ಇಸ್ತಾಂಬುಲ್: ಉಪಖಂಡಗಳ ಸಂಧಿ ಸ್ಥಳದಲ್ಲಿ...

Update: 2018-12-09 07:47 GMT

ಟರ್ಕಿ ದೇಶವು ಸಾಮಾನ್ಯ ಪ್ರವಾಸಿಯೊಬ್ಬನನ್ನು ಮೂಕವಿಸ್ಮಿತ ಗೊಳಿಸಿತ್ತದೆ. ಯುರೋಪ್ ಅಥವಾ ಏಶ್ಯಾದಲ್ಲಿ ಅದರ ಸ್ಥಾನಮಾನವೇನು?

ಭೌಗೋಳಿಕವಾಗಿ ಅದು ಎರಡೂ ಉಪಖಂಡಗಳ ಅಕ್ಕಪಕ್ಕದಲ್ಲಿದೆ. ಆದರೆ ಬೊಸ್ಟೋರಸ್‌ನ ಅಗಲ ಹಿರಿದಾದ ಭೂಭಾಗವು ಏಶ್ಯಾವನ್ನು ಯುರೋಪಿನ ಜೊತೆ ಸೇರಿಸುತ್ತದೋ ಅಥವಾ ಬೇರ್ಪಡಿಸುತ್ತದೋ ಎಂದು ಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಿ ಪ್ರಾಚೀನ ಗೋಲ್‌ಗುಂಬಝ್‌ಗಳು ಇಸ್ಲಾಮಿಕ್ ಮಿನಾರ್‌ಗಳ ಅಕ್ಕಪಕ್ಕದಲ್ಲೇ ಕಂಡುಬರುತ್ತವೆ. ಸಾರ್ವಜನಿಕ ಚೌಕಗಳಲ್ಲಿ ಧೂಮಪಾನ ಮಾಡುವ ಹಿಜಾಬ್ ಧರಿಸಿದ ಮಹಿಳೆಯರು, ಹಲವು ಭಾರತೀಯರಿಗೆ ಗೊಂದಲ ಉಂಟು ಮಾಡಬಹುದಾದ ರೋಮನ್ ಅಕ್ಷರಮಾಲೆ, ಪೌರಾತ್ವ ಧ್ವನಿ ಸೇರಿಕೊಂಡು ಹುಟ್ಟಿರುವ ಒಂದು ವಿಶೇಷ ಭಾಷೆ, ಹಾದಿಬೀದಿಗಳಲ್ಲಿ ಕೇಳಿಬರುವ ಕರ್ಕಶವೆನಿಸುವ ಮತ್ತು ಶಬ್ದಗಳ ಗದ್ದಲ ಎಲ್ಲವೂ ಟರ್ಕಿಯ ವೈಶಿಷ್ಟವೆನ್ನಬಹುದು.

ಗುರಿ ಸಾಧಿಸುವ ಹಂಬಲ

ಯುರೋಪಿಯನ್ ಒಕ್ಕೂಟ (ಇಯು)ವನ್ನು ಸೇರಿಕೊಳ್ಳ ಬೇಕೆಂಬ ರಾಷ್ಟ್ರೀಯ ಗುರಿ ಟರ್ಕಿಯ ಹಲವು ದಶಕಗಳ ಹಂಬಲವಾಗಿದೆ. ಆದರೆ ಈ ಗುರಿ ತಲುಪುವಲ್ಲಿ ಅದಿನ್ನೂ ಯಶಸ್ಸು ಕಂಡಿಲ್ಲ. ಆದರೂ ಅದರ ಅಸ್ತಿತ್ವದ ಪ್ರತಿ ಎಳೆಯಲ್ಲೂ ಅದರ ದ್ವಿಮುಖ ವ್ಯಕ್ತಿತ್ವ ಮತ್ತು ಪರಸ್ಪರ ವಿರುದ್ಧ ಸ್ವಭಾವ ಎದ್ದು ಕಾಣಿಸುತ್ತದೆ. 1923ರಲ್ಲಿ ಅಟಾಟುಕ್ ಶತಮಾನಗಳಷ್ಟು ಹಳೆಯದಾದ ಖಿಲಾಫತ್ತನ್ನು ರದ್ದುಗೊಳಿಸಿದಂದಿನಿಂದ ಟರ್ಕಿ ಸತತವಾಗಿ ಪ್ರಜಾಪ್ರಭುತ್ವ ಮತ್ತು ಮತ ನಿರಪೇಕ್ಷತೆಯ ನಡುವೆ ಸಾಮರಸ್ಯ ಸಾಧಿಸುತ್ತಲೇ ಬಂದಿದೆ.

