ಬಿಸಿಲುನಾಡಿನ ಊಟಿ ಜೋಗಿಮಟ್ಟಿ

Update: 2018-12-02 04:26 GMT

ಚಿತ್ರದುರ್ಗ ಎಂದಾಕ್ಷಣ ಇಲ್ಲಿಯ ಕೋಟೆ, ಚಂದ್ರವಳ್ಳಿ, ಬಿಸಿಲು ಸ್ಮರಣೆಗೆ ಬರುತ್ತವೆ. ಚಿತ್ರದುರ್ಗ ನಗರದ ಸೆರಗಿನಂತೆ ಬೆನ್ನಿಗೆ ಅಂಟಿಕೊಂಡಿರುವ ಜೋಗಿಮಟ್ಟಿ ರಮಣೀಯ ಗಿರಿಧಾಮವನ್ನು ನೀವು ನೋಡದೇ ಹೋದರೆ ನಿಮ್ಮ ಕರ್ನಾಟಕ ದರ್ಶನ ಪೂರ್ಣವಾಗುವುದಿಲ್ಲ. ಕಲ್ಲಿನಕೋಟೆಯ ಬೆಟ್ಟಕ್ಕೆ ಹೊಂದಿಕೊಂಡಿರುವ ಗುಡ್ಡಗಳ ಸಾಲನ್ನು ಜೋಗಿಮಟ್ಟಿ ಎಂದು ಕರೆಲಾಗಿದೆ.

ಚಿತ್ರದುರ್ಗ ನಗರದಿಂದ ಕೇವಲ 11 ಕಿ.ಮೀ. ದೂರದಲ್ಲಿ ಜೋಗಿಮಟ್ಟಿಯ ಗಿರಿಶೃಂಗವಿದೆ. ಅಲ್ಲಿಗೆ ತಲುಪಲು ಅಂಕುಡೊಂಕಾದ ಡಾಂಬರುಜಲ್ಲಿಯ ರಸ್ತೆಯಿದೆ. ಈ ರಸ್ತೆಯಲ್ಲಿ ನೀವು ನಿಧಾನವಾಗಿ ಪ್ರಯಾಣಿಸುತ್ತಲೇ ಜೋಗಿಮಟ್ಟಿ ತಪ್ಪಲಿನ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಅತ್ಯಂತ ಎತ್ತರವಾದ ಮರಗಳೇನು ಇಲ್ಲಿಲ್ಲ. ಆದರೆ ಹೊನ್ನೆ, ಬೀಟೆ, ಜಾಲಿ, ಶ್ರೀಗಂಧ, ತುಗ್ಗಲಿ, ಹೊಂಗೆ, ಬೇವು, ಹುಣಸೆಯಂತಹ ಸಾವಿರಾರು ಮರಗಿಡಗಳು, ಕಾರೆ, ಕವಳೆ, ಕಳ್ಳಿ, ಬಿದಿರು ಮುಳ್ಳುಕಂಟಿಪೊದೆಗಳು... ಹೀಗೆ ಎಲ್ಲವನ್ನು ನೋಡುತ್ತಲೇ ಗಿರಿಶೃಂಗಕ್ಕೆ ಬಂದು ತಲುಪಬಹುದು. ಅಲ್ಲದೇ ಒಂದೆರಡು ಕಡೆ ವಾಹನ ನಿಲ್ಲಿಸಿ ಪ್ರಕೃತಿಯ ವಿವಿಧ ವಿನ್ಯಾಸಗಳನ್ನು ಕ್ಯಾಮರಾ ಕಂಗಳಲ್ಲಿ ಸೆರೆಹಿಡಿಯಬಹುದು.

ನೀವು ಬೆನ್ನಿಗೊಂದು ಬ್ಯಾಗು, ತಲೆಗೊಂದು ಹ್ಯಾಟು ಹಾಕಿ ಕೈಯಲ್ಲೊಂದು ಕ್ಯಾಮರಾ ಹಿಡಿದು ಚಾರಣ ಹೊರಡುವಿರಾದರೆ ಅರಣ್ಯದೊಳಗಿರುವ ಪೊದೆಗಳೊಳಗೆ ನುಗ್ಗುತ್ತಾ ಜೋಗಿಮಟ್ಟಿ ಗಿರಿಶೃಂಗ ತಲುಪಬಹುದು. ಅಲ್ಲಿ ನಿಮಗೆ ಹತ್ತಾರು ಪಕ್ಷಿಗಳು, ಪ್ರಾಣಿಗಳ ದರ್ಶನವೂ ಆಗುತ್ತದೆ. ಮುಂಜಾವಿನಲ್ಲಂತೂ ಮೋಡಗಳು ಪೈಪೋಟಿಗಿಳಿದಂತೆ ಗಿರಿಶೃಂಗದಲ್ಲಿ ಮಂಜುಹನಿಗಳ ಸಿಂಚನಗೈಯುತ್ತವೆ. ಇದು ಬಿಸಿಲು ನಾಡಿನ ಊಟಿಯ ವೈಭವ.

