ಬ್ರಾಹ್ಮಣಶಾಹಿ ಪುರುಷಾಧಿಕಾರ ಎಂದರೆ ಬ್ರಾಹ್ಮಣರಲ್ಲ...!

Update: 2018-12-06 18:35 GMT

ಈ ಒಟ್ಟು ಪ್ರಕರಣ ಒಂದು ರೀತಿ ಬ್ರಾಹ್ಮಣಶಾಹಿ ಪುರುಷಾಧಿಕಾರ. ಸ್ವತಃ ಬ್ರಾಹ್ಮಣಶಾಹಿ ಪುರುಷಾಧಿಕಾರದ ಸಮರ್ಥನೆಗೆ ನಿಂತಂತೆ ಅದಕ್ಕೆ ಬ್ರಾಹ್ಮಣ ಸಮುದಾಯದ ಅಸ್ಮಿತೆಯನ್ನು ಆಧಾರವಾಗಿ ಬಳಸಿಕೊಂಡಂತೆ ಕಾಣುತ್ತಿದೆ. ನಿಜವಾಗಿಯೂ ಭಾರತದ ಬೌದ್ಧಿಕತೆ ಆ ದಿಕ್ಕಿನತ್ತ ಚಲಿಸುತ್ತಿದೆಯಾ? ನಮ್ಮ ನಡುವೆ ಅಂತಹ ಸಂಕುಚಿತ ಗ್ರಹಿಕೆಯ ಮನಸ್ಥಿತಿಯೊಂದು ರೂಪುತಳೆಯುತ್ತಿದೆಯಾ? ವಿದ್ವಾಂಸರು ಗುರುತಿಸಿದ ಅನ್ ರೀಸನಿಂಗ್ ಕಾಲ ಎಂದರೆ ಇದೇನಾ? ಎಂಬ ನೂರಾರು ಪ್ರಶ್ನೆಗಳು ಏಳುತ್ತಿವೆ. ಕರ್ನಾಟಕ ಸೇರಿದಂತೆ ಭಾರತದ ಸ್ತ್ರೀವಾದಿ ಚಿಂತಕರು ಈ ಚರ್ಚೆಯಲ್ಲಿ ಮಧ್ಯಪ್ರವೇಶ ಮಾಡಿ ದ್ವಂದ್ವವನ್ನು ಬಗೆಹರಿಸುವುದು ಇಂದಿನ ತುರ್ತಾಗಿದೆ.

ಪ್ರಸಿದ್ಧ ಕಂಪೆನಿಯ ವ್ಯವಸ್ಥಾಪಕನೊಬ್ಬ ಅಮೆರಿಕದ ಪ್ರವಾಸದ ವೇಳೆ ಅಲ್ಲಿನ ಬಿಳಿಯರ ಮೇಲ್ತನದ ಸಾಮಾಜಿಕತೆಯ ಕಾರಣಕ್ಕೆ ಹುಟ್ಟಿಕೊಂಡ ಕಪ್ಪುಜನರ ಸಮಸ್ಯೆಯ ಮೂಲದ ಕುರಿತು, ಆದ್ದರಿಂದ ಆ ಸಮುದಾಯಕ್ಕೆ ಆದ ನಷ್ಟದ ಕುರಿತು ಹೋರಾಡುತ್ತಿರುವ ಜನರ ಜೊತೆಗಿನ ಸಂವಾದದ ಭಾಗವಾಗಿ ‘‘ಬಿಳಿಯರ ವರ್ಣಭೇದ ಮನಃಸ್ಥಿತಿಯನ್ನು ವಿರೋಧಿಸೋಣ’’ ಎಂಬ ಫಲಕವನ್ನು ಹಿಡಿದು ತೆಗೆಸಿಕೊಂಡ ಚಿತ್ರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಾನೆ ಎಂಬ ಸನ್ನಿವೇಶ ಊಹಿಸಿಕೊಳ್ಳಿ. ಅದನ್ನು ನೋಡಿದ ಜಗತ್ತಿನ ಬಿಳಿಯರೆಲ್ಲರೂ ಸೇರಿ ‘‘ಇದು ಜಗತ್ತಿನ ಬಿಳಿಯರಿಗೆ ಮಾಡಿದ ಅಪಮಾನ ಆದ್ದರಿಂದ ಆತ ಬಿಳಿಯರ ಕ್ಷಮೆ ಕೇಳಬೇಕು’’ ಎಂದು ಆಗ್ರಹಿಸುವುದು ಎಷ್ಟು ಅಸಂಗತವೋ, ಸಾಮಾಜಿಕ ಜಾಲತಾಣದಲ್ಲಿನ ಆ ಆಗ್ರಹಕ್ಕೆ ಪ್ರತಿಕ್ರಿಯೆಯಾಗಿ ಆ ವ್ಯವಸ್ಥಾಪಕ ‘‘ನಾನು ಜಗತ್ತಿನ ಎಲ್ಲಾ ಬಿಳಿಯರ ಕ್ಷಮೆ ಕೋರುತ್ತಿದ್ದೇನೆ’’ ಎನ್ನುವುದು ಮತ್ತಷ್ಟು ಅಸಂಗತ ವಿದ್ಯಮಾನವಾಗುತ್ತದೆ. . !
