‘‘ಏ ಬುಲ್ ಬುಲ್ ಮಾತಾಡಕಿಲ್ವಾ....’’
ಅಂಬರೀಷ್ ಚಿತ್ರೋದ್ಯಮದಲ್ಲಿದ್ದೇ ಜನರಿಗೆ ಹತ್ತಿರವಾಗಿದ್ದರು. ತಮ್ಮ ದಾನಧರ್ಮ ಇತ್ಯಾದಿಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಜನರನ್ನು ತಲುಪುವ ನೆಲಮಟ್ಟದ ಜೀವನ ಶೈಲಿ ಅವರದು. ಆದುದರಿಂದಲೇ ರಾಜಕೀಯದಲ್ಲಿ ಅವರಿಗೆ ವಿಪುಲ ಅವಕಾಶಗಳಿದ್ದವು. ಆದರೆ ಅಂಬರೀಷ್ ಅವುಗಳನ್ನು ಕೈ ಚೆಲ್ಲಿಕೊಂಡರು.
ಸಿನೆಮಾ ಮತ್ತು ರಾಜಕೀಯ ಬೇರೆ ಬೇರೆ ಅಲ್ಲ. ಸಿನೆಮಾ ಮನರಂಜನೆ ಮಾತ್ರ ಅಲ್ಲ, ಜನಮಾನಸದ ಆಶಯಗಳು ಅದರೊಳಗಿರುತ್ತವೆ. ಅದರ ಮೂರ್ತ ರೂಪ ರಾಜಕೀಯ. ಸಿನೆಮಾ ನಟನೊಬ್ಬ ರಾಜಕೀಯಕ್ಕಿಳಿಯುವಾಗ ಶ್ರೀಸಾಮಾನ್ಯ ಆ ಪಾತ್ರವೇ ವಾಸ್ತವ ರೂಪತಳೆಯಿತೇನೋ ಎಂದು ಭಾವಿಸುತ್ತಾನೆ. ಎಂಜಿಆರ್, ಎನ್‌ಟಿಆರ್, ಜಯಲಲಿತಾ ವಿಷಯದಲ್ಲಿ ಇದು ನಡೆಯಿತು. ಬಹುಶಃ ಕರ್ನಾಟಕದಲ್ಲಿ ರಾಜ್‌ಕುಮಾರ್ ರಾಜಕೀಯಕ್ಕೆ ಕಾಲಿಟ್ಟಿದ್ದರೆ ತಮಿಳುನಾಡಿನಲ್ಲಿ ನಡೆದುದು ಕರ್ನಾಟಕದಲ್ಲೂ ನಡೆಯಬಹುದಿತ್ತೇನೋ. ಯಾಕೆಂದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದವರು ರಾಜ್‌ಕುಮಾರ್. ಅವರನ್ನು ಹೊರತು ಪಡಿಸಿದಂತೆ ಕರ್ನಾಟಕದಲ್ಲಿ ರಾಜಕೀಯದ ಮೂಲಕ ಜನಾನುರಾಗಿಯಾಗುವ ಸಾಧ್ಯತೆಯಿದ್ದ ಒಬ್ಬನೇ ಒಬ್ಬ ನಟನೆಂದರೆ ಅಂಬರೀಷ್. ಅಂಬರೀಷ್ ರಾಜಕೀಯಕ್ಕೆ ಕಾಲಿಟ್ಟಾಗ ಹಲವು ರಾಜಕಾರಣಿಗಳಿಗೆ ಅವರ ಕುರಿತಂತೆ ಆತಂಕವಿತ್ತು. ಎಲ್ಲಿ ಪ್ರತಿಸ್ಪರ್ಧಿಯಾಗಿ ಬಿಡುತ್ತಾನೆಯೋ ಎಂಬ ಆತಂಕವದು. ಆದರೆ ರಾಜಕೀಯದಲ್ಲಿ ಅಂಬರೀಷ್‌ಗೆ ಅಂಬರೀಷ್ ಅವರೇ ಶತ್ರುವಾದರು. ಅವರ ಬದುಕಿನ ಶೈಲಿ ರಾಜಕೀಯದಲ್ಲಿ ಅವರನ್ನು ಮೇಲೇರದಂತೆ ನೋಡಿಕೊಂಡಿತು. ಸಕಲ ಕನ್ನಡಿಗರನ್ನು ತಲುಪುವ ಅವಕಾಶವಿದ್ದರೂ ಅವರು ಕೇವಲ, ಒಕ್ಕಲಿಗ ಜಾತಿಯ ಬಲದಿಂದ ರಾಜಕೀಯ ಮಾಡುವ ಅನಿರ್ವಾಯತೆಗೆ ತಲುಪಿದರು. ಆದುದರಿಂದಲೇ ಅಂಬರೀಷ್ ಅವರನ್ನು ವಿಮರ್ಶಿಸುವಾಗ ಅವರ ರಾಜಕೀಯ ಬದುಕನ್ನು ಹೊರಗಿಡುವುದು ಅನಿವಾರ್ಯವಾಗುತ್ತದೆ. ಅವರ ಮೇಲೆ ಜನರಿಟ್ಟ ಅಗಾಧ ನಿರೀಕ್ಷೆ ಇಂದು ಅಂಬರೀಷ್‌ರನ್ನು ರಾಜಕೀಯದಲ್ಲಿ ವಿಫಲ ನಾಯಕನನ್ನಾಗಿಸಿದೆ. ಕೆಲವೊಮ್ಮೆ ಅವರು ವಿಲನ್ ಪಾತ್ರವನ್ನೂ ಇಲ್ಲಿ ನಿರ್ವಹಿಸಿದರು. ಅಂಬರೀಷ್ ಎಂದರೆ ಒಬ್ಬ ಅಪ್ಪಟ ನಟ. ಸಿನೆಮಾದಲ್ಲಿ ರಾಜಕೀಯ ಭ್ರಷ್ಟರ ವಿರುದ್ಧ ಬಂಡೇಳುವ ಆಶಯಗಳನ್ನು ಜನರಲ್ಲಿ ಬಿತ್ತಿದ ಅಪರೂಪದ ನಟ. ಅಂತ, ಚಕ್ರವ್ಯೆಹ, ರಂಗನಾಯಕಿ, ಏಳು ಸುತ್ತಿನ ಕೋಟೆ, ಮಮತೆಯ ಮಡಿಲು...ಮೊದಲಾದ ಚಿತ್ರಗಳ ಮೂಲಕ ನಾವು ಅಂಬರೀಷ್‌ರನ್ನು ಹುಡುಕುವ ಪ್ರಯತ್ನ ಮಾಡಬೇಕಾಗಿದೆ. ಬಹಿರಂಗವಾಗಿ ಉಢಾಳನೂ, ಒರಟನೂ, ಕೋಪಿಷ್ಟನೂ ಆಗಿದ್ದ ಅಂಬರೀಷ್ ಆಳದಲ್ಲಿ ಒಳ್ಳೆಯ ಮನಸ್ಸನ್ನು ಹೊಂದಿದವರು. ಇಂದು ನಾವು ಆ ಕಡೆಗೆ ಗಮನ ಸೆಳೆಯುವ ಕೆಲಸ ಮಾಡಬೇಕಾಗಿದೆ.
