ಮೈತ್ರಿ ಸರಕಾರಕ್ಕೆ ಸವಾಲಾದ ಮೇಕೆದಾಟು

Update: 2018-12-05 06:20 GMT

ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಹಸಿರು ನಿಶಾನೆ ನೀಡುತ್ತಿದ್ದಂತೆ ತಮಿಳುನಾಡು ಸರಕಾರ ಮತ್ತೆ ಕ್ಯಾತೆ ತೆಗೆದಿದ್ದು, ಇದೀಗ ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗುವ ಲಕ್ಷಣಗಳು ಕಾಣುತ್ತಿವೆ. ಹಿಂದಿನ ಕಾಂಗ್ರೆಸ್ ಸರಕಾರ ಮೇಕೆದಾಟು ಅಣೆಕಟ್ಟು ಕಟ್ಟಲು ಹಳೆ ಪ್ರಾಜೆಕ್ಟ್ 5,912 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿತ್ತು. ಆದರೆ, ತಮಿಳುನಾಡು ಸರಕಾರ ಸುಪ್ರೀಂ ಕೊರ್ಟ್ ಮೆಟ್ಟಿಲೇರಿದ್ದರಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಕೇಂದ್ರ ಸರಕಾರ ಜಲ ಆಯೋಗವು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಈ ಬಾರಿಯ ಸಮ್ಮಿಶ್ರ ಸರಕಾರದಲ್ಲಿ ರಾಮನಗರ ಜಿಲ್ಲೆಯ ಶಾಸಕರಾದ ಎಚ್. ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಈ ಸರಕಾರದ ಅವಧಿಯಲ್ಲಾದರೂ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಆರು ಜಿಲ್ಲೆಗಳ ರೈತರಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಬೇಕು. ಆ ಮೂಲಕ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಹಾಡಿ, ಸುಮಾರು ಆರು ಜಿಲ್ಲೆಗಳ ಪ್ರದೇಶಗಳಿಗೂ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿದೆ. ಇದಕ್ಕಾಗಿ ದಶಕದಿಂದಲೂ ಇಲ್ಲಿ ಹೋರಾಟಗಳು ನಡೆಯುತ್ತಾ ಬಂದಿವೆ. ಆದಾಗ್ಯೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಹಿಂದಿನ ಕಾಂಗ್ರೆಸ್ ಸರಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿತ್ತು. ಅದರಂತೆ ಕೇಂದ್ರ ಸರಕಾರದ ಅನುಮತಿ ಪಡೆದು ಯೋಜನೆಯನ್ನು ಪಾರಂಭಿಸುವುದಾಗಿ ಘೋಷಣೆ ಮಾಡಿತ್ತು. ಮುಂದೆ ಯೋಜನೆಯಲ್ಲಿ ಅಷ್ಟೇನು ಪ್ರಗತಿ ಕಂಡು ಬಂದಿರಲಿಲ್ಲ.

‘‘ಆರ್‌ಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಕರಿಯಪ್ಪನವರ ರೈತ ಸಂಘಟನೆಯ ಜೊತೆ ಚರ್ಚಿಸಿ ಮೇಕೆದಾಟು ಯೋಜನೆ ವಿಳಂಬ ನೀತಿ ಖಂಡಿಸಿ ಕನಕಪುರ ನಗರದಲ್ಲಿನ ಮಾಸ್ತಮ್ ಚೌಟ್ರಿ ಬಳಿ ದೇಗಲ ಮಠದ ಸ್ವಾಮೀಜಿ,ಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ, ಮರಳೆಗವಿಮಠದ ಸ್ವಾಮೀಜಿ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಒಂದು ತಾಲೂಕು ಸಮಿತಿ ರಚಿಸಲಾಯಿತು’’ ಎಂದು ಮೇಕೆದಾಟು ಯೋಜನೆಯ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್‌ಕುಮಾರ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