ತುರ್ಕಿಗಳಿಗೆ ಟರ್ಕಿ ಮತ್ತು ಮುಖ್ಯವಾಗಿ ಇಸ್ತಾಂಬುಲ್‌ಗೆಸಾಮರಸ್ಯ ಸಾಧಿಸುವ ಕಲೆ ಸಹಜವಾಗಿಯೇ ಬಂದಿದೆ. ಯಾಕೆಂದರೆ ಟರ್ಕಿ ಮೂರು ಶ್ರೇಷ್ಠ ನಾಗರಿಕತೆಗಳ ತೊಟ್ಟಿಲಾಗಿತ್ತು. ಅದು ಏಶ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳ ವಾಣಿಜ್ಯ ಕೆರವಾನ್‌ಗಳ ಕೇಂದ್ರವಾಗಿತ್ತು. ಪ್ರವಾಸಿಗರನ್ನು ಹಾಗೂ ಸರಕು ಸಾಮಗ್ರಿಗಳನ್ನು ಹೊತ್ತ ಹಡಗುಗಳು ಬಾಸ್ಪೊರಸ್‌ನಲ್ಲಿ ಇಂದಿಗೂ ಅಲ್ಲಿ ತಂಗಲು ಸ್ಥಳಾವಕಾಶಕ್ಕಾಗಿ ಪೈಪೋಟಿ ನಡೆಸುತ್ತವೆ. ಆದರೆ ಒಟೊಮನ್ ಸಾಮ್ರಾಜ್ಯ ಉತ್ತುಂಗ ಶಿಖರದಲ್ಲಿದ್ದಾಗ ಈ ನದಿಯ ದಡದಲ್ಲಿ ದಿನವೊಂದರ ಸಾಮಾನ್ಯವಾಗಿ 15,000ಕ್ಕೂ ಹೆಚ್ಚು ದೋಣಿಗಳು ಪಾರ್ಕಿಂಗ್ ಜಾಗಕ್ಕಾಗಿ ಪರದಾಡುತ್ತಿದ್ದವೆಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಒಟೊಮನ್ ಪಾಷಾಗಳು ನೆರೆಯ ದೇಶಗಳ ಅರಸರಿಗೆ ತಮ್ಮ ದೇಶದ ಎಲ್ಲ ಮತಧರ್ಮಗಳ ಜನರನ್ನು ಟರ್ಕಿಗೆ ಕಳುಹಿಸಿಕೊಡಲು, ಅಲ್ಲಿ ನೆಲೆನಿಂತು ವ್ಯಾಪಾರ ವ್ಯವಹಾರ ನಡೆಸಲು ಪತ್ರಗಳನ್ನು ಬರೆಯುತ್ತಿದ್ದರು. ಹಾಗಾಗಿ ಅರ್ಮೇನಿಯನ್ನರು ಟರ್ಕಿಗೆ ಬಂದು ಆಭರಣ ವ್ಯಾಪಾರಿಗಳಾಗಿ ನೆಲೆನಿಂತರು. ಯಹೂದಿಗಳು ಶೃಂಗಾರ ಸಾಧನ ತಯಾರಿಕಾ ಗೃಹಗಳನ್ನು, ಕಬ್ಬಿಣದ ಫೌಂಡ್ರಿಗಳನ್ನು ಹಾಗೂ ಬ್ಯಾಂಕಿಂಗ್ ವ್ಯವಹಾರಗಳನ್ನು ಸ್ಥಾಪಿಸಿದರು. ಇಟೆಲಿಯನ್ನರು ರೇಷ್ಮೆ, ಕಾಗದ ಮತ್ತು ಗಾಜನ್ನು ಆಮದು ಮಾಡಿಕೊಂಡರು. ಸಮುದ್ರ ಮಾರ್ಗಗಳಷ್ಟೇ ಅಲ್ಲ, ಪ್ರಾಚೀನ ಕಾಲದ ಕಾನ್‌ಸ್ಟಾಟಿನೋಪಲ್ ಮತ್ತು ಅದರ ಹೊಸ ಅವತಾರವಾದ ಇಸ್ತಾಂಬುಲ್ ಕೂಡ ವ್ಯಾಪಾರ ವಹಿವಾಟಿನ ಸಂಧಿ ಸ್ಥಳವಾಯಿತು. ಇಸ್ತಾಂಬುಲ್ ನಗರ ವ್ಯಾಪಾರೋದ್ಯಮಗಳಿಂದ ಉಚ್ಫ್ರಾಯ ಸ್ಥಿತಿ ತಲುಪಿತು.