****
ಉಪ್ಪಿನಂಗಡಿಯ ಪ್ರೀತಂ ಟಾಕೀಸು. 1.50 ರೂಪಾಯಿಯ ಟಿಕೆಟ್. ಮುಂದೆ ಕುಳಿತರೆ ಸಿನೆಮಾ ಸ್ಪಷ್ಟವಾಗಿ ಕಾಣುತ್ತದೆ ಮತ್ತು ಎದುರಿನಲ್ಲಿ ಕೂತವರ ತಲೆ ಅಡ್ಡವಾಗುವುದಿಲ್ಲ ಎಂದು ನಾನು ಮತ್ತು ನನ್ನ ಗೆಳೆಯ ಮುಂದಿನ ಗಾಂಧಿ ಕ್ಲಾಸಲ್ಲಿ ಬೆಂಚಿನ ಮೇಲೆ ಕುಳಿತು ನೋಡಿದ ಚಿತ್ರ ಅದು. ಹೆಸರು ‘ಅಂತ’. ‘‘ಕುತ್ತೇ ಕನ್ವರ್ ಲಾಲ್ ಬೋಲೋ...’’ ಎನ್ನುವ ಕನ್ವರ್ ಲಾಲ್‌ನ ಕಠೋರ ಧ್ವನಿ ನಮ್ಮೆದೆಯೊಳಗೆ ಗಾಜಿನ ಚೂರುಗಳಂತೆ ಇಳಿಯುತ್ತಿತ್ತು. ಹಣೆಯಿಂದ ಸುರಿಯುತ್ತಿರುವ ಬೆವರು ಕನ್ವರ್‌ಲಾಲ್‌ನ ಕ್ರೌರ್ಯಕ್ಕೋ, ಚಿತ್ರಮಂದಿರದೊಳಗಿನ ಬೇಗೆಗೋ ಗೊತ್ತಿಲ್ಲ. ಚಿತ್ರವನ್ನು ನೋಡಿ ಬಂದ ನಾನು ಮನೆಯಲ್ಲಿ ಅದೇನೋ ದುಸ್ವಪ್ನ ಬಿದ್ದವನಂತೆ ಗುಮ್ಮನೆ ಕೂತಿದ್ದೆ. ಮನೆಯವರಾರಿಗೂ ಆ ಸಣ್ಣ ವಯಸ್ಸಲ್ಲಿ ನಾನು ಕದ್ದುಮುಚ್ಚಿ ಸಿನೆಮಾ ನೋಡುವುದಕ್ಕೆ ಹೋಗೋದು ಗೊತ್ತಿಲ್ಲ. ಇಂದಿಗೂ ನೆನಪಿದೆ. ಸುಶೀಲ್ ಕುಮಾರನ ಚೀರಾಟ, ನೋವು, ಹತಾಶೆ ನನ್ನ ರಾತ್ರಿಯ ನಿದ್ದೆಯನ್ನು ಅಲುಗಾಡಿಸಿತ್ತು. ಕರೆಂಟ್ ಶಾಕ್ ಮತ್ತು ಉಗುರುಗಳನ್ನು ಕೀಳುವ ಚಿತ್ರಹಿಂಸೆಗಳ ನಡುವೆ ನಾಯಕನ ಕರ್ತವ್ಯನಿಷ್ಠೆ, ಗರ್ಭಿಣಿ ಪತ್ನಿಯನ್ನು ಸಾಯಿಸುತ್ತಿದ್ದರೂ ಅಸಹಾಯಕನಾಗಿ ನರಳುವ ಸುಶೀಲ ಕುಮಾರ್, ಮೇಲಧಿಕಾರಿಗಳಿಂದ ಅವನಿಗಾಗುವ ವಿಶ್ವಾಸದ್ರೋಹ, ಆತನ ಆಕ್ರಂದನ.. ಓಹ್! ಅದಾಗಲೇ ಡಾ.ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಬದಲಿಗೆ ನಾನು ನನ್ನ ನಾಯಕನನ್ನು ಆರಿಸಿ ಕೊಂಡಿದ್ದೆ. ಆತನ ಹೆಸರೇ ಅಂಬರೀಷ್!