‘‘ತಾಲೂಕು ಸಮಿತಿ ರಚನೆಯಾದ ನಂತರನಿರ್ಮಲಾನಂದ ಸ್ವಾಮೀಜಿ ಜಿಲ್ಲಾ ಸಮಿತಿ ಪ್ರಾರಂಭಿಸುವಂತೆ ತಿಳಿಸಿದರು. ಅದರಂತೆ ಆರು ಜಿಲ್ಲೆಯ ಎಲ್ಲ ರೈತ ಸಂಘಟನೆಗಳು, ಎಲ್ಲ ಪಕ್ಷದ ನಾಯಕರನ್ನು ಪಕ್ಷಾತೀತವಾಗಿ ಒಗ್ಗೂಡಿಸಿಕೊಂಡು ಚನ್ನಬಸಪ್ಪ ಸರ್ಕಲ್‌ನಲ್ಲಿಜಿಲ್ಲಾ ಸಮಿತಿ ಸ್ಥಾಪನೆ ಮಾಡಲಾಯಿತು’’ ಎಂದು ಸಂಪತ್‌ಕುಮಾರ ಹೇಳಿದ್ದಾರೆ. ಮೇಕೆದಾಟು ಅಣೆಕಟ್ಟು ಕಟ್ಟಬೇಕು ಎಂದು ಸುಮಾರು ವರ್ಷಗಳ ಹಿಂದಿನಿಂದಲು ಹೋರಾಟ ನಡೆಯುತ್ತಿದೆ. 1924ರಲ್ಲಿ ಮದ್ರಾಸ್ ಮತ್ತು ಮೈಸೂರು ಸಂಸ್ಥಾನ ಮೊದಲನೇ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ 60 ಟಿಎಂಸಿ ನೀರನ್ನು ಮೈಸೂರು ಸರಕಾರ ಉಪಯೋಗಿಸಬೇಕು ಎಂದು ಒಪ್ಪಂದವಾಗಿದೆ. 1929ರ ಒಪ್ಪಂದದ ಪ್ರಕಾರ ಕಾವೇರಿ ಪ್ರಾಧಿಕಾರದಲ್ಲಿ ಉಲ್ಲೇಖವಾಗಿರುವ ತಮಿಳುನಾಡಿಗೆ ವಾರ್ಷಿಕವಾಗಿ 177 ಟಿಎಂಸಿ ನೀರನ್ನು ಕೊಡಬೇಕು ಎಂದು ಉಲ್ಲೇಖವಾಗಿದೆ. ಸತತ ನಾಲ್ಕು ವರ್ಷಗಳಿಂದ ಮೇಕೆದಾಟು ಯೋಜನೆಯ ಹೋರಾಟ ಸಮಿತಿಯಿಂದ ಮೂರು ಬಾರಿ ರಾಮನಗರ-ಮೈಸೂರು ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗಿದೆ. ತದನಂತ ಪ್ರತಿ ತಾಲೂಕುಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಯೋಜನೆಗಾಗಿ ಹೋರಾಟ ನಡೆಯುತ್ತಲೇ ಇದೆ. ಅಲ್ಲದೇ ಹಲವಾರು ಸಭೆಗಳು ಮಾಡಲಾಗಿದೆ ಎಂದು ಮೇಕೆದಾಟು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ತಿಳಿಸಿದರು.

ಒಟ್ಟಾರೆಯಾಗಿ ಮೇಕೆದಾಟು ಯೋಜನೆಗೆ ಚಾಲನೆ ದೊರೆತು ಆರು ಜಿಲ್ಲೆಗಳ ರೈತರಿಗೆ ನೀರು ದೊರೆಯುವಂತಾದರೆ ವಿವಿಧ ಸಂಘಟನೆಗಳು ಹಲವು ವರ್ಷಗಳಿಂದ ನಡೆದುಕೊಂಡ ಬಂದ ಹೋರಾಟಕ್ಕೆ ಮುಕ್ತಿ ಸಿಕ್ಕಂತಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.