ಚರ್ಚ್‌ನಿಂದ ವಸ್ತು ಸಂಗ್ರಹಾಲಯದವರೆಗೆ ಇಸ್ತಾಂಬುಲ್‌ನ ಗೋಲ್ಡನ್‌ಹಾರ್ನ್‌ನ ಹೃದಯಭಾಗದಲ್ಲಿ ಬೈಜಂಟೈನ್ ಚಕ್ರವರ್ತಿ ಜಸ್ಟಿನಿಯನ್ ಕ್ರಿ.ಶ. 533ರಲ್ಲಿ ನಿರ್ಮಿಸಿದ ಆಯಾ ಸೋಫಿಯಾ ಅಥವಾ ಹಗಿಯಾ ಸೋಫಿಯಾ ಎಂಬ ಸಾಂಟಾ ಸೋಫಿಯಾ (ದೈವಿಕ ಜ್ಞಾನದ ಚರ್ಚ್) ಎಂದು ಕರೆಯಲ್ಪಡುವ ಚರ್ಚ್ ಇದೆ. ಒಂದು ಶಿಲ್ಪ ಕಲಾಕೃತಿಯ ವಿಸ್ಮಯವೆನ್ನಬಹುದಾದ ಈ ಚರ್ಚ್‌ನಲ್ಲಿ 63 ಮೀಟರ್ ಎತ್ತರದ ಬೃಹತ್ತಾದ ಗುಂಬಝ್‌ಗಳಿವೆ. ಅವುಗಳಿಗೆ ಆಧಾರವಾಗಿ ಯಾವುದೇ ರಚನೆ ಕಾಣಿಸುವುದಿಲ್ಲ. ವಿಶೇಷ ರೀತಿಯ ಮಣ್ಣಿನಿಂದ ತಯಾರಿಸಲಾದ, ಆದರೆ ಕಣ್ಣಿಗೆ ಕಾಣಿಸದ, 40 ಆಧಾರ ಪಕ್ಕಾಸಿಗಳು ಗೋಲದ ಕಮಾನುಗಳನ್ನು ಹಿಡಿದು ನಿಲ್ಲಿಸಿವೆ ಎನ್ನಲಾಗಿದೆ. ಟರ್ಕಿಯ ಕುಪ್ರಸಿದ್ಧ ಭೂಕಂಪಗಳು ಅದನ್ನು ಧ್ವಂಸಗೊಳಿಸಿವೆಯಾದರೂ ಅಲ್ಲಿಯ ಚಕ್ರವರ್ತಿಗಳು ಅದನ್ನು ಪುನರ್ ನಿರ್ಮಿಸಿದ್ದಾರೆ. 1453ರಲ್ಲಿ ಮೆಹಮೆತ್ ಕಾನ್‌ಸ್ಟಂಟಿನೋಪಲ್‌ನನ್ನು ವಶಪಡಿಸಿಕೊಂಡ ಬಳಿಕ ಆಯಾಸೋಫಿಯಾ ಚರ್ಚ್ ಅನ್ನು ಒಂದು ಮಸೀದಿಯಾಗಿ ಮಾರ್ಪಡಿಸಲಾಯಿತು. 1923 ರ ಕ್ರಾಂತಿಯ ಬಳಿಕ, ಅಟಾಟುರ್ಕ್ ಅದನ್ನು ಎಲ್ಲ ಧರ್ಮಗಳ ಜನರಿಗೂ ಮುಕ್ತ ಪ್ರವೇಶವಿರುವ ಒಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸುವಂತೆ ಆಜ್ಞೆ ಹೊರಡಿಸಿದ.