ಚಾರಿತ್ರಿಕವಾಗಿ ಯುರೋಪಿನ ಬಿಳಿಯರ ಮೇಲ್ತನವನ್ನು ಸಾಮಾಜಿಕ ಮೌಲ್ಯವಾಗಿ ಪ್ರತಿಪಾದಿಸುವ ಅಲೋಚನಾ ಕ್ರಮದಿಂದ ಹುಟ್ಟಿಕೊಂಡ ವರ್ಣಭೇದ ಸಾಮಾಜಿಕ ಸ್ಥಿತಿಯ ಕಾರಣಕ್ಕೆ ಅಮೆರಿಕ, ಆಫ್ರಿಕಾ ಸೇರಿದಂತೆ ಜಗತ್ತಿನ ಕಪ್ಪುಜನರ ಮೇಲೆ ನಡೆದ ಶೋಷಣೆಗಳ ಕುರಿತು ಕನಿಷ್ಠ ಅರಿವಿರುವ ಯಾರಿಗೂ ಸಹ ‘‘ಬಿಳಿಯರ ವರ್ಣಭೆೇದ ಮನಸ್ಥಿತಿಯನ್ನು ವಿರೋಧಿಸೋಣ’’ ಎಂಬ ಫಲಕ ಆಶ್ಚರ್ಯ ಹುಟ್ಟಿಸಲಾರದು. ಏಕೆಂದರೆ ಆ ಹೇಳಿಕೆ ವೈಯಕ್ತಿಕವಾಗಿ ಯಾವ ಬಿಳಿಯನನ್ನು ಉದ್ದೇಶಿಸಿ ಏನನ್ನೂ ಹೇಳುತ್ತಿಲ್ಲ. ಬದಲಾಗಿ ಬಿಳಿಯರು ಮಾತ್ರವೇ ಶ್ರೇಷ್ಠ ಕುಲದವರು ಎಂಬ ಸಾಮಾಜಿಕತೆಯನ್ನು ಆಧರಿಸಿದ ಹುಟ್ಟಿಕೊಂಡ ಸಂಕುಚಿತ ಗ್ರಹಿಕೆಯ ಕಾರಣಕ್ಕೆ ರೂಪುಗೊಂಡ ವರ್ಣಬೇಧ ಎಂಬ ಅಸಮಾನ ವ್ಯವಸ್ಥೆಯನ್ನು ಖಂಡಿಸುತ್ತಿದೆ ಅಷ್ಟೆ.
ನಾನು ಮೇಲಿನ ಸನ್ನಿವೇಶವನ್ನು ಏಕೆ ಉದಾಹರಿಸಿದೆ ಎಂದರೆ, ಇತ್ತೀಚೆಗೆ ಟ್ವಿಟರ್ ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯಾಕ್ ಡೋರ್ಸೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಮಹಿಳಾ ಸಮಸ್ಯೆಗಳ ಮೂಲ, ಲಿಂಗಾಧಾರಿತ ತಾರತಮ್ಯಗಳ ರಚನೆ ಮತ್ತು ವಿನ್ಯಾಸಗಳ ಕುರಿತು ಹೋರಾಡುತ್ತಿರುವ/ಶೋಧಿಸುತ್ತಿರುವ ಜನರ ಜೊತೆಯಲ್ಲಿ ಅನೌಪಚಾರಿಕ ಸಂವಾದದ ಭಾಗವಾಗಿ ‘‘ಬ್ರಾಹ್ಮಣಶಾಹಿ ಪುರುಷಾಧಿಕಾರವನ್ನು ಕಿತ್ತೊಗೆಯೋಣ’’ ಎಂಬ ಫಲಕವನ್ನು ಹಿಡಿದು ತೆಗೆಸಿಕೊಂಡ ಫೊಪಪೀಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ತಕ್ಷಣವೇ ಆ ಚಿತ್ರವನ್ನು ‘ಬ್ರಾಹ್ಮಣ ವಿರೋಧಿ ನಿಲುವು’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಒಂದು ವರ್ಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲ್ಲಿ ವಿರೋಧಿಸಿ ಅವರ ಕ್ಷಮೆಗೆ ಆಗ್ರಹಿಸಲಾಗಿದೆ. ಜಾಲತಾಣದಲ್ಲಿ ಹೆಚ್ಚಿದ ಒತ್ತಡದ ಕಾರಣಕ್ಕೆ ಸ್ವತಃ ಟ್ವಿಟರ್ ಸಂಸ್ಥೆ ಮತ್ತು ವ್ಯವಸ್ಥಾಪಕ ಜ್ಯಾಕ್ ಡೋರ್ಸೆ ಕ್ಷಮೆಯನ್ನೂ ಕೇಳಿದ್ದಾರೆ. ಒಟ್ಟು ಘಟನೆಯನ್ನು ನೋಡುತ್ತಿರುವ ನನಗೆ ಎರಡು ಪ್ರಶ್ನೆಗಳು ಕಾಡುತ್ತಿವೆ ‘‘ಬ್ರಾಹ್ಮಣಶಾಹಿ ಪುರುಷಾಧಿಕಾರವನ್ನು ವಿರೋಧಿಸಿ’’ ಎಂಬ ಹೇಳಿಕೆ ಏಕೆ ಮತ್ತು ಹೇಗೆ ಬ್ರಾಹ್ಮಣರ ವಿರೋಧವಾಗಿ ಮಂಡಿಸಲಾಯಿತು ಎಂಬುದು ಒಂದಾದರೆ, ಹೀಗೆ ಮಂಡಿಸಿದ ಕ್ರಮವನ್ನು ವಿಮರ್ಶಿಸುವ ಪರ್ಯಾಯ ಸ್ತ್ರೀವಾದಿ ವಿಶ್ಲೇಷಣೆಯೊಂದು ಏಕೆ ಸಾಮಾಜಿಕ ಜಾಲತಾಣದಲ್ಲಿ ಗೈರುಹಾಜರಾಗಿತ್ತು ಎಂಬುದು ಮತ್ತೊಂದು? ಇದಕ್ಕೆ ಸರಳವಾಗಿ ಸೂಚಿಸಬಹುದಾದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಜಾತಿ ಮತ್ತು ಪುರುಷಾಧಿಕಾರಗಳನ್ನು ಅರ್ಥಮಾಡಿಕೊಂಡು ವಿಶ್ಲೇಷಿಸುವ ಜನರ ಪ್ರವೇಶ ದೊಡ್ಡ ಮಟ್ಟದಲ್ಲಿ ಆಗಿಲ್ಲ ಎಂಬುದು...! ಅಥವಾ ನಮ್ಮ ದೇಶದ ತಳಸಮುದಾಯಗಳಿಗೆ ಇಂದಿಗೂ ಜಾತಿ ಮತ್ತು ಪುರುಷಾಧಿಕಾರಗಳನ್ನು ಪ್ರತಿರೋಧಿಸಲು ಬೇಕಾದ ಪರ್ಯಾಯ ಭಾಷೆ ಮತ್ತು ಪರಿಕಲ್ಪನೆಗಳ ಲಭ್ಯತೆ ಇಲ್ಲ ಎಂಬುದು...!