ಅಂದಹಾಗೆ, ಜೋಗಿಮಟ್ಟಿ ಕಾಡಿನಲ್ಲಿ ಸುಮಾರು 20ಕ್ಕೂ ಹೆಚ್ಚು ಚಿರತೆಗಳಿವೆ ಎಂದು ಹೇಳುತ್ತಾರೆ. ಕರಡಿ, ಕೊಂಡುಕುರಿ, ಕೃಷ್ಣಮೃಗ, ಮುಳ್ಳುಹಂದಿ, ಕಾಡುಬೆಕ್ಕು, ಮೊಲ, ನರಿ, ಮುಂಗುಸಿಯಂತಹ ಪ್ರಾಣಿಗಳು ಹೇರಳವಾಗಿವೆ. ಮುಂಜಾನೆ ಹಾಗೂ ಸಂಜೆ ವೇಳೆ ಶಬ್ದವಾಗದಂತೆ ಕಾಡಿನಲ್ಲಿ ಸಂಚರಿಸಿದರೆ ಖಂಡಿತವಾಗಿ ಕೆಲವು ಪ್ರಾಣಿಗಳಾದರೂ ಕಾಣಸಿಗುತ್ತವೆ.

ಇನ್ನೂ ನೂರಾರು ವಿವಿಧ ಬಗೆಯ ಪಕ್ಷಿಗಳು ಇಲ್ಲಿವೆ. ನವಿಲುಗಳು ಪ್ರಾರಂಭದಲ್ಲಿಯೇ ಸ್ವಾಗತ ಕೋರಿದರೆ, ಕಾಡು ಹೊಕ್ಕಂತೆ ಮಿಂಚುಳ್ಳಿ, ಪಿಕಳಾರ, ಗೌಜಗ, ಕಾಡುಕೋಳಿ, ಹದ್ದು, ಗಿಳಿಯಂತಹ ಪಕ್ಷಿಗಳಲ್ಲದೇ ಪಕ್ಷಿತಜ್ಞರಿಗೆ ಪರಿಚಿತವಿರುವ ಹತ್ತಾರು ಪ್ರಭೇದದ ಪಕ್ಷಿಗಳು ಇಲ್ಲಿ ಕಾಣಿಸುತ್ತವೆ.

ಈ ಜೋಗಿಮಟ್ಟಿ ಬಿಸಿಲನಾಡಿನಲ್ಲಿದ್ದರೂ ತಂಪಾದ ವಾತಾವರಣದಿಂದ ಕೂಡಿದೆ. ಚಿತ್ರದುರ್ಗ ನಗರದ ಉಷ್ಣಾಂಶಕ್ಕೂ ಗಿರಿಶೃಂಗದ ಉಷ್ಣಾಂಶಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತದೆ. ಸಮುದ್ರ ಮಟ್ಟಕ್ಕಿಂತ ಸುಮಾರು 3,800 ಅಡಿಗಳಷ್ಟು ಎತ್ತರದಲ್ಲಿರುವ ಗಿರಿಶೃಂಗದಲ್ಲಿ ತಂಪುಹವೆಯ ಜೊತೆಗೆ ಹಸಿರು ಚೇತೋಹಾರಿ ಪರಿಸರವಿದ್ದು, ಇಲ್ಲಿ 1905ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿರುವ ಅರಣ್ಯ ಇಲಾಖೆಯ ಪ್ರವಾಸಿ ಮಂದಿರವಿದೆ. ಅಲ್ಲದೇ ಪ್ರವಾಸಿಗರಿಗಾಗಿ ಪ್ರತ್ಯೇಕ ಎರಡು ಕಾಟೇಜ್ ಸೌಲಭ್ಯವಿದೆ. ಇಲ್ಲಿ ವಾಸ್ತವ್ಯ ಹೂಡಲು ಬಯಸುವವರು ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯಬೇಕು. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಜೋಗಿಮಟ್ಟಿ ನಿಸರ್ಗಧಾಮಕ್ಕೆ ಪ್ರವೇಶವಿದೆ. ದ್ವಿಚಕ್ರ ವಾಹನಕ್ಕೆ ರೂ. 10 ಹಾಗೂ ಕಾರುಗಳಿಗೆ ರೂ. 50 ಶುಲ್ಕ ವಿಧಿಸುತ್ತಾರೆ. ಜೋಗಿಮಟ್ಟಿಯ ಪ್ರವೇಶದ್ವಾರದಲ್ಲಿಯೇ ಅರಣ್ಯ ಇಲಾಖೆಯ ಚೌಕಿ ಇದೆ. ಅಲ್ಲೇ ಶುಲ್ಕ ಪಾವತಿಸಬೇಕು. ಪ್ರತಿ ಮಂಗಳವಾರ ರಜಾ ಇರುತ್ತದೆ.