ಆಯಾಸೋಫಿಯಾದ ಎದುರಿಗೆ ಟರ್ಕಿಯ ಪ್ರಸಿದ್ಧ ಸುಲ್ತಾನಹ್‌ಮೆತ್ ಮಸೀದಿ ಇದೆ. ಕಾರಂಜಿಗಳಿಂದ ಕಂಗೊಳಿಸುವ ಬೃಹತ್ತಾದ ನೀರಿನ ಒಂದು ಅಗಲವಾದ ಪಾತ್ರೆ ಅಲ್ಲಿದೆ. 6 ನೇ ಶತಮಾನದಲ್ಲಿ ರಾಜಧಾನಿ ನಗರಕ್ಕೆ ನೀರು ಸರಬರಾಜು ಮಾಡಲು ನಿರ್ಮಿಸಿದ 80,000 ಘನ ಮೀಟರ್ ನೀರನ್ನು ಶೇಖರಿಸುವ ಸಾಮರ್ಥ್ಯ ವಿರುವ ಒಂದು ಭೂಗತ ಬೈಜಂಟೈನ್ ಶೈಲಿಯ ನೀರಿನ ಬೃಹತ್ತಾದ ತೊಟ್ಟಿ ಇದೆ.

ನೀಲಿ ಮಸೀದಿ

ಸುಲ್ತಾನ್ ಅಹ್ಮದ್ ಮಸೀದಿಯನ್ನು ನೀಲಿ ಮಸೀದಿ ಎಂದು ಕರೆಯಲು ಬೇಕಾಗುವ ಯಾವ ಸೂಚನೆಯಾಗಲಿ, ಪುರಾವೆಯಾಗಲಿ ಬಾಹ್ಯವಾಗಿ ಕಾಣಿಸುವುದಿಲ್ಲ. ಸುಲ್ತಾನ್ ಅಹ್ಮದ್‌ನ ಆಳ್ವಿಕೆಯಲ್ಲಿ ಸದೆಫ್ಕರ್ ಮುಹಮ್ಮದ್ ಆಗಾನಿಂದ ವಿನ್ಯಾಸ ಗೊಳಿಸಲ್ಪಟ್ಟು 1609 ಮತ್ತು 1616 ರ ನಡುವೆ ನಿರ್ಮಾಣವಾದ ನೀಲಿ ಮಸೀದಿ ಆರು ಮಿನಾರಗಳನ್ನು ಹೊಂದಿ ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲ್ಪಟ್ಟದೆ. ಅದು ಐದು ಪ್ರಮುಖ ಗುಂಬಝ್‌ಗಳನ್ನು ಹಾಗು ಎಂಟು ಪಕ್ಕದ ಗುಂಬಝ್‌ಗಳನ್ನು ಹೊಂದಿದೆ. ಪ್ರತಿಯೊಂದು ಸ್ತಂಭವೂ ಹತ್ತು ಮೀಟರ್ ವ್ಯಾಸವಿರುವ ನಾಲ್ಕು ಸ್ತಂಭಗಳನ್ನು ಆಧರಿಸಿ ಮಸೀದಿ ನಿಂತಿದೆ. ಮಸೀದಿಯ ಮೂಲ ಸಂಕೀರ್ಣದಲ್ಲಿ; ಒಂದು ಮದ್ರಸಾ, ಪ್ರವಾಸಿಗಳ ಛತ್ರ ಮತ್ತು ಗ್ರಂಥಾಲಯ ಮತ್ತು ಸಮಾಧಿಗಳಿದ್ದವು. ಸುಲ್ತಾನ್ ತರಿಸಿದ ಸುಮಾರು 20,000 ನೀಲಿ ಇಜ್‌ನಿಕ್ ಟೈಲ್ಸ್ ಗಳನ್ನು ಅಲ್ಲಿ ಗೋಡೆಗಳ ಅಲಂಕಾರಕ್ಕಾಗಿ ಬಳಸಲಾಗಿದೆ. ಬಣ್ಣ ಬಣ್ಣದ ಗಾಜನ್ನು ಅಳವಡಿಸಲಾಗಿರುವ ಸುಮಾರು 200 ಕಿಟಕಿಗಳ ಮೂಲಕ ಹೇರಳ ಸೂರ್ಯನ ಬೆಳಕು ಕಟ್ಟಡದೊಳಗೆ ಹರಡಿರುತ್ತದೆ. ನಮಾಝ್ ಗಾಗಿ ನೆರೆದಿರುವವರಲ್ಲಿ ಪ್ರತಿಯೊಬ್ಬನ ಮುಖವೂ ವೇದಿಕೆಯಲ್ಲಿ ನಿಂತಿರುವ ಇಮಾಮ್‌ಗೆ ಕಾಣಿಸುವಂತೆ ಇಡೀ ಮಸೀದಿಯನ್ನು ವಿನ್ಯಾಸಗೊಳಿಸಲಾಗಿದೆ.