“power over” “power with” ಮಾನವ ಚರಿತ್ರೆಯನ್ನು ಸ್ತ್ರೀವಾದಿ ನೆಲೆಯಲ್ಲಿ ನೋಡುವ ಕ್ರಮವನ್ನು ರೂಪಿಸಿದ ಜಾಗತಿಕ ವಿದ್ವಾಂಸರು ನಮ್ಮ ಒಟ್ಟು ಸಾಮಾಜಿಕ ವ್ಯವಸ್ಥೆಯನ್ನೇ ಪುರುಷಾಧಿಪತ್ಯದ ಹಿನ್ನೆಲೆಯಲ್ಲಿ ಸಂಕುಚಿತವಾಗಿ ಕಟ್ಟಲಾಗಿದೆ, ಈ ವ್ಯವಸ್ಥೆಯ ಪ್ರತಿ ಹಂತದಲ್ಲಿಯೂ ಪುರುಷ ಹೆಣ್ಣನ್ನು ತನಗೆ ಅಧೀನವಾದ ನೆಲೆಯಲ್ಲಿಯೇ ವಿವರಿಸಿದ್ದಾನೆ, ಹಾಗಾಗಿ ಸ್ತ್ರೀ ಕುರಿತ ಎಲ್ಲಾ ಸಾಮಾಜಿಕ ಅಸ್ಮಿತೆಗಳು (ಉದಾಹರಣೆ ತಾಯಿ, ಪತ್ನಿ, ವೇಶ್ಯೆ ಇತ್ಯಾದಿಗಳು) ಆಕೆ ಪುರುಷನೊಟ್ಟಿಗೆ ಹೊಂದಿರಬೇಕಾದ ಸಂಬಂಧವನ್ನು ಆಧರಿಸಿ ವಿಶ್ಲೇಷಿಸಲಾಗಿದೆ ಎಂಬ ಅಂಶವನ್ನು ವ್ಯವಸ್ಥಿತವಾಗಿ ನಿರೂಪಿಸಿದ್ದಾರೆ. 1920ರ ಕಾಲದಲ್ಲಿಯೇ ರಾಜಕೀಯ ಶಾಸ್ತ್ರಜ್ಞೆ ಮೇರಿ ಪಾರ್ಕರ್ ಫೊಲೆಟ್ ಅವರು ‘‘ಆಧುನಿಕ ವ್ಯವಸ್ಥೆಯಲ್ಲಿ ‘ಅಧಿಕಾರ’ ಎಂಬುದು ರಚನಾತ್ಮಕವಾಗಿ ಪುರುಷರ ನೆಲೆಯಲ್ಲಿ ನಿರ್ವಹಿಸಲ್ಪಟ್ಟಿರುವುದರಿಂದ ಆ ಅಧಿಕಾರವನ್ನು ಆಧರಿಸಿ ರೂಪುಗೊಂಡ ಸಾಮಾಜಿಕ ವ್ಯವಸ್ಥೆಗೆ ಆ ವ್ಯವಸ್ಥೆಯ ಅರ್ಧದಷ್ಟಿರುವ ಮಹಿಳೆಯ ಜಗತ್ತಿನ ಕುರಿತು, ಅವರ ಲೋಕದೃಷ್ಟಿಯ ಕುರಿತು ಯಾವ ಸೂಕ್ಷ್ಮತೆಗಳನ್ನೂ ಹೊಂದಲು ಸಾಧ್ಯವಾಗಿಲ್ಲ. ಹಾಗಾಗಿ ಅಧಿಕಾರದ ನಿರ್ವಚನೆಯಲ್ಲಿ ಇರುವ ಪುರುಷಧೋರಣೆಯನ್ನು ಕಿತ್ತೊಗೆಯದ ಹೊರತು ಸಮತೆಯನ್ನು ಸಾಧಿಸಲು ಸಾಧ್ಯವಿಲ್ಲ’’ ಎಂಬ ವಿಶ್ಲೇಷಣೆಯನ್ನು ಜಗತ್ತಿನ ಮುಂದೆ ಇಟ್ಟಿದ್ದರು. ಇಲ್ಲಿ ಗಮಸಬೇಕಾದ ಮುಖ್ಯ ಅಂಶ ಈ ಪುರುಷಾಧಿಕಾರವನ್ನು ತೆಗೆದುಹಾಕಬೇಕು ಎಂಬ ವಾದದ ಅರ್ಥ ಪುರುಷರನ್ನು ವಿರೋಧಿಸಬೇಕು