ಸೌಹಾರ್ದ ಸಾರುವ ಸಂಗೀತ v/s ಧ್ವನಿಯಡಗಿಸುವ ದ್ವೇಷ ರಾಜಕಾರಣ
‘‘ಟ್ರೋಲ್ ಸೇನೆಯು ಅಧಿಕಾರದಲ್ಲಿರುವ ವ್ಯಕ್ತಿಗಳ ಕೃಪಾಶ್ರಯವನ್ನು ಹೊಂದಿದೆ. ನನ್ನ ಸಾಮಾಜಿಕ ನಿಲುವು, ರಾಜಕೀಯದ ಬಗ್ಗೆ ನನ್ನ ದೃಷ್ಟಿಕೋನ, ಬಿಜೆಪಿ ಆಡಳಿತದ ಜೊತೆ ನನ್ನ ಭಿನ್ನಾಭಿಪ್ರಾಯಗಳಿಗಾಗಿ ನಾನು ದೀರ್ಘಸಮಯದಿಂದಲೂ ಟ್ರೋಲ್‌ಗೊಳಗಾಗುತ್ತಾ ಬಂದಿದ್ದೇನೆ. ನಾನು ಪ್ರತಿಯೊಂದು ಕಲಾ ಪ್ರಕಾರದ ಮೇಲೂ ವಿಶ್ವಾಸವಿರಿಸಿಕೊಂಡಿದ್ದೇನೆ. ಅಲ್ಲಾಹು, ಯೇಸು ಹಾಗೂ ರಾಮ ಇವರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದೊಂದು ಬಹುಭಾಷಾ ಹಾಗೂ ಬಹುಧರ್ಮೀಯ ರಾಷ್ಟ್ರವಾಗಿದೆ’’ ಎಂದು ಕೃಷ್ಣ ಪ್ರತಿಪಾದಿಸುತ್ತಾರೆ.
ಪುಸ್ತಕಕೃತಿಗಳ ನಿಷೇಧ, ಪಾಕಿಸ್ತಾನಿ ಕ್ರಿಕೆಟ್ ತಂಡ ಹಾಗೂ ಪಾಕ್ ಗಾಯಕರನ್ನು ವಿರೋಧಿಸುವುದು ಭಾರತಕ್ಕೆ ಹೊಸತೇನೂ ಅಲ್ಲ. ‘ಸಟಾನಿಕ್ ವರ್ಸಸ್’ ಕೃತಿಯ ನಿಷೇಧ, ಭಾರತ-ಪಾಕ್ ಪಂದ್ಯವನ್ನು ವಿರೋಧಿಸಲೆಂದೇ ಮುಂಬೈಯ ವಾಂಖೆಡೆ ಕ್ರೀಡಾಂಗಣದ ಕ್ರಿಕೆಟ್ ಪಿಚ್‌ಗೆಹಾನಿಯೆಸಗಿದ್ದುದು, ಮುಂಬೈಯಲ್ಲಿ ಗುಲಾಂ ಆಲಿ ಅವರ ಗಝಲ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಂತಹ ಘಟನೆಗಳು ಸಾಲುಸಾಲಾಗಿ ನಡೆದಿವೆ. ಈ ಅಸಹಿಷ್ಣುತೆಯ ತೀವ್ರತೆಯು ಇತ್ತೀಚಿನ ವರ್ಷಗಳಲ್ಲಿ ಮೇರೆಮೀರಿ ಬೆಳೆದಿದೆ. ಈ ಬಾರಿ ಸಂಘಪರಿವಾರದ ಕಾರ್ಯಕರ್ತರು ಖ್ಯಾತ ಕರ್ಣಾಟಕ ಸಂಗೀತಗಾಯಕ ಟಿ.ಎಂ.ಕೃಷ್ಣ ಅವರ ಮೇಲೆ ಗುರಿಯಿರಿಸಿದ್ದಾರೆ. ಕೃಷ್ಣ ಅವರ ಕಾರ್ಯಕ್ರಮವನ್ನು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ಹಾಗೂ ಸ್ಪಿಕ್ ಮೆಕೆ ಜಂಟಿಯಾಗಿ ಆಯೋಜಿಸಿತ್ತು. ದೇಶದ್ರೋಹಿ ಹಾಗೂ ನಗರ ನಕ್ಸಲ್ ಹಾಗೂ ಯೇಸುಕ್ರಿಸ್ತ ಮತ್ತು ಅಲ್ಲಾಹು ಬಗ್ಗೆಯೂ ಹಾಡುವ, ಧರ್ಮವಿರೋಧಿಯೊಬ್ಬನ ಕಾರ್ಯಕ್ರಮವನ್ನು ಹೇಗೆ ಸಂಘಟಿಸುತ್ತೀರೆಂದು ಬೆದರಿಕೆಯೊಡ್ಡುವ ಸಂದೇಶಗಳು ಕೂಡಾ ಸಂಘಟಕರಿಗೆ ಬಂದಿದ್ದವು.
ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು ಕೃಷ್ಣ ಅವರ ಕಾರ್ಯ ಕ್ರಮವನ್ನು ಮುಂದೂಡಿದ್ದರಿಂದ, ಆ ದಿನಾಂಕದಂದು ತಾನು ಲಭ್ಯವಿರುವುದಾಗಿ ಕೃಷ್ಣ ತಿಳಿಸಿದ್ದರು. ಆಗ ದಿಲ್ಲಿಯ ಆಡಳಿತಾರೂಢ ‘ಆಮ್ ಆದ್ಮಿ’ ಪಕ್ಷವು, ಕೃಷ್ಣ ಅವರ ಕಾರ್ಯಕ್ರಮದ ಆತಿಥ್ಯವಹಿಸಲು ಒಪ್ಪಿಕೊಂಡಿತು. ಸಂಗೀತ ಪ್ರೇಮಿಗಳು ಮಾತ್ರವಲ್ಲದೆ, ಉದಾರ ಪ್ರಜಾತಾಂತ್ರಿಕ ವೌಲ್ಯಗಳನ್ನು ತುಳಿದುಹಾಕುವಂತಹ ರಾಜಕೀಯವನ್ನು ವಿರೋಧಿಸುತ್ತಿರುವವರು ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕೃಷ್ಣ ಅವರ ಸಂಗೀತಗೋಷ್ಠಿಯ ಮೇಲೆ ನಡೆದ ದಾಳಿಯು ಇತ್ತೀಚಿನ ವರ್ಷಗಳಲ್ಲಿ ನಮಗೆ ಗೋಚರಿಸುತ್ತಿರುವ ದ್ವೇಷ ರಾಜಕೀಯದ ಮುಂದುವರಿಕೆಯಾಗಿದೆ. ಇಂತಹ ಅಸಹಿಷ್ಣುತೆಯ ವಿರುದ್ಧದ ಮಹತ್ವದ ಪ್ರತಿರೋಧವು ಮೊದಲಿಗೆ ಡಾ.ದಾಭೋಲ್ಕರ್, ಕಾಮ್ರೇಡ್ ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ವಿರುದ್ಧದ ಪ್ರತಿಭಟನೆಯಲ್ಲಿ ವ್ಯಕ್ತವಾಯಿತು. ಆ ವೇಳೆಗೆ ಬೀಫ್ ಸೇವನೆ ವಿವಾದದಲ್ಲಿ ಮುಹಮ್ಮದ್ ಅಖ್ಲಾಕ್‌ರನ್ನು ಥಳಿಸಿ ಕೊಂದ ಘಟನೆ ಉತ್ತರಪದೇಶದಲ್ಲಿ ನಡೆಯಿತು. ಈ ಬರ್ಬರ ಕೃತ್ಯವನ್ನು ಪ್ರತಿಭಟಿಸಿ ಮೊದಲು ಕವಿ, ಪತ್ರಕರ್ತ ಉದಯಪ್ರಕಾಶ್ ಹಾಗೂ ಆನಂತರ ಇತಿಹಾಸ ತಜ್ಞೆ ನಯನತಾರಾ ಸೆಹಗಲ್ ತಮಗೆ ಲಭಿಸಿದ್ದ ಪುರಸ್ಕಾರಗಳನ್ನು ಹಿಂದಿರುಗಿಸಿದ್ದರು. ಆನಂತರ ಸುಮಾರು ಇತರ 50 ಮಂದಿ ಸಾಹಿತಿಗಳು, ಚಲನಚಿತ್ರ ಸಾಹಿತಿಗಳು ಹಾಗೂ ವಿಜ್ಞಾನಿಗಳು ಕೂಡಾ ಇದೇ ದಾರಿ ಅನುಸರಿಸಿದರು.
