ಮೂಢನಂಬಿಕೆಗೇ ಸೆಡ್ಡು ಹೊಡೆದಿದ್ದ ಬಾಬಾಸಾಹೇಬ್ ಅಂಬೇಡ್ಕರ್

Update: 2018-12-02 18:40 GMT

ಯಾವ ಒಂದು ಮನೆ ದೆವ್ವದ ಮನೆ ಎಂದು ಖ್ಯಾತಿ ಪಡೆದಿತ್ತೋ ಆ ಮನೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ 1946 ಜೂನ್ 30ರ ವರೆಗೆ, ಅಂದರೆ ತಮ್ಮ ಮಂತ್ರಿಮಂಡಲದ ಕೊನೆಯ ದಿನದವರೆಗೂ ಒಟ್ಟು ನಾಲ್ಕು ವರ್ಷ ಅಲ್ಲಿದ್ದರು. ಆ ಮೂಲಕ ದೆವ್ವ ಭೂತ ಎಂಬ ಮೂಢನಂಬಿಕೆಗೆ ಅಂಬೇಡ್ಕರರು ಅಕ್ಷರಶಃ ಸೆಡ್ಡು ಹೊಡೆದಿದ್ದರು.

1942 ಜುಲೈ 22 ಬಾಬಾಸಾಹೇಬ್ ಅಂಬೇಡ್ಕರ್ ಅಂದಿನ ಗವರ್ನರ್ ಜನರಲ್‌ರವರ ಕಾರ್ಯಕಾರಿ ಸಮಿತಿಯಲ್ಲಿ ಕೇಂದ್ರ ಕಾರ್ಮಿಕ ಮಂತ್ರಿಯಾಗಿ (ಈಗಿನ ಕ್ಯಾಬಿನೆಟ್ ದರ್ಜೆಯ ಮಂತ್ರಿ) ಅಧಿಕಾರ ಸ್ವೀಕರಿಸಿದರು. ಕಾರ್ಮಿಕ ಇಲಾಖೆಯ ಜೊತೆಗೆ ಅವರಿಗೆ ಲೋಕೋಪಯೋಗಿ, ನೀರಾವರಿ ಮತ್ತು ವಸತಿ ಇಲಾಖೆಗಳ ಹೊಣೆ ಕೂಡ ವಹಿಸಲಾಗಿತ್ತು. ಹಾಗೆ ಅಧಿಕಾರ ಸ್ವೀಕರಿಸಿದಾಗ ಸಹಜವಾಗಿ ಅವರಿಗೆ ದೆಹಲಿಯಲ್ಲಿ ಕೇಂದ್ರ ಮಂತ್ರಿಗಳಿಗೆ ನೀಡುವ ವಸತಿ ಹಂಚಿಕೆ ಮಾಡಲಾಯಿತು. ವಸತಿ ಪಡೆಯುವ ಈ ಸಂದರ್ಭದಲ್ಲಿ ಅಂಬೇಡ್ಕರರಿಗೆ ದೆಹಲಿಯಲ್ಲಿ ಮಂತ್ರಿಗಳು ವಾಸಮಾಡುವಂತಹ ಡಜನ್ ಗಟ್ಟಲೆ ಸರಕಾರಿ ವಸತಿಗೃಹಗಳನ್ನು ತೋರಿಸಲಾಯಿತು. ಆದರೆ ಯಾವುದನ್ನೂ ಒಪ್ಪದ ಅಂಬೇಡ್ಕರ್ ಅವರು ಪೃಥ್ವಿರಾಜ್ ಮಾರ್ಗದ ನಂ.22ರ ವಸತಿಗೃಹ ಆರಿಸಿಕೊಂಡರು.
ಅರೆ, ಆ ಮನೆಯಲ್ಲೇನು ವಿಶೇಷ ಎಂದಿರಾ? ವಿಶೇಷತೆ ಇತ್ತು. ಪೃಥ್ವಿರಾಜ್ ಮಾರ್ಗದ ಆ ವಸತಿಗೃಹ ಬಹಳ ವಿಶಾಲವಾಗಿತ್ತು. ವಿಶಾಲವಾದ ಹಾಲ್‌ಗಳು, ಕೊಠಡಿಗಳು, ಸದಾ ಹಸಿರಿನಿಂದ ಕೂಡಿದ ವಿಶಾಲವಾದ ಹುಲ್ಲು ಹಾಸುಗಳು, ಉದ್ಯಾನವನಗಳು ಅಂಬೇಡ್ಕರರ ಅಭಿರುಚಿಗೆ ತಕ್ಕಂತೆ ಇತ್ತು ಆ ಮನೆ. ಮತ್ತೂ ವಿಶೇಷವೆಂದರೆ ಇಷ್ಟೊಂದು ಸುಂದರವಾದ ಆ ಮನೆ ಹಲವು ವರ್ಷಗಳ ಕಾಲ ಯಾರೂ ವಾಸ ಮಾಡದೆ ಖಾಲಿ ಬಿದ್ದಿತ್ತು! ಬ್ರಿಟಿಷ್ ಅಧಿಕಾರಿಗಳು ಕೂಡ ಅಲ್ಲಿ ವಾಸ ಮಾಡಲು ಹಿಂದೇಟು ಹಾಕಿದ್ದರೆಂದರೆ....! ಕಾರಣ ಅದೊಂದು ದೆವ್ವದ ಮನೆ ಎಂಬ ಕುಖ್ಯಾತಿಯ ಕಾರಣಕ್ಕೆ!