ಎಂಬುದಲ್ಲ. ಬದಲಾಗಿ ನಮ್ಮ ಕಾಲದಲ್ಲಿ ರಾಜ್ಯದ ಅಧಿಕಾರವನ್ನು ನಿರ್ವಚಿಸುತ್ತಿರುವ ಪುರುಷ ಮೌಲ್ಯಗಳ ಮೀತಿಗಳನ್ನು ಮೀರಿ ಸ್ತ್ರಿ/ಪುರುಷ ಇಬ್ಬರೂ ಒಟ್ಟುಗೂಡಿ ಭವಿಷ್ಯದ ಸಮಸಮಾಜವನ್ನು ಕಟ್ಟಬೇಕು ಎಂಬುದು. ಹಾಗಾಗಿಯೇ ಅವರು ಬಳಸಿದ ಚರ್ಚೆಯ ಕಡೆಯಿಂದ ಚರ್ಚೆಯ ಕಡೆಗೆ ಮಹಿಳಾ ನೋಟ ಎಂಬ ವಿಶ್ಲೇಷಣೆ ಸ್ತ್ರೀವಾದಿ ಚರ್ಚೆಗಳ ತಿಳಿವನ್ನು ವಿಸ್ತರಿಸಿತು.
ಈ ಎಲ್ಲಾ ವಾದಕ್ರಮವನ್ನು ಆಧರಿಸಿ ರೂಪುಗೊಂಡ ಭಾರತದ ಸ್ತ್ರೀವಾದಿ ಚಿಂತನೆಗಳು ಇಲ್ಲಿನ ಸಾಮಾಜಿಕ ಸಂದರ್ಭದಲ್ಲಿ ಹೆಣ್ಣಿನ ಅಸ್ಮಿತೆಯನ್ನು ಪೂರ್ವನಿರ್ಧರಿತ ಚೌಕಟ್ಟಿನಲ್ಲಿ ವಿವರಿಸುತ್ತಿರುವ ‘ಅಧಿಕಾರ’ ಎರಡು ಹಂತಗಳಲ್ಲಿ ರೂಪುಗೊಂಡಿದೆ. ಮೊದಲನೆಯದು ಪುರುಷಪ್ರಧಾನ ನೆಲೆಯಲ್ಲಿ, ಎರಡನೆಯದು ಜಾತಿವ್ಯವಸ್ಥೆಯ ಶ್ರೇಣೀಕರಣ ನೆಲೆಯಲ್ಲಿ ಹಾಗಾಗಿ ಭಾರತೀಯ ಮಹಿಳೆ ಎರಡೂ ಹಂತದ ಶೋಷಣೆಯನ್ನು ಅನುಭವಿಸುತ್ತಿರುತ್ತಾಳೆ. ಒಂದು ಆಕೆ ಹೆಣ್ಣಾಗಿರುವ ಕಾರಣಕ್ಕೆ ನಡೆಯುವ ಶೋಷಣೆ, ಮತ್ತೊಂದು ಆಕೆ ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ನಡೆಯುವ ಶೋಷಣೆ. ಆದ್ದರಿಂದ ಭಾರತದಲ್ಲಿ ಹೆಣ್ಣಿನ ಅಸ್ಮಿತೆಯನ್ನು ನಿರ್ವಹಿಸುತ್ತಿರುವ ಅಧಿಕಾರದ ಈ ವಿವರಣಾ ಚೌಕಟ್ಟನ್ನು ಕೇವಲ ಪುರುಷಾಧಿಕಾರ ಎಂದು ಗುರುತಿಸದೆ ‘ಬ್ರಾಹ್ಮಣಶಾಹಿ ಪುರುಷಾಧಿಕಾರ’ ಎಂಬ ನೆಲೆಯಲ್ಲಿಯೂ ಗುರುತಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಅಸಮಾನ ಅಧಿಕಾರದ ಮೂಲ ಇರುವುದು ಬ್ರಾಹ್ಮಣಶಾಹಿ ಧಾರ್ಮಿಕ ಮತ್ತು ನೈತಿಕತೆ ಪಠ್ಯಗಳಲ್ಲಿ.


