನ್ನು, ನಮ್ಮ ಸಾಂಸ್ಕೃತಿಕ ವಲಯಗಳನ್ನು, ನಮ್ಮ ಸಾಮಾಜಿಕ ಸಂಸ್ಥೆಗಳನ್ನು, ವಿದ್ಯಾರಂಗ ಹಾಗೂ ನ್ಯಾಯಾಂಗವನ್ನು ಈಗಲೂ ಅವರು ನಿಯಂತ್ರಿಸುತ್ತಿದ್ದಾರೆ. ಆಡಳಿತದ ಎಲ್ಲಾ ಅಂಗಗಳೂ ಅವರ ಕೈಯಲ್ಲಿರುವಾಗ ಯಾಕವರು ಹೆದರುತ್ತಿದ್ದಾರೆ ಹಾಗೂ ತವಕದಲ್ಲಿದ್ದಾರೆಂಬ ಪ್ರಶ್ನೆ ಉದ್ಭವಿಸುತ್ತದೆ.
 ಅಧಿಕಾರದ ಹಿಡಿತವನ್ನು ಅವರು ಕಳೆದುಕೊಳ್ಳುತ್ತಿದ್ದಾರೆಂಬ ಭೀತಿಯು ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಆದಾಗ್ಯೂ ಅವರು ನಮ್ಮನ್ನು ಸಾಮಾಜಿಕವಾಗಿ-ಆರ್ಥಿಕವಾಗಿ ನಿಯಂತ್ರಿಸು ತ್ತಿದ್ದಾರೆ. ಪ್ರಮಾಣೀಕೃತವಾದ ಪಾಲಿಗಾಗಿ ಅವರ ಬೇಡಿಕೆ ಹೆಚ್ಚಾಗುತ್ತಿರುವಂತೆಯೇ, ದೊಡ್ಡ ಸಂಖ್ಯೆಯ ಜನರು ಬೌದ್ಧ ಧರ್ಮ ಮತ್ತಿತರ ಕ್ರಾಂತಿಕಾರಿ ಚಿಂತನೆಗಳನ್ನು ಅಪ್ಪಿಕೊಳ್ಳತೊಡಗಿದ್ದಾರೆ. ಸಂಪೂರ್ಣವಾದ ಬ್ರಾಹ್ಮಣ್ಯ ಏಕಸ್ವಾಮ್ಯವು ಅತಿ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ನಿಂದನೆ, ಜೋಕುಗಳು, ದೇವಾಲಯಗಳು, ಪ್ರತಿಮೆಗಳು ಇವೆಲ್ಲವೂ ಬಹುಜನ ಸಮೂಹದಿಂದ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ.
   ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮುಂದೆ ನಾವಿಂದು ತಲೆಬಾಗಬೇಕಾಗಿದೆ. ಅವರ ಕ್ರಾಂತಿಕಾರಿ ಚಿಂತನೆಗಳು ಈ ಬದಲಾವಣೆಗಳನ್ನು ತಂದಿವೆ. ಭಾರತಕ್ಕೆ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅವಕಾಶವನ್ನು ಅದು ನೀಡಿದೆ. ವಾಸ್ತವಿಕವಾಗಿ ಸಂವಿಧಾನದ ಮೂಲಭೂತ ಚೈತನ್ಯವನ್ನು ಗೌರವಿಸುವುದು, ಆಧುನಿಕತೆಯ ದಾರಿಯನ್ನು ಅನುಸರಿಸುವುದು, ಮಾನವತಾವಾದ, ಕ್ರಾಂತಿಕಾರಿ ಚಿಂತನೆ ಹಾಗೂ ಪ್ರಜಾತಾಂತ್ರಿಕ ಜೀವನಕ್ರಮಗಳನ್ನು ಆಯ್ಕೆ ಮಾಡುವುದಾಗಿದೆ. ದೇಗುಲಗಳಲ್ಲಿ, ಮಸೀದಿಗಳಲ್ಲಿ, ಧರ್ಮ ಸಂಸದ್‌ಗಳನ್ನು, ವೈಯಕ್ತಿಕ ಕಾನೂನುಗಳನ್ನು ಹಾಗೂ ಧಾರ್ಮಿಕ ವಿಷಯಗಳಲ್ಲಿ ಸದಾ ನಿರತವಾಗಿರುವಂತೆ ಮಾಡುವ ಮೂಲಕ ನಿಮ್ಮನ್ನು ಅಂಧಕಾರದ ಯುಗದೆಡೆಗೆ ಕೊಂಡೊಯ್ಯಲು ಯತ್ನಿಸಲಾಗುತ್ತದೆ. ಯಾವುದೇ ಭಿನ್ನಾಭಿಪ್ರಾಯದ ದೃಷ್ಟಿಕೋನಗಳನ್ನು ಸಹಿಸದ ಹಾಗೂ ನಿಮ್ಮನ್ನು ವರ್ಗೀಯವಾದಿ ಚಿಂತನೆಗಳಿಗೆ ಗುಲಾಮರನ್ನಾಗಿ ಮಾಡುವ ದಾರಿಯನ್ನು ಹಿಡಿಯಬೇಕೋ ಅಥವಾ ನಮ್ಮ ಪೂರ್ವಜರು ಬಯಸಿದಂತೆ ಭಾರತವು ಪ್ರಜಾತಾಂತ್ರಿಕ, ಜಾತ್ಯತೀತ, ಸಮಾಜವಾದಿ ಹಾಗೂ ಎಲ್ಲರನ್ನೂ ಒಳಗೊಂಡ ಗಣರಾಜ್ಯವನ್ನಾಗಿ ರೂಪಿಸಬೇಕೋ ಹಾಗೂ ಸಂಪೂರ್ಣ ಸೌಹಾರ್ದದೊಂದಿಗೆ ಬಾಳುವ ದಾರಿಯನ್ನು ಅನುಸರಿಸಬೇಕೋ ಎಂಬುದನ್ನು ಭಾರತ ಈಗ ನಿರ್ಧರಿಸಬೇಕಾಗಿದೆ.
ಕೃಪೆ: hastakshep.com

Writer - ವಿದ್ಯಾಭೂಷಣ್ ರಾವತ್

contributor

Editor - ವಿದ್ಯಾಭೂಷಣ್ ರಾವತ್

contributor

Similar News

ಜಗದಗಲ
ಜಗ ದಗಲ