ಅವೈಜ್ಞಾನಿಕ ಅಸಂಬದ್ಧವನ್ನು ಪ್ರಶ್ನಿಸಿದರೆ ಬೆದರಿಕೆ!
ಭಾಗ 64
ನಾವಿಂದು ಎಂತಹ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ ಎಂದರೆ, ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುವಂತಾಗಿದೆ. ಅದರಲ್ಲೂ ವೈಜ್ಞಾನಿಕವಲ್ಲದ, ಜನಸಾಮಾನ್ಯರನ್ನು ನಂಬಿಕೆಯ ಹೆಸರಿನಲ್ಲಿ ಮೋಸ ಮಾಡುವವರನ್ನು ಪ್ರಶ್ನಿಸಿದರೆ, ಸವಾಲು ಹಾಕಿದರೆ ಬೆದರಿಕೆ ಹಾಕುವ ಕಾಲವಿದು. ಇದು ನನಗೆ ಹೊಸತೇನೂ ಅಲ್ಲ. ಆದರೂ ಹೊಸ ಹೊಸ ರೀತಿಯಲ್ಲಿ ಬೆದರಿಕೆ ಹಾಕುವ ಪ್ರಸಂಗಗಳನ್ನು ಎದುರಿಸುತ್ತಿರುವುದಂತೂ ವಾಸ್ತವ. ಕೆಲ ದಿನಗಳ ಹಿಂದಷ್ಟೇ ಫೇಸ್‌ಬುಕ್‌ನಲ್ಲಿ ಇಂತಹ ಬೆದರಿಕೆ ನನಗೆ ಬಂದಿದೆ. ಅದೆಷ್ಟು ಕೆಟ್ಟದಾಗಿ ತಮ್ಮ ಮಾತುಗಳ ಮೂಲಕ ಬೆದರಿಕೆ ಹಾಕಿ ತಮ್ಮ ಮನಸ್ಸಿನ ಕೊಳಕನ್ನು ಪ್ರದರ್ಶಿಸುತ್ತಾರೆಂದರೆ ಅದನ್ನು ನಾನು ಇಲ್ಲಿ ವಿವರ ನೀಡಲು ಹೋಗುವುದಿಲ್ಲ. ನನಗೆ ಫೇಸ್‌ಬುಕ್ ಮೂಲಕ ಬಂದಿರುವ ಬೆದರಿಕೆಗಳನ್ನು ಈಗಾಗಲೇ ನನ್ನ ಸ್ನೇಹಿತರು, ಹಿತೈಷಿಗಳು ಗಮನಿಸಿರಬಹುದು. ಆ ಬಗ್ಗೆ ನಾನು ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರನ್ನು ನೀಡಿದ್ದೇನೆ. ನಾನು ದೂರು ನೀಡಿರುವುದು ಬೆದರಿಕೆಗಳಿಗೆ ಅಂಜಿ ಅಲ್ಲ. ಆದರೆ, ವಿಚಾರವಾದಕ್ಕೆ ಸವಾಲೆಸೆಯುವ, ಅಸಂಬದ್ಧವಾಗಿ ವರ್ತಿಸುವವರಿಗೆ ಕಾನೂನಿನ ಮೂಲಕವೇ ಉತ್ತರ ನೀಡಬೇಕೆಂಬ ನಿಟ್ಟಿನಲ್ಲಿ ನಾನು ಈ ಕೆಲಸ ಮಾಡಿದ್ದೇನೆ. ಅಂದ ಹಾಗೆ ಮೈಸೂರು ಬಿಡದಿಯ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಬಗ್ಗೆ ನಾನು ಈ ಹಿಂದೆಯೂ ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ಚರ್ಚೆ, ಸವಾಲುಗಳನ್ನು ಎಸೆದಿದ್ದೇನೆ. ತನ್ನನ್ನು ಹಿಂದೂ ಅವತಾರ ಪುರುಷ, ಬಿಡದಿ ಮಠದ ಸಂಸ್ಥಾಪಕನೆಂದು ಹೇಳಿಕೊಳ್ಳುವ ನಿತ್ಯಾನಂದ ತನ್ನನ್ನು ತಾನು ಆಧ್ಯಾತ್ಮಿಕ ಪುರುಷ ಎಂದು ಕರೆಸಿಕೊಳ್ಳುವುದು ಮಾತ್ರವಲ್ಲದೆ, ತನ್ನಲ್ಲಿ ಅತೀಂದ್ರಿಯ ಶಕ್ತಿಗಳಿರುವುದೆಂದು ಘೋಷಿಸಿಕೊಳ್ಳುತ್ತಾನೆ.