ಈ ನಿಟ್ಟಿನಲ್ಲಿ ಆ ಬೃಹತ್ ಬಂಗಲೆಯ ಕಾವಲುಗಾರ ಆ ಮನೆಯ ಇತಿಹಾಸವನ್ನು ಅಂಬೇಡ್ಕರರಿಗೆ ಹೀಗೆ ಹೇಳುತ್ತಿದ್ದನಂತೆ ಮತ್ತು ಸ್ವತಃ ಅಂಬೇಡ್ಕರರ ಇಲಾಖೆ ಕೇಂದ್ರ ಲೋಕೋಪಯೋಗಿ ಇಲಾಖೆ (CPWD)ಯ ಇಂಜಿನಿಯರ್‌ಗಳು ಕೂಡ ಈ ಬಗ್ಗೆ ಅಂಬೇಡ್ಕರರಿಗೆ ಈ ಮನೆ ಬೇಡವೆಂದು ತಮ್ಮ ಕಾಳಜಿಯುಕ್ತ ಸಲಹೆ ನೀಡುತ್ತಿದ್ದರಂತೆ, ಆಗ ಅಂಬೇಡ್ಕರ್ ಹೇಳಿದ್ದು, ನನ್ನ ರಾಜಕೀಯ ಪ್ರವೇಶದಂದಿನಿಂದಲೂ ನಾನು ಅನೇಕ ಬಗೆಯ ದೆವ್ವ, ಭೂತ-ಪ್ರೇತಗಳ ವಿರುದ್ಧ ಹೋರಾಡಿದ್ದೇನೆ. ನಾನೊಬ್ಬ ಕೇವಲ ಸುಧಾರಕನಷ್ಟೇ ಅಲ್ಲ, ಜಾದೂಗಾರ್ (ಮಾಂತ್ರಿಕ) ಕೂಡ ಹೌದು! ಈ ನಿಟ್ಟಿನಲ್ಲಿ ಪೃಥ್ವಿರಾಜ್ ಮಾರ್ಗದ ಈ ಮನೆ ಕೂಡ ನನಗೆ ಒಂದು ಹೊಸ ಅನುಭವವಾಗಲಿ. ಆದ್ದರಿಂದ ಭೂತದ ಬಂಗಲೆ ಎಂದು ಖ್ಯಾತಿ ಪಡೆದ ಈ ಬಂಗಲೆಯನ್ನೇ ನಾನು ಆರಿಸುತ್ತೇನೆ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಈ ಆಶಯದಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಕೂಡಲೇ ಆ ಬಂಗಲೆಯಲ್ಲಿ ಆಗಬೇಕಿದ್ದ ಸಣ್ಣಪುಟ್ಟ ರಿಪೇರಿಗಳನ್ನು ಪೂರೈಸಿದರು. ಹೊಸದಾಗಿ ಹುಲ್ಲು ಹಾಸನ್ನು ನಿರ್ಮಿಸಲಾಯಿತು. ಹೂವಿನ ಸಾಲುಗಳು ಉದ್ಯಾನದೆಲ್ಲೆಡೆ ನಳನಳಿಸಲಾರಂಭಿಸಿದವು. ನೋಡನೋಡುತ್ತಲೇ ಇಡೀ ಕಟ್ಟಡ ಭವ್ಯತೆಯಿಂದ ಕಂಗೊಳಿಸಲಾರಂಭಿಸಿತ್ತು! ಈ ಮನೆಯನ್ನು ನಿರಾಕರಿಸಿದ್ದ ವೈಸರಾಯ್ ಮಂತ್ರಿಮಂಡಲದ ಇತರ ಸದಸ್ಯರು ನಂ.22, ಪೃಥ್ವಿರಾಜ್ ಮಾರ್ಗದ ಅಂಬೇಡ್ಕರರ ಈ ಮನೆ ನೋಡಿ ಅಕ್ಷರಶಃ ಅಚ್ಚರಿಗೊಂಡರು. ಸ್ವತಃ ವೈಸರಾಯ್ ಲಾರ್ಡ್ ಲೆನ್ ಲಿತ್ ಗೋ ತಮ್ಮನ್ನು ಭೇಟಿಮಾಡಲು ಬರುತ್ತಿದ್ದ ಅನೇಕ ವಿದೇಶಿ ಗಣ್ಯರಿಗೆ ಅಂಬೇಡ್ಕರರ ಈ ಬೃಹತ್ ಬಂಗಲೆಗೂ ಕೂಡ ಭೇಟಿಕೊಡುವಂತೆ, ಅಲ್ಲಿಯ ಉದ್ಯಾನವನದ ಸೌಂದರ್ಯವನ್ನು ಸವಿಯುವಂತೆ ಸೂಚಿಸಲಾರಂಭಿಸಿದರು.


ಈ ಸಂದರ್ಭದಲ್ಲಿ ಅಮೆರಿಕನ್ ಲೇಖಕಿ Verdict on India   ಕೃತಿ ಖ್ಯಾತಿ ಯ ಬೆವರ್ಲಿನಿಕೊಲ್ಸ್ ತಮ್ಮ ಕ್ಯಾಮರಾದಲ್ಲಿ ಅಂಬೇಡ್ಕರರು ವಾಸಿಸುತ್ತಿದ್ದ ಈ ಬಂಗಲೆಯನ್ನು ಚಿತ್ರೀಕರಿಸಿದರು ಮತ್ತು ತನ್ನ ಪ್ರತಿಕ್ರಿಯೆಯಲ್ಲಿ ಆಕೆ ಓರ್ವ ಅಸ್ಪಶ್ಯ ಭಾರತೀಯ ಇಂತಹ ಬೃಹತ್, ಹಚ್ಚ ಹಸಿರಿನಿಂದ ಕೂಡಿದ ಭವ್ಯ ಬಂಗಲೆಯಲ್ಲಿ ಹೇಗೆ ವಾಸಿಸುತ್ತಿದ್ದಾರೆ, ಅದರ ಸೌಂದರ್ಯ ಯಾವ ಪರಿ ಇದೆ ಎಂದು ಮನಃಪೂರ್ವಕವಾಗಿ ವರ್ಣಿಸಿದ್ದರು, ಅಭಿಪ್ರಾಯ ದಾಖಲಿಸಿದ್ದರು. ಅಂದಹಾಗೆ ಸದಾ ಹಸಿರಿನಿಂದ ಕೂಡಿರುತ್ತಿದ್ದ, ಹಿಂದೆ ದೆವ್ವದ ಬಂಗಲೆ ಎಂದು ಖ್ಯಾತಿ ಪಡೆದಿದ್ದ ಆ ಬಂಗಲೆಯ ಉದ್ಯಾನವನದ ಹೂಗಳಿಗೆ ಸ್ವತಃ ಅಂಬೇಡ್ಕರರೇ ಆಗಾಗ ನೀರುಣಿಸುತ್ತಿದ್ದರು. ಮತ್ತದರ ನಿತ್ಯ ಹರಿದ್ವರ್ಣ ನೋಟಕ್ಕೆ ಸ್ವತಃ ಅವರೇ ಕಾರಣರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಯಾವ ಒಂದು ಮನೆ ದೆವ್ವದ ಮನೆ ಎಂದು ಖ್ಯಾತಿ ಪಡೆದಿತ್ತೋ ಆ ಮನೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ 1946 ಜೂನ್ 30ರ ವರೆಗೆ, ಅಂದರೆ ತಮ್ಮ ಮಂತ್ರಿಮಂಡಲದ ಕೊನೆಯ ದಿನದವರೆಗೂ ಒಟ್ಟು ನಾಲ್ಕು ವರ್ಷ ಅಲ್ಲಿದ್ದರು. ಆ ಮೂಲಕ ದೆವ್ವ ಭೂತ ಎಂಬ ಮೂಢನಂಬಿಕೆಗೆ ಅಂಬೇಡ್ಕರರು ಅಕ್ಷರಶಃ ಸೆಡ್ಡುಹೊಡೆದಿದ್ದರು.
My Experiences and Memories of Dr.Babasaheb Ambedkar by Shankarananda Shastri, Pp.112(ಆಧಾರ: )