ಭಾರತೀಯ ಸ್ತ್ರೀವಾದಿ ಚಿಂತನೆ ಕಟ್ಟಿಕೊಟ್ಟಿರುವ ಈ ತಿಳಿವು ಬಹಳ ಸ್ಪಷ್ಟವಾಗಿ ಬ್ರಾಹ್ಮಣಶಾಹಿ ಎಂಬುದು ಭಾರತೀಯ ಸಂದರ್ಭದಲ್ಲಿ ಲಿಂಗಾಧಾರಿತ ಅಸಮಾನತೆಯನ್ನು ನಿರ್ವಹಿಸುತ್ತಿರುವ ಸಾಮಾಜಿಕ ರಚನೆಯೇ ಹೊರತು ವ್ಯಕ್ತಿ ಮತ್ತು ಸಮುದಾಯವಲ್ಲ. ಈ ಅಸಮಾನತೆಯ ನುಡಿಗಟ್ಟನ್ನು ತಳಸಮುದಾಯದ ವ್ಯಕ್ತಿ, ಅಥವಾ ಸ್ವತಃ ಮಹಿಳೆ ಯಾರೇ ಮಾತನಾಡಿದರೂ ಅದನ್ನು ಬ್ರಾಹ್ಮಣಶಾಹಿ ಪುರುಷಾಧಿಕಾರದ ಧೋರಣೆ ಎಂದು ಗುರುತಿಸಲಾಗುತ್ತದೆ ಎಂಬ ಅಂಶವನ್ನು ತನ್ನ ತಾತ್ವಿಕತೆಯ ಭಾಗವಾಗಿ ಹಿಂದೆಯೇ ಒಪ್ಪಿಕೊಂಡಿದೆ. ಇದಕ್ಕೆ ಪೂರಕವಾಗಿ ಭಾರತೀಯ ಸಾಮಾಜಿಕ ಚರಿತ್ರೆಯಲ್ಲಿ ಬ್ರಾಹ್ಮಣಶಾಹಿ ಮನಸ್ಥಿತಿ ರೂಪಿಸಿರುವ ಸಾಮಾಜಿಕ ವ್ಯವಸ್ಥೆ ಅದನ್ನು ಅಧರಿಸಿರುವ ಸಾಮಾಜಿಕ ಅಸಮಾನತೆಗಳ ಕುರಿತು ಸಾವಿರಾರು ಪುಸ್ತಕಗಳು ಬಂದಿವೆ, ನೂರಾರು ಸಿದ್ಧಾಂತಗಳು ಮಂಡನೆಯಾಗಿವೆ. ಸ್ವತಃ ಡಾ. ಬಿ.ಆರ್ ಅಂಬೇಡ್ಕರ್ ಅವರು ‘‘ಬ್ರಾಹ್ಮಣ ಮತ್ತು ಬ್ರಾಹ್ಮಣಶಾಹಿ ಎರಡೂ ಒಂದೇ ಅಲ್ಲ..! ಭಾರತೀಯ ಸಂದರ್ಭದಲ್ಲಿ ವ್ಯಕ್ತಿಗಳಿಗೆ ಸಮಾನತೆ, ನ್ಯಾಯ, ಸ್ವಾತಂತ್ರ್ಯಗಳನ್ನು ಜಾತಿಯ ಕಾರಣಕ್ಕೆ ನಿರಾಕರಿಸುವ ಮನಃಸ್ಥಿತಿ ಬ್ರಾಹ್ಮಣಶಾಹಿ ವ್ಯವಸ್ಥೆ, ಅದು ವ್ಯಕ್ತಿ ಅಥವಾ ಸಮುದಾಯವಲ್ಲ. ಬದಲಾಗಿ ಅದೊಂದು ಸಾಮಾಜಿಕ ರಚನೆ. ಈ ಮನಃಸ್ಥಿತಿಯ ಬೇರುಗಳು ಬ್ರಾಹ್ಮಣಶಾಹಿ ಪರಂಪರೆಯಲ್ಲಿ ಇವೆ’’ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾರೆ.