ಜೋಗಿಮಟ್ಟಿ ತಪ್ಪಲಿನಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಆಡುಮಲ್ಲೇಶ್ವರ, ಹಿಮವತ್‌ಕೇದಾರ, ಗಿರಿಶೃಂಗದ ಹತ್ತಿರದ ಕೆರೆ, ಜೋಗಿ ಸಿದ್ದೇಶ್ವರನ ಗದ್ದುಗೆ, ವೀಕ್ಷಣಾ ಗೋಪುರ ಪ್ರಮುಖವಾದವು. ಆಡು ಮಲ್ಲೇಶ್ವರದಲ್ಲಿ ಕಿರು ಮೃಗಾಲಯವಿದೆ. ಅಲ್ಲಿ ಚಿರತೆ, ಕರಡಿ, ಕೃಷ್ಣಮೃಗ, ಮೊಸಳೆ, ವಿವಿಧ ಪಕ್ಷಿಗಳನ್ನು ಅರಣ್ಯ ಇಲಾಖೆಯವರೇ ಪೋಷಿಸುತ್ತಿದ್ದಾರೆ. ಪಕ್ಕದಲ್ಲಿಯೇ ಮಕ್ಕಳ ಉದ್ಯಾನವನವಿದ್ದು, ಪ್ರತೀ ರವಿವಾರದ ರಜಾ ಮೋಜಿಗೆ ಹೇಳಿ ಮಾಡಿಸಿದ ಜಾಗವಿದು.

ಹಿಮವತ್ ಕೇದಾರವು ಎರಡು ಬಂಡೆಗಳ ನಡುವೆ ಕಿರಿದಾಗಿ ನೀರು ಬರುವಂತಹ ಜಾಗ. ಇಲ್ಲಿ ಬಸವನ ಬಾಯಿಯಿಂದ ನೀರು ಹರಿಯುವಂತೆ ಮಾಡಲಾಗಿದ್ದು, ಮಳೆಗಾಲದಲ್ಲಿ ಮಾತ್ರ ಇಲ್ಲಿ ನೀರು ಹರಿಯುತ್ತದೆ. ತಂಪಾದ ವಾತಾವರಣವಿರುತ್ತದೆ. ಜೋಗಿಮಟ್ಟಿ ಗಿರಿಶೃಂಗದ ಪಕ್ಕದಲ್ಲಿರುವ ದೊಡ್ಡಕೆರೆ ಪ್ರಾಣಿ-ಪಕ್ಷಿಗಳ ಜೀವಸೆಲೆಯಾಗಿದೆ. ಗಿರಿಶೃಂಗದ ತುದಿಯಲ್ಲಿ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದ್ದು, ಸುತ್ತಮುತ್ತಲಿನ ಸುಮಾರು 20-30 ಕಿ.ಮೀ.ವರೆಗಿನ ಕಾಡು ಹಾಗೂ ಅದರಾಚೆಗಿನ ಬೆಟ್ಟ-ಗುಡ್ಡ, ಊರುಗಳನ್ನು ಇಲ್ಲಿಂದ ನೋಡುವುದೇ ಒಂದು ಚೆಂದ. ವೀಕ್ಷಣಾ ಗೋಪುರದ ಪಕ್ಕದಲ್ಲಿಯೇ ಜೋಗಿಸಿದ್ದೇಶ್ವರ ಗದ್ದುಗೆ ಇದೆ. ಹಿಂದೆ ಜೋಗಿ ಸಿದ್ದೇಶ್ವರ ಎಂಬ ಜೋಗಿಯೊಬ್ಬರು ಇಲ್ಲಿದ್ದು ಜನ, ಜಾನುವಾರುಗಳಿಗೆ ನಾಟಿಔಷಧಿಗಳನ್ನು ಕೊಡುತ್ತಿದ್ದರು ಹಾಗೂ ಅವರ ಕಾಲಾನಂತರ ಅಲ್ಲಿ ಒಂದು ಗದ್ದುಗೆ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ಆ ಜೋಗಿ ವಾಸವಾಗಿದ್ದ ಸ್ಥಳ ಇದಾಗಿದ್ದು ಕಾರಣ ಈ ಸ್ಥಳಕ್ಕೆ ಜೋಗಿಮಟ್ಟಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಅಂದಹಾಗೆ, ಇಲ್ಲಿ ವಿವಿಧ ರೀತಿಯ ಔಷಧೀಯ ಸಸ್ಯಗಳು ಸಿಗುತ್ತವೆ. ಸಸ್ಯಶಾಸ್ತ್ರಜ್ಞರ ಅಧ್ಯಯನಕ್ಕೂ ಸೂಕ್ತ ತಾಣವಿದು.