ದುರಂತವೆಂದರೆ ಈಗಿನ ಮಂತ್ರಿ ಮಹೋದಯರು ಎಲ್ಲದಕ್ಕೂ ಘಳಿಗೆ, ಶಾಸ್ತ್ರ-ಪುರಾಣ ನೋಡುತ್ತಾರೆ. ವಾಸ್ತು ನೋಡದೆ ತಮ್ಮ ವಾಸದ ಮನೆಗೆ ಅವರು ಪ್ರವೇಶಿಸುವುದೇ ಇಲ್ಲ. ಶೋಷಿತ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳೂ ಇಂತಹ ಚಾಳಿಯಿಂದ ಹೊರತಾಗಿಲ್ಲವೆಂದರೆ...! ಇನ್ನು ಕೆಲವರ ಕೈಗಳಲ್ಲಂತೂ ನಿಂಬೆ ಹಣ್ಣು ಸದಾ ರಾರಾಜಿಸುತ್ತಿರಲೇಬೇಕು ಮತ್ತು ಅಂತಹವರು ಸರಕಾರಿಕಾಮಗಾರಿ, ಕಟ್ಟಡಗಳ ಉದ್ಘಾಟನೆಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಹುಕಾಲ-ಗುಳಿಕಕಾಲ ನೋಡುತ್ತಾರೆಂದರೆ...!
ಈ ದಿಸೆಯಲ್ಲಿ ನಮ್ಮ ಮಂತ್ರಿಗಳಿಗೆ, ಜನಪ್ರತಿನಿಧಿಗಳಿಗೆ ಭೂತದ ಬಂಗಲೆಯನ್ನೇ ಭವ್ಯ ಬಂಗಲೆಯಾಗಿ ಪರಿವರ್ತಿಸಿ, ಸತತ ನಾಲ್ಕು ವರ್ಷಗಳು ಅಲ್ಲಿದ್ದು ಆ ಬಂಗಲೆಯ ಆ ಖ್ಯಾತಿಯನ್ನೇ ಬದಲಿಸಿ ಯಶಸ್ವಿಯಾಗಿ ಆಡಳಿತ ನಡೆಸಿದ ಬಾಬಾಸಾಹೇಬ್ ಅಂಬೇಡ್ಕರರು ಅಕ್ಷರಶಃ ಆದರ್ಶಪ್ರಾಯರಾಗುತ್ತಾರೆ. ಹಾಗೆಯೇ ವೈಜ್ಞಾನಿಕ ಚಿಂತನೆಯ ಪ್ರತಿಯೊಬ್ಬರಿಗೂ, ಪ್ರತಿಯೊಬ್ಬ ನಾಗರಿಕನಿಗೂ ಮೂಢನಂಬಿಕೆ ವಿರುದ್ಧ ಸೆಡ್ಡು ಹೊಡೆದ ಬಾಸಾಹೇಬರ ಈ ನಡೆ, ದಿಟ್ಟತನ, ಸ್ಫೂರ್ತಿಯ ಸೆಲೆಯಾಗುತ್ತದೆ ಎಂದರೆ ಅಚ್ಚರಿಯೇನಿಲ್ಲ.

Writer - ರಘೋತ್ತಮ ಹೊ.ಬ

contributor

Editor - ರಘೋತ್ತಮ ಹೊ.ಬ

contributor

Similar News

ಜಗದಗಲ
ಜಗ ದಗಲ