ಇಸ್ತಾಂಬುಲ್ ಅಲ್ಲಿಯ ಅದ್ಭುತವಾದ ಹಾಗೂ ವೈಶಿಷ್ಟ ಪೂರ್ಣವಾದ ಬೀದಿ ಖಾದ್ಯ ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಸೂರ್ಯಾಸ್ತವಾಗುತ್ತಿದ್ದಂತೆಯೇ ಜನಪ್ರಿಯ ರೆಸ್ಟೋರೆಂಟ್‌ಗಳು ಬೀದಿ ಬದಿಗಳಲ್ಲಿ, ಫುಟ್‌ಪಾತ್‌ಗಳ ಪಕ್ಕದಲ್ಲಿ ಡೈನಿಂಗ್ ಟೇಬಲ್‌ಗಳನ್ನು ಹಾಗೂ ಕುರ್ಚಿಗಳನ್ನು ಇಡಲಾರಂಭಿಸುತ್ತವೆ. ದುಬಾರಿಯಲ್ಲದ, ಸ್ವಾದಿಷ್ಟವಾದ, ಓವೆನ್‌ನಿಂದ ಬಿಸಿಬಿಸಿಯಾಗಿ ಬರುವ ವಿವಿಧ ಬಗೆಯ ಲೆಕ್ಕವಿಲ್ಲದಷ್ಟು ಖಾದ್ಯಗಳು ಅವುಗಳ ಅದ್ಭುತ ರುಚಿಯಿಂದಾಗಿ ಗಿರಾಕಿಗಳ ಮನ ಸೂರೆಗೊಳ್ಳುತ್ತವೆ. ಕಾವಲಿಯ ಮೇಲೆ ಸುಡುವ, ರೋಸ್ಟ್ ಮಾಡಲಾದ ಡೊನರ್ ಕೆಬಾಪ್‌ಗಳ ಘಮ ಘಮ ಪರಿಮಳ ಮೂಗಿಗೆ- ಹೊಡೆಯುತ್ತಿದ್ದಂತೆ ಹಸಿವಿಲ್ಲದವನಿಗೂ ತಿನ್ನಬೇಕೆಂಬ ಆಸೆ ಚಿಗುರೊಡೆಯುತ್ತದೆ. ನಗರದಾದ್ಯಂತ ಇರುವ ಹಾಫಿಝ್ ಮುಸ್ತಫಾನ ಸಿಹಿತಿಂಡಿ ಅಂಗಡಿಗಳು ಒಣ ಹಣ್ಣನ್ನು ತುಂಬಿದ ವಿವಿಧ ರೀತಿಯ ಕ್ಯಾಂಡಿಗಳನ್ನು ಮಾರುತ್ತವೆ. ಉಚಿತ ಸ್ಯಾಂಪಲ್‌ಗಳನ್ನು ನೀಡಲಾಗುತ್ತದೆ. ಸೇತುವೆಗಳ, ಕಾಲುದಾರಿಗಳ ಹಾಗೂ ಟ್ರಾಮ್ ಸ್ಟೇಶನ್‌ಗಳ ಉದ್ದಕ್ಕೂ ಚಕ್ರದ ಗಾಡಿಗಳು ಇದ್ದಲಿನಲ್ಲಿ ರೋಸ್ಟ್ ಮಾಡಲಾದ ವಿಶೇಷ ರೀತಿಯ ಜೋಳದ ತಿಂಡಿಗಳನ್ನು ಮಾರುತ್ತವೆ.