ಜೋಗಿಮಟ್ಟಿಯ ಮತ್ತೊಂದು ವಿಶೇಷವೇನೆಂದರೆ, ಇದು ಏಶ್ಯಾ ಖಂಡದಲ್ಲಿಯೇ ಅತಿ ಹೆಚ್ಚಿನ ಗಾಳಿ ಬೀಸುವ ಪ್ರದೇಶ. ಸುತ್ತಲೂ ಬಯಲು ಹೆಚ್ಚಾಗಿರುವ ಕಾರಣವೋ ಅಥವಾ ಬೇರಾವ ಭೌಗೋಳಿಕ-ಪ್ರಾಕೃತಿಕ ಕಾರಣದಿಂದಲೋ ಒಟ್ಟಾರೆ ಇಲ್ಲಿ ಹೆಚ್ಚಾಗಿ ಗಾಳಿ ಬೀಸುತ್ತದೆ. ಹೀಗೆ ಬೀಸುವ ಗಾಳಿಯನ್ನು ನಮ್ಮ ಜನ ತಡೆಯುತ್ತಾರೆ. ಜೋಗಿಮಟ್ಟಿಯ ತಪ್ಪಲಿನ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನಾ ಪಂಕಗಳನ್ನು ಅಳವಡಿಸಲಾಗಿದೆ. ರಿಲಯನ್ಸ್, ಸುಜ್ಲಾನ್, ಎನ್‌ಕ್ರಾನ್ ಮುಂತಾದ ಕಂಪೆನಿಗಳು ಇಲ್ಲಿ ವಿದ್ಯುತ್ ಉತ್ಪಾದಿಸುವ ಪಂಕಗಳನ್ನು ಅಳವಡಿಸಿದ್ದು ಸಾಕಷ್ಟು ವಿದ್ಯುತ್ ಸಿಗುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಈ ಕಂಪೆನಿಗಳು ತಮ್ಮ ವಿದ್ಯುತ್ ಉತ್ಪಾದನಾ ಪಂಕಗಳನ್ನು ಜೋಗಿಮಟ್ಟಿ ಕಾಡಿನೊಳಗಿರುವ ಗುಡ್ಡಗಳಿಗೂ ಅಳವಡಿಸಲು ಪ್ರಯತ್ನ ನಡೆಸಿದ್ದರು. ಆದರೆ ಸ್ಥಳೀಯರ ತೀವ್ರ ವಿರೋಧದಿಂದಾಗಿ ಆ ಪ್ರಯತ್ನ ವಿಫಲವಾಯಿತು. ಇತ್ತೀಚೆಗೆ ಸರಕಾರವು ಜೋಗಿಮಟ್ಟಿಯನ್ನು ವನ್ಯಜೀವಿಧಾಮವೆಂದು ಘೋಷಿಸಿದೆ. ಇಡೀ ಜೋಗಿಮಟ್ಟಿ ಪ್ರದೇಶ ಸುಮಾರು 30-40 ಕಿ.ಮೀ.ಗಳಿಗೆ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಅರಣ್ಯದ ಭೂಮಿ ಒತ್ತುವರಿಯಾಗದಂತೆ ಸಂರಕ್ಷಿಸಬೇಕಾದ ಜವಾಬ್ದಾರಿ ಅರಣ್ಯ ಇಲಾಖೆಗೆ ಇರುವಂತೆ ಸಾರ್ವಜನಿಕರಿಗೂ ಇರಬೇಕಾಗಿದೆ.