ಅದು ಡಾ. ರಾಜ್‌ಕುಮಾರ್ ಕನ್ನಡ ಚಿತ್ರೋದ್ಯಮವನ್ನು ಆಳುತ್ತಿದ್ದ ಕಾಲ. ಶ್ರೀಕೃಷ್ಣದೇವರಾಯ, ಮಯೂರ, ಗಂಧದಗುಡಿ ಹೀಗೆ ನಾನು ನನ್ನ ಕನ್ನಡ ನಾಡನ್ನು ಕಟ್ಟಿಕೊಂಡದ್ದು ರಾಜ್‌ಕುಮಾರ್ ಸಿನೆಮಾಗಳ ಮೂಲಕ. ಅದೊಂದು ಭ್ರಮೆಯ ನಾಡು. ಕಲ್ಪನಾ ವಿಲಾಸ. ಇಂತಹ ಹೊತ್ತಿನಲ್ಲಿ ಗಾಂಧಿನಗರಕ್ಕೆ ನಾಗರಹಾವಿನ ಪ್ರವೇಶವಾಯಿತು. ಆತನ ಹೆಸರು ವಿಷ್ಣುವರ್ಧನ್. ಅಂದು ಯುವ ತಲೆಮಾರು ರಾಜ್‌ಕುಮಾರ್ ಅವರೇ ಸಿನೆಮಾದ ಅಧಿಕೃತ ಸರ್ವಾಧಿಕಾರಿ. ಅವರಿಗೆ ಉತ್ತರಾಧಿಕಾರಿಯೇ ಇಲ್ಲ ಎಂದು ನಿರ್ಧರಿಸಿ ಬಿಟ್ಟಿತ್ತು. ಇಂತಹ ಹೊತ್ತಿನಲ್ಲಿ ಭಿನ್ನ ಸ್ವರಗಳು ಎದ್ದವು. ‘‘ನಾನು ವಿಷ್ಣುವರ್ಧನ್ ಅಭಿಮಾನಿ’’ ಎಂಬ ಬಂಡಾಯದ ಮಾತುಗಳು ಕೆಲವರ ಸಹನೆಯನ್ನು ಕೆಡಿಸತೊಡಗಿತು. ಶಾಲೆಗಳಲ್ಲೇ ಯುವಕರೊಳಗೆ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಗುಂಪುಗಳು ಹುಟ್ಟಿಕೊಂಡವು. ವಿಶೇಷವೆಂದರೆ, ರಾಜ್‌ಕುಮಾರ್‌ರನ್ನು ಬಿಟ್ಟು ವಿಷ್ಣುವರ್ಧನ್‌ರನ್ನು ಇಷ್ಟಪಡುವುದೆಂದರೆ ಅದೊಂದು ರೀತಿ, ಸಂಪ್ರದಾಯವನ್ನು ಬಿಟ್ಟು ಹೊಸತನಕ್ಕೆ ತುಡಿಯುವ ಸಂಗತಿ ಯಾಗತೊಡಗಿತು. ಹೊಸತನ್ನು ಆಲೋಚಿಸುತ್ತೇವೆ ಎಂದು ಭಾವಿಸಿದವರು ವಿಷ್ಣುವರ್ಧನ್ ಫೋಟೊ ಹಾಕಿಕೊಂಡು ತಿರುಗಾಡತೊಡಗಿದರು. ನಮ್ಮ ನಮ್ಮ ಅಭಿಮಾನಿಗಳನ್ನು ನಾವು ಗುರುತಿಸುವುದು ಪುಸ್ತಕಕ್ಕೆ ಹಾಕುವ ಹೊದಿಕೆಗಳ ಮೂಲಕ. ಆಗ ‘ರೂಪತಾರ’ ಮತ್ತು ‘ವಿಜಯ ಚಿತ್ರ’ ಎನ್ನುವ ಎರಡು ಸಿನೆಮಾ ಪತ್ರಿಕೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಾರದಲ್ಲಿದ್ದವು. ಹಾಗೆಯೇ ‘ಪ್ರಜಾಮತ’ ಎಂಬ ದೊಡ್ಡ ಸೈಜಿನ ವಾರ ಪತ್ರಿಕೆಯ ಮುಖಪುಟದಲ್ಲಿ ಸಿನೆಮಾ ತಾರೆಯರ ಫೋಟೊವನ್ನೇ ಹಾಕುತ್ತಿದ್ದರು. ನಾವು ನೋಟುಪುಸ್ತಕಗಳಿಗೆ ಅವುಗಳನ್ನೇ ಹೊದಿಸಿ ಕೊಳ್ಳುತ್ತಿದ್ದೆವು. ಆಗೆಲ್ಲ ರಾಜ್‌ಕುಮಾರ್ ಹೊದಿಕೆಗಳಿಗೆ ಬೇಡಿಕೆ ಗಳಿತ್ತು. ಆದರೆ ಏಕಾಏಕಿ ವಿಷ್ಣುವರ್ಧನ್ ವಿದ್ಯಾರ್ಥಿಗಳ ನೋಟ್‌ಬುಕ್‌ಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ‘ಬಂಧನ’ದ ಬಳಿಕವಂತೂ ಎಲ್ಲರೂ ಕ್ಯಾನ್ಸರ್ ಪೇಶಂಟ್‌ಗಳಂತೆಯೇ ಕೆಮ್ಮುತ್ತಾ ಓಡಾಡುತ್ತಿದ್ದರು ಬಿಡಿ.
