‘ಶೇಡ್ಸ್ ಆಫ್ ಟ್ರುಥ್’ ವಾಸ್ತವಗಳನ್ನು ಬಿಚ್ಚಿಟ್ಟ ಕಪಿಲ್ ಸಿಬಲ್
ಸಿಬಲ್ ಅವರ ಪುಸ್ತಕದ ಅಮೂಲ್ಯ ಸಂಪನ್ಮೂಲವೆಂದರೆ, ವಾಸ್ತವಾಂಶಗಳ-ಕಠಿಣ ವಾಸ್ತವಾಂಶಗಳ ಗಣಿ ಮತ್ತು ಅವುಗಳನ್ನು ಪುಷ್ಟೀಕರಿಸಲು ಲೇಖಕರ ಕಡೆಯಿಂದಲ್ಲ- ಸ್ವತಂತ್ರ ಅಧಿಕಾರಯುತ ಮೂಲಗಳಿಂದ ನೀಡಿರುವ ಅಂಕಿಅಂಶಗಳು. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ವಿಜೃಂಭಿಸಲು ಮತ್ತು ವೈಫಲ್ಯಗಳನ್ನು ಕಡೆಗಣಿಸಲು ಮುಖ್ಯ ವಾಹಿನಿಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಬಳಸುತ್ತಿರುವ ಬುರುಡೆ, ಹೇರಿಕೆ ಮುಂತಾದ ವ್ಯವಸ್ಥಿತ ತಂತ್ರಗಳನ್ನು ಕೂಡಾ ಕಾಣಿಸುತ್ತವೆ.
ಕಪಿಲ್ ಸಿಬಲ್ ಅವರು ನರೇಂದ್ರ ಮೋದಿ ಸರಕಾರದ ವಿರುದ್ಧ ಕಟು ಟೀಕೆಯನ್ನು ಮಾಡಿದ್ದಾರೆ. ಆದರೆ ಕೆಲವು ಸತ್ಯಗಳು ನೋವುಂಟುಮಾಡುತ್ತವೆ. ಸತ್ಯ ಹೇಳುವವರ ಉದ್ದೇಶ ನೋವುಂಟು ಮಾಡುವುದೇ ಆಗಿದ್ದರೆ, ನೋವು ಉರಿಯುತ್ತದೆ. ಸತ್ಯ ಹೇಳುವವರು ಅದನ್ನು ತಮ್ಮ ಬಗ್ಗೆಯೇ ಹೇಳಿದ್ದರೆ ಅಥವಾ ಅವರ ಉದ್ದೇಶ ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುವುದಾಗಿದ್ದರೆ, ಅಂತಹ ಸ್ವಯಂ ಶಿಕ್ಷಕರು ಬೆಳಗುತ್ತಾರೆ. ಸ್ವಯಂ ಟೀಕೆ ಯಾವತ್ತಿದ್ದರೂ ಎಂದಿನಂತೆಯೇ ಬೆಳಗುತ್ತದೆ.
ಪುಸ್ತಕದ ಪರಿಚಯ (ಬೆನ್ನುಡಿ)ದಲ್ಲಿ ಹಾಮಿದ್ ಅನ್ಸಾರಿಯವರು ಇದನ್ನು ಹೇಳಿರುವುದರ ಅರ್ಥ ಅದುವೇ ಆಗಿದೆ. ಅವರು ಹೇಳುತ್ತಾರೆ: ಈ ಪುಸ್ತಕವು ಪ್ರಸ್ತುತದಲ್ಲಿ ನಡೆಯುತ್ತಿರುವುದಕ್ಕೆ ತನ್ನ ಪಾಲು ಸಲ್ಲಿಸಿರಬಹುದಾದ ಹಿಂದಿನ ಕಾಲಘಟ್ಟವೊಂದರ ಕೊರತೆಗಳನ್ನು ಕೂಡಾ ಗುರುತಿಸುತ್ತದೆ.