ಚಿತ್ರದುರ್ಗದಂತಹ ಬಿಸಿಲನಾಡಿನಲ್ಲಿಯೂ ತಂಪಾದ ವಾತಾವರಣವನ್ನು ತನ್ನ ಮಡಿಲಿನಲ್ಲಿಟ್ಟುಕೊಂಡಿರುವ ಜೋಗಿಮಟ್ಟಿ ಗಿರಿಧಾಮ ನಿಜಕ್ಕೂ ಈ ಭಾಗದ ಪ್ರಾಕೃತಿಕ ಅಚ್ಚರಿ. ರಜಾದಿನಗಳಲ್ಲಿ ಜೋಗಿಮಟ್ಟಿಗೆ ಒಮ್ಮೆ ಬನ್ನಿ.. ನಿಮ್ಮ ಮನಸ್ಸಿಗೆ ಖುಷಿಯಾಗುತ್ತದೆ.

ಜೋಗಿಮಟ್ಟಿ ಬಿಸಿಲನಾಡಿನಲ್ಲಿ ಇದ್ದರೂ ತಂಪಾದ ವಾತಾವರಣದಿಂದ ಕೂಡಿದೆ. ಚಿತ್ರದುರ್ಗ ನಗರದ ಉಷ್ಣಾಂಶಕ್ಕೂ ಗಿರಿಶೃಂಗದ ಉಷ್ಣಾಂಶಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತದೆ. ಸಮುದ್ರ ಮಟ್ಟಕ್ಕಿಂತ ಸುಮಾರು 3,800 ಅಡಿಗಳಷ್ಟು ಎತ್ತರದಲ್ಲಿರುವ ಗಿರಿಶೃಂಗದಲ್ಲಿ ತಂಪುಹವೆಯ ಜೊತೆಗೆ ಹಸಿರು ಚೇತೋಹಾರಿ ಪರಿಸರವಿದ್ದು, ಇಲ್ಲಿ 1905ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿರುವ ಅರಣ್ಯ ಇಲಾಖೆಯ ಪ್ರವಾಸಿ ಮಂದಿರವಿದೆ. ಅಲ್ಲದೇ ಪ್ರವಾಸಿಗರಿಗಾಗಿ ಪ್ರತ್ಯೇಕ ಎರಡು ಕಾಟೇಜ್ ಸೌಲಭ್ಯವಿದೆ.

ಜೋಗಿಮಟ್ಟಿ ಬಗ್ಗೆ ಮಾಹಿತಿ

    1.ಬೆಂಗಳೂರಿನಿಂದ ಚಿತ್ರದುರ್ಗ  200 ಕಿ.ಮೀ. ಚಿತ್ರದುರ್ಗದಿಂದ ಜೋಗಿಮಟ್ಟಿ  11 ಕಿ.ಮೀ.

    2.ಸಮುದ್ರ ಮಟ್ಟದಿಂದ 3,800 ಅಡಿ ಎತ್ತರದಲ್ಲಿದೆ.

    3.ಗಿರಿಶೃಂಗದಲ್ಲಿ ಬ್ರಿಟಿಷರ ಕಾಲದ ಪ್ರವಾಸಿಮಂದಿರವಿದೆ. ಎರಡು ಕಾಟೇಜ್ ಕೋಣೆಗಳಿವೆ.

    4.ವಾಸ್ತವ್ಯ ಹೂಡುವವರು ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು. ದೂರವಾಣಿ: 08194-230402

    5.ಆಹಾರ ಹಾಗೂ ನೀರಿನ ವ್ಯವಸ್ಥೆ ತಾವೇ ಸಿದ್ಧ ಮಾಡಿಕೊಂಡು ಬರುವುದು ಉತ್ತಮ

    6.ಪ್ರವೇಶ ಶುಲ್ಕ ಟೂ ವೀಲರ್ 10ರೂ. ಕಾರು 50 ರೂ.

    7.ಚಾರಣದ ಬಗ್ಗೆ ಮಾಹಿತಿಯನ್ನು ಅರಣ್ಯ ಇಲಾಖೆಯಲ್ಲಿ ವಿಚಾರಿಸಬಹುದು.

Writer - ಎನ್.ಎ. ರವೀಶ್, ಚಿತ್ರದುರ್ಗ

contributor

Editor - ಎನ್.ಎ. ರವೀಶ್, ಚಿತ್ರದುರ್ಗ

contributor

Similar News