ಇಂತಹ ಹೊತ್ತಿನಲ್ಲೇ ನಾನು ಪ್ರೀತಂ ಟಾಕೀಸ್‌ನಲ್ಲಿ ‘ಅಂತ’ ಪಿಕ್ಚರ್ ನೋಡಿದ್ದು. ಈ ಸಿನೆಮಾವೋ ಅಥವಾ ಅಂಬರೀಷ್ ಅಭಿನ ಯವೋ ನನ್ನನ್ನು ಸಂಪೂರ್ಣ ಅಲುಗಾಡಿಸಿತ್ತು. ರಾಜಕುಮಾರ್‌ರಸಜ್ಜನಿಕೆ, ವಿಷ್ಣುವರ್ಧನ್ ಭಾವುಕತೆ ಎಲ್ಲಕ್ಕಿಂತಲೂ ಹೆಚ್ಚು ಇಷ್ಟವಾಯಿತು ಅಂಬರೀಷ್‌ರ ಆಕ್ರೋಶ. ಅದು ನನ್ನೊಳಗೆ ತಣ್ಣಗೆ ಮಲಗಿದ್ದ ಅರಾಜಕನನ್ನು ಎಚ್ಚರಿಸಿತ್ತು ಎಂದು ಕಾಣುತ್ತದೆ. ಈ ಚಿತ್ರದ ಬಳಿಕ ನಾನು ಚಕ್ರವ್ಯೆಹವನ್ನು ನೋಡಿದೆ. ಒಂದು ರೀತಿಯ ಜನಪ್ರಿಯ ರಾಜಕೀಯ ಬಂಡಾಯ ಚಿಂತನೆಗಳನ್ನು ಮೊತ್ತ ಮೊದಲಾಗಿ ಬಿತ್ತಿದ್ದು ಅಂಬರೀಷ್ ಚಿತ್ರಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕಾರಣಿಗಳೆಲ್ಲ ಭ್ರಷ್ಟರು ಮತ್ತು ನಾಯಕ ಅವರ ವಿರುದ್ಧ ಹೋರಾಡುವುದು ಅನಿವಾರ್ಯ ಎನ್ನುವ ಕಪ್ಪು-ಬಿಳುಪು ರಾಜಕೀಯ ಆಲೋಚನೆಗಳು ಅಂಬರೀಷ್ ಮೂಲಕ ನನ್ನನ್ನು ಹೊಕ್ಕಿದವು. ಅಂತ, ಚಕ್ರವ್ಯೆಹಗಳ ಬಳಿಕ ನಾನು ಅಂಬರೀಷ್ ಅಭಿಮಾನಿಯಾದೆ. ಇದೇ ಸಂದರ್ಭದಲ್ಲಿ ಅಂಬಿಕಾ ಎನ್ನುವ ನಟಿ ಅಂಬರೀಷ್‌ನನ್ನು ವಿವಾಹವಾಗುತ್ತಾಳೆಯೋ ಇಲ್ಲವೋ ಎಂದು ನಾನು ತಲೆಕೆಡಿಸುತ್ತಾ ಓಡಾಡಿದೆ. ಗೆಳೆಯ ರೊಂದಿಗೆ ಆ ಬಗ್ಗೆ ಚರ್ಚಿಸುತ್ತಿದ್ದೆ?. ಗಲಾಟೆ ಮಾಡುತ್ತಿದ್ದೆ. ಅದೇ ಸಂದರ್ಭದಲ್ಲಿ ಗೀತಾ ಮತ್ತು ಅಂಬರೀಷ್ ಜೋಡಿ ಕೂಡ ಕ್ಲಿಕ್ ಆಗಿತ್ತು. ಅಂಬರೀಷ್ ಯಾರನ್ನು