ನನ್ನದೊಂದು ಬಹಿರಂಗ ಸವಾಲು ಸವಾಲು ಜಯಿಸಿದರೆ ಸಂಪೂರ್ಣ ಆಸ್ತಿ ನೀಡುವೆ
ಭಾಗ 63
ಕರ್ನಾಟಕದಲ್ಲಿ ಅದರಲ್ಲೂ ಕರಾವಳಿಯಲ್ಲಿ ನಾಗನ ಬಗ್ಗೆ ಅತಿಯಾದ ನಂಬಿಕೆ, ಆರಾಧನೆ ಇದೆ. ಅದೇ ಜನರ ನಂಬಿಕೆಗೆ ಮೋಸ ಮಾಡುವ ಜನರೂ ಇದ್ದಾರೆ. ಇತ್ತೀಚೆಗೊಬ್ಬರು ಮನೆಯೊಳಗೆ ಆರಡಿಯ ಎಂಟಡಿ ಕೆಳಗಿದ್ದ ನಾಗನ ಮೂರ್ತಿಯನ್ನು ಪತ್ತೆ ಹಚ್ಚಿದ್ದಾರೆಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಪೊದೆ ಒಳಗಿರುವ, ಮಣ್ಣಿನ ಒಳಗೆ ಹೂತು ಹೋಗಿರುವ ನಾಗನ ಕಲ್ಲನ್ನು ಹುಡುಕಿ ಕೊಡುವ ಶಕ್ತಿ ಇದೆ ಎಂಬೆಲ್ಲಾ ಅತಿಮಾನುಷ ಶಕ್ತಿಯ ಚರ್ಚೆ, ಪ್ರಚಾರ ನಡೆದಿದೆ. ಅದೆಷ್ಟೆಂದರೆ ಅವರಿಗೆ ನಾಗನ ಕಲ್ಲು ಎಲ್ಲಿ ಇದೆ ಎಂದು ತಿಳಿಯುವ ಶಕ್ತಿಯೂ ಇದೆ ಎನ್ನಲಾಗುತ್ತಿದೆ. ಆದಕ್ಕಾಗಿಯೇ ನಾನು ಒಂದು ಸವಾಲನ್ನು ಒಡ್ಡುತ್ತಿದ್ದೇನೆ. ನನ್ನದಿದು ಬಹಿರಂಗ ಸವಾಲು. ಅಂತಹ ಅತಿಮಾನುಷ ವ್ಯಕ್ತಿಯ ಶಕ್ತಿಯನ್ನು ಪರೀಕ್ಷಿಸುವುದಕ್ಕಾಗಿ. ಆ ಅತಿಮಾನುಷ ಶಕ್ತಿ ಇರುವ ಜ್ಯೋತಿಷಿ ನಮಗೆ ಒಂದು ನಾಗನ ಕಲ್ಲನ್ನು ನೀಡಲಿ. ಅದನ್ನು ಒಂದು ಪೆಟ್ಟಿಗೆಯೊಳಗೆ ಇಡುತ್ತೇನೆ. ಅದರ ಜತೆ ಅಂತಹ ಇತರ ಹಲವು ಪೆಟ್ಟಿಗೆಳಿರುತ್ತವೆ. ಅದರಲ್ಲಿ ಎಲ್ಲದರಲ್ಲೂ ಮಣ್ಣು ತುಂಬಿರುತ್ತದೆ, ಈ ಪೆಟ್ಟಿಗೆಯಲ್ಲಿ ಯಾವುದರಲ್ಲಿ ನಾಗನ ಕಲ್ಲಿರುತ್ತದೆ ಎಂಬುದನ್ನು ಹುಡುಕಬೇಕು. ಎರಡನೆಯದಾಗಿನಾಗನ ಕಲ್ಲಿಗೆ ಒಂದು ಕರೆನ್ಸಿ ನೋಟನ್ನು ಅಂಟಿಸಲಾಗಿರುತ್ತದೆ. ಅದರ ವೌಲ್ಯ, ಅದು ಯಾವ ದೇಶದ್ದು, ಹಾಗೂ ಅದರ ಸೀರಿಯಲ್ ಸಂಖ್ಯೆಯನ್ನು ಹೇಳಬೇಕು. ಇದನ್ನು ಸರಿಯಾಗಿ ಹೇಳಿದರೆ ನನ್ನ ಆಸ್ತಿಯೆಲ್ಲಾ ಅವರ ಹೆಸರಿಗೆ ಬರೆದು ಸಾಯುವವರೆಗೆ ಅವರ ಗುಲಾಮನಾಗಿರುತ್ತೇನೆ. ಒಂದು ವೇಳೆ ಈ ಬಹಿರಂಗ ಸವಾಲನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ, ಬಾಯಿ ಮುಚ್ಚಿ ಇಂತಹ ನಾಗನ ಕಲ್ಲನ್ನು ಅತಿಮಾನುಷ ಶಕ್ತಿಯಿಂದ ಹೊರತೆಗೆಯುತ್ತೇನೆಂಬ ಮೋಸದಿಂದ ದೂರವಿರಬೇಕು. ತಾವು ಮಾಡುತ್ತಿರುವುದು ಸುಳ್ಳು ಎಂಬುದನ್ನು ಒಪ್ಪಿಕೊಳ್ಳಬೇಕು. ಇದು ಇಂತಹ ಅತಿಮಾನುಷ ಶಕ್ತಿ ತಮ್ಮಲ್ಲಿ ಇದೆ ಎಂದು ಹೇಳಿಕೊಳ್ಳುವ ಎಲ್ಲರಿಗೂ ನನ್ನ ಬಹಿರಂಗ ಸವಾಲು. ಅತೀಂದ್ರಿಯ ಶಕ್ತಿಯಿಂದ ಭವಿಷ್ಯ ಹೇಳುವುದು ಅಷ್ಟೆಲ್ಲಾ ಹೇಳಬೇಕಾಗಿಲ್ಲ. ಬರೀ ಒಂದು ನೋಟಿನ ಸಂಖ್ಯೆಯನ್ನು ಹೇಳಿದರೆ ಸಾಕು. ಇದನ್ನು ಬಿಟ್ಟು ಜನರನ್ನು ಮೂರ್ಖನನ್ನಾಗಿ ಮಾಡಿ ನಾಗನ ಕಲ್ಲಿದೆ, ಅದಕ್ಕೆ ಪೂಜೆ ಮಾಡಬೇಕು ಎಂಬೆಲ್ಲಾ ರೀತಿಯಲ್ಲಿ ಜನರಲ್ಲಿ ವೌಢ್ಯವನ್ನು ಬಿತ್ತುತ್ತಿರುವುದು ಇಂತಹ ಕೃತ್ಯಗಳಿಂದ ಸ್ಪಷ್ಟವಾಗುತ್ತಿದೆ. ಹಾಗಾಗಿ ತಾಕತ್ತಿದ್ದರೆ ಈ ಸವಾಲನ್ನು ಸ್ವೀಕರಿಸಿ ಎಂದು ನಾನು ಹೇಳುತ್ತಿದ್ದೇನೆ. ನಾಗನ ಹೆಸರಿನಲ್ಲಿ ಹಿಂದಿನಿಂದಲೂ ವೌಢ್ಯಗಳನ್ನು ಬಿತ್ತುವ ಕೆಲಸವಾಗುತ್ತಿದೆ. ನಾಗ ದೋಷ ಇದೆ. ನಿಮ್ಮ ಪೂರ್ವಜರು ನಾಗನನ್ನು ಕೊಂದಿದ್ದಾರೆ. ಅದಕ್ಕೆ ಪರಿಹಾರ ಮಾಡಬೇಕು. ಅದಕ್ಕೆ ಇಂತಿಷ್ಟು ಖರ್ಚಾಗುತ್ತದೆ ಎಂಬುದಾಗಿ ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವ ಕೆಲಸ ಹಿಂದಿನಿಂದಲೂ ನಡೆಯುತ್ತಾ ಬಂದಿವೆ. ಈ ಬಗ್ಗೆ ನಾವು ಹಲವು ವರ್ಷಗಳಿಂದ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಹಾಗಿದ್ದರೂ ಜನರನ್ನು ಮೂರ್ಖರನ್ನಾಗಿಸುವ, ಮೋಸ ಹೋಗುವವರೂ ಇದ್ದಾರೆ ಎನ್ನುವುದು ಮಾತ್ರ ಬೇಸರದ ಸಂಗತಿ. ಅದಕ್ಕಾಗಿಯೇ ನಾನು ಮತ್ತೆ ಈ ಬಹಿರಂಗ ಸವಾಲನ್ನು ಇರಿಸಿರುವುದು. ಅದನ್ನು ಸ್ವೀಕರಿಸಿ, ತಮ್ಮ ಅತಿಮಾನುಷ, ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸಲಿ ಎಂಬುದಷ್ಟೆ ನನ್ನ ವಿನಂತಿ.