ಇಷ್ಟೆಲ್ಲಾ ಚಾರಿತ್ರಿಕ ಹಿನ್ನೆಲೆ, ಅಗಾಧ ಸಾಹಿತ್ಯಿಕ ಆಧಾರಗಳು ಇದ್ದರೂ ಟ್ವಿಟರ್ ಕಂಪೆನಿಯ ಜ್ಯಾಕ್ ಡೋರ್ಸೆ ಅವರು ಹಿಡಿದು ನಿಂತಿದ್ದ ‘‘ಬ್ರಾಹ್ಮಣಶಾಹಿ ಪುರುಷಾಧಿಕಾರವನ್ನು ಕಿತ್ತೊಗೆಯೋಣ’’ ಎಂಬ ಫಲಕವನ್ನು ಏಕೆ ಭಾರತೀಯ ವಿದ್ಯಾವಂತ ವರ್ಗ(ಟ್ವಿಟರ್ ಬಳಸುವವರು ವಿದ್ಯಾವಂತರೇ) ತಪ್ಪಾಗಿ ಗ್ರಹಿಸಿತು ಎಂಬುದು ಆಶ್ಚರ್ಯ ಹುಟ್ಟಿಸುತ್ತಿದೆ. ಸೂಕ್ಷ್ಮವಾಗಿ ನೋಡಿದರೆ ಪಟ್ಟಭದ್ರ ಶಕ್ತಿಗಳು ‘ಬ್ರಾಹ್ಮಣಶಾಹಿ=ಬ್ರಾಹ್ಮಣ’ ಎಂಬ ಬೌದ್ಧಿಕ ಪ್ರಪಂಚದಲ್ಲಿ ಅಸ್ತಿತ್ವದಲ್ಲಿ ಇಲ್ಲದ ಸುಳ್ಳು ತರ್ಕವನ್ನು ತೇಲಿಬಿಟ್ಟು ಜನರ ದಿಕ್ಕುತಪ್ಪಿಸುತ್ತಿದ್ದಾರೋ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ ಈ ಒಟ್ಟು ಪ್ರಕರಣ ಒಂದು ರೀತಿ ಬ್ರಾಹ್ಮಣಶಾಹಿ ಪುರುಷಾಧಿಕಾರ ಸ್ವತಃ ಬ್ರಾಹ್ಮಣಶಾಹಿ ಪುರುಷಾಧಿಕಾರದ ಸಮರ್ಥನೆಗೆ ನಿಂತಂತೆ ಅದಕ್ಕೆ ಬ್ರಾಹ್ಮಣ ಸಮುದಾಯದ ಅಸ್ಮಿತೆಯನ್ನು ಆಧಾರವಾಗಿ ಬಳಸಿಕೊಂಡಂತೆ ಕಾಣುತ್ತಿದೆ. ನಿಜವಾಗಿಯೂ ಭಾರತದ ಬೌದ್ಧಿಕತೆ ಆ ದಿಕ್ಕಿನತ್ತ ಚಲಿಸುತ್ತಿದೆಯಾ? ನಮ್ಮ ನಡುವೆ ಅಂತಹ ಸಂಕುಚಿತ ಗ್ರಹಿಕೆಯ ಮನಸ್ಥಿತಿಯೊಂದು ರೂಪುತಳೆಯುತ್ತಿದೆಯಾ? ವಿದ್ವಾಂಸರು ಗುರುತಿಸಿದ ಅನ್ ರೀಸನಿಂಗ್ ಕಾಲ ಎಂದರೆ ಇದೇನಾ? ಎಂಬ ನೂರಾರು ಪ್ರಶ್ನೆಗಳು ಏಳುತ್ತಿವೆ. ಕರ್ನಾಟಕ ಸೇರಿದಂತೆ ಭಾರತದ ಸ್ತ್ರೀವಾದಿ ಚಿಂತಕರು ಈ ಚರ್ಚೆಯಲ್ಲಿ ಮಧ್ಯಪ್ರವೇಶ ಮಾಡಿ ದ್ವಂದ್ವವನ್ನು ಬಗೆಹರಿಸುವುದು ಇಂದಿನ ತುರ್ತಾಗಿದೆ. 

Writer - ಡಾ. ಕಿರಣ್. ಎಂ ಗಾಜನೂರು

contributor

Editor - ಡಾ. ಕಿರಣ್. ಎಂ ಗಾಜನೂರು

contributor

Similar News

ಜಗದಗಲ
ಜಗ ದಗಲ