ವರಿಸುತ್ತಾರೆ? ಅಂಬಿಕಾಳನ್ನೋ, ಗೀತಾಳನ್ನೋ ಎನ್ನುವುದು ನಾವು ಒಂದಿಷ್ಟು ಮಂದಿ ಕೂತು ಚರ್ಚಿಸುತ್ತಿದ್ದೆವು. ಇದೆಲ್ಲ ನಮ್ಮ ಪ್ರೌಢಶಾಲಾ ಅವಧಿಯಲ್ಲಿ ಎನ್ನುವುದು ಮುಖ್ಯ. ಅಂಬಿಕಾಳ ಮೇಲೆ ನನಗೇಕೋ ಒಂದಿಷ್ಟು ಒಲವು. ಯಾಕೆಂದರೆ ಅಂಬರೀಷ್ ರೀತಿಯಲ್ಲಿ ಅಂಬಿಕಾ ಕೂಡ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಜೋಡಿ ಸರಿಯಾಗುತ್ತೆ ಎನ್ನುವುದು ನನ್ನ ಅನಿಸಿಕೆ. ಪತ್ರಿಕೆಗಳಲ್ಲಿ ಅದಾಗಲೇ ‘ಅಂಬ-ಅಂಬಿ’ ಜೋಡಿಗಳ ಬಗ್ಗೆ ಬಹಳಷ್ಟು ಬರೆಯಲಾಗುತ್ತಿತ್ತು. ಒಟ್ಟಿನಲ್ಲಿ ಪಠ್ಯಕ್ಕಿಂತಲೂ ಹೆಚ್ಚು ಕ್ಲಿಷ್ಟ ವಿಷಯವಾಗಿತ್ತು ಅಂಬರೀಷ್ ಮದುವೆ. ಕೊನೆಗೂ ಅವರು ಸುಮಲತಾರನ್ನು ಮದುವೆಯಾದದ್ದು ಇತಿಹಾಸ.
ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದ ಜಲೀಲನ ಪಾತ್ರ ಅಂಬರೀಷ್ ವ್ಯಕ್ತಿತ್ವಕ್ಕಾಗಿಯೇ ಎತ್ತಿಟ್ಟದ್ದು. ‘ಏ ಬುಲ್ ಬುಲ್, ಮಾತಾಡಕಿಲ್ವಾ...’ ಎನ್ನುವ ಅಂಬರೀಷ್ ಖಳಪಾತ್ರಗಳನ್ನು ನಿಭಾಯಿಸುವುದಕ್ಕಾಗಿಯೇ ಹುಟ್ಟಿದವರು. ‘ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲೂ ಅಂಬರೀಷ್‌ಗೆ ಒಳ್ಳೆಯ ಪಾತ್ರವೇ ಸಿಕ್ಕಿತು. ಪುಟ್ಟಣ್ಣ ಕಣಗಾಲ್‌ರಿಗೆ ಅಂಬರೀಷ್‌ರಒಳಗಿರುವ ಪ್ರತಿಭೆಯ ವೈವಿಧ್ಯದ ಅರಿವಿತ್ತು. ಜಲೀಲನಂತಹ ಪುಂಡನ ಪಾತ್ರವನ್ನು ಕೊಟ್ಟ ಕಣಗಾಲರು, ರಂಗನಾಯಕಿಯಲ್ಲಿ ಆರತಿಯ ಅಣ್ಣನ ಪಾತ್ರವನ್ನು ಕೊಟ್ಟರು. ಆರ್ಭಟವಿಲ್ಲದ, ಸಂಯಮವೇ ಮೈವೆತ್ತ ಪಾತ್ರ ಅದು. ಆ ಮೂಲಕ ಕೌಟುಂಬಿಕ ಚಿತ್ರಗಳನ್ನೂ ನಿರ್ವಹಿಸಬಲ್ಲೆ ಎನ್ನುವ ಭರವಸೆಯನ್ನು ಅವರು ನೀಡಿದರು. ರಂಗನಾಯಕಿಯಲ್ಲಿ ಆರತಿಯನ್ನು ಬಿಟ್ಟರೆ ನೆನಪಲ್ಲಿ ಉಳಿಯುವ ಇನ್ನೊಂದು ಪಾತ್ರ ಅಂಬರೀಷ್‌ರದು. ಅಂಬರೀಷ್ ಒಡಲಾಳದಲ್ಲಿ ಒಂದು ಒಳ್ಳೆಯತನ, ಸಜ್ಜನಿಕೆ ಇತ್ತು. ಭಾವನಾತ್ಮಕ ಪಾತ್ರದಲ್ಲಿ ಅದು ಅವರೊಳಗಿಂದ ವ್ಯಕ್ತ ವಾಗುತ್ತಿತ್ತು. ಕನ್ವರ್ ಲಾಲ್ ಪಾತ್ರವನ್ನು ನಿರ್ವಹಿಸಿದ ಅಂಬರೀಷ್ ಇವರೇನಾ ಎಂದು ಅಚ್ಚರಿ ಪಡುವಷ್ಟು ಭಾವುಕ ಸನ್ನಿವೇಶಗಳಲ್ಲಿ ಅವರು ನಮ್ಮನ್ನು ಮುಟ್ಟುತ್ತಿದ್ದರು. ಮಮತೆಯ ಮಡಿಲು, ದೇವರೆಲ್ಲಿದ್ದಾನೆ, ಒಲವಿನ ಉಡುಗೊರೆ, ಏಳು ಸುತ್ತಿನ ಕೋಟೆ, ಮಸಣದ ಹೂವು ಚಿತ್ರಗಳು ಹೆಂಗಳೆಯರ ಕಣ್ಣೀರನ್ನು ತನ್ನಾದಿಗಿಸಿಕೊಂಡಿದ್ದವು.
ಭಾವನಾತ್ಮಕ ಪಾತ್ರಗಳನ್ನು ಅಂಬರೀಷ್ ಯಶಸ್ವಿಯಾಗಿ ನಿರ್ವಹಿಸಿದ ಪರಿಣಾಮವಾಗಿ, ರೆಬೆಲ್ ಕಿರೀಟವನ್ನು ಪಕ್ಕಕ್ಕಿಟ್ಟು ಕೆಲ ಕಾಲ ಮಸಾಲೆ ಚಿತ್ರ ಗಳಿಂದಲೇ ದೂರ ಉಳಿದರು. ಆದರೂ ಅಂಬರೀಷ್ ಎಂದರೆ ಇಂದಿಗೂ ನೆನಪಾಗುವುದು ಜಲೀಲನ ‘‘ಏ ಬುಲ್ ಬುಲ್ ಮಾತಾಡಕ್ಕಿಲ್ವಾ’’ ಮತ್ತು ಕನ್ವರ್‌ಲಾಲನ ಕುತ್ತೇ ಕನ್ವರ್ ಲಾಲ್ ಬೋಲೋ ಸಂಭಾಷಣೆ. ಮೃಗಾಲಯ, ಹೃದಯ ಹಾಡಿತು, ನ್ಯೂ ಡೆಲ್ಲಿ ಡೈರಿ ಚಿತ್ರಗಳು ಇಂದಿಗೂ ಕಾಡುವಂತಹವುಗಳು.