ಈ ಅವಧಿಯಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಸಾಂಸ್ಥಿಕ ಕೊಲೆಗೆ ಕಾರಣವಾದಂತಹ ದಲಿತ ಹಿತಾಸಕ್ತಿಗಳ ಮೇಲಿನ ಆಕ್ರಮಣ ಪೂರ್ವಯೋಜಿತವಾಗಿತ್ತು. ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಮುಖವಾಡಧಾರಿ ವ್ಯಕ್ತಿಗಳು ಈವರೆಗೆ ಸಿಕ್ಕಿಬಿದ್ದಿಲ್ಲ. ಆದಾಗ್ಯೂ ಈ ಘಟನೆಗೆ ಸಂಬಂಧಿಸಿ ಕನ್ಹಯ್ಯಿ ಕುಮಾರ್ ಮತ್ತವರ ಸಂಗಡಿಗರ ಮೇಲೆ ಗುರಿಯಿಡಲಾಯಿತು. ‘ದೇಶವಿರೋಧಿ’ ಎಂಬ ಪದ ಬಳಸಲಾಯಿತು. ಇದರ ಉದ್ದೇಶ ತುಂಬಾ ಸ್ಪಷ್ಟವಾಗಿದೆ. ಆಡಳಿತರೂಢ ಸರಕಾರದ ನೀತಿಯನ್ನು ಒಪ್ಪದವರನ್ನು ದೇಶದ್ರೋಹಿಗಳಾಗಿ ಬಿಂಬಿಸಲಾಯಿತು ಹಾಗೂ ಬಿಜೆಪಿಯ ಸುಸಜ್ಜಿತವಾದ ಟ್ರೋಲ್ ಸೇನೆಯು, ಬಜರಂಗದಳ ಕಾರ್ಯಕರ್ತರ ಮಾದರಿಯಲ್ಲಿ ರೂಪುಗೊಂಡಿತು.
ಕೃಷ್ಣ ಓರ್ವ ಅಸಾಧಾರಣ ಸಂಗೀತ ಕಲಾವಿದರಾಗಿದ್ದು, ಅವರು ಕರ್ಣಾಟಕ ಸಂಗೀತಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಮಾತ್ರವಲ್ಲ ವರ್ಗೀಯ, ಕೋಮು ರಾಜಕಾರಣದ ವಿರುದ್ಧವೂ ಧ್ವನಿಯೆತ್ತಿದ್ದರು. ಸಂಗೀತದ ನೈಜ ಪರಂಪರೆಯಂತೆ ಅವರು ಗಾಂಧೀಜಿಯವರ ಅಚ್ಚುಮೆಚ್ಚಿನ ಭಜನ್ (ವೈಷ್ಣವ್ ಜನತೊ)ಗಳನ್ನು ಹಾಗೂ ಯೇಸುಕ್ರಿಸ್ತ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ಹಾಡುಗಳನ್ನು ಹಾಡುತ್ತಿದ್ದರು. ಸಂಗೀತವು ಮೂಲತಃ ಪ್ರಚಲಿತದಲ್ಲಿರುವ ಸಂಸ್ಕೃತಿಗಳನ್ನು ಆಧರಿಸಿದ್ದಾಗಿದ್ದು, ಅದಕ್ಕೆ ಯಾವುದೇ ಸೀಮಿತ ಗಡಿರೇಖೆಗಳಿಲ್ಲ. ಕಳೆದ ಕೆಲವು ದಶಕಗಳಿಂದಷ್ಟೇ ಧರ್ಮದ ಹೆಸರಿನಲ್ಲಿ ಸೃಜನಶೀಲ ಕಲಾವಿದರನ್ನು ಪ್ರಶ್ನಿಸಲಾಗುತ್ತಿದೆ ಹಾಗೂ ಅವರನ್ನು ಗುರಿಯಿರಿಸಿ ದಾಳಿ ನಡೆಸಲಾಗುತ್ತಿದೆ. ಇಡೀ ಭಾರತೀಯ ಸಂಸ್ಕೃತಿಯು ವಿವಿಧ ಧರ್ಮಗಳಿಂದ ಬಂದಿರುವ ಪರಂಪರೆಗಳು ಮಿಶ್ರಿತಗೊಂಡ ಸಂಸ್ಕೃತಿ ಯಾಗಿದೆ. ವಿಶೇಷವಾಗಿ ಮಧ್ಯಯುಗೀನ ಕಾಲದಲ್ಲಿ ಈ ಉಚ್ಛ್ರಾಯಘಟ್ಟವು ಕಂಡುಬಂದಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಈ ವಿಷಯದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಈ ಸಮ್ಮಿಶ್ರಣದ ಪರಾಕಾಷ್ಠೆಯು ಭಕ್ತಿ ಹಾಗೂ ಸೂಫಿ ಪಂಥದ ಪರಂಪರೆಗಳಲ್ಲಿ ವ್ಯಕ್ತಗೊಂಡಿದೆ. ನಮ್ಮ ಆಹಾರ ಅಭ್ಯಾಸಗಳು, ಸಾಹಿತ್ಯ, ಕಲೆ ಹಾಗೂ ಶಿಲ್ಪಕಲೆ ಈ ಒಡನಾಟಗಳ ಮೂಲಕ ವಿಕಸನಗೊಂಡಿತು.
ಜವಾಹರಲಾಲ್ ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ ನಮ್ಮ ಸಂಸ್ಕೃತಿಯ ಈ ಅಂಶವನ್ನು ಒತ್ತಿಹೇಳಿದೆ. ಅವರ ಪ್ರಕಾರ ಸಂಸ್ಕೃತಿಯ ಪದರಗಳು ಪರಸ್ಪರ ಸಮ್ಮಿಶ್ರಣಗೊಳ್ಳುತ್ತವೆ ಹಾಗೂ ಪ್ರಭಾವವನ್ನು ಬೀರುತ್ತವೆ. ತಾವು ಬದಲಾಗುವ ಜೊತೆಗೆ, ತಮ್ಮದೇ ಆದ ವಿಶಿಷ್ಟ ಅಸ್ಮಿತೆಯ ಅಂಕಿತಮುದ್ರೆಯನ್ನು ಒತ್ತಿಯೇ ಹೋಗುತ್ತಾರೆ. ಸಂಸ್ಕೃತಿಗಳ ಸಮ್ಮಿಶ್ರಣವು ನೆಲದ ಸಿರಿವಂತಿಕೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಭಕ್ತಿಪಂಥದ ಸಂತರುಗಳು ಧಾರ್ಮಿಕ ಗಡಿರೇಖೆಯನ್ನು ಮೀರಿದ ಮನಸ್ಥಿತಿಯನ್ನು ಹೊಂದಿದ್ದರು. ಸೂಫಿ ಸಂತರ ಮಂದಿರಗಳನ್ನು ಕೇವಲ ಮುಸ್ಲಿಮರಷ್ಟೇ ಅಲ್ಲ, ಅನ್ಯಧರ್ಮೀಯರೂ ಸಂದರ್ಶಿಸುತ್ತಿದ್ದರು. ಶ್ರೀಕೃಷ್ಣನಿಗೆ ಸಮರ್ಪಿಸಲಾದ ರಹೀಂ ಹಾಗೂ ರಸ್ಖಾನ್ ಅವರ ಭಕ್ತಿಗೀತೆಗಳು ನಿಜಕ್ಕೂ ಅದ್ಭುತ ವಾದುದಾಗಿವೆ. ಹಿಂದಿ ಸಿನೆಮಾ ಹಾಗೂ ಟಿವಿ ಜಗತ್ತು, ಈ ಸಂಸ್ಕೃತಿಗಳ ಸಮ್ಮಿಲನಕ್ಕೆ ಇನ್ನೊಂದು ಜೀವಂತ ಉದಾಹರಣೆಯಾಗಿದೆ.
