ಬುಲಂದ್‌ಶಹರ್ ಗಲಭೆ ದೊಡ್ಡ ಸಂಚಿನ ಭಾಗವಾಗಿತ್ತೆ?
ಭಾಗ-1
‘‘ಸತ್ತ ದನದ ಮಾಂಸವನ್ನು ಕಬ್ಬಿನ ಗದ್ದೆಯಲ್ಲಿ ನೇತುಹಾಕಲಾಗಿತ್ತು. ಹ್ಯಾಂಗರ್‌ನಲ್ಲಿ ಬಟ್ಟೆಯನ್ನು ಹಾಕಿದಂತೆ ದನದ ತಲೆ ಹಾಗೂ ಚರ್ಮವನ್ನು ನೇತುಹಾಕಲಾಗಿತ್ತು. ರಾಜ್ಯದ ಪರಿಸ್ಥಿತಿಯನ್ನು ಗಮನಿಸಿದಲ್ಲಿ ಗೋಹತ್ಯೆಯಲ್ಲಿ ತೊಡಗಿರುವ ಯಾರೇ ಆದರೂ ಕೂಡಾ, ಗೋಮಾಂಸವನ್ನು ಪ್ರದರ್ಶನಕ್ಕಿಡಲಾರರು. ಆದರೆ ಇಲ್ಲಿ ಗೋಮಾಂಸವನ್ನು ದೂರದಿಂದಲೇ ಕಾಣುವಂತೆ ನೇತುಹಾಕಲಾಗಿತ್ತು’’ ಎಂದು ಸಿಯಾನಾ ಗ್ರಾಮದ ರಾಜ್‌ಕುಮಾರ್ ಭಾಸ್ಕರ್ ತಿಳಿಸುತ್ತಾರೆ.
ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಸೋಮವಾರ ಓರ್ವ ಪೊಲೀಸ್ ಅಧಿಕಾರಿ ಹಾಗೂ ಇನ್ನೋರ್ವ ನಾಗರಿಕನನ್ನು ಹತ್ಯೆಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿದ್ದು, ಹಲವಾರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಾಹಾವತಿ ಗ್ರಾಮದಿಂದ ನಾಲ್ಕು ಕಿ.ಮೀ. ದೂರವಿರುವ ಗದ್ದೆಯೊಂದರಲ್ಲಿ ವಧಿಸಲ್ಪಟ್ಟದನಗಳ ಕಳೇಬರಗಳು ಪತ್ತೆಯಾಗಿವೆಯೆಂದು ಆರೋಪಿಸಿ ಚಿಂಗ್ರಾವತಿ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಗ್ರಾಮಸ್ಥರ ಗುಂಪೊಂದು ಬುಲಂದ್‌ಶಹರ್-ಘರ್‌ಮುಕ್ತೇಶ್ವರ್ ಹೆದ್ದಾರಿಗೆ ತಡೆ ಒಡ್ಡಿದ್ದಲ್ಲದೆ, ಹಿಂಸಾಚಾರಕ್ಕಿಳಿದಿತ್ತು.
ಈ ಹಿಂಸಾಚಾರಕ್ಕೆ ಪ್ರಥಮ ಬಲಿಯಾದವನು ಚಿಂಗ್ರಾವತಿ ಗ್ರಾಮದ ನಿವಾಸಿ 20 ವರ್ಷ ವಯಸ್ಸಿನ ಯುವಕ ಸುಮಿತ್ ಕುಮಾರ್ ಎಂಬುದಾಗಿ ಗುರುತಿಸಲಾಗಿದೆ. ಎದೆಗೆ ಬುಲೆಟ್ ತಾಗಿ ಆತ ಕೊನೆಯುಸಿರೆಳೆದಿದ್ದಾನೆ. ಆತ ತನ್ನ ದ್ವಿಚಕ್ರವಾಹನದಲ್ಲಿ ಗೆಳೆಯನನ್ನು ಡ್ರಾಪ್ ಮಾಡಲೆಂದು ಪೊಲೀಸ್ ಹೊರಠಾಣೆಯ ಬಳಿ ಬರುತ್ತಿದ್ದಾಗ ಗುಂಡಿನಚಕಮಕಿಯ ನಡುವೆ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಬಂಧುಗಳು ತಿಳಿಸಿದ್ದಾರೆ. ಆದಾಗ್ಯೂ ಪೊಲೀಸರು ಆತನನ್ನು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಂಕಿತನೆಂದು ಹಣೆಪಟ್ಟಿ ಕಟ್ಟಿದ್ದಾರೆ.
ಇನ್‌ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್, ಈ ಪ್ರಕರಣದಲ್ಲಿ ಸಾವನ್ನಪ್ಪಿದ ಎರಡನೆ ವ್ಯಕ್ತಿ. ಸಿಂಗ್ ಅವರ ವೃತ್ತಿಪರ ಹಿನ್ನೆಲೆಯು ಅವರನ್ನು ಪೊಲೀಸ್ ಇಲಾಖೆಯಲ್ಲಿ ಅವರ ವಿರುದ್ಧ ಸಂಚು ನಡೆದಿರುವುದನ್ನು ಪುಷ್ಟೀಕರಿಸಿದೆ. ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ 2015ರ ದಾದ್ರಿ ನರಹತ್ಯೆ ಪ್ರಕರಣ ವರ್ಗಾವಣೆಗೊಳ್ಳುವ ಮುನ್ನ ಸಿಂಗ್ ಅವರು ತನಿಖಾಧಿಕಾರಿಯಾಗಿದ್ದರು. ದಾದ್ರಿ ಸಮೀಪದ ಉತ್ತರಪ್ರದೇಶದ ಬಿಸಾರಾ ಗ್ರಾಮದಲ್ಲಿ ಗುಂಪೊಂದು 52 ವರ್ಷ ವಯಸ್ಸಿನ ಮುಹಮ್ಮದ್ ಅಖ್ಲಾಕ್‌ನನ್ನು ಹತ್ಯೆಗೈದಿತ್ತು. ಗೋಹತ್ಯೆಯ ಆರೋಪ ಹೊರಿಸಿ, ಗುಂಪೊಂದು ವ್ಯಕ್ತಿಯನ್ನು ಬರ್ಬರವಾಗಿ ಥಳಿಸಿ ಹತ್ಯೆಗೈದ ಪ್ರಪ್ರಥಮ ಪ್ರಕರಣ ಅದಾಗಿತ್ತು. ದಾದ್ರಿಯ ಹಿಂಸಾನಿರತ ಗುಂಪನ್ನು ನಿಯಂತ್ರಿಸುವಲ್ಲಿ ಸುಬೋಧ್ ಕುಮಾರ್ ಸಿಂಗ್ ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಿದ್ದರೆಂದು ಹಲವಾರು ಪೊಲೀಸ್ ಅಧಿಕಾರಿಗಳು ಸ್ಮರಿಸಿಕೊಳ್ಳುತ್ತಾರೆ.
‘‘ಕೆಲವೊಮ್ಮೆ ಅವರಿಗೆ ನಿರ್ದಿಷ್ಟ ಪ್ರಕರಣದ ತನಿಖೆಯನ್ನು ನಡೆಸಕೂಡದೆಂಬ ಸೂಚನೆ ಬರುತ್ತಿತ್ತು. ಆದರೆ ಅವರು ಯಾವತ್ತೂ, ಅದಕ್ಕೆ ಸೊಪ್ಪುಹಾಕದೆ ತನಿಖೆ ನಡೆಸುತ್ತಿದ್ದರು’’ ಎಂದು ಸುಬೋಧ್ ಕುಮಾರ್ ಸಿಂಗ್‌ರ ಪುತ್ರ ಶ್ರೇಯಾ ಸಿಂಗ್ ಹೇಳುತ್ತಾರೆ. ‘‘ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡದಂತಹ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕೆಂದು ಅವರು ಬಯಸಿದ್ದರು’’ ಎಂಬುದಾಗಿ ಸುಬೋಧ್ ಕುಮಾರ್ ಸಿಂಗ್ ಅವರ ಸಹೋದರಿ ಸುನೀತಾ ಸಿಂಗ್ ಹೇಳುತ್ತಾರೆ. ‘‘ಗೋ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ನನ್ನ ಸಹೋದರ ಪೊಲೀಸರ ಸಂಚಿನಿಂದಾಗಿ ಹತ್ಯೆಯಾಗಿದ್ದಾನೆ’’ ಎಂದು ಆಕೆ ಹೇಳಿರುವುದಾಗಿ ವರದಿಯಾಗಿತ್ತು.
ವಿವಿಧ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ, ಸುಬೋಧ್ ಕುಮಾರ್‌ಸಿಂಗ್ ಹತ್ಯೆಯ ಸುತ್ತಮುತ್ತಲಿನ ಘಟನಾವಳಿಗಳನ್ನು ಖ್ಯಾತ ಅಂತರ್ಜಾಲ ಸುದ್ದಿ ತಾಣ ಸ್ಕ್ರೋಲ್.ಇನ್ ಪುನಾರಚಿಸಿದೆ.
ಬೆಳಗ್ಗೆ 8:00 ಗಂಟೆ
ಮಹಾವ್ ಗ್ರಾಮದ ನಿವಾಸಿಯಾದ ರಾಜ್‌ಕುಮಾರ್ ಚೌಧುರಿ ಅವರಿಗೆ ತನ್ನ ಹೊಲದಲ್ಲಿ ದನದ ಕಳೇಬರಗಳು ಪತ್ತೆಯಾಗಿವೆಯೆಂಬ ದೂರವಾಣಿ ಕರೆಯೊಂದು ಬಂದಿತು. ತಕ್ಷಣವೇ ಅವರು ಮನೆಯಿಂದ ಹೊರತೆರಳಿದ್ದರೆಂದು ಅವರ ಪತ್ನಿ ಪ್ರೀತಿ ಹೇಳಿದ್ದಾರೆ. ಸುಮಾರು ಅರ್ಧ ತಾಸಿನ ಬಳಿಕ ಕೆಲವು ಗ್ರಾಮಸ್ಥರು ಅವರ ಮನೆಗೆ ಬಂದು, ಚೌಧುರಿಯವರ ಟ್ರಾಕ್ಟರ್‌ನ್ನು ಕೊಂಡೊಯ್ದರು.
ಇದೇ ಸಮಯ, ಚಿಂಗ್ರಾವತಿಯಿಂದ ಎರಡು ಕಿ.ಮೀ. ದೂರದ ನಯಾಬನ್ಸ್ ಗ್ರಾಮದಲ್ಲಿ ಬಜರಂಗದಳ ನಾಯಕ ಹಾಗೂ ಎರಡನೇ ವರ್ಷದ ಕಾನೂನು ವಿದ್ಯಾರ್ಥಿ ಯೋಗೇಶ್ ರಾಜ್‌ಗೆ ದೂರವಾಣಿ ಕರೆಯೊಂದು ಬಂದಿತು. ಆತ ಕೂಡಲೇ ಕೆಲವು ಗೆಳೆಯರೊಂದಿಗೆ ಹೊರಗೆ ಧಾವಿಸಿ ಹೋಗಿದ್ದಾಗಿ, ಆತನ ಸಹೋದರಿ ಸುಮನ್ ಮಾಥುರ್ ಹೇಳಿದ್ದಾರೆ.
ದನದ ಕಳೇಬರಗಳು ಪತ್ತೆಯಾಗಿರುವ ಬಗ್ಗೆ ರಾಜ್‌ಕುಮಾರ್ ಚೌಧುರಿಗೆ ಯಾರು ಕರೆ ಮಾಡಿದ್ದಾರೆಂದು ತನಗೆ ಖಚಿತ ಮಾಹಿತಿಯಿಲ್ಲವೆಂದು ಆತನ ಪತ್ನಿ ಹೇಳುತ್ತಾರೆ. ‘‘ರಾಜ್‌ಕುಮಾರ್ ಚೌಧುರಿಯ ಹೊಲದ ಪಕ್ಕದಲ್ಲೇ ನನ್ನ ಹೊಲವೂ ಇದೆ. ಈ ಘಟನೆಯ ಬಗ್ಗೆ ಮಾಹಿತಿಯನ್ನು ಆತನಿಗೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಆಳುಗಳು ನೀಡಿದ್ದರು’’ ಎಂಬುದಾಗಿ ಸಿಂಗ್ ಹೇಳುತ್ತಾರೆ. ನಾನು ಆತನ ಜೊತೆಗೆ ಸ್ಥಳಕ್ಕೆ ಧಾವಿಸಿದೆ. ನಾಲ್ಕರಿಂದ ಐದರಷ್ಟು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವ ಮೂಲಕ ಗಲಭೆ ಆರಂಭಗೊಂಡಿತು. ಆನಂತರ ಇನ್ನಷ್ಟು ಮಂದಿ ಗುಂಪುಗೂಡಿ ಹಿಂಸಾಚಾರಕ್ಕಿಳಿದರು’’ ಎಂದು ಅವರು ಹೇಳಿದರು. ‘‘ಇದು ಹಲವಾರು ವರ್ಷಗಳ ಹಿಂದಿನ ಕಳೇಬರದಂತೆ ಕಾಣುತ್ತಿದೆ. ನಾವೆಲ್ಲರೂ ನೋಡುವಂತೆ ಅದನ್ನು ಪ್ರದರ್ಶಿಸಲಾಗುತ್ತಿದೆ’’ ಎಂದರು.
‘‘ಸತ್ತ ದನದ ಮಾಂಸವನ್ನು ಕಬ್ಬಿನ ಗದ್ದೆಯಲ್ಲಿ ನೇತುಹಾಕಲಾಗಿತ್ತು. ಹ್ಯಾಂಗರ್‌ನಲ್ಲಿ ಬಟ್ಟೆಯನ್ನು ಹಾಕಿದಂತೆ ದನದ ತಲೆ ಹಾಗೂ ಚರ್ಮವನ್ನು ನೇತುಹಾಕಲಾಗಿತ್ತು. ರಾಜ್ಯದ ಪರಿಸ್ಥಿತಿಯನ್ನು ಗಮನಿಸಿದಲ್ಲಿ ಗೋಹತ್ಯೆಯಲ್ಲಿ ತೊಡಗಿರುವ ಯಾರೇ ಆದರೂ ಕೂಡಾ, ಗೋಮಾಂಸವನ್ನು ಪ್ರದರ್ಶನಕ್ಕಿಡಲಾರರು. ಆದರೆ ಇಲ್ಲಿ ಗೋಮಾಂಸವನ್ನು ದೂರದಿಂದಲೇ ಕಾಣುವಂತೆ ನೇತುಹಾಕಲಾಗಿತ್ತು’’ ಎಂದು ಸಿಯಾನಾ ಗ್ರಾಮದ ರಾಜ್‌ಕುಮಾರ್ ಭಾಸ್ಕರ್ ತಿಳಿಸುತ್ತಾರೆ.
ತಹಶೀಲ್ದಾರ್ ಅವರ ಉಪಸ್ಥಿತಿಯಲ್ಲಿಯೇ ವಿವಿಧ ಹಿಂದುತ್ವವಾದಿ ಗುಂಪುಗಳ ಸದಸ್ಯರು ಸ್ಥಳದಲ್ಲಿ ಜಮಾಯಿಸಿ, ಪ್ರತಿಭಟನೆ ಆರಂಭಿಸಿದರು. ಆನಂತರ ದನದ ಕಳೇಬರಗಳನ್ನು ಟ್ರಾಕ್ಟರ್‌ನಲ್ಲಿ ಹೇರಿದ ಗುಂಪು, ಪ್ರತಿಭಟನೆಗಾಗಿ ಅದನ್ನು ಬುಲಂದ್‌ಶಹರ್-ಗುರುಮುಕ್ತೇಶ್ವರ್ ರಾಜ್ಯ ಹೆದ್ದಾರಿಗೆ ಕೊಂಡೊಯ್ಯಲು ಯತ್ನಿಸಿತು.
ಆದರೆ ಈ ಘಟನೆಯು ಕೋಮು ಸೂಕ್ಷ್ಮದ್ದೆಂಬುದು ತಹಶೀಲ್ದಾರ್ ಅವರಿಗೆ ಚೆನ್ನಾಗಿ ಅರಿವಿತ್ತು. ಅದರಲ್ಲೂ ವಿಶೇಷವಾಗಿ ಡಿಸೆಂಬರ್ 1ರಂದು ಆರಂಭಗೊಂಡ, ಸುಮಾರು 10 ಲಕ್ಷ ಮಂದಿ ಮುಸ್ಲಿಮರು ಪಾಲೊಂಡಿದ್ದ ತಬ್ಲಿಗಿ ಇಜ್ತೆಮಾ ಸಮಾವೇಶದ ಸ್ಥಳವಾದ ಬುಲಂದ್‌ಶಹರ್‌ನ ಹೊರವಲಯದಲ್ಲಿರುವ ದರಿಯಾಪುರ-ಅಕ್ಬರ್‌ಪುರ ಪ್ರದೇಶದಲ್ಲಿ ಜನ ಜಮಾಯಿಸಿದ್ದರು.
ಚಿಂಗ್ರಾವತಿ ಪೊಲೀಸ್ ಹೊರಠಾಣೆಯು, ಸಿಯಾನಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಪರಿಸ್ಥಿತಿಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಠಾಣಾಧಿಕಾರಿ ಸುಬೋಧ್ ಕುಮಾರ್ ಸಿಂಗ್ ತಕ್ಷಣವೇ ಚಿಂಗ್ರಾವತಿಗೆ 10 ಮಂದಿ ಪೊಲೀಸ್ ಅಧಿಕಾರಿಗಳೊಂದಿಗೆ ತೆರಳಿದರು.
ಉದ್ರಿಕ್ತ ಗ್ರಾಮಸ್ಥರನ್ನು ಸಿಂಗ್ ಅವರು ಸಮಾಧಾನಪಡಿಸಲು ಯತ್ನಿಸಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗೋಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದೂ ಅವರು ಭರವಸೆ ನೀಡಿದರು. ವೀಡಿಯೋ ಕ್ಲಿಪ್ ಒಂದರಲ್ಲಿ ಸುಬೋಧ್‌ಕುಮಾರ್ ಅವರು ಬಜರಂಗದಳ ನಾಯಕ ಯೋಗೇಶ್ ರಾಜ್ ಜೊತೆ ಮಾತನಾಡುತ್ತಿರುವುದು ಕಾಣಿಸಿದೆ. ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವಂತೆ ಮಾಡುವಲ್ಲಿ ಗ್ರಾಮದ ಹಿರಿಯರ ಮನವೊಲಿಸುವಲ್ಲಿ ಸಿಂಗ್ ಸಫಲರಾದರು. ಆದರೆ ಯೋಗೇಶ್ ರಾಜ್ ಮಾತ್ರ ಅದಕ್ಕೆ ಒಪ್ಪಲೇ ಇಲ್ಲ.
ಸಮಯಕಳೆದಂತೆ ಜನಸಂದಣಿ ಕೂಡಾ ಹೆಚ್ಚಿತು. ಗುಂಪಿನಲ್ಲಿದ್ದ ವರಲ್ಲಿ ಹೆಚ್ಚಿನವರು ಮಹಾವ್, ಚಿಂಗ್ರಾವತಿ ಹಾಗೂ ನಯಾಬನ್ಸ್ ಗ್ರಾಮದವರಾಗಿದ್ದರು. ಆದರೆ ಮುಂದಿನ ಎರಡೇ ತಾಸುಗಳಲ್ಲಿ ಸಿಯಾನಾ ಪಟ್ಟಣ, ಲೂಂಗಾ, ಬಾರೊವ್ಲಿ, ಖಾನ್‌ಪುರ್, ಬುಗ್ರಾಸಿ, ಜವಾಹರ್‌ಗಂಜ್ ಹಾಗೂ ಚಾಂದ್‌ಪುರ ಗ್ರಾಮಸ್ಥರು ಕೂಡಾ ಪ್ರತಿಭಟನೆಯಲ್ಲಿ ಕೈಜೋಡಿಸಿದರೆಂದು ಪ್ರಥಮ ಮಾಹಿತಿ ವರದಿ ತಿಳಿಸಿದೆ.
ತದನಂತರ ಯೋಗೇಶ್ ನೀಡಿದ ದೂರಿನ ಆಧಾರದಲ್ಲಿ ಮಧ್ಯಾಹ್ನ ಸುಮಾರು 1:00 ಗಂಟೆಯ ವೇಳೆಗೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಏಳು ಮಂದಿ ಮುಸ್ಲಿಮರ ವಿರುದ್ಧ ಪೊಲೀಸರು ಗೋಹತ್ಯೆಯ ಪ್ರಕರಣ ದಾಖಲಿಸಿದರು. ತಾನು ಹಾಗೂ ತನ್ನ ಗೆಳೆಯರು ತನ್ನ ಗ್ರಾಮ ನಯಾಬನ್ಸ್‌ನಿಂದ ಆರು ಕಿ.ಮೀ. ದೂರದ ಮಾಹಾವ್‌ನ ಅರಣ್ಯಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಳು ಮಂದಿ ದನಗಳನ್ನು ವಧಿಸುತ್ತಿದ್ದುದನ್ನು ಕಂಡಿದ್ದಾಗಿಯೂ, ಆಗ ಆರೋಪಿಗಳು ಸ್ಥಳದಿಂದ ಓಡಿಹೋಗಿದ್ದಾಗಿಯೂ ತಿಳಿಸಿದ್ದ. ದನಗಳ ಕಳೇಬರಗಳು ಹಲವಾರು ದಿನಗಳಷ್ಟು ಹಿಂದಿನದ್ದೆಂದು ತಹಶೀಲ್ದಾರ ರು ಅಂದಾಜಿಸಿರುವುದಕ್ಕೆ ವ್ಯತಿರಿಕ್ತವಾದ ಹೇಳಿಕೆ ಇದಾಗಿದೆ.
ಗೋ ಹತ್ಯೆಯ ಬಗ್ಗೆ ತನಗೆ ಮಾಹಿತಿ ದೊರೆತ ಬಳಿಕ ತಾನು ಸ್ಥಳಕ್ಕೆ ತೆರಳಿದ್ದಾಗಿ ನೀಡಿದ ಹೇಳಿಕೆಯನ್ನು ರಾಜ್ ಅಂದಾಜಿಸಿದ್ದಾಗಿದೆೆ. ಈ ವಿಷಯಕ್ಕೆ ಸಂಬಂಧಿಸಿ, ತಾನು ಸ್ವತಃ ಸಿಯಾನಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಗಿಯೂ ರಾಜ್ ತಿಳಿಸಿದ್ದ.
ಗೋಹತ್ಯೆ ಪ್ರಕರಣ ಶಂಕಿತ ಆರೋಪಿಗಳೆಂದು (ಅವರಲ್ಲಿ ಇಬ್ಬರು 11 ಹಾಗೂ 12 ವರ್ಷ ವಯಸ್ಸಿನವರು) ರಾಜ್ ನಿರ್ದಿಷ್ಟ ವಾಗಿ ತನ್ನ ಗ್ರಾಮದ ಏಳು ಮಂದಿ ಮುಸ್ಲಿಮರನ್ನು ಹೆಸರಿಸಿರುವುದು ನಯಾಬನ್ಸ್, ಮಹಾವ್ ಹಾಗೂ ಚಿಂಗ್ರಾವತಿ ಗ್ರಾಮಗಳ ಗ್ರಾಮಸ್ಥರನ್ನು ಗೊಂದಲಕ್ಕೀಡುಮಾಡಿದೆ. ಈ ಎಲ್ಲಾ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದ ನಿವಾಸಿಗಳಿದ್ದಾರೆ ಹಾಗೂ ಹಿಂದೆಂದೂ ಇಂತಹ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ. ಅಷ್ಟೇ ಅಲ್ಲದೆ ಈ ಗ್ರಾಮಗಳಲ್ಲಿ ಯಾವುದೇ ಕಸಾಯಿ ಖಾನೆಯೂ ಇಲ್ಲ.
ಒಂದು ಗಂಟೆಯ ಆನಂತರ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಗುಂಪಿನಲ್ಲಿದ್ದ ಕೆಲವು ಸದಸ್ಯರು ಚಿಂಗ್ರಾವತಿ ಠಾಣೆಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲುಗಳಿಂದ ದಾಳಿ ನಡೆಸಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಲಾಠಿಚಾರ್ಜ್‌ಗೆ ಮುಂದಾದಾಗ ಕೆಲವು ಪ್ರತಿಭಟನಕಾರರು ಗುಂಡು ಹಾರಿಸಿದರು. ಆಗ ಪೊಲೀಸರು ಅನಿವಾರ್ಯವಾಗಿ ಜೀವಭಯದಿಂದ ಓಡಿಹೋದರು. ಆನಂತರ ಉದ್ರಿಕ್ತ ಗುಂಪು ಪೊಲೀಸ್ ವಾಹನಗಳು ಸೇರಿದಂತೆ ರಸ್ತೆಯಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸ್‌ಠಾಣೆಗೆ ಮುತ್ತಿಗೆ ಹಾಕಿದ ಗಲಭೆಕೋರರು, ಎರಡು ಕೊಠಡಿಗಳಿಗೆ ಬೆಂಕಿ ಕೂಡಾ ಹಚ್ಚಿದರು ಎಂದು ಚಿಂಗ್ರಾವತಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೃಪೆ: scroll.in