ಗಿರಾಕಿಗಳಿಗಾಗಿ ಸ್ಪರ್ಧೆ

ಇಸ್ತಿಕಲ್ ಕ್ಲಡ್ಡೆಸಿ ಅಥವಾ ಇಸ್ತಿಕಲ್ ಬೀದಿ ಇಸ್ತಾಂಬುಲ್‌ನ ಫಿಫ್ತ್ ಅವೆನ್ಯೂ. ಸೂರ್ಯ ಮುಳುಗಿದ ಕೂಡಲೇ ಒಂದೇ ಮಾರ್ಗದಲ್ಲಿ ಸಾಗುವ ಪಂಚತಾರಾ ಶೈಲಿಯ, ಒಂದೇ ಕೋಟ್ ಇರುವ ಟ್ರಾಮ್ ಅಲ್ಲಿಗೆ ಬರುತ್ತದೆ. ಬಟ್ಟೆಯ ಬಾಟಿಕ್‌ಗಳು, ಡ್ರೈ ಫುಡ್‌ಗಳು ಮತ್ತು ಔಷಧೀಯ ಸಸ್ಯಗಳ ವ್ಯಾಪಾರಿ ಗಿರಾಕಿಗಳು ಕೂಗಿ ಕರೆಯುತ್ತಾರೆ. ಸೂಪ್‌ಗಳನ್ನು ಹಾಗೂ ಫ್ರೆಶ್ ಜ್ಯೂಸ್‌ಗಳನ್ನು ಮತ್ತು ಮತ್ತು ಬರಿಸುವ ಬಗೆಬಗೆಯ ಪಾನೀಯಗಳನ್ನು ನೀಡುವ ರೆಸ್ಟೋರೆಂಟ್‌ಗಳು ತಿರುವು ರಸ್ತೆಗಳಲ್ಲಿ ವ್ಯಾಪಾರ ಆರಂಭಿಸುತ್ತವೆ.

ಮೀನು ಹಿಡಿಯುವವರ ಮೆಚ್ಚಿನ ತಾಣ

ಸೂರ್ಯ ಮುಳುಗಿದೊಡನೆ ಬಾಸ್ಪೊರಸ್‌ನ ಮೇಲಿರುವ ಡಬಲ್ ಡೆಕ್ಕರ್ ಗಾಲಟಾಬ್ರಿಜ್‌ನ ಮೇಲೆ ಮೀನು ಹಿಡಿಯುವವರು ನೆರೆಯುತ್ತಾರೆ. ಅವರೆಲ್ಲ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ಹೋಗುವ ದಾರಿಯಲ್ಲಿ ಮೀನು ಹಿಡಿಯುವವರು. ಒಂದು ಅಧ್ಯಯನದ ಪ್ರಕಾರ ಆ ಮಂದಿ ಸರಾಸರಿ ಒಂದು ದಿನದಲ್ಲಿ ಸುಮಾರು 70 ಟನ್ ಮೀನು ಹಿಡಿಯುತ್ತಾರೆ. 66 ಮೀಟರ್ ಎತ್ತರವಿರುವ ಹಾಗೂ ಶಂಕು ಆಕೃತಿಯಿರುವ ಗಾಲಟಾ ಟವರ್ ಅಥವಾ ಟವರ್ ಆಫ್ ಕ್ರೈಸ್ತ್ 1386ರಲ್ಲಿ ನಿರ್ಮಾಣಗೊಂಡಿತ್ತು. ಇಸ್ತಾಂಬುಲ್‌ನ ಆಕಾಶದೆತ್ತರಕ್ಕೆ ನಿಂತಿರುವ ಈ ಟವರ್‌ನಿಂದ ಇಡೀ ನಗರದ ವಿಹಂಗಮ ನೋಟ ನೋಡಲು ಸಿಗುತ್ತದೆ. ಒಟೊಮನ್ ಆಳ್ವಿಕೆಯ ಕಾಲದಲ್ಲಿ ನಗರದ ಸುತ್ತ ಏಳುವ ಬೆಂಕಿಯ ಮೇಲೆ ನಿಗಾ ಇಡಲು ಆ ಟವರ್‌ನ ಬಳಕೆಯಾಗುತ್ತಿತ್ತು. ಆದರೆ ದುರದೃಷ್ಟವಶಾತ್ ಈ ಲೇಖಕನಿಗೆ ಅಲ್ಲಿಗೆ ಹೋಗಲು ಅಸಾಧ್ಯವಾದ್ದರಿಂದ ದೂರದಿಂದಲೇ ಅದನ್ನು ನೋಡಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪ್ರವಾಸಿಗಳು ನೋಡಲೇಬೇಕಾದ ಒಂದು ತಾಣ ಅದು.