 ಬರಗಾಲದಿಂದ ಚುರುಕುಗೊಂಡ ಹೋರಾಟ

 ಸತತ ನಾಲ್ಕು ವರ್ಷಗಳಿಂದ ಬರಗಾಲ ಬಿದ್ದುದರಿಂದ ಜಿಲ್ಲಾದ್ಯಂತಯಾವುದೇ ಬೆಳೆ ಬೆಳೆಯದೆ ರೈತರು ಕಂಗಾಲಾಗಿದ್ದಾರೆ. ನೀರಾವರಿ ಜಮೀನುಗಳಲ್ಲಿ ಕೂಡಾ ನೀರು ದೊರೆಯದೆ ಅಂತರ್ ಜಲ ಬತ್ತಿದೆ. ಸುಮಾರು 1,500ಅಡಿ ಬೋರ್‌ವೆಲ್ ಕೊರೆಸಿದರೂ ನೀರು ದೊರೆಯುತ್ತಿಲ್ಲ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವವರ ಬದುಕು ದುಸ್ತರವಾಗಿದ್ದರಿಂದ ವಿವಿಧ ರೈತಪರ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದರ ಫಲವಾಗಿ ಹಿಂದಿನ ಕಾಂಗ್ರೆಸ್ ಸರಕಾರ ಯೋಜನೆಗೆ ಬಜೆಟ್‌ನಲ್ಲಿಯೋಜನೆ ತಯಾರಿಸಿತ್ತು. ಕೂಡಲೇ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡು ಕೇಂದ್ರ ಕೇಳಿರುವ ವಿಸ್ತೃತ ವರದಿ ನೀಡಿ ಅಣೆಕಟ್ಟು ನಿರ್ಮಿಸಲು ಅಡಿಗಲ್ಲು ಹಾಕಬೇಕೆಂಬುದು ಆರು ಜಿಲ್ಲೆಗಳ ರೈತರ ಆಶಯವಾಗಿದೆ.

ನಮ್ಮದೇ ಗೆಲುವು

ಈಗಾಗಲೇ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದಾರೆ.

ನಾಳೆ ಅಂತಿಮ ನಿರ್ಧಾರ

ಮೇಕೆದಾಟು ಯೋಜನೆಯಿಂದಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಎಷ್ಟು ಹಾನಿಯಾಗಲಿವೆ. ಎಷ್ಟು ಪ್ರಮಾಣದ ಅರಣ್ಯ, ಜಮೀನುಗಳು ಮುಳುಗಡೆಯಾಗಲಿವೆ ಎನ್ನುವ ಮಾಹಿತಿಯನ್ನು ಕೇಂದ್ರ ಸರಕಾರ ಡಿಪಿಆರ್ (ಡಿಟೇಲ್ ಪ್ರಾಜೆಕ್ಟ್ ರಿಪೋರ್ಟ್)ಕೇಳಿದ್ದು, ಅದರಂತೆ ಸಮ್ಮಿಶ್ರ ಸರಕಾರ ಡಿ.6ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ರೈತರ ಜಮೀನಿಗೆ ನೀರು ಸಮರ್ಪಕವಾಗಿ ದೊರೆತರೆ ರೈತರು ಯಾರ ಬಳಿಯೂ ಸಾಲ ಕೇಳದಂತೆ ಸ್ವಾವಲಂಬಿ ಜೀವನವನ್ನು ಸಾಗಿಸುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗುತ್ತಾರೆ.

 ಸಂಪತ್‌ಕುಮಾರ,

ಮೇಕೆದಾಟು ಯೋಜನೆ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ

 

 

Writer - ಕೆ.ಎಂ. ಪಾಟೀಲ

contributor

Editor - ಕೆ.ಎಂ. ಪಾಟೀಲ

contributor

Similar News

ಜಗದಗಲ
ಜಗ ದಗಲ