ಕನ್ನಡದಲ್ಲಿ ಐನ್‌ಸ್ಟೀನ್ ಇನ್ನಷ್ಟು...

Update: 2018-12-09 18:32 GMT

ಐನ್‌ಸ್ಟೀನ್‌ನನ್ನು ನಾವು ಸ್ಮರಿಸುವುದು ಕೇವಲ ವಿಜ್ಞಾನಿ ಎನ್ನುವ ಕಾರಣಕ್ಕಾಗಿಯಲ್ಲ, ಆತ ಅದರಾಚೆಗೆ ಮಹಾ ಮಾನವತಾವಾದಿಯೂ ಹೌದು. ಆದುದ ರಿಂದಲೇ ಐನ್‌ಸ್ಟೀನ್ ಬರಹಗಳು ವಿಜ್ಞಾನ ಮತ್ತು ವಿಚಾರಗಳೆರಡರ ಸಮನ್ವಯವಾಗಿವೆ. ಇಂದು ಐನ್‌ಸ್ಟೀನ್ ಬರಹಗಳು ವಿಶ್ವವ್ಯಾಪಿಯಾಗಲು ಇದೂ ಮುಖ್ಯ ಕಾರಣ. ಕನ್ನಡಕ್ಕೆ ಐನ್‌ಸ್ಟೀನ್ ಬರಹ ಹೊಸತೇನಲ್ಲ. ಆದರೆ ಆತನ ಚಿಂತನೆಗಳು ವರ್ತಮಾನಕ್ಕೆ ಹೆಚ್ಚು ಪ್ರಸ್ತುತವಾಗುತ್ತಿದೆ. ಆದುದರಿಂದ ಆತನ ಬರಹಗಳು ಬೇರೆ ಬೇರೆ ರೂಪಗಳಲ್ಲಿ ಮತ್ತೆ ಮತ್ತೆ ನಮ್ಮ ನಡುವೆ ಹರಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಮ್‌ಗ್ರೀನ್ ಅವರು ಸಂಪಾದಿಸಿದ ‘ಅಲ್ಬರ್ಟ್ ಐನ್‌ಸ್ಟೀನ್: ಆಯ್ದ ಬರಹಗಳು’ ಕೃತಿಯ ಭಾಷಾಂತರ ನಮಗೆ ಮುಖ್ಯವೆನಿಸುತ್ತದೆ. ವಿಜಯ ನಾಗ್ ಜಿ. ಅವರು ಇದನ್ನು ಕನ್ನಡಕ್ಕೆ ತರುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ‘‘ವ್ಯಕ್ತಿಯನ್ನು ಹೆಳವನನ್ನಾಗಿಸುವುದೇ ಬಂಡವಾಳಶಾಹಿತ್ವದ ಘೋರವಾದ ದುಷ್ಕೃತ್ಯವಾಗಿದೆ’’ ಎಂಬ ಐನ್‌ಸ್ಟೀನ್ ನಿಲುವು ಮತ್ತು ಅವರ ದೂರಗಾಮಿ ಚಿಂತನೆ ಇಂದು ಹೆಚ್ಚು ಸ್ಪಷ್ಟವಾಗುತ್ತಿದೆ. ಅವರು ಅಂದು ಹೇಳಿದ್ದು, ಇಂದು ನಿಜವಾಗುತ್ತಿದೆ.