ಅಂಬರೀಷ್ ಚಿತ್ರೋದ್ಯಮದಲ್ಲಿದ್ದೇ ಜನರಿಗೆ ಹತ್ತಿರವಾಗಿದ್ದರು. ತಮ್ಮ ದಾನಧರ್ಮ ಇತ್ಯಾದಿಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಜನರನ್ನು ತಲುಪುವ ನೆಲಮಟ್ಟದ ಜೀವನ ಶೈಲಿ ಅವರದು. ಆದುದರಿಂದಲೇ ರಾಜಕೀಯದಲ್ಲಿ ಅವರಿಗೆ ವಿಪುಲ ಅವಕಾಶಗಳಿದ್ದವು. ಆದರೆ ಅಂಬರೀಷ್ ಅವುಗಳನ್ನು ಕೈ ಚೆಲ್ಲಿಕೊಂಡರು.
ಅವರು ಯಾವ ಕಾರಣಕ್ಕೂ ರಾಜಕೀಯಕ್ಕೆ ಬರಬಾರದಿತ್ತು. ರಾಜಕೀಯಕ್ಕೆ ಬೇಕಾದ ಶಿಸ್ತು, ಸಮಯ ಪ್ರಜ್ಞೆ ಅವರಲ್ಲಿ ಇದ್ದಿರಲಿಲ್ಲ. ಕುಡಿತ ಮತ್ತು ಸ್ವೇಚ್ಛೆಯ ಬದುಕು ಅವರನ್ನು ಅದಾಗಲೇ ಮುಕ್ಕಿ ತಿಂದಿತ್ತು. ಬರೇ ಅಭಿಮಾನಿಗಳ ಹಾರೈಕೆಯಿಂದ ರಾಜಕೀಯ ಮಾಡಲು ಸಾಧ್ಯವೂ ಇಲ್ಲ. ಈ ಕಾರಣದಿಂದಲೇ ಎಂಪಿಯಾಗಿ ಆಯ್ಕೆಯಾದರೂ ಯಾವ ಸಾಧನೆಯನ್ನೂ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾಗುವ ಕೆಲವು ದಿನಗಳ ಮುಂಚೆ ಸ್ಪೀಕರ್ ಕೈಯಿಂದ ತರಾಟೆಗೊಳಗಾಗಿದ್ದರು. ‘‘ನಾವು ಸದನಕ್ಕೆ ಬರುವುದು ಅಪರೂಪ. ಆದುದರಿಂದ ಒಂದಿಷ್ಟು ಹೆಚ್ಚು ಮಾತನಾಡಲು ಅವಕಾಶ ನೀಡಬೇಕು’’ ಎಂಬಂತಹ ಮಾತುಗಳನ್ನು ಸ್ಪೀಕರ್ ಮುಂದೆ ಆಡಿದ್ದರು. ಕಾಗೋಡು ತಿಮ್ಮಪ್ಪ ಇದರಿಂದ ಸಿಟ್ಟುಗೊಂಡು ‘‘ಸದನದ ಗಾಂಭೀರ್ಯವನ್ನು ಕಾಪಾಡಬೇಕು’’ ಎಂದಿದ್ದರು. ಮತ್ತು ಸದನಕ್ಕೆ ಹಾಜರಾಗುವುದು ಶಾಸಕರ, ಸಚಿವರ ಕರ್ತವ್ಯ ಎಂದೂ ಕಿವಿಮಾತು ಹೇಳಿದ್ದರು. ಇದೀಗ ನೋಡಿದರೆ ಬುಲ್‌ಬುಲ್ ಶಾಶ್ವತವಾಗಿ ಮಾತು ನಿಲ್ಲಿಸಿದೆ. ‘ಏ ಬುಲ್ ಬುಲ್ ಮಾತಾಡಕಿಲ್ವಾ?’ ಎಂದು ಕೇಳುವ ಸರದಿ ನಮ್ಮದು.