ಈ ಎರಡು ಶಬ್ದಗಳು (ಹಿಂದಿನ ಕಾಲಘಟ್ಟ ಮತ್ತು ಕೊರತೆ) ಮತ್ತು ‘ಗುರುತಿಸುವುದು’ ಕೂಡಾ ಈ ಬೆನ್ನುಡಿಯಲ್ಲಿರುವ ಮುಖ್ಯ ಶಬ್ದಗಳು. ಅಂದರೆ, ಸ್ವತಃ ಸಿಬಲ್ ಅವರೇ ಉನ್ನತ ಹುದ್ದೆಯಲ್ಲಿ ಇದ್ದಂತಹ ಮೋದಿಗಿಂತ ಹಿಂದಿನ ಯುಪಿಎ-1 ಮತ್ತು ಯುಪಿಎ-2ರ ಅವಧಿಯ ವೈಫಲ್ಯಗಳನ್ನು ಕೂಡಾ ಪುಸ್ತಕವು ಗುರುತಿಸುತ್ತದೆ, ಒಪ್ಪಿಕೊಳ್ಳುತ್ತದೆ ಮತ್ತು ಜವಾಬ್ದಾರಿ ಹೊರುತ್ತದೆ.
ಸಿಬಲ್ ಅವರ ಸ್ವಯಂ ಟೀಕೆಯೇ ಅವರ ಕಥನವನ್ನು ಬೆಳಗುವಂತೆ ಮಾಡಿರುವುದು. ನನ್ನ ಮಟ್ಟಿಗೆ ಈ ಪುಸ್ತಕದಿಂದ ಎತ್ತಿಕೊಳ್ಳಬಹುದಾದ ಹಲವಾರು ಸಾಲುಗಳು ಈ ಸ್ವಯಂಸತ್ಯದ ಕುರಿತಾಗಿಯೇ ಇವೆ. ಅವುಗಳಲ್ಲಿ ಈ ಕೆಳಗಿನ ಸಾಲುಗಳು ಸೇರಿವೆ.
♦ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಸೋತದ್ದು ಮಾತ್ರವಲ್ಲ; ಕೆಟ್ಟದಾಗಿ ಸೋತೆವು. ಬಾಕ್ಸಿಂಗ್‌ನ ಅಭಿವ್ಯಕ್ತಿಯಲ್ಲಿ ಹೇಳುವುದಾದರೆ ನಾವು ‘ಹಣ್ಣುಗಾಯಿ ನೀರುಗಾಯಿ’ಯಾದೆವು. (ಪುಟ 188)
♦ ರಾಮ್‌ದೇವ್ ಜೊತೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಭೇಟಿ ಒಂದು ದೊಡ್ಡ ಪ್ರಮಾದ. (ಪುಟ 191)
♦ ವರ್ಷಗಳಿಂದ ಪ್ರಾದೇಶಿಕ ಮತ್ತು ಸ್ಥಳೀಯ ಮಟ್ಟದ ನಮ್ಮ ಪಕ್ಷದ ನಾಯಕತ್ವ ತನ್ನ ಶಕ್ತಿಯನ್ನು ಸಂಚಯಿಸಲಿಲ್ಲ ಮತ್ತು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವತ್ತ ಗಮನ ಕೇಂದ್ರೀಕರಿಸಲಿಲ್ಲ. (ಪುಟ 192)
♦ ನಾವು ಭಾರತದ ಜನತೆಯ ಜೊತೆ ಸಂಪರ್ಕ ಸಾಧಿಸಲು ವಿಫಲರಾದೆವು. (ಪುಟ 193)
ಈ ನಾಲ್ಕು ಸಾಲುಗಳಂತಹ ಸಾಲುಗಳೇ ಮೋದಿ ಸರಕಾರವನ್ನು ಎದುರುಹಾಕಿಕೊಳ್ಳುವ ಈ ಪುಸ್ತಕದ ಪ್ಯಾರಾಗಳಿಗೆ, ಅಧ್ಯಾಯಗಳಿಗೆ ವಿಶ್ವಾಸಾರ್ಹತೆ ತಂದುಕೊಟ್ಟಿವೆ. ಈ ರೀತಿಯಾಗಿ ಅಂತರ್ಮುಖಿಯಾಗಿ ನೋಡುವ ಇಂತಹ ಶಕ್ತಿಶಾಲಿ ಸಾಲುಗಳ ಹೊರತಾಗಿ ಈ ಪುಸ್ತಕವು ಏಕಪಕ್ಷೀಯ, ಅಷ್ಟೇ ಏಕೆ-ಪ್ರಚಾರ ಸಾಮಗ್ರಿ ಎಂಬ ಆರೋಪಕ್ಕೆ ತೆರೆದುಕೊಳ್ಳುತ್ತಿತ್ತು.