ದ್ವಿತೀಯ ಸೊಲೊಮನ್

ಸುಲೈಮಾನ್ ದಿ ಮ್ಯಾಗ್ನಿಫಿಸೆಂಟ್ ನಿರ್ಮಿಸಿದ ಸುಲೆಮಾನಿಯಾ ಇಸ್ತಾಂಬುಲ್‌ನಲ್ಲಿರುವ ಇನ್ನೊಂದು ಅದ್ದೂರಿಯ, ಅದ್ಭುತ ಮಸೀದಿ. ತಾನು ‘ದ್ವಿತೀಯ ಸೊಲೊಮನ್’ ಎಂದು ತಿಳಿದಿದ್ದ ಆ ದೊರೆ ತನ್ನ ಪ್ರಾತಿನಿಧಿಕ ಮಸೀದಿಯಾಗಿ ಅದನ್ನು ನಿರ್ಮಿಸಿದ. ಜೆರುಸಲೇಮ್‌ನಲ್ಲಿ ಬಂಡೆಕಲ್ಲಿನ ಬಳಿ ಕಟ್ಟಲಾಗಿರುವ ದೇವಾಲಯದ ನಿರ್ಮಾತೃ ಸೊಲೊಮನ್. 1550ಮತ್ತು 1557ರ ನಡುವೆ ಟರ್ಕಿಯ ಮಹಾಶಿಲ್ಪಿ ಮಿಮಾರ್ ಸಿನಾನ್ ವಿನ್ಯಾಸಗೊಳಿಸಿ, ನಿರ್ದೇಶಿಸಿದ ಮಸೀದಿ ಅದು. ದಕ್ಷಿಣ ದಿಕ್ಕಿನಲ್ಲಿರುವ ಕಿಬ್ಲಾದ ಹಿಂಬದಿಯಲ್ಲಿ, ಪ್ರತ್ಯೇಕ ಸಮಾಧಿಗಳಲ್ಲಿ ಸುಲೈಮಾನ್ ಮತ್ತು ಆತನ ರಾಣಿ ಹುರೈಮ್ ಸುಲ್ತಾನಾಳನ್ನು ಸಮಾಧಿ ಮಾಡಲಾಗಿದೆ. ಸುಲೆಮಾನಿಯ ನಿಜವಾಗಿಯೂ ಒಂದು ಅದ್ಭುತವಾದ ಕಟ್ಟಡ. ತೆಳ್ಳಗಿನ ನಾಲ್ಕು ಮಿನಾರಗಳು ಮತ್ತು ಹಲವು ಗೋಲಗಳಿಂದ ಕೂಡಿದ ಅದರಲ್ಲಿ ಪ್ರತಿಯೊಂದು ಮಿನಾರೆಟ್‌ನ್ನು ಒಳಭಾಗದಿಂದ ಅನನ್ಯ ರೀತಿಯಲ್ಲಿ ಪೈಂಟ್ ಮಾಡಲಾಗಿದೆ. ಅಗ್ನಿ ಆಕಸ್ಮಿಕದಲ್ಲಿ ಅದು ಹಲವು ಬಾರಿ ಹಾನಿಗೊಳಗಾಗಿತ್ತು ಮತ್ತು ಒಮ್ಮೆ ಭೂಕಂಪವಾದಾಗ ಅದರ ಮುಖ್ಯ ಗುಂಬಝ್ ಹಾನಿಗೊಳಗಾಗಿತ್ತು ಎನ್ನಲಾಗಿದೆ.