ಕೃತಿಯನ್ನು ಒಟ್ಟು ಆರುಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗ, ರಾಷ್ಟ್ರೀಯತೆ ಮತ್ತು ಅದನ್ನು ಸುತ್ತುವರಿದ ಚಟುವಟಿಕೆಗಳನ್ನು ಚರ್ಚಿಸುತ್ತದೆ. ಶಾಂತಿವಾದ, ಸೇನಾಡಳಿತ, ಫ್ಯಾಶಿಸಂ, ಶಾಂತಿವಾದಿಯ ಸವಾಲುಗಳ ಕುರಿತಂತೆ ಇಲ್ಲಿ ಐನ್‌ಸ್ಟೀನ್ ಮಾತನಾಡುತ್ತಾರೆ. ರಾಷ್ಟ್ರೀಯತೆಯ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ‘ಅದು ಮಾನವ ಜನಾಂಗಕ್ಕೆ ಅಂಟಿದ ದಡಾರ’’ ಎಂದು ಅಭಿಪ್ರಾಯ ಪಡುತ್ತಾರೆ. ಮಿಲಿಟರಿ ಆಡಳಿತವನ್ನು ‘ನಾಗರಿಕತೆಗೆ ಹೊಕ್ಕಿದ ಪ್ಲೇಗ್‌ನ ಕುರುಹು’ ಎಂದು ಟೀಕಿಸುತ್ತಾರೆ. ಐನ್‌ಸ್ಟೀನ್ ಚಿಂತನೆಗಳನ್ನು ನಮ್ಮದಾಗಿಸಿಕೊಂಡಂತೆ, ಅತ್ಯಂತ ಮಾನವೀಯವಾದ ಅವರ ರಾಜಕೀಯ ಒಳನೋಟ ನಮ್ಮಲ್ಲಿ ಅಚ್ಚರಿ ಉಂಟು ಮಾಡುತ್ತದೆ.ವಿಶ್ವಸಂಸ್ಥೆಗೆ ಅವರು ಬರೆದ ಪತ್ರಗಳೂ ಅವರ ರಾಜಕೀಯ ನಿಲುವುಗಳನ್ನು ಸ್ಪಷ್ಟಪಡಿಸುತ್ತದೆ. ಬಂಡವಾಳಶಾಹಿತ್ವ ಮತ್ತು ಸಮಾಜವಾದವನ್ನು ಚರ್ಚಿಸುತ್ತಾ ವಿಶ್ವದ ಆರ್ಥಿಕ ಸಂಕಷ್ಟಗಳ ಕಾರಣಗಳನ್ನು ಅವರು ಶೋಧಿಸುತ್ತಾರೆ. ಮಾನವ ಹಕ್ಕು ಹಾಗೂ ನಾಗರಿಕ ಹಕ್ಕುಗಳ ಕಾಳಜಿಯೂ ಇಲ್ಲಿರುವ ಅವರ ಬರಹಗಳಲ್ಲಿವೆ. ಅಲ್ಪಸಂಖ್ಯಾತರು, ನಿಗ್ರೋಗಳ ಪ್ರಶ್ನೆಗಳು, ಮಾನವ ಹಕ್ಕುಗಳ ಕುರಿತ ಅವರ ಬರಹಗಳು ಇಂದು ಹೆಚ್ಚು ಅನ್ವಯವಾಗುವಂತಹದ್ದು.
ಅನುವಾದ ಓದುಗನನ್ನು ನಿರಾಳವಾಗಿ ತಲುಪದೇ ಇರುವುದಕ್ಕೆ ಅನುವಾದಕರ ಕನ್ನಡ ತುಸು ತೊಡಕಕಾಗುತ್ತದೆ. ಇಂಗ್ಲಿಷ್ ಪದಗಳಿಗೆ ಪರ್ಯಾಯವಾದ ಕನ್ನಡ ಪದಗಳನ್ನು ಕೊಡುವಲ್ಲಿ ಅನುವಾದಕರು ಅಲ್ಲಲ್ಲಿ ಎಡವುತ್ತಾರೆ. ಇದು ವಾಕ್ಯಗಳನ್ನು ಗೊಂದಲಗೊಳಿಸುತ್ತಾ ಹೋಗುತ್ತದೆ. ಸಂವಹನ ಮೈಸೂರು ಇವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 100. ಮುಖಬೆಲೆ 80 ರೂಪಾಯಿ. ಆಸಕ್ತರು 9480559969 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News