ಸಿಬಲ್ ಅವರ ಪುಸ್ತಕದ ಅಮೂಲ್ಯ ಸಂಪನ್ಮೂಲವೆಂದರೆ, ವಾಸ್ತವಾಂಶಗಳ-ಕಠಿಣ ವಾಸ್ತವಾಂಶಗಳ ಗಣಿ ಮತ್ತು ಅವುಗಳನ್ನು ಪುಷ್ಟೀಕರಿಸಲು ಲೇಖಕರ ಕಡೆಯಿಂದಲ್ಲ- ಸ್ವತಂತ್ರ ಅಧಿಕಾರಯುತ ಮೂಲಗಳಿಂದ ನೀಡಿರುವ ಅಂಕಿಅಂಶಗಳು. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ವಿಜೃಂಭಿಸಲು ಮತ್ತು ವೈಫಲ್ಯಗಳನ್ನು ಕಡೆಗಣಿಸಲು ಮುಖ್ಯ ವಾಹಿನಿಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಬಳಸುತ್ತಿರುವ ಬುರುಡೆ, ಹೇರಿಕೆ ಮುಂತಾದ ವ್ಯವಸ್ಥಿತ ತಂತ್ರಗಳನ್ನು ಕೂಡಾ ಕಾಣಿಸುತ್ತವೆ.
ನಮ್ಮ ಚುನಾವಣಾ ರಾಜಕೀಯ ಕ್ಷೇತ್ರವಿರಲಿ, ನಮ್ಮ ನ್ಯಾಯಾಂಗ ಸಂರಚನೆ ಇರಲಿ, ನಮ್ಮ ಆರ್ಥಿಕತೆ, ವಿದೇಶಾಂಗ ನೀತಿ ಇತ್ಯಾದಿಗಳನ್ನು ಸಿಬಲ್ ಮುಖಾಮುಖಿಯಾಗಿ ಎದುರಿಸುತ್ತಾರೆ. ಏನೋ ಒಂದು ಚಮತ್ಕಾರ ನಡೆಯುತ್ತಿದೆ; ಬಡವರು ಮತ್ತು ಶ್ರೀಮಂತರಿಬ್ಬರಿಗೂ ನಿಜವಾಗಿಯೂ ‘ಅಚ್ಛೇ ದಿನ್’ ಬಂದೇ ಬಿಟ್ಟಿದೆ ಎಂದು ನಂಬುವಂತೆ ಜನಾಭಿಪ್ರಾಯವನ್ನು ಮೂಡಿಸಲು ಬಯಸುವ ಕಾರ್ಯವಿಧಾನಗಳನ್ನು ಅವರು ತಮ್ಮ ಸುಲಲಿತ ಬರವಣಿಗೆಯ ಮೂಲಕ ತೋರಿಸಿಕೊಡುತ್ತಾರೆ.