ಮುಹಮ್ಮದ್ ರಫಿ ಹಾಡಿರುವ ಮನ್ ತರ್ಪತ್ ದರ್ಶನಾ ಕೊ ಆಜ್ (ಬೈಜು ಬಾವ್ರಾ) ಅಥವಾ ಇನ್ಸಾಫ್ ಕಾ ಮಂದಿರ್ ಹೈ ಯೆ(ಆಮರ್)ಯನ್ನು ಯಾರೂ ಮರೆಯಕೂಡದು. ಈ ಅಂತರ್ ಧರ್ಮೀಯ ಸಾಂಸ್ಕೃತಿಕ ಅಭಿವ್ಯಕ್ತಿಗಳ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ. ಭಾರತದ ಸಂಗೀತ ಕ್ಷೇತ್ರಕ್ಕೆ ಉಸ್ತಾದ್ ಬಿಸ್ಮಿಲ್ಲಾ ಖಾನ್, ಉಸ್ತಾದ್ ಬಡೆ ಗುಲಾಂ ಅಲಿ ಖಾನ್ ಅವರು ರವಿಶಂಕರ್ ಹಾಗೂ ಶಿವಕುಮಾರ್ ಶರ್ಮಾ ಅವರಿಗೆ ಸರಿಸಾಟಿಯಾದ ಕೊಡುಗೆ ನೀಡಿರುವುದು ಇದಕ್ಕೊಂದು ಪುಟ್ಟ ಉದಾಹರಣೆಯಷ್ಟೇ ಆಗಿದೆ. ಭಾರತೀಯ ಸಂಗೀತ ಜಗತ್ತಿನ ಹಾಲಿ ದಿಗ್ಗಜರಲ್ಲೊಬ್ಬರಾದ ಎ.ಆರ್. ರಹ್ಮಾನ್ ಒಂದೆಡೆ ‘ಪಿಯಾ ಹಾಜಿ ಅಲಿ’ ಹಾಡನ್ನು ಸಂಯೋಜಿಸಿದರೆ, ಇನ್ನೊಂದೆಡೆ ‘ಶಾಂತಕಾರಂ ಭುಜಂಗಶಯನಂ’ ಹಾಡನ್ನು ಸಂಯೋಜಿಸಿದ್ದಾರೆ.
ಒಂದು ವೇಳೆ ಕೃಷ್ಣ ಅವರು ಯೇಸುಕ್ರಿಸ್ತ ಹಾಗೂ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಹಾಡುಗಳನ್ನು ಹಾಡಿದರೆ ಅದು ಅತ್ಯಂತ ಸಹಜ ಹಾಗೂ ಪ್ರೇರಣಾದಾಯಕವಾದುದಾಗಿದೆ. ಖಂಡಿತವಾಗಿಯೂ ಇದು ಸೃಜನಶೀಲ ಕಲಾವಿದರ ಮುಖ್ಯ ಅಂತಃಸತ್ವವಾಗಿದೆ. ಆದರೆ ಮತಾಂಧರಿಗೆ ತಮ್ಮ ಸಂಕುಚಿತ ದೃಷ್ಟಿಕೋನದಿಂದಾಚೆಗೆ ನೋಡಲು ಸಾಧ್ಯವಾಗುತ್ತಿಲ್ಲ ಹಾಗೂ ಅವರು ಸಕಾರಾತ್ಮಕ ದೃಷ್ಟಿಯಲ್ಲಿ ಸಂಸ್ಕೃತಿಗಳ ಸಹಜ ಒಡನಾಟವನ್ನು ಸಹಿಸಲಾರರು. ತಾಲಿಬಾನ್ ಬಂಡುಕೋರರು ಹಾಗೂ ಕ್ರೈಸ್ತ ಮೂಲಭೂತವಾದಿಗಳು ಮಾಡುತ್ತಿರುವುದು ಕೂಡಾ ಇದನ್ನೇ.