ನಾನು ದೂರು ನೀಡಿರುವ ಇನ್ನೊಬ್ಬಾತ ಆತನ ಅನುಯಾಯಿ. ಮಹಾಯೋಗಿನಿ ನಿತ್ಯ ಮಹಾಯೋಗಾನಂದ ಹೆಸರಿನಲ್ಲಿ ಫೇಸ್‌ಬುಕ್ ಪೇಜ್ ನಿರ್ವಹಿಸುತ್ತಿರುವವರು. ನಾನು ಕಳೆದ ನಾಲ್ಕು ದಶಕಗಳಿಂದ ಅಸಾಮಾನ್ಯ ಸಂಗತಿಗಳ ವಿರುದ್ಧ ಹೋರಾಟ ನಡೆಸುತ್ತಿರುವುದಲ್ಲದೆ, ವೈಜ್ಞಾನಿಕ ಸತ್ಯಗಳನ್ನು ಮರೆಮಾಚಿ, ಜನರನ್ನು ಮೋಸ ಮಾಡುವವರ ವಿರುದ್ಧ ಹೋರಾಟ ನಡೆಸುತ್ತಾ ಬರುತ್ತಿದ್ದೇನೆ. ಈ ಬಗ್ಗೆ ತನಿಖಾ ವರದಿಗಳ ಮೂಲಕ ಸಮಾಜದಲ್ಲಿ ಬೆಳಕು ಚೆಲ್ಲುವ ಕೆಲಸವನ್ನೂ ಮಾಡಿದ್ದೇನೆ. ಈ ಮೇಲಿನ ಪ್ರಕರಣದ ಬಗ್ಗೆ ಹೇಳುವುದಾದರೆ, ಕೆಲ ದಿನಗಳ ಹಿಂದೆ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ವೀಡಿಯೊದಲ್ಲಿ ನಿತ್ಯಾನಂದ ಸ್ವಾಮೀಜಿಯ ಶಿಷ್ಯೆ ಎಂದು ಹೇಳಲಾದ ಬಾಲಕಿಯೊಬ್ಬಳು ಮುಚ್ಚಿದ ಕಣ್ಣುಗಳಲ್ಲಿಯೂ ತನ್ನ ಕಣ್ಣಿನ ಪಟಲದ ಮೇಲೆ ಬೆಳಕು ಬೀಳದೆಯೂ ಇತರನ್ನು ನೋಡುವ, ಎದುರಿರುವವರ ದೇಹವನ್ನು ನೋಡುವ ಶಕ್ತಿಯನ್ನು ಹೊಂದಿರುತ್ತಾರಂತೆ. ಇಂತಹ ಅತಿಮಾನುಷ ಶಕ್ತಿಗೆ ಸವಾಲಾಗಿ ಸೀಲ್ ಮಾಡಲಾದ ಕವರ್‌ನಲ್ಲಿರುವ ಕರೆನ್ಸಿ ನೋಟುಗಳ ಸೀರಿಯಲ್ ನಂಬರ್ ಓದುವಂತೆ ತಿಳಿಸಲಾಗಿತ್ತು. ಆದರೆ ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಆ ಶಿಷ್ಯರ ಭದ್ರತೆಯ ದೃಷ್ಟಿಯಿಂದ ಅವಕಾಶ ನೀಡಲಾಗಿಲ್ಲ. ಈ ರೀತಿಯ ಹಲವಾರು ಅತಿಮಾನುಷ ಶಕ್ತಿಗಳ ವಿರುದ್ಧ ವಿಚಾರವಾದಿಗಳು ಎಸೆದಿರುವ ಸವಾಲುಗಳಿಗೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂಬುದು ಬೇರೆ ಮಾತು. ಈ ನಡುವೆಯೇ ನವೆಂಬರ್ 4ರಂದು ಬಂದ ಫೇಸ್‌ಬುಕ್ ಸಂದೇಶಲ್ಲಿ ಹೀಯಾಳಿಸಿ ಬರೆದಿರುವ ನಿತ್ಯಾನಂದ ಸ್ವಾಮಿಯ ಅನುಯಾಯಿ, ನನಗೆ ಗುರುತರವಾದ ರೋಗವೊಂದು ಬಾಧಿಸಲಿದ್ದು, ಅದರ ಚಿಕಿತ್ಸೆಗಾಗಿ ನಾನು ಬಿಡದಿ ಮಠಕ್ಕೆ ಹೋಗಿ ಸ್ವಾಮೀಜಿ ಬಳಿ ಹೋಗಬೇಕೆಂದೂ ತಿಳಿಸಲಾಗಿದೆ. 48 ಗಂಟೆಗಳಲ್ಲಿ ನಾನು ವೈದ್ಯಕೀಯ ತಪಾಸಣೆ ಮಾಡುವಂತೆ ಅಸಂಬದ್ಧ ಬರಹಗಳನ್ನು ಫೇಸ್‌ಬುಕ್‌ನಲ್ಲಿ ಬರೆಯಲಾಗಿತ್ತು. ಇದು ಮಾನಹಾನಿಕರ ಮಾತ್ರವಲ್ಲದೆ, ಬೆದರಿಕೆ ಕೂಡಾ. ಈ ರೀತಿಯಾಗಿ ಮಾನಹಾನಿ ಮಾಡುವುದು ಕೆಟ್ಟ ಚಟ. ನಂಬಿಕೆ, ದೇವರ ಹೆಸರಿನಲ್ಲಿ ಜನಸಾಮಾನ್ಯರನ್ನು ಬೆದರಿಸುವಂತೆ, ವಿಚಾರವಾದಿಗಳನ್ನು ರೋಗ ಹಾಗೂ ಗಲಭೆಯ ಮೂಲಕ ಬೆದರಿಕೆ ಹಾಕುವ ಕುತಂತ್ರಗಳನ್ನೂ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ವೈಜ್ಞಾನಿಕ ಮನೋಭಾವವನ್ನು ಸಮಾಜದಲ್ಲಿ ಸ್ಥಿರೀಕರಿಸಬೇಕಾಗಿದೆ. ನಾನು ಸಲ್ಲಿಸಿರುವ ದೂರಿನಲ್ಲಿ ನನಗೆ ಫೇಸ್‌ಬುಕ್ ಮೂಲಕ ಮಾಡಲಾದ ಬೆದರಿಕೆಯನ್ನೂ ಉಲ್ಲೇಖಿಸಿದ್ದೇನೆ. ವೈಜ್ಞಾನಿಕ ಮನೋಭಾವಕ್ಕೆ ಮನಸ್ಸನ್ನು ತೆರೆಯಕೊಡದೆ, ಈ ರೀತಿಯಾಗಿ ಅತಿಮಾನುಷ ಶಕ್ತಿಯ ಬಗ್ಗೆ ಪ್ರಚಾರ ಮಾಡುವ ಮೂಲಕ ತಾವೇನು ಸಾಧಿಸಿಕೊಳ್ಳುತ್ತಾರೋ ಅರಿಯದು. ಆದರೆ ಸಮಾಜ ಹಾಗೂ ಸಂಬಂಧಪಟ್ಟ ಕಾನೂನಾತ್ಮಕ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡಬೇಕೆಂಬುದು ನನ್ನ ಆಶಯ.