ಕಾಂಗ್ರೆಸ್ ಪಕ್ಷಕ್ಕೆ ತನ್ನ ಸ್ಪಷ್ಟವಾದ ನಿಷ್ಠೆಯ ಕುರಿತು ಇರಿಸುಮುರಿಸು ತೋರಿಸದೆ, ಸತ್ಯ ಮತ್ತು ವಾಸ್ತವಾಂಶಕ್ಕೆ ಹೆಚ್ಚು ನಿಷ್ಠೆಯನ್ನು ತೋರಿಸುವುದರ ಮೂಲಕ ಪುಸ್ತಕವು ಇದನ್ನು ಮಾಡುತ್ತದೆ. ನಾನು ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಸಿಬಲ್ ಹೇಳುವುದಿಲ್ಲ; ಕಾಂಗ್ರೆಸ್ ಇರಲಿ, ಇಲ್ಲದಿರಲಿ ನಾನು ವಾಸ್ತವದ ಪರವೂ ಮಾತನಾಡುತ್ತೇನೆಂದವರು ಹೇಳುತ್ತಾರೆ. ಅದನ್ನವರು ಪಾಲಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿವಂದನೆಗಳು. ಆಧಾರ್ ಕುರಿತ ಅವರ ತರ್ಕಬದ್ಧ ಅಧ್ಯಾಯದಲ್ಲಿ ಒಂದು ವೇಳೆ ಅವರು- ನಾವು ಯುಪಿಎಯವರು ದತ್ತಾಂಶಗಳ ದುರುಪಯೋಗದ ಸಾಧ್ಯತೆಯನ್ನು ಮುಂಗಾಣಬೇಕಿತ್ತು ಆದರೆ, ಮುಂಗಾಣಲಿಲ್ಲ ಎಂದೇನಾದರೂ ಅವರು ಹೇಳಿದ್ದರೆ, ಅವರ ವಾದಕ್ಕೆ ಅದು ಇನ್ನಷ್ಟು ತೂಕ ಒದಗಿಸುತ್ತಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನದ ಮಾಜಿ ಮಂತ್ರಿಯಾಗಿ ಅದೇ ವಿಷಯದ ಕುರಿತ ಸಿಬಲ್ ಅವರ ಅಧ್ಯಾಯವನ್ನು ಪಾಂಡಿತ್ಯಪೂರ್ಣವಾಗಿ ಬರೆಯಲಾಗಿದೆ.
ಇದಕ್ಕಿಂತ ನಿಜವಾದ ಒಂದು ಸಾಲನ್ನು ಬರೆಯಲು ಸಾಧ್ಯವಿಲ್ಲ: ನಿಸರ್ಗವು ತನ್ನನ್ನು ನಾಶಪಡಿಸಿಕೊಳ್ಳುವ ಮತ್ತು ರಕ್ಷಿಸಿಕೊಳ್ಳುವ- ಎರಡೂ ಹಾದಿಗಳನ್ನು ಹೊಂದಿದೆ. ಮುಂದೆ ಅವರು ಮ್ಯಾಂಗ್ರೋವ್ಗಳು ಮತ್ತು ಅವುಗಳ ನಿರ್ಣಾಯಕ ಪಾತ್ರದ ಬಗ್ಗೆ ಚುಟುಕಾಗಿದ್ದರೂ ಅಮೂಲ್ಯವಾದ ಚರ್ಚೆಯನ್ನು ನಡೆಸುತ್ತಾರೆ. ದಕ್ಷಿಣ ಧ್ರುವದಲ್ಲಿ ಭಾರತದ ಸಂಶೋಧನೆಗಳ ವಿಷಯ ಬಂದಾಗ ಅವರು ಕುತೂಹಲಿ ಶಾಲಾ ಹುಡುಗನಾಗುತ್ತಾರೆ. ಆದರೆ, ಸಂಶೋಧನೆಯ ಕುರಿತು ತನ್ನ ಆಸಕ್ತಿಯ ಭರದಲ್ಲಿ ಈಗಾಗಲೇ ಗೊತ್ತಿರುವ ಜ್ಞಾನವನ್ನು ಮತ್ತೆ ಸ್ಥಾಪಿಸುವುದು ಆ ಮೂಲಕ ಮನುಷ್ಯನ ಹೆಜ್ಜೆಗುರುತು ಮತ್ತು ತ್ಯಾಜ್ಯದಿಂದ ಭೂಮಿಯಲ್ಲಿ ಅಕ್ಷಯವಾಗಿ ಇನ್ನೂ ಉಳಿದುಕೊಂಡಿರುವ ಕೊನೆಯ ತುಂಡು ನೆಲವನ್ನು ಮಲಿನಗೊಳಿಸುವುದರ ಅರ್ಥಹೀನತೆಯನ್ನು ಅವರು ಮನಗಾಣುವುದಿಲ್ಲ. ಅಂಟಾರ್ಕ್ಟಿಕ್‌ನಲ್ಲಿ ಹಿಮಪದರಗಳು ಚಹಾದಲ್ಲಿ ಅದ್ದಿದ ಬಿಸ್ಕಿಟ್‌ನಂತೆ ಮುರಿದು ಕುಸಿಯುವುದು ಅವರಿಗೆ ಕಾಣುವುದಿಲ್ಲ. ಭಾರತದ ವಿದೇಶಾಂಗ ನೀತಿಯ ಬಗ್ಗೆ ಸಿಬಲ್ ಅವರ ಅಧ್ಯಾಯ ಮುಖ್ಯವಾಗಿ ಅಮೂಲ್ಯವಾಗಿದೆ; ಅದಕ್ಕಿಂತಲೂ ಹೆಚ್ಚಾಗಿ ನಮ್ಮ ನೆರೆಹೊರೆಯ ದೇಶಗಳ ಜೊತೆ ನಮ್ಮ ಸಂಬಂಧದ ಬಗ್ಗೆ ಅವರ ವಿಶ್ಲೇಷಣೆ. ಜಪಾನ್ ಮತ್ತು ಯುರೋಪ್ ಕುರಿತ ಪ್ಯಾರಾಗಳು ಔಪಚಾರಿಕವಾಗಿ ಹಾಕಿದಂತಿದ್ದರೆ, ಚೀನಾ, ರಶ್ಯಾ, ಇಸ್ರೇಲ್ ಮತ್ತು ಯುಎಸ್‌ಎ ಕುರಿತ ಅವರ ಪ್ಯಾರಾಗಳು ಕಣ್ಣುತೆರೆಸುವಂತಿವೆ. ಸಿಬಲ್ ಅವರಲ್ಲಿ ನಾವು ಭವಿಷ್ಯದ ವಿದೇಶಾಂಗ ಮಂತ್ರಿಯನ್ನು ಕಾಣಬಹುದು ಎಂಬುದು ನನ್ನ ನಂಬಿಕೆ.
ಪುಸ್ತಕದ ಹಿನ್ನುಡಿ ಊಟದ ನಂತರದ ಪಾಯಸದಂತಿದೆ. ‘‘ತಾರ್ಕಿಕವಾದ ಚುನಾವಣಾ ಪೂರ್ವ ಹೊಂದಾಣಿಕೆ ಕುರಿತ ಚಿತ್ರಣವನ್ನು ಇನ್ನಷ್ಟು ಉತ್ತಮಪಡಿಸಲು ಸಾಧ್ಯವಿಲ್ಲ. ಮತದಾರರು ಏನು ಮಾಡುತ್ತಾರೆ ಎಂಬುದು ಯಾವತ್ತೂ ಗೊತ್ತಾಗದು’’ ಎಂಬ ಪ್ರಾಮಾಣಿಕ ಹೇಳಿಕೆಯು ಆತ್ಮವಿಮರ್ಶೆಯಷ್ಟೇ ಪ್ರಾಮಾಣಿಕವೂ ಆಗಿದೆ.
ಆದರೆ, ಹಿನ್ನುಡಿ ಒಂದು ಪ್ರಶ್ನೆಯನ್ನು ಎತ್ತುವುದಿಲ್ಲ: ಅದೆಂದರೆ, ಪ್ರಮುಖ ಪ್ರತಿಪಕ್ಷಗಳು ಉದಾಹರಣೆಗೆ ‘ಆಪ್’ ನಂತಹ ಪಕ್ಷಗಳೊಂದಿಗೆ ಅಹಂಕಾರದಿಂದ ವರ್ತಿಸುವುದು ವಿವೇಕವೇ? ಒಬ್ಬ ಸಹ ಪ್ರಜಾಪ್ರಭುತ್ವವಾದಿ ಎಷ್ಟೇ ಕಿರಿಕಿರಿಯ ಟೀಕಾಕಾರನಾಗಿದ್ದರೂ ದೈತ್ಯನ ವಿರುದ್ಧದ ಸಮಾನ ಹೋರಾಟದಲ್ಲಿ ಸೇರಿಸಿಕೊಳ್ಳಬೇಡವೇ?
ಅಥವಾ ಸತ್ಯದ ಹೊಳಪಿನ ಮೇಲೆ ಅತಿವಿಶ್ವಾಸ, ಅಹಂಕಾರದ ಛಾಯೆ ಕವಿಯುವುದೇ? ತಿಳಿಯಲು ನಾವು ಸಿಬಲ್ ಅವರ 2019ರ ನಂತರದ ವಿಶ್ಲೇಷಣೆಗಾಗಿ ಕಾಯಬೇಕು.
ಕೃಪೆ: scroll.in