‘ಎಎಐ ಸ್ಪಿಕ್‌ಮೆಕೆ’ ಸಂಗೀತಗೋಷ್ಠಿಯನ್ನು ಮುಂದೂಡುವಲ್ಲಿ ಟ್ರೋಲ್‌ಗಳು ಮುಖ್ಯಪಾತ್ರವನ್ನು ವಹಿಸಿರುವುದನ್ನು ಮನಗಂಡು, ಇತರ ಟ್ರೋಲ್‌ಗಳು ಕೂಡಾ ತಮ್ಮ ಆಕ್ರಮಣಕಾರಿ ಕೋರೆಹಲ್ಲುಗಳನ್ನು ಪ್ರದರ್ಶಿಸತೊಡಗಿವೆ. ಕೃಷ್ಣ ಅವರ ಕಾರ್ಯಕ್ರಮ ದಿಲ್ಲಿಯಲ್ಲಿ ರದ್ದುಗೊಂಡ ಬಳಿಕ ಮೈಸೂರಿನ ಕುವೆಂಪು ನಗರದಲ್ಲಿ ಆಯೋಜಿಸಲಾಗಿದ್ದ ಕೃಷ್ಣ ಅವರ ಗಾಯನ ಕಾರ್ಯಕ್ರಮವನ್ನು ಕೂಡಾ ರದ್ದುಪಡಿಸಲಾಯಿತು. ಕೃಷ್ಣ ಅವರ ಕಾರ್ಯಕ್ರಮವನ್ನು ಆಯೋಜಿಸುವುದೆಂದರೆ ಹಿಂದೂ ಧರ್ಮದ ನಿಂದನೆಗೆ ಸರಿಸಮವಾಗಿದೆಯೆಂಬ ಎಚ್ಚರಿಕೆಯನ್ನು ಸಂಘಟಕರಿಗೆ ನೀಡಲಾಗಿತ್ತು. ಈ ರೀತಿ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಎದುರಿಸುತ್ತಿರುವ ಹೊರತಾಗಿಯೂ ಕೃಷ್ಣ ಅವರು ತನ್ನ ನಿಲುವಿಗೆ ಅಚಲರಾಗಿದ್ದಾರೆ. ಸಂಗೀತಕ್ಕೆ ದೇಶ, ಪ್ರಾಂತ, ಧರ್ಮ ಅಥವಾ ಭಾಷೆಯ ಗಡಿಯಿಲ್ಲವೆಂಬುದಾಗಿ ಅವರು ನಂಬಿದ್ದಾರೆ. ಸಂಗೀತವು ಜಗತ್ತಿನಾದ್ಯಂತ ಹರಡಬೇಕು ಹಾಗೂ ಎಲ್ಲಾ ಮಾನವಕುಲವನ್ನು ಸಮ್ಮೋಹಗೊಳಿಸಬೇಕೆಂಬುದೇ ಅವರ ಅಭಿಮತವಾಗಿದೆ. ‘‘ಟ್ರೋಲ್ ಸೇನೆಯು ಅಧಿಕಾರದಲ್ಲಿರುವ ವ್ಯಕ್ತಿಗಳ ಕೃಪಾಶ್ರಯವನ್ನು ಹೊಂದಿದೆ. ನನ್ನ ಸಾಮಾಜಿಕ ನಿಲುವು, ರಾಜಕೀಯದ ಬಗ್ಗೆ ನನ್ನ ದೃಷ್ಟಿಕೋನ, ಬಿಜೆಪಿ ಆಡಳಿತದ ಜೊತೆ ನನ್ನ ಭಿನ್ನಾಭಿಪ್ರಾಯಗಳಿಗಾಗಿ ನಾನು ದೀರ್ಘಸಮಯದಿಂದಲೂ ಟ್ರೋಲ್‌ಗೊಳಗಾಗುತ್ತಾ ಬಂದಿದ್ದೇನೆ. ನಾನು ಪ್ರತಿಯೊಂದು ಕಲಾ ಪ್ರಕಾರದ ಮೇಲೂ ವಿಶ್ವಾಸವಿರಿಸಿಕೊಂಡಿದ್ದೇನೆ. ಅಲ್ಲಾಹು, ಯೇಸು ಹಾಗೂ ರಾಮ ಇವರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದೊಂದು ಬಹುಭಾಷಾ ಹಾಗೂ ಬಹುಧರ್ಮೀಯ ರಾಷ್ಟ್ರವಾಗಿದೆ’’ ಎಂದು ಕೃಷ್ಣ ಪ್ರತಿಪಾದಿಸುತ್ತಾರೆ. ಇದೊಂದು ಬಹುಭಾಷಾ ಹಾಗೂ ಬಹುಧರ್ಮೀಯ ದೇಶವಾಗಿದೆ. ವೀರ ಆತ್ಮಕ್ಕೆ ನಮನ, ವೀರ ಭಾರತೀಯನಿಗೆ ನಮನ.