ಬೊಸ್ಪೊರಸ್‌ನಲ್ಲಿ ದೋಣಿವಿಹಾರ ನಡೆಸದೆ ಇದ್ದಲ್ಲಿ ಇಸ್ತಾಂಬುಲ್‌ಗೆ ನೀಡಿದ ಭೇಟಿ ಪೂರ್ಣವಾಗುವುದಿಲ್ಲ. ಬೊಸ್ಪೊರಸ್ ವಿಶ್ವದ ಅತ್ಯಂತ ಬಿಜಿಯಾದ ಸಾಗರಭೂಮಿ ಎನ್ನಲಾಗಿದೆ. ಫೆರಿಬೋಟ್‌ಗಳು ಮತ್ತು ಸ್ಟೀಮರ್‌ಗಳು ಪ್ರವಾಸಿಗರನ್ನು, ಏಶ್ಯನ್ ಹಾಗೂ ಯುರೋಪಿಯನ್- ಎರಡೂ ದಡಗಳ ಉದ್ದಕ್ಕೂ ಕರೆದೊಯ್ಯುತ್ತವೆ. ಅವುಗಳ ಮುಂದೆ ಸಾಗುತ್ತಿದ್ದಂತೆಯೆ ಪ್ರವಾಸಿಗರಿಗೆ ನಗರದ ವಿಹಂಗಮ ನೋಟ ಲಭಿಸುತ್ತಿದೆ. ನಗರದ ಉದ್ಯಾನಗಳು, ಅರಮನೆಗಳು, ಮಸೀದಿಗಳು ಮತ್ತು ಕೋಟೆ ಕೊತ್ತಲಗಳು ನೋಡುಗರ ಕಣ್ಣುಗಳಿಗೆ ಹೊಸ ಲೋಕವೂಂದನ್ನು ಪರಿಚಯಿಸುತ್ತವೆ. ಇವುಗಳಲ್ಲಿ ಮುಖ್ಯವಾದದ್ದು ಡೊಲ್ಮಾಬಡ್‌ಸೆ ಅರಮನೆ. (ವಿದ್ಯಾನಗರಗಳಿಂದ ಕೂಡಿದ ಅರಮನೆ ಎಂದು ಇದರ ಅರ್ಥ.) ಅದು 1843-1856ರ ನಡುವೆ ಒಟೊಮನ್ ಚರ್ಕವರ್ತಿ ಅಬ್ದುಲ್ ಮಜೀದ್‌ನ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲ್ಪಟ್ಟಿತ್ತು. 11 ಎಕರೆ ಜಾಗದಲ್ಲಿ ಚಾಚಿಕೊಂಡಿರುವ ಅದರಲ್ಲಿ 285 ಕೋಣೆಗಳು, 46 ಸಭಾಭವನಗಳು ಮತ್ತು 68 ಶೌಚಾಲಯಗಳಿವೆ. ಇಂದಿನ ಮಾರುಕಟ್ಟೆ ದರದಲ್ಲಿ ಅದನ್ನು ನಿರ್ಮಿಸಲು ಅಂದಾಜು 1.5 ಬಿಲಿಯ ಡಾಲರ್ ವೆಚ್ಚವಾಗಿತ್ತು. ಅದರ ನಿರ್ಮಾಣದ ಅವಧಿಯಲ್ಲಿ ಇಡೀ ಸಾಮ್ರಾಜ್ಯದ ವಾರ್ಷಿಕ ತೆರಿಗೆ ಸಂಗ್ರಹದ ನಾಲ್ಕನೇ ಒಂದು ಭಾಗದಷ್ಟು ಮೊತ್ತ ಅರಮನೆಯ ನಿರ್ಮಾಣಕ್ಕೇ ವ್ಯಯವಾಗುತ್ತಿತ್ತು. ಹಾಗಾಗಿ ಅದಕ್ಕೆ ‘ದಿ ಸಿಕ್ ಮ್ಯಾನ್ ಆಫ್ ಯುರೋಪ್’ ( ಯುರೋಪಿನ ಅನಾರೋಗ್ಯಪೀಡಿತ ಮನುಷ್ಯ) ನೆಂಬ ಹೆಸರು ಬಂತು.

(ಲೇಖಕರು ಅಕ್ಟೋಬರ್ ತಿಂಗಳಿನಲ್ಲಿ ಟರ್ಕಿ ಪ್ರವಾಸ ಕೈಗೊಂಡಿದ್ದರು.)

Writer - ಮಕ್ಬೂಲ್ ಅಹ್ಮದ್ ಸಿರಾಜ್

contributor

Editor - ಮಕ್ಬೂಲ್ ಅಹ್ಮದ್ ಸಿರಾಜ